Tag: vote

  • ಮದ್ಯಪ್ರಿಯರ ಕನಸನ್ನ ಭಗ್ನಗೊಳಿಸಿದ ಚುನಾವಣಾ ಆಯೋಗ!

    ಮದ್ಯಪ್ರಿಯರ ಕನಸನ್ನ ಭಗ್ನಗೊಳಿಸಿದ ಚುನಾವಣಾ ಆಯೋಗ!

    ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆ ಆಗುತ್ತಿದಂತೆ ಮುಂದಿನ ಕೆಲವು ದಿನ ಪುಕ್ಕಟ್ಟೆಯಾಗಿ ಸಾರಾಯಿ ಸಿಗುತ್ತೆ ಅಂತಾ ಖುಷಿಯಲ್ಲಿದ್ದ ಮದ್ಯ ಪ್ರಿಯರ ಕನಸನ್ನು ಚುನಾವಣಾ ಆಯೋಗ ಭಗ್ನಗೊಳಿಸಿದೆ.

    ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಕೆಲ ರಾಜಕಾರಣಿಗಳು ಮದ್ಯ ಹಂಚಲು ಮುಂದಾಗುತ್ತಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದ ಪ್ರತಿನಿತ್ಯ ರಾಜ್ಯಾದ್ಯಂತ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಸಾಗಾಟ ನಿಯಂತ್ರಿಸಲು ಚುನಾವಣಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಅಕ್ರಮ ಬಾರ್ ಗಳಿಗೆ ಬೀಗ ಹಾಕಿದ್ದಾರೆ.

    ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಬಾರ್‍ಗಳನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಟೋಕನ್ ಗಳ ಮೂಲಕ ಮತದಾರರಿಗೆ ಮದ್ಯ ಹಂಚಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿದ್ದವು. ಈ ಹಿನ್ನೆಲೆಯಲ್ಲಿ ಲೈಸನ್ಸ್ ಪಡೆಯದೇ ತೆರೆದಿರುವ ಬಾರ್‍ಗಳನ್ನು ಗುರುತಿಸಿ, ಅವುಗಳಿಗೆ ಬೀಗ ಹಾಕಲಾಗಿದೆ.

    ಕರ್ನಾಟಕದಾದ್ಯಂತ ಒಟ್ಟು 508 ಅಕ್ರಮ ಬಾರ್ ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 245 ಬೆಂಗಳೂರು ನಗರದಲ್ಲಿವೆ. ಮತದಾರರಿಗೆ ಮದ್ಯ ಹಂಚುವ ಮೂಲಕ ವೋಟ್ ಪಡೆಯಲು ಮುಂದಾಗಿದ್ದವರಿಗೆ ಚುನಾವಣಾ ಆಯೋಗ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

    ಬೆಂಗಳೂರು ನಗರದಲ್ಲಿ ಮುಚ್ಚಲ್ಪಟ್ಟ ಬಾರ್ ಗಳ ಪಟ್ಟಿ ಹೀಗಿದೆ:
    ಬೆಂಗಳೂರು ಪೂರ್ವ ವಿಭಾಗ- 123
    ಬೆಂಗಳೂರು ದಕ್ಷಿಣ ವಿಭಾಗ- 62
    ಬೆಂಗಳೂರು ಪೂರ್ವ ವಿಭಾಗ- 56
    ಬೆಂಗಳೂರು ಪಶ್ಚಿಮ ವಿಭಾಗ- 4

     

  • ಅಮಿತ್ ಶಾ ಅರಮನೆ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ: ಯದುವೀರ್ ಒಡೆಯರ್

    ಅಮಿತ್ ಶಾ ಅರಮನೆ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ: ಯದುವೀರ್ ಒಡೆಯರ್

    ಬೆಂಗಳೂರು: ಮೇ 12ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಮೈಸೂರಿನ ಒಡೆಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅರಮನೆ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲಾ ಪಕ್ಷದವರೊಂದಿಗೆ ನಮಗೆ ಉತ್ತಮ ಭಾಂದವ್ಯ ಇದೆ. ರಾಜಕೀಯ ನಾಯಕರು ಅರಮನೆಗೆ ಭೇಟಿ ನೀಡಿದ್ದರು. ಅದು ವೈಯಕ್ತಿಕ ವಿಚಾರ ಎಂದು ತಿಳಿಸಿದರು.

    ಇನ್ನೂ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಅವರು, ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ. ನಾನು ಚುನಾವಣೆಯಿಂದ ದೂರ ಇರುತ್ತೇನೆ ಎಂದು ತಿಳಿಸಿದರು.

  • ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಚುನಾವಣಾ ಆಯೋಗ ಶೇ.100 ರಷ್ಟು ಮತದಾನಕ್ಕೆ ನಾನಾ ರೀತಿಯ ಕಸರತ್ತು ಮಾಡುತ್ತಿದೆ. ಆದ್ರೆ ಮೆಡಿಕಲ್ ಶಾಪ್ ಮಾಲೀಕರೊಬ್ಬರು ಮತದಾನ ಹೆಚ್ಚಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಮಾಲೀಕ ಪ್ರಸಾದ್ ಮತದಾನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಮೆಡಿಕಲ್ ಶಾಪ್ ನಡೆಸುತ್ತಿರುವ ಪ್ರಸಾದ್ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಡಿಸ್ಕೌಂಟ್‍ನಲ್ಲಿ ಔಷಧಿ ನೀಡಲು ಹೊಸ ಐಡಿಯಾವನ್ನ ಮಾಡಿದ್ದಾರೆ. ರಾಜ್ಯ ಚುನಾವಣಾ ಅಧಿಕಾರಿಗಳು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ, ಮತದಾನ ಮಾಡಿದವರಿಗೆ ಕೆಲ ಮಾಲ್‍ಗಳ ಜೊತೆ ಮಾತಾಡಿ ಶೇ.10 ಡಿಸ್ಕೌಂಟ್ ಕೊಡಿಸ್ತೀವಿ ಅಂತ ಹೇಳಿದ್ರು. ಈ ಸುದ್ದಿಯನ್ನು ಪೇಪರ್‍ನಲ್ಲಿ ಓದಿದ ಪ್ರಸಾದ್ ಕೂಡಲೇ ಮತದಾನ ಮಾಡಿ ಬರುವ ಪ್ರತಿ ಗ್ರಾಹಕರಿಗೆ ಶೇ.10 ಡಿಸ್ಕೌಂಟ್ ಘೋಷಣೆ ಮಾಡಿದ್ದಾರೆ.

    ಕೇವಲ ಡಿಸ್ಕೌಂಟ್ ಘೋಷಣೆ ಮಾಡಿ ಸುಮ್ಮನೆ ಆಗದ ಪ್ರಸಾದ್ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನೀವು ಯಾರಿಗಾದ್ರು ಮತದಾನ ಮಾಡಿ. ಆದ್ರೆ ಕಡ್ಡಾಯವಾಗಿ ಮತದಾನ ಮಾಡಿ. ಅಷ್ಟೇ ಅಲ್ಲದೆ ಮತದಾನ ಮಾಡಿದ್ರೆ ಮುಂದಿನ 5 ವರ್ಷಗಳವರೆಗೆ ನಮ್ಮ ಶಾಪ್ ನಲ್ಲಿ ಶೇ.10 ಡಿಸ್ಕೌಂಟ್ ನೀಡ್ತೀನಿ ಅಂತ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಹೊಸ ಆಫರ್ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಮತದಾನ ಮಾಡೋದಕ್ಕೆ ಹಿಂಜರಿಯುತ್ತಿರೋ ಇಂದಿನ ಜನರ ಮಧ್ಯೆ ಮತದಾನಕ್ಕಾಗಿ 10 ಪರ್ಸೆಂಟ್ ಡಿಸ್ಕೌಂಟ್ ನೀಡುತ್ತಿರುವ ಪ್ರಸಾದ್ ಉಳಿದವರಿಗೆ ಮಾದರಿಯಾಗಿದ್ದಾರೆ.

     

  • ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಶಾಸಕ ಆನಂದ್ ಸಿಂಗ್‍ಗೆ ಮತದಾರನಿಂದ ತರಾಟೆ!

    ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಶಾಸಕ ಆನಂದ್ ಸಿಂಗ್‍ಗೆ ಮತದಾರನಿಂದ ತರಾಟೆ!

    ಬಳ್ಳಾರಿ: ಕಮಲ ಬಿಟ್ಟು ಹಸ್ತಲಾಘವ ಮಾಡಿ ಮತ್ತೆ ಜನರ ಮುಂದೆ ಹೋಗಿರೋ ಶಾಸಕ ಆನಂದ್‍ಸಿಂಗ್ ಅವರಿಗೆ ಆರಂಭದಲ್ಲೇ ಶಾಕ್ ತಗುಲಿದೆ.

    ನೀವು ಹತ್ತು ವರ್ಷ ಶಾಸಕರಾಗಿದ್ದೀರಿ. ಜನರಿಗೆ ಎನು ಮಾಡಿದ್ದೀರಿ. ನಿಮ್ಮಗ್ಯಾಕೆ ವೋಟ್ ಹಾಕಬೇಕು. ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಮತದಾರನೊಬ್ಬ ಸಾರ್ವಜನಿಕವಾಗಿ ಆನಂದಸಿಂಗ್‍ಗೆ ತರಾಟೆಗೆ ತಗೆದುಕೊಂಡಿದ್ದಾರೆ.

    ಮಂಗಳವಾರ ರಾತ್ರಿ ವಿಜಯನಗರದ ಹೊಸ ಮಲ್ಲಪ್ಪಗುಡಿ ಗ್ರಾಮದಲ್ಲಿ ಭಾಷಣ ಮಾಡುತ್ತಿದ್ದ ಆನಂದಸಿಂಗ್‍ಗೆ ಮತದಾರ ಫುಲ್ ಕ್ಲಾಸ್ ತಗೊಂಡಿದ್ದಾರೆ. ಇದರಿಂದ ಮುಜಗರಕ್ಕೊಳಗಾದ ಆನಂದ್ ಸಿಂಗ್, ಆತನನ್ನ ಸಮಧಾನಪಡಿಸಲು ಹರಸಾಹಸ ಮಾಡಿದ್ದರು. ಇದನ್ನೂ ಓದಿ: 10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಕೊನೆಗೆ ನನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿಸಿಕೊಡೋದಾಗಿ ಆಮಿಷ ಕೂಡ ಒಡ್ಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದನ್ನು ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರಿಗೂ ಇದನ್ನು ರೆಕಾರ್ಡ್ ಮಾಡಬೇಡಿ ಬಂದ್ ಮಾಡಿ ಎಂದು ಎಚ್ಚರಿಕೆ ಕೂಡ ನೀಡಿದ್ದರು. ಇದನ್ನೂ ಓದಿ: ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

  • 10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಹಾಸನ: 10 ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆದರೆ ಈಗ ಮತ ಪ್ರಚಾರಕ್ಕೆ ನೀವು ಬಂದಿದ್ದೀರ ಎಂದು ಸಚಿವ ಎ.ಮಂಜು ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ.

    ಸಚಿವ ಎ.ಮಂಜು ಅರಕಲಗೂಡು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಕೂಡ ಅವರಿಗೆ ಕ್ಷೇತ್ರದ ಟಿಕೆಟ್ ಸಿಕ್ಕಿದ್ದು, ಚುನಾವಣೆ ಪ್ರಚಾರಕ್ಕಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕೃಷಿ ಜಮೀನು ನೀಡುವಲ್ಲಿ ನಮಗೆ ಕಡೆಗಣಿಸಿದ್ದೀರಿ, ಈಗ ವೋಟು ಕೇಳೋದಕ್ಕೆ ಬಂದಿದ್ದೀರ ಎಂದು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

    ಈ ಸಂದರ್ಭದಲ್ಲಿ ಸಮರ್ಥನೆಗೆ ಮುಂದಾದ ಸಚಿವರ ಮಾತನ್ನು ಗ್ರಾಮಸ್ಥರು ಕೇಳಲಿಲ್ಲ, ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಅದೂ ಇದೂ ಅನ್ನುವುದಕ್ಕೆ ಮುಂದಾದ್ರು. ಆದರೆ ಗ್ರಾಮಸ್ಥರು ಮಾತ್ರ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸಚಿವರೊಂದಿಗೆ ಇದ್ದ ಬೆಂಬಲಿಗರು ಸಹ ವಾದಿಸಲು ಮುಂದಾದ್ದರು. ಆದರೂ ಸಹ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರ ಆಕ್ರೋಶವನ್ನು ಕಂಡು ವಿಧಿಯಿಲ್ಲದೇ ಸಚಿವರು ಅಲ್ಲಿಂದ ವಾಪಸಾದ್ರು.

    ಎ. ಮಂಜು ಅರಕಲಗೂಡು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ವಿರುದ್ಧ ಜಯ ಸಾಧಿಸಿದ್ರು. 2008 ಮತ್ತು 1999ರ ಚುನಾವಣೆಗಳಲ್ಲಿ ಜಯ ಸಾಧಿಸಿದ್ದರು.

    https://www.youtube.com/watch?v=-0eW63YGmCo

  • ಭರವಸೆ ಈಡೇರಿಸದೆ ಬಂದ ಶಾಸಕರೆದುರೇ ಮತದಾನ ಬಹಿಷ್ಕಾರ ಘೋಷಣೆ ಮಾಡಿದ ಗ್ರಾಮಸ್ಥರು!

    ಭರವಸೆ ಈಡೇರಿಸದೆ ಬಂದ ಶಾಸಕರೆದುರೇ ಮತದಾನ ಬಹಿಷ್ಕಾರ ಘೋಷಣೆ ಮಾಡಿದ ಗ್ರಾಮಸ್ಥರು!

    ಹಾಸನ: ಕೊಟ್ಟ ಭರವಸೆ ಈಡೇರಿಸದೆ ಮತ್ತೆ ಗ್ರಾಮಕ್ಕೆ ಬಂದ ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಬೆವರು ಇಳಿಸಿದ್ದಾರೆ. ಅಲ್ಲದೆ ಮತದಾನ ಬಹಿಷ್ಕರಿಸುವುದಾಗಿ ಶಾಸಕರ ಎದರೇ ಘೋಷಣೆ ಕೂಗಿದ್ದಾರೆ.

    ಈ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿಯಲ್ಲಿ ನಡೆದಿದೆ. ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರ್ ಸ್ವಾಮಿ ಗ್ರಾಮದಲ್ಲಿ ಸುಗ್ಗಿಹಬ್ಬ ಇರೋದ್ರಿಂದ ಭೇಟಿ ನೀಡಿದ್ದರು. ಆದ್ರೆ ಈ ಸಂದರ್ಭವನ್ನು ಉಪಯೋಗಿಸಿದ ಗ್ರಾಮಸ್ಥರು ಮೂಲಭೂತ ಸೌಕರ್ಯಗಳನ್ನು ನೀಡದೆ ಇರುವ ಬಗ್ಗೆ ಶಾಸಕರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

    ಗ್ರಾಮಸ್ಥರ ಈ ರೀತಿಯ ಸಿಟ್ಟಿನಿಂದ ಹೈರಾಣಾದಂತೆ ಕಂಡ ಶಾಸಕರು ಕೊಂಚ ಸಮಾಧಾನಪಡಿಸುವ ಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರು ಮತದಾನ ಬಹಿಷ್ಕಾರದ ಘೋಷಣೆಗಳನ್ನು ಕೂಗಿದರು. ಸಕಲೇಶಪುರ ಆಲೂರು ಮೀಸಲು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಈ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಒಮ್ಮೆ ಮಾತ್ರ ಅಭಿವೃದ್ಧಿ ಕಂಡಿದೆ.

    ಗ್ರಾಮಕ್ಕೆ ಸರಿಯಾದ ಕುಡಯುವ ನೀರಿಲ್ಲ. ಆಸ್ಪತ್ರೆ, ಪಶು ಆಸ್ಪತ್ರೆ ಇದೆ ಆದ್ರೆ ವೈದ್ಯರಿಲ್ಲ. ಶಾಲೆ ಇದೆ ಆದ್ರೆ ಮುರಿದ ಕಟ್ಟಡಗಳು. ಹೀಗೆ ಹಲವು ಸಮಸ್ಯೆಗಳು ಗ್ರಾಮದಲ್ಲಿವೆ. ಆದ್ರೆ ಶಾಸಕರು ನೆಪಕ್ಕೆ ಮಾತ್ರ ಆಶ್ವಾಸನೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ನಾನು ಅಭಿವೃದ್ಧಿ ಮಾಡಿದ್ದೇನೆ. ಆದ್ರೆ ಸರ್ಕಾರದ ಅನುದಾನ ನನ್ನ ಕ್ಷೇತ್ರಕ್ಕೆ ಸಾಲುತಿಲ್ಲ ಎಂದು ಹೇಳಿ ಕೈಚೆಲ್ಲಿದ್ದಾರೆ. ಒಟ್ಟಿನಲ್ಲಿ ಅತ್ತಿಹಳ್ಳಿ ಗ್ರಾಮಸ್ಥರ ಆಕ್ರೋಶದಿಂದ ಪೇಚಿಗೆ ಸಿಲುಕಿದ ಶಾಸಕರು ಅಲ್ಲಿಂದ ವಾಪಸ್ಸಾದ್ರು.

  • ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರ ನಡೆಸಲು ತೆರಳಿದ್ದ ಶಾಸಕರ ಪುತ್ರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡರ ಪುತ್ರಿ ಐಶ್ವರ್ಯ ತಮ್ಮ ತಂದೆಯ ಪರ ಮತಯಾಚನೆ ಮಾಡಲು ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಗೊಲ್ಲಳ್ಳಿ ಗ್ರಾಮಸ್ಥರು ಶಾಸಕರು ತಮ್ಮ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಅಭಿವೃದ್ಧಿ ಮಾಡದಿದ್ದರೂ ಮತ ಕೇಳಲು ಮಾತ್ರ ಬರುತ್ತೀರಿ ಎಂದು ಆರೋಪಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಐಶ್ವರ್ಯ ಗ್ರಾಮಸ್ಥರ ಪ್ರಶ್ನೆಗಳ ಸುರಿಮಳೆಗೆ ಸಮಾಜಾಯಿಸಿ ನೀಡಲು ಯತ್ನಿಸಿದ್ದಾರೆ. ಆದರೆ ಬಳಿಕ ಗ್ರಾಮಸ್ಥರ ಅಸಮಾಧಾವನ್ನು ಶಮನಗೊಳಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿದ್ದಾರೆ.

    https://www.youtube.com/watch?v=9lt3Z0DUPx8

  • ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ: ಪ್ರಕಾಶ್ ರೈ

    ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ: ಪ್ರಕಾಶ್ ರೈ

    ವಿಜಯಪುರ: ಚುನಾವಣೆಯಲ್ಲಿ ನಾನು ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ. ಆದರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಮಾಡಿ ಎಂದು ಹೇಳುತ್ತಾರೆ. ಹೀಗೆ ಹೇಳಲು ಇವರು ಯಾರು ಎಂದು ಪ್ರಶ್ನಿಸಿದ ರೈ, ಬಿಜೆಪಿ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದರೆ ನನ್ನ ಹೋರಾಟ ಇನ್ನೂ ತೀವ್ರಗೊಳಿಸುತ್ತೇನೆ ಎಂದು ಹೇಳಿದರು.

    ರಾಜಕೀಯ ಪ್ರವೇಶ ಇಲ್ಲ: ಇದೇ ವೇಳೆ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ ರೈ, ನನಗೆ ರಾಜಕೀಯ ಬೇಡ. ನಾನು ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತೇನೆ. ಸಾಕಷ್ಟು ಹಣ, ಹೆಸರು ಮಾಡಿದ್ದೇನೆ. ಸದ್ಯ ಪ್ರಜೆಗಳಿಗೆ ಧ್ವನಿ ಇಲ್ಲ. ರಾಜಕೀಯ ಬಿಟ್ಟು ಅವರ ಧ್ವನಿಯಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

    ಕಾವೇರಿ ಒಂದು ಜೀವನದಿ, ಒಂದೇ ದೇಶದಲ್ಲಿರುವ ಎರಡು ರಾಜ್ಯಗಳು ಸರಿಯಾಗಿ ಹಂಚಿಕೊಳ್ಳಲು ಆಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳಿಗೆ ಸಮಸ್ಯೆ ಬಗೆಹರಿಯುವುದು ಬೇಕಾಗಿಲ್ಲ. ಕಾವೇರಿ ನದಿಯ ಮೂಲವನ್ನು ರಕ್ಷಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಕಾವೇರಿಯ ಕಾಡನ್ನು ರಕ್ಷಿಸುತ್ತಿಲ್ಲ, ಕಾವೇರಿ ತಟದಲ್ಲಿ ನಡೆಯುವ ಮರಳುಗಾರಿಕೆ ನಿಲ್ಲಿಸುವ ಕೆಲಸ ಯಾರೂ ಮಾಡುತ್ತಿಲ್ಲ ಎಂದು ಹೇಳಿ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.

    ಕಾವೇರಿಯ ವಿಚಾರವಾಗಿ ತಜ್ಞರು ಚರ್ಚಿಸ ಬೇಕಾದ ವಿಚಾರವನ್ನು ಇಂದು ಯಾರೂ ಬೇಕಾದರು ಮಾತನಾಡುವಂತಾಗಿದೆ. ಕಾವೇರಿ ನದಿಯ ವಿಚಾರವಾಗಿ ತಜ್ಞರೊಂದಿಗೆ ಮಾತನಾಡಿದ್ದೇನೆ. ನದಿಯ ಪಾತ್ರ ಎಷ್ಟಿದೆ. ಎಷ್ಟು ಟಿಎಂಸಿ ನೀರು ಸಿಗುತ್ತೆ. ಟಿಎಂಸಿ ಅಂದರೆ ಏನು? ಎಲ್ಲದರ ಬಗ್ಗೆ ಒಂದೂವರೆ ತಿಂಗಳೊಳಗೆ 20 ನಿಮಿಷದ ಸಾಕ್ಷ್ಯ ಚಿತ್ರವನ್ನು ಮಾಡಿಕೊಡಿ ಎಂದು ಹೇಳಿರುವುದಾಗಿ ತಿಳಿಸಿದ್ದೇನೆ. ನದಿ ಜೋಡಣೆ ಹಾಗೂ ನದಿ ತಿರುವು ಯೋಜನೆಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂದರು. ಅಲ್ಲದೇ ಪರ ಭಾಷಾ ಸಿನಿಮಾಗಳನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದರು.

    ಅನಂತಕುಮಾರ್ ಹೆಗ್ಡೆ ವಿರುದ್ಧ ಕಿಡಿ: ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಆ ವೇಳೆ ಸಂವಿಧಾನ ಬದಲಾವಣೆ ಮಾಡಬೇಡಿ ಎಂದರೆ ತಂದೆ ತಾಯಿ, ರಕ್ತ, ಹುಟ್ಟಿನ ಬಗ್ಗೆ ಮಾತನಾಡಿದರೆ ನೋವು ಆಗುವುದಿಲ್ವಾ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ, ಅನಂತಕುಮಾರ ಹೆಗ್ಡೆ ಅಂಥವರನ್ನು ನಾನು ವಿರೋಧಿಸುತ್ತೇನೆ. ನಾನು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ಇಂತಹ ರಾಕ್ಷಸರ ಬಗ್ಗೆ ಮಾತನಾಡುತ್ತೇನೆ ಎಂದು ಕಿಡಿ ಕಾರಿದರು.

    ಇತಂಹವರ ಬಗ್ಗೆ ಮಾತನಾಡಿದರೆ ನನ್ನನ್ನು ಹಿಂದೂ ವಿರೋಧಿ ಎಂದು ಏಕೆ ತಿಳಿದುಕೊಳುತ್ತೀರಿ. ಅನಂತಕುಮಾರ್ ಅವರೇ ಧೈರ್ಯ ಇದ್ದರೆ ಎದುರಿಗೆ ಬನ್ನಿ. ಒಂದೇ ವೇದಿಕೆಯಲ್ಲಿ ಎದುರು ಬದುರು ಕುಳಿತು ಚರ್ಚೆ ಮಾಡೋಣ ಎಂದು ಸವಾಲು ಎಸೆದರು. ಇದೇ ವೇಳೆ ಜಿಎಸ್‍ಟಿ ಬಗ್ಗೆಯೂ ಕಿಡಿಕಾರಿದ ಅವರು, ಕೈಮಗ್ಗಕ್ಕೆ ಏಕೆ 15% ತೆರಿಗೆ ವಿಧಿಸಿದ್ದೀರಾ ಎಂದು ಮೋದಿ ಅವರನ್ನು ಪ್ರಶ್ನಿಸಿದರು.

    ಅಮಿತ್ ಶಾ ವಿರುದ್ಧ ವಾಗ್ದಾಳಿ: ತಮ್ಮ ಪಕ್ಷದ ವಿರುದ್ಧ ನಾಯಿ, ಬೆಕ್ಕು, ಹಾವುಗಳು ಎಲ್ಲರೂ ಒಂದಾಗಿದ್ದಾರೆ ಎಂದು ದೇಶದ ಪ್ರಮುಖ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವವರು ಹೇಳುತ್ತಾರೆ. ಮೋದಿ ಹಾಗೂ ಅಮಿತ್ ಶಾ ಇಬ್ಬರು ಮಾತ್ರ ಮನುಷ್ಯರಾ? ಮೋದಿ ಎನ್ನುವ ಪ್ರಳಯ ಬಂದಿದೆ ಎಂದು ಅವರೇ ಹೇಳುತ್ತಾರೆ. ಪ್ರಳಯ ಬಂದರೆ ಎಲ್ಲಾ ಪ್ರಾಣಿಗಳು ಕೊಚ್ಚಿ ಹೋಗಬಾರದು ಎಂದು ಎಲ್ಲರೂ ಮೇಲೆ ಬರುತ್ತಾರೆ. ಜೀವಿಸುವ ಆಸೆ ಹಾಗೂ ಕನಸುಗಳು ಇರುವ ಪ್ರತಿಯೊಬ್ಬರು ಮೇಲೆ ಎದ್ದು ಬರುತ್ತಾರೆ ಎಂದು ಟಾಂಗ್ ನೀಡಿದರು.

  • ಪದೇ ಪದೇ ಫೋನ್ ಮಾಡಿದ್ದಕ್ಕೆ ಸ್ನಾನ ಮಾಡಿ ಬರ್ತೀನಿ ಇರ್ಲಾ ಎಂದ ಅಂಬಿ!

    ಪದೇ ಪದೇ ಫೋನ್ ಮಾಡಿದ್ದಕ್ಕೆ ಸ್ನಾನ ಮಾಡಿ ಬರ್ತೀನಿ ಇರ್ಲಾ ಎಂದ ಅಂಬಿ!

    ಬೆಂಗಳೂರು: ರಾಜ್ಯಸಭೆ ಚುನಾವಣೆ ಇಂದು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಿಬ್ಬಂದಿಯೊಬ್ಬರು ಮತ ಹಾಕುಲು ಬರುವಂತೆ ಶಾಸಕ ಅಂಬರಿಶ್ ಗೆ ಕರೆ ಮಾಡಿದ್ದಾರೆ.

    ಮೂರ್ನಾಲ್ಕು ಬಾರಿ ಫೋನ್ ಮಾಡಿದ್ರೂ ಅಂಬರೀಶ್ ಕರೆ ಸ್ವೀಕರಿಸಲಿಲ್ಲ. ಅದ್ರೂ ಬಿಡದೆ ನಿರಂತರವಾಗಿ ಸಿಬ್ಬಂದಿ ಕರೆ ಮಾಡಿದ್ರು. ಹೀಗಾಗಿ ಐದನೇ ಬಾರಿ ಕರೆ ಸ್ವೀಕರಿಸಿದ ಅಂಬಿ, ತನ್ನ ಸ್ಟೈಲ್ ನಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ಈಗ ಸ್ನಾನಕ್ಕೆ ಹೊರಟಿದ್ದೇನೆ ಇರ್ಲಾ ಅಂತ ಹೇಳಿದ್ದಾರೆ.


    ಸಂಜೆ 4 ಗಂಟೆಯವರೆಗೆ ಟೈಮ್ ಅಯ್ತೆ ಅಂತ ಹೇಳುವ ಮೂಲಕ ಕರೆ ಮಾಡಿದ ಕೆಪಿಸಿಸಿ ಸಿಬ್ಬಂದಿಯನ್ನು ನಯವಾಗೇ ಗದರಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ವಿಧಾನಸೌಧದ ಮೊದಲನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಸಂಜೆ ನಾಲ್ಕರ ನಂತರ ಮತ ಎಣಿಕೆ ನಡೆಯಲಿದ್ದು, ಸಂಜೆ 6 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಮೂರು ಪಕ್ಷಗಳಿಂದ ಐವರು ಅಖಾಡದಲ್ಲಿದ್ದಾರೆ. ಕಾಂಗ್ರೆಸ್‍ನಿಂದ ಹನುಮಂತಯ್ಯ, ನಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್‍ನಿಂದ ಬಿ.ಎಂ. ಫಾರೂಕ್ ಕಣದಲ್ಲಿದ್ದಾರೆ.

  • ಕಳೆದ ಬಾರಿ ಕುಕ್ಕರ್, ಈ ಬಾರಿ ಮಿಕ್ಸಿ ಕೊಟ್ಟ ಚಿಕ್ಕಬಳ್ಳಾಪುರ ಶಾಸಕ

    ಕಳೆದ ಬಾರಿ ಕುಕ್ಕರ್, ಈ ಬಾರಿ ಮಿಕ್ಸಿ ಕೊಟ್ಟ ಚಿಕ್ಕಬಳ್ಳಾಪುರ ಶಾಸಕ

    ಚಿಕ್ಕಬಳ್ಳಾಪುರ: ಮಹಿಳಾ ಮತದಾರರ ಮನವೊಲಿಕೆಗಿಳಿದಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್, ವಿಧಾನಸಭಾ ಚುನಾವಣೆ ಹತ್ತಿರವಾಗಿದ್ದಂತೆ ಮಹಿಳೆಯರಿಗೆ ಬಂಪರ್ ಗಿಫ್ಟ್ ಹಂಚುವುದರ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ್ಯಾಂತ 35,000 ಮಂದಿ ಮಹಿಳೆಯರಿಗೆ ಗೃಹಪಯೋಗಿ ಮಿಕ್ಸಿ ಉಡುಗೊರೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಸಖತ್ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂದ ಹಾಗೆ ಸಂಕ್ರಾಂತಿ ಹಬ್ಬದಂದು ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದ್ದ ಶಾಸಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೆ ಈ ಬಾರಿ ಮಿಕ್ಸಿ ನೀಡುವ ಮೂಲಕ ಮನೆ ಮಾತಾಗಿದ್ದಾರೆ.

    ನಗರದ ಸಿಟಿಜನ್ ಕ್ಲಬ್ ಆವರಣದಲ್ಲಿ ಮಹಿಳೆಯರಿಗೆ ಮಿಕ್ಸಿ ವಿತರಣೆ ಮಾಡುತ್ತಿದ್ದು, ಉಚಿತ ಮಿಕ್ಸಿ ಪಡೆಯಲು ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಮಿಕ್ಸಿ ಪಡೆಯುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆ ಮುನ್ನವೂ ಮಹಿಳಾ ಮತದಾರರಿಗೆ ಕುಕ್ಕರ್ ನೀಡಿದ್ದರು. ಇದಲ್ಲದೆ ಸಂಕ್ರಾಂತಿ ಸುಗ್ಗಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮದ ಆಹ್ವಾನ ನೆಪದಲ್ಲಿ ಕ್ಷೇತ್ರದ ಲಕ್ಷಾಂತರ ಮಂದಿ ಮಹಿಳೆಯರಿಗೆ ಉಚಿತ ಸೀರೆ ಕೂಡ ಉಡಗೊರೆಯಾಗಿ ಕೊಟ್ಟಿದ್ದರು.