Tag: voting booth

  • ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರವಾಗಿ ಪೂಜೆ ಸಲ್ಲಿಸಿದ್ದಾರೆ. ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಪೂಜೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ, ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿ, ಬಳಿಕ ಹೊಸಲಿನ ಬಳಿ ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಅಲ್ಲದೆ ಮತಗಟ್ಟೆಯಲ್ಲಿದ್ದ ಮತ ಯಂತ್ರಕ್ಕೂ ಕೂಡ ಆರತಿ ಬೆಳಗಿ ಕಾರ್ಯಕರ್ತರು ಪೂಜೆ ಮಾಡಿದ್ದಾರೆ.

    ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ.

  • ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮುಂಬೈ: ಮತದಾನದ ವೇಳೆ ಬಾಲಿವುಡ್ ಕಿಂಗ್ ಖಾನ್ ತಮ್ಮ ಮಗನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು. ಇದೀಗ ಸ್ವತಃ ಶಾರೂಕ್ ಅವರೇ ಮಗನನ್ನು ಕರೆದೊಯ್ದ ಸತ್ಯ ಬಿಚ್ಚಿಟ್ಟಿದ್ದಾರೆ.

    ಹೌದು. ಸೋಮವಾರ ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ವೇಳೆ ಸೆಲೆಬ್ರಿಟಿಗಳೆಲ್ಲರೂ ಸದೃಢ ಭಾರತಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಸಾಮಾನ್ಯವಾಗಿ ಮತಗಟ್ಟೆಯೊಳಗೆ ಮಕ್ಕಳನ್ನು ಬಿಡುವುದಿಲ್ಲ. ಆದರೆ ಶಾರೂಕ್ ತಮ್ಮ ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು.

    ಪತ್ನಿ ಗೌರಿಯವರು ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತದಾನ ಕೇಂದ್ರದೊಳಗೆ ಕರೆದುಕೊಂಡು ಹೋಗಿದ್ದಾರೆ. ಯಾಕಂದ್ರೆ ಅವನಿಗೆ `ಬೋಟಿಂಗ್’ ಹಾಗೂ `ವೋಟಿಂಗ್’ ಬಗ್ಗೆ ಭಾರೀ ಗೊಂದಲವಿತ್ತು. ಈ ಗೊಂದಲವನ್ನು ಕ್ಲೀಯರ್ ಮಾಡಲು ಆತನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಶಾರೂಕ್, ಪುಟ್ಟ ಮಗನಿಗೆ ಬೋಟಿಂಗ್ ಮತ್ತು ವೋಟಿಂಗ್ ಮಧ್ಯೆ ಸಾಕಷ್ಟು ಕನ್‍ಫ್ಯೂಶನ್ ಇತ್ತು. ಈ ಗೊಂದಲವನ್ನು ನಿವಾರಿಸಲು ಆತನನ್ನು ಕೂಡ ಮತಗಟ್ಟೆಯೊಳಗೆ ಕರೆದುಕೊಂಡು ಹೋಗುವ ಮೂಲಕ ಮತದಾನದ ಬಗ್ಗೆ ಮತದಾನದ ಬಗ್ಗೆ ವಿವರಿಸಲಾಯಿತು ಎಂದು ಮೂವರ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    ಬಾಕ್ಸ್ ಆಫೀಸಿನಲ್ಲಿ ಝೀರೋ ಚಿತ್ರ ಪ್ಲಾಪ್ ಆಗಿದ್ದು, ಆ ಬಳಿಕ ಶಾರೂಕ್ ಅವರು ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಅಲ್ಲದೆ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ತಿಳಿಸಲಿದ್ದಾರೆ.

    https://www.instagram.com/p/Bw1uXvgALLB/?utm_source=ig_embed

  • ಮತಗಟ್ಟೆಗೆ ಮದುವೆ ದಿಬ್ಬಣದ ಕಾರು – ಸರತಿ ಸಾಲಲ್ಲಿ ಸಿಂಗಾರಗೊಂಡ ಹತ್ತಾರು ವಧು ವರರು

    ಮತಗಟ್ಟೆಗೆ ಮದುವೆ ದಿಬ್ಬಣದ ಕಾರು – ಸರತಿ ಸಾಲಲ್ಲಿ ಸಿಂಗಾರಗೊಂಡ ಹತ್ತಾರು ವಧು ವರರು

    ಉಡುಪಿ: ಜಿಲ್ಲೆಯ ಕೆಲವು ಮತಗಟ್ಟೆಗಳು ಮದುವೆ ಮನೆಯಂತಾಗಿತ್ತು. ಬೂತ್ ಆಸುಪಾಸಿನಲ್ಲಿ ಸಿಂಗಾರಗೊಂಡ ಕಾರುಗಳು ಓಡಾಡುತ್ತಿದ್ದವು. ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಹಾಗೂ ಮದುವೆಯ ನಂತರ ನವ ವಧು ವರರು ದೇಶದ ಭವಿಷ್ಯದ ಬಗ್ಗೆ ಕನಸು ಹೊತ್ತು ಮತಗಟ್ಟೆಗಳಿಗೆ ಮತ ಹಾಕಿ ಬಂದಿದ್ದರು. ತಲೆತುಂಬಾ ಹೂವು, ಕೈ ತುಂಬಾ ಮದರಂಗಿ ಹಾಕಿಕೊಂಡು ಸಿಂಗಾರಗೊಂಡ ವಧು ಹಾಗೂ ಮದುವೆಗೆ ರೆಡಿಯಾಗಿ ಬಂದಿದ್ದ ವರರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿ ಸಾರ್ಥಕತೆ ಮೆರೆದರು.

    ಉಡುಪಿಯ ಮಲ್ಪೆ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ಸ್ಥಳೀಯ ನಿವಾಸಿ ದೀಪಾ ಮತದಾನ ಮಾಡಿದರು. ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಹಸೆಮಣೆ ಏರಬೇಕಾಗಿದ್ದ ದೀಪಾ ಮತಚಲಾಯಿಸಿದ ನಂತರ ಮದುವೆ ಮನೆಗೆ ಹೋದರು. ಅಲ್ಲದೆ ಕಟಪಾಡಿ ಕೋಟೆ ಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಿಯ ಸ್ಥಳೀಯ ನಿವಾಸಿ ಶೃತಿ ಮದುವಣಗಿತ್ತಿಯಾಗಿಯೇ ಮನೆಯವರ ಜೊತೆಗೆ ಕಾರಿನಲ್ಲಿ ಬಂದು ಮತಚಲಾಯಿಸಿ ಬಳಿಕ ಮದುವೆ ಮಂಟಪಕ್ಕೆ ತೆರಳಿದರು.

    ಕಾಪು ವಿಧಾನಸಭಾ ಕ್ಷೇತ್ರದ ಕರಂದಾಡಿಯಲ್ಲಿ ವರ ರಿತೇಶ್ ಸನಿಲ್ ಮತದಾನ ಮಾಡಿದರು. ತಾಳಿ ಕಟ್ಟುವುದಕ್ಕೂ ಮೊದಲು ಮತದಾನ ಮಾಡುವುದು ಆದ್ಯ ಕರ್ತವ್ಯವೆಂದು ಭಾವಿಸಿ ಮನೆಯವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿ, ಬಳಿಕ ಹಸೆಮಣೆ ಏರಿದರು. ಈ ವೇಳೆ ಮದುಮಕ್ಕಳ ಜೊತೆ ಅವರ ತಂದೆ ತಾಯಿ, ಸಂಬಂಧಿಕರು ಆಗಮಿಸಿ ಹಕ್ಕು ಚಲಾಯಿಸಿದ್ದು, ಮದುವೆ ಮುಹೂರ್ತಕ್ಕೆ ತಡವಾಗದಂತೆ ಮತಗಟ್ಟೆ ಅಧಿಕಾರಿಗಳು ಈ ಮದುಮಕ್ಕಳಿಗೆ ಸಹಕರಿಸಿದರು.

  • ಮೆಸೇಜ್ ಸೆಂಡ್ ಮಾಡಿ ಮೊಬೈಲ್‍ನಲ್ಲೇ ಮತಗಟ್ಟೆ ತಿಳಿಯಿರಿ

    ಮೆಸೇಜ್ ಸೆಂಡ್ ಮಾಡಿ ಮೊಬೈಲ್‍ನಲ್ಲೇ ಮತಗಟ್ಟೆ ತಿಳಿಯಿರಿ

    ಬೆಂಗಳೂರು: ರಾಜ್ಯದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಮತಗಟ್ಟೆಯನ್ನು ಹುಡುಕುವುದು ಕಷ್ಟದ ಕೆಲಸವಲ್ಲ. ಆದರೆ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರದಲ್ಲಿ ಮತದಾನದ ಕೇಂದ್ರ ಎಲ್ಲಿದೆ ಎಂದು ಹುಡುಕುವುದೇ ಕಷ್ಟದ ಕೆಲಸ. ಕೆಲವು ಮಂದಿ ಮತಗಟ್ಟೆ ಸಿಕ್ಕಿಲ್ಲ ಎಂದು ಹೇಳಿ ವೋಟ್ ಹಾಕದೇ ಹೋಗುತ್ತಾರೆ.

    ಮತಗಟ್ಟೆ ಹುಡುಕುವುದು ಕಷ್ಟ ಆಗುತ್ತದೆ ಎಂದು ತಿಳಿದು ವೋಟ್ ಹಾಕದೇ ಇರಬೇಡಿ. ಕೇವಲ 1 ನಿಮಿಷದಲ್ಲಿ ಮೊಬೈಲ್ ನಲ್ಲೇ ನಿಮ್ಮ ಮತಗಟ್ಟೆ ಯಾವುದು ಎನ್ನುವುದನ್ನು ಕ್ಷಣದಲ್ಲೇ ತಿಳಿದುಕೊಳ್ಳಬಹುದು. ಒಂದು ಮೆಸೇಜ್ ಹಾಕಿದರೆ ನಿಮ್ಮ ಮೊಬೈಲ್ ಗೆ ಮತಗಟ್ಟೆಯ ಸಂಪೂರ್ಣ ವಿವರ ಲಭ್ಯವಾಗುತ್ತದೆ.

    ಯಾವ ನಂಬರ್?
    ಮತಗಟ್ಟೆಯನ್ನು ತಿಳಿಯಬೇಕಾದರೆ ನೀವು 1950 ಅಥವಾ 9731979899 ನಂಬರಿಗೆ ಮೆಸೇಜ್ ಕಳುಹಿಸಬಹುದು.

    ಮೆಸೇಜ್ ಹೇಗೆ ಮಾಡಬೇಕು?
    ECIPS ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ವೋಟರ್ ಐಡಿ ನಂಬರ್ ಟೈಪ್ ಮಾಡಿ 1950 ನಂಬರ್ ಗೆ ಸೆಂಡ್ ಮಾಡಿ ಅಥವಾ ECIPS ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ವೋಟರ್ ಐಟಿ ನಂಬರ್ ಟೈಪ್ ಮಾಡಿ 9731979899 ನಂಬರ್ ಗೆ ಕಳುಹಿಸಿ.

    ಉದಾಹರಣೆ : KAEPIC<“space”>ID CARD NO. ಈ ರೀತಿ  ಟೈಪ್ ಮಾಡಿ KAEPIC XVY15018368 ಸೆಂಡ್ ಮಾಡಿ.

    ಈ ಮೇಲಿನ ರೀತಿಯಲ್ಲಿ ನೀವು ಸರಿಯಾಗಿ ಟೈಪ್ ಮಾಡಿ ಮಸೇಜ್ ಕಳುಹಿಸಿದ್ದರೆ ನಿಮ್ಮ ಮೊಬೈಲ್‍ಗೆ ಮತಗಟ್ಟೆ ಎಲ್ಲಿದೆ ಎನ್ನುವ ಮಾಹಿತಿ ಕೂಡಲೇ ಬರುತ್ತದೆ.