Tag: vote

  • ನಾನು ಆರು ಬಾರಿ ಶಾಸಕನಾಗಲು ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವೇ ಕಾರಣ : ರಮಾನಾಥ ರೈ

    ನಾನು ಆರು ಬಾರಿ ಶಾಸಕನಾಗಲು ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವೇ ಕಾರಣ : ರಮಾನಾಥ ರೈ

    ಮಂಗಳೂರು: ಅರಣ್ಯ ಸಚಿವ ರಮಾನಾಥ ರೈ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಾರೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಸ್ವತಃ ರಮಾನಾಥ ರೈ ಅವರೇ ತಾವು ಮುಸ್ಲಿಂ ಮತದಿಂದ ಗೆದ್ದು ಬಂದಿದ್ದು ಅವರ ಋಣ ತೀರಿಸಲು ಜನ್ಮ ಜನ್ಮಾಂತರಗಳಿಂದಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ಅಲ್ಲಾಹುವಿನ ಕೃಪೆಯಿಂದ ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಆರು ಬಾರಿ ಶಾಸಕನಾಗಲು ಸಾಧ್ಯವಾಗಿದೆ. ಅದಕ್ಕೆ ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವು ಕಾರಣ. ತಮ್ಮ ಸಮುದಾಯದ ವ್ಯಕ್ತಿ ಕಣಕ್ಕೆ ನಿಂತಿದ್ದಾರೆಂದು ಹತ್ತು-ಹದಿನೈದು ಸಾವಿರ ಮಂದಿ ಮತ ಹಾಕುತ್ತಿದ್ದರೆ, ಈ ರಮಾನಾಥ ರೈ ಯಾವತ್ತೋ ಮಾಜಿಯಾಗುತ್ತಿದ್ದ. ಯಾವುದೇ ಧರ್ಮ, ಜಾತಿ ಮಿತಿಗೆ ಒಳಗಾಗದೇ ನೀವು ಮತ ಹಾಕುತ್ತಿದ್ದೀರಿ. ನಿಮ್ಮ ಋಣ ತೀರಿಸಲು ನನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.

    ಸಚಿವ ರಮಾನಾಥ ರೈ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಮೂಲಕ ರೈ ಅವರು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು ಹಾಗಾದರೆ ರಮಾನಾಥ ರೈ ಅವರು ಕೇವಲ ಮುಸ್ಲಿಮರ ವೋಟಿನಿಂದಷ್ಟೇ ಗೆದ್ದು ಬಂದಿದ್ದರಾ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    https://www.youtube.com/watch?v=PJ8h1JAxwDk

  • ಸತ್ತವರ ಓಟುಗಳನ್ನು ಹಾಕಿ ನನ್ನ ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ವಿರುದ್ಧ ವರ್ಷವಾದ್ರೂ ಇಲ್ಲ ತನಿಖೆ- ಕಾನೂನು ಮರೆತ್ರಾ ಮೈಸೂರು ಡಿಸಿ?

    ಸತ್ತವರ ಓಟುಗಳನ್ನು ಹಾಕಿ ನನ್ನ ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ವಿರುದ್ಧ ವರ್ಷವಾದ್ರೂ ಇಲ್ಲ ತನಿಖೆ- ಕಾನೂನು ಮರೆತ್ರಾ ಮೈಸೂರು ಡಿಸಿ?

    ಮೈಸೂರು: ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಕಾನೂನು ಮರೆತರಾ ಎಂಬ ಪ್ರಶ್ನೆ ಎದ್ದಿದೆ.

    ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಅಂದಿದ್ರು. ಇದು ಭಾರಿ ವಿವಾದಕ್ಕೆ ಕಾರಣವಾದ ಬಳಿಕ ಸಾಮಾಜಿಕ ಕಾರ್ಯರ್ತ ಮರಿಲಿಂಗೇಗೌಡ ಮಾಲಿಪಾಟೀಲ್ ಸಿಎಂ ಶಾಸಕತ್ವ ರದ್ದುಪಡಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು.

    ಅದರಂತೆ 2016ರ ಅಕ್ಟೋಬರ್ ತಿಂಗಳಲ್ಲಿ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಡಿಸಿಗೆ ಪತ್ರ ಬರೆದಿತ್ತು. ಆದ್ರೆ ಮೈಸೂರು ಡಿಸಿ ರಂದೀಪ್ ತನಿಖೆ ನಡೆಸದೆ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ರು. ಉಪವಿಭಾಗಾಧಿಕಾರಿಯೂ ಕೂಡ ತಹಶೀಲ್ದಾರ್ ಗೆ ಪತ್ರ ಬರೆದು ಸುಮ್ಮನಾಗಿದ್ದಾರೆ. ಒಟ್ನಲ್ಲಿ ದೂರು ನೀಡಿ ವರ್ಷವಾದ್ರೂ ಡಿಸಿ ಕೈಕಟ್ಟಿ ಕುಳಿತಿರೋದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.

  • ಸಾಹಿತ್ಯ ಸಮ್ಮೇಳನದಲ್ಲಿ ಟಾಂಗ್ ಕೊಟ್ಟ ಬೆನ್ನಲ್ಲೇ ಅನಂತ್ ಕುಮಾರ್ ಗೆ ಚಂಪಾ ತಿರುಗೇಟು

    ಸಾಹಿತ್ಯ ಸಮ್ಮೇಳನದಲ್ಲಿ ಟಾಂಗ್ ಕೊಟ್ಟ ಬೆನ್ನಲ್ಲೇ ಅನಂತ್ ಕುಮಾರ್ ಗೆ ಚಂಪಾ ತಿರುಗೇಟು

    ಮೈಸೂರು: ನಾನು ಯಾವ ಪಕ್ಷಕ್ಕೂ ಮತ ಹಾಕಿ ಅಂದಿಲ್ಲ. ನಾನು ಸೆಕ್ಯೂಲರ್ ಪಕ್ಷಕ್ಕೆ ಮತ ಹಾಕಿ ಅಂದಿರೋದು. ನಾನು ಯಾವ ಪಕ್ಷದ ಪರ ಇಲ್ಲ ಅಂತ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಹೇಳಿದ್ದಾರೆ.

    83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ತೆರೆ ಬಿದ್ದಿದ್ದು, ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಂಪಾ, ಸೆಕ್ಯುಲರ್ ಪದ ಕೇಳಿದ್ರೆ ಅವರು ಚಿಕ್ಕ ಮಕ್ಕಳಂತೆ ಉಚ್ಚೆ ಊಯ್ದುಕೊಳ್ಳುತ್ತಾರೆ. ಕನ್ನಡ, ನೆಲ, ಜಲದ ವಿಚಾರವಾಗಿ ಕೆಲಸ ಮಾಡುವ ಪ್ರಾದೇಶಿಕ ಜಾತ್ಯಾತೀತ ಪಕ್ಷ ಬೇಕು. ಜಾತ್ಯಾತೀತ ಅನ್ನೋ ಪದವೇ ಸಚಿವ ಅನಂತಕುಮಾರ್ ಅವರಿಗೆ ಅರ್ಥವಾಗಿಲ್ಲ. ಅವರನ್ನು ರಿಪೇರಿ ಮಾಡೋದು ನಮ್ಮ ಕೆಲಸವಲ್ಲ. ಅವರನ್ನು ರಿಪೇರಿ ಮಾಡುವ ಪ್ರಯತ್ನವೂ ವ್ಯರ್ಥ. ಕನ್ನಡದ ಭಾಷೆ, ನೆಲ, ಜಲದ ವಿಚಾರದಲ್ಲಿ ಇದುವರೆಗೂ ಪಕ್ಷಾತೀತವಾದ ಒಂದೇ ಒಂದು ಕೆಲಸ ಆಗಿಲ್ಲ ಎಂದು ಅನಂತ ಕುಮಾರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ರು.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಅವರ ಭಾಷಣದಲ್ಲಿ ಪವಿತ್ರ ಗಂಗಾ ಜಲವೂ ಇತ್ತು. ಮಲೀನ ಗಟಾರದ ನೀರೂ ಇತ್ತು. ಒಳ್ಳೆಯದನ್ನು ನಾನು ಸ್ವೀಕರಿಸಿದ್ದೇನೆ. ಕೆಟ್ಟದ್ದನ್ನು ಬಿಟ್ಟುಬಿಡೋಣ. ನಾನು ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸುತ್ತೇನೆ. ಅವರ ಭಾಷಣದ ಶೇ.50ರಷ್ಟನ್ನು ನಾನು ಸ್ವೀಕರಿಸಿದ್ದೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಉತ್ತರ ಕರ್ನಾಟಕದವರು. ಅವರ ತಾಯಿ ಉತ್ತಮ ವ್ಯಕ್ತಿ. ಅವರ ಪರಂಪರೆಯನ್ನು ಅನಂತ್ ಕುಮಾರ್ ಮುಂದುವರಿಸಿದ್ದಾರೆ ಅಂದ್ರು.

    ಇನ್ನು ಅನಂತ್ ಕುಮಾರ್ ಹೋಗುವಾಗ ಚಂಪಾ ನಮ್ ಮೇಷ್ಟ್ರು ಅಂದ್ರು. ಅನಂತ್ ಕುಮಾರ್ ನನ್ನ ವಿದ್ಯಾರ್ಥಿ ಆಗಿರಬಹುದು. ಅದನ್ನ ನೆನಪಿಟ್ಟಿದ್ದಕ್ಕೆ ನಾನು ಋಣಿ. ಕನ್ನಡದ ಬಗ್ಗೆ ಕಳಕಳಿಯಿಂದ ಮಾತಾಡಿದ್ದು ಖುಷಿ ಕೊಡ್ತು. ಇದು ಏಕಮುಖ ವೇದಿಕೆ ಅಲ್ಲ. ಆದ್ರೆ ಕೆಲವರು ತಾವು ಏನು ಹೇಳಬೇಕೋ ಹೇಳಿ, ಬೇರೆಯವರು ಏನು ಹೇಳ್ತಾರೆ ಎಂಬುದನ್ನ ಕೇಳುವ ತಾಳ್ಮೆ ಇರದೆ ಹೋಗ್ತಾರೆ. ಅನಂತ್ ಕುಮಾರ್, ಪ್ರತಾಪ್ ಹೋದ್ರೂ ಅವರ ಕಣ್ಣು, ಕಿವಿ ಇಲ್ಲೇ ಇವೆ. ನನ್ನ ಮಾತು ವಾಟ್ಸಪ್, ಫೇಸ್ ಬುಕ್, ಟಿವಿ ಮೂಲಕ ಅನಂತ್ ಕುಮಾರ್ ಕಿವಿಗೆ ಬೀಳುತ್ತೆ ಅಂತ ನೇರವಾಗಿಯೇ ಟಾಂಗ್ ನೀಡಿದ್ರು.

    ಸಚಿವರು ಏನ್ ಹೇಳಿದ್ದರು?: ಈ ವೇದಿಕೆ ರಾಜಕೀಯ ಭಾಷಣ ಮಾಡಲು ಅಲ್ಲ. ಯಾರಿಗೆ ಮತ ಹಾಕಬೇಕು ಅನ್ನುವುದನ್ನು ಹೇಳುವುದಕ್ಕೆ ಬೇರೆ ವೇದಿಕೆಗಳಿವೆ, ಅಲ್ಲಿ ಹೇಳಿ. ಕನ್ನಡ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಮಾತನಾಡಿ. ಇಡೀ ದೇಶವೇ ಸಮ್ಮೇಳವನ್ನು ನೋಡುತ್ತಿದೆ. ಹೀಗಿರುವಾಗ ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳದಲ್ಲಿ ಡೋಂಗಿತನಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ವೇದಿಕೆಯ ಮೌಲ್ಯ ಹಾಳಾಗುತ್ತದೆ ಎಂದು ಅನಂತ್ ಕುಮಾರ್ ನೇರವಾಗಿ ಹೇಳಿದ್ದರು.

  • `ಶಾಸಕ ವರ್ತೂರು ಪ್ರಕಾಶ್ ಗೂ ಉಗ್ರರಿಗೂ ಯಾವುದೇ  ವ್ಯತ್ಯಾಸವಿಲ್ಲ’

    `ಶಾಸಕ ವರ್ತೂರು ಪ್ರಕಾಶ್ ಗೂ ಉಗ್ರರಿಗೂ ಯಾವುದೇ ವ್ಯತ್ಯಾಸವಿಲ್ಲ’

    ಕೋಲಾರ: ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಗೂ ಉಗ್ರರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ಆರೋಪ ಮಾಡಿದ್ದಾರೆ.

    ಕೋಲಾರ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಲ್ಲಿನ ನಗರಸಭೆಯ 9 ಜನ ಜೆಡಿಎಸ್ ಸದಸ್ಯರು, ರಾಜ್ಯದ ನಾಯಕ ಎಂದು ಹೇಳಿಕೊಂಡು ವೇದಿಕೆ ಕಾರ್ಯಕ್ರಮಗಳಲ್ಲಿ ಜಾತಿಗಳ ಬಗ್ಗೆ ಮಾತನಾಡುತ್ತಾ ಅರೆ ಹುಚ್ಚನಂತೆ ವರ್ತಿಸುತ್ತಿದ್ದಾರೆ. ಅವರನ್ನ ಕೆಲವು ಭಾಗಗಳಲ್ಲಿ ಜೋಕರ್ ಮಾದರಿಯಲ್ಲಿ ನೋಡಲಾಗುತ್ತಿದೆ ಎಂದು ಆರೋಪಿಸಿದ್ರು.

    ಬಾಯಿಗೆ ಬಂದಂತೆ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಶಾಸಕ ವರ್ತೂರು ಪ್ರಕಾಶ್ ಒಬ್ಬ ಕಾಮಿಡಿಯನ್ ಎಂದು ವ್ಯಂಗ್ಯವಾಡಿದ ಅವರು, 15 ತಿಂಗಳ ಹಿಂದೆ ಪೈಪ್ ಲೈನ್ ಅಳವಡಿಸಿ ಕೋಲಾರ ನಗರಕ್ಕೆ ನೀರು ಕೊಡುತ್ತೇನೆ ಎಂದ ಶಾಸಕ ವರ್ತೂರು ಪ್ರಕಾಶ್ ಇದುವರೆಗೂ ನೀರು ಕೊಟ್ಟಿಲ್ಲ. ಈಗಾಗಲೇ ಕೆರೆ ಕುಂಟೆಗಳು ತುಂಬಿ, ಕೊಳವೆ ಬಾವಿಗಳಲ್ಲಿ ನೀರು ಇದ್ರೂ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಇಂದಿಗೂ ನೀರಿಗೆ ಬರ ಇದೆ. ಟ್ಯಾಂಕರ್ ನೀರು ನಿಲ್ಲಿಸಿರುವುದರಿಂದ ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಇದನ್ನ ಬಳಸಿಕೊಂಡು ವೋಟ್‍ಗಾಗಿ ನಮ್ಮ ಕಾಂಗ್ರೆಸ್ ಮೂಲಕ ಟ್ಯಾಂಕರ್ ನೀರು ಪೂರೈಕೆ ಮಾಡಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ರು.

  • ಬಿಜೆಪಿಗೆ ಮತ ಹಾಕಿ ಇಲ್ಲವೇ ಪರಿಣಾಮ ಎದುರಿಸಿ- ಮುಸ್ಲಿಮರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

    ಬಿಜೆಪಿಗೆ ಮತ ಹಾಕಿ ಇಲ್ಲವೇ ಪರಿಣಾಮ ಎದುರಿಸಿ- ಮುಸ್ಲಿಮರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

    ಲಕ್ನೋ: ನಿಮ್ಮ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಿ. ಇಲ್ಲವೆಂದಲ್ಲಿ ಮುಂದೆ ಬರಲಿರುವ ಪರಿಣಾಮವನ್ನು ನೀವೇ ಎದುರಿಸಲಿದ್ದೀರಿ ಅಂತ ಉತ್ತರಪ್ರದೇಶದ ಬಿಜೆಪಿ ಮುಖಂಡ ರಂಜೀತ್ ಕುಮಾರ್ ಶ್ರೀವತ್ಸವ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.

    ರಂಜೀತ್ ಪತ್ನಿ ಬರಾಬಂಕಿ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪತ್ನಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರಂಜೀತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಈ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಬಿಜೆಪಿ ಕಾರ್ಪೋರೇಟರ್ ಗಳಿಗೆ ನೀವು ಮತ ಹಾಕಿದ್ದಲ್ಲಿ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದು. ಇಲ್ಲವೆಂದಲ್ಲಿ ಅಭಿವೃದ್ಧಿ ಎಂಬ ಪದವನ್ನು ಮರೆತುಬಿಡಿ ಅಂತ ಹೇಳಿದ್ದಾರೆ.

    ಇದು ಸಮಾಜವಾದಿ ಪಕ್ಷದ ಸರ್ಕಾರ ಅಲ್ಲ. ಇಲ್ಲಿ ಯಾವೊಬ್ಬ ಮುಖಂಡನು ನಿಮಗೆ ಸಹಾಯ ಮಾಡಲ್ಲ. ರಸ್ತೆ, ಚರಂಡಿ, ಫುಟ್ಪಾತ್ ಕೆಲಸಕ್ಕಾಗಿ ಮುನಿಸಿಪಲ್ ಬೋರ್ಡ್ ಅನ್ನೇ ಸಂಪರ್ಕಿಸಬೇಕು. ನೀವು ನಮ್ಮ ಕಾರ್ಪೋ ರೇಟರುಗಳನ್ನು ಚುನಾಯಿಸದೇ ಇದ್ದರೆ, ನೀವು ರಂಜೀತ್ ಸಾಹೇಬ್ ಅವರ ಪತ್ನಿಗೆ ಮತ ನೀಡಿ ಆಕೆಯನ್ನು ಆರಿಸದೇ ಇದ್ದರೆ ಆಗ ಸಮಾಜವಾದಿ ಪಕ್ಷ ನಿಮ್ಮ ರಕ್ಷಣೆಗೆ ಬರುವುದಿಲ್ಲ. ಇದು ಬಿಜೆಪಿಯ ಆಡಳಿತ. ನೀವು ಈ ಹಿಂದೆ ಅನುಭವಿಸದೇ ಇದ್ದ ಕಷ್ಟ ಅನುಭವಿಸಬೇಕಾಗಬಹುದು ಅಂತ ಹೇಳಿದ್ದಾರೆ.

    ಮುಸ್ಲಿಮರಲ್ಲಿ ನಾನು ಕೇಳಿಕೊಳ್ಳುವುವು ಏನೆಂದರೆ ಬಿಜೆಪಿಗೆ ಮತ ಹಾಕಿ. ನಾನು ನಿಮ್ಮ ಜೊತೆ ಮತವನ್ನು ಭಿಕ್ಷೆ ತರ ಬೇಡುತ್ತಿಲ್ಲ. ಬಿಜೆಪಿಗೆ ನೀವು ಮತ ಹಾಕಿದ್ರೆ ಮಾತ್ರ ನೀವು ಶಾಂತಿಯುತ ಜೀವನ ನಡೆಸಬಹುದು. ಒಂದು ವೇಳೆ ನೀವು ಮತ ಹಾಕದೇ ಇದ್ದಲ್ಲಿ ಮುಂದೆ ಕಷ್ಟ ಅನುಭವಿಸಲಿದ್ದೀರಿ ಅಂತ ಹೇಳಿದ್ದಾರೆ.

    ನಾನು ಬೆದರಿಕೆ ಹಾಕುತ್ತಿದ್ದೇನೆ ಅಂತ ತಿಳಿದುಕೊಳ್ಳಬೇಡಿ, ನಾನು ಮತ ಹಾಕಿ ಅಂತ ಮುಸ್ಲಿಮರಿಗೆ ಬೆದರಿಕೆ ಹಾಕುತ್ತಿಲ್ಲ. ಅವರ ಮತಗಳನ್ನು ಬಿಜೆಪಿಗೆ ನೀಡುವಂತೆ ಮನವೊಲಿಸುತ್ತಿದ್ದೇನೆ ಅಷ್ಟೇ. ಅಲ್ಲದೇ ಹಿಂದೂ ಹಾಗೂ ಮುಸ್ಲಿಮರಿಗಿರುವ ದೊಡ್ಡ ವ್ಯತ್ಯಾಸದ ಕುರಿತು ಅವರಿಗೆ ಅರ್ಥೈಸಲು ಪ್ರಯತ್ನಿಸಿದ್ದೇನೆ. ಹಿಂದೂ, ಮುಸ್ಲಿಮ್ ಎಂಬ ಬೇಧ-ಭಾವ ಇಲ್ಲಿಗೆ ಕೊನೆಯಾಗಬೇಕು ಎಂದು ಅವರು ಹೇಳಿದ್ದಾರೆ.

    ನವಾಬಗಂಜ್ ನಗರಪಾಲಿಕೆಯ ನಿರ್ಗಮನ ಅಧ್ಯಕ್ಷರಾಗಿರುವ ಶ್ರೀವಾಸ್ತವ ಎಂಬ ಬಿಜೆಪಿ ಮುಖಂಡರ ಪತ್ನಿ ಶಶಿಗೆ ಶ್ರೀವಾತ್ಸವ್ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಈ ಭಾಷಣ ನವೆಂಬರ್ 13ರಂದು ನಡೆದಿದ್ದು, ಈ ವೇಳೆ ಬಾರಾಬಂಕಿ ಉಸ್ತುವಾರಿ ಸಚಿವರೂ ಆಗಿರುವ ದಾರಾ ಸಿಂಗ್ ಚೌಹಾಣ್ ನಂತರ ಪ್ರತಿಕ್ರಿಯಿಸಿ ಇಂತಹ ಹೇಳಿಕೆಗಳಿಂದ ಪಕ್ಷದ ಸದಸ್ಯರು ದೂರವಿರಬೇಕೆಂದು ತಿಳಿಸಿದ್ದಾರೆ.

  • ರಾಜಕಾರಣಿಗಳನ್ನು ಹಾಳು ಮಾಡಿದ್ದೇ ಮತದಾರರು: ಎಂಬಿ ಪಾಟೀಲ್

    ರಾಜಕಾರಣಿಗಳನ್ನು ಹಾಳು ಮಾಡಿದ್ದೇ ಮತದಾರರು: ಎಂಬಿ ಪಾಟೀಲ್

    ವಿಜಯಪುರ: ಚುನಾವಣೆ ವೇಳೆಯಲ್ಲಿ ರಾಜಕಾರಣಿಗಳು ನೀಡುವ ಹಣದ ಆಸೆಗೆ ಬಲಿಯಾಗಿ, ಮತದಾರರು ರಾಜಕಾರಣಿಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ತಾಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕಾರಣಿಗಳು ಮತದಾರರಿಗೆ ಹಣ ನೀಡುತ್ತಾರೆ. ದೇವಸ್ಥಾನಕ್ಕೆ, ದರ್ಗಾಗಳಿಗೆ ಹಣ ಕೊಡುತ್ತಾರೆ ಅದರಲ್ಲಿ ನಾನೂ ಕೊಟ್ಟಿದ್ದೇನೆ. ಎಲ್ಲಿಯವರೆಗೆ ಮತದಾರರು ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಸುಧಾರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಶಾಲಾ ಕಾಲೇಜುಗಳಿಗೆ ಯಾರೂ ದುಡ್ಡು ಕೊಡುವುದಿಲ್ಲ ಯಾರೂ ಕೇಳುವುದಿಲ್ಲ. ಹೀಗಾಗಿ ಮತದಾರರೇ ರಾಜಕಾರಣಿಗಳನ್ನು ದಾರಿ ತಪ್ಪಿಸಿದ್ದಾರೆ. ಎಲ್ಲಿಯವರೆಗೆ ಮತದಾರರು ದೇವಸ್ಥಾನ ಹಾಗೂ ದರ್ಗಾಗಳಿಗೆ ಹಣ ಕೇಳುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಶಾಲಾ ಕಾಲೇಜುಗಳು ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣಿಗಳು ಶೈಕ್ಷಣಿಕ ಅಭಿವೃದ್ಧಿಗೆ ಹಣ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

  • ವಿಡಿಯೋ: ವೋಟ್ ಹಾಕಲ್ಲ ಎಂದಿದ್ದಕ್ಕೆ ದಲಿತ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

    ವಿಡಿಯೋ: ವೋಟ್ ಹಾಕಲ್ಲ ಎಂದಿದ್ದಕ್ಕೆ ದಲಿತ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

    ಭೋಪಾಲ್: ದಲಿತ ಶಿಕ್ಷಕರೊಬ್ಬರು ಉಪ-ಚುನಾವಣೆಯಲ್ಲಿ ತಮಗೆ ಮತ ನೀಡಲ್ಲ ಎಂದು ಹೇಳಿದಕ್ಕೆ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶ ಅಟೇಲ್ ಎಂಬಲ್ಲಿ ನಡೆದಿದೆ.

    ಕಲ್ಯಾಣ್ ಎಂಬವರೇ ಹಲ್ಲೆಗೊಳಗಾದ ಸರ್ಕಾರಿ ಶಾಲೆಯ ಶಿಕ್ಷಕ. ಅಟೇಲ್ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಲ್ಯಾಣ್ ಅವರಿಗೆ ತಮ್ಮ ಪರವಾಗಿ ವೋಟ್ ಹಾಕುವಂತೆ ಸ್ಥಳೀಯರು ಬೆದರಿಕೆ ಹಾಕಿದ್ದರು. ಆದರೆ ಸ್ಥಳೀಯ ಮುಖಂಡರ ಬೆದರಿಕೆಗೆ ಹೆದರದ ಕಲ್ಯಾಣ್ ನನ್ನ ಇಚ್ಛೆಯಂತೆ ಮತ ಚಲಾಯಿಸುತ್ತೇನೆ ಅಂತಾ ತಿಳಿಸಿ, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಹಾಕಿದ್ದವರ ವಿರುದ್ಧ ದೂರನ್ನು ಸಹ ದಾಖಲಿಸಿದ್ದರು.

    ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹಿಂದಿರುಗುವಾಗ ಮಾರ್ಗ ಮಧ್ಯ ಅಡ್ಡಗಟ್ಟಿದ್ದ ಮೂವರು ದುಷ್ಕರ್ಮಿಗಳು ಲಾಠಿ-ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಘಟನಾ ಸ್ಥಳದಲ್ಲಿ ಸಾಕಷ್ಟು ಜನರಿದ್ದರು ಕಲ್ಯಾಣ್ ಅವರಿಗೆ ಸಹಾಯ ಮಾಡದೇ ನೋಡುತ್ತಾ ನಿಂತಿದ್ದಾರೆ. ಘಟನೆ ಬಳಿಕ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಮೂವರು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನೂ ಹಲ್ಲೆಗೊಳಗಾದ ಶಿಕ್ಷಕ ಕಲ್ಯಾಣ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಯಾಣ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

     

  • ಕರಾವಳಿಯ ಮೀನುಗಾರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ಲಾನ್

    ಕರಾವಳಿಯ ಮೀನುಗಾರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ಲಾನ್

    ಉಡುಪಿ: ಕರಾವಳಿಯ ಪ್ರಬಲ ಮತದಾರ ಸಮುದಾಯವಾದ ಮೀನುಗಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಐಡಿಯಾ ಮಾಡಿದೆ.

    ಕರಾವಳಿಯ ಪ್ರಬಲ ಮತದಾರ ಸಮುದಾಯವಾದ ಮೀನುಗಾರರನ್ನು ತನ್ನತ್ತ ಸೆಳೆಯಲು ರಾಹುಲ್ ಗಾಂಧಿ ಅವರನ್ನ ಕುಮಟಾಕ್ಕೆ ಕರೆತಂದು ಮೊಗವೀರರ ಬೃಹತ್ ಸಮಾವೇಶ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ.

    ನವೆಂಬರ್ 21 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಣ್ಕಿಯ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಕರ್ನಾಟಕ ಪ್ರದೇಶ ಮೀನುಗಾರ ಕಾಂಗ್ರೆಸ್ ಸಮಾವೇಶದ ಉಸ್ತುವಾರಿ ಹೊತ್ತುಕೊಂಡಿದೆ. ಉಡುಪಿಯಲ್ಲಿ ಮಾಜಿ ಶಾಸಕ ಯುಆರ್ ಸಭಾಪತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಒಂದು ಲಕ್ಷ ಮೀನುಗಾರರು ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಕೇಂದ್ರ ಸಂಪುಟದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಮಂತ್ರಿ ಸ್ಥಾನ ಕೊಡಬೇಕು. ಮೀನುಗಾರರ ಸಮುದಾಯವನ್ನು ಎಸ್‍ಟಿ ಪಂಗಡಕ್ಕೆ ಸೇರಿಸಬೇಕು. ಹೀಗೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಮಾವೇಶದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಯುಆರ್ ಸಭಾಪತಿ ಹೇಳಿದ್ದಾರೆ.

  • ರಾಜ್ಯಕ್ಕೆ ಬರ್ತಾರಾ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ- ಯಾವ ಪಕ್ಷಕ್ಕೆ ಕಂಟಕ? ಯಾರಿಗೆ ಲಾಭ?

    ರಾಜ್ಯಕ್ಕೆ ಬರ್ತಾರಾ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ- ಯಾವ ಪಕ್ಷಕ್ಕೆ ಕಂಟಕ? ಯಾರಿಗೆ ಲಾಭ?

    ಬೆಂಗಳೂರು: ಕರ್ನಾಟಕ ಸದ್ಯ ಚುನಾವಣೆಯ ಹೊಸ್ತಿಲಿನಲ್ಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣೆಗಾಗಿ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿವೆ. ಚುನಾವಣಾ ರಂಗ ಕಾವೇರಿತ್ತಲೇ ಸದ್ಯ ಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಚುನಾವಾಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    2018ರ ಚುನಾವಣೆಗೆ ರಾಜ್ಯದ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಸ್ಪರ್ಧೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಓವೈಸಿ ಅವರು ಪ್ರಮುಖವಾಗಿ ನಗರ ಕೇಂದ್ರಿಕೃತ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಸಾಧ್ಯತೆಗಳಿವೆ. ಕಲಬುರಗಿ, ರಾಯಚೂರು, ಮಂಗಳೂರು, ಕೊಪ್ಪಳ ಮತ್ತು ಬೆಂಗಳೂರಿನ ಶಿವಾಜಿನಗರ, ಶಾಂತಿನಗರ, ಹೆಬ್ಬಾಳ, ಸರ್ವಜ್ಞನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.

    ಮಂಗಳೂರು, ಮಂಗಳೂರು ಉತ್ತರ ಕ್ಷೇತ್ರ, ಕಲಬುರಗಿ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರ, ರಾಯಚೂರು ನಗರ ವಿಧಾನಸಭಾ ಕ್ಷೇತ್ರ, ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರ ಪ್ರದೇಶಗಳ ಮೇಲೆ ಓವೈಸಿ ಕಣ್ಣಿಟ್ಟಿದ್ದಾರೆ.

    ಯಾರಿಗೆ ಲಾಭ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಂಐಎಂ ಪಕ್ಷ ಕಣಕ್ಕಿಳಿದಿತ್ತು. 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ವಿರುದ್ಧ ಬಣಗಳ ಆಭ್ಯರ್ಥಿಗಳ ಗೆಲುವಿಗೆ ಎಂಐಎಂ ಬ್ರೇಕ್ ಹಾಕಿತ್ತು. ಎಂಐಎಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಗೆಲುವನ್ನು ಕಂಡಿತ್ತು.

    ಯಾರಿಗೆ ನಷ್ಟ: ಎಂಐಎಂ ಕರ್ನಾಟಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಅಲ್ಪಸಂಖ್ಯಾತ ನಾಯಕರಲ್ಲಿ ಸೋಲಿನ ಭಯ ಕಾಣಿಸಿಕೊಳ್ಳಬಹುದು. ಸಚಿವ ಕೆ.ಜೆ.ಜಾರ್ಜ್, ರೋಷನ್ ಬೇಗ್, ಶಾಸಕರಾದ ಜಮೀರ್ ಅಹಮದ್, ಹ್ಯಾರಿಸ್ ಅವರಿಗೂ ಎಂಐಎಂ ಕಂಟಕವಾಗಬಹುದು ಎಂದು ಹೇಳಲಾಗುತ್ತಿದೆ.

    ಎಂಐಎಂ ಸ್ಪರ್ಧೆಯಿಂದ ಬಿಜೆಪಿ 10ರಿಂದ 15 ಕ್ಷೇತ್ರಗಳಲ್ಲಿ ಸರಳವಾಗಿ ಗೆಲುವನ್ನು ಸಾಧಿಸುತ್ತಾ? ಅಲ್ಪಸಂಖ್ಯಾತ ಮತಗಳು ವಿಭಜನೆಯಾದರೆ ಇದು ಕಾಂಗ್ರೆಸ್ ಗೆ ಭಾರೀ ಹೊಡೆತವಾಗುತ್ತಾ? ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಓವೈಸಿ ಸಫಲರಾಗ್ತಾರಾ? ಓವೈಸಿ ಹೊಡೆತಕ್ಕೆ ನಲುಗುವವರು ಯಾರು? ಲಾಭ ಪಡೆಯುವರು ಯಾರು? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  • ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!

    ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!

    – ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕೈ ಅಭ್ಯರ್ಥಿಗೆ ಶ್ರೀರಾಮುಲು ಮತ

    ಬಳ್ಳಾರಿ: ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಮುಂದಿನ ಗುರಿ. ಹೀಗಂತ ಬಿಜೆಪಿ ನಾಯಕರು ಕಂಡ ಕಂಡ ಸಭೆಗಳಲ್ಲಿ ಬೊಬ್ಬೆ ಹಾಕಿ ಭಾಷಣ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಸಂಸದರು ಮತ ಹಾಕಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮಣ ಪರವಾಗಿ ಸಂಸದ ಶ್ರೀರಾಮುಲು ಹಾಗೂ ನಾಲ್ಕು ಬಿಜೆಪಿ ಸದಸ್ಯರು ಮತ ಚಲಾವಣೆ ಮಾಡಿದ್ದಾರೆ.

    ಮೇಯರ್, ಉಪಮೇಯರ್ ಸ್ಥಾನಕ್ಕೆ ಬಹುಮತ ಹೊಂದಿರುವ ಕಾಂಗ್ರೆಸ್ಸಿನ ಎರಡು ಗುಂಪುಗಳ ಮಧ್ಯೆ  ಪೈಪೋಟಿ ಎರ್ಪಟಿತ್ತು. ಸಚಿವ ಸಂತೋಷ ಲಾಡ್ ಗುಂಪಿನ ಪರವಾಗಿ ಮೇಯರ್ ಸ್ಥಾನಕ್ಕೆ ವೆಂಕಟರಮಣ, ಉಪಮೇಯರ್ ಸ್ಥಾನಕ್ಕೆ ಉಮಾದೇವಿ ಸ್ಪರ್ಧೆ ನಡೆಸಿದ್ದರು.

    ಮಾಜಿ ಸಚಿವ ದಿವಾಕರಬಾಬು ಗುಂಪಿನಿಂದ ಗಾಜಲು ಶ್ರೀನಿವಾಸ ಹಾಗೂ ಲಕ್ಷ್ಮಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಪಕ್ಷದಿಂದ ಮೇಯರ್ ಸ್ಥಾನಕ್ಕೆ ವೆಂಕಟರಮಣ ಪರವಾಗಿ, ಉಪಮೇಯರ್‍ಗೆ ಲಕ್ಷ್ಮಿ ಪರವಾಗಿ ಮತ ಹಾಕುವಂತೆ ವಿಪ್ ಜಾರಿ ಮಾಡಲಾಗಿತ್ತು.

    ದಿವಾಕರ ಬಾಬು ಗುಂಪಿನ ಸದಸ್ಯರು ವಿಪ್ ಸ್ವೀಕರಿಸಿದ್ರೆ. ಸಚಿವ ಸಂತೋಷ ಲಾಡ್ ಗುಂಪಿನ ಸದಸ್ಯರು ವಿಪ್ ಸ್ವೀಕರಿಸದೆ ಚುನಾವಣೆಗೆ ಹಾಜರಾದರು. ಹೀಗಾಗಿ ದಿವಾಕರ ಬಾಬು ಗುಂಪಿನ 16 ಸದಸ್ಯರು ಚುನಾವಣೆಯಿಂದ ದೂರ ಉಳಿದರು. ಇದರಿಂದ ಕೆಲ ಕಾಲ ಪಾಲಿಕೆ ಆವರಣದಲ್ಲಿ ಹೈಡ್ರಾಮಾ ಸಹ ನಡೆಯಿತು.

    ಕೊನೆಗೆ ವೆಂಕಟರಮಣ 24 ಮತ ಪಡೆದು ಮೇಯರ್ ಆದ್ರೆ, ಉಮಾದೇವಿ 20 ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು. ಚುನಾವಣೆ ನಂತರ ಮಾತನಾಡಿದ ಸಂಸದ ಶ್ರೀರಾಮುಲು, ನಾನು ಬಳ್ಳಾರಿ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿದ್ದೇನೆಂದು ಸಮಜಾಯಿಸಿ ನೀಡಿದರು.