Tag: Vokkaliga

  • ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಬೆಂಗಳೂರು: ಕೂಡು ಒಕ್ಕಲಿಗ ಸಮುದಾಯ ಲಿಂಗಾಯತ ಸಮುದಾಯದ ಒಂದು ಉಪ ಪಂಗಡವಾಗಿದೆ. ನಾನು ಕೂಡ ಒಕ್ಕಲಿಗ ಪಂಗಡದಲ್ಲಿ ಜನಿಸಿದವನು ಎಂದು ಮಾಜಿ ಮಂತ್ರಿ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಕೂಡು ಒಕ್ಕಲಿಗ ಸಮುದಾಯದವರು ಕೂಡು ಒಕ್ಕಲಿಗರು ಶುದ್ಧ ಶಾಕಹಾರಿಗಳು. ನಾವು ಒಕ್ಕಲುತನ ಮಾಡುತ್ತೇವೆ. ಒಕ್ಕಲಿಗರು ಒಕ್ಕಲುತನ ಮಾಡ್ತಾರೆ. ಅದಷ್ಟೆ ನಮಗೆ, ಅವರಿಗು ಇರುವ ಸಾಮ್ಯತೆ. ಒಕ್ಕಲಿಗರು ಅಂತಾರೆ ನಮ್ಮನ್ನ, ಒಕ್ಕಲಿಗ ಅನ್ನೋ ಪದ ಹೋಲಿಕೆ ಇದೆ. ಆದರೆ ಕೂಡು ಒಕ್ಕಲಿಗರೂ ಯಾವ ಕಾರಣಕ್ಕೂ ಒಕ್ಕಲಿಗರಲ್ಲ. ಅವರು ಲಿಂಗಾಯತ ಉಪ ಪಂಗಡದವರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಶುರುವಾಯ್ತಾ ಜಾತಿ ರಾಜಕಾರಣದ ಮತ್ತೊಂದು ಸಮರ..?

    ಈ ಹಿಂದೆ ಎನ್. ಶಂಕ್ರಪ್ಪ ಆಯೋಗದ ವರದಿ ಸಂದರ್ಭದಲ್ಲಿ ಕೆಲವು ತಪ್ಪುಗಳಾಗಿವೆ. ಒಕ್ಕಲಿಗರು ಅಂತ ಕೆಲವು ಕಡೆ ದಾಖಲಾಗಿದೆ. ಆದರೆ ಅದಕ್ಕೆ ಫಿಡವಿಟ್ ಸಬ್ ಮಿಟ್ ಮಾಡಿ ಸರಿಪಡಿಸುವಂತೆ ಮನವಿ ಮಾಡಿದ್ದೇವೆ. ಉಪ ಪಂಗಡಗಳನ್ನು ಒಗ್ಗೂಡಿಸಿ ಪ್ರತ್ಯೇಕ ಧರ್ಮದ ಹೋರಾಟ ಮಾಡಿದ್ದೆವು, ಆದರೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಲಿಲ್ಲ. ಆದರೆ ನಮ್ಮ ಸಮುದಾಯದ ಬಡ ಮಕ್ಕಳಿಗೆ ಮೀಸಲಾತಿ ಬೇಕು. ಕೂಡು ಒಕ್ಕಲಿಗ ಸಮುದಾಯ ಅಲ್ಪಸಂಖ್ಯೆಯ ಸಮುದಾಯ ಕೃಷಿ ನಂಬಿ ಜೀವನ ಮಾಡುವ ಸಮುದಾಯ. ಉತ್ತರ ಕರ್ನಾಟಕದಲ್ಲಿ ನಮ್ಮ ಸಮುದಾಯವಿದೆ. ಎಲ್ಲ ಸಮುದಾಯಕ್ಕೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಕೂಡು ಒಕ್ಕಲಿಗ ಸಮುದಾಯ ಹಿಂದುಳಿದಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

    ಕೂಡು ಒಕ್ಕಲಿಗ ಸಮುದಾಯದ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ನಾವು ಲಿಂಗಾಯತ ಕೂಡು ಒಕ್ಕಲಿಗರು, ನಾವು ಲಿಂಗಾಯತ ಉಪ ಪಂಗಡ. ಆದರೆ ಒಕ್ಕಲಿಗರು, ಕೂಡು ಒಕ್ಕಲಿಗರು ಕೃಷಿ ಆಧಾರಿತ ಸಮುದಾಯವಾಗಿದೆ. ಆದರೆ ನಾವು ಹಾಗೂ ಒಕ್ಕಲಿಗರು ಬೇರೆ ಬೇರೆಯಾಗಿದ್ದೇವೆ. ದಕ್ಷಿಣ ಕರ್ನಾಟಕದ ಒಕ್ಕಲಿಗರು ಬೇರೆ. ನಾವು ಲಿಂಗಾಯತ ಒಕ್ಕಲಿಗರು ಬೇರೆ. ಶಿರಸಂಗಿ ಲಿಂಗರಾಜರಿಂದ ನಮ್ಮ ಸಮುದಾಯಕ್ಕೆ ಇತಿಹಾಸ ಇದೆ.ಅಖಿಲ ಭಾರತ ವೀರಶೈವ ಮಹಸಭಾದ ಮೊದಲ ಅಧ್ಯಕ್ಷರು. ನಾವು ಈ ಭಾಗದ ಒಕ್ಕಲಿಗರನ್ನು ಗೌರವಿಸುತ್ತೇವೆ. ನಾವು ಒಕ್ಕಲಿಗರ ಭಾಗವಲ್ಲ. ನಾವು ಲಿಂಗಾಯತರ ಒಂದು ಭಾಗ. ಲಿಂಗಾಯತರಲ್ಲಿ ಕೂಡು ಒಕ್ಕಲಿಗ ಕೂಡ ಒಂದು ಪಂಗಡ. ಎಲ್ಲ ಸಮುದಾಯಗಳು ಮೀಸಲಾತಿ ಬಯಸಿದಂತೆ ಇವರು ಬಯಸಿದ್ದಾರೆ. ಅದೇ ಬೇಡಿಕೆ ಬಹಳ ವರ್ಷಗಳಿಂದ ಮುಂದಿಟ್ಟಿದ್ದಾರೆ. ನನ್ನ ಬಳಿಯೂ ಇದೇ ಬೇಡಿಕೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಒಕ್ಕಲಿಗರ ಬಗ್ಗೆ ಗೌರವ ಇದೆ, ಅವರ ಸ್ವಾಮೀಜಿಯವರ ಬಗ್ಗೆ ಗೌರವ ಇದೆ, ಆದರೆ ನಾವು ಲಿಂಗಾಯತರು. ಬೀದರ್, ಕಲಬುರಗಿ ಭಾಗದವರು ಇಂದು ಬಂದು ಮೀಸಲಾತಿ ಬೇಡಿಕೆ ಮುಂದಿಟ್ಟಿದ್ದಾರೆ. ನಮಗೂ 3ಂ ಅಥವಾ 2ಂ ಮೀಸಲಾತಿ ಬೇಕು ಅಂತ ಕೇಳುದ್ದಾರೆ. ಶಂಕ್ರಪ್ಪ ಕಮಿಟಿಯಲ್ಲಿ ಒಂದು ತಪ್ಪಾಗಿತ್ತು, ಅದಕ್ಕೆ ಅಫಿಡವಿಟ್ ಹಾಕಿ ಸರಿ ಮಾಡಲು ಮನವಿ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿಯಿಂದ ತಪ್ಪಾದರೆ ಇಡೀ ಸಮಾಜಕ್ಕೆ ದೂರಬಾರದು.ನಿಮಗೂ 3ಂ ಮೀಸಲಾತಿ ಸಿಗುತ್ತೆ ಅಂತ ಪುಸಲಾಯಿಸೋ ಕೆಲಸ ಮಾಡಿದ್ರು.ಆದರೆ ಎಲ್ಲಾ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಕೂಡು ಒಕ್ಕಲಿಗ ಅಂತ ಇದೆ. ಲಿಂಗಾಯತ ಕೂಡು ಒಕ್ಕಲಿಗ ಅಂತ ಇದೆ ನುಡಿದಿದ್ದಾರೆ.

  • ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ; ಮುಖ್ಯಮಂತ್ರಿಗೆ ಸಚಿವರು, ಶಾಸಕರಿಂದ ಅಭಿನಂದನೆ

    ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ; ಮುಖ್ಯಮಂತ್ರಿಗೆ ಸಚಿವರು, ಶಾಸಕರಿಂದ ಅಭಿನಂದನೆ

    ಬೆಂಗಳೂರು: 2021ನೇ ಸಾಲಿನ ಬಜೆಟ್‌ನಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಂಪುಟದಲ್ಲಿರುವ ಒಕ್ಕಲಿಗ ಸಮುದಾಯದ ಎಲ್ಲ ಸಚಿವರು, ಶಾಸಕರು ಹಾಗೂ ಮುಖಂಡರು ಅಭಿನಂದಿಸಿದರು.

    ವಿಧಾನಸೌಧದಲ್ಲಿ ಮಂಗಳವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿದ ಸಚಿವರು, ನಿಗಮ ಸ್ಥಾಪನೆಗಾಗಿ ಅಭಿನಂದಿಸಿದರಲ್ಲದೆ ಆದಷ್ಟು ಶೀಘ್ರವೇ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

    ಮುಂಗಡ ಪತ್ರದಲ್ಲಿಯೇ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿದ ಬಗ್ಗೆ ಸಮುದಾಯದ ಎಲ್ಲ ಸ್ವಾಮೀಜಿಗಳಿಗೆ, ಹಿರಿಯರಿಗೆ, ಮುಖಂಡರಿಗೆ ಸಂತೋಷವಾಗಿದೆ ಎಂಬ ಸಂಗತಿಯನ್ನು ಡಿಸಿಎಂ ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

    ಅಭಿನಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಂತೋಷ ವ್ಯಕ್ತಪಡಿಸಿದರಲ್ಲದೆ, ಆದಷ್ಟು ಬೇಗ ನೂತನ ನಿಗಮಕ್ಕೆ ಸಮರ್ಥ ಅಧ್ಯಕ್ಷರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ನಾರಾಯಣಗೌಡ, ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕರಾದ ಕೆ.ಜೆ.ಬೋಪಯ್ಯ, ಅರಗ ಜ್ಞಾನೇಂದ್ರ, ಡಾ.ರಾಜೇಶ್ ಗೌಡ, ಮಸಾಲೆ ಜಯರಾಂ, ಪರಿಷತ್ ಸದಸ್ಯ ಪುಟ್ಟಣ್ಣ ಮುಂತಾದವರು ಇದ್ದರು.

  • ನನಗೆ ಸಂಬಂಧ ಇಲ್ಲದ ವಿಷಯ- ಡಿಸಿಎಂ ಗೋವಿಂದ ಕಾರಜೋಳ

    ನನಗೆ ಸಂಬಂಧ ಇಲ್ಲದ ವಿಷಯ- ಡಿಸಿಎಂ ಗೋವಿಂದ ಕಾರಜೋಳ

    ಬೆಂಗಳೂರು: ನನಗೆ ಸಂಬಂಧ ಇಲ್ಲ ವಿಷಯವಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ನಾನು ಪ್ರತಿಯಿಸಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿಕೆ.ಶಿವಕುಮಾರ್ ಬಂಧನ ಖಂಡಿಸಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಒಕ್ಕಲಿಗರ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ನಾನು ಮಾತನಾಡಲ್ಲ. ಅದು ನನಗೆ ಸಂಬಂಧ ಇಲ್ಲದ ವಿಷಯ. ದೇಶದಲ್ಲಿ ಕಾನೂನು ಕ್ರಮಗಳು ನಡೆಯುತ್ತಿರುತ್ತವೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.

    ಇಂದು ಡಿಸಿಎಂ ಅವರು ನೆಲಮಂಗಲಕ್ಕೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ. ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿ ನಿಲಯದ ಸ್ವಚ್ಛತೆ, ಊಟ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಣೆ ನಡೆಸಿದರು.

    ವಿಶೇಷವೆಂದರೆ ನೆಲಮಂಗಲ ತಾಲೂಕು ಮಟ್ಟದ ಯಾವೊಬ್ಬ ಅಧಿಕಾರಿಗೂ ಮಾಹಿತಿ ನೀಡದೆ ದಿಢೀರ್ ಭೇಟಿ ನೀಡುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದಾರೆ. ಕಸ ನಿರ್ವಹಣೆಯಲ್ಲಿ ನೆಲಮಂಗಲ ಪುರಸಭೆ ವೈಫಲ್ಯವನ್ನು ಕಂಡ ಡಿಸಿಎಂ, ಪುರಸಭೆ ಅಧಿಕಾರಿಗಳ ಕಾರ್ಯ ವೈಖರಿಗೆ ಡಿಸಿಎಂ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸುದ್ದಾರೆ.

  • ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರಿಂದ ಪ್ರೊಟೆಸ್ಟ್- ಇತ್ತ ಬಿಜೆಪಿಯಿಂದ ಸಪ್ತ ಸಮರ

    ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರಿಂದ ಪ್ರೊಟೆಸ್ಟ್- ಇತ್ತ ಬಿಜೆಪಿಯಿಂದ ಸಪ್ತ ಸಮರ

    ಬೆಂಗಳೂರು: ಒಂದೆಡೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧನ ಮಾಡಿರುವುದನ್ನು ಖಂಡಿಸಿ ಒಕ್ಕಲಿಗರು ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿ ಸಪ್ತ ಸಮರ ಅಸ್ತ್ರ ಪ್ರಯೋಗ ಮಾಡುತ್ತಿದೆ.

    ಹೌದು. ಡಿಕೆಶಿ ಇಡಿ ಅಧಿಕಾರಿಗಳಿಂದ ಬಂಧನವಾದ ಬಳಿಕ ನಡೆಯುತ್ತಿರುವ ಸಂಘರ್ಷಗಳು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಡಿಕೆಶಿ ಬಂಧನ ಪ್ರಕರಣ ಈಗ ಜಾತಿ ಬಣ್ಣದ ತಿರುವು ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಒಕ್ಕಲಿಗ ಸಮುದಾಯವೇ ಬಿಜೆಪಿಯವರ ಟಾರ್ಗೆಟ್ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದವರಿಂದಲೇ ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಲಿಕಾನ್ ಸಿಟಿಯಲ್ಲಿ ಲಕ್ಷಾಂತರ ಮಂದಿ ರೋಡಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ.

    ಇತ್ತ ಪ್ರಕರಣಕ್ಕೆ ಜಾತಿ ಲೇಪನ ಸಿಕ್ಕ ಕೂಡಲೇ ಬಿಜೆಪಿ ಪಾಳಯ ಎಚ್ಚೆತ್ತುಕೊಂಡಿದ್ದು, ಒಕ್ಕಲಿಗ ಸಮುದಾಯದ ವಿರೋಧ ಬರದಂತೆ ತಡೆಯಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಇದಕ್ಕಾಗಿ ಕಮಲ ಪಾಳಯ ಸಪ್ತ ಸಮರ ಆರಂಭಿಸಿದೆ. ಈ ಮೂಲಕ ಮುಳ್ಳನ್ನು ಮುಳ್ಳಿಂದಲೇ ತೆಗೆಯಲು ಹೊರಟಿದೆ ಎನ್ನಲಾಗಿದೆ.

    ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಂಸದರಾದ ಪ್ರತಾಪ್ ಸಿಂಹ, ಬಿ ಎನ್ ಬಚ್ಚೇಗೌಡ, ಡಿಸಿಎಂ ಅಶ್ವಥ್ ನಾರಾಯಣ, ಸಚಿವರಾದ ಆರ್ ಅಶೋಕ್ ಮತ್ತು ಸಿ ಟಿ ರವಿ ಈ ಏಳು ಮಂದಿ ಒಕ್ಕಲಿಗ ನಾಯಕರ ಮೂಲಕ ಜಾತಿ ಸಂಘರ್ಷ ಶಮನ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಡಿಕೆಶಿ ಪ್ರಕರಣದಲ್ಲಿ ಭುಗಿಲೆದ್ದಿರುವ ಜಾತಿ ಜಟಾಪಟಿಯನ್ನು ಈ ಸಪ್ತ ನಾಯಕರು ಮಾತ್ರ ಟಾರ್ಗೆಟ್ ಮಾಡಬೇಕು. ಇವರನ್ನು ಬಿಟ್ಟು ಪಕ್ಷದ ಇತರೆ ಸಮಯದಾಯದ ನಾಯಕರು ಒಕ್ಕಲಿಗರ ಬಗ್ಗೆ ಮಾತಾಡಬಾರದು. ಒಕ್ಕಲಿಗ ಸಮಾಜದ ಮುಖಂಡರನ್ನು ಈ ಸಪ್ತ ಒಕ್ಕಲಿಗ ನಾಯಕರೇ ಟಾರ್ಗೆಟ್ ಮಾಡಬೇಕು. ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಈ ಸಂದಿಗ್ಧ ಪರಿಸ್ಥಿತಿ ನಿಭಾಯಿಸಬೇಕು. ಈ ಸಪ್ತ ನಾಯಕರೇ ಹೋರಾಟ ನಡೆಸಿ ಪಕ್ಷದ ಇಮೇಜ್ ಉಳಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಸಪ್ತ ನಾಯಕರಿಗೆ ತಾಕೀತು ಮಾಡಿದೆ ಎಂಬುದಾಗಿ ತಿಳಿದುಬಂದಿದೆ.

  • ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತ- 13 ಕಡೆ ಮಾರ್ಗ ಬದಲಾವಣೆ, 9 ಕಡೆ ಪಾರ್ಕಿಂಗ್

    ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತ- 13 ಕಡೆ ಮಾರ್ಗ ಬದಲಾವಣೆ, 9 ಕಡೆ ಪಾರ್ಕಿಂಗ್

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬಂಧನ ಮಾಡಿರುವುದು ಒಕ್ಕಲಿಗ ಸಮುದಾಯವನ್ನು ರೊಚ್ಚಿಗಬ್ಬಿಸಿದೆ. ಕನಕಪುರದ ಬಂಡೆಯ ಬಂಧನ ಖಂಡಿಸಿ ಇಂದು ಬೆಂಗಳೂರಲ್ಲಿ ಒಕ್ಕಲಿಗರ ಸಂಘದಿಂದ ಶಕ್ತಿ ಪ್ರದರ್ಶನ ನಡೆಯಲಿದೆ.

    ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಗ್ರೌಂಡ್‍ನಿಂದ ಈ ರ‍್ಯಾಲಿ ಆರಂಭವಾಗಲಿದ್ದು, ಫ್ರೀಡಂಪಾರ್ಕ್ ನಲ್ಲಿ ಅಂತ್ಯಗೊಳ್ಳಲಿದೆ. 30 ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯಾಗುವ ಸಂಭವ ಇದೆ. ಇಂದಿನ ಒಕ್ಕಲಿಗರ ಪ್ರತಿಭಟನಾ ರ‍್ಯಾಲಿ ವಾಹನ ಸವಾರರ ಮೇಲೆ ಪರಿಣಾಮ ಬೀರಲಿದೆ. ಫ್ರೀಡಂ ಪಾರ್ಕ್ ವರೆಗೂ ನಡೆಯೋ ರ‍್ಯಾಲಿ ಹಿನ್ನೆಲೆಯಲ್ಲಿ ಹಲವು ರಸ್ತೆಗೆ ನಿರ್ಬಂಧ ವಿಧಿಸಲಾಗಿದೆ. ಹಲವು ಬದಲಿ ಮಾರ್ಗ ಮಾಡಲಾಗಿದೆ.

    ಪ್ರತಿಭಟನಾ ರ‍್ಯಾಲಿ ಸಾಗುವ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಸುಮಾರು 13 ಮಾರ್ಗ ಬದಲಾವಣೆ ಮಾಡಿದ್ದಾರೆ. ಅಲ್ಲದೇ 19 ಕಡೆ ಮಾರ್ಗ ಬದಲಾವಣೆ ಪಾಯಿಂಟ್‍ಗಳನ್ನ ಸಹ ಮಾಡಲಾಗಿದೆ. ಹೊರಗಿನಿಂದ ಪ್ರತಿಭಟನೆಗೆ ಬರುವ ವಾಹನಗಳಿಗೆ 9 ಕಡೆ ಪಾರ್ಕಿಂಗ್‍ಗೆ ಅವಕಾಶಗಳನ್ನ ಮಾಡಲಾಗಿದೆ.

    ಮಾರ್ಗ ಬದಲಾವಣೆ:
    * ಪ್ಯಾಲೇಸ್ ರಸ್ತೆಯಲ್ಲಿ ಸಂಚರಿಸುವವರು ಹಿಮಾಲಯ ಎಲೈಟ್ ಜಂಕ್ಷನ್‍ನಲ್ಲಿ ಬಲ ತಿರುವು ಪಡೆದು, ಟ್ಯಾಂಕ್ ಬಂಡ್ ರಸ್ತೆ ಮೂಲಕ ಸಾಗಬೇಕು
    * ಚಾಲುಕ್ಯ ಸರ್ಕಲ್ ಕಡೆಯಿಂದ ಬರುವ ಸವಾರರು ಮಹಾರಾಣಿ ಬ್ರಿಡ್ಜ್ ಹತ್ತಿರ ಬಲ ತಿರುವು ಪಡೆದು ಕೆ.ಆರ್.ಸರ್ಕಲ್ ಮೂಲಕ ಹೋಗಬೇಕು
    * ಮೆಜೆಸ್ಟಿಕ್‍ನಿಂದ ಮಾರ್ಕೆಟ್ ಕಡೆ ಹೋಗುವ ವಾಹನಗಳು ಲಾಲ್‍ ಬಾಗ್ ಪಶ್ಚಿಮ ದ್ವಾರದ ಮೂಲಕ ಹೋಗಬೇಕು. ಹೀಗೇ ಸುಮಾರು 13 ಕಡೆ ಟ್ರಾಫಿಕ್ ಡೈವರ್ಷನ್ ಮಾಡಲಾಗಿದೆ.

    ನೋ ಪಾರ್ಕಿಂಗ್..!
    * ಜೆಸಿ ರಸ್ತೆಯಿಂದ ಟೌನ್‍ಹಾಲ್‍ವರೆಗೆ
    * ಎನ್‍ಆರ್ ರಸ್ತೆಯಿಂದ ಪೊಲೀಸ್ ಕಾರ್ನರ್‍ವರೆಗೆ
    * ಕೆ.ಆರ್.ಸರ್ಕಲ್‍ನಿಂದ ಪೊಲೀಸ್ ಕಾರ್ನರ್‍ವರೆಗೆ
    * ಕಸ್ತೂರ್ ಬಾ ರಸ್ತೆ
    * ಮಲ್ಯ ಆಸ್ಪತ್ರೆ ರಸ್ತೆ
    * ಎಂ.ಜಿ.ರಸ್ತೆ
    * ಸೆಂಟ್ರಲ್ ಸ್ಟ್ರೀಟ್
    * ಕ್ವೀನ್ಸ್ ರಸ್ತೆ
    * ಡಾ.ಅಂಬೇಡ್ಕರ್ ರಸ್ತೆ
    * ಶೇಷಾದ್ರಿ ರಸ್ತೆ
    * ಹಳೆಯ ಅಂಚೆಕಚೇರಿ ರಸ್ತೆ
    * ಪ್ಯಾಲೇಸ್ ರಸ್ತೆ
    * ರೆಸಿಡೆನ್ಸಿ ರಸ್ತೆ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಕಡೆ ನೋ ಪಾರ್ಕಿಂಗ್ ಮಾಡಲಾಗಿದೆ. ಇದನ್ನೂ ಓದಿ: ಬಂಡೆ ಅರೆಸ್ಟ್ ವಿರುದ್ಧ ಸಿಡಿದೆದ್ದ ಒಕ್ಕಲಿಗರು – ಸಿಲಿಕಾನ್ ಸಿಟಿಯಲ್ಲಿ ಬೃಹತ್ ಧರಣಿ– ರ‍್ಯಾಲಿ ಸಾಗೋ ಮಾರ್ಗ- ಎಲ್ಲೆಲ್ಲಿ ಟ್ರಾಫಿಕ್ ಜಾಮ್? 

    ಪ್ರತಿಭಟನೆಗೆ ಬರುವವರಿಗೆ ಎಲ್ಲೆಲ್ಲಿ ಪಾರ್ಕಿಂಗ್?
    * ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್
    * ಬನ್ನಪ್ಪ ಪಾರ್ಕ್
    * ವೈ.ಎಂ.ಸಿ.ಎ ಮೈದಾನ ನೃಪತುಂಗ ರಸ್ತೆ
    * ಕನಕಪುರ ಕಡೆಯಿಂದ ಬರುವ ವಾಹನಗಳಿಗೆ, ಪಟಾಲಮ್ಮ ರಸ್ತೆ
    * ಹೋಂ ಸ್ಕೂಲ್ ಜಂಕ್ಷನ್
    * ನಾರಾಯಣ ರೋಡ್
    * ಕೆ.ಆರ್.ರಸ್ತೆ
    * ಹೋಂ ಸ್ಕೂಲ್ ರಸ್ತೆ
    * ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ- ಬುಲ್ ಟೆಂಪಲ್ ರಸ್ತೆ
    * ಮರಾಠ ಹಾಸ್ಟೆಲ್
    * ಶಂಕರಪುರಂ ರಸ್ತೆ
    * ಪ್ಯಾಲೇಸ್ ರಸ್ತೆಯಲ್ಲಿ ಒಂದು ಬದಿ

    * ಎಲ್.ಟಿ.ಪಿ ರೇಸ್ ಒಂದು ಬದಿ
    * ಶೇಷಾದ್ರಿ ರಸ್ತೆಯಲ್ಲಿ ಒಂದು ಬದಿ
    * ಲಕ್ಷ್ಮಣ ಪುರಿ ಬ್ರಿಡ್ಜ್ ಕೆಳಗಡೆ ಇರುವ ಧನ್ವಂತರಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ.

    ರ‍್ಯಾಲಿ ಆಯೋಜನೆಗೆ ಪೊಲೀಸರು 15 ಸೂಚನೆಗಳನ್ನ ಕೊಟ್ಟಿದ್ದಾರೆ. 5.1 ಕಿಮೀ ಉದ್ದದ ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ ಸಂಘಟಕರ ವಿರುದ್ಧ ಮೊದಲು ಎಫ್‍ಐಆರ್ ಮಾಡಲಾಗುವುದು. ಹೀಗಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಪೊಲೀಸರು ಹೇಳಿದ್ದಾರೆ. 2000 ಲಾ ಅಂಡ್ ಆರ್ಡರ್ ಪೊಲೀಸರ ಜೊತೆಗೆ 1200 ಸಂಚಾರಿ ಪೊಲೀಸರನ್ನು ಮೆರವಣಿಗೆಯ ದಾರಿಯುದ್ದಕ್ಕೂ ನಿಯೋಜನೆ ಮಾಡಲಾಗಿದ್ದು, 500 ಸಿಸಿಟಿವಿಗಳು ಕಣ್ಗಾವಲಿಡಲಿವೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

  • ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ, ನಿಜವಾದ ಒಕ್ಕಲಿಗ ನಾನು: ವೀರಪ್ಪ ಮೊಯ್ಲಿ

    ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ, ನಿಜವಾದ ಒಕ್ಕಲಿಗ ನಾನು: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಮೂವರನ್ನು ಮಂತ್ರಿ ಮಾಡಿದ್ದೆ. ಹಾಸನದಲ್ಲೂ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿದ್ದೆ. ಅಷ್ಟು ಮಟ್ಟದಲ್ಲಿ ಒಕ್ಕಲಿಗ ಶಾಸಕರನ್ನು ಸಚಿವರನ್ನಾಗಿ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಚಿಕ್ಕಬಳಾಪುರ ವಿಧಾನಸಭಾ ಕ್ಷೇತ್ರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ಕಡೆ ಒಕ್ಕಲಿಗರನ್ನ ಮಂತ್ರಿ ಮಾಡಿದ್ದು ನಾನೇ. ಶಾಸಕ ಡಾ.ಸುಧಾಕರ್ ಅವರನ್ನು ಸಹ ಮಂತ್ರಿ ಮಾಡುವುದು ನಾನೇ. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಅತಿ ಹೆಚ್ಚು ಕೊಡುಗೆ ಕೊಟ್ಟ ನಾನು ನಿಜವಾದ ಒಕ್ಕಲಿಗ. ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ ಎಂದು ಹೇಳಿದರು.

    ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಜಾತಿ ಹೆಸರಲ್ಲಿ ನನಗೆ ಮತ ನೀಡದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನೀವು ಜಾತಿ ನೋಡದೇ ನನಗೆ ಮತ ನೀಡಿ. ಈ ಬಾರಿಯೂ ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಮತದಾರರ ಮನವೊಲಿಸಿದರು.

    ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಿಯೇ ನಾನು ಪ್ರಾಣ ಬಿಡುತ್ತೇನೆ ಎಂದು ಪುನರುಚ್ಚರಿಸಿದ ಸಂಸದರು, ಇದಕ್ಕೆ ಅನೇಕ ಮಂದಿ ವಿರೋಧಿಸಿದರು. ಆದರೆ ನಾನು ಹೆದರುವುದಿಲ್ಲ. ಈ ಭಾಗಕ್ಕೆ ನೀರು ಹರಿಸದೆ ಸಾಯುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರು ನನಗೆ ಕಪ್ಪು ಪತಾಕೆ ಹಾರಿಸಿದರು. ನಾನು ಅವರ ವಿರೋಧ ಕಟ್ಟಿಕೊಂಡೆ. ಯಾಕೆ ಸ್ವಂತ ಊರಿನವರ ವಿರೋಧ ಕಟ್ಟಿಕೊಳ್ಳುತ್ತಿಯಾ ಅಂತ ನನ್ನ ಕೆಲ ಹಿತೈಷಿಗಳು ಹೇಳಿದರು. ಆದರೆ ಎತ್ತಿನಹೊಳೆ ನೀರನ್ನು ಈ ಭಾಗಕ್ಕೆ ಹರಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಜನರಿಗೆ ಮಾತುಕೊಟ್ಟಿದ್ದೇನೆ. ಹೀಗಾಗಿ ಎತ್ತಿನಹೊಳೆ ಕಾಮಗಾರಿ ಐದು ವರ್ಷದಿಂದ ಭರದಿಂದ ಸಾಗುತ್ತಿದೆ. ಅದಕ್ಕೆ ಅಡ್ಡಿಪಡಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ. ನಾನು ಧರ್ಮಸ್ಥಳದ ಮಂಜುನಾಥನ ಪಾದ ತೊಳೆಯುವ ಪರಿಶುದ್ಧವಾದಂತಹ ಎತ್ತಿನಹೊಳೆ ನೀರನ್ನು ಹರಿಸಿಯೇ ಸಿದ್ಧ ಎಂದರು.

  • ರಾಜ್ಯ ಒಕ್ಕಲಿಗ ಸಂಘದಿಂದಲೇ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ

    ರಾಜ್ಯ ಒಕ್ಕಲಿಗ ಸಂಘದಿಂದಲೇ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ

    ಬೆಂಗಳೂರು: ರಾಜ್ಯ ಒಕ್ಕಲಿಗ ಸಂಘದ 19 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ ಹಿನ್ನೆಲೆಯಲ್ಲಿ ಸಂಘದಿಂದಲೇ ಅಧ್ಯಕ್ಷ ಬೆಟ್ಟೇಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ.

    ಚಾಮರಾಜಪೇಟೆಯಲ್ಲಿರುವ ಒಕ್ಕಲಿಗ ಸಂಘದಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕರು, ಪದಾಧಿಕಾರಿಗಳು ಸೇರಿ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದೇ ತಿಂಗಳ 18 ರಂದು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಂಘದ ನಿರ್ದೇಶಕರು ಸಹಿ ಹಾಕಿದ್ದರು.

    ರಾಜ್ಯ ಒಕ್ಕಲಿಗ ಸಂಘಕ್ಕೆ 35 ನಿರ್ದೇಶಕರಿದ್ದು 7 ದಿನಗಳೊಳಗೆ ವಿಶ್ವಾಸಮತ ಸಾಬೀತಿಗೆ ವಿರೋಧಿ ಬಣ ಪಟ್ಟು ಹಿಡಿದಿತ್ತು. ಹೀಗಾಗಿ ಇಂದು ವಿಶ್ವಾತಮತ ಸಾಬೀತು ಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಬೆಟ್ಟೇಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಅಗಸ್ಟ್ 7ರಂದು ಹೊಸ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು ಹಂಗಾಮಿ ಕಾರ್ಯಧ್ಯಕ್ಷರಾಗಿ ನಾರಾಯಣ ಮೂರ್ತಿ ನೇಮಕಗೊಂಡಿದ್ದಾರೆ.

    ಹಿಂದಿನ ಅಧ್ಯಕ್ಷರಾಗಿದ್ದ ಡಾ. ಅಪ್ಪಾಜಿಗೌಡ ಅವರನ್ನು 2017ರಲ್ಲಿ ಹುದ್ದೆಯಿಂದ ಪದಚ್ಯುತಗೊಳಿಸಿ ನಿರ್ಣಯ ಕೈಗೊಂಡ ಪರಿಣಾಮ ಬೆಟ್ಟೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆದರೆ ಈಗ ಬೆಟ್ಟೇಗೌಡ ಪದಚ್ಯುತಿಗೊಳ್ಳುವುದರೊಂದಿಗೆ ಒಂದುವರೆ ವರ್ಷದ ಆಡಳಿತ ಅಂತ್ಯಗೊಂಡಿದೆ.