Tag: Vladimir putin

  • ಭಾರತ ಯಾರ ಮುಂದೆಯೂ ಅವಮಾನಕ್ಕೆ ಒಳಗಾಗಲು ರಷ್ಯಾ ಬಿಡಲ್ಲ: ಅಮೆರಿಕ ಟ್ಯಾರಿಫ್‌ಗೆ ಪುಟಿನ್‌ ಟಾಂಗ್‌

    ಭಾರತ ಯಾರ ಮುಂದೆಯೂ ಅವಮಾನಕ್ಕೆ ಒಳಗಾಗಲು ರಷ್ಯಾ ಬಿಡಲ್ಲ: ಅಮೆರಿಕ ಟ್ಯಾರಿಫ್‌ಗೆ ಪುಟಿನ್‌ ಟಾಂಗ್‌

    ಮಾಸ್ಕೋ: ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಪ್ರಯತ್ನಿಸುತ್ತಿರುವುದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಟೀಕಿಸಿದ್ದಾರೆ.

    ಭಾರತ (India) ಎಂದಿಗೂ ಅಂತಹ ಬೇಡಿಕೆಗಳಿಗೆ ಮಣಿಯುವುದಿಲ್ಲ. ಯಾರ ಮುಂದೆಯೂ ಅವಮಾನಕ್ಕೊಳಗಾಗಲು ರಷ್ಯಾ ಬಿಡುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಸೋಚಿಯಲ್ಲಿ ನಡೆದ ವಾಲ್ಡೈ ಚರ್ಚಾ ಕ್ಲಬ್‌ನ ಸಮಗ್ರ ಅಧಿವೇಶನದಲ್ಲಿ ಮಾತನಾಡಿದ ರಷ್ಯಾದ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿಯವರನ್ನು ಸಮತೋಲಿತ ಮತ್ತು ಬುದ್ಧಿವಂತ ನಾಯಕ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಭಾರತವು ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೆ. ಇಲ್ಲಿ ಯಾವುದೇ ರಾಜಕೀಯ ಅಂಶವಿಲ್ಲ. ಭಾರತ ನಮ್ಮ ಇಂಧನ ಪೂರೈಕೆಗಳನ್ನು ನಿರಾಕರಿಸಿದರೆ, ಅದು ಕೆಲವು ನಷ್ಟಗಳನ್ನು ಅನುಭವಿಸುತ್ತದೆ. ಅಂದಾಜುಗಳು ಬದಲಾಗುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಭಾರತದಂತಹ ದೇಶದ ಜನರು ನನ್ನನ್ನು ನಂಬಿರಿ. ರಾಜಕೀಯ ನಾಯಕತ್ವವು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಯಾರ ಮುಂದೆಯೂ ಯಾವುದೇ ಅವಮಾನವನ್ನು ಎಂದಿಗೂ ಸಹಿಸಲ್ಲ. ನನಗೆ ಪ್ರಧಾನಿ ಮೋದಿ ಗೊತ್ತು. ಅವರು ಸ್ವತಃ ಈ ರೀತಿಯ ಯಾವುದೇ ಕ್ರಮಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ. ಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ಭಾರತ ಎದುರಿಸುತ್ತಿರುವ ನಷ್ಟಗಳನ್ನು ರಷ್ಯಾದಿಂದ ಕಚ್ಚಾ ತೈಲ ಆಮದುಗಳಿಂದ ಸಮತೋಲನಗೊಳಿಸಲಾಗುತ್ತದೆ. ಜೊತೆಗೆ ಅದು ಸಾರ್ವಭೌಮ ರಾಷ್ಟ್ರವಾಗಿ ಪ್ರತಿಷ್ಠೆಯನ್ನು ಪಡೆಯುತ್ತದೆ ಎಂದು ಪುಟಿನ್‌ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಂಪ್‌ ದಿಟ್ಟತನದಿಂದ ಭಾರತದ ಜೊತೆ ಕದನ ವಿರಾಮ ಸಾಧ್ಯವಾಯ್ತು: ಹಾಡಿ ಹೊಗಳಿದ ಪಾಕ್‌ ಪ್ರಧಾನಿ

    ಎರಡು ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ, ಉಕ್ರೇನ್ ಯುದ್ಧಕ್ಕೆ ಚೀನಾ ಮತ್ತು ಭಾರತ ಪ್ರಾಥಮಿಕ ನಿಧಿದಾರರು ಎಂದು ಕರೆದಿದ್ದರು. ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರೆಸುವ ಮೂಲಕ ಅವರು ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಹಣಕಾಸು ಒದಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಶಿಕ್ಷೆಯಾಗಿ ಅಮೆರಿಕ, ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ವಿಧಿಸಿದ್ದು, ಆಗಸ್ಟ್‌ನಲ್ಲಿ ಭಾರತದ ರಫ್ತಿನ ಮೇಲಿನ ಒಟ್ಟು ತೆರಿಗೆಯನ್ನು ಶೇ. 50 ಕ್ಕೆ ಹೆಚ್ಚಿಸಿದೆ.

  • ಚೀನಾದಲ್ಲಿ ಕಿಮ್ ಸ್ಪರ್ಶಿಸಿದ ಜಾಗವೆಲ್ಲ ಕ್ಲೀನ್‌ – ಭಾರೀ ಚರ್ಚೆಗೆ ಗ್ರಾಸವಾದ ನಡೆ

    ಚೀನಾದಲ್ಲಿ ಕಿಮ್ ಸ್ಪರ್ಶಿಸಿದ ಜಾಗವೆಲ್ಲ ಕ್ಲೀನ್‌ – ಭಾರೀ ಚರ್ಚೆಗೆ ಗ್ರಾಸವಾದ ನಡೆ

    ಬೀಜಿಂಗ್‌: ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜಾಂಗ್-ಉನ್ (Kim Jong Un) ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ (Vladimir Putin) ಭೇಟಿ ಬಳಿಕ ಒಂದು ಅಸಹಜ ಬೆಳವಣಿಗೆಯೊಂದು ನಡೆದಿದೆ.

    ಬೀಜಿಂಗ್‌ನಲ್ಲಿ ಪುಟಿನ್ ಜೊತೆಗಿನ ದ್ವಿಪಕ್ಷೀಯ ಸಭೆಯ ಬಳಿಕ ಕಿಮ್ ಜಾಂಗ್-ಉನ್ ಅವರ ಭದ್ರತಾ ತಂಡ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದೆ. ಕಿಮ್ ಕುಡಿದ ಟೀ ಕಪ್, ಕುಳಿತ ಕುರ್ಚಿ, ಸ್ಪರ್ಶಿಸಿದ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಿದೆ. ಇದನ್ನೂ ಓದಿ:  ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್‌ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?

    ಯಾವ ಕಾರಣಕ್ಕೆ ಸಚ್ಛಗೊಳಿಸಲಾಗಿದೆ ಎನ್ನುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಡಿಎನ್‌ಎ ಸಂಗ್ರಹಣೆಯನ್ನು ತಡೆಗಟ್ಟಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಸ್ವಚ್ಛಗೊಳಿಸಿರಬಹುದು ಎನ್ನಲಾಗುತ್ತಿದೆ. ಈ ಮೂಲಕ ಮೂಲಕ ಗೂಢಾಚಾರಿ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.  ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಕಿಮ್‌ ಜಾಗ್‌ ಉನ್‌ ಮಾತ್ರವಲ್ಲ ಪುಟಿನ್‌ ಅವರು ವಿದೇಶ ಪ್ರವಾಸ ಕೈಗೊಂಡಾಗ ವರ ಅಂಗರಕ್ಷಕರು ಅವರ ಮೂತ್ರ ಮತ್ತು ಮಲವನ್ನು ಮುಚ್ಚಿದ ಚೀಲಗಳಲ್ಲಿ ಸಂಗ್ರಹಿಸಿ, ನಂತರ ಅವುಗಳನ್ನು ವಿಶೇಷ ಸೂಟ್‌ಕೇಸ್‌ಗಳಲ್ಲಿ ಮಾಸ್ಕೋಗೆ ತೆಗೆದುಕೊಂಡು ಹೋಗುತ್ತಾರೆ ಎಂದು ವರದಿಗಳು ಹೇಳುತ್ತವೆ. ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ವಿರೋಧಿಗಳು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಯಲು 2017 ರಿಂದ ಈ ಪದ್ದತಿಯನ್ನು ಜಾರಿಗೊಳಿಸಲಾಗಿದೆ.

  • ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಬೀಜಿಂಗ್‌: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅವರು ಜೊತೆಯಾಗಿ ಔರಸ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

    ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಶೃಂಗಸಭೆ (SCO Summit) ನಡೆದ ಸ್ಥಳದಿಂದ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಇಬ್ಬರು ನಾಯಕರು ಜೊತೆಯಾಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು.

    ಪ್ರಯಾಣದ ಫೋಟೋವನ್ನು ಎಕ್ಸ್‌ನಲ್ಲಿ ಪ್ರಕಟಿಸಿದ ಮೋದಿ, ಶೃಂಗಸಭೆಯ ನಡೆದ ಸ್ಥಳದಿಂದ ನಮ್ಮ ದ್ವಿಪಕ್ಷೀಯ ಸಭೆ ನಡೆಯುವ ಜಾಗಕ್ಕೆ ಒಟ್ಟಿಗೆ ಪ್ರಯಾಣಿಸಿದೆವು. ಪುಟಿನ್‌ ಜೊತೆಗಿನ  ಸಂಭಾಷಣೆಗಳು ಯಾವಾಗಲೂ ಒಳನೋಟದಿಂದ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನ ಓದಿ: ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ Video Of The Day ಎಂದ ರಷ್ಯಾ

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಚೀನಾದ ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ ʼಔರಸ್ʼ ಕಾರನ್ನು ಬಳಸುತ್ತಿದ್ದಾರೆ. ಔರಸ್ ರಷ್ಯಾದ ವಾಹನ ತಯಾರಕ ಔರಸ್ ಮೋಟಾರ್ಸ್ ತಯಾರಿಸಿದ ರೆಟ್ರೋ-ಶೈಲಿಯ ಐಷಾರಾಮಿ ವಾಹನವಾಗಿದೆ. ಇದನ್ನೂ ಓದಿರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

    ಪುಟಿನ್‌ ಮತ್ತು ಮೋದಿ ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬ್ರಿಕ್ಸ್‌ ಶೃಂಗಸಭೆ ಮೋದಿ ರಷ್ಯಾಗೆ ಭೇಟಿ ನೀಡಿದಾಗಲೂ ಇಬ್ಬರು ನಾಯಕರು ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸಿದ್ದರು. ಇದನ್ನೂ ಓದಿಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ ಮೆಚ್ಚಿನ ಕಾರು ನೀಡಿದ ಚೀನಾ!

    ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ ಒತ್ತಡ ಹಾಕುತ್ತಿದ್ದರೂ ಭಾರತ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಟ್ರಂಪ್‌ ಭಾರತ ಮತ್ತು ರಷ್ಯಾದ ಆರ್ಥಿಕತೆಯನ್ನು ಡೆಡ್‌ ಎಕಾನಮಿ ಎಂದು ಜರೆದಿದ್ದರು. ನಂತರ ರಷ್ಯಾದಿಂದ ತೈಲ ಖರೀದಿಸಿ ವಿಶ್ವಕ್ಕೆ ಮಾರಾಟ ಮಾಡುತ್ತಿರುವುದಕ್ಕೆ ಭಾರತದ ವಸ್ತುಗಳಿಗೆ ದಂಡದ ರೂಪದಲ್ಲಿ 25% ತೆರಿಗೆ ವಿಧಿಸಿದ್ದಾರೆ.

  • ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಬೀಜಿಂಗ್‌: ಶಾಂಘೈ ಸಹಕಾರ ಶೃಂಗಸಭೆ (SCO Summit) ಆರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

    ರಷ್ಯಾದ ವಿದೇಶಾಂಗ ಸಚಿವಾಲಯ ಮೂವರು ಮಾತನಾಡುತ್ತಿರುವ ವಿಡಿಯೋವನ್ನು #VideoOfTheDay ಹ್ಯಾಶ್‌ಟ್ಯಾಗ್‌ ಹಾಕಿ ಪೋಸ್ಟ್‌ ಮಾಡಿದೆ.

    ವ್ಲಾದಿಮರ್‌ ಪುಟಿನ್‌ (Vladimir Putin) ಅವರ ಎಡಕೈಯನ್ನು ಹಿಡಿದುಕೊಂಡು ಮೋದಿ ಅವರು ಬರುತ್ತಿದ್ದಾರೆ. ನಡೆದುಕೊಂಡು ಬರುತ್ತಿದ್ದಾಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಎದುರಾಗಿದ್ದಾರೆ. ಈ ವೇಳೆ ಮೂವರು ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಲಘು ಸಂಭಾಷಣೆ ಮಾಡಿದ್ದಾರೆ.  ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ಆಪ್ತನಿಂದ ಜಾತಿ ಅಸ್ತ್ರ


    ಭಾರತ, ರಷ್ಯಾ, ಚೀನಾದ ಜೊತೆ ಅಮೆರಿಕದ ಸಂಬಂಧ ಈಗ ಹಾಳಾಗಿದೆ. ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕದ್ದಕ್ಕೆ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ ಅಮೆರಿಕ 25% ತೆರಿಗೆ ವಿಧಿಸಿತ್ತು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದೆ. ಇದನ್ನೂ ಓದಿ: ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ ಮೆಚ್ಚಿನ ಕಾರು ನೀಡಿದ ಚೀನಾ!

    ಅಮೆರಿಕ ತೆರಿಗೆ ಸಮರ ಆರಂಭಿಸಿದ ಬೆನ್ನಲ್ಲೇ ಮೂವರು ನಾಯಕರು ಮಾತುಕತೆ ನಡೆಸಿರುವುದು ಈಗ ವಿಶ್ವದಲ್ಲಿ ಸಂಚಲನ ಮೂಡಿಸಿದೆ.

  • ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ ಮೆಚ್ಚಿನ ಕಾರು ನೀಡಿದ ಚೀನಾ!

    ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ ಮೆಚ್ಚಿನ ಕಾರು ನೀಡಿದ ಚೀನಾ!

    ಬೀಜಿಂಗ್‌: ಶಾಂಘೈ ಸಹಕಾರ ಶೃಂಗಸಭೆಗೆ (SCO Summit) ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಅವರ ನೆಚ್ಚಿನ ಹಾಂಗ್ಕಿ ಕಾರನ್ನು (Hongqi Car) ನೀಡಲಾಗಿದೆ.

    ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ಈ ಕಾರಿನಲ್ಲೇ ಸಂಚರಿಸಲಿದ್ದಾರೆ.

    ರೆಡ್ ಫ್ಲ್ಯಾಗ್ ಎಂದೂ ಕರೆಯಲ್ಪಡುವ ಹಾಂಗ್ಕಿ L5 ಕಾರನ್ನು ಕ್ಸಿ ಅವರು 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ (Mahabalipuram) ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಬಳಸಿದ್ದರು.  ಇದನ್ನೂ ಓದಿ: ಚೀನಾ ಕಮ್ಯುನಿಸ್ಟ್‌ ಪಕ್ಷದ ಪ್ರಬಲ ನಾಯಕ, ಜಿನ್‌ಪಿಂಗ್‌ ಆಪ್ತಮಿತ್ರನನ್ನ ಭೇಟಿಯಾದ ಮೋದಿ

     

    1958 ರಲ್ಲಿ ಹಾಂಗ್ಕಿ ಮೊದಲ ಕಾರು ನಿರ್ಮಾಣವಾಗಿತ್ತು. ಚೀನಾದ ಕಮ್ಯೂನಿಸ್ಟ್‌ ಪಾರ್ಟಿಯ ಗಣ್ಯರಿಗಾಗಿ ಸರ್ಕಾರಿ ಸ್ವಾಮ್ಯದ ಫಸ್ಟ್‌ ಆಟೋಮೋಟಿವ್‌ ವರ್ಕ್ಸ್‌ ಈ ಕಾರನ್ನು ಉತ್ಪಾದಿಸಿತ್ತು.

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಚೀನಾದ ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ ʼಔರಸ್ʼ ಕಾರನ್ನು ನೀಡಲಾಗಿದೆ. ಔರಸ್ ರಷ್ಯಾದ ವಾಹನ ತಯಾರಕ ಔರಸ್ ಮೋಟಾರ್ಸ್ ತಯಾರಿಸಿದ ರೆಟ್ರೋ-ಶೈಲಿಯ ಐಷಾರಾಮಿ ವಾಹನವಾಗಿದೆ. ಇದನ್ನೂ ಓದಿ: ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

    ದ್ವಿಪಕ್ಷೀಯ ಸಭೆಯಲ್ಲಿ, ಕ್ಸಿ ಜಿನ್‌ಪಿಂಗ್ ಪ್ರಧಾನಿ ಮೋದಿಗೆ ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಸೇರುವುದು ಮತ್ತು ಸ್ನೇಹಿತರಾಗುವುದು ಅತ್ಯಗತ್ಯ ಎಂದು ಹೇಳಿದರು.

  • ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಝಲೆನ್ಸ್ಕಿ ಕರೆ

    ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಝಲೆನ್ಸ್ಕಿ ಕರೆ

    ಬೀಜಿಂಗ್‌: 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಚೀನಾಕ್ಕೆ ಭೇಟಿ ನೀಡಿದ್ದಾರೆ. ಚೀನಾದ ಟಿಯಾಂಜಿನ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಗೆ ಭವ್ಯ ಸ್ವಾಗತ ನೀಡಲಾಯಿತು.

    ಪ್ರಧಾನಿ ಮೋದಿ 2018ರಲ್ಲಿ ಕೊನೆಯ ಬಾರಿ ಚೀನಾ (China) ಪ್ರವಾಸ ಕೈಗೊಂಡಿದ್ದರು. ಆದ್ರೆ 2020ರ ಗಲ್ವಾನ್‌ ಘರ್ಷಣೆಯ ಬಳಿಕ ಪರಸ್ಪರ ದೂರ ಸರಿದಿದ್ದ ಭಾರತ ಮತ್ತು ಚೀನಾ ಭವಿಷ್ಯದ ಭೌಗೋಳಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈಗ ಮತ್ತೆ ಹತ್ತಿರವಾಗಲು ಮುಂದಾಗಿವೆ. ಇಡೀ ಜಗತ್ತು ಅಚ್ಚರಿಗೊಳ್ಳುವ ರೀತಿಯಲ್ಲಿ ಭಾರತ-ಚೀನಾ (India China) ಸಂಬಂಧ ಸುಧಾರಣೆ ಕಾಣುತ್ತಿದೆ. ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ

    ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಅವರ ಆಹ್ವಾನದ ಮೇರೆಗೆ ಭೇಟಿ ನೀಡಿರುವ ಮೋದಿ ಶಾಂಘೈ ಸಹಕಾರ ಮಂಡಳಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಆ.31ರಂದು ಸಭೆಯ ಔತಣಕೂಟದಲ್ಲಿ ಭಾಗಿಯಾಗಲಿದ್ದು, ಸೆ.1ರಂದು ಮುಖ್ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಮಯದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ರನ್ನೂ ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.  ಇದನ್ನೂ ಓದಿ: ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

    ಪುಟಿನ್‌ ಭೇಟಿಗೂ ಮುನ್ನವೇ ಝಲೆನ್ಸ್ಕಿ ಕರೆ
    ಆಗಸ್ಟ್‌ 31ರಂದು ಟಿಯಾನ್‌ಜಿನ್‌ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಚೀನಾ ಅಧ್ಯಕ್ಷ ಕ್ಷಿ, ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಚರ್ಚೆ ನಡೆಸಲಿದ್ದಾರೆ. ಅಮೆರಿಕದ 50% ಸುಂಕದ ಬಗ್ಗೆ ಗಂಭೀರ ಮಾತುಕತೆ ನಡೆಸಲಿದ್ದಾರೆ. ಆದ್ರೆ ತ್ರಿಮೂರ್ತಿಗಳ ಭೇಟಿಗೂ ಮುನ್ನವೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದು, ಉಕ್ರೇನ್‌ನಲ್ಲಿನ ಯುದ್ಧ ಹಾಗೂ ಶಾಂತಿ ನಿರೀಕ್ಷೆಯ ಕುರಿತು ಮಾತುಕತೆ ನಡೆಸಿದ್ದಾರೆ. ಬಳಿಕ ಚೀನಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತವು ʻರಷ್ಯಾ ಮತ್ತು ಇತರ ನಾಯಕರಿಗೆ ಸೂಕ್ತ ಸಂದೇಶʼ ನೀಡಲು ಸಿದ್ಧವಾಗಿದೆ ಝಲೆನ್ಸ್ಕಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಟ್ರಂಪ್‌ ಸುಂಕ ಸಮರಕ್ಕೆ ಕೌಂಟರ್‌ ಕೊಡಲು ಸಜ್ಜು
    ಇದಕ್ಕೂ ಮುನ್ನ ಚೀನಾ ದ್ವಿಪಕ್ಷೀಯ ಸಂಬಂಧ ಬಗ್ಗೆ ಮಾತನಾಡಿರುವ ಮೋದಿ, ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಭಾರತ-ಚೀನಾ ಒಟ್ಟಾಗಿ ಕೆಲಸ ಮಾಡಬೇಕು. ಪರಸ್ಪರ ಗೌರವ, ಆಸಕ್ತಿ, ಸೂಕ್ಷ್ಮ ಮಾತುಕತೆಯ ಆಧಾರದ ಮೇಲೆ ದೀರ್ಘಕಾಲಿನ ದೃಷ್ಟಿಕೋನದಿಂದ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ನಾವು ಸಿದ್ಧರಿದ್ದೇವೆ. 2 ನೆರೆಹೊರೆಯ ಮತ್ತು ಜಗತ್ತಿನ ದೊಡ್ಡ ರಾಷ್ಟ್ರಗಳಾಗಿ ಭಾರತ ಮತ್ತು ಚೀನಾ ನಡುವಿನ ಸೌಹಾರ್ದಯುತ ಸಂಬಂಧ ಜಾಗತಿಕ ಶಾಂತಿ, ಸಮೃದ್ಧಿ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಅಂತ ಮೋದಿ ಪ್ರತಿಪಾದಿಸಿದ್ದಾರೆ.

  • ಮೋದಿ, ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

    ಮೋದಿ, ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

    – ಎಸ್‌ಸಿಒ ಸಮ್ಮೇಳನಕ್ಕೆ ಆಗಮಿಸಲಿದ್ದಾರೆ ಮೋದಿ, ಪುಟಿನ್

    ಬೀಜಿಂಗ್: ಮುಂದಿನ ವಾರ ಚೀನಾದಲ್ಲಿ (China) ನಡೆಯಲಿರುವ ಪ್ರಾದೇಶಿಕ ಭದ್ರತಾ ವೇದಿಕೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) 20 ಕ್ಕೂ ಹೆಚ್ಚು ವಿಶ್ವ ನಾಯಕರನ್ನು ಒಟ್ಟುಗೂಡಿಸಲಿದ್ದಾರೆ. ಪ್ರಧಾನಿ ಮೋದಿ (PM Modi), ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ.

    ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳ ಒಗ್ಗಟ್ಟಿನ ಪ್ರದರ್ಶನವನ್ನು ನೀಡಲಿದ್ದಾರೆ. ನಿರ್ಬಂಧಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾ ಮತ್ತೊಂದು ರಾಜತಾಂತ್ರಿಕ ದಂಗೆ ನಡೆಸಲು ಜಿನ್‌ಪಿಂಗ್ ಸಹಾಯ ಮಾಡುತ್ತಾರೆ.‌ ಇದನ್ನೂ ಓದಿ: ಆ.29ರಿಂದ ಸೆ.1ರವರೆಗೆ ಮೋದಿ ಜಪಾನ್, ಚೀನಾ ಪ್ರವಾಸ

    ಆ.31 ರಿಂದ ಸೆ.1 ರವರೆಗೆ ಉತ್ತರ ಬಂದರು ನಗರ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ, ಮಧ್ಯ ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ನಾಯಕರನ್ನು ಆಹ್ವಾನಿಸಲಾಗಿದೆ.

    2020 ರಲ್ಲಿ ಮಾರಕ ಗಡಿ ಘರ್ಷಣೆಯಿಂದ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಎರಡೂ ನೆರೆಹೊರೆಯವರು ಕೆಲಸ ಮಾಡುತ್ತಿರುವಾಗ, ಏಳು ವರ್ಷಗಳ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ 50%ರಷ್ಟು ಸುಂಕ – ಅಮೆರಿಕದಿಂದ ಅಧಿಸೂಚನೆ

    ಕಳೆದ ವರ್ಷ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಕೊನೆಯ ಬಾರಿಗೆ ಕ್ಸಿ ಮತ್ತು ಪುಟಿನ್ ಅವರೊಂದಿಗೆ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರ ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಅಧಿಕಾರಿಗಳು, ಚೀನಾ ಮತ್ತು ಭಾರತದೊಂದಿಗೆ ತ್ರಿಪಕ್ಷೀಯ ಮಾತುಕತೆಗಳು ಶೀಘ್ರದಲ್ಲೇ ನಡೆಯಲಿವೆ ಎಂದು ಮಾಸ್ಕೋ ಆಶಿಸುತ್ತಿದೆ ಎಂದು ಹೇಳಿದ್ದರು.

  • ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್‌, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್‌ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ

    ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್‌, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್‌ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ

    ನವದೆಹಲಿ/ಕೈವ್‌: ಭಾರತ ಮತ್ತು ರಷ್ಯಾ (India Russia) ನಡುವಿನ ಸ್ನೇಹ ಇಡೀ ವಿಶ್ವಕ್ಕೆ ಗೊತ್ತಿದೆ. ಅಮೆರಿಕ ಭಾರತದ ಮೇಲೆ ಶಕ್ತಿ ಪ್ರದರ್ಶನಕ್ಕೆ ಮುಂದಾದಾಗಲೆಲ್ಲ ರಷ್ಯಾ, ನಮ್ಮ ದೇಶದ ಜೊತೆಗೆ ನಿಂತಿರೋದಕ್ಕೆ ಹಲವು ಉದಾಹರಣೆಗಳಿವೆ. ಅದೇ ಸಮಯದಲ್ಲಿ ಭಾರತ-ಉಕ್ರೇನ್‌ ಜೊತೆಗೂ ಸ್ನೇಹದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಈ ವರ್ಷಾಂತ್ಯಕ್ಕೆ ಇಬ್ಬರೂ ವಿಶ್ವನಾಯಕರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರನ್ನ ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ರಷ್ಯಾ ಅಧ್ಯಕ್ಷ ಪುಟಿನ್‌ ಸಹ ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯ ಹೆಚ್ಚಾಗುತ್ತಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ.

    ಈ ಕುರಿತು ಉಕ್ರೇನಿಯನ್ ರಾಯಭಾರಿ ಓಲೆಕ್ಸಾಂಡರ್ ಪೋಲಿಷ್‌ಚುಕ್ ಮಾತನಾಡಿ, ಭಾರತ ಮತ್ತು ಉಕ್ರೇನ್‌ ನಡುವಿನ ಭವಿಷ್ಯದ ಕಾರ್ಯತಂತ್ರಗಳು ವೇಗವಾಗಿ ಸಾಗುತ್ತಿವೆ. ಪ್ರಧಾನಿ ಮೋದಿ ಅವರು ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಝಲೆನ್ಸ್ಕಿ ಸಹ ಒಪ್ಪಿದ್ದು, ದಿನಾಂಕವನ್ನು ನಿಗದಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಝೆಲೆನ್ಸ್ಕಿ ಅವರ ಭಾರತ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದಾರೆ.

    ವರ್ಷಾಂತ್ಯದಲ್ಲಿ ಪುಟಿನ್ ಕೂಡ
    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದೃಢಪಡಿಸಿದರು. ರಷ್ಯಾದ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಕೂಡ ಇದನ್ನು ಖಚಿತಪಡಿಸಿದೆ.

    ಸುಂಕದಿಂದ ಸಿಗುತ್ತಾ ರಿಲೀಫ್‌?
    ಟ್ರಂಪ್‌ ಎಚ್ಚರಿಕೆ ಬಳಿಕವೂ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸಿದೆ. ಹೀಗಾಗಿ ಭಾರತದ ಮೇಲೆ ಶೇ.25 ವಿಧಿಸಿದ್ದ ಸುಂಕದ ಪ್ರಮಾಣವನ್ನು 50%ಗೆ ಟ್ರಂಪ್‌ ಹೆಚ್ಚಿದ್ದಾರೆ. ಇದು ಆ.27ರಿಂದ ಅನ್ವಯವಾಗಲಿದೆ. ಅಷ್ಟರಲ್ಲಿ ಭಾರತಕ್ಕೆ ರಿಲೀಫ್‌ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

  • ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

    ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

    ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಕೊನೆಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ‌ ಇದ್ದಕ್ಕಿದ್ದಂತೆ ಯೂಟರ್ನ್‌ ಹೊಡೆದಿದ್ದಾರೆ. ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ನೇರ ಹಸ್ತಕ್ಷೇಪದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧರಿಸಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಇಲ್ಲದೇ ಪುಟಿನ್‌ – ಝಲೆನ್ಸ್ಕಿ ಮೊದಲು ಮುಖಾಮುಖಿ ಭೇಟಿಯಾಗಬೇಕು, ನೇರ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾರೆ.

    ಶ್ವೇತಭವನದ (White House) ಆಡಳಿತಾಧಿಕಾರಿಗಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಮುಂದಿನ ಹಂತದ ಶಾಂತಿ ಮಾತುಕತೆಗಳಲ್ಲಿ ಟ್ರಂಪ್‌ ನೇರವಾಗಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಬದಲಾಗಿ ರಷ್ಯಾ ಅಧ್ಯಕ್ಷ ಪುಟಿನ್‌, ಉಕ್ರೇನ್‌ ಅಧ್ಯಕ್ಷ ಝಲೆನ್ಸ್ಕಿ (Volodymyr Zelenskyy) ಮೊದಲು ಪರಸ್ಪರ ಭೇಟಿಯಾಗಬೇಕೆಂದು ಅವರು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಮೇಲೆ ಒತ್ತಡ ಹೇರಲು ಭಾರತದ ಮೇಲೆ ಸುಂಕ – ವೈಟ್‌ ಹೌಸ್‌

    ಟ್ರಂಪ್‌ ದೃಷ್ಟಿಕೋನದಲ್ಲಿ ಯುದ್ಧ ಕೊನೆಗೊಳಿಸುವ ಮುಂದಿನ ಹೆಜ್ಜೆ ಪುಟಿನ್‌, ಝಲೆನ್ಸ್ಕಿ ನಡುವಿನ ದ್ವಿಪಕ್ಷೀಯ ಸಭೆ. ಈ ಸಭೆ ನಿಜವಾಗ್ಲೂ ನಡೆಯುತ್ತದೆಯೋ, ಇಲ್ಲವೋ? ಅನ್ನೋದು ಖಚಿತವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

    ಟ್ರಂಪ್‌ ಉತ್ತರವೇನು?
    ರೇಡಿಯೋವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುದ್ದು ಮಾತನಾಡಿದ ಟ್ರಂಪ್‌, ಇಬ್ಬರೂ ಮಾತುಕತೆಗೆ ತಯಾರಿ ನಡೆಸುತ್ತಿದ್ದಾರೆ. ದ್ವಿಪಕ್ಷೀಯ ಸಭೆಯಲ್ಲಿ ಏನಾಗುತ್ತದೆ ಎಂಬುದನ್ನು ನಾನು ಕಾದು ನೋಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ

    ಶ್ವೇತಭವನದಲ್ಲಿ ಏನಾಗಿತ್ತು?
    ಇತ್ತೀಚೆಗಷ್ಟೇ ಶ್ವೇತಭವನದಲ್ಲಿ ಉಕ್ರೇನ್‌ ಮತ್ತು ಯುರೋಪಿಯನ್‌ ಒಕ್ಕೂಟದ ನಾಯಕರ ಜೊತೆ ಟ್ರಂಪ್‌ ಸಭೆ ನಡೆಸಿದ್ದರು. ಸಭೆ ಮುಗಿದ ಬಳಿಕ ಟ್ರಂಪ್‌ ಈ ಎಲ್ಲಾ ನಾಯಕರನ್ನು ತನ್ನ ಓವಲ್ ಕಚೇರಿಯ ಕ್ಯಾಬಿನ್‌ಗೆ ಕರೆಸಿ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿದ್ದರು. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನೇರ ಮಾತುಕತೆಗಳನ್ನು ಮುಂದುವರಿಸಲು ಪುಟಿನ್‌ಗೆ ಕರೆ ನೀಡಿದ್ದರು. ಇಬ್ಬರು ನಾಯಕರ ಮಧ್ಯೆ ಒಟ್ಟು 40 ನಿಮಿಷಗಳ ಮಾತುಕತೆ ನಡೆದಿತ್ತು. ಈ ವೇಳೆ ಇತ್ತೀಚಿನ ಅಲಾಸ್ಕಾ ಭೇಟಿಯ ಸಮಯದಲ್ಲಿ ಟ್ರಂಪ್ ನೀಡಿದ ಆತಿಥ್ಯ ಮತ್ತು ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಗೆ ಪುಟಿನ್‌ ಟ್ರಂಪ್‌ಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

  • ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

    ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

    ವಾಷಿಂಗ್ಟನ್‌: ಉಕ್ರೇನ್‌- ರಷ್ಯಾ ಯುದ್ಧ ಕೊನೆಗೊಳಿಸಲು ಪ್ರಯತ್ನ ನಡೆಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ವ್ಲಾದಿಮಿರ್‌ ಪುಟಿನ್‌ ಮತ್ತು ಝೆಲೆನ್‌ಸ್ಕಿ ಮಾತುಕತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ.

    ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅವರನ್ನು ಭೇಟಿಯಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಶ್ವೇತಭವನದಲ್ಲಿ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ (Zelensky) ಮತ್ತು ಯೋಪಿಯನ್‌ ನಾಯಕರ (European Leaders) ಜೊತೆ ಸಭೆ ನಡೆಸಿದರು.

    ಝೆಲೆನ್‌ಸ್ಕಿ ಭೇಟಿ ವೇಳೆ ಮಾತನಾಡಿದ ಟ್ರಂಪ್, ಯುದ್ಧ ಕೊನೆಗೊಳ್ಳಲಿದೆ. ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಾನು ನಿಮಗೆ ಹೇಳಲಾರೆ. ಆದರೆ ಈ ಯುದ್ಧ ನಿಲ್ಲಲಿದೆ. ಪುಟಿನ್ ಯುದ್ಧ ನಿಲ್ಲಿಸಲು ಬಯಸುತ್ತಿದ್ದು ಝೆಲೆನ್ಸ್ಕಿ ಕೂಡ ಒಪ್ಪಿಕೊಂಡರೆ ಶೀಘ್ರದಲ್ಲೇ ಯುದ್ಧ ನಿಲ್ಲುತ್ತದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಇಡೀ ಜಗತ್ತು ಈ ಯುದ್ಧದಿಂದ ಬೇಸತ್ತಿದೆ. ನಾವು ಅದನ್ನು ಕೊನೆಗೊಳಿಸುತ್ತೇವೆ. ನಾನು 6 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಅದರಲ್ಲಿ ಭಾರತ -ಪಾಕ್ ಯುದ್ಧವೂ ಒಂದು ಎಂದು ಟ್ರಂಪ್ ಹೇಳಿದರು.

    ಟ್ರಂಪ್ ಮತ್ತು ಝೆಲೆನ್ಸ್ಕಿ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಉಪಸ್ಥಿತರಿದ್ದರು.

    ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ನಾಯಕರ ನಡುವೆ ನಡೆದ ಮಹತ್ವದ ಮಾತುಕತೆಗಳ ನಂತರ ಪುಟಿನ್ ಮತ್ತು ಝೆಲೆನ್ಸ್ಕಿ ಶಾಂತಿ ಮಾತುಕತೆಗೆ ಒಪ್ಪಿದ್ದಾರೆ ಎಂದು ವರದಿಯಾಗಿದೆ.

    ಶ್ವೇತಭವನದಲ್ಲಿ ಏನಾಯ್ತು?
    ಆರಂಭದಲ್ಲಿ ಉಕ್ರೇನ್‌ ಮತ್ತು ಯುರೋಪಿಯನ್‌ ಒಕ್ಕೂಟದ ನಾಯಕರ ಜೊತೆ ಟ್ರಂಪ್‌ ಸಭೆ ನಡೆಸಿದರು. ಬಳಿಕ ಟ್ರಂಪ್‌ ಈ ಎಲ್ಲಾ ನಾಯಕರನ್ನು ತನ್ನ ಓವಲ್ ಕಚೇರಿಯ ಕ್ಯಾಬಿನ್‌ಗೆ ಕರೆಸಿ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿದರು.

    ಯುರೋಪಿಯನ್ ನಾಯಕರು ಮತ್ತು ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆಗಳ ಬಗ್ಗೆ ಟ್ರಂಪ್ ವಿವರಿಸಿದರು. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನೇರ ಮಾತುಕತೆಗಳನ್ನು ಮುಂದುವರಿಸಲು ಪುಟಿನ್‌ಗೆ ಕರೆ ನೀಡಿದರು. ಇಬ್ಬರು ನಾಯಕರ ಮಧ್ಯೆ ಒಟ್ಟು 40 ನಿಮಿಷಗಳ ಮಾತುಕತೆ ನಡೆಯಿತು. ಈ ವೇಳೆ ಇತ್ತೀಚಿನ ಅಲಾಸ್ಕಾ ಭೇಟಿಯ ಸಮಯದಲ್ಲಿ ಟ್ರಂಪ್ ನೀಡಿದ ಆತಿಥ್ಯ ಮತ್ತು ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಗೆ ಪುಟಿನ್‌ ಟ್ರಂಪ್‌ಗೆ ಧನ್ಯವಾದ ಹೇಳಿದರು.