Tag: vow

  • ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿಕೊಂಡು ಬೃಹತ್ ವಾಹನ ಎಳೆದು ಹರಕೆ ತೀರಿಸಿದ ಭಕ್ತರು

    ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿಕೊಂಡು ಬೃಹತ್ ವಾಹನ ಎಳೆದು ಹರಕೆ ತೀರಿಸಿದ ಭಕ್ತರು

    ಚಿಕ್ಕಮಗಳೂರು: ದೇವರಿಗೆ ಹರಕೆ ಹೊತ್ತುಕೊಳ್ಳುವ ಭಕ್ತರು ನಾನಾ ರೀತಿ ಹರಕೆ ತೀರಿಸಿ ಭಕ್ತಿ ಸಮರ್ಪಿಸುತ್ತಾರೆ. ಅದೇ ರೀತಿ ನಗರದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದೇಹವನ್ನ ದಂಡಿಸಿ ಭಕ್ತಿ ಸಮರ್ಪಿಸಿದ್ದಾರೆ.

    ನಗರದಲ್ಲಿ ಇಂದು ಕರುಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಿತು. ಈ ಜಾತ್ರೆಯಲ್ಲಿ ಹರಕೆ ಹೊತ್ತಿದ್ದ ಭಕ್ತರು ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿಯನ್ನ ಹಾಕಿಕೊಂಡು ಟ್ರ್ಯಾಕ್ಟರ್, ಲಾರಿ, ಕಾರು, ಆಟೋಗಳನ್ನ ಎಳೆದು ಭಕ್ತಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ. ದೇವರಿಗೆ ಉಪವಾಸವಿದ್ದು ಅಥವಾ ಮುಡಿ ನೀಡಿ ವಿಶಿಷ್ಟ ರೀತಿಯ ಅಡುಗೆಯನ್ನ ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ವಾಡಿಕೆ.

    ಆದರೆ ನಗರದ ಕರುಮಾರಿಯಮ್ಮನ ಭಕ್ತರು ಈ ರೀತಿ ದೇಹವನ್ನ ದಂಡಿಸಿ ದೇವಿಗೆ ಹರಕೆ ತೀರಿಸುತ್ತಾರೆ. ಈ ಬಾರಿ 26 ಜನರು ವಿಭಿನ್ನವಾಗಿ ತಮ್ಮ ಹರಕೆ ತೀರಿಸಿದ್ದಾರೆ. ಜಾತ್ರೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ದಂಟರಮಕ್ಕಿಯ ಕೆರೆಕೋಡಿಯಮ್ಮನ ಸನ್ನಿಧಿಯಲ್ಲಿ ಕರಗ ಪೂಜೆ ನೆರವೇರಿಸಿದರು. ಬಳಿಕ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಮೂರ್ನಾಲ್ಕು ಕೊಂಡಿಗಳನ್ನು ಹಾಕಿಕೊಂಡು ಟ್ರ್ಯಾಕ್ಟರ್, ಆಟೋ, ಕಾರು, ಮಿನಿ ಲಾರಿಯಂತಹ ಬೃಹತ್ ವಾಹನಗಳನ್ನು ಕೆರೆಕೋಡಿಯಮ್ಮ ದೇವಸ್ಥಾನದಿಂದ ಕರುಮಾರಿಯಮ್ಮ ದೇವಸ್ಥಾನದವರೆಗೆ ಎಳೆದುಕೊಂಡು ಹೋಗುವ ಮೂಲಕ ಭಕ್ತಿ ಮೆರೆದರು.

    ಈ ವೇಳೆ ಸಂಬಂಧಿಕರು, ಜಾತ್ರೆಯಲ್ಲಿ ಭಾಗವಹಿಸಿದವರು `ಗೋವಿಂದ.. ಗೋವಿಂದ’ ಎಂದು ಕೂಗುವ ಮೂಲಕ ಅವರಿಗೆ ಧೈರ್ಯ ತುಂಬುತ್ತಿದ್ದರು. ಈ ವಿಭಿನ್ನ ಆಚರಣೆಗೆ ಅಳಲು ಹಾಕುವುದು ಎಂದು ಸ್ಥಳೀಯರು ಕರೆಯುತ್ತಾರೆ. ಕೆಲವು ಭಕ್ತರು ತಮ್ಮ ಕಾಲು, ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಹಾಕಿಕೊಂಡು ದೇವರ ಕಳಸವನ್ನು ಕುತ್ತಿಗೆಗೆ ಹಾಕಿಕೊಂಡು ವಾಹನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನೇತು ಬಿದ್ದಿದ್ದರು.

    ಕೆಲವು ಮಕ್ಕಳು ಬಾಯಿಗೆ ಕಬ್ಬಿಣದ ಸರಳುಗಳನ್ನು ಹಾಕಿಕೊಂಡು ಸಾಗಿದರು. ಜಾತ್ರೆ ಹಿನ್ನೆಲೆ ಕಳೆದ ಎರಡು ದಿನದಿಂದ ದೇವಸ್ಥಾನದಲ್ಲಿ ಹಲವು ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

  • ಚಾಮುಂಡಿ ಬೆಟ್ಟದಲ್ಲಿ ವೈಶಂಪಾಯನ ಡ್ರಾಮಾ – ದುರ್ಯೋಧನನಿಗೆ ಹೋಲಿಸಿ ವಿಶ್ವನಾಥ್ ವಾಗ್ದಾಳಿ

    ಚಾಮುಂಡಿ ಬೆಟ್ಟದಲ್ಲಿ ವೈಶಂಪಾಯನ ಡ್ರಾಮಾ – ದುರ್ಯೋಧನನಿಗೆ ಹೋಲಿಸಿ ವಿಶ್ವನಾಥ್ ವಾಗ್ದಾಳಿ

    – ಜೆಡಿಎಸ್ ಅಂದ್ರೆ ಕಣ್ಣೀರು, ಕಣ್ಣೀರು ಅಂದ್ರೆ ಜೆಡಿಎಸ್
    – ಹೇಡಿ, ಪಲಾಯನವಾದಿ, ನೀನೊಬ್ಬ ಸುಳ್ಳುಗಾರ

    ಮೈಸೂರು: ಚಾಮುಂಡೇಶ್ವರಿ ಬೆಟ್ಟದಲ್ಲಿ ಮಹಾಭಾರತದ ಕ್ಲೈಮ್ಯಾಕ್ಸ್ ಸೀನ್ ನಡೆದಿದ್ದು, ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ದುರ್ಯೋಧನನಿಗೆ ಹೋಲಿಸಿ ಅನರ್ಹ ಶಾಸಕ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ನಿರೀಕ್ಷೆಯಂತೆಯೇ ಇಂದು ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಹೈ ಡ್ರಾಮಾ ನಡೆದಿದೆ. ಇಬ್ಬರೂ ನಾಯಕರೂ ಬೆಟ್ಟಕ್ಕೆ ಆಗಮಿಸಿ ಒಬ್ಬರಿಗೊಬ್ಬರು ಮಾತನಾಡದೇ ತೆರಳಿದರು.

    ದೇವಾಲಯದ ಹೊರ ಆವಣರದಲ್ಲಿ ಮಹೇಶ್ ಅವರಿಗೆ ಒಂದು ಗಂಟೆ ಕಾದು ಬೆಟ್ಟದಿಂದ ಕೆಳಗಿಳಿದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಖಾಮುಖಿಯಾಗಲು ನಾನು ತಯಾರಾಗಿಯೇ ಬಂದಿದ್ದೆ ಮಾಜಿ ಸಚಿವ ಸಾರಾ ಮಹೇಶ್ ಒಳಗೆ ಹೋದವರು ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ನಾನು 8:50ಕ್ಕೆ ಬಂದು ದೇವಿಯ ದರ್ಶನ ಮಾಡಿ 9:05ಕ್ಕೆ ಬಂದು ಹೊರಗೆ ನಿಂತೆ. ಅವರು ಒಳಗೆ ಹೋದವರು ವಾಪಸ್ ಬರಲೇ ಇಲ್ಲ. ನಾನು 10 ಗಂಟೆಯವರೆಗೂ ಕಾದೆ. ನಂತರ ಅವರು ನಿಮ್ಮ ಮುಖ ನೋಡುವುದಿಲ್ಲವಂತೆ ಎಂದು ಮಾಧ್ಯಮದವರು ಹೇಳಿದರು. ನೀವೇ ಪ್ರಮಾಣ ಮಾಡಬೇಕು ಎಂದು ಹೇಳಿದ್ದು, ನನಗೇನು ಹುಚ್ಚು ಹಿಡಿದಿದೆಯಾ ಪ್ರಮಾಣ ಮಾಡೋಕೆ? ಆಣೆ ಪ್ರಮಾಣದ ವಿಚಾರ ಇಲ್ಲಿ ಬರುವುದೇ ಇಲ್ಲ ಎಂದರು.

    ನಾನು ಕೇವಲ ಸಾ.ರಾ.ಮಹೇಶ್ ಮಾಡಿದ್ದ ಆರೋಪಕ್ಕೆ ಉತ್ತರಿಸಲು ಬಂದಿದ್ದೆ. 25 ಕೋಟಿ ರೂ.ಗೆ ನನ್ನನ್ನ ಕೊಂಡುಕೊಂಡವನನ್ನು ಕರೆದುಕೊಂಡು ಬಾ ಅವನನ್ನು ಮೀಟ್ ಮಾಡೋಣ ಎಂದಿದ್ದೆ. ಕೊನೆಗೂ ಅವರು ಬರಲೇ ಇಲ್ಲ. ಆತನನ್ನು ಕರೆದುಕೊಂಡು ಬರಲಿಲ್ಲ. ನಾವು ಪಾಂಡವರು ಅವರು ಕೌರವರು, ಮಹಾಭಾರತದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಅಡಗಿ ಕುಳಿತ ಹಾಗೆ ಒಳಗೆ ಸಾರಾ ಮಹೇಶ್ ಕೂತಿದ್ದ ಎಂದು ದುರ್ಯೋಧನನಿಗೆ ಸಾರಾ ಮಹೇಶ್ ಅವರನ್ನು ಹೋಲಿಸಿದರು.

    ನಾವು ಪಾಂಡವರ ರೀತಿ ಹೊರಗೆ ಕಾಯುತ್ತಿದ್ದೆವು. ದುರ್ಯೋಧನ ಹೇಗೆ ಬರಲಿಲ್ಲವೋ ಹಾಗೆ ಸಾರಾ ಬರಲಿಲ್ಲ, ಮಹೇಶ್ ನೀನು ಬರಲೇ ಇಲ್ಲ ಹೇಡಿ. ನೀನು ಪಲಾಯನವಾದಿ, ನೀನೊಬ್ಬ ಸುಳ್ಳ, ಇನ್ನು ಮುಂದೆ ಸುಳ್ಳು ಹೇಳಬೇಡ. ಜೆಡಿಎಸ್ ಅಂದರೆ ಕಣ್ಣೀರು, ಕಣ್ಣೀರು ಅಂದರೆ ಜೆಡಿಎಸ್. ಸಾ.ರಾ.ಮಹೇಶ್ ಅಂತಹ ಕೊಚ್ಚೆಗುಂಡಿಗೆ ನಾನು ಕಲ್ಲು ಎಸೆಯುವುದಿಲ್ಲ ಎಂದರು.

    ನಾನು ನಿಲ್ಲಿಸೋಣ ಎಂದು ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಇಲ್ಲಿಗೆ ನಿಲ್ಲಿಸೋಣ. ಅವರು ಸಾಬೀತು ಮಾಡಬೇಕಿತ್ತು ಮಾಡಿಲ್ಲ. ಇನ್ನು ಮುಂದೆ ಸಾರಾ ಮಹೇಶ್ ವಿಚಾರವನ್ನು ನಾನು ಮಾತನಾಡುವುದಿಲ್ಲ. ಅವರು ನನ್ನ ವಿಚಾರ ಮಾತನಾಡುವುದು ಬೇಡ, ಇದು ಇಲ್ಲಿಗೆ ನಿಲ್ಲಲಿ ಎಂದು ಹೇಳಿದರು.

    ಚಾಮುಂಡಿಬೆಟ್ಟದಿಂದ ಇಳಿದು ಬಂದು ಹೆಚ್.ವಿಶ್ವನಾಥ್ ಸ್ನೇಹಿತರೊಂದಿಗೆ ಹೊಟೇಲ್‍ನಲ್ಲಿ ತಿಂಡಿ ಸೇವಿಸಿದರು. ಇನ್ನು ಸಾ.ರಾ.ಮಹೇಶ್ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಸ್ನೇಹಿತರೊಂದಿಗೆ ತಿಂಡಿ ಸೇವಿಸಿದರು.

  • ಜೈಲಿಗೆ ಹೊರಡುವ ಮುನ್ನ ಜಯಾ ಸಮಾಧಿ ಮುಂದೆ 3 ಬಾರಿ ಶಪಥಗೈದ ಶಶಿಕಲಾ!

    ಜೈಲಿಗೆ ಹೊರಡುವ ಮುನ್ನ ಜಯಾ ಸಮಾಧಿ ಮುಂದೆ 3 ಬಾರಿ ಶಪಥಗೈದ ಶಶಿಕಲಾ!

    ಚೆನ್ನೈ: ಅಪರಾಧಿ ಶಶಿಕಲಾ ನಟರಾಜನ್ ಇದೀಗ ಚೆನ್ನೈನಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿನತ್ತ ಹೊರಟಿದ್ದಾರೆ. ಇದಕ್ಕೂ ಮುನ್ನ ಜಯಾ ಸಮಾಧಿ ಸ್ಥಳಕ್ಕೆ ತೆರಳಿದ ಶಶಿಕಲಾ ಅತ್ಯಾಪ್ತೆಗೆ ಹೂಗುಚ್ಛ ಅರ್ಪಿಸಿ ನಮಿಸಿದ್ರು. ಈ ವೇಳೆ ಮೂರು ಬಾರಿ ಶಪಥಗೈದರು.

    ಶಪಥ-1: ಪಕ್ಷವನ್ನು ಕಟ್ಟೇ ಕಟ್ಟುತ್ತೇನೆ. ಶಪಥ-2: ಪಕ್ಷ ವಿರೋಧಿಗಳನ್ನು ಬಿಡಲ್ಲ. ಶಪಥ-3: ತಮಿಳರೇ ಆಳಬೇಕು, ಆಳುವಂತೆ ಮಾಡುತ್ತೇನೆ ಎಂದು ಸಮಾಧಿಗೆ ಮೂರು ಬಾರಿ ಕೈಯ್ಯನ್ನು ತಟ್ಟಿ ಶಪಥ ಮಾಡಿದ್ರು. ನಂತರ ಬೆಂಗಳೂರಿನತ್ತ ಶಶಿಕಲಾ ಹೊರಟರು.

    ಮಧ್ಯಾಹ್ನದ ನಂತರ ಬೆಂಗಳೂರಿಗೆ ಬಂದು ಪರಪ್ಪನ ಅಗ್ರಹಾರದ ಆವರಣದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಶಶಿಕಲಾ ನಟರಾಜನ್ ಶರಣಾಗಲಿದ್ದಾರೆ. ಪರಪ್ಪನ ಅಗ್ರಹಾರ ಬಳಿ ಅಣ್ಣಾಡಿಎಂಕೆ ಕಾರ್ಯಕರ್ತರು ಜಮಾಯಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಜೈಲಿನ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿದ್ದಾರೆ.