ಮಂಗಳೂರು: ಬಜರಂಗದಳ (Bajrangdal) ಮತ್ತು ಬಿಜೆಪಿ ಕಾರ್ಯಕರ್ತರ (bJP Activists) ಮೇಲೆ ತಲವಾರು ದಾಳಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಮಾಣಿ ಎಂಬಲ್ಲಿ ನಡೆದಿದೆ.
ಪೆರಾಜೆ (Peraje) ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಮೇಲೆ ದಾಳಿಯಾಗಿದೆ. ಮಾಣಿ ಜಂಕ್ಷನ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್‍ಗೆ ಡಿಕ್ಕಿ ಹೊಡೆದು ಕೃತ್ಯ ಎಸಗಿದೆ. ಘಟನೆಯಿಂದ ಯುವಕರ ಕಾಲು ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿವೆ. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಗಳೂರು ನಿವಾಸಿ ರಾಕೇಶ್, ಮಾಣಿ ಮಂಜುನಾಥ್ ಯಾನೆ ಮಂಜು, ಪ್ರವೀಣ್ ನಾಯ್ಕ್ ಯಾನೆ ಮಹಾಲಿಂಗ ಮತ್ತಿತರ ತಂಡ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ತನಿಖೆ ನಡೆಸಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ಬಂದಿದೆ.
ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸೋಂಕಿತ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು 42 ವರ್ಷದ ಹೆಡ್ ಕಾನ್‍ಸ್ಟೇಬಲ್ ಅವರಿಗೆ ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದು ಮೇ 18 ರಂದು ಪಾಸಿಟಿವ್ ಬಂದಿತ್ತು. ಕ್ವಾರಂಟೈನ್ ಆಗುವುದಕ್ಕೆ ಮೊದಲು ಠಾಣೆಗೆ ಹೋಗಿದ್ದರಿಂದ ಸೋಂಕು ಬಂದಿದೆ. ಮುಂಬೈ ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಮೂರು ಮಂದಿ ಪೇದೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಓರ್ವ ಪೇದೆಗೆ ಸೋಂಕು ಇರುವುದು ದೃಢಪಟ್ಟಿದೆ.
ಕೊರೊನಾ ಬಂದಿದ್ದು ಹೇಗೆ?
ಸೋಂಕಿತ ಪೇದೆ ಮುಂಬೈ ವ್ಯಕ್ತಿಯ ಜೊತೆ ನೇರ ಸಂಪರ್ಕ ಹೊಂದಿರಲಿಲ್ಲ. ಮುಂಬೈಯಿಂದ ಮೇ 14ರಂದು ಬಂದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಚಾಲಕ ಕ್ವಾರೆಂಟೈನ್ ಕೇಂದ್ರಕ್ಕೆ ಕರೆದುಕೊಂಡ ಹೋಗದೇ ಮಾರ್ಗ ಮಧ್ಯೆ ಇಳಿಸಿ ಹೋಗಿದ್ದ. ಇದರಿಂದ ರೊಚ್ಚಿಗೆದ್ದ ವ್ಯಕ್ತಿಯು ಅಂಬ್ಯುಲೆನ್ಸ್ ಚಾಲಕನ ವಿರುದ್ಧ ದೂರು ನೀಡಲು ನೇರವಾಗಿ ವಿಟ್ಲ ಪೊಲೀಸ್ ಠಾಣೆಗೆ ತೆರಳಿದ್ದರು. ಆಗ ಅಲ್ಲಿನ ಓರ್ವ ಪೇದೆಗೆ ತನ್ನ ಆಧಾರ್ ಕಾರ್ಡ್ ಕೊಟ್ಟಿದ್ದ. ಅದನ್ನು ಪರಿಶೀಲನೆ ಮಾಡಿದ ಪೇದೆ ವಾಪಸ್ ನೀಡಿದ್ದರು. ಆದರೆ ಕೈಯನ್ನು ಸ್ವಚ್ಛಗೊಳಿಸದೇ ಯಾವುದೋ ಬೇರೆ ವಿಚಾರ ಮಾತನಾಡಲು ಪೇದೆ ತನ್ನ ಬಳಕೆಯ ಮೊಬೈಲ್ ಅನ್ನು ಠಾಣೆಯ ಮುಖ್ಯ ಪೇದೆಗೆ ಕೊಟ್ಟಿದ್ದರು.
ದೂರು ನೀಡಿದ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದ ವ್ಯಕ್ತಿಗೆ ನಾಲ್ಕು ದಿನದ ಬಳಿಕ ಅಂದರೆ ಮೇ 18ರಂದು ಸೋಂಕು ದೃಢಪಟ್ಟಿತ್ತು. ಆತನ ಟ್ರಾವೆಲ್ ಹಿಸ್ಟರಿಯಲ್ಲಿ ಇದ್ದ ವಿಟ್ಲ ಠಾಣೆಯ ಪೊಲೀಸರನ್ನು ಕ್ವಾರಂಟೈನ್‍ಗೆ ಒಳಪಡಿಸಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇಂದು ವರದಿ ಬಂದಿದ್ದು ಪೇದೆಯಿಂದ ಮೊಬೈಲ್ ಪಡೆದು ಬಳಸಿದ್ದ ಸೋಂಕಿತನ ಸೆಕೆಂಡರಿ ಸಂಪರ್ಕದಲ್ಲಿದ್ದ ಮುಖ್ಯ ಪೇದೆಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತನ ನೇರ ಸಂಪರ್ಕ ಹೊಂದಿದ್ದ ಆಧಾರ್ ಕಾರ್ಡ್ ಪಡೆದ ಪೇದೆಯ ಕೊರೊನಾ ರಿಪೋರ್ಟ್ ವರದಿ ನೆಗೆಟಿವ್ ಬಂದಿದೆ
ಪೇದೆಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ನಲ್ಲಿ ಒಂದು ಪ್ರಕರಣ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಒಟ್ಟು 15 ಮಂದಿ ಬಿಡುಗಡೆಯಾಗಿದ್ದು, 37 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಮೃತಪಟ್ಟಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಸಣ್ಣದೊಂದು ಮನೆಯಲ್ಲಿ ಕರುಣಾಕರ್ ಎಂಬವರು ತನ್ನ ಹೆಂಡತಿ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇವರು ಕೂಲಿ ಕೆಲಸ ಮಾಡಿ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ಮೂವರು ಹೆಣ್ಣುಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂದು ಕನಸ್ಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. ಆರು ವರ್ಷದ ಹಿಂದೆ ಬಾವಿಯ ಕಸ ತೆಗೆಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 64 ಅಡಿ ಆಳದ ಬಾವಿಗೆ ಬಿದ್ದು ಸೊಂಟದ ಮೂಳೆ ಮುರಿದುಕೊಂಡರು. ಈಗ ಸೊಂಟದಿಂದ ಕೆಳಗೆ ಸ್ವಾಧೀನವಿಲ್ಲ. ಇದೀಗ ಆರು ವರ್ಷದಿಂದ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗದೆ ಹಾಸಿಗೆಯಲ್ಲೇ ನರಳಾಡುತ್ತಿದ್ದಾರೆ.
ಮನೆಯ ಆಧಾರ ಸ್ತಂಭವಾಗಿದ್ದ ಕರುಣಾಕರ್ ಅವರಿಗಾದ ಈ ಸ್ಥಿತಿಯಿಂದ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ದಿಕ್ಕು ತೋಚದಂತಾದರು. ಪತ್ನಿ ಪದ್ಮಲತಾ ಬೀಡಿ ಕಟ್ಟಿ ಅದರಿಂದ ಪತಿ ಹಾಗೂ ಮೂವರು ಹೆಣ್ಣು ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ನಡುವೆ ದೊಡ್ಡ ಮಗಳು ಕಾವ್ಯಶ್ರೀ ಪ್ರಥಮ ಪಿಯುಸಿಯಲ್ಲಿ, ಎರಡನೆಯವಳು ದೀಕ್ಷಾ ಒಂಬತ್ತನೇ ತರಗತಿಯಲ್ಲಿ ಹಾಗೂ ಕೊನೆಯ ಮಗಳು ಹರ್ಷ ಕಲ್ಪನಾ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಮೂವರಿಗೂ ಒಳ್ಳೆಯ ಅಂಕಗಳಿದ್ದು ಕಾವ್ಯಶ್ರೀ ಎಸ್‍ಎಸ್‍ಎಲ್‍ಸಿಯಲ್ಲಿ 568 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಳು. ಮೂವರೂ ಮುಂದೆ ಹೆಚ್ಚು ಹೆಚ್ಚು ಕಲಿಯಬೇಕೆಂಬ ಆಸೆಯಲ್ಲಿದ್ದಾರೆ. ಆದರೆ ಶಾಲಾ ಶುಲ್ಕ ಕಟ್ಟಲು ಬೇಕಾದ ಹಣಕ್ಕೂ ಸಮಸ್ಯೆ ಇದೆ. ಹೀಗಾಗಿ ಯಾರಾದರೂ ಸಹಾಯ ಮಾಡಿದರೆ ಮುಂದೆ ಚೆನ್ನಾಗಿ ಓದಿ ಶಿಕ್ಷಕಿ, ಲಾಯರ್ ಆಗಬೇಕೆಂಬ ಆಸೆಯಲ್ಲಿದ್ದಾರೆ ಈ ಮಕ್ಕಳು.
ಮೂವರೂ ಹೆಣ್ಣು ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು ಸಣ್ಣ ಸಣ್ಣ ಮೊತ್ತದ ಹಣವನ್ನು ಶಿಕ್ಷಕರು, ಸ್ಥಳೀಯ ದಾನಿಗಳು ನೀಡಿ ಪ್ರೋತ್ಸಾಹಿಸಿದ್ದಾರೆ. ಆದರೆ ದೊಡ್ಡವಳಾದ ಕಾವ್ಯಶ್ರೀಗೆ ಕಳೆದ ಬಾರಿ ಪ್ರಥಮ ಪಿಯುಸಿಯ ಪ್ರವೇಶ ಶುಲ್ಕ, ಪುಸ್ತಕ ಸೇರಿದಂತೆ ಇತರೆ ಖರ್ಚಿಗೆ ತೊಂದರೆಯಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಕಲಿಯೋದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಮನೆಗೆ ಆಧಾರಸ್ತಂಭವಾಗಿದ್ದ ಯಜಮಾನ ಹಾಸಿಗೆ ಹಿಡಿದಿದ್ದು, ಅವರ ಆರೈಕೆ ಜೊತೆಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಈ ಕುಟುಂಬದ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾದರೂ ಪ್ರೋತ್ಸಾಹ ಸಿಗುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ.