Tag: vishwshatheertha swamiji

  • ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಸದ್ಯ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತ ಭಕ್ತರು ಮಠದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಪೇಜಾವರ ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಸ್ಥಳಾಂತರಿಸಲಾಗಿದೆ. ವೆಂಟಿಲೇಟರ್ ಸಹಿತ ಆಸ್ಪತ್ರೆಯಿಂದ ಶ್ರೀಗಳನ್ನು ಕರೆದುಕೊಂಡು ಬಂದಿದ್ದು, ಸದ್ಯ ಮಠದೊಳಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ 6 ವೈದ್ಯರ ತಂಡ ಆಗಮಿಸಿದೆ.

    ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮಠಕ್ಕೆ ಸಾವಿರಾರು ಭಕ್ತರು ದೌಡಾಯಿಸಿದ್ದು, ಪೂಜೆ ನಡೆಯುತ್ತಿದೆ. ಇನ್ನೊಂದೆಡೆ ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ ಎಂದು ಭಕ್ತರು ಹಾಗೂ ಪೂರ್ವಾಶ್ರಮದ ಸಂಬಂಧಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.