Tag: vote

  • ರಜೆಯೆಂದು ಮನೆಯಲ್ಲಿ ಕುಳಿತುಕೊಳ್ಳದೇ ವೋಟ್ ಮಾಡಿ: ಸುಧಾಮೂರ್ತಿ

    ರಜೆಯೆಂದು ಮನೆಯಲ್ಲಿ ಕುಳಿತುಕೊಳ್ಳದೇ ವೋಟ್ ಮಾಡಿ: ಸುಧಾಮೂರ್ತಿ

    ಬೆಂಗಳೂರು: ಇಂದು ಮುಂಜಾನೆಯಿಂದಲೇ ಸಾರ್ವಜನಿಕರು, ಸೆಲೆಬ್ರಿಟಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡುತ್ತಿದ್ದಾರೆ. ಇದೀಗ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರು ಮತದಾನ ಮಾಡಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸುಧಾಮೂರ್ತಿ ಅವರು ಬೆಳಗ್ಗೆ ಜಯನಗರ ಬಿಇಎಸ್ ಕಾಲೇಜಿಗೆ ಬಂದು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ದಯವಿಟ್ಟು ನಿಮ್ಮ ಮತವನ್ನು ಚಲಾಯಿಸಿ. ವೋಟ್ ಮಾಡುವ ಮೂಲಕ ನಿಮ್ಮ ನಾಯಕರನ್ನೂ ನೀವು ಆಯ್ಕೆ ಮಾಡಿ, ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ಕೊಡಿ ಎಂದು ಭಾರತದ ಎಲ್ಲ ಪ್ರಜೆಗಳಲ್ಲೂ ನನ್ನದೊಂದು ವಿನಂತಿ ಅಂತ ಕೇಳಿಕೊಂಡಿದ್ದಾರೆ.

    ಇಂದು ರಜೆ ಎಂದು ಮನೆಯಲ್ಲಿ ಕುಳಿತುಕೊಳ್ಳಬೇಡಿ. ಇದು ನಿಮ್ಮ ಕರ್ತವ್ಯವಾಗಿದೆ. ಜೊತೆಗೆ ಆದೇಶವೂ ಆಗಿದೆ. ಒಂದು ರಾಷ್ಟ್ರವನ್ನು ಬಲವಾಗಿ ಕಟ್ಟುವ ಸಾಧನವೇ ಮತದಾನವಾಗಿದೆ. ಹೀಗಾಗಿ ದಯಮಾಡಿ ಎಲ್ಲರೂ ಬಂದು ಮತ ಹಾಕಿ ಎಂದು ಸುಧಾಮೂರ್ತಿ ಅವರು ಮನವಿ ಮಾಡಿಕೊಂಡಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಶಾಸಕನ ಆಪ್ತನಿಂದ ಮತದಾರರಿಗೆ ಹಣ ಹಂಚಿಕೆ – ಕೇಸ್ ದಾಖಲು

    ಚಿಕ್ಕಬಳ್ಳಾಪುರದಲ್ಲಿ ಶಾಸಕನ ಆಪ್ತನಿಂದ ಮತದಾರರಿಗೆ ಹಣ ಹಂಚಿಕೆ – ಕೇಸ್ ದಾಖಲು

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯನೊರ್ವ ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ನಗರಸಭೆಯ 5ನೇ ವಾರ್ಡಿನ ನಗರಸಭಾ ಸದಸ್ಯ ಮಂಜುನಾಥಾಚಾರಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದ ವಿಡಿಯೋ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿಕ್ಕಬಳ್ಳಾಪುರ ನಗರದ ನಗರ ಪೊಲೀಸ್ ಠಾಣೆಯ ಕ್ವಾಟ್ರಾಸ್ ಹಿಂಭಾಗದ ನಗರಸಭಾ ಸದಸ್ಯ ಮಂಜುನಾಥಾಚಾರಿಗೆ ಸೇರಿದ ಕಚೇರಿಯಲ್ಲಿ ರಾಜಾರೋಷವಾಗಿ ಹಣ ಹಂಚಿಕೆ ಮಾಡಲಾಗುತ್ತಿತ್ತು.

    ಮಾಹಿತಿ ತಿಳಿದ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಹಣ ಹಂಚಿಕೆಯ ದೃಶ್ಯ ಸೆರೆ ಹಿಡಿದಿದೆ. ವೋಟರ್ ಕಾರ್ಡ್ ಹಾಗೂ ಮತದಾನದ ಸ್ಲಿಪ್ ತೆಗೆದುಕೊಂಡ ಹೋಗುವ ಮತದಾರರಿಗೆ ತಲಾ 200, 300 ರೂ. ಹಂಚಿಕೆ ಮಾಡಲಾಗುತ್ತಿತ್ತು. ಇತ್ತ ಪಬ್ಲಿಕ್ ಟಿವಿ ಹಣ ಹಂಚಿಕೆ ಚಿತ್ರೀಕರಣ ಮಾಡಿದ ವಿಷಯ ತಿಳಿದ ನಗರಸಭಾ ಸದಸ್ಯ ಮಂಜುನಾಥಾಚಾರಿ ಹಣ ಹಂಚಿಕೆ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ಸಂಬಂಧ ಚುನಾವಣಾಧಿಕಾರಿ ಅನಿರುದ್ಧ ಶ್ರವಣ್‍ಗೆ ಮಾಹಿತಿ ರವಾನಿಸಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಚುನಾವಣಾ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಪರಿಶೀಲನೆ ನಡೆಸಿದ ನಂತರ ಚುನಾವಣಾಧಿಕಾರಿ ಸಂಜೀವಪ್ಪ ಅವರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಗರಸಭಾ ಸದಸ್ಯ ಮಂಜುನಾಥಾಚಾರಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

  • ಮಂಟಪದಿಂದ ಬಂದು ವಧು-ವರರಿಂದ ಮತದಾನ

    ಮಂಟಪದಿಂದ ಬಂದು ವಧು-ವರರಿಂದ ಮತದಾನ

    ಶ್ರೀನಗರ: ಕರ್ನಾಟಕ ಮಾತ್ರವಲ್ಲದೇ ಇಂದು ಅನೇಕ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಯೊಬ್ಬ ಮದುಮಗನಂತೆ ಉಡುಪು ಧರಿಸಿ ಕುದುರೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ಮದುವೆಯಾದ ಮರುಕ್ಷಣವೇ ನೂತನ ವಧು-ವರರು ಬಂದು ಮತದಾನ ಮಾಡಿದ್ದಾರೆ.

    ಇಂದು 11 ರಾಜ್ಯಗಳಲ್ಲಿ ಎರಡನೇ ಹಂತದ ಮತದಾನ ಪ್ರಾರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ಉದಂಪುರದಲ್ಲಿ ಮದುವೆಯಾದ ದಂಪತಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

    ದಂಪತಿ ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇದೀಗ ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನವದಂಪತಿಗೆ ನೆಟ್ಟಿಗರು ಶುಭಕೋರುತ್ತಿದ್ದು, ಜೊತೆಗೆ ಅವರ ಕಾರ್ಯಕ್ಕೆ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮತದಾನಕ್ಕೆ ಬಂದ ಜನರಿಗೆ ಶಾಕ್ – 367 ಮಂದಿಯ ಹೆಸರು ಡಿಲೀಟ್

    ಮತದಾನಕ್ಕೆ ಬಂದ ಜನರಿಗೆ ಶಾಕ್ – 367 ಮಂದಿಯ ಹೆಸರು ಡಿಲೀಟ್

    ಬೆಂಗಳೂರು: ವೋಟ್ ಹಾಕಲು ಬಂದ ಸುಮಾರು 367 ಮತದಾರರು ತಮ್ಮ ಹೆಸರಿಲ್ಲದೇ ಕಂಗಾಲಾದ ಘಟನೆ ನಗರದ ಕೆಎಲ್‍ಇ ಕಾಲೇಜಿನ ಮತಗಟ್ಟೆಯಲ್ಲಿ ನಡೆದಿದೆ.

    ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದಲ್ಲಿ ಬರುವ ಬೂಥ್‍ನಲ್ಲಿ ವೋಟ್ ಹಾಕಲು ಬಂದ 367 ಜನರು ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ನೋಡಿ ಕಂಗಾಲಾಗಿದ್ದಾರೆ. ಸದ್ಯ ಮತದಾರರು ಬೂತ್ ಮುಂದೆ ಜಮಾಯಿಸಿ ಚುನಾವಣೆ ನಿಲ್ಲಿಸುವಂತೆ ಪ್ರತಿಭಟಿಸುತ್ತಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದ ಮತದಾರರು ಮತದಾನಕ್ಕೆ ಕಾಯುತ್ತಿದ್ದರು. ಆದರೆ ವೋಟ್ ಹಾಕಲು ಆಗದೇ ಮತದಾರರು ಅಸಹಾಯಕರಾಗಿದ್ದಾರೆ. ವೋಟಿಂಗ್ ಲಿಸ್ಟ್ ಪರಿಶೀಲಿಸಿದಾಗ ಮತದಾರರ ಹೆಸರು ಅದರಲ್ಲಿ ಡಿಲಿಟೇಡ್ ಎಂದು ತೋರಿಸುತ್ತಿದೆ.

    ಈ ಬಗ್ಗೆ ಮತದಾರರು ಪರಿಶೀಲನೆ ಮಾಡಿ ಎಂದು ಅಧಿಕಾರಿಗಳ ಬಳಿ ಕೇಳಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಿಗಳು ಪರಿಶೀಲಿಸುವುದಾಗಿ ಸಬೂಬು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ಚುನಾವಣೆ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಪರಿಶೀಲನೆ ನಡೆಸಿದ ನಂತರ ಚುನಾವಣೆ ಮುಂದುವರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

  • ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವು

    ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವು

    ಚಾಮರಾಜನಗರ: ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಶಾಂತಮೂರ್ತಿ (48) ಮೃತ ಮತಗಟ್ಟೆ ಅಧಿಕಾರಿ. ಸುಲ್ತಾನ ಷರೀಫ್ ಸರ್ಕಲ್ ಬಳಿ ಮತಗಟ್ಟೆ ಸಂಖ್ಯೆ 48ರಲ್ಲಿ ಈ ಘಟನೆ ನಡೆದಿದೆ. ಶಾಂತಮೂರ್ತಿ ಹನೂರು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಪ್ರಜಾಪ್ರಭುತ್ವದ ಹಬ್ಬ ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುತ್ತಿದ್ದಾರೆ. ಕರ್ನಾಟಕ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. 14 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 4ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಈ 14 ಕ್ಷೇತ್ರಗಳ ಪೈಕಿ ಮಂಡ್ಯ ಕಣ ಅತ್ಯಂತ ಹೈವೋಲ್ಟೇಜ್, ಹಾಟ್‍ಸೀಟ್ ಎನಿಸಿಕೊಂಡಿದೆ.

  • ಬೆಂಗ್ಳೂರಿಗರ ಮೇಲಿನ ಅಪವಾದ ಅಳಿಸಿ ಹಾಕಲು ಮತದಾನ ಮಾಡಿ-ಡಿವಿಎಸ್ ಮನವಿ

    ಬೆಂಗ್ಳೂರಿಗರ ಮೇಲಿನ ಅಪವಾದ ಅಳಿಸಿ ಹಾಕಲು ಮತದಾನ ಮಾಡಿ-ಡಿವಿಎಸ್ ಮನವಿ

    ಬೆಂಗಳೂರು: ಇಂದು ರಾಜ್ಯಾದ್ಯಂತ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಂಗಳೂರಿಗೆ ಒಂದು ಅಪವಾದವಿದೆ. ಈ ಅಪವಾದವನ್ನು ಅಳಿಸಿಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವಿ ಸದಾನಂದ ಗೌಡ ಮನವಿ ಮಾಡಿದ್ದಾರೆ.

    ಕುಟುಂಬ ಸಮೇತರಾಗಿ ಹೆಬ್ಬಾಳದ ಭೂಪಸಂದ್ರದ ಮತಗಟ್ಟೆಗೆ ಬಂದಿರುವ ಡಿ.ವಿ ಸದಾನಂದಗೌಡರು ಮೊದಲು ಮತದಾನ ಮಾಡಿದರು.

    ಮತದಾನ ಪ್ರಕ್ರಿಯೆಗೂ ಮುಂಚೆಯೇ ಮತಗಟ್ಟೆಗೆ ಬಂದ ಡಿವಿಎಸ್, ಪ್ರತಿಬಾರಿ ಕ್ಯೂ ನಲ್ಲಿ ನಿಂತು ಮತದಾನ ಪ್ರಾರಂಭವಾಗುವ ವೇಳೆಗೆ ಕುಟುಂಬ ಸಮೇತ ಮತದಾನ ಮಾಡುತ್ತೇವೆ. ಇಡೀ ಕ್ಷೇತ್ರ ವ್ಯಾಪ್ತಿ ಸಂಚಾರ ನಡೆಸಬೇಕಾಗುತ್ತೆ ಈ ಹಿನ್ನೆಲೆಯಲ್ಲಿ ಬೆಳಗ್ಗೆ ಮತದಾನ ಮಾಡಿ ತೆರಳುತ್ತೇನೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ದೇಶದ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಬೆಂಗಳೂರಿನಲ್ಲಿ ವಿದ್ಯಾವಂತರು ಮತದಾನ ಮಾಡುವುದಿಲ್ಲವೆಂದು ಅಪವಾದವಿದೆ. ಈ ಹಿನ್ನಲೆ ಬೆಂಗಳೂರಿನ ಜನರು ಈ ಅಪವಾದ ಅಳಿಸಿಹಾಕಲು ಹೆಚ್ವಿನ ಪ್ರಮಾಣದಲ್ಲಿ ಮತದಾನ ಮಾಡಬೇಕು. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ನೀಡಬೇಕು ಎಂದು ಮನವಿ ಮಾಡಿದರು.

  • ಮೊದಲ ಹಂತದ ಚುನಾವಣೆ – ಎಷ್ಟು ಜನ ಮತ ಚಲಾಯಿಸುತ್ತಾರೆ: ಇಲ್ಲಿದೆ ಮಾಹಿತಿ

    ಮೊದಲ ಹಂತದ ಚುನಾವಣೆ – ಎಷ್ಟು ಜನ ಮತ ಚಲಾಯಿಸುತ್ತಾರೆ: ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಒಟ್ಟು 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.

    ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

    ಒಟ್ಟು 3 ಕೋಟಿಗೂ ಹೆಚ್ಚು ಜನ ಮೊದಲ ಹಂತದಲ್ಲಿ ಮತದಾನ ಮಾಡಲಿದ್ದಾರೆ. ಅದರಲ್ಲಿ ಬೆಂಗಳೂರು ದಕ್ಷಿಣ ಲೋಕಾಸಭಾ ಕ್ಷೇತ್ರ 28,48,705 ಮತದಾರರ ಹೊಂದಿದ್ದು, ಅತಿ ದೊಡ್ಡ ಕ್ಷೇತ್ರ ಅನಿಸಿದರೆ, 15,13,333ರ ಮತದಾರರನ್ನು ಹೊಂದಿರುವ ಉಡುಪಿ ಚಿಕ್ಕಮಗಳೂರು ಸಣ್ಣ ಕ್ಷೇತ್ರವಾಗಿದೆ. ಇದೇ ಪ್ರಥಮ ಬಾರಿಗೆ ಒಟ್ಟು 25 ಲಕ್ಷಕ್ಕೂ ಹೆಚ್ಚು ಮತದಾರರು ಪ್ರಪ್ರಥಮ ಬಾರಿಗೆ ಮತದಾನ ಮಾಡಲಿದ್ದಾರೆ. ಒಟ್ಟು 3 ಸಾವಿರಕ್ಕೂ ಹೆಚ್ಚು ಕೆಎಸ್‍ಆರ್ ಟಿಸಿ ಬಸ್‍ಗಳನ್ನು ಚುನಾವಣೆಗಾಗಿ ಬಳಸಿಕೊಳ್ಳಲಿದ್ದಾರೆ.

    ಈ ಬಾರಿಯ ಚುನಾವಣೆ ಭಾರೀ ಕುತೂಹಲದಿಂದ ಕೂಡಿದ್ದು ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ. ಇಲ್ಲಿ ಹಾಲಿ ಮುಖ್ಯಮಂತ್ರಿ ಮಗ ನಿಖಿಲ್ ಕುಮಾರಸ್ವಾಮಿಗೆ ಎದುರಾಳಿಯಾಗಿ ಮಾಜಿ ಸಚಿವ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ನಿಂತಿದ್ದಾರೆ. ಸುಮಲತಾ ಅವರ ಬೆಂಬಲಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಸಹ ಎಡೆಬಿಡದೆ ಪ್ರಚಾರ ನಡೆಸಿದ್ದಾರೆ.

  • ಮತದಾನ ಮಾಡೋರಿಗೆ ಬಂಪರ್ ಆಫರ್ – ಎಲ್ಲೆಲ್ಲಿ ಯಾರು ಏನು ಫ್ರೀ ಕೊಡ್ತಾರೆ?

    ಮತದಾನ ಮಾಡೋರಿಗೆ ಬಂಪರ್ ಆಫರ್ – ಎಲ್ಲೆಲ್ಲಿ ಯಾರು ಏನು ಫ್ರೀ ಕೊಡ್ತಾರೆ?

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ವೋಟು ಹಾಕುವ ಸಿಲಿಕಾನ್ ಸಿಟಿ ಜನರಿಗೆ ಬಂಪರ್ ಆಫರ್ ಇದೆ.

    ಮತದಾನಕ್ಕಾಗಿ ಸರ್ಕಾರ ಮಾತ್ರವಲ್ಲದೇ ಜನ, ಸಂಘಸಂಸ್ಥೆಗಳು ಜಾಗೃತಿ ಮಾಡುತ್ತಿದೆ. ಇತ್ತಿಚೆಗಷ್ಟೇ ನಿಸರ್ಗ ಹೋಟೆಲ್ ಮತದಾನದ ದಿನ ಫ್ರೀ ಬೆಣ್ಣೆದೋಸೆ ಆಫರ್ ನೀಡಿತ್ತು. ಈಗ ಜ್ಯುವೆಲ್ಲರಿ ಮಾಲೀಕರ ಸರದಿಯಾಗಿದ್ದು, ವೋಟು ಹಾಕಿ ಚಿನ್ನ ಖರೀದಿಸಿದರೆ ನಿಮಗೆ ಅಷ್ಟೇ ಪ್ರಮಾಣದ ಬೆಳ್ಳಿ ಉಚಿತವಾಗಿ ಸಿಗುತ್ತದೆ.

    ಮತದಾನದ ಶಾಯಿಯನ್ನು ತೋರಿಸಿದರೆ ಬೆಂಗಳೂರಿನ ಯಲಹಂಕದ ಸುಮತಿ ಜ್ಯುವೆಲ್ಲರಿ ಶಾಪ್‍ನಲ್ಲಿ ಏಪ್ರಿಲ್ 18 ರಿಂದ 26ರವರೆಗೆ ಈ ಆಫರ್ ಸಿಗಲಿದೆ. ಮತದಾನ ಜಾಗೃತಿಗೆ ಈ ವಿನೂತನ ಪ್ರಯತ್ನ ಎಂದು ಶಾಪ್ ಮಾಲೀಕ ನವೀನ್ ಕೊಠಾರಿ ಹೇಳಿದ್ದಾರೆ.

    ಬಿಪಿ, ಶುಗರ್, ಬ್ಲಡ್ ಟೆಸ್ಟ್ ಎಲ್ಲವೂ ಫ್ರೀ!
    ಇನ್ನು ಯಲಹಂಕದ ರೇಡಿಯಲ್ ಡಯಗ್ನಾಸ್ಟಿಕ್ಸ್ ಸೆಂಟರ್‍ನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ಮಧುಮೇಹ ಪರೀಕ್ಷೆ, ಕಿಡ್ನಿ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆಗಳನ್ನು ಪಡೆಯಬಹುದಾಗಿದೆ. ಮತದಾನದ ಜಾಗೃತಿಗಾಗಿ ಈ ಸ್ಪೆಷಲ್ ಆಫರ್ ನೀಡಿದ್ದಾರೆ.

    ದೇಶದ ಒಳ್ಳೆಯ ನಾಯಕತ್ವಕ್ಕಾಗಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎನ್ನುವುದಕ್ಕೆ ಈ ರೀತಿ ಆಫರ್‌ಗಳನ್ನು ನೀಡಲಾಗುತ್ತದೆ ಎಂದು ಮಾಲೀಕರು ತಿಳಿಸಿದ್ದಾರೆ.

  • ನಾಲ್ಕು ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ

    ನಾಲ್ಕು ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ

    ಬೆಂಗಳೂರು: ಏಪ್ರಿಲ್ 18 ರಂದು ರಾಜ್ಯದ ದಕ್ಷಿಣ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ.

    ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಚುನಾವಣಾ ಆಯೋಗ ಒಟ್ಟು 3,314 ಕೆಎಸ್‌ಆರ್‌ಟಿಸಿ ಬಸ್‍ಗಳನ್ನು 3 ದಿನಗಳ ಕಾಲ ಬಳಸಿಕೊಳ್ಳಲಿದೆ. ಹೀಗಾಗಿ ಇಂದಿನಿಂದ 4 ದಿನಗಳವರೆಗೆ ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

    ಚುನಾವಣಾ ಕೆಲಸಕ್ಕೆ ಬಸ್‍ಗಳು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ. ಇದೇ ವೇಳೆ ವೋಲ್ವೋ ಹಾಗೂ ಇತರೇ ಐಷಾರಾಮಿ ಬಸ್‍ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಗುರುವಾರ ಚುನಾವಣೆ ನಡೆಯಲಿದೆ.

  • ಮತದಾನಕ್ಕೆ 2 ದಿನ ಇರುವಾಗ ಸಚಿವ ಪುಟ್ಟರಾಜು ಹೊಸ ಬಾಂಬ್

    ಮತದಾನಕ್ಕೆ 2 ದಿನ ಇರುವಾಗ ಸಚಿವ ಪುಟ್ಟರಾಜು ಹೊಸ ಬಾಂಬ್

    ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ಎರಡು ದಿನ ಇರುವಾಗಲೇ ಸಚಿವ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಬಿಜೆಪಿ ಜೊತೆ ಸೇರಿ ಸುಮಲತಾ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ಜೊತೆ ಸುಮಲತಾ ಚರ್ಚೆ ಮಾಡಿರುವ ವಿಡಿಯೋ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಸುಮಲತಾ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಜೆಡಿಎಸ್ ಅವರು ಹೇಳುತ್ತಿದ್ದಾರೆ. ಆದರೆ ಸುಮಲತಾ ಅವರು ಪ್ರಚಾರದ ಸಮಯದಲ್ಲಿ ತಾವು ಬಿಜೆಪಿ ಸೇರುವುದಿಲ್ಲ ಎಂದು ಮತದಾರರಿಗೆ ಸ್ಟಷ್ಟನೆ ನೀಡುತ್ತಿದ್ದಾರೆ.