Tag: vote

  • ನನಗೆ ವೋಟ್ ಹಾಕದಿದ್ದರೆ ಶಾಪ ಹಾಕುವೆ: ಮತದಾರರಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

    ನನಗೆ ವೋಟ್ ಹಾಕದಿದ್ದರೆ ಶಾಪ ಹಾಕುವೆ: ಮತದಾರರಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

    ನವದೆಹಲಿ: ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ನಾನು ನಿಮಗೆ ಶಾಪ ಹಾಕುತ್ತೇನೆ ಎಂದು ಹೇಳುವ ಮೂಲಕ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ನಾನು ಒಬ್ಬ ಸನ್ಯಾಸಿ. ನೀವು ನಾನು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ. ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನೆ, ಕೀರ್ತನೆಯನ್ನು ನಾನು ಮಾಡಿಕೊಂಡಿರುತ್ತೇನೆ. ಇಂದು ನಾನು ನಿಮ್ಮ ಮತಗಳನ್ನು ಕೇಳಲು ಬಂದಿದ್ದು, ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡಿರುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೀವು ನನ್ನನ್ನು ಗೆಲ್ಲಿಸಬೇಕು. ನಾನು ನಿಮ್ಮ ಮನೆ ಬಾಗಿಲಿಗೆ ಬೇಡಲು ಬಂದಿದ್ದೇನೆ. ನೀವು ಸನ್ಯಾಸಿಗೆ ಭಿಕ್ಷೆ ಕೊಡಲು ನಿರಾಕರಿಸಿದರೆ ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು ಹೋಗುತ್ತೇನೆ. ಮತ್ತು ನಿಮಗೆ ಶಾಪ ಹಾಕುತ್ತೇನೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಸಾಕ್ಷಿ ಮಹಾರಾಜ್ ಹೇಳಿಕೆಗೆ ಪಕ್ಷ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಸಾಕ್ಷಿ ಮಹಾರಾಜ್ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಚಲಿತರಾಗಿದ್ದು, ಇದೀಗ ಬೆದರಿಕೆಯ ಮೂಲಕ ಮತ ಕೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  • ವೋಟ್ ಹಾಕಿದ ಕೂಡಲೇ ಶಾಯಿಯನ್ನು ಅಳಿಸಬಹುದು!

    ವೋಟ್ ಹಾಕಿದ ಕೂಡಲೇ ಶಾಯಿಯನ್ನು ಅಳಿಸಬಹುದು!

    ನವದೆಹಲಿ: ಪ್ರಜಾಪ್ರಭುತ್ವದ ಹಬ್ಬ ಇಂದಿನಿಂದ ಆರಂಭಗೊಂಡಿದೆ. ಆದರೆ ಈ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಕೈ ಬೆರಳನ್ನು ಎತ್ತಿ ತೋರಿಸಿ ಹೆಮ್ಮೆಯಿಂದ ಹೇಳಿಕೊಳ್ಳಲು ಕಾರಣವಾಗುವ ಶಾಯಿಯನ್ನು ಅಳಿಸಬಹುದು ಎನ್ನುವ ಸ್ಫೋಟಕ ಸುದ್ದಿ ಈಗ ಪ್ರಕಟವಾಗಿದೆ.

    ಹೌದು. ಚುನಾವಣಾ ಶಾಯಿ ಸುಲಭವಾಗಿ ಅಳಿಸಲು ಸಾಧ್ಯವಿಲ್ಲ ಮತ್ತು ಹಲವು ದಿನಗಳವರೆಗೆ ಇರುತ್ತದೆ. ಆದರೆ ಇಂದು ಮತ ಕೇಂದ್ರದಲ್ಲಿ ಹಾಕಿದ ಶಾಯಿಯನ್ನು ಕೆಲವೇ ನಿಮಿಷದಲ್ಲಿ ಅಳಿಸಿ ಹಾಕಬಹುದು ಎಂದು ವರದಿಯಾಗಿದೆ.

    ದೇಶದ ಹಲವು ಕಡೆ ಮತದಾರರು ಶಾಯಿಯನ್ನು ಕೂಡಲೇ ಅಳಿಸಿ ಹಾಕಿ ಯಾಕೆ ಇಷ್ಟೊಂದು ಕಳಪೆ ಗುಣಮಟ್ಟದ ಶಾಯಿಯನ್ನು ನೀಡಲಾಗಿದೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಶಾಯಿಯನ್ನು ಅಳಿಸಿ ಹಾಕಿದರೆ ನಕಲಿ ಮತದಾನ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಆಯೋಗ ಕೂಡಲೇ ಈ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

    ಮೈಸೂರಿನ ಶಾಯಿ:
    ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಗೆ ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರ್ ಪೇಂಟ್ಸ್ ಆ್ಯಂಡ್ ವಾರ್ನಿಷ್ ಲಿ. ಕಂಪನಿ ಪೂರೈಸುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಗೆ 26 ಲಕ್ಷ ಬಾಟಲ್ ಅಳಿಸಲಾಗದ ಶಾಯಿಯನ್ನು ಕಂಪನಿ ಚುನಾವಣಾ ಆಯೋಗಕ್ಕೆ ನೀಡಿದೆ.

    1962ರಲ್ಲಿ ಕೇಂದ್ರ ಚುನಾವಣಾ ಆಯೋಗವು ಮೈಸೂರ್ ಪೇಂಟ್ಸ್ ಜೊತೆ ಅಳಿಸಲಾಗದ ಶಾಯಿ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಅಂದಿನಿಂದಲೂ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಈ ಕಂಪನಿಯೇ ಶಾಯಿ ಪೂರೈಸುತ್ತಿದೆ.

  • ಸುಡು ಬಿಸಿಲು ಲೆಕ್ಕಿಸದೇ ಪತಿರಾಯರ ಪರ ಪ್ರಚಾರ ಆರಂಭಿಸಿದ ಪತ್ನಿಯರು

    ಸುಡು ಬಿಸಿಲು ಲೆಕ್ಕಿಸದೇ ಪತಿರಾಯರ ಪರ ಪ್ರಚಾರ ಆರಂಭಿಸಿದ ಪತ್ನಿಯರು

    ಬೀದರ್: ಸುಡು ಬಿಸಿಲನ್ನೂ ಲೆಕ್ಕಿಸದೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪತ್ನಿಯರು ಪ್ರಚಾರ ಆರಂಭಿಸಿದ್ದಾರೆ.

    ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಅವರ ಪತ್ನಿಯರು ಫೀಲ್ಡಿಗೆ ಇಳಿದು ಮತ ಬೇಟೆಯಲ್ಲಿ ತೊಡಗಿದ್ದಾರೆ.

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ನಿ ಡಾ. ಗೀತಾ ಖಂಡ್ರೆ ಪ್ರತಿ ಮನೆ-ಮನೆಗೆ ತೆರಳಿ ಪತಿ ಪರ ಮತ ಹಾಕುವಂತೆ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

    ಈ ಕಡೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪತ್ನಿ ಶೀಲಾ ಖೂಬಾ ಕೂಡ ಮಹಿಳಾ ತಂಡದ ಜೊತೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ. ಪತಿ ಭಗವಂತ್ ಖೂಬಾ ಪರ ಮತ ಹಾಕಿ ಎಂದು ಶೀಲಾ ಖೂಬಾ ಪ್ರಚಾರ ನಡೆಸುತ್ತಿದ್ದಾರೆ.

  • ಚಪ್ಪಲಿ ಹಿಡಿದು, ಉರುಳು ಸೇವೆ ಮಾಡಿ ವಾಟಾಳ್ ಮತಯಾಚನೆ

    ಚಪ್ಪಲಿ ಹಿಡಿದು, ಉರುಳು ಸೇವೆ ಮಾಡಿ ವಾಟಾಳ್ ಮತಯಾಚನೆ

    ಬೆಂಗಳೂರು: ಲೋಕಸಭಾ ಚುನಾಚಣೆಗೆ ಎಲ್ಲ ಕ್ಷೇತ್ರದಲ್ಲೂ ಭರ್ಜರಿಯಾಗಿ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ವಾಟಾಳ್ ನಾಗರಾಜ್ ಅವರು ಚಪ್ಪಲಿ ಹಿಡಿದು ವಿಶಿಷ್ಟವಾಗಿ ಪ್ರಚಾರ ಮಾಡಿ ಸುದ್ದಿಯಾಗಿದ್ದಾರೆ.

    ಮತಯಾಚನೆ ಮಾಡುವ ವೇಳೆ ಕೈಯಲ್ಲಿ ಒಂದು ಜೊತೆ ಚಪ್ಪಲಿ ಹಿಡಿದು ಉರುಳು ಸೇವೆ ಮಾಡುವ ಮೂಲಕ ವಿಭಿನ್ನವಾಗಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದ್ದಾರೆ.

    ಇಂದು ವಾಟಾಳ್ ನಾಗರಾಜ್ ಕೆ.ಆರ್.ಮಾರ್ಕೆಟ್ ಮುಂಭಾಗದಲ್ಲಿ ಮತಯಾಚನೆ ಮಾಡಲು ಹೋಗಿದ್ದಾರೆ. ಈ ವೇಳೆ ತಮ್ಮ ಗುರುತಾದ ಚಪ್ಪಲಿ ಹಿಡಿದುಕೊಂಡು ಉರುಳು ಸೇವೆ ಮಾಡಿದ್ದಾರೆ. ಬಳಿಕ ಮಾತನಾಡಿದ ವಾಟಾಳ್, ಈಗಿರುವ ಸದಸ್ಯರು ಕರ್ನಾಟಕದ ಪರವಾಗಿ ಧ್ವನಿಯೆತ್ತಿ ಮಾತನಾಡಲಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಆ ದೃಷ್ಟಿಯಿಂದ ನಾನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಂತಿದ್ದೇನೆ. ಇಲ್ಲಿನ ಜನರು ನನಗೆ ಮತಹಾಕಿ ಗೆಲ್ಲಿಸುತ್ತಾರೆ, ನನ್ನ ಗೆಲವು ಖಚಿತವಾಗಿದೆ ಎಂದರು.

    28 ಸದ್ಯಸರು ಒಂದೇ, ಈ ವಾಟಾಳ್ ನಾಗರಾಜ್ ಒಂದೇ. ನಾನು ಗೆದ್ದರೆ ಲೋಕಸಭೆಯಲ್ಲಿ ಕನ್ನಡ ಪರವಾಗಿ, ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.

  • ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ? ಮಾಜಿ ಸಚಿವ

    ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ? ಮಾಜಿ ಸಚಿವ

    ಕೊಪ್ಪಳ: ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕೊಪ್ಪಳದಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಶುಕ್ರವಾರ ಗಂಗಾವತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಬರುತ್ತಿದ್ದಾರೆ. ಮೋದಿ ಬಂದ್ರೆ ಎಲ್ಲವೂ ಡಬ್ಬಿಯಲ್ಲಿ ವೋಟ್ ಬಿದ್ದಬಿಡ್ತಾವಾ? ನಾವು ಮೋದಿ ಹೋದ ನಂತರ ಅವರ ಭಾಷಣದ ಬಗ್ಗೆ ಜನರಿಗೆ ಮನವರಿಕೆ ಮಾಡಿ ತಿಳಿಸುತ್ತೇವೆ. ಕಳೆದ ಸಲ ಮೋದಿ ಕೊಪ್ಪಳಕ್ಕೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಎಂದು ಗುಡುಗಿದ್ದಾರೆ.

    15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ರು, ಉದ್ಯೋಗ ಕೊಡ್ತೀನಿ ಅಂದ್ರು ಅದು ಎಲ್ಲವೂ ಸುಳ್ಳು ಭರವಸೆಯಾಗಿದೆ. ಶುಕ್ರವಾರ ಮತ್ತೆ ಗಂಗಾವತಿಗೆ ಸುಳ್ಳು ಹೇಳಲು ಬರುತ್ತಿದ್ದಾರೆ. ಆ ವಿಷಯದಲ್ಲಿ ನಾವು ಜನರಿಗೆ ಏನ್ ಮುಟ್ಟಿಸಬೇಕು, ಅದನ್ನು ಮುಟ್ಟಿಸುತ್ತೇವೆ ಎಂದು ತಂಗಡಗಿ ಹೇಳಿದರು.

  • ಆಂಧ್ರ, ತೆಲಂಗಾಣಕ್ಕೆ ಹೊರಟ ಮತದಾರರಿಗೆ ತಟ್ಟಿದ ಟ್ರಾಫಿಕ್ ಬಿಸಿ

    ಆಂಧ್ರ, ತೆಲಂಗಾಣಕ್ಕೆ ಹೊರಟ ಮತದಾರರಿಗೆ ತಟ್ಟಿದ ಟ್ರಾಫಿಕ್ ಬಿಸಿ

    ಬೆಂಗಳೂರು: ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಲೋಕಸಭಾ-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಹಾಕಲು ಮತದಾರರು ಆಂಧ್ರ ಹಾಗೂ ತೆಲಂಗಾಣಕ್ಕೆ ಹೊರಟ ಮತದಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ.

    ಬರೋಬ್ಬರಿ 3-4 ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಬೆನ್ನಿಗಾನ ಹಳ್ಳಿಯಿಂದ ಕೆಆರ್ ಪುರಂವರೆಗೆ, ಬಾಣಸವಾಡಿಯಿಂದ ಟಿನ್ ಫ್ಯಾಕ್ಟರಿವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಬಸ್ ಇಲ್ಲದೆ ಪ್ರಯಾಣಿಕರು ಹಾಗೂ ಮತದಾರರು ಪರದಾಟ ನಡೆಸಿದರು.

    ಖಾಸಗಿ ಬಸ್‍ನಲ್ಲಿ ದುಪ್ಪಟ್ಟು ದರ ಹಿನ್ನೆಲೆಯಲ್ಲಿ ಪ್ರಯಾಣಿಕರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಬಸ್ ಇಲ್ಲದೆ ಪ್ರಯಾಣಿಕರು ರಾತ್ರಿ 8 ಗಂಟೆಯಿಂದ ತಡರಾತ್ರಿ 3 ಗಂಟೆವರೆಗೆ ಬಸ್ ನಿಲ್ದಾಣದಲ್ಲಿಯೇ ಕಾದು ಸುಸ್ತಾಗಿದ್ದಾರೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಜನರು ಬಸ್‍ಗಳು ಇಲ್ಲದೆ ಬೆಳಗ್ಗೆಯಿಂದ ಪರದಾಡುತ್ತಿದ್ದಾರೆ.

    ಬಸ್‍ಗಳಿಲ್ಲದೆ ಆಂಧ್ರ ಪ್ರದೇಶದ ಹಾಗು ತೆಲಂಗಾಣ ಜನರು ಲಾರಿಯಲ್ಲಿ ಸಹ ಹೊರಟಿದ್ದಾರೆ. ಬುಧವಾರ ಸಂಜೆ ಸುಮಾರು 5.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೂ ಕೂಡ ಟಿನ್ ಫ್ಯಾಕ್ಟರಿ, ಬೆಂಡಿಗನಹಳ್ಳಿ, ಕೆಆರ್ ಪುರಂ, ಭಾಗದಲ್ಲಿ ಸುಮಾರು 6 ಗಂಟೆ ಹಾಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿತ್ತು.

    ಇಂದು ಮುಂಜಾನೆ ಸುಮಾರು 5 ಗಂಟೆಯಿಂದಲೇ ಜನರು ಮತ ಚಲಾವಣೆ ಮಾಡಲು ಆಂಧ್ರಪ್ರದೇಶ ತಮ್ಮ ಊರಿನ ಕಡೆಗೆ ತೆರಳುತ್ತಿದ್ದಾರೆ.

  • ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ಬೆಳಗಾವಿ (ಚಿಕ್ಕೋಡಿ): ಈ ಬಾರಿ ಲೋಕಸಭಾ ಚುನಾವಣೆ ನಮಗೆ ಬೇಡ, ನಮ್ಮೂರಿಗೆ ಜನಪ್ರತಿನಿಧಿಗಳು ಮತ ಕೇಳೋಕೆ ಬರೋದು ಬೇಡ ಅಂತ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

    ನೀರು ಕೊಟ್ಟು ನಂತರ ವೋಟು ಕೇಳೋಕೆ ಬನ್ನಿ. ಪ್ರಜಾಪ್ರಭುತ್ವಕ್ಕೆ ಮತಬೇಕು, ಬದುಕಲು ನೀರು ಬೇಕು ಅಂತ ಕೈಯಲ್ಲಿ ಸ್ಲೋಗನ್ ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರ ಈ ಗೋಳು ಕಳೆದ 30 ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳು ಕೇಳಿಲ್ಲ. ರಾಜ್ಯ ಸರ್ಕಾರದ ಮಾಸ್ಟರ್ ಮೈಂಡ್ ಅಂತಾನೇ ಕರೆಸಿಕೊಳ್ಳುವ ಸಚಿವ ಸತೀಶ್ ಜಾರಕಿಹೊಳಿಯವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ಹಂಚಿನಾಳ ಗ್ರಾಮ ಹಾಗೂ ಉಳ್ಳಾಗಡ್ಡಿ ಖಾನಾಪುರ, ಕುರಣಿ, ಚಿಕ್ಕಾಲಗುಡ್ಡ ಸೇರಿದಂತೆ ಐದು ಊರಿಗೆ ಸರಿಯಾಗಿ ಕುಡಿಯೋಕೆ ಮತ್ತು ಕೃಷಿಗೆ ನೀರು ಸಿಗುತ್ತಿಲ್ಲ. ತಮಗೆ ನೀರು ಕೊಡುವವರೆಗೂ ನಾವು ಮತದಾನ ಮಾಡುವುದಿಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ಈ ಗ್ರಾಮಗಳಿಗೆ ನೀರ ಹರಿಸುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಹಿಡಕಲ್ ಜಲಾಶಯದಿಂದ ಕುರಣಿ ಏತನೀರಾವರಿ ಯೋಜನೆ ನಿರ್ಮಾಣ ಮಾಡಲಾಗಿದೆ. ಈ ಗ್ರಾಮಗಳಿಂದ ಕುರಣಿ ಏತನೀರಾವರಿ ಯೋಜನೆಯ ನೀರೆತ್ತುವ ಜಾಗವಿರೋದು ಕೇವಲ 3 ಕಿ.ಮೀ ಅಷ್ಟೇ. ಆದರೆ ಅಲ್ಲಿಂದ ಇಲ್ಲಿಯವರೆಗೂ ಒಂದ ಬಾರಿ ಬಿಟ್ಟರೆ ಮತ್ಯಾವತ್ತೂ ಸಹ ನೀರು ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

    ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸದ್ಯ ಎರಡು ಜಿಲ್ಲೆಗಳ ನೀರಿನ ಬವಣೆ ಹೋಗಲಾಡಿಸ್ತಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಹುಕ್ಕೇರಿ ತಾಲೂಕಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೃಷಿಗೆ ಸಮರ್ಪಕ ನೀರಿನ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ಬರೀ ಆಶ್ವಾಸನೆ ನೀಡಿ ಕೈ ತೊಳೆದುಕೊಂಡು ಹೋಗುವ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ಬಾರಿ ಈ ನಾಲ್ಕು ಗ್ರಾಮದ ಜನರು ಮತದಾನ ಬಹಿಷ್ಕಾರದ ಹಾದಿ ಹಿಡಿದಿದ್ದು, ಆದಷ್ಟು ಬೇಗ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಬೇಕು ಅಂತ ಆಗ್ರಹಿಸಿದ್ದಾರೆ.

  • ಮತದಾನ ಪ್ರಮಾಣ ಹೆಚ್ಚಿಸಲು ಹನುಮಂತ ಪ್ಲಾನ್!

    ಮತದಾನ ಪ್ರಮಾಣ ಹೆಚ್ಚಿಸಲು ಹನುಮಂತ ಪ್ಲಾನ್!

    ಹಾವೇರಿ: ಕುರಿಗಾಯಿ ಹನುಮಂತ ಈಗ ಸಖತ್ ಫೇಮಸ್ ಆಗಿದ್ದಾರೆ. ಹಾವೇರಿ ಜಿಲ್ಲಾಡಳಿತಕ್ಕೆ ಈಗ ಹನುಮಂತನೇ ಬ್ರ್ಯಾಂಡ್ ಐಕಾನ್ ಆಗಿದ್ದು, ಹನುಮಂತನ ಕೋಗಿಲೆಯ ಕಂಠದಲ್ಲಿ ಈಗ ಮತದಾನ ಜಾಗೃತಿ ಗೀತೆ ಮೂಡಿದೆ. ಹನುಮಂತ ಹಾಡಿದ ಗೀತೆಯಿಂದ ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ಲಾನ್ ಹಾಕಿದ್ದಾರೆ.

    ಸರಿಗಮಪ ರನ್ನರ್ ಅಪ್ ಖ್ಯಾತಿಯ ಹನುಮಂತ ಹಾವೇರಿ ಜಿಲ್ಲೆಯ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಐಕಾನ್ ಆಗಿದ್ದಾರೆ. ಕಳೆದ ಒಂದು ವಾರದ ಹಿಂದೆ ವಿವಿ ಪ್ಯಾಟ್ ಮೆಷಿನ್ ಮತದಾನ ಹೇಗೆ ಮಾಡಬೇಕು ಎನ್ನುವ ಪ್ರಾತ್ಯಕ್ಷಿಕೆ ತೋರಿಸಿ ಜನರಿಗೆ ಮತದಾನ ಜಾಗೃತಿ ಮಾಡಿದ್ದರು.

    ಸೋಮವಾರ ಜಿಲ್ಲಾ ಪಂಚಾಯ್ತಿ ಕಚೇರಿಯ ಮುಂದೆ ಎಲ್ಲಾ ಸಿಬ್ಬಂದಿಗಳ ಜೊತೆಗೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಪ್ರತಿಜ್ಞಾವಿಧಿಯನ್ನು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಲೀಲಾವತಿ ಬೋಧನೆ ಮಾಡಿದರು. ನಂತರ ಹಾವೇರಿ ನಗರದ ಪ್ರಮುಖ ಬೀದಿಯಲ್ಲಿ ಲೋಕಸಭಾ ಚುನಾವಣೆಯ ಏಪ್ರಿಲ್ 23ರಂದು ನಡೆಯಲಿದ್ದು, ತಪ್ಪದೆ ಮತದಾನ ಮಾಡಿ. ನಿಮ್ಮ ಹಕ್ಕು ಚಲಾಯಿಸಿ ಎಂದು ಹನುಮಂತ ಜಾಗೃತಿ ಮೂಡಿಸಿದ್ರು.

    ಹನುಮಂತ ಸ್ವಲ್ಪ ಹೊತ್ತು ಸೈಕಲ್ ಜಾಥ ಮಾಡಿ, ನಂತರ ನಗರದ ಪ್ರಮುಖ ಬೀದಿಯಲ್ಲಿ ಕಾಲು ನಡುಗೆಯಲ್ಲಿ ಕರಪತ್ರಗಳನ್ನು ನೀಡುತ್ತಾ ಮತದಾನ ಮಾಡಿ ಎಂದು ಹೇಳಿದರು. ಹೂ ವ್ಯಾಪಾರಸ್ಥರು, ಹಣ್ಣು ಹಾಗೂ ಸಾರ್ವಜನಿಕರಿಗೆ ಏಪ್ರಿಲ್ 23ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುತ್ತಾ, ಕರಪತ್ರಗಳನ್ನ ನೀಡುತ್ತಾ ಹನುಮಂತ ನಗರವನ್ನು ರೌಂಡ್ ಹಾಕಿದರು. ಹಾವೇರಿಯ ಇನ್ನೂ ಕೆಲವು ದಿನಗಳ ಕಾಲ ಜಾಗೃತಿ ಕಾರ್ಯಕ್ರಮದಲ್ಲಿ ಹನುಮಂತ ಭಾಗವಹಿಸಲಿದ್ದಾರೆ.

    ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಮತದಾನ ಆಗಲಿದೆ. ಅಲ್ಲದೆ ಹನುಮಂತ ಕಂಚಿನ ಕಂಠದಲ್ಲಿ ಮತದಾನ ಮಾಡಿ ಎಂದು ಸೂಪರ್ ಆಗಿ ಹಾಡು ಹೇಳಿದ್ದಾರೆ. ಜನರು ಹನುಮಂತ ಹಾಡನ್ನು ವಾಟ್ಸಾಪ್ ಹಾಗೂ ಆಟೋದಲ್ಲಿ ಮತದಾನದ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಮತದಾನ ಮಾಡಣ್ಣ ಎಂದು ಜಾಗೃತಿ ಮೂಡಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಲೀಲಾವತಿ ಹೇಳಿದ್ದಾರೆ.

    ಕುರಿಗಾಯಿ ಸಿಂಗರ್ ಹನುಮಂತ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತ ಆಗದೆ ಐಕಾನ್ ಆಗಿದ್ದು, ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಇನ್ನೊಂದು ಕಡೆ ಹನುಮಂತ ಹಾಡು, ಪತಿಜ್ಞಾವಿಧಿ ಹಾಗೂ ಸೈಕಲ್ ಜಾಥದ ಮೂಲಕ ಮತದಾನ ಮಾಡಿ, ಒಳ್ಳೆಯ ವ್ಯಕ್ತಿಗೆ ಮತದಾನ ತಪ್ಪದೆ ಹಕ್ಕು ಚಲಾವಣೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ನಿಖಿಲ್‍ಗೆ ವೋಟು ಹಾಕಿ- ಕೈತುಂಬಾ ಮೆಹಂದಿ ಹಾಕಿಸಿಕೊಂಡು ಪೋರಿ ಮನವಿ

    ನಿಖಿಲ್‍ಗೆ ವೋಟು ಹಾಕಿ- ಕೈತುಂಬಾ ಮೆಹಂದಿ ಹಾಕಿಸಿಕೊಂಡು ಪೋರಿ ಮನವಿ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ವೋಟ್ ಹಾಕಿ ಎಂದು ಪುಟ್ಟ ಪೋರಿಯೊಬ್ಬಳು ಕೈತುಂಬಾ ಮೆಹಂದಿ ಹಾಕಿಸಿಕೊಂಡಿದ್ದಾಳೆ.

    ಚೈತನ್ಯ, ನಿಖಿಲ್‍ನ ಅಭಿಮಾನಿ. ನಿಖಿಲ್ ಅಭಿನಯಿಸಿದ ‘ಜಾಗ್ವಾರ್’ ಹಾಗೂ ‘ಸೀತಾರಾಮ ಕಲ್ಯಾಣ’ ಸಿನಿಮಾ ಚೈತನ್ಯಳಿಗೆ ಇಷ್ಟವಾಗಿತ್ತು. ಈ ಸಿನಿಮಾ ನೋಡಿ ನಿಖಿಲ್ ಅವರನ್ನು ಇಷ್ಟಪಡಲು ಶುರು ಮಾಡಿದ್ದಾಳೆ. ಈಗ ನಿಖಿಲ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿಖಿಲ್‍ಗೆ ವೋಟ್ ಹಾಕಿ ಎಂದು ಚೈತನ್ಯ ಕೈತುಂಬಾ ಮೆಹಂದಿ ಹಾಕಿಸಿಕೊಂಡು ಕೇಳಿಕೊಳ್ಳುತ್ತಿದ್ದಾಳೆ. ಚೈತನ್ಯ ತನ್ನ ಮೆಹಂದಿಯಲ್ಲಿ ನಿಖಿಲ್ ಹೆಸರನ್ನು ಹಾಕಿಸಿಕೊಂಡಿದ್ದಾಳೆ.

    ಮಂಡ್ಯದಲ್ಲಿ ಯುವಕರೊಬ್ಬರು ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ತನ್ನ ಎದೆ ಮೇಲೆ ಮಂಡ್ಯದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೆಆರ್ ಪೇಟೆಯ ಹೊಸ ಹೊಳಲು ಗ್ರಾಮದ ಯುವಕ ಸಚಿನ್ ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನೊಬ್ಬ ಹೊಸ ಮತದಾರ, ನನ್ನ ಮೊದಲ ವೋಟ್ ನಿಖಿಲ್‍ಗೆ ಹಾಕಬೇಕು. ಅಲ್ಲದೆ ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎಂದು ಸಚಿನ್, ನಿಖಿಲ್ ಮೇಲಿನ ಅಭಿಮಾನದಿಂದ ಹಚ್ಚೆ ಹಾಕಿಸಿಕೊಂಡಿದ್ದಾರೆ.

  • ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು – ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡ ಯುವಕ

    ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು – ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡ ಯುವಕ

    ಮಂಡ್ಯ: ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ಯುವಕರೊಬ್ಬರು ತನ್ನ ಎದೆ ಮೇಲೆ ಮಂಡ್ಯದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಕೆಆರ್ ಪೇಟೆಯ ಹೊಸ ಹೊಳಲು ಗ್ರಾಮದ ಯುವಕ ಸಚಿನ್ ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನೊಬ್ಬ ಹೊಸ ಮತದಾರ, ನನ್ನ ಮೊದಲ ವೋಟ್ ನಿಖಿಲ್‍ಗೆ ಹಾಕಬೇಕು. ಅಲ್ಲದೇ ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎಂದು ಸಚಿನ್, ನಿಖಿಲ್ ಮೇಲಿನ ಅಭಿಮಾನದಿಂದ ಹಚ್ಚೆ ಹಾಕಿಸಿಕೊಂಡಿದ್ದಾರೆ.

    ಸಚಿನ್ ಬುಧವಾರ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಕೆಆರ್ ಪೇಟೆಯಲ್ಲಿ ದೇವೇಗೌಡರ ಬೃಹತ್ ಸಮಾವೇಶ ಇರುವ ಹಿನ್ನೆಲೆಯಲ್ಲಿ ಸಚಿನ್ ಸಮಾರಂಭಕ್ಕೆ ಹಾಜರಾಗಿದ್ದಾರೆ. ಸಮಾರಂಭದ ವೇಳೆ ನಿಖಿಲ್ ಪ್ರಚಾರಕ್ಕೆ ಬಂದಾಗ ಸಚಿನ್ ಆ ಟ್ಯಾಟೂ ತೋರಿಸಲು ಯತ್ನಿಸಿದ್ದಾರೆ.

    ಜೆಡಿಎಸ್ ಕಾರ್ಯಕರ್ತ ಕೆಆರ್ ಪೇಟೆಯ ಬ್ಯಾಲದಕೆರೆಯ ಪದ್ಮನಾಭ್ ಎಡ ಹಾಗೂ ಬಲ ಎದೆಯ ಮೇಲೆ ಎಚ್.ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೇವೇಗೌಡರು ಹಾಗು ಕುಮಾರಸ್ವಾಮಿ ಮೇಲಿನ ಅಭಿಮಾನದಿಂದ ಕಾರ್ಯಕರ್ತ ಪದ್ಮಾನಾಭ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೆಆರ್ ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಹಚ್ಚೆಯ ಹಾಕಿಸಿಕೊಂಡಿರುವ ಅಭಿಮಾನಿಗಳು ಆಗಮಿಸಿದ್ದಾರೆ.