Tag: vote

  • ನಾನು ಮೋದಿಗೆ ವೋಟ್ ಹಾಕಿದ್ದೇನೆ ಎಂದ ಮಹಿಳೆ – ಆರ್.ವಿ ದೇಶಪಾಂಡೆ ಶಾಕ್

    ನಾನು ಮೋದಿಗೆ ವೋಟ್ ಹಾಕಿದ್ದೇನೆ ಎಂದ ಮಹಿಳೆ – ಆರ್.ವಿ ದೇಶಪಾಂಡೆ ಶಾಕ್

    ಯಾದಗಿರಿ: ಸಚಿವ ಆರ್.ವಿ ದೇಶಪಾಂಡೆ ಕೆರೆ ವೀಕ್ಷಣೆ ವೇಳೆ ಮತ್ತೆ ಮೋದಿಗೆ ವೋಟ್ ವಿಚಾರ ಪ್ರತಿಧ್ವನಿಸಿದೆ. ಇಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಯಾದಗಿರಿ ಜಿಲ್ಲೆಯ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿದೆ.

    ಕಾಮಗಾರಿ ಪರಿಶೀಲನೆ ವೇಳೆ ಕೂಲಿಕಾರ್ಮಿಕರು, ನರೇಗಾ ಯೋಜನೆಯಡಿ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ದಿನಕ್ಕೆ 300 ರೂ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಕೂಲಿ ಹಣವನ್ನು ಭಾರತ ಸರ್ಕಾರ ಹೆಚ್ಚಳ ಮಾಡಬೇಕು, ಭಾರತ ಸರ್ಕಾರ ಅಂದರೆ ನಿಮಗೆ ಗೊತ್ತಾಗುತ್ತಾ ಎಂದು ಮರು ಪ್ರಶ್ನೆ ಮಾಡಿದರು.

    ಇದಕ್ಕೆ ಕೂಲಿಕಾರ್ಮಿಕರು ಭಾರತ ಸರ್ಕಾರ ಅಂದರೆ ಗೊತ್ತಿಲ್ಲ ಎಂದರು. ಅದಕ್ಕೆ ಮರು ಉತ್ತರ ನೀಡಿದ ಆರ್.ವಿ ದೇಶಪಾಂಡೆ, ಭಾರತ ಸರ್ಕಾರ ಅಂದರೆ ನಿಮಗೆ ಗೊತ್ತಾಗಲ್ಲ, ಮೋದಿ ಅಂದರೆ ನಿಮಗೆ ಗೊತ್ತಾಗುತ್ತದೆ, ನೀವು ಯಾರಿಗೆ ಮತ ಹಾಕಿದ್ದೀರ ಎಂದು ನಿಜ ಹೇಳಿ ಎಂದು ಮಹಿಳಾ ಕೂಲಿ ಕಾರ್ಮಿಕರನ್ನು ಕೇಳಿದರು. ಇದಕ್ಕೆ ನಾನು ಮೋದಿಗೆ ಮತ ಹಾಕಿದ್ದೇನೆ ಎಂದು ಮಹಿಳೆ ಧೈರ್ಯದಿಂದ ಸಚಿವರಿಗೆ ಉತ್ತರ ನೀಡಿದ್ದಾರೆ.

    ಇದಕ್ಕೂ ಮುನ್ನ ಆರ್.ದೇಶಪಾಂಡೆ ಅವರು ನಿಮಗೆ ಮನೆ ಇದೇಯಾ? ಮಳೆ ಆಗಿದೇಯಾ ಎಂದು ಮಹಿಳಾ ಕೂಲಿ ಕಾರ್ಮಿಕರ ಸಮಸ್ಯೆಗಳ ಆಲಿಸಿದರು. ಸಚಿವರಿಗೆ ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಎಂ.ಕೂರ್ಮರಾವ, ಜಿಲ್ಲಾ ಪಂಚಾಯತ್ ಸಿಇಒ ಕವಿತಾ ಮನ್ನಿಕೇರಿ ಸಾಥ್ ನೀಡಿದರು.

  • ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕನ್ನಡದ ಮೂವರು ಕ್ರಿಕೆಟ್ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ.

    ಈ ಕಾರ್ಯಕ್ರಮಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮೋದಿ ಅವರು ಆಹ್ವಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಆಹ್ವಾನಿಸಲಾಗಿದೆ.

    ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸುತ್ತೂರು ಮಠದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾದಾರ ಚೆನ್ನಯ್ಯ ಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್ ಭೈರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

    ಕ್ರೀಡಾ ವಿಭಾಗದಿಂದ ಮಾಜಿ ಓಟಗಾರ್ತಿ ಪಿ.ಟಿ ಉಷಾ, ಮತ್ತು ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ತರಬೇತುಗಾರ ಪುಲೆಲ್ಲಾ ಗೋಪಿಚಂದ್ ಮತ್ತು ಜಿಮ್ನಾಸ್ಟಿಕ್ ಆಟಗಾರ್ತಿ ದೀಪಾ ಕರ್ಮಕರ್ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮಕ್ಕೆ ನೆರೆಹೊರೆಯ ರಾಷ್ಟ್ರದ ಮುಖ್ಯಸ್ಥರು, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮತ್ತು ಚಲನಚಿತ್ರ ನಟರನ್ನು ಆಹ್ವಾನ ಮಾಡಲಾಗಿದೆ. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ಸಾವನ್ನಪ್ಪಿದ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಆಹ್ವಾನ ಮಾಡಲಾಗಿದೆ.

    ವಿದೇಶಿ ಗಣ್ಯರುಗಳಾಗಿ ಪ್ರಮಾಣ ವಚನ ಸ್ವೀಕರ ಸಭೆಗೆ ಬಿಮ್‍ಸ್ಟಿಕ್ (ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಇರುವ ಸಂಘಟನೆ) ಈ ಸಂಘಟನೆಯ ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶದ ಮುಖ್ಯಸ್ಥರು ಬರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

    ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನ ಮಾಡಲಾಗಿದೆ. ಇವರ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮಾರಂಭಕ್ಕೆ ಆಗಮಿಸಲಿದ್ದಾರೆ.

  • ಮೇ 30 ರಂದು ಮೋದಿ ಪ್ರಮಾಣ ವಚನ

    ಮೇ 30 ರಂದು ಮೋದಿ ಪ್ರಮಾಣ ವಚನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 30ರ ಗುರುವಾರ ಸಂಜೆ 7 ವೇಳೆಗೆ ಭಾರತದ ಪ್ರಧಾನಿಯಾಗಿ 2ನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಪ್ರಧಾನಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮೇ 30 ರಂದು ರಾಷ್ಟ್ರಪತಿ ಭವನ ನಡೆಯಲಿದೆ ಎಂದು ಹೇಳಿದ್ದಾರೆ.

    ಕಳೆದ ರಾತ್ರಿಯಷ್ಟೇ ಮೋದಿ ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು. ಈ ವೇಳೆ ರಾಷ್ಟ್ರಪತಿಗಳು ಸರ್ಕಾರ ರಚಿಸಲು ಮೋದಿ ಅವರಿಗೆ ಅವಕಾಶ ನೀಡಿದರು. ಪ್ರಧಾನಿ ಮೋದಿ ಅವರೊಂದಿಗೆ ಹೊಸದಾಗಿ ಯಾರು ಸಂಪುಟ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

    ಈ ಬಾರಿಯ ಸಂಪುಟದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಲಭಿಸುವ ಸಾಧ್ಯತೆ ಇದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಈ ಬಗ್ಗೆ ಮಾಹಿತಿಯನ್ನ ಬಹಿರಂಗ ಪಡಿಸಿಲ್ಲ. ಸಂಪುಟದ ಪ್ರಮುಖ ಖಾತೆಗಳಾದ ಗೃಹ, ಹಣಕಾಸು, ವಿದೇಶಾಂಗ ಮತ್ತು ರಕ್ಷಣಾ ಖಾತೆಗಳ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂಬ ಮಾಹಿತಿ ಲಭಿಸಿದೆ.

    ಅರುಣ್ ಜೇಟ್ಲಿ ಆರೋಗ್ಯ ಸಮಸ್ಯೆ ಇರುವುದರಿಂದ ಹಣಕಾಸು ಖಾತೆಯನ್ನ ಅವರಿಗೆ ನೀಡಲಾಗುತ್ತಾ ಅಥವಾ ಬದಲಾವಣೆ ಮಾಡುತ್ತಾರೆ ಎಂಬ ಬಗ್ಗೆ ತಿಳಿಯ ಬೇಕಿದೆ. ಮೊದಲ ಬಾರಿ ಲೋಕಸಭೆಗೆ ಆಯ್ಕೆ ಆಗಿರುವ ಸ್ಮೃತಿ ಇರಾನಿ ಅವರಿಗೆ ಪ್ರಮುಖ ಖಾತೆ ಲಭಿಸುವ ಸಾಧ್ಯತೆ ಇದೆ.

    ಉಳಿದಂತೆ 2014ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರನ್ನ ವಿಶೇಷ ಅತಿಥಿಗಳಾಗಿ ಆಹ್ವಾನ ಮಾಡಲಾಗಿತ್ತು. ಈ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರಿಗೂ ಆಹ್ವಾನ ನೀಡಲಾಗಿತ್ತು. ಈ ಬಾರಿಗೆ ಯಾರಿಗೆ ಆಹ್ವಾನ ನೀಡಲಾಗುತ್ತದೆ ಎಂಬ ಬಗ್ಗೆಯೂ ಕುತೂಹಲವಿದೆ.

  • ಮುಸ್ಲಿಂ ಮಹಿಳೆಯರ ಬೆಂಬಲ – ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಕಮಾಲ್

    ಮುಸ್ಲಿಂ ಮಹಿಳೆಯರ ಬೆಂಬಲ – ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಕಮಾಲ್

    ಅರುಣ್ ಬಡಿಗೇರ್
    ಪ್ರಧಾನಿ ನರೇಂದ್ರ ಮೋದಿ ಅವರು ಭಾರೀ ಬಹುಮತದೊಂದಿಗೆ 2ನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆ ಆಗಿ ದಾಖಲೆ ಬರೆದಿದ್ದಾರೆ. ಇತ್ತ ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಎಸ್‍ಪಿ, ಬಿಎಸ್‍ಪಿ ಮೈತ್ರಿ ಹಿನ್ನೆಲೆಯಲ್ಲಿ ಧೂಳಿಪಟ ಆಗಲಿದೆ ಎಂದು ಹಲವು ವಿಶ್ಲೇಷಣೆ ಮಾಡಿದ್ದರು. ಆದರೆ ಬಿಜೆಪಿ ಮತ್ತೆ ಉತ್ತರ ಪ್ರದೇಶದಲ್ಲಿ ಕಮಾಲ್ ಮಾಡಿದ್ದು, ಈ ಸಾಧನೆಗೆ ಅಲ್ಲಿನ ಮುಸ್ಲಿಂ ಮಹಿಳೆಯ ಬೆಂಬಲ ಕಾರಣವಾಗಬಹುದೇ ಎನ್ನುವ ಅನುಮಾನ ಎದ್ದಿದೆ.

    ಯುಪಿಯಲ್ಲಿ 80 ಲೋಕಸಭೆ ಸೀಟುಗಳನ್ನ ಹೊಂದಿರುವ ಬಿಜೆಪಿಗೆ ಅಲ್ಲಿನ ಮಹಾಮೈತ್ರಿ ಭಾರೀ ಪೈಪೋಟಿ ನೀಡಿತ್ತು. ಆದರೆ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿದ್ದು ಮುಸ್ಲಿಂ ಸಮುದಾಯ ಕುಟುಂಬದಲ್ಲಿ ಭಾರೀ ಚರ್ಚೆ ನಡೆದಿದ್ದ ವಿಚಾರ ಬುಲೆಟ್ ರಿಪೋರ್ಟಿಂಗ್ ವೇಳೆ ಬೆಳಕಿಗೆ ಬಂದಿತ್ತು.

    2011ರ ಜನಸಂಖ್ಯೆ ಆಧಾರವಾಗಿ ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗಗಳು(ಒಬಿಸಿ) ಒಟ್ಟು ಶೇ.44, ದಲಿತರು ಶೇ.21.01, ಮೇಲ್ವರ್ಗದವರು ಶೇ.16, ಮುಸ್ಲಿಮರು ಶೇ.19.3, ಕ್ರೈಸ್ತರು ಶೇ.0.18 ರಷ್ಟಿದೆ. ಈ ಜಾರಿ ಲೆಕ್ಕಾಚಾರ ಮೇಲೆಯೇ ಎಸ್‍ಪಿ, ಬಿಎಸ್‍ಪಿ ಮೈತ್ರಿ ಆಗಿತ್ತು.

    ಉತ್ತರ ಪ್ರದೇಶದಲ್ಲಿದ್ದ ಮುಸ್ಲಿಂ ಮಹಿಳೆಯರನ್ನ ಮಾತನಾಡಿಸಿದಾಗ ನೇರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದರು. ಆದರೆ ಆಫ್ ದಿ ರೆಕಾರ್ಡ್ ವೇಳೆ ಮೋದಿ ಪರ ಒಲವು ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಪುಷ್ಠಿ ನೀಡುವಂತೆ ಕುಟುಂಬಗಳಲ್ಲಿ ಮತ ಚಲಾವಣೆ ವಿಚಾರದಲ್ಲಿ ದೊಡ್ಡ ಜಗಳಗಳೇ ನಡೆದಿದೆ ಎಂದು ಮುಸ್ಲಿಂ ಪುರುಷರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

    ತಲಾಖ್ ವಿಚಾರದಲ್ಲಿ ಹಾಗೂ ಬಹುಪತ್ನಿತ್ವ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಧಾರದಿಂದ ಮುಸ್ಲಿಂ ಸಮುದಾಯದ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಎಷ್ಟೋ ಮನೆಗಳಲ್ಲಿ ಮಹಿಳೆಯರು ತಮ್ಮ ಗಂಡಂದಿರ ವಿರುದ್ಧ ಜಗಳ ಮಾಡಿ ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದರು. ಎಷ್ಟೋ ಕುಟುಂಬಗಳಲ್ಲಿ ಮತ ಚಲಾವಣೆ ವಿಚಾರದಲ್ಲಿ ಗಲಾಟೆ ನಡೆದಿದೆ. ನಮ್ಮ ಧ್ವನಿಯಾಗಿದ್ದಾರೆ ಅಂತ ಮೋದಿ ಬಗ್ಗೆ ಮುಸ್ಲಿಂ ಮಹಿಳೆಯರು ತಿಳಿಸಿದ್ದರು.

    ಮೋದಿಗೆ ವೋಟು ಒತ್ತುವ ಭಯದಿಂದಲೇ ಬಹಳಷ್ಟು ಮುಸ್ಲಿಂ ಪುರುಷರು ತಮ್ಮ ಹೆಣ್ಮಕ್ಕಳನ್ನ ಮನೆಯಲ್ಲೇ ಕೂಡಿ ಹಾಕಿ ಮತಚಲಾವಣೆ ಮಾಡಿದ್ದರು. ಯಾವಾಗ ಮಹಿಳೆಯರು ಬಿಜೆಪಿ ಪರ ನಿಂತಿರೋದು ಗೊತ್ತಾಯ್ತೋ ಮುಸ್ಲಿಂ ಸಮುದಾಯದ ನಾಯಕರು ಫತ್ವಾ ಹೊರಡಿಸಿದ್ದರು. ಮಹಿಳೆಯರಿಗೆ ಮತದಾನ ಮಾಡಿಸದಂತೆ ಕುಟುಂಬಗಳಿಗೆ ಗುಪ್ತವಾಗಿ ಫತ್ವಾ ಹೊರಡಿಸಿದ್ದರು ಎನ್ನುವ ವಿಚಾರವನ್ನು ಹಲವು ಮುಸ್ಲಿಂ ಪುರುಷರು ಬಹಿರಂಗ ಪಡಿಸಿದ್ದರು.

    ಕೇವಲ ಮುಸ್ಲಿಂ ಮಹಿಳೆಯರ ಶಕ್ತಿ ಒಂದೇ ಮೋದಿಗೆ ಸಿಕ್ಕಿಲ್ಲ. ಬೇರೆ ಜಾತಿ, ಧರ್ಮದ ಬಡ ವರ್ಗದ ಸ್ತ್ರೀ ಶಕ್ತಿಯೂ ಮೋದಿಗೆ ಸಿಕ್ಕಿದೆ. ಇದು ನಮ್ಮ ಉತ್ತರ ಪ್ರದೇಶದ ಪಯಣದಲ್ಲಿ ಕಂಡು ಬಂದ ಸತ್ಯಾಂಶ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದ ಕಾರಣ ಕೇಂದ್ರ ಸರ್ಕಾರ ಹಲವು ಯೋಜನೆಗಳು ಇಲ್ಲಿನ ಮಹಿಳೆಯರನ್ನು ತಲುಪಿತ್ತು. ಉಜ್ವಲಾ ಯೋಜನೆಯ ಬಗ್ಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣದಿಂದಾಗಿ ಮೋದಿ ಅವರಿಗೆ ಬಹುದೊಡ್ಡ ಮಟ್ಟದಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳಾ ಶಕ್ತಿ ವರದಾನವಾಗಿದೆ.

    ಇದರ ಜೊತೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರಿಂದ ಮಹಾ ಮೈತ್ರಿ ಕೂಟದ ಮತಗಳು ವಿಭಜನೆ ಆಗಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಬಿಜೆಪಿ ಗಳಿಸಿದ್ದೇಷ್ಟು?
    ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಮೈತ್ರಿ ಅಪ್ನಾ ದಳ್ (ಎಸ್) ಪಕ್ಷಗಳು ಒಟ್ಟಾರೆ 60 ಸ್ಥಾನ ಗೆಲುವು ಪಡೆದಿದ್ದು, ಎಸ್‍ಪಿ-ಬಿಎಸ್‍ಪಿ 15 ಸ್ಥಾನ ಪಡೆದಿದೆ. ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋಲುಂಡಿದ್ದು, ರಾಯ್ ಬರೇಲಿಯಲ್ಲಿ ಸೋನಿಯಾ ಅವರಿಗೆ ಮಾತ್ರ ಗೆಲುವು ಸಿಕ್ಕಿದೆ.

  • ಮನೆಯಲ್ಲಿದ್ದವರು 9 ಮಂದಿ, ಬಂದಿದ್ದು 5 ಮತ ಮಾತ್ರ – ಕಣ್ಣೀರಿಟ್ಟ ಅಭ್ಯರ್ಥಿ

    ಮನೆಯಲ್ಲಿದ್ದವರು 9 ಮಂದಿ, ಬಂದಿದ್ದು 5 ಮತ ಮಾತ್ರ – ಕಣ್ಣೀರಿಟ್ಟ ಅಭ್ಯರ್ಥಿ

    ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೂ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ರಷ್ಟು ಮತಗಳನ್ನು ಪಡೆದಿದೆ. ಆದರೆ ಪಂಜಾಬ್ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದಿದ್ದು, ಕಣ್ಣೀರು ಹಾಕಿದ್ದಾರೆ.

    ನೀತು ಶುಟ್ಟರ್ನ್ ವಾಲಾ ಕಣ್ಣೀರು ಹಾಕಿದ ಅಭ್ಯರ್ಥಿ. ಇವರು ಪಂಜಾಬ್‍ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮತ ಎಣಿಕೆಯಲ್ಲಿ ಕೇವಲ 5 ಮತಗಳನ್ನು ಪಡೆದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತಮಗೆ ಐದು ಮತಗಳು ಬಂದಿದ್ದಕ್ಕೆ ಅವರು ಕಣ್ಣೀರು ಹಾಕಿರಲಿಲ್ಲ. ಅವರ ಕುಟುಂಬದವರೇ ತಮಗೆ ವೋಟು ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.

    ವಾಲಾ ನೀಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ಯಾಮೆರಾ ಮುಂದೆಯೇ ಗಳಗಳನೇ ಅತ್ತಿದ್ದಾರೆ. ನನಗೆ ಐದು ಮತ ಬಂದಿದ್ದಕ್ಕೆ ನೋವಾಗಿಲ್ಲ. ಆದರೆ ನಮ್ಮೆ ಮನೆಯಲ್ಲಿ 9 ಮಂದಿ ಇದ್ದಾರೆ. ಅವರೇ ನನಗೆ ಮತ ಹಾಕಿಲ್ಲ. ಇದರಿಂದ ನನಗೆ ನೋವಾಗಿದೆ ಎಂದು ಕುಟುಂಬದವರ ಮೇಲೆ ಆರೋಪ ಮಾಡಿದ್ದಾರೆ. ಜೊತೆಗೆ ಇವಿಎಂ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

    ವಾಲಾ ಅವರು ಸಂದರ್ಶನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.

  • ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿದ್ದೇನೆ: ಸನ್ನಿ ಲಿಯೋನ್

    ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿದ್ದೇನೆ: ಸನ್ನಿ ಲಿಯೋನ್

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ ಎಂದು ಟ್ವೀಟ್ ಮಾಡುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ನಿರೂಪಕರೊಬ್ಬರು ತಮ್ಮ ಡಿಬೇಟ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಸದ್ಯ ಈ ವೈರಲ್ ವಿಡಿಯೋ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯಿಸಿದ್ದಾರೆ. ಸನ್ನಿ ಲಿಯೋನ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ?” ಎಂದು ಟ್ವೀಟ್ ಮಾಡಿ ನಿರೂಪಕನ ಕಾಲೇಳೆದಿದ್ದಾರೆ. ಸನ್ನಿ ಲಿಯೋನ್ ಪ್ರತಿಕ್ರಿಯೆಗೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರೀ-ಟ್ವೀಟ್ ಮಾಡಿದ್ದಾರೆ.

    ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್‍ನ ಗುರ್ದಾಸ್‍ಪುರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸನ್ನಿ ಡಿಯೋಲ್ ಈ ಚುನಾವಣೆಯಲ್ಲಿ 82,459 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಕಾ ವಿರುದ್ಧ ಸ್ಪರ್ಧಿಸಿದ್ದರು.

  • ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಸಂಖ್ಯಾಬಲ ಕುಸಿತ!

    ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಸಂಖ್ಯಾಬಲ ಕುಸಿತ!

    ಬೆಂಗಳೂರು: ಇಡೀ ದೇಶವೇ ಕಾಯುತ್ತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮೊತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಇದರ ನಡುವೆ ದೋಸ್ತಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಸಂಖ್ಯಾಬಲ ಕುಸಿದಿದೆ.

    ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿ ಪಕ್ಷ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನವನ್ನು ಗೆದ್ದಿತ್ತು. ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ 80ರಿಂದ 79ಕ್ಕೆ ಕುಸಿದಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಬಹುಮತ 117ಕ್ಕೆ ಕುಸಿತವಾಗಿದೆ.

    ಬಹುಮತಕ್ಕೂ ಸಮ್ಮಿಶ್ರ ಸರ್ಕಾರದ ಬಲಾಬಲಕ್ಕೂ ಕೇವಲ 5 ಸೀಟುಗಳ ಅಂತರ ಮಾತ್ರ ಇದೆ. ಹಾಗಾಗಿ ಬಿಜೆಪಿ ಈಗಾಗಲೇ ನಮ್ಮಲ್ಲಿ 20 ಶಾಸಕರಿದ್ದಾರೆ ಎಂದು ಹೇಳುತ್ತಿದೆ. ಒಂದು ವೇಳೆ ಆಪರೇಷನ್ ಮೂಲಕ ಐವರು ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿದರೆ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ದೋಸ್ತಿಗಳಲ್ಲಿ ಆತಂಕ ಶುರುವಾಗಿದೆ.

    ಒಂದು ವೇಳೆ ದೋಸ್ತಿ ಸರ್ಕಾರದಲ್ಲಿ ಬಹುಮತ ಕುಸಿದರೆ, ಬಿಜೆಪಿ ತಕ್ಷಣ ರಾಜ್ಯಪಾಲರನ್ನು ಭೇಟಿಯಾಗಿ ಈ ಸರ್ಕಾರಕ್ಕೆ ಬಹುಮತವಿಲ್ಲ, ಅಲ್ಪಮತದಿಂದ ಸರ್ಕಾರ ನಡೆಸುತ್ತಿದೆ. ಹೀಗಾಗಿ ತುರ್ತಾಗಿ ವಿಶ್ವಾಸ ಮತಯಾಚನೆ ಮಾಡುವಂತೆ ಒತ್ತಾಯ ಏರುವ ಸಾಧ್ಯತೆಯೂ ದಟ್ಟವಾಗಿದೆ.

  • ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಕಲಬುರಗಿ: ಭಾನುವಾರ ನಡೆಯಲಿರುವ ಚಿಂಚೋಳಿ ಉಪಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಲಿದೆ. ಎರಡೂ ಪಕ್ಷಗಳು ತೆರೆಮರೆಯಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾದ ಆಡಿಯೋ ಒಂದು ಬಿಡುಗಡೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಖತ್ ವೈರಲ್ ಆಗಿದೆ.

    ಚಿಂಚೋಳಿ ಬಿಜೆಪಿ ಮುಖಂಡ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೊಬ್ಬರು ನಡೆಸಿದ್ದಾರೆ ಎನ್ನಲಾಗುವ ಆಡಿಯೋ ಸಂಭಾಷಣೆಯಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಯಾರು ಯಾರಿಗೇ ಹಣ ಕೊಟ್ಟಿದ್ದೇವೆ. ಎಷ್ಟು ಎಷ್ಟು ಹಣ ಕೊಡಲಾಗುತ್ತಿದೆ?. ಯಾರಿಗೆ ಹಣ ನೀಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ಸ್ಥಳೀಯ ಬಿಜೆಪಿ ಮುಖಂಡ ಆಡಿಯೋ ನಲ್ಲಿ ಬಿಚ್ಚಿಟ್ಟಿದ್ದಾರೆ. ಈ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಚರ್ಚೆಗೆ ಒಳಪಟ್ಟಿದೆ. ಆದ್ರೆ ಈ ಕುರಿತು ಯಾವುದೇ ನಾಯಕರು ಪ್ರತಿಕ್ರಿಯೆಯನ್ನ ನೀಡಿಲ್ಲ.

    ಈ ಉಪಚುನಾವಣೆ ಎರಡು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಸುಭಾಷ್ ರಾಥೋಡ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧಾವ್ ಸ್ಪರ್ಧೆಯಲ್ಲಿದ್ದಾರೆ.

  • ಬಿಜೆಪಿ ಸರ್ಕಾರ ಬೀಳುವುದು ಸ್ಪಷ್ಟ: ಪ್ರಿಯಾಂಕ ಗಾಂಧಿ

    ಬಿಜೆಪಿ ಸರ್ಕಾರ ಬೀಳುವುದು ಸ್ಪಷ್ಟ: ಪ್ರಿಯಾಂಕ ಗಾಂಧಿ

    ನವದೆಹಲಿ: ಬಿಜೆಪಿ ಸರ್ಕಾರ ಬೀಳುವುದು ಸ್ಪಷ್ಟವಾಗಿದೆ ಎಂದು ಉತ್ತರ ಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

    ಪ್ರಿಯಾಂಕ ಗಾಂಧಿ ಅವರು ಪತಿ ರಾಬರ್ಟ್ ವಾದ್ರಾ ಜೊತೆಗೆ ದೆಹಲಿಯ ಲೋಧಿ ಎಸ್ಟೇಟ್ ಬೂತ್‍ಗೆ ಬಂದು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ದೇಶದ ಜನರು ತೊಂದರೆ ಅನುಭವಿಸಿದರು. ಮತದಾನದ ಮೂಲಕ ತಮ್ಮ ಕೋಪವನ್ನು ಹೊರ ಹಾಕಲಿದ್ದಾರೆ. ಬಿಜೆಪಿ ಸೋಲು ಅನುಭವಿಸಲಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ನೈಜ ವಿಷಯಗಳ ಕುರಿತು ಮಾತನಾಡುತ್ತಿಲ್ಲ. ಗೊತ್ತುಗುರಿಯಿಲ್ಲದ ವಿಚಾರಗಳ ಬಗ್ಗೆ ಭಾಷಣ ಮಾಡುತ್ತಾರೆ. ಇದು ಪ್ರಮುಖ ಚುನಾವಣೆಯಾಗಿದ್ದು, ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ ಎಂದರು.

    ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನವು ಇಂದು ಪಶ್ಚಿಮ ಬಂಗಾಳ, ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶಸಲ್ಲಿ ನಡೆಯುತ್ತಿದೆ. ಕೊನೆ ಹಂತದ ಮತದಾನವು ಮೇ 19ರಂದು ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.

  • ಒಂದು ಲಕ್ಷಕ್ಕೆ ಒಂದು ವೋಟ್ ಸೇಲ್!

    ಒಂದು ಲಕ್ಷಕ್ಕೆ ಒಂದು ವೋಟ್ ಸೇಲ್!

    ಕೋಲಾರ: ಇದು ಲೋಕಸಭೆ ಎಲೆಕ್ಷನೂ ಇಲ್ಲ, ಅಸೆಂಬ್ಲಿ ಎಲೆಕ್ಷನೂ ಇಲ್ಲ. ನೂರು ಸಾವಿರ ರೂಪಾಯಿಗೆ ಇಲ್ಲಿ ಬೆಲೆನೇ ಇಲ್ಲ. ಏನಿದ್ದರೂ ಲಕ್ಷ ರೂಪಾಯಿಯದ್ದೇ ಹವಾ. ಅಂದಹಾಗೆ ಇದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರ ಹುದ್ದೆಗೆ ನಡೀತಿರುವ ಎಲೆಕ್ಷನ್‍ನ ಅಸಲಿಯತ್ತು.

    ಮೇ 13ರಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸಂಘದ ಚುನಾವಣೆ ನಡೆಯಲಿದೆ. ಎರಡೂ ಜಿಲ್ಲೆಯಿಂದ ಒಟ್ಟು 1,364 ಮತದಾರರಿದ್ದಾರೆ. ಇವರಿಗೆ ಈಗ ಹಬ್ಬವೋ ಹಬ್ಬ. ಸಂಘದ ಒಬ್ಬೊಬ್ಬ ಸದ್ಯಸ್ಯನಿಗೂ ಒಂದೊಂದು ವೋಟಿಗೆ ಕಮ್ಮಿ ಅಂದ್ರೂ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಆಮಿಷ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

    ಪ್ರತಿ ಹಾಲು ಉತ್ಪಾದಕರ ಸಂಘದ ಒಬ್ಬರಿಗೆ ಮತದಾನದ ಹಕ್ಕಿದ್ದು, ಮತದಾನಕ್ಕೂ ಮೊದಲು ಡೆಲಿಗೇಷನ್ ಫಾರಂ ಹಾಗೂ ಗುರುತಿನ ಚೀಟಿಯನ್ನು ಕಾರ್ಯದರ್ಶಿ ಮೂಲಕ ನೀಡಲಾಗುತ್ತದೆ. ಹಾಗಾಗಿ ಕಾರ್ಯದರ್ಶಿಗೆ ಒಂದು ವಾಚ್‍ನ್ನು ಗಿಫ್ಟ್ ಆಗಿ ಕೊಡಲಾಗುತ್ತೆ. ಅಧ್ಯಕ್ಷರಿಗೆ ಮತ ಒಂದಕ್ಕೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ನಿಗದಿ ಮಾಡಲಾಗಿದೆ. ಪರಿಣಾಮ ಅಧ್ಯಕ್ಷರುಗಳ ಡೆಲಿಗೇಷನ್ ಫಾರಂ ಹಾಗೂ ಗುರುತಿನ ಚೀಟಿಯನ್ನೇ ಕಳವು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

    ಈಗಾಗಲೇ ಸುಮಾರು ಜನ ಅಧ್ಯಕ್ಷರುಗಳು ತಮ್ಮ ಗುರುತಿನ ಚೀಟಿ ಹಾಗೂ ಡೆಲಿಗೇಷನ್ ಫಾರಂ ಕಳೆದಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇತರರಿಂದ ಹೆಚ್ಚಿನ ಆಮಿಷಗಳು ಬಂದಿರುವ ಸಾಧ್ಯತೆ ಇದ್ದು, ಅದನ್ನ ಮಾರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಜಿಲ್ಲೆಯ ಕೋಲಾರ ಹಾಗೂ ಮಾಲೂರು ತಾಲೂಕಿನ ನಿರ್ದೇಶಕರ ಸ್ಥಾನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಟಾಗಿದ್ದು, ಮಾಲೂರು ತಾಲ್ಲೂಕಿನ ಮಲಿಯಪ್ಪನಹಳ್ಳಿ, ಜಯಮಂಗಲ ಹಾಗೂ ಮಲಿಕನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರುಗಳು ತಮ್ಮ ಡೆಲಿಗೇಷನ್ ಫಾರಂ ಹಾಗೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಕಳೆದು ಕೊಂಡಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಮತದಾನ ಮಾಡಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಚುನಾವಣಾಧಿಕಾರಿಗೆ ಕೆಲವರು ಮನವಿ ಮಾಡಿದ್ದಾರೆ. ಅಲ್ಲದೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಗಳು ಗುರುತಿನ ಚೀಟಿಯನ್ನು ಕಳೆದಿರುವ ಬಗ್ಗೆ ಅಥವಾ ಅದನ್ನು ದುರುಪಯೋಗ ಪಡಿಸಿಕೊಂಡಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಆರೋಪಗಳು ಸಾಬೀತಾಗಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಎಚ್ಚರಿಕೆಯನ್ನು ಚುನಾವಣಾಧಿಕಾರಿಗಳು ನೀಡಿದ್ದಾರೆ.