ಹಾವೇರಿ: ಸರಿಗಮಪ ಮೂಲಕ ಮನೆಮತಾದ ಕುರಿಗಾಹಿ ಹನುಮಂತ ಸದೃಢ ದೇಶದ ನಿರ್ಮಾಣಕ್ಕಾಗಿ ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ನೀವು ಕೂಡ ತಪ್ಪದೇ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕಾಗಿದ್ದು, ನೀವೇ ಮತ ಚಲಾಯಿಸಿ. ಅಲ್ಲದೆ ಸೂಕ್ತವಾದ ಜನಪ್ರತಿನಿಧಿ ಆಯ್ಕೆ ಮಾಡಿ ಎಂದು ಇದೇ ವೇಳೆ ಜನರಿಗೆ ಸಂದೇಶ ರವಾನಿಸಿದ್ರು.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಮತಗಟ್ಟೆ ನಂ.116 ರಲ್ಲಿ ಸಿಂಗರ್ ಹನುಮಂತ ಲಮಾಣಿ ತಮ್ಮ ಮತ ಚಲಾಯಿಸಿದ್ದಾರೆ. ಹನುಮಂತ ಹಾವೇರಿ ಎಲೆಕ್ಷನ್ ಐಕಾನ್ ಆಗಿದ್ದಾರೆ.
ಕರ್ನಾಟಕ ಸೇರಿದಂತೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಮಾಡುವುದು ನಮ್ಮ ಜವಾಬ್ದಾರಿ. ತಪ್ಪದೇ ಮತ ಹಾಕಿ. ದೇಶದ ಭವಿಷ್ಯಕ್ಕಾಗಿ ನಿಮ್ಮ ಹಕ್ಕು ಚಲಾಯಿಸಿ.
ಕೊಪ್ಪಳ: 2ನೇ ಹಂತದ ಚುನಾವಣೆಗೆ ಇನ್ನೂ ಕೇವಲ ಒಂದು ದಿನ ಬಾಕಿ ಇರಬೇಕಾದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿ ಗೊಂದಲದಲ್ಲಿದ್ದಾರೆ.
ಹೌದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 14 ಜನ ಕಣದಲ್ಲಿದ್ದಾರೆ. ಆದರೆ ಒಬ್ಬ ಪಕ್ಷೇತರ ಅಭ್ಯರ್ಥಿಯ ಚಿಹ್ನೆ ಚಪ್ಪಲಿ ಗುರುತು ಇರುವುದರಿಂದ ಚುನಾವಣಾ ಸಿಬ್ಬಂದಿ ಚಪ್ಪಲಿ ಹಾಕಬೇಕಾ ಬೇಡವಾ ಎನ್ನುವ ಚಿಂತನೆಯಲ್ಲಿ ಇದ್ದಾರೆ.
ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಯಿಂದ 100 ಮೀಟರ್ ವರೆಗೂ ಎಲ್ಲಿಯೂ ಅಭ್ಯರ್ಥಿಯ ಚಿಹ್ನೆ ಕಾಣುವಂತಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿ ಪ.ಯ ಗಣೇಶ್ ಅವರ ಚಿಹ್ನೆ ಚಪ್ಪಲಿ ಇರುವುದರಿಂದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರೇ ಇದಕ್ಕೆ ಏನು ಮಾಡೋದು ಎಂದು ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಿಬ್ಬಂದಿ ವಿಚಾರವಿರಲಿ ಮತಗಟ್ಟೆಗೆ ಮತ ಹಾಕಲು ಬರುವ ಮತದಾರರು ಚಪ್ಪಲಿ ಹಾಕಿಕೊಳ್ಳಬೇಕಾ ಅಥವಾ ಬಿಟ್ಟು ಬರಬೇಕಾ ಎನ್ನುವುದು ಇದೀಗ ಕೊಪ್ಪಳದಲ್ಲಿ ಜನರು ಚರ್ಚೆ ಮಾಡುವಂತಾಗಿದೆ.
ಬೀದರ್: ಇದೇ ಮೊದಲ ಬಾರಿಗೆ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಬೀದರ್ ನ ಜನರು ಸೇರಿದಂತೆ ಉತ್ತರ ಕರ್ನಾಟಕದ ಮತದಾರರಿಗೆ ಇಂದು ಬೀದರ್ ಟು ಯಶವಂತಪುರ ವಿಶೇಷ ರೈಲನ್ನು ನೈರುತ್ಯ ರೈಲ್ವೆ ಒದಗಿಸಿದೆ.
ಮಂಗಳವಾರ ಉತ್ತರ ಕರ್ನಾಟಕದಲ್ಲಿ ಎರಡನೇಯ ಹಂತದಲ್ಲಿ ಮತದಾನ ನಡೆಯಲ್ಲಿದ್ದು, ಇದಕ್ಕಾಗಿ ಇಂದು ಸಂಜೆ 6.10ಕ್ಕೆ ಯಶವಂತಪುರದಿಂದ ಬೀದರ್ ಗೆ ತತ್ಕಾಲ್ ಎಕ್ಸ್ ಪ್ರೆಸ್ ವಿಶೇಷ ರೈಲು ಹೊರಡಲಿದೆ. ಇಂದು ಸಂಜೆ 6.10ಕ್ಕೆ ಯಶವಂತಪುರದಿಂದ ಹೊರಡಲಿರುವ ವಿಶೇಷ ರೈಲು ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಸೈದಾಪುರ, ಯಾದಗಿರಿ, ವಾಡಿ ಹಾಗೂ ಕಲಬುರಗಿ ಮಾರ್ಗವಾಗಿ ಏಪ್ರಿಲ್ 23ರ ಬೆಳಗ್ಗೆ 6 ಗಂಟೆಗೆ ಬೀದರ್ ತಲುಪಲಿದೆ.
ಅದೇ ವಿಶೇಷ ರೈಲು ಏಪ್ರಿಲ್ 23ರ ಸಂಜೆ 7 ಗಂಟೆಗೆ ಬೀದರ್ ನಿಂದ ಹೊರಡಲಿದ್ದು ಏಪ್ರಿಲ್ 24ರ ಬೆಳಗ್ಗೆ 8.15ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ. ಗಡಿ ಜಿಲ್ಲೆ ಬೀದರ್ ಸೇರಿದಂತೆ ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ಉದ್ಯೋಗಿಗಳು, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಮತದಾರರಿಗೆ ಮತದಾನ ಮಾಡಲು ಯಾವುದೇ ಸಮಸ್ಯೆಯಾಗಬಾರದು ಎಂದು ನೈರುತ್ಯ ರೈಲ್ವೆ ಇಲಾಖೆ ಈ ರೀತಿ ವಿಶೇಷ ರೈಲನ್ನು ಮೊದಲ ಬಾರಿಗೆ ಒದಗಿಸಿದೆ.
ರಾಯಚೂರು: ರಾಜ್ಯದಲ್ಲಿ ನಾಳೆ ಎರಡನೇ ಹಂತದ ಮತದಾನ ನಡೆಯುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ರಾಯಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆದಿದೆ.
144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಮದ್ಯ ಮಾರಾಟ ನಿಷೇಧ ಹೇರುತ್ತಿದ್ದಂತೆ ಈಗಾಗಲೇ ಅಕ್ರಮವಾಗಿ ಮದ್ಯ ಮಾರಾಟ ಶುರುವಾಗಿದೆ.
ಜಿಲ್ಲೆಯ ಸಿಂಧನೂರು ಪಟ್ಟಣದ ನಡುರಸ್ತೆಯಲ್ಲೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಸಿಂಧನೂರು ನಗರದಲ್ಲಿ ದುಪ್ಪಟ್ಟು ಹಣ ಪಡೆದು ಮಾರಾಟ ಮಾಡಲಾಗುತ್ತಿದೆ.
ಮದ್ಯ ವ್ಯಸನಿಗಳು ದುಬಾರಿಯಾದರೂ ಹೆಚ್ಚು ಹಣ ಕೊಟ್ಟು ಅಕ್ರಮವಾಗಿ ಮದ್ಯ ಕೊಂಡುಕೊಳ್ಳುತ್ತಿದ್ದಾರೆ.
ಬೆಂಗಳೂರು: ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಕರ್ನಾಟಕದ ಮೊದಲ ಹಂತದಲ್ಲಿ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಮುಗಿದಿದೆ. ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ-ವಿವಿಪ್ಯಾಟ್‍ಗಳಲ್ಲಿ ಭದ್ರವಾಗಿದ್ದು, ಸ್ಟ್ರಾಂಗ್‍ರೂಂ ಸೇರಿವೆ.
ಇದೇ 23ಕ್ಕೆ ಉತ್ತರ ಕರ್ನಾಟಕದ 14 ಕ್ಷೇತ್ರಗಳ ಚುನಾವಣೆ ನಡೆದು, ಮೇ 19ರವೆರೆಗೆ ದೇಶಾದ್ಯಂತ ಏಳೂ ಹಂತಗಳ ಚುನಾವಣೆ ಮುಗಿದ ಬಳಿಕ ಮೇ 23ರಂದು ಕರ್ನಾಟಕದ 28 ಲೋಕಸಭೆ, ಕುಂದಗೋಳ-ಚಿಂಚೋಳಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಸೇರಿದಂತೆ 543 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.
ಮೊದಲ ಹಂತದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು 68.52% ಮತದಾನ ನಡೆದಿದೆ. ಮಂಡ್ಯದಲ್ಲಿ ಅತಿ ಹೆಚ್ಚು 80.23% ದಾಖಲಾದರೆ ಬೆಂಗಳೂರು ದಕ್ಷಿಣದಲ್ಲಿ 53.47% ರಷ್ಟು ಅತಿ ಕಡಿಮೆ ಮತದಾನ ನಡೆದಿದೆ.
ಬೆಂಗಳೂರು: ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಕರ್ನಾಟಕದ ಮೊದಲ ಹಂತದಲ್ಲಿ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಮುಗಿದಿದೆ. ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ-ವಿವಿಪ್ಯಾಟ್‍ಗಳಲ್ಲಿ ಭದ್ರವಾಗಿದ್ದು, ಸ್ಟ್ರಾಂಗ್‍ರೂಂ ಸೇರಿವೆ. ಚುನಾವಣೆ ನಡೆದ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ. 67.67 ಮತದಾನವಾಗಿದೆ.
ಎಲ್ಲೆಲ್ಲಿ ಎಷ್ಟು ಮತದಾನ?
1. ಮಂಡ್ಯ: ಸಕ್ಕರೆ ನಾಡು ಮಂಡ್ಯದ 2014ರ ಚುನಾವಣೆಯಲ್ಲಿ ಶೇ.71.47ರಷ್ಟು ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.79.98 ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದರಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದೆ. ನಟ ಅಂಬರೀಶ್ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತಾರಿಗೆ ಬೆಂಬಲ ಸೂಚಿಸಿತ್ತು.
2. ಹಾಸನ: ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುವ 2014ರ ಹಾಸನದ ಚುನಾವಣೆಯಲ್ಲಿ ಶೇ.73.49ರಷ್ಟು ಮತದಾನ ಆಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.77.28 ರಷ್ಟು ಮತದಾನವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಕ್ಷೇತ್ರವನ್ನು ತ್ಯಾಗ ಮಾಡಿ ತುಮಕೂರುದಿಂದ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಹೊರ ಬಂದ ಮಾಜಿ ಸಚಿವ ಎ.ಮಂಜು ಬಿಜೆಪಿ ಬಾವುಟ ಹಿಡಿದು ಕಣದಲ್ಲಿದ್ದಾರೆ.
3. ತುಮಕೂರು: ಕಲ್ಪವೃಕ್ಷಗಳ ನಾಡು ತುಮಕೂರಿನ 2014ರ ಚುನಾವಣೆಯಲ್ಲಿ ಶೇ.72.57 ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.77.01 ರಷ್ಟು ಮತದಾನವಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಬಿಜೆಪಿಯಿಂದ ಜಿ.ಎಸ್.ಬಸವರಾಜು ಕಣದಲ್ಲಿದ್ದಾರೆ.
4. ಮೈಸೂರು: ಅರಮನೆಗಳ ನಗರಿ ಮೈಸೂರು-ಕೊಡಗು ಕ್ಷೇತ್ರದ 2014ರ ಚುನಾವಣೆಯಲ್ಲಿ ಶೇ.68.72 ರಷ್ಟು ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.67.24ರಷ್ಟು ಮತದಾನವಾಗಿದೆ. ಕಾಂಗ್ರೆಸ್‍ನಿಂದ ವಿಜಯ್ ಶಂಕರ್, ಬಿಜೆಪಿಯಿಂದ ಪ್ರತಾಪ್ ಸಿಂಹ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
5. ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ಚಿಕ್ಕಬಳ್ಳಾಪುರದ 2014ರ ಚುನಾವಣೆಯಲ್ಲಿ ಶೇ.76.21ರಷ್ಟು ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.76.14 ರಷ್ಟು ಮತದಾನವಾಗಿದೆ. ಕಾಂಗ್ರೆಸ್‍ನಿಂದ ಎಂ.ವೀರಪ್ಪ ಮೊಯ್ಲಿ, ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಮತ್ತು ಬಿಎಸ್‍ಪಿ ಪಕ್ಷದಿಂದ ಸಿ.ಎಸ್.ದ್ವಾರಕನಾಥ್ ಚಿಕ್ಕಬಳ್ಳಾಪುರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
6. ಚಾಮರಾಜನಗರ: 2014ರ ಚುನಾವಣೆಯಲ್ಲಿ ಶೇ.72.85 ರಷ್ಟು ಮತದಾನ ಆಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.73.45 ರಷ್ಟು ಮತದಾನವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಧೃವ ನಾರಾಯಣ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ಪ್ರಸಾದ್ ಕಣದಲ್ಲಿದ್ದಾರೆ.
7. ಕೋಲಾರ: 2014ರ ಚುನಾವಣೆಯಲ್ಲಿ ಶೇ.75.51 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.75.94 ರಷ್ಟು ಮತದಾನ ನಡೆದಿದೆ. ಕಾಂಗ್ರೆಸ್‍ನಿಂದ ಕೆ.ಎಚ್.ಮುನಿಯಪ್ಪ ಮತ್ತು ಬಿಜೆಪಿಯ ಎಸ್.ಮುನಿಸ್ವಾಮಿ ಕಣದಲ್ಲಿದ್ದಾರೆ.
8. ಬೆಂಗಳೂರು ಉತ್ತರ: 2014ರ ಚುನಾವಣೆಯಲ್ಲಿ ಶೇ. 56.53 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.50.03 ರಷ್ಟು ಮತದಾನವಾಗಿದೆ. ರಾಜ್ಯ ಮೈತ್ರಿಯಲ್ಲಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಸೂಕ್ತ ಅಭ್ಯರ್ಥಿಗಳ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿತ್ತು. ಬಿಜೆಪಿಯಿಂದ ಡಿ.ವಿ.ಸದಾನಂದಗೌಡ ಎರಡನೇ ಬಾರಿ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಸಚಿವ ಕೃಷ್ಣಬೈರೇಗೌಡರು ಸ್ಪರ್ಧೆಯಲ್ಲಿದ್ದಾರೆ.
9. ಬೆಂಗಳೂರು ಗ್ರಾಮಾಂತರ: 2014ರ ಚುನಾವಣೆಯಲ್ಲಿ ಶೇ.66.45 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.64.09 ರಷ್ಟು ಮತದಾನವಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಅಶ್ವಥ್ ನಾರಾಯಣದಲ್ಲಿ ಬೆಂಗಳೂರು ಗ್ರಾಮಾಂತರ ಕಣದಲ್ಲಿರುವ ಪ್ರಮುಖರು.
10. ಬೆಂಗಳೂರು ಕೇಂದ್ರ: 2014ರ ಚುನಾವಣೆಯಲ್ಲಿ ಶೇ.55.64ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ.49.76 ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರದಿಂದ ಮೊದಲ ಬಾರಿಗೆ ನಟ ಪ್ರಕಾಶ್ ರೈ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯಿಂದ ಪಿ.ಸಿ.ಮೋಹನ್ ಮತ್ತು ಕಾಂಗ್ರೆಸ್‍ನಿಂದ ರಿಜ್ವಾನ್ ಅರ್ಷದ್ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ಕೇಂದ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
11. ಬೆಂಗಳೂರು ದಕ್ಷಿಣ: 2014ರ ಚುನಾವಣೆಯಲ್ಲಿ ಶೇ.55.75 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.53.53 ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣದಿಂದ ಯುವ ನಾಯಕ ತೇಜಸ್ವಿ ಸೂರ್ಯರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಾಂಗ್ರೆಸ್‍ನಿಂದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ.
12. ಚಿತ್ರದುರ್ಗ: 2014ರ ಚುನಾವಣೆಯಲ್ಲಿ ಶೇ.66.07ರಷ್ಟು ಮತದಾನವಾಗಿತ್ತು. ಈ ಬಾರಿ 70.59 ರಷ್ಟು ಮತದಾನ ನಡೆದಿದೆ. ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪ ಮತ್ತು ಬಿಜೆಪಿಯಿಂದ ಎ.ನಾರಾಯಣ ಸ್ವಾಮಿ ಸ್ಪರ್ಧೆಯಲ್ಲಿದ್ದಾರೆ.
13. ದಕ್ಷಿಣ ಕನ್ನಡ: 2014ರ ಚುನಾವಣೆಯಲ್ಲಿ ಶೇ. 77.15ರಷ್ಟು ಮತದಾನ ಆಗಿತ್ತು. ಈ ಬಾರಿ ಶೇ.77.70 ರಷ್ಟು ಮತದಾನ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್‍ನಿಂದ ಮಿಥುನ್ ರೈ ಸ್ಪರ್ಧಿಸಿದ್ದಾರೆ.
14. ಉಡುಪಿ-ಚಿಕ್ಕಮಗಳೂರು: 2014ರ ಚುನಾವಣೆಯಲ್ಲಿ ಶೇ.74.56ರಷ್ಟು ಮತದಾನ ನಡೆದಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.75.26 ರಷ್ಟು ಮತದಾನವಾಗಿದೆ. ಇಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಸ್ಪರ್ಧೆ ಮಾಡಿದ್ದರೆ, ಮೈತ್ರಿಯ ಒಮ್ಮತ ಅಭ್ಯರ್ಥಿಯಾಗಿ ಜೆಡಿಎಸ್‍ನಿಂದ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ.
ಬೆಂಗಳೂರು: ಮೊದಲ ಹಂತದ ಲೋಕಸಭಾ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತಿದ್ದು, ರಾಜ್ಯದ ಹಲವೆಡೆ 100 ವರ್ಷ ದಾಟಿದ ವೃದ್ಧರು ಕೂಡ ಮತ ಚಲಾಯಿಸಿ ಸಂಭ್ರಮಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು 104 ವರ್ಷದ ವಯೋವೃದ್ಧೆ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶತಾಯುಷಿ ಮಹದೇವಮ್ಮ ಹೊಸದುರ್ಗ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 209 ರಲ್ಲಿ ಮತದಾನ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮುತ್ತುಗದಹಳ್ಳಿ ಗ್ರಾಮದ ಶತಾಯುಷಿ ಮುನಿಯಮ್ಮ (106) ಅವರು ಕೂಡ ಮತದಾನ ಮಾಡಿದ್ದಾರೆ. ಮುನಿಯಮ್ಮ ಅವರು ಗ್ರಾಮದ 13ರ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಮೊಮ್ಮಗನ ಸಹಾಯದಿಂದ ಶತಾಯುಷಿ ಮುನಿಯಮ್ಮ ಮತದಾನ ಮಾಡಿದ್ದಾರೆ. ಶತಯುಷಿ ವಯಸ್ಸಿನಲ್ಲೂ ಮುನಿಯಮ್ಮನ ಉತ್ಸಾಹ ಕುಗ್ಗಿರಲಿಲ್ಲ.
ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡರಸಿನಕೆರೆಯಲ್ಲಿ 102 ವರ್ಷದ ಚಿಕ್ಕಮಾಯಮ್ಮ ಅವರು ಮತ ಚಲಾಯಿಸಿದ್ದಾರೆ. ಚಿಕ್ಕಮಾಯಮ್ಮ ಅವರು ಮತಗಟ್ಟೆ ಕೇಂದ್ರಕ್ಕೆ ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ್ದಾರೆ. ಚಿಕ್ಕಮಾಯಮ್ಮ ತಮ್ಮ ಮಕ್ಕಳ ಸಹಾಯದೊಂದಿಗೆ ಬಂದು ಮತದಾನ ಮಾಡಿದ್ದಾರೆ.
ಮಂಡ್ಯದ ಬೂತ್ ನಂಬರ್ 137ರಲ್ಲಿ 110 ವರ್ಷದ ನಿಂಗಮ್ಮ ಮತ ಚಲಾಯಿಸಿದ್ದಾರೆ. ನೂರರ ಗಡಿ ದಾಟಿದರೂ ನಿಂಗಮ್ಮ ಉತ್ಸಾಹದಿಂದ ಮತ ಹಾಕಿದ್ದಾರೆ. ನಿಂಗಮ್ಮ ಜೊತೆ 85 ವರ್ಷದ ಮುತ್ತಮ್ಮ ಕೂಡ ಮತದಾನ ಮಾಡಿದ್ದಾರೆ. ಶತಾಯುಷಿ ಅಜ್ಜಿಯಂದಿರು ಒಂದೇ ಆಟೋದಲ್ಲಿ ಬಂದು ಮತ ಚಲಾಯಿಸುವ ಮೂಲಕ ಯುವ ಜನತೆಗೆ ಮಾದರಿ ಆಗಿದ್ದಾರೆ.
ತುಮಕೂರಿನ ತುರುವೇಕೆರೆ ತಾಲೂಕಿನ ಚಾಕುವಳ್ಳಿಪಾಳ್ಯಾದಲ್ಲಿ 105 ವರ್ಷದ ದೊಡ್ಡತಾಯಮ್ಮ ತಮ್ಮ ಮತ ಚಲಾಯಿಸಿದ್ದಾರೆ. ಹೋನ್ನೆನಹಳ್ಳಿಯ ಮತಗಟೆಯಲ್ಲಿ ದೊಡ್ಡತಾಯಮ್ಮ ಮತ ಚಲಾವಣೆ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮಂಗಳೂರಿನಲ್ಲೂ ಕೂಡ ನೂರು ವರ್ಷದ ಕೇಶವ ಕುಡ್ವಾ ಅವರು ವೋಟ್ ಮಾಡಿದ್ದಾರೆ. ಲೇಡಿಹಿಲ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ಮತದಾನವು ಇಂದು ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಗಲಾಟೆ, ಹಲ್ಲೆ ಹಾಗೂ ಬಲವಂತವಾಗಿ ಮತದಾನ ಮಾಡಲಾಗಿದೆ.
ರಾಯ್‍ಗಂಜ್ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮೊಹಮ್ಮದ್ ಸಲಿಂ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೊಹಮ್ಮದ್ ಸಲಿಂ ಅವರು ಕಾಂಗ್ರೆಸ್ ಹಾಲಿ ಸಂಸದೆ ದೀಪಾ ದಾಸ್ಮುನ್ಸಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ದೀಪಾ ಅವರ ಪತಿ ರಂಜನ್ ದುಸ್ಮಾನ್ಸಿ ಅವರು 1999ರಿಂದಲೂ ರಾಯ್‍ಗಂಜ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಅವರ ಅನಾರೋಗ್ಯದಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಪತಿ ದೀಪಾ ದಾಸ್ಮುನ್ಸಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಇಸ್ಲಾಂಪುರ್ ಮತಗಟ್ಟೆಯ 100 ಮೀಟರ್ ದೂರದಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಸೇರಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮತದಾರರನ್ನು ಹೆದರಿಸುತ್ತಿದ್ದಾರೆ. ಅವರ ಬಳಿಗೆ ಹೋಗುತ್ತಿದ್ದಂತೆ ನನ್ನ ವಾಹನದ ಮೇಲೆ ದಾಳಿ ಮಾಡಿದರು. ಪೊಲೀಸರು ದಾಳಿ ಮಾಡಿದವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಮೊಹಮ್ಮದ್ ಸಲಿಂ ಆರೋಪಿಸಿದ್ದಾರೆ.
ರಾಯ್‍ಗಂಜ್‍ನಲ್ಲಿ ಟಿಎಂಸಿ ಕಾರ್ಯಕರ್ತರು ಬೂತ್ ಅನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬೂತ್ ಒಳಗೆ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಬಲವಂತವಾಗಿ ಇವಿಎಂ ರೂಂ ಪ್ರವೇಶಿಸಿ ಮತದಾರರ ಮೇಲೆ ಒತ್ತಡ ಹಾಕಿ ವೋಟ್ ಹಾಕಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ದೂರಿದೆ.
WB: Security personnel lob tear gas shells and lathi charge locals as they block NH-34 in protest after unknown miscreants allegedly prevented them from casting their votes at Digirpar polling booth in Chopra, in Islampur subdivision of North Dinajpur. #LokSabhaElections2019pic.twitter.com/XukT8B8Aol
ಪಶ್ಚಿಮ ಬಂಗಾಳದ ಚೋಪ್ರಾದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಡಿಗಿರ್ ಪರ್ ಕ್ಷೇತ್ರದಲ್ಲಿ ಮತದಾನದ ಆರಂಭವಾದ ಕೆಲವೇ ಸಮಯದಲ್ಲಿ ಗಲಭೆ ಆರಂಭವಾಗಿದೆ. ಮತದಾನ ಮಾಡದಂತೆ ಗುಂಪೊಂದು ಸಾರ್ವಜನಿಕರಿಗೆ ಒತ್ತಾಯಿಸಿತ್ತು. ಈ ವೇಳೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿ, ಪುನಃ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತು.
ಪುರುಲಿಯಾ ಜಿಲ್ಲೆಯ ಸೇನಾಬೊನಾ ಗ್ರಾಮದ ಹೊರ ವಲಯದ ಮರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಟಿಎಂಸಿ ಕಾರ್ಯರ್ತರು ಈ ಕೃತ್ಯ ಎಸದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಬಂದು ರಾಜರಾಜೇಶ್ವರಿ ಮೌಂಟ್ ಕಾತ್ ಬಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
ದರ್ಶನ್ ಮತ್ತು ಅವರ ಪತ್ನಿಯೂ ಸಾರ್ವಜನಿಕರ ಮಧ್ಯೆ ಸುಮಾರು ಅರ್ಧಗಂಟೆಯವರೆಗೂ ಸರದಿಯಲ್ಲಿ ನಿಂತು ಮತದಾನ ಮಾಡಿದ್ದಾರೆ.
ಈ ವೇಳೆ ಅಲ್ಲಿದ್ದ ಮತದಾರರು ದರ್ಶನ್ ಬಳಿ ಸೆಲ್ಫಿ ಕೇಳಿದ್ದಾರೆ. ಆಗ ದರ್ಶನ್ ಬೇರೆ ಅವರಿಗೆ ತೊಂದರೆಯಾಗುತ್ತದೆ ಬೇಡಾ ಎಂದು ಹೇಳಿ ಕೊನೆಗೂ ಸರದಿ ಸಾಲಿನಲ್ಲಿ ನಿಂತು ಹೋಗಿ ಮತದಾನ ಮಾಡಿದ್ದಾರೆ.
ಇಂದು ಮಂಡ್ಯ, ಹಾಸನ, ತುಮಕೂರು, ಚಾಮರಾಜನಗರ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಕರ್ನಾಟಕದಲ್ಲಿ ನಡೆಯುತ್ತಿದೆ. ಈಗಾಗಲೇ ಅನೇಕ ನಟ-ನಟಿಯರು, ರಾಜಕಾರಣಿ ಬಂದು ಮತದಾನ ಮಾಡಿ ಹೋಗಿದ್ದಾರೆ. ಅಷ್ಟೇ ಅಲ್ಲದೇ ತಪ್ಪದೇ ಮತದಾನ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.. ಎಲ್ಲರೂ ತಪ್ಪದೆ ಮತದಾನ ಮಾಡಿ.@dasadarshan@vijayaananth2pic.twitter.com/Tj012xFnwL
ಚೆನ್ನೈ: ಮತ ಚಲಾವಣೆಗೆ ಆಗಮಿಸಿದ್ದ ಇಬ್ಬರು ಮತದಾರರು ಮತಗಟ್ಟೆಯಲ್ಲಿ ಸಾವನ್ನಪ್ಪಿದ್ದಾರೆ. ಈರೋಡ್ ಮತ್ತು ಸೇಲಂ ಲೋಕಸಭಾ ಕ್ಷೇತ್ರಗಳಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಮುರುಗೇಸನ್ (60) ಮತ್ತು ಕೃಷ್ಣನ್ (75) ಎಂದು ಗುರುತಿಸಲಾಗಿದೆ. ಈರೋಡ್ ಲೋಕಸಭಾ ಕ್ಷೇತ್ರದ ಶಿವಗಿರಿ ಮತಗಟ್ಟೆಯಲ್ಲಿ ಮುರುಗೇಸನ್, ಸೇಲಂ ಲೋಕಸಭಾ ಕ್ಷೇತ್ರದ ಒಮಲೂರು ಮತಗಟ್ಟೆಯಲ್ಲಿ ಕೃಷ್ಣನ್ ಮೃತಪಟ್ಟಿದ್ದಾರೆ.
ಶಿವಗಿರಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ನೂರಕ್ಕೂ ಅಧಿಕ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ವಯೋಸಹಜವಾಗಿ ಬಿಸಿಲಿನಲ್ಲಿ ನಿಂತಿದ್ದ ಮುರುಗೇಸನ್ ಸುಸ್ತಾದಂತೆ ಕಂಡು ಬಂದಿದ್ದಾರೆ. ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ಇರೋಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮುರುಗೇಸನ್ ಅವರನ್ನು ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ಖಚಿತ ಪಡಿಸಿದ್ದಾರೆ.
ಈ ಸಂಬಂಧ ಶಿವಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ. ಮತ ಚಲಾಯಿಸಿ ಹೊರ ಬಂದ ಕೃಷ್ಣನ್ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.