Tag: Vizag Steel Factory

  • ಹೊಸ ವರ್ಷಕ್ಕೆ ಸಿಹಿಸುದ್ದಿ; ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ

    ಹೊಸ ವರ್ಷಕ್ಕೆ ಸಿಹಿಸುದ್ದಿ; ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ

    – ಪ್ರಧಾನಿ ಕಾರ್ಯಾಲಯದ ಜತೆ ಕೇಂದ್ರದ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ

    ನವದೆಹಲಿ: ಬಹುತೇಕ ಖಾಸಗೀಕರಣದ ಹೊಸ್ತಿಲಲ್ಲಿದ್ದ ಭಾರತೀಯ ರಾಷ್ಟ್ರೀಯ ಉಕ್ಕು ನಿಗಮ (RINL) ಅಥವಾ ವೈಜಾಗ್ ಸ್ಟೀಲ್ ಕಾರ್ಖಾನೆಯನ್ನು ಹೊಸ ವರ್ಷದಲ್ಲಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಅವಿರತ ಪ್ರಯತ್ನ ಫಲಕಾರಿಯಾಗಿದೆ.

    ಹೊಸ ವರ್ಷದ ಆರಂಭದಲ್ಲಿಯೇ ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ ಯೋಜನೆ ಘೋಷಣೆ ಆಗುವ ಸಾಧ್ಯತೆ ಇದೆ. 2030ಕ್ಕೆ ದೇಶದ ಉಕ್ಕು ಉತ್ಪಾದನೆ ಪ್ರಮಾಣವನ್ನು 300 ದಶಲಕ್ಷ ಟನ್‌ಗಳಿಗೆ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಮಾಡಿರುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕೇಂದ್ರ ಉಕ್ಕು ಸಚಿವರು ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿದ್ದಾರೆ.

    ಶೇ.100ರಷ್ಟು ಬಂಡವಾಳ ವಾಪಸಾತಿ ನಿರ್ಧಾರದಿಂದ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಆಗುವ ಹಂತದಲ್ಲಿದ್ದ ವೈಜಾಗ್ ಸ್ಟೀಲ್‌ಗೆ ಕೊನೆಗೂ ಜೀವದಾನವಾಗುತ್ತಿದೆ. ಈ ಬಗ್ಗೆ ಕಾರ್ಖಾನೆಗೆ ಮರುಜೀವ ಕೊಡುವ ಪುನಶ್ಚೇತನ ಯೋಜನೆಯ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಜತೆ ಕೇಂದ್ರ ಸಚಿವರು ವಿಸ್ತೃತ ಸಮಾಲೋಚನೆ ನಡೆಸಿದ್ದಾರೆ.

    ಪ್ರಧಾನಿಗಳ ಕನಸಿನ ‘ವಿಕಸಿತ ಭಾರತ 2047’ ಗುರಿ ತಲುಪಲು ಭಾರತೀಯ ಉಕ್ಕು ಕ್ಷೇತ್ರದ ಕೊಡುಗೆ ಮಹತ್ವವಾದದ್ದು. ಈ ದಿಸೆಯಲ್ಲಿ ಪ್ರಧಾನಿಗಳ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರ ಸರ್ಕಾರ ಕಾಯಕಲ್ಪ ನೀಡುತ್ತಿದೆ ಎಂದು ಹೇಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ತಾವು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ 2024 ಜುಲೈ 10-11ರಂದು ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿದ್ದರು.

    ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ಹಣಕಾಸು ಸಚಿವಾಲಯವು ವೈಜಾಗ್ ಸ್ಟೀಲ್ ಕಾರ್ಖಾನೆ ಪುನಚ್ಚೇತನ ಯೋಜನೆ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಖ್ಯವಾಗಿ ವಿಶೇಷವಾಗಿ ಕಾರ್ಖಾನೆಯ ಸಾಲಗಳ ಪುನಾರಚನೆ ಮತ್ತು ಹಣಕಾಸಿನ ಬೆಂಬಲದ ಅಗತ್ಯಗಳನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೂಡ ಕೇಂದ್ರ ಉಕ್ಕು ಸಚಿವರು ನಿರ್ಮಲಾ ಸೀತಾರಾಮನ್ ಅವರೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದ್ದಾರೆ.

    RINL ಭಾರತದ ಉಕ್ಕು ಉದ್ಯಮದ ಆಧಾರ ಸ್ತಂಭ
    ವೈಜಾಗ್ ಸ್ಟೀಲ್ ಎಂದೇ ಹೆಸರಾಗಿರುವ RINL, ಪ್ರಾರಂಭದಿಂದಲೂ ಭಾರತದ ಉಕ್ಕು ಕ್ಷೇತ್ರದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿದೆ. ಅನೇಕ ವರ್ಷಗಳ ಕಾಲ ವೈಭವದಿಂದ ಕಾರ್ಯ ನಿರ್ವಹಿಸಿದ್ದ ಕಾರ್ಖಾನೆಯು, ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಸಾಲ, ಕಾರ್ಯಾಚರಣೆಯ ಅಸಮರ್ಥತೆ ಮತ್ತು ಜಾಗತಿಕ ಮಾರುಕಟ್ಟೆ ಒತ್ತಡಗಳಿಂದಾಗಿ ತೀವ್ರ ಹಣಕಾಸು ಬಿಕ್ಕಟ್ಟಿಗೆ ಸಿಕ್ಕಿತ್ತು. ಕಾರ್ಖಾನೆಯನ್ನು ಪುನಚ್ಚೇತನಗೊಳಿಸುವುದು ಎಂದರೆ ಕೇವಲ ಕಾರ್ಖಾನೆಯ ರಕ್ಷಣೆ ಮಾತ್ರವಲ್ಲ, ಸಾವಿರಾರು ಕಾರ್ಮಿಕರ ಜೀವನೋಪಾಯವನ್ನು ರಕ್ಷಣೆ ಮಾಡುವುದು ಹಾಗೂ ದೇಶದ ಉಕ್ಕು ಅಗತ್ಯಗಳಿಗಳಿಗೆ ಇದೇ ಕಾರ್ಖಾನೆಯಿಂದ ದೊಡ್ಡ ಕೊಡುಗೆ ನೀಡುವುದೇ ಆಗಿದೆ ಎಂದು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಈಗಾಗಲೇ ವೈಜಾಗ್ ಸ್ಟೀಲ್ ಕಾರ್ಖಾನೆಯ ಪುನಚ್ಚೇತನಕ್ಕಾಗಿ ಸರಣಿ ಸಭೆಗಳನ್ನು ನಡೆಸಿರುವ ಸಚಿವರು; ಪ್ರಧಾನಿಗಳ ಕಾರ್ಯಾಲಯ, ಹಣಕಾಸು ಸಚಿವಾಲಯ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಕಾರ್ಮಿಕ ಸಂಘಟನೆಗಳ ಜತೆಯೂ ನಿರಂತರ ಮಾತುಕತೆ ನಡೆಸಿದ್ದರು.

    ಕಾರ್ಖಾನೆ ಪುನಚ್ಚೇತನ ಎಂದರೆ ಕಾರ್ಖಾನೆ ಹೊಂದಿರುವ ಸಾಲ ಪುನಾರಚನೆ, ಸೌಲಭ್ಯಗಳ ಆಧುನೀಕರಣ, ತಾಂತ್ರಿಕ ಉನ್ನತೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಸಚಿವರು; ಜಾಗತಿಕ ಮಾರುಕಟ್ಟೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಖಾನೆಯನ್ನು ಸಜ್ಜುಗೊಳಿಸಲು ಸಚಿವರು ಊದೇಶಿಸಿದ್ದಾರೆ. ಪುನಚ್ಚೇತನ ಯೋಜನೆಯಲ್ಲಿ ಇವೆಲ್ಲಾ ಅಂಶಗಳು ಸೇರಿವೆ.

    RINL ಪುನಶ್ಚೇತನ ರಾಷ್ಟ್ರೀಯ ಆದ್ಯತೆ
    RINL ಕಾರ್ಖಾನೆಗೆ ಮರುಜೀವ ನೀಡುವ ಯೋಜನೆ ರಾಷ್ಟ್ರೀಯ ಆದ್ಯತೆ ಎಂದು ಬಣ್ಣಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಭಾರತದ ಕೈಗಾರಿಕಾ ಪರಂಪರೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಸರಕಾರ ಇಟ್ಟಿರುವ ದಿಟ್ಟ ಹೆಜ್ಜೆ ಇದಾಗಿದೆ ಇಂದು ಹೇಳಿದ್ದಾರೆ.

    ಪ್ರಧಾನಿಗಳ ಕಾರ್ಯಾಲಯದ ಸ್ಪಷ್ಟ ಭರವಸೆ ಹಾಗೂ ಹಣಕಾಸು ಸಚಿವಾಲಯದ ಸಹಕಾರ ಕಾರ್ಖಾನೆಯನ್ನು ಉಳಿಸುವ ಪಯತ್ನಕ್ಕೆ ಕಾರಣವಾಗಿದೆ. ಇದು ಕೇವಲ ಉಕ್ಕಿನ ಸ್ಥಾವರವನ್ನು ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲ, ಸಾವಿರಾರು ಕಾರ್ಮಿಕರ ಕುಟುಂಬಗಳ ಜೀವನೋಪಾಯ ಕಾಪಾಡುವುದೇ ಆಗಿದೆ. ಅಲ್ಲದೆ, ದೇಶೀಯ ಉಕ್ಕು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಆಮದು ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ವೈಜಾಗ್ ಸ್ಟೀಲ್ ಭಾರತದ ಕೈಗಾರಿಕೆ ಕ್ಷೇತ್ರದ ಶಕ್ತಿ ಮತ್ತು ಹೆಮ್ಮೆಯ ಸಂಕೇತ, ಮತ್ತು ಅದರ ಯಶಸ್ಸು ಯಾವುದೇ ಸವಾಲನ್ನು ಜಯಿಸುವ ಭಾರತದ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

    ಭಾರತದ ಭವಿಷ್ಯದ ಅಗತ್ಯಗಳಿಗೆ, ಬೇಡಿಕೆಗಳಿಗೆ ಈ ಕಾರ್ಖಾನೆ ಬಹುದೊಡ್ಡ ಕೊಡುಗೆ ನೀಡಲಿದೆ. ಪ್ರಧಾನಿ ಅವರ ಗುರಿಯಾದ ‘ವಿಕಸಿತ ಭಾರತ 2047’ ಗುರಿ ಸಾಧಿಸಲು ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ ಕೊಡುವ ಯೋಜನೆ ಮಹತ್ವದ ಉಪಕ್ರಮವಾಗಿದೆ. ರಾಷ್ಟ್ರದ ಹಿತಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಭಾರತದ ಗುರಿಗೆ ಈ ಕಾರ್ಖಾನೆ ಗಣನೀಯ ಕೊಡುಗೆ ನೀಡುತ್ತದೆ ಎನ್ನುವ ವಿಶ್ವಾಸ ಸರ್ಕಾರಕ್ಕೆ ಇದೆ ಎಂದು ಅವರು ಸಚಿವರು ತಿಳಿಸಿದ್ದಾರೆ.

  • ವೈಜಾಗ್ ಉಕ್ಕು ಕಾರ್ಖಾನೆ ಪುನಶ್ಚೇತನ ಉನ್ನತ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸಭೆ

    ವೈಜಾಗ್ ಉಕ್ಕು ಕಾರ್ಖಾನೆ ಪುನಶ್ಚೇತನ ಉನ್ನತ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸಭೆ

    ನವದೆಹಲಿ: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ವೈಜಾಗ್ ಉಕ್ಕು ಕಾರ್ಖಾನೆಯ (Vizag Steel Factory) ಪ್ರಗತಿ ಪರಿಶೀಲನೆ ನಡೆಸಿದರು. ಉಕ್ಕು ಸಚಿವಾಲಯದ ವ್ಯಾಪ್ತಿಗೆ ಬರುವ ಈ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸುವ ಹಾಗೂ ಆರ್ಥಿಕವಾಗಿ ಕಂಪನಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳ ಜತೆಗೆ ಸಚಿವರು ಮಹತ್ವದ ಸಭೆ ನಡೆಸಿದರು.

    ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಯನ್ನು ಮೇಲೆತ್ತುವ ಸಲುವಾಗಿ ಉಕ್ಕು ಉತ್ಪಾದನೆಯನ್ನು ಹೆಚ್ಚಳ ಮಾಡಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ಕಂಪನಿಯ ಕಾರ್ಯ ಚಟುವಟಿಕೆ, ಆರ್ಥಿಕ ಸ್ಥಿತಿಗತಿ, ಉತ್ಪಾದನೆ, ಹೊಸ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಸಿಬಿಐ ಬಂಧನ- ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ

    ಸಭೆಯಲ್ಲಿ ಹಾಜರಿದ್ದ ಕಂಪನಿಯ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಿಂದ ಸಮಗ್ರ ಮಾಹಿತಿ ಪಡೆದುಕೊಂಡ ಸಚಿವರು, ಮೊದಲು ಉತ್ಪಾದನೆ ಹೆಚ್ಚಳ, ಕ್ಷಮತೆ ವೃದ್ಧಿಸಿಕೊಳ್ಳುವ ಕೆಲಸ ಮಾಡಿ. ನಂತರ ಆರ್ಥಿಕವಾಗಿ ಕಂಪನಿಗೆ ಹೇಗೆ ನೆರವಾಗಬೇಕು ಎನ್ನುವುದನ್ನು ಆಲೋಚನೆ ಮಾಡುತ್ತೇವೆ ಎಂದು ಹೇಳಿದರು.

    ಅಲ್ಲದೆ, ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ನಿಗದಿ ಮಾಡಿದ್ದಾರೆ. ಈ ಗುರಿ ಮುಟ್ಟುವ ಬಗ್ಗೆ ನಾವು ಅವಿರತವಾಗಿ ಕೆಲಸ ಮಾಡಬೇಕು. ಅದಕ್ಕೆ ಪೂರಕವಾಗಿ ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಹತ್ರಾಸ್‌ ದುರಂತ- ಪರಿಹಾರದ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ ಆದಿತ್ಯನಾಥ್‌

    ಉಕ್ಕು ಕ್ಷೇತ್ರದಲ್ಲಿ ಚೀನಾ ಒಡ್ಡುತ್ತಿರುವ ಪೈಪೋಟಿಯನ್ನು ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡಿದ ಸಚಿವರು, ದೇಶೀಯವಾಗಿ ಉಕ್ಕು ಕ್ಷೇತ್ರವನ್ನು ಬಲಪಡಿಸಬೇಕು. ಸ್ಪೆಶಾಲಿಟಿ ಸ್ಟೀಲ್ ಮತ್ತು ಗ್ರೀನ್ ಸ್ಟೀಲ್ ಉತ್ಪಾದನೆಗೆ ನಾವು ಹೆಚ್ಚು ಒತ್ತು ಕೊಡಬೇಕಿದೆ. ತಾಂತ್ರಿಕ ಮತ್ತು ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸವಾಲುಗಳನ್ನು ಎದುರಿಸಬೇಕಿದೆ. ಕಾರ್ಖಾನೆ ಪುನಶ್ಚೇತನಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಿ ಎಂದರು.

    ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀನಿವಾಸ್ ಭೂಪತಿರಾಜು ವರ್ಮ, ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರ ನಾಥ ಸಿನ್ಹಾ, ಹೆಚ್ಚುವರಿ ಕಾರ್ಯದರ್ಶಿ ಸುಕೃತಿ ಲಿಖಿ, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೇಂದು ಪ್ರಕಾಶ್, ವಿಶಾಖಪಟ್ಟಣ ಉಕ್ಕು ಕಾರ್ಖಾನೆಯ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ ಅತುಲ್ ಭಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಕೆಲವರು ಸಂವಿಧಾನದ ಪುಸ್ತಕ ಹಿಡಿದು ತಿರುಗುತ್ತಾರೆ: ಮೋದಿ ಟಾಂಗ್

    ಮನವಿ ಸಲ್ಲಿಸಿದ್ದ ಆಂಧ್ರ ಸಂಸದರು
    ಕೆಲ ದಿನಗಳ ಹಿಂದೆ ಕೇಂದ್ರ ಸಚಿವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದ ಆಂಧ್ರ ಪ್ರದೇಶದ ಸಂಸದರಾದ ಪುರಂದೇಶ್ವರಿ ಅವರ ನೇತೃತ್ವದ ನಿಯೋಗವು, ವಿಶಾಖಪಟ್ಟಣ ಉಕ್ಕು ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಮನವಿ ಸಲ್ಲಿಸಿದ್ದರು.