Tag: volcano

  • ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 11 ಸಾವು, 12 ಪರ್ವತಾರೋಹಿಗಳು ನಾಪತ್ತೆ

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 11 ಸಾವು, 12 ಪರ್ವತಾರೋಹಿಗಳು ನಾಪತ್ತೆ

    ಜಕಾರ್ತ: ಇಂಡೋನೇಷ್ಯಾದ (Indonesia) ಮೌಂಟ್ ಮರಾಪಿಯಲ್ಲಿ (Mount Marapi) ಜ್ವಾಲಾಮುಖಿ (Volcano) ಸ್ಫೋಟಗೊಂಡಿದ್ದು, ಈ ವೇಳೆ 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಭಾನುವಾರ ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಸಂದರ್ಭ ಅಲ್ಲಿ 75 ಜನರು ಇದ್ದರು. ಜ್ವಾಲಾಮುಖಿ ಸ್ಫೋಟದ ಬಳಿಕ ರಕ್ಷಣಾ ತಂಡಗಳು ಧಾವಿಸಿದ್ದು, ಅದರಲ್ಲಿ 14 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಮೊದಲು ನಾಪತ್ತೆಯಾಗಿದ್ದವರಲ್ಲಿ ಮೂವರನ್ನು ಜೀವಂತವಾಗಿ ಪತ್ತೆ ಮಾಡಿದ್ದೇವೆ. 11 ಜನರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.

    ಭಾನುವಾರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜ್ವಾಲಾಮುಖಿಯಿಂದಾದ ದಟ್ಟವಾದ ಹೊಗೆ ಆಕಾಶದಲ್ಲಿ ಹರಡಿರುವುದು, ರಸ್ತೆ, ವಾಹನಗಳು ಜ್ವಾಲಾಮುಖಿಯ ಬೂದಿಯಿಂದ ಆವೃತವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ಇಂಡೋನೇಷ್ಯಾ ಪೆಸಿಫಿಕ್ ಸಾಗರದ ರಿಂಗ್ ಆಫ್ ಫೈರ್‌ನ ಅಂಚಿನಲ್ಲಿ ಬರುತ್ತದೆ. ದೇಶದ ಜ್ವಾಲಾಮುಖಿ ಏಜೆನ್ಸಿಯ ಪ್ರಕಾರ ಮೌಂಟ್ ಮರಾಪಿ ಸುಮಾರು 2,891 ಅಡಿ ಎತ್ತರದಲ್ಲಿದ್ದು, ಇದೇ ರೀತಿಯ 127 ಸಕ್ರಿಯ ಜ್ವಾಲಾಮುಖಿಗಳು ಈ ಪ್ರದೇಶದಲ್ಲಿದೆ. ಇದನ್ನೂ ಓದಿ: ಕೂಟಿಯಾಲ ಹೊಳೆಯಲ್ಲಿ ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

  • ಹೊಳೆಯಂತೆ ಹರಿದ ಲಾವಾರಸ – ಡ್ರೋನ್‍ನಲ್ಲಿ ಜ್ವಾಲಾಮುಖಿ ಸ್ಫೋಟ ಸೆರೆ

    ಹೊಳೆಯಂತೆ ಹರಿದ ಲಾವಾರಸ – ಡ್ರೋನ್‍ನಲ್ಲಿ ಜ್ವಾಲಾಮುಖಿ ಸ್ಫೋಟ ಸೆರೆ

    ಫಾಗ್ರಾಡಾಲ್ಸ್: ಜ್ವಾಲಾಮುಖಿ ಸ್ಫೋಟದ ವೀಡಿಯೋದಲ್ಲಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂಗರ್ಭದಿಂದ ಹೊರ ಬಂದ ಲಾವಾರಸ ಹೊಳೆಯಂತೆ ಹರಿದಿರೋ ಭಯಾನಕ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಂಥೋನಿ ಕ್ವಿಂಟನೋ ಫೋಟೋಗ್ರಾಫಿ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, 30 ಸಾವಿರಕ್ಕೂ ಅಧಿಕ ಬಾರಿ ರೀಟ್ವಿಟ್ ಆಗಿದೆ. ಈ ಜ್ವಾಲಾಮುಖಿ ನೋಡಲು ಸ್ಥಳೀಯರು ಸೇರಿದಂತೆ ದೂರ ದೂರಿಂದ ಬಂದಂತಹ ಛಾಯಾಗ್ರಾಹಕರ ಸ್ಫೋಟದ ಸಮೀಪ ತೆರಳಿ, ಅದರ ರೌದ್ರತೆಯನ್ನ ಕಂಡು ಹಿಂದಿರುಗಿದ್ದಾರೆ. ಡ್ರೋನ್ ನಿಂದ ಈ ಎಲ್ಲ ಲಾವಾರಸ ಹರಿಯೋದನ್ನ ಸೆರೆ ಹಿಡಿಯಲಾಗಿದೆ.

    ಫಾಗ್ರಾಡಾಲ್ಸ್ ಫಾಲ್ ಐಲ್ಯಾಂಡ್ ಪರ್ವತದ ಮೇಲಿರುವ ಈ ಜ್ವಾಲಾಮುಖಿ ಸುಮಾರು ಆರು ಸಾವಿರ ವರ್ಷಗಳಿಂದ ಶಾಂತವಾಗಿತ್ತು. ಸ್ಫೋಟಕ್ಕೂ ಮುನ್ನ ಜ್ವಾಲಾಮುಖಿಯ ಪ್ರಖರತೆ ಮಿಂಚು ರೇಕ್ ಜಾವಿಕ್ ನಿಂದ ಗೋಚರಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಜ್ವಾಲಾಮುಖಿ ಸ್ಫೋಟವಾದ ಸ್ಥಳದಿಂದ ಸುಮಾರು 30 ರಿಂದ 32 ಕಿಲೋ ಮೀಟರ್ ವರೆಗೆ ಇದರ ಶಾಖವಿತ್ತು ಎಂದು ವರದಿಯಾಗಿದೆ.

    https://twitter.com/AnthonyQuintano/status/1373787472493170695

  • ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟ- ಹೀಟ್ ವೇವ್ ವಿಜ್ಞಾನಿಗಳು ಆತಂಕ

    ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟ- ಹೀಟ್ ವೇವ್ ವಿಜ್ಞಾನಿಗಳು ಆತಂಕ

    ಬೆಂಗಳೂರು: ಫೆಬ್ರವರಿ ತಿಂಗಳಿನಿಂದ ಜನರ ಜೀವಕ್ಕೆ ಅಪಾಯವೆಸಗುವ “ದಿ ಮೋಸ್ಟ್ ಡೇಂಜರಸ್ ಸೂರ್ಯ ಶಿಕಾರಿ” ಎಲ್ಲರನ್ನೂ ಕಾಡಲಿದೆ. ಏಕೆಂದರೆ ಎರಡೆರಡು ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಹೀಟ್ ವೇವ್ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಜನವರಿ ಅಂತ್ಯದ ಬಿಸಿಲು ಭರ್ತಿ 150 ವರ್ಷದ ಇತಿಹಾಸವನ್ನು ಪುಡಿಗಟ್ಟಿತ್ತು. ಜನವರಿಯ ಬಿಸಿಲು 150 ವರ್ಷದಲ್ಲಿಯೇ ದಾಖಲೆಯ ಬಿಸಿಲು. ಇನ್ನು ಸಣ್ಣಗೆ ಚಳಿ ಇರಬೇಕಾಗಿದ್ದ ಫೆಬ್ರವರಿಯಲ್ಲಿ ಸೂರ್ಯನ ಬಿಸಿಲು ನೆತ್ತಿ ಸುಡುತ್ತಿದೆ. ಜನ ಈಗಲೇ ಬೆವರು ಒರೆಕೊಳ್ಳುವಂತಾಗಿದೆ.

    ಈ ಬಾರಿ ನಿಮಗೆ ಸೂರ್ಯ ನರಕ ದರ್ಶನ ಮಾಡಿಸಲಿದ್ದಾನೆ ಎನ್ನಲಾಗಿದೆ. ಹಾಗಂತ ಬೇಸಿಗೆ ಯುದ್ಧಕ್ಕೂ ಬಿಸಿಲ ಬೇಗೆ ಇರಲ್ಲ. ಬದಲಾಗಿ ಒಂದೊಂದು ದಿನ ಒಂದೊಂದು ರೀತಿಯ ವಾತಾವರಣ ಕಂಡು ಬರಲಿದೆ ಎಂದು ಹೇಳಲಾಗುತ್ತಿದ್ದು, ಇದು ವಿಜ್ಞಾನಿಗಳನ್ನೇ ಆತಂಕಕ್ಕೀಡು ಮಾಡಿದೆ. ಒಂದು ದಿನ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಬಿಸಿಲು ಬೆಂಗಳೂರು ಸೇರಿದಂತೆ ಇಡೀ ಕರುನಾಡನ್ನು ಕಾಡಲಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

    ಪಿಲಿಫೈನ್ಸ್, ನ್ಯೂಜಿಲ್ಯಾಂಡ್, ಸುಮಾತ್ರ ಹೀಗೆ ನಾನಾ ಕಡೆ ಈ ಬಾರಿ ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟವಾಗುತ್ತಿದೆ. ಈ ಸ್ಫೋಟದ ತೀವ್ರತೆಯ ಪರಿಣಾಮ ಅದ್ಯಾವ ಪರಿ ಇರುತ್ತೆ ಎಂದರೆ, ಇಡೀ ಬೇಸಿಗೆಯನ್ನು ಜನರ ಪಾಲಿಗೆ ನರಕವನ್ನಾಗಿಸುತ್ತೆ ಎನ್ನಲಾಗಿದೆ. ಒಂದಿನ ಅಸಾಧ್ಯ ಎನ್ನುವ ಬಿಸಿಲು, ಇನ್ನೊಂದು ದಿನ ಚಳಿ, ಇದರಿಂದ ಕಾಯಿಲೆಗಳು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

    ಅದರಲ್ಲೂ ಆಕಾಶ ಚುಂಬಿಸುವಂತೆ ಭೂಮಿಯಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವುದರಿಂದ ಕಪ್ಪು ಅನಿಲ ವಿಷ ಅನಿಲವನ್ನು ಹೊರ ಸೂಸುತ್ತಿದೆ. ಹೀಗಾಗಿ ರಣಭೀಕರ ಕಾಯಿಲೆಗಳು ಬರಲಿದೆ ಎಂದು ಭೂಗರ್ಭ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಜ್ವಾಲಾಮುಖಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ಅಮೆರಿಕ ದಂಪತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಜೋಡಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ.

    ಪ್ರತಾಪ್ ಸಿಂಗ್ ಹಾಗೂ ಮಯೂರಿ ಸಿಂಗ್ ಮೃತಪಟ್ಟ ದಂಪತಿ. ಪ್ರತಾಪ್ ಹಾಗೂ ಮಯೂರಿ ಡಿ. 9ರಂದು ರಜೆ ದಿನಗಳನ್ನು ಕಳೆಯಲು ನ್ಯೂಜಿಲೆಂಡ್‍ನ ವೈಟ್ ಐಲ್ಯಾಂಡ್‍ಗೆ ತೆರೆಳಿದ್ದರು. ಈ ವೇಳೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಮಯೂರಿ ಹಾಗೂ ಪ್ರತಾಪ್ ಗಂಭೀರವಾಗಿ ಗಾಯಗೊಂಡಿದ್ದರು. ಮಯೂರಿ ಡಿ. 22ರಂದು ಮೃತಪಟ್ಟರೆ, ಪ್ರತಾಪ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಪ್ರತಾಪ್ ಅವರು ಕೂಡ ಆಕ್ಲೆಂಡ್ ನಲ್ಲಿರುವ ಮಿಡಿಲ್‍ಮೋರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಪ್ರತಾಪ್ ಅವರ ಸಾವಿನ ನಂತರ ಜ್ವಾಲಾಮುಖಿಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ಮಯೂರಿ ಮೃತಪಟ್ಟ ಆಸ್ಪತ್ರೆಯಲ್ಲೇ ಪ್ರತಾಪ್ ಕೂಡ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಪ್ರತಾಪ್ ಅವರ ದೇಹ ಅರ್ಧದಷ್ಟು ಸುಟ್ಟು ಹೋಗಿದೆ. ಜ್ವಾಲಾಮುಖಿ ಸ್ಫೋಟಿಸಿದಾಗ ಅಲ್ಲಿ 47 ಮಂದಿ ಇದ್ದು, ಅದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವು ಮಂದಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.

    ಈ ಜೋಡಿಯ 11 ವರ್ಷ ಮಗ ಹಾಗೂ 6 ವರ್ಷದ ಅವಳಿ ಹೆಣ್ಣು ಮಕ್ಕಳು ರಾಯಲ್ ಕೆರಿಬಿಯನ್ ಕ್ರೂಸ್ ಶಿಪ್‍ನಲ್ಲಿ ಸಂಚರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈಗ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು, ಮಕ್ಕಳು ಅನಾಥರಾಗಿದ್ದಾರೆ.

  • ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

    ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

    ಬೆಂಗಳೂರು: ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದ್ದು, ಸೂರ್ಯ ಮರೆಯಾಗುತ್ತಿದ್ದಾನೆ. ಮೈ ಕೊರೆಯುವ ಚಳಿ ಆರಂಭವಾಗುವ ಟೈಂನಲ್ಲಿ ವರ್ಷ ಪೂರ್ತಿ ವರ್ಷಧಾರೆಯ ಸಿಂಚನ. ವಾತಾವರಣ ಈ ಪರಿ ಬದಲಾಗುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆಲ್ಲ ವಿಜ್ಞಾನಿಗಳು ಬೆಚ್ಚಿಬೀಳುವ ಕಾರಣ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯದ ಹಿಂದೆ ಅರಬ್ಬೀ, ಬಂಗಾಳಕೊಲ್ಲಿಯ ಸಮುದ್ರಾಳದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಭೂಕಂಪ ಸೃಷ್ಟಿಯಾಗುತ್ತಿದ್ದು, ಇದು ಪ್ರಾಕೃತಿಕ ಬದಲಾವಣೆಗೂ ಕಾರಣವಾಗಿದೆ. ಹಾಗಾಗಿಯೇ ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಚ್ಚಿದ ವಾತಾವರಣ ಕಂಡು ಬರುತ್ತಿದೆ. ಇದು ತುಂಬಾ ಡೇಂಜರಸ್ ಎಂದು ಭೂಗರ್ಭ ತಜ್ಞರು ಹೇಳುತ್ತಾರೆ.

    ಪ್ರಕಾಶ್, ಭೂ ಗರ್ಭ ತಜ್ಞ

    ಅರಬ್ಬೀ ಸಮುದ್ರದಲ್ಲಿ ಸ್ಫೋಟಿಸಿದ ಮೂರು ಭೂಕಂಪಗಳು ಬೆಂಗಳೂರಿನಲ್ಲಿ ಈ ವಿಚಿತ್ರ ವಾತಾವರಣವನ್ನು ಸೃಷ್ಟಿಸಿದೆ. ಆತಂಕದ ವಿಚಾರ ಎಂದರೆ ಸಮುದ್ರಾಳದ ಸ್ಫೋಟದ ತೀವ್ರತೆಯ ಪ್ರಮಾಣ ಅಪಾಯದ ಮಟ್ಟ ಮೀರಿದ್ದು ಇದು ವಾತಾವರಣದ ಏರುಪೇರಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಇದೇ ರೀತಿ ಪದೇ ಪದೇ ಸಮುದ್ರಾಳದಲ್ಲಿ ಜ್ವಾಲಾಮುಖಿ ಮುನಿಸಿಕೊಂಡರೆ ಬೆಂಗಳೂರಿಗೆ ಇನ್ನಷ್ಟು ಅಪಾಯ ಕಾಡುವ ಸಾಧ್ಯತೆಗಳಿವೆ. ಮಳೆಯ ಅಬ್ಬರ, ವಾತಾವರಣ ಏರುಪೇರಿನಿಂದ ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಅದೆಲ್ಲೋ ಅಪರೂಪಕ್ಕೆ ಈ ರೀತಿ ಜ್ವಾಲಮುಖಿ ಸ್ಫೋಟಗೊಳ್ಳುತ್ತಿತ್ತು. ಆದರೆ ಈಗ ಪದೇ ಪದೇ ಈ ರೀತಿಯ ಸ್ಫೋಟ ಡೇಂಜರಸ್ ಎಂದು ಹೇಳಲಾಗುತ್ತಿದೆ. ಕಾಲ್ಸ್ ಬರ್ಗ್ ರಿಡ್ಜ್ ಎನ್ನುವ ಜ್ವಾಲಾಮುಖಿಗಳು ಈ ಮಳೆಗೆ ಕಾರಣವಾಗಿದ್ದು, ಇದು ಭಾರತದಲ್ಲಿ ಭೂಕಂಪದಂತಹ ಅಪಾಯವನ್ನು ತಂದೊಡ್ಡಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

    ಭೂಮಿಯಲ್ಲಿ ನಮಗರಿವಿಲ್ಲದಂತೆ ಆಗುವ ಬದಲಾವಣೆ ಇದೀಗ ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಸಿದೆ. ಮೊದಲೇ ನೆರೆಯ ಅಬ್ಬರದಲ್ಲಿ ಮುಳುಗಿದ ಕರುನಾಡಿಗೆ ಮಗದೊಂದು ಅಪಾಯದ ಸೂಚನೆ ಭೀತಿ ಹುಟ್ಟಿಸಿದೆ.

  • ರಸ್ತೆಗೆ ನುಗ್ಗಿದ ಜ್ವಾಲಾರಸ-82 ಮನೆಗಳು ನಾಶ

    ರಸ್ತೆಗೆ ನುಗ್ಗಿದ ಜ್ವಾಲಾರಸ-82 ಮನೆಗಳು ನಾಶ

    ಹವಾಯಿ: ಜ್ವಾಲಾಮುಖಿಯಿಂದಾಗಿ ಕರಗಿದ ಬಂಡೆಯ ಜ್ವಾಲಾರಸವು ನಗರದ ಬೀದಿಗಳಿಗೆ ನುಗ್ಗಿದ ಪರಿಣಾಮ ಹಲವಾರು ಮನೆಗಳು ನಾಶಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

    ಲೀಲಾನಿ ಎಸ್ಟೇಟ್ ವಸತಿ ಅಭಿವೃದ್ಧಿಗೆ ಸೇರಿದ ಸುಮಾರು 82 ಮನೆಗಳು ನಾಶವಾಗಿದೆ ಎಂದು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ತಿಳಿಸಿದೆ. ಸಾರ್ವಜನಿಕರಿಗೆ ಜ್ವಾಲಾರಸದಿಂದ ತಪ್ಪಿಸಿಕೊಳ್ಳುವಂತೆ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದಾರೆ.

    ಮೇ 3 ರಿಂದ 2,200 ಎಕರೆ ವ್ಯಾಪ್ತಿಯಲ್ಲಿ ಲಾವಾರಸ ಹರಡಿದೆ. ಕಳೆದ 100 ವರ್ಷದಲ್ಲೇ ಹವಾಯಿ ದ್ವೀಪ ರಾಷ್ಟ್ರ ಕಂಡ ವಿನಾಶಕಾರಕ ಕಿಲೂಯೆ ಜ್ವಾಲಾಮುಖಿ ಇದಾಗಿದೆ ಎನ್ನಲಾಗಿದೆ.

    ಕೌಪುಲಿ ರಸ್ತೆಯಲ್ಲಿ ನಿಂತು ಪಕ್ಕದ ರಸ್ತೆಗೆ ಜ್ವಾಲಾರಸ ಹೋಗುತ್ತಿರುವ ವಿಡಿಯೊವನ್ನು ಇಕಾಕ್ ಮಾರ್ಜೊ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.

    ಜ್ವಾಲಾರಸ ಸುಮಾರು 100 ಅಡಿಗಳ ಎತ್ತರಕ್ಕೆ ಚಿಮ್ಮಿ ಕರಗಿದ ಬಂಡೆಗಳ ಕೊಳಗಳು ನಿರ್ಮಾಣವಾಗುತ್ತಿವೆ. ಕಹುಕೈ ಮತ್ತು ಮೊಹಾಲಾ ರಸ್ತೆಗಳ ಕಡೆ ಲಾವಾ ರಸ ಹರಿದು ಬರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದವರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಅಲ್ಲಿಯ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ.

    ಕೆಲವು ರಸ್ತೆಗಳ ಸುತ್ತ ಲಾವಾರಸ ಹರಿದು ಅಲ್ಲಿರುವವರನ್ನು ತಲುಪಲಿಕ್ಕೆ ಆಗದ ಸ್ಥಿತಿ  ಕೂಡ ನಿರ್ಮಾಣವಾಗಿದೆ ಎನ್ನಲಾಗಿದೆ. ಈಗ ಹೊರಬರುತ್ತಿರುವ ಲಾವಾರಸ ಜ್ವಾಲಾಮುಖಿಯ ಒಂದು ಸಣ್ಣ ಭಾಗ ಎಂದು ಹೇಳಲಾಗುತ್ತಿದೆ.

    https://www.facebook.com/ikaika.marzo/videos/1814217715297423/

     

  • 150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

    150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

    ಪಣಜಿ: ವಿದೇಶದ ಕೆಲವು ದ್ವೀಪಗಳಲ್ಲಿ ಜ್ವಾಲಾಮುಖಿ ಸುದ್ದಿಗಳನ್ನು ನೀವು ಓದಿರಬಹುದು. ಆದರೆ ಈಗ ನಿಮಗೆಲ್ಲರಿಗೂ ಅಚ್ಚರಿ ಮೂಡಿಸುವ ಸುದ್ದಿ ಎನ್ನುವುಂತೆ 150 ವರ್ಷಗಳ ಬಳಿಕ ಭಾರತದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ತಜ್ಞರ ತಂಡವೊಂದು ತಿಳಿಸಿದೆ.

    ಹೌದು. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ಗೋವಾದಲ್ಲಿರುವ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ ನಿಂದ 140 ಕಿ.ಮೀ ದೂರದಲ್ಲಿ ಈಶಾನ್ಯ ಭಾಗದಲ್ಲಿರುವ ಬಾರನ್ ದ್ವೀಪದಲ್ಲಿ ಈ ಜ್ವಾಲಾಮುಖಿ ಇದ್ದು, ಜನವರಿ ತಿಂಗಳಲ್ಲಿ ಲಾವಾರಸವನ್ನು ಉಗುಳಿದೆ.

    ಜ್ವಾಲಾಮುಖಿ ಇರುವ ಪ್ರದೇಶಕ್ಕೆ ಜನವರಿ 23ರಂದು ತಂಡ ತೆರಳಿ ಅಧ್ಯಯನ ನಡೆಸಿತ್ತು. ಈ ವೇಳೆ 4 ಗಂಟೆಗಳ ಕಾಲ ಲಾವಾ ರಸವನ್ನು ಉಗುಳಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಜನವರಿ 26ರಂದು ತಂಡ ಎರಡನೇ ಬಾರಿ ದ್ವೀಪದ ಬಳಿ ತೆರಳಿದಾಗಲೂ ಕೆಂಪು ಲಾವಾ ರಸ ಉಗುಳುತ್ತಿರುವುದನ್ನು ನೋಡಿದೆ. ಹೀಗಾಗಿ ಜ್ವಾಲಾಮುಖಿ ಸ್ಫೋಟಗೊಳ್ಳಬಹುದು ಎನ್ನುವ ಆತಂಕವನ್ನು ಸಂಶೋಧಕರು ಹೊಂದಿದ್ದು, ಈಗ ಜ್ವಾಲಾಮುಖಿಯ ಬೂದಿಯನ್ನು ಅಧ್ಯಯನಕ್ಕಾಗಿ ಸಂಗ್ರಹಿಸಿದ್ದಾರೆ.

    ಸಂಶೋಧಕರು ಲಾವಾ ರಸ ಚಿಮ್ಮುತ್ತಿರುವ ಪ್ರದೇಶಕ್ಕೆ ಹೋಗಿಲ್ಲ. ಈ ಪ್ರದೇಶ ಅಪಾಯಕಾರಿಯಾಗಿರುವುದರಿಂದ ಒಂದು ಮೈಲಿ ದೂರದಿಂದ ಈ ಅಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 150 ವರ್ಷಗಳ ಹಿಂದೆ ಈ ಜ್ವಾಲಾಮುಖಿ ಸ್ಫೋಟಗೊಂಡಿರಬಹುದು ಎನ್ನುವ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.