Tag: Vivekananda statue

  • ಜೆಎನ್‍ಯುದಲ್ಲಿ ಪುಂಡ ವಿದ್ಯಾರ್ಥಿಗಳಿಂದ ವಿವೇಕಾನಂದ ಪ್ರತಿಮೆ ವಿರೂಪ

    ಜೆಎನ್‍ಯುದಲ್ಲಿ ಪುಂಡ ವಿದ್ಯಾರ್ಥಿಗಳಿಂದ ವಿವೇಕಾನಂದ ಪ್ರತಿಮೆ ವಿರೂಪ

    ನವದೆಹಲಿ: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯು) ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಕೆಲ ಪುಂಡ ವಿದ್ಯಾರ್ಥಿಗಳು ವಿರೂಪಗೊಳಿಸಿದ್ದಾರೆ.

    ಜೆಎನ್‍ಯು ಆಡಳಿತ ವಿಭಾಗದಲ್ಲಿರುವ ನೆಹರು ಪ್ರತಿಮೆಯ ಮುಂಭಾಗದಲ್ಲಿದ್ದ ವಿವೇಕಾನಂದ ಪ್ರತಿಮೆಯ ಮೇಲೆ ಉಪ ಕುಲಪತಿ ಮಮಿದಲಾ ಜಗದೀಶ್ ಕುಮಾರ್ ಬಗ್ಗೆ ಆಕ್ಷೇಪಾರ್ಹ ಬರಹ ಬರೆದಿದ್ದಾರೆ. ಅಷ್ಟೇ ಅಲ್ಲದೆ ಕೇಸರಿ ಬಟ್ಟೆ ಸುತ್ತಿದ್ದ ಪ್ರತಿಮೆಯನ್ನು ಭಗ್ನ ಮಾಡಿದ್ದಾರೆ. ಉದ್ಘಾಟನೆಯಾಗಬೇಕಿರುವ ವಿವೇಕಾನಂದ ಪ್ರತಿಮೆಯನ್ನು ವಿರೂಪಗೊಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಹಾಸ್ಟೇಲ್ ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಇಂದು ಉಪ ಕುಲಪತಿ ಮಮಿದಲಾ ಜಗದೀಶ್ ಕುಮಾರ್ ಅವರನ್ನು ಭೇಟಿಯಾಗಲು ಒತ್ತಾಯಿಸಿದ್ದರು. ಇದಾದ ಬಳಿಕ ಕೆಲ ಪುಂಡ ವಿದ್ಯಾರ್ಥಿಗಳು ವಿವೇಕಾನಂದರ ಪ್ರತಿಮೆಯ ಮೇಲೆ ಆಕ್ಷೇಪಾರ್ಹ ಬರಹ ಬರೆದಿದ್ದಾರೆ.

    ಈ ಘಟನೆಯಲ್ಲಿ ತಮ್ಮ ಕೈವಾಡವಿಲ್ಲ ಎಂದು ಜೆಎನ್‍ಯು ವಿದ್ಯಾರ್ಥಿ ಒಕ್ಕೂಟವು ಹೇಳಿದೆ. ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳಿಗೆ ಕೆಟ್ಟ ಹೆಸರು ತರಲು ಎಬಿವಿಪಿ ಹೀಗೆ ಮಾಡಿದೆ ಎಂದು ಜೆಎನ್‍ಯು ವಿದ್ಯಾರ್ಥಿ ಒಕ್ಕೂಟ ಘಟಕದ ಅಧ್ಯಕ್ಷ ಎನ್.ಸಾಯಿ ಬಾಲಾಜಿ ದೂರಿದ್ದಾರೆ.

    ಪೊಲೀಸರು ಕೃತ್ಯದ ಬಗ್ಗೆ ತನಿಖೆ ಆರಂಭಿಸಿದ್ದು, ಸ್ವಾಮಿ ವಿವೇಕಾನಂದರ ಮೂರ್ತಿ ಭಗ್ನ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.