Tag: Vladimir putin

  • ಟ್ರಂಪ್ ಜೊತೆ ಅಲಾಸ್ಕ ಸಭೆ ಬಳಿಕ ಮೋದಿಗೆ ಫೋನ್ ಮಾಡಿದ ಪುಟಿನ್

    ಟ್ರಂಪ್ ಜೊತೆ ಅಲಾಸ್ಕ ಸಭೆ ಬಳಿಕ ಮೋದಿಗೆ ಫೋನ್ ಮಾಡಿದ ಪುಟಿನ್

    – ಯುದ್ಧದ ವಿಚಾರದಲ್ಲಿ ಶಾಂತಿಯುತ ನಿರ್ಣಯಕ್ಕೆ ಭಾರತದ ಸಲಹೆ

    ನವದೆಹಲಿ: ಉಕ್ರೇನ್‌ ಮೇಲಿನ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಬಗ್ಗೆ ಚರ್ಚಿಸಲು ಅಲಾಸ್ಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಯಾದ ಬಳಿಕ, ಪ್ರಧಾನಿ ಮೋದಿಗೆ (PM Modi) ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಫೋನ್‌ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

    2022 ರ ಫೆಬ್ರವರಿಯಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತದ ನಿಲುವನ್ನು ಪ್ರಧಾನಿ ಒತ್ತಿ ಹೇಳಿದರು. ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಅವರು ಕರೆ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಈ ನಿಟ್ಟಿನಲ್ಲಿ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪುಟಿನ್‌ಗೆ ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ಮೋದಿ ಮತ್ತು ಪುಟಿನ್ (Vladimir Putin) ಅವರು ದ್ವಿಪಕ್ಷೀಯ ಸಹಕಾರದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ನಾಯಕರು ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ.

    ಮಾತುಕತೆ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ನನಗೆ ದೂರವಾಣಿ ಕರೆ ಮಾಡಿದ್ದಕ್ಕಾಗಿ ಮತ್ತು ಅಲಾಸ್ಕದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಇತ್ತೀಚಿನ ಭೇಟಿಯ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ಪುಟಿನ್‌ಗೆ ಧನ್ಯವಾದಗಳು. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ರಂಪ್ (Donald Trump) ಅವರನ್ನು ಭೇಟಿಯಾದ ನಂತರ, ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲಿನ ಯುದ್ಧವನ್ನು ನ್ಯಾಯಯುತ ಆಧಾರದ ಮೇಲೆ ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆಯು ಸಮಯೋಚಿತ ಮತ್ತು ಉಪಯುಕ್ತವಾಗಿತ್ತು ಎಂದು ಪುಟಿನ್‌ ತಿಳಿಸಿದ್ದಾರೆ.

    ನಾವು ಬಹಳ ಸಮಯದಿಂದ ಈ ರೀತಿಯ ನೇರ ಮಾತುಕತೆಗಳನ್ನು ನಡೆಸಿರಲಿಲ್ಲ. ನಮ್ಮ ನಿಲುವನ್ನು ಶಾಂತವಾಗಿ ಮತ್ತು ವಿವರವಾಗಿ ಪುನರುಚ್ಚರಿಸಲು ನಮಗೆ ಅವಕಾಶ ಸಿಕ್ಕಿತು. ಸಂಭಾಷಣೆ ಸ್ಪಷ್ಟವಾಗಿ, ಅರ್ಥಪೂರ್ಣವಾಗಿತ್ತು ಎಂದು ಪುಟಿನ್‌ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ರಂಪ್‌, ಚರ್ಚೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ನಿರ್ದಿಷ್ಟ ವಿವರಗಳನ್ನು ನೀಡಲು ನಿರಾಕರಿಸಿದ್ದರು. ನಾವು ಇನ್ನೂ ಆ ಹಂತಕ್ಕೆ ತಲುಪಿಲ್ಲ. ಆದರೆ, ನಾವು ಪ್ರಗತಿ ಸಾಧಿಸಿದ್ದೇವೆ. ಒಪ್ಪಂದವಾಗುವ ವರೆಗೆ ಯಾವುದೇ ಒಪ್ಪಂದವಿಲ್ಲ ಎಂದು ತಿಳಿಸಿದ್ದಾರೆ.

  • ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

    ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

    – ನಾಳೆ ಟ್ರಂಪ್‌-ಝಲೆನ್ಸ್ಕಿ ಮಹತ್ವದ ಸಭೆ
    – ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರುವ ಎಚ್ಚರಿಕೆ

    ವಾಷಿಂಗ್ಟನ್‌: ಕಳೆದ ಮೂರು ವರ್ಷಗಳಿಂದಲೂ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧವನ್ನ (Russia Ukraine War) ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ಟ್ರಂಪ್‌ಗೆ (Donald Trump) ಈಗ ಯುರೋಪಿಯನ್ ಒಕ್ಕೂಟದ ಬೆಂಬಲ ಸಿಕ್ಕಿದೆ.

    ಹೌದು. ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಯೂರೋಪಿಯನ್ ಒಕ್ಕೂಟದ ದೇಶಗಳು, ಮುಂದಿನ ಮಾತುಕತೆಯಲ್ಲಿ ಟ್ರಂಪ್‌ ಮತ್ತು ಪುಟಿನ್ ಮಾತ್ರ ಇರಬಾರದು. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿ‌ರ್ ಝಲೆನ್‌ಸ್ಕಿ (Volodymyr Zelensky) ಅವರೂ ಇರಬೇಕು ಎಂದು ಆಗ್ರಹಿಸಿವೆ.

    ಟ್ರಂಪ್‌ ಮತ್ತು ಝಲೆನ್‌ಸ್ಕಿ ಅವರೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಟ್ರಂಪ್-ಪುಟಿನ್-ಝಲೆನ್‌ಸ್ಕಿ ಮೂವರೂ ಸೇರಿ ಮಾತುಕತೆ ನಡೆಸಬೇಕು. ನ್ಯಾಟೊಗೆ ಸೇರುವ ಉಕ್ರೇನ್‌ನ ಯತ್ನಕ್ಕೆ ರಷ್ಯಾವು ತಡೆಯೊಡ್ಡಬಾರದು ಎಂದು ಒಕ್ಕೂಟವು ಹೇಳಿದೆ.

    ಉಕ್ರೇನ್‌ನಲ್ಲಿ ಯುದ್ಧ ನಿಲ್ಲುವವರೆಗೂ ನಾವು ರಷ್ಯಾದ ಮೇಲೆ ಒತ್ತಡ ಹೇರುವ ಕ್ರಮವನ್ನು ಮುಂದುವರಿಸಲಿದ್ದೇವೆ. ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರುತ್ತೇವೆ. ರಷ್ಯಾದ ಯುದ್ಧದ ಆರ್ಥಿಕತೆಯು ನೆಲಸಮವಾಗಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

    ಒಪ್ಪಂದವಿಲ್ಲದೇ ಸಭೆ ಅಂತ್ಯ
    ಇನ್ನೂ ಉಕ್ರೇನ್-ರಷ್ಯಾ ಸಂಘರ್ಷವನ್ನ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಲಾಸ್ಕದಲ್ಲಿ ನಡೆಸಿದ ಸಭೆಯು ಯಾವುದೇ ಅಂತಿಮ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿತು. ಆ ಬಳಿಕ ಯುರೋಪಿಯನ್‌ ಒಕ್ಕೂಟ ನಾಯಕರ ಜೊತೆಗೆ ಟ್ರಂಪ್‌ ಚರ್ಚೆ ಮಾಡಿದ್ದು, ಕದನ ವಿರಾಮಕ್ಕಲ್ಲ, ಯುದ್ಧವನ್ನೇ ನಿಲ್ಲಿಸುವ ಪ್ರಸ್ತಾಪ ಮಾಡಿದ್ದು, ಇದಕ್ಕೆ ಐರೋಪ್ಯ ರಾಷ್ಟ್ರಗಳು ಒಕ್ಕೂಟ ಬೆಂಬಲ ವ್ಯಕ್ತಪಡಿಸಿವೆ.

    ನಾಳೆ ಹೈವೋಲ್ಟೇಜ್‌ ಸಭೆ
    ಇನ್ನೂ ಸೋಮವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಟ್ರಂಪ್‌ ಹಾಗೂ ಇತರ ಯುರೋಪಿಯನ್ ನಾಯಕರು ವಾಷಿಂಗ್ಟನ್‌ನಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯ ಮೇಲೆ ವಿಶ್ವನಾಯಕರ ಚಿತ್ತ ನೆಟ್ಟಿದೆ

  • 2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?

    2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?

    ವಾಷಿಂಗ್ಟನ್‌: ರಷ್ಯಾದ ತೈಲ (Russian Oil) ಖರೀದಿಸುವ ದೇಶಗಳ ಮೇಲೆ ಹೊಸ ಸುಂಕ ವಿಧಿಸುವುದನ್ನು ಪರಿಗಣಿಸುವ ಅಗತ್ಯ ಸದ್ಯಕ್ಕಿಲ್ಲ. 2 ಅಥವಾ 3 ವಾರಗಳ ಬಳಿಕ ದ್ವಿತೀಯ ಸುಂಕದ ಬಗ್ಗೆ ಯೋಚಿಸುವುದಾಗಿ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ಅಲಾಸ್ಕಾದಲ್ಲಿ ಪುಟಿನ್‌ (Vladimir Putin) ಮತ್ತು ಟ್ರಂಪ್‌ ನಡುವಿನ ಮಹತ್ವದ ಸಭೆಯ ಯಾವುದೇ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿತು. ಆದ್ರೆ ಸಭೆಯ ಬಳಿಕ ಮಾಧ್ಯಮವೊಂದರಲ್ಲಿ ಮಾತನಾಡಿದ ಟ್ರಂಪ್‌, ಹೊಸ ಸುಂಕಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ ಅಂತ ಭಾವಿಸುತ್ತೇನೆ. 2-3 ವಾರಗಳ ನಂತ್ರ ಯೋಚಿಸಬೇಕಾಗುತ್ತೆ, ನಂತರ ಮರುಪರಿಶೀಲಿಸಬೇಕಾಗಬಹುದು ಎಂದಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಕುರಿತು ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಭಾರತಕ್ಕೆ ಸಿಗುತ್ತಾ ರಿಲೀಫ್‌?
    ಟ್ರಂಪ್‌ ಎಚ್ಚರಿಕೆ ಬಳಿಕವೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ್ದರಿಂದ ಕಳೆದ ತಿಂಗಳು ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ. ಇದು ಆಗಸ್ಟ್‌ 27ರಿಂದ ಅನ್ವಯವಾಗಲಿದೆ. ಆದ್ರೆ ಟ್ರಂಪ್‌ ಅವರ ಹೇಳಿಕೆಯು ಭಾರತದ ಮೇಲಿನ ಸುಂಕದ ಪ್ರಮಾಣ 50 ರಿಂದ 25%ಗೆ ಇಳಿಕೆಯಾಲಿದೆಯೇ ಎಂಬುದನ್ನು ಕಾಡುನೋಡಬೇಕಿದೆ. ಇದನ್ನೂ ಓದಿ: ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

    50% ಸುಂಕ, ರಷ್ಯಾಗೆ ದೊಡ್ಡ ಹೊಡೆತ ಅಂದಿದ್ದ ಟ್ರಂಪ್‌
    ಅಲಾಸ್ಕ ಸಭೆಯಗೂ ಮುನ್ನ ಮಾತನಾಡಿದ್ದ ಟ್ರಂಪ್‌, ಭಾರತದ (India) ಮೇಲೆ 50% ಸುಂಕ ವಿಧಿಸಿರುವುದು ರಷ್ಯಾದ (Russia) ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಹೀಗಾಗಿ, ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಅಮೆರಿಕದ ಸುಂಕ ಹೇರಿಕೆಯಿಂದಾಗಿ ರಷ್ಯಾದ ಆರ್ಥಿಕತೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇದರಿಂದ ರಷ್ಯಾ ಮಾತುಕತೆಗೆ ಮುಂದಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತ ಮುಂದುವರಿಸಿದ್ರೆ ಯುದ್ಧದಿಂದ ಹಿಂದೆ ಸರಿಯಲ್ಲ, ಇದು ಮೋದಿ ಸರ್ಕಾರಕ್ಕೆ ಸಂದೇಶ: ಬಿಲಾವಲ್‌ ಭುಟ್ಟೋ

  • ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

    ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

    – 3 ಗಂಟೆ ಸಭೆ, 12 ನಿಮಿಷದಲ್ಲಿ ಸುದ್ದಿಗೋಷ್ಠಿ ಮುಕ್ತಾಯ
    – ಯಾವುದೇ ಒಪ್ಪಂದವಿಲ್ಲದೇ ಅಂತ್ಯಗೊಂಡ ಅಲಾಸ್ಕ ಸಭೆ

    ವಾಷಿಂಗ್ಟನ್‌: ಉಕ್ರೇನ್-ರಷ್ಯಾ ಸಂಘರ್ಷವನ್ನು (Russia Ukraine War) ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅಲಾಸ್ಕದಲ್ಲಿ ನಡೆಸಿದ ಸಭೆಯು (Alaska Summit) ಯಾವುದೇ ಅಂತಿಮ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿದೆ.

    ಉಭಯ ನಾಯಕರ ನಡುವೆ ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ (JBER) ಸುಮಾರು ಮೂರು ಗಂಟೆ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ಕೇವಲ 12 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಇದನ್ನೂ ಓದಿ: ವಿದೇಶಗಳಲ್ಲೂ ಪೊಲೀಸ್ ಸ್ಟೇಷನ್‌ – 53 ದೇಶಗಳಲ್ಲಿ ಚೀನಾದ ಕುತಂತ್ರ!

    ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌ (Donald Trump), ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತ ಮುಂದುವರಿಸಿದ್ರೆ ಯುದ್ಧದಿಂದ ಹಿಂದೆ ಸರಿಯಲ್ಲ, ಇದು ಮೋದಿ ಸರ್ಕಾರಕ್ಕೆ ಸಂದೇಶ: ಬಿಲಾವಲ್‌ ಭುಟ್ಟೋ

    ಮುಂದುವರಿದು.. ಪುಟಿನ್‌ ಜೊತೆ ಉಕ್ರೇನ್‌ ಕುರಿತ ಮಾತುಕತೆಯಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದೆ. ಆದ್ರೆ ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ

    ಇದೇ ಸಂದರ್ಭದಲ್ಲಿ ಪುಟಿನ್‌, ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೇ ಮಾತುಕತೆಯು ದೀರ್ಘಕಾಲೀನವಾಗಿಸಬೇಕಾದ್ರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕು ಎಂಬುದು ನಮಗೆ ಮನವರಿಕೆಯಾಗಿದೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಪುನರುಚ್ಚರಿಸಿದ್ದಾರೆ.

    ಆದಾಗ್ಯೂ ಟ್ರಂಪ್‌, ಎರಡೂ ದೇಶಗಳ ನಡುವಿನ ಯುದ್ಧ ಕೊನೆಗೊಳಿಸಲು ಒಂದು ಒಪ್ಪಂದ ಆಗುವವರೆಗೆ ಯಾವುದೇ ಒಪ್ಪಂದವಿಲ್ಲ ಎಂದು ಅವರು ಪುನರುಚ್ಚರಿಸಿದರು.

  • ಭಾರತದ ಮೇಲೆ ಸುಂಕ ಹಾಕಿದ್ದಕ್ಕೆ ಪುಟಿನ್‌ ಮಾತುಕತೆಗೆ ಒಪ್ಪಿದ್ದಾರೆ: ಟ್ರಂಪ್‌

    ಭಾರತದ ಮೇಲೆ ಸುಂಕ ಹಾಕಿದ್ದಕ್ಕೆ ಪುಟಿನ್‌ ಮಾತುಕತೆಗೆ ಒಪ್ಪಿದ್ದಾರೆ: ಟ್ರಂಪ್‌

    ವಾಷಿಂಗ್ಟನ್‌: ರಾಷ್ಯದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಪುಟಿನ್ ಮಾತುಕತೆಗೆ ಒಪ್ಪಲು ಭಾರತದ ಮೇಲೆ ವಿಧಿಸಿದ ಸುಂಕಗಳು ಬಹುಶಃ ಪ್ರಭಾವ ಬೀರಿರಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ (India) ರಷ್ಯಾದ ಎರಡನೇ ಅತಿ ದೊಡ್ಡ ತೈಲ ಖರೀದಿಸುವ ದೇಶ. ಎರಡನೇ ಅತಿದೊಡ್ಡ ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದ ಕಾರಣ ಇದು ಒಂದು ಪಾತ್ರ ಬೀರಿರಬಹುದು ಎಂದು ಹೇಳಿದರು.

    ಉಕ್ರೇನ್‌ – ರಷ್ಯಾ ಯುದ್ಧವನ್ನು ನಿಲ್ಲಿಸುವ ಸಂಬಂಧ ಆಗಸ್ಟ್‌ 15 ರಂದು ಅಲಾಸ್ಕಾದಲ್ಲಿ ಟ್ರಂಪ್‌ ಮತ್ತು ಪುಟಿನ್‌ ಭೇಟಿ ನಡೆಯಲಿದೆ.  ಇದನ್ನೂ ಓದಿ: ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ

    ಆ.1 ರಿಂದ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಅಮೆರಿಕ 25% ಸುಂಕ ವಿಧಿಸಿತ್ತು. ಈ ಬೆನ್ನಲ್ಲೇ ಟ್ರಂಪ್‌ ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ವಿಧಿಸಿದ್ದಾರೆ.

  • ʻಇದು ಯುದ್ಧದ ಯುಗವಲ್ಲʼ – ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ

    ʻಇದು ಯುದ್ಧದ ಯುಗವಲ್ಲʼ – ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ

    ವಾಷಿಂಗ್ಟನ್‌: ಇದೇ ಆಗಸ್ಟ್‌ 15ರಂದು ‌ಅಲಾಸ್ಕಾದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ (Randhir Jaiswal) ನಡುವಿನ ಸಭೆಯನ್ನು ಭಾರತ ಸ್ವಾಗತಿಸಿದೆ.

    ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್‌ ಜೈಸ್ವಾಲ್‌ (Randhir Jaiswal) ಅಧಿಕೃತ ಪ್ರಕಟಣೆಯನ್ನು ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆ.15ರಂದು ಅಲಾಸ್ಕಾದಲ್ಲಿ ನಿಗದಿಯಾಗಿರುವ ಅಮೆರಿಕ ಮತ್ತು ರಷ್ಯಾದ ಸಭೆಯನ್ನು ಭಾರತ ಸ್ವಾತಿಸುತ್ತದೆ. ಈ ಸಭೆಯು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಮತ್ತು ಶಾಂತಿಯ ನಿರೀಕ್ಷೆಗಳನ್ನು ತೆರೆಯುವ ಭರವಸೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಹಲವಾರು ಸಂದರ್ಭಗಳಲ್ಲಿ ಹೇಳಿರುವಂತೆ, ʻಇದು ಯುದ್ಧದ ಯುಗವಲ್ಲʼ ಆದ್ದರಿಂದ, ಇಂತಹ ಈ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಪುಟಿನ್‌-ಟ್ರಂಪ್‌ ಹೈವೋಲ್ಟೇಜ್‌ ಮೀಟಿಂಗ್‌; ಏನೆಲ್ಲಾ ಚರ್ಚೆ?
    ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಕುರಿತು ಮಾತುಕತೆ ನಡೆಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರನ್ನು ಆಗಸ್ಟ್ 15ರಂದು ಅಲಾಸ್ಕಾದಲ್ಲಿ ಭೇಟಿ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ `ಟ್ರುತ್’ ಸೋಷಿಯಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಷ್ಯಾ-ಉಕ್ರೇನ್‌ ಮೂರು ವರ್ಷಗಳ ಸಂಘರ್ಷವನ್ನು ಕೊನೆಗಾಣಿಸುವ ಕದನ ವಿರಾಮ ಒಪ್ಪಂದಕ್ಕೆ ಹತ್ತಿರದಲ್ಲಿದ್ದೆವೆ ಎಂದು ಸಹ ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಧೂರ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನ ಆಕ್ರಮಣಕಾರಿ ಅಸ್ತ್ರವಾಗಿ ಬಳಸಲಾಗಿತ್ತು: ಸಮೀರ್ ಕಾಮತ್

    ಈ ಬಗ್ಗೆ ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ಇದು ತುಂಬಾ ಜಟಿಲವಾಗಿದೆ. ಎರಡು ಕಡೆಯವರ ಒಳಿತಿಗಾಗಿ ಕೆಲವು ಪ್ರದೇಶಗಳನ್ನು ವಿನಿಯಮ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಭಾನುವಾರ ಬೆಂಗಳೂರಿಗೆ ಬರಲಿದ್ದಾರೆ ಮೋದಿ – ಹಲವೆಡೆ ವಾಹನ ಸಂಚಾರ ಬಂದ್‌, ಪರ್ಯಾಯ ಮಾರ್ಗ ಯಾವುದು?

    ಉಕ್ರೇನ್‌ನ 4 ಪ್ರಮುಖ ಪ್ರದೇಶಗಳಾದ ಲುಗಾನ್‌, ಡೊನೆಟ್‌ಸ್ಕ್‌, ಝಪೊರಿಝಿಯಾ ಮತ್ತು ಖೆರ್ಸನ್ ಮತ್ತು 2014ರಲ್ಲಿ ಸ್ವಾಧೀನಪಡಿಸಿಕೊಂಡ ಕ್ರೈಮಿಯಾ ತಮ್ಮ ವಶದಲ್ಲಿರುವುದಾಗಿ ಪುಟಿನ್ ಹೇಳಿದ್ದಾರೆ. ಆದರೆ, ಕ್ರೈಮಿಯಾ ಹೊರತುಪಡಿಸಿ ಉಳಿದ ನಾಲ್ಕು ಪ್ರದೇಶಗಳಲ್ಲಿ ರಷ್ಯಾದ ಪಡೆಗಳು ಸಂಪೂರ್ಣ ನಿಯಂತ್ರಣ ಹೊಂದಿಲ್ಲ ಎನ್ನಲಾಗಿದೆ. ಟ್ರಂಪ್‌-ಪುಟಿನ್ ಭೇಟಿ ಕುರಿತು ಉಕ್ರೇನ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

  • ಪುಟಿನ್‌ ಭೇಟಿಗೆ ಟ್ರಂಪ್‌ ಮುಹೂರ್ತ ಫಿಕ್ಸ್‌ – ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಮಾತುಕತೆ

    ಪುಟಿನ್‌ ಭೇಟಿಗೆ ಟ್ರಂಪ್‌ ಮುಹೂರ್ತ ಫಿಕ್ಸ್‌ – ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಮಾತುಕತೆ

    ವಾಷಿಂಗ್ಟನ್: ಉಕ್ರೇನ್‌ನಲ್ಲಿ (Ukraine) ಶಾಂತಿ ಸ್ಥಾಪಿಸುವ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

    ಮುಂದಿನ ಒಂದು ವಾರದೊಳಗೆ ಅಲಾಸ್ಕಾದಲ್ಲಿ ಪುಟಿನ್‌ ಭೇಟಿಯಾಗುವುದಾಗಿ ಟ್ರಂಪ್‌ ತಿಳಿಸಿದ್ದಾರೆ. ವಶಪಡಿಸಿಕೊಂಡಿರುವ ತಮ್ಮ ತಮ್ಮ ಪ್ರದೇಶಗಳನ್ನು ಮರಳಿ ಪಡೆಯುವ ಸಂಬಂಧ ರಷ್ಯಾ ಮತ್ತು ಉಕ್ರೇನ್‌ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಮೋದಿ ಸ್ವಾಗತಿಸಿದ ಚೀನಾ; ಗಲ್ವಾನ್‌ ಘರ್ಷಣೆ ಬಳಿಕ ಮೊದಲ ಭೇಟಿ

    ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗಿ ನಾನು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಬಹುನಿರೀಕ್ಷಿತ ಸಭೆಯು ಆ.15 ರಂದು ಅಲಾಸ್ಕಾ ರಾಜ್ಯದ ಗ್ರೇಟ್ ಸ್ಟೇಟ್‌ನಲ್ಲಿ ನಡೆಯಲಿದೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಸೈಟ್‌ನಲ್ಲಿ ಹೇಳಿದ್ದಾರೆ.

    ಉಕ್ರೇನಿಯನ್ ಬಿಕ್ಕಟ್ಟಿನ ದೀರ್ಘಾವಧಿಯ ಶಾಂತಿಯುತ ಇತ್ಯರ್ಥವನ್ನು ಸಾಧಿಸುವ ಸಂಬಂಧ ಚರ್ಚಿಸಲು ರಷ್ಯಾ ಅಧ್ಯಕ್ಷರು ಗಮನಹರಿಸಲಿದ್ದಾರೆಂದು ಕ್ರೆಮ್ಲಿನ್ ಸಹಾಯಕ ಯೂರಿ ಉಷಕೋವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಫೆಬ್ರವರಿ 2022 ರಲ್ಲಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧವನ್ನು ಪ್ರಾರಂಭಿಸಿತು. ಯುದ್ಧದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆ ವಲಸೆ ಹೋಗಿದ್ದಾರೆ.

    ಟ್ರಂಪ್‌ ಅಧಿಕಾರಕ್ಕೆ ಬಂದಾಗಿನಿಂದ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಅವರೊಂದಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುಂಚಿತವಾಗಿ ಪುಟಿನ್‌, ಚೀನಾ ಮತ್ತು ಭಾರತದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

  • ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶೀಘ್ರದಲ್ಲೇ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಗುರುವಾರ ತಿಳಿಸಿದ್ದಾರೆ.

    ಮಾಸ್ಕೋದಲ್ಲಿರುವ ದೋವಲ್, ಪುಟಿನ್‌ ಭೇಟಿ ದಿನವನ್ನು ನಿರ್ದಿಷ್ಟಪಡಿಸಿಲ್ಲ. ಆದರೆ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅವರು ಭೇಟಿ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    ನಮ್ಮದು ವಿಶೇಷವಾದ, ದೀರ್ಘವಾದ ಸಂಬಂಧ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ. ನಾವು ಉನ್ನತ ಮಟ್ಟದ ಸಂಬಂಧಗಳನ್ನು ಹೊಂದಿದ್ದೇವೆ. ಈ ಉನ್ನತ ಮಟ್ಟದ ಸಂಬಂಧಗಳು ಗಣನೀಯವಾಗಿ ಕೊಡುಗೆ ನೀಡಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ದೋವಲ್‌ ಹೇಳಿದ್ದಾರೆ.

    ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಭಾರತ ಮತ್ತು ಅಮೆರಿಕ ನಡುವೆ ತಿಕ್ಕಾಟ ಹೆಚ್ಚುತ್ತಿರುವ ಹೊತ್ತಲ್ಲೇ ಈ ಪ್ರವಾಸದ ಘೋಷಣೆ ಕೇಳಿಬಂದಿದೆ. ರಷ್ಯಾದಿಂದ ಇಂಧನ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಮಾಸ್ಕೋ ಯುದ್ಧಕ್ಕೆ ಭಾರತ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಇದು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳನ್ನು ಹಳಿತಪ್ಪಿಸಿದೆ. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

    ಟ್ರಂಪ್ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದು, ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ 50% ಸುಂಕ ವಿಧಿಸುವುದಾಗಿ ತಿಳಿಸಿದ್ದಾರೆ.

    ಭಾರತ ಮತ್ತು ರಷ್ಯಾ ದೀರ್ಘಕಾಲದ ಸಂಬಂಧ ಹೊಂದಿವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಸೋವಿಯತ್ ಯುಗದಿಂದಲೂ ಇವೆ. ಎರಡೂ ರಾಷ್ಟ್ರಗಳು ತಮ್ಮ ಆರ್ಥಿಕ ಸಹಕಾರವನ್ನು ಬಲಪಡಿಸಿಕೊಂಡಿವೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ

  • ರಷ್ಯಾದಿಂದ ಅತಿದೊಡ್ಡ ವೈಮಾನಿಕ ದಾಳಿ – ಬರೋಬ್ಬರಿ 477 ಡ್ರೋನ್‌, 60 ಮಿಸೈಲ್‌ಗಳಿಂದ ಉಕ್ರೇನ್‌ ಮೇಲೆ ಅಟ್ಯಾಕ್‌

    ರಷ್ಯಾದಿಂದ ಅತಿದೊಡ್ಡ ವೈಮಾನಿಕ ದಾಳಿ – ಬರೋಬ್ಬರಿ 477 ಡ್ರೋನ್‌, 60 ಮಿಸೈಲ್‌ಗಳಿಂದ ಉಕ್ರೇನ್‌ ಮೇಲೆ ಅಟ್ಯಾಕ್‌

    – ದಾಳಿ ಹಿಮ್ಮೆಟ್ಟಿಸುವಾಗ ಉಕ್ರೇನ್‌ನ F-16 ಫೈಟರ್‌ ಪೈಲಟ್ ಸಾವು

    ಮಾಸ್ಕೋ/ಕೈವ್‌: ಅತ್ತ ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಕದನ ವಿರಾಮ ಬಿದ್ದ ಬೆನ್ನಲ್ಲೇ ಇತ್ತ ರಷ್ಯಾ-ಉಕ್ರೇನ್‌ ನಡುವಿನ ಯುದ್ಧ (Russia Ukraine War) ಮತ್ತಷ್ಟು ತೀವ್ರಗೊಂಡಿದೆ. ರಾತ್ರೋರಾತ್ರಿ ಉಕ್ರೇನ್‌ ಮೇಲೆ ರಷ್ಯಾ ಅತಿದೊಡ್ಡ ವಾಯುದಾಳಿ ನಡೆಸಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಬರೋಬ್ಬರಿ 477 ಡ್ರೋನ್‌ಗಳು ಹಾಗೂ 60 ಮಿಸೈಲ್‌ಗಳಿಂದ ರಷ್ಯಾ ದಾಳಿ (Russia Biggest Attack) ನಡೆಸಿರುವುದಾಗಿ ವರದಿಗಳು ತಿಳಿಸಿವೆ.

    ಹೌದು. ಯುದ್ಧ ಆರಂಭವಾದ ಬಳಿಕ ರಷ್ಯಾ ರಾತ್ರೋರಾತ್ರಿ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿ (Air Strike) ಇದಾಗಿದೆ. ಉಕ್ರೇನ್ ಮೇಲೆ ರಷ್ಯಾ 537 ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದು, ಇವುಗಳಲ್ಲಿ 477 ಡೋನ್ (Drone) ಹಾಗೂ 60 ಕ್ಷಿಪಣಿಗಳು ಸೇರಿವೆ. ಆದ್ರೆ ಕ್ಷಿಪಣಿ, ಡ್ರೋನ್‌ ಸೇರಿದಂತೆ 249 ಶಸ್ತ್ರಾಸ್ತ್ರಗಳನ್ನು ಹೊಡೆದುರುಳಿಸಲಾಗಿದೆ. ಇನ್ನು ಕೆಲವನ್ನು ಎಲೆಕ್ಟ್ರಾನಿಕ್ ಜಾಮರ್ ಮೂಲಕ ತಡೆಹಿಡಿಯಲಾಯಿತು ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ (Volodymyr Zelensky) ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ | ಪ್ರವಾಹದಲ್ಲಿ ಕೊಚ್ಚಿ ಹೋದ 9 ಜನ – 18 ಸದ್ಯಸರ ಕುಟುಂಬದ ದುರಂತ ಪ್ರವಾಸ

    ಎಫ್‌-16 ಪೈಲಟ್‌ ಸಾವು
    ರಷ್ಯಾದ ದಾಳಿಯನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತನ್ನ ದೇಶದ F-16 ಯುದ್ಧ ವಿಮಾನದ ಪೈಲಟ್ ಮ್ಯಾಕ್ಸಿಮ್ ಉಸ್ಟೆಂಕೊ ಸಾವನ್ನಪ್ಪಿರುವುದಾಗಿ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಆದ್ರೆ ಪೈಲಟ್‌ ಸಾಯುವುದಕ್ಕೂ ಮುನ್ನ 7 ವಾಯುಗುರಿಗಳನ್ನ ನಾಶಪಡಿಸಿದ್ದಾರೆ ಎಂದು‌ ತಿಳಿಸಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ದಲ್ಲಿ ನಿರ್ನಾಮವಾದ ಉಗ್ರರ ಲಾಂಚ್ ಪ್ಯಾಡ್ ಮರುನಿರ್ಮಾಣ ಮಾಡುತ್ತಿದೆ ಪಾಕ್‌

    ಇರಾನಿ ಡ್ರೋನ್‌ ಬಳಕೆ
    ರಷ್ಯಾವು ಉಕ್ರೇನ್‌ ಮೇಲೆ ಪ್ರಯೋಗಿಸಿದ 477 ಡ್ರೋನ್‌ಗಳ ಪೈಕಿ ಹೆಚ್ಚಿನವುಗಳು ಇರಾನ್‌ ನಿರ್ಮಿತ ʻಶಹೇದ್‌ʼ ಡ್ರೋನ್‌ಗಳಾಗಿವೆ. ದಾಳಿಯಿಂದ ಸ್ಮಿಲಾದಲ್ಲಿನ ವಸತಿ ಕಟ್ಟಡಕ್ಕೆ ಹಾನಿಯಾಗಿದ್ದು, ಪಂದು ಮಗು ಗಾಯಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇರಾನ್‌ನ ಪರಮಾಣು ಯೋಜನೆಗೆ 30 ಶತಕೋಟಿ ಡಾಲರ್‌ ನೆರವು ಪ್ರಸ್ತಾಪಿಸಿದ ಅಮೆರಿಕ

    ಈ ವಾರದಲ್ಲಿ ರಷ್ಯಾ 114ಕ್ಕೂ ಹೆಚ್ಚು ಮಿಸೈಲ್‌ಗಳು, 1,270ಕ್ಕೂ ಹೆಚ್ಚು ಡ್ರೋನ್‌, 1,100 ಗ್ಲೈಡ್‌ ಬಾಂಬ್‌ಗಳನ್ನು ಉಕ್ರೇನ್‌ ಮೇಲೆ ಪ್ರಯೋಗಿಸಿದೆ ಎಂದು ತಿಳಿದುಬಂದಿದೆ. 2022ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿಯನ್ನು ರಷ್ಯಾ ಪ್ರಾರಂಭಿಸಿತ್ತು. ಆ ಬಳಿಕ ನಡೆದ ಅತಿದೊಡ್ಡ ದಾಳಿ ಇದೆನ್ನಲಾಗಿದೆ. ಶಾಂತಿ ಮಾತುಕತೆಗೆ ಸಿದ್ಧವಾಗಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆಯ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ ಉಕ್ರೇನಿನ ಮೂರು ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

  • ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

    ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

    ಇಸ್ತಾನ್‌ಬುಲ್‌: ಯುದ್ಧಪೀಡಿತ ರಷ್ಯಾ-ಉಕ್ರೇನ್‌ ನಡುವೆ 2022ರ ಬಳಿಕ 2ನೇ ಸುತ್ತಿನ ಶಾಂತಿ ಮಾತುಕತೆ ಸೋಮವಾರ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ನಡೆಯಿತು. ಸಭೆಯು ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಶುರುವಾದ್ರೂ ಒಂದು ಗಂಟೆಗೆ ಮಾತುಕತೆ ಮುಕ್ತಾಯಗೊಂಡಿತು. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಕಂಡುಬಂದಿತು.

    ಸಭೆಯ ಆರಂಭದಲ್ಲೇ ಉಕ್ರೇನ್‌ ನಡೆಸಿದ ಡ್ರೋನ್‌ ದಾಳಿ ವಿಚಾರ ಬಲವಾಗಿ ವಿರೋಧಿಸಿದ ರಷ್ಯಾ ಪ್ರತಿನಿಧಿಗಳು, ಉಕ್ರೇನ್‌ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರದ ದಾಳಿಗೆ ತಿರುಗೇಟು ನೀಡುವ ಶಕ್ತಿ ನಮಗೂ ಇದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ನಾವು ಭಿಕ್ಷೆ ಪಾತ್ರೆ ಹಿಡಿದು ಬರುತ್ತೇವೆಂದು ಚೀನಾದಂಥ ಮಿತ್ರರಾಷ್ಟ್ರಗಳು ನಿರೀಕ್ಷಸಲ್ಲ: ಪಾಕ್‌ ಪ್ರಧಾನಿ

    ರಷ್ಯಾ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯೇ ಎಲ್ಲದಕ್ಕೂ ಕಾರಣ. ರಷ್ಯಾ ಪ್ರತಿನಿಧಿಗಳು ಉಕ್ರೇನ್‌ನ ಈ ದಾಳಿಯನ್ನು ಬಲವಾಗಿ ವಿರೋಧಿಸಿ, ಷರತ್ತುರಹಿತ ಕದನ ವಿರಾಮ ಮಾತುಕತೆಯನ್ನ ತಿರಸ್ಕರಿಸಿದರು. ʻಆಪರೇಷನ್ ಸ್ಪೈಡರ್ಸ್ ವೆಬ್ʼ ಎಂದು ಹೆಸರಿಸಲಾದ ಈ ರಹಸ್ಯ ಕಾರ್ಯಾಚರಣೆಯಲ್ಲಿ, ಉಕ್ರೇನ್ ಒಂದೂವರೆ ವರ್ಷದಿಂದ ಯೋಜನೆ ರೂಪಿಸಿತ್ತು. ಹೀಗಾಗಿ ಇಸ್ತಾನ್‌ಬುಲ್‌ನಲ್ಲಿ ನಡೆದ ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯ ಸಮಯದಲ್ಲಿ ರಷ್ಯಾ ಬೇಷರತ್‌ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಕೈವ್ ಸಂಧಾನಕಾರರು ತಿಳಿಸಿದ್ದಾರೆ.

    ಸೇನಾ ದಾಳಿಯ ವಿಚಾರವಾಗಿ ಉಭಯ ದೇಶಗಳ ಪ್ರತಿನಿಧಿಗಳ ನಡುವಿನ ವಾಗ್ವಾದದಿಂದ ಸಭೆ ಅಪೂರ್ಣಗೊಂಡಿತು. ‘ಕದನ ವಿರಾಮ ಸಂಬಂಧ ಉಭಯ ದೇಶದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಸಂಘರ್ಷ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಯುದ್ಧ ಕೈದಿಗಳ ಹಸ್ತಾಂತರದ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಸಂಘರ್ಷ ಕೊನೆಗೊಳಿಸುವ ವಿಷಯವಾಗಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಟರ್ಕಿ ವಿದೇಶಾಂಗ ಸಚಿವ ಹಕನ್‌ ಫಿಡಾನ್‌ ತಿಳಿಸಿದ್ದಾರೆ. ಇದನ್ನೂ ಓದಿ: America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

    ಚರ್ಚೆ ವೇಳೆ ರಷ್ಯಾ ಪ್ರತಿನಿಧಿ ಮೆಡಿನ್ಸ್ಕಿ ಅವರು, ಯುದ್ಧದಲ್ಲಿ ಕೊಲಲ್ಪಟ್ಟ 6,000 ಉಕ್ರೇನಿಯನ್ ಸೈನಿಕರ ಶವಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದರು. ಹಾಗಾಗಿ 2-3 ದಿನಗಳ ಸೀಮಿತ ಕದನ ವಿರಾಮ ಪ್ರಸ್ತಾಪಿಸಲಾಗಿದೆ. ಇದು ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸುವ ಉದ್ದೇಶ ಮಾತ್ರ ಹೊಂದಿದೆ ಎಂದು ತಿಳಿಸಿದರು.

    ಪರಸ್ಪರ 1,000 ಯುದ್ಧ ಕೈದಿಗಳ ವಿನಿಮಯ ಒಪ್ಪಂದ
    ಉಕ್ರೇನ್‌ ಮತ್ತು ರಷ್ಯಾ ನಡುವೆ ತಲಾ 1,000 ಯುದ್ಧ ಕೈದಿಗಳ ವಿನಿಮಯದ ಕುರಿತು ರಷ್ಯಾ ಮತ್ತು ಉಕ್ರೇನ್ ಒಪ್ಪಂದಕ್ಕೆ ಬಂದಿವೆ. ಮುಂದುವರಿದು… ಯುದ್ಧ ಕೈದಿಗಳ ವಿನಿಮಯಕ್ಕಾಗಿ ಶಾಶ್ವತ ಸಮಿತಿ ರಚನೆಯ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ಭವಿಷ್ಯದಲ್ಲಿ ಯುದ್ಧ ಕೈದಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪೂರ್ಣಗೊಳಿಸಬಹುದು ಎಂದು ರಷ್ಯಾ ಪ್ರತಿನಿಧಿ ತಿಳಿಸಿದ್ರು.

    ಅಲ್ಲದೇ, ಕ್ರೈಮಿಯಾ, ಡಾನ್‌ಬಾಸ್, ಖೆರ್ಸನ್ ಮತ್ತು ಜಪೊರೊಝೈಗಳನ್ನು ರಷ್ಯಾದ ಪ್ರದೇಶವೆಂದು ಅಂತಾರಾಷ್ಟ್ರೀಯವಾಗಿ ಗುರುತಿಸಬೇಕೆಂದು ಒತ್ತಾಯಿಸಿ ರಷ್ಯಾ ಉಕ್ರೇನ್‌ಗೆ ಶಾಂತಿ ಜ್ಞಾಪಕ ಪತ್ರವನ್ನ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ ಎರಡೂ ದೇಶಗಳು ಹೊಸ ಕೈದಿಗಳ ವಿನಿಮಯಕ್ಕಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು. ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ