Tag: vishwesha theertha swamiji

  • ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಬೆಂಬಲಿಸಿದ್ದ ಪೇಜಾವರ ಶ್ರೀಗಳು

    ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಬೆಂಬಲಿಸಿದ್ದ ಪೇಜಾವರ ಶ್ರೀಗಳು

    – ಕಣ್ಣೀರಿಟ್ಟ ಮಾದಾರ ಚೆನ್ನಯ್ಯ ಸ್ವಾಮೀಜಿ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಮಠಗಳ ನೆಲೆವೀಡು. ಇದು ವಿವಿಧ ಸಮುದಾಯಗಳ ಗುರು ಪೀಠಗಳಿರುವ ತವರೂರು. ಇಲ್ಲಿ ಪ್ರಭಾವಿ ಮಠವೆನಿಸಿರೋ ಶ್ರೀ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳೊಂದಿಗೆ ಉಡುಪಿಯ ಕೃಷ್ಣ ಮಠದ ಪೇಜಾವರ ಶ್ರೀಗಳು ಅವಿನಾಭಾವ ಸಂಬಂಧ ಹೊಂದಿದ್ದರು. ಹೀಗಾಗಿ ಇಂದು ಅವರ ಅಗಲಿಕೆಯಿಂದಾಗಿ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ವೈಯುಕ್ತಿಕವಾಗಿ ಪೇಜಾವರ ಶ್ರೀಗಳು ತಮ್ಮ ಏಳಿಗೆಗಾಗಿ ಬೆಂಬಲಿಸಿದ ಕ್ಷಣ ನೆನೆದು ಮಾದಾರ ಚೆನ್ನಯ್ಯ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ.

    ಸಮಾಜದಲ್ಲಿರುವ ಮೇಲು ಕೀಳು ಸರಿಪಡಿಸುವ ಬಗ್ಗೆ ಮೊದಲ ಬಾರಿಗೆ 2008ರಲ್ಲಿ ದೊಡ್ಡಮಟ್ಟದಲ್ಲಿ ದನಿ ಎತ್ತಿದ್ದ ಶ್ರೀಗಳು, ಸಮಾನತೆಯ ಚಳುವಳಿಗೂ ತಮ್ಮನ್ನು ಸಾಕ್ಷೀಕರಿಸಿದ್ದರು. ಅಲ್ಲದೇ ಮೈಸೂರಿನ ಸಾಮರಸ್ಯ ಯಾತ್ರೆಯಿಂದಾಗಿ ಪೇಜಾವರಶ್ರೀಗಳ ಜೊತೆ ನಮಗೆ ಬಾಂಧವ್ಯ ಮೂಡಿದ್ದೂ, ದಲಿತರನ್ನು ಅಪ್ಪಿಕೊಳ್ಳುವ ಚಳುವಳಿಗೆ ಟೀಕೆ ಎದುರಿಸಿದರೂ ಸಹ ಅವರು ಎದೆಗುಂದಲಿಲ್ಲ. ದಲಿತರನ್ನು ಓಲೈಸುವ ನಾಟಕೀಯ ಬೆಳವಣಿಗೆ ಎಂದು ವಿಚಾರವಾದಿಗಳಿಂದ ಆರೋಪ ಕೇಳಿಬಂದರು ಸಹ ಅವರ ನಡೆ ಕೈಬಿಡಲಿಲ್ಲ ಎಂದು ದಲಿತರೊಂದಿಗೆ ಸ್ವಾಮೀಜಿ ನಡೆದು ಬಂದ ದಾರಿಯನ್ನು ಮಾದಾರ ಚೆನ್ನಯ್ಯ ಸ್ವಾಮೀಜಿ ನೆನೆದರು.

    ಪೇಜಾವರ ಶ್ರೀಗಳಿಗೆ ಪುತ್ರನಂತೆ: ಪೇಜಾವರ ಸ್ವಾಮೀಜಿ ನಮ್ಮಿಂದ ಬೌದ್ಧಿಕವಾಗಿ ದೂರಾಗಿರಬಹುದು ಆದರೆ ಅವರ ತತ್ವ ಆದರ್ಶ ನಮ್ಮ ಜತೆ ಇರುತ್ತವೆ. ನಾನು ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳ ಪಾಲಿಗೆ ನಾನು ಪುತ್ರನಂತೆ ಕಾಣುತ್ತಿದ್ದೆ. ಪೇಜಾವರ ಶ್ರೀಗಳೊಂದಿಗೆ ನಮ್ಮ ಒಡನಾಟ ಕೇವಲ ಹತ್ತು ವರ್ಷದದಲ್ಲೇ ಅತಿ ಸಾಮಿಪ್ಯವಾಗಿಸಿತ್ತು. ಉಡುಪಿ ಮಠದ ಭಕ್ತರಂತೆ ನಾನು ಸಹ ನಷ್ಟ ಅನುಭವಿಸುತ್ತಿದ್ದೇನೆ ಎಂದರು.

    ಪೇಜಾವರ ಶ್ರೀಗಳು ನಿಸ್ವಾರ್ಥ ಭಾವದವರಾಗಿದ್ದೂ, ಸದಾ ಎಲ್ಲರಿಗೂ ಒಳಿತನ್ನೇ ಮಾಡುವ ಭಾವದವರಾಗಿದ್ದರು. ಹಾಗೆಯೇ ವೈಯಕ್ತಿಕವಾಗಿ ನನ್ನ ಏಳ್ಗೆಯನ್ನು ಸಹ ಪೇಜಾವರ ಶ್ರೀಗಳು ಬಯಸುತ್ತಿದ್ದರು. ಈ ಹಿಂದೆ ಮಾದರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶದ ಮಾಡುತ್ತಾರೆಂಬ ಸುಳ್ಳು ವದಂತಿ ಹರಡಿದ್ದಾಗ ನನ್ನೊಂದಿಗೆ ಮಾತನಾಡಿದ್ದರು. ಅಲ್ಲದೇ ಒಂದು ವೇಳೆ ನೀನು ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಇದ್ದರೆ ತಿಳಿಸು, ನಾನೇ ಮೇಲ್ಮಟ್ಟದಲ್ಲಿ ಮಾತಾನಾಡುತ್ತೇನೆ ಎಂದಿದ್ದರು. ಆಗ ನಾನು ರಾಜಕೀಯ ಪ್ರವೇಶದ ಬಗ್ಗೆ ನಿರಾಕರಿಸಿದಾಗ ಧಾರ್ಮಿಕವಾಗಿ ಮಠವನ್ನು ಮುನ್ನಡೆಸಲು ಸೂಚಿಸಿದ್ದರು. ಅಧಿಕೃತವಾಗಿ ಚಿತ್ರದುರ್ಗದಲ್ಲಿರುವ ನಮ್ಮ ಮಠಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಅವರ ಕೊನೆ ಆಸೆ ಹಾಗೆಯೇ ಉಳಿಯಿತು ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.

  • ಪೇಜಾವರ ಶ್ರೀಗಳ ನಿಧನಕ್ಕೆ ಯದುವೀರ್, ಗಣಪತಿ ಶ್ರೀ ಸಂತಾಪ – ಕೃಷ್ಣಧಾಮ, ಪೇಜಾವರ ಧಾಮದಲ್ಲಿ ನೀರವ ಮೌನ

    ಪೇಜಾವರ ಶ್ರೀಗಳ ನಿಧನಕ್ಕೆ ಯದುವೀರ್, ಗಣಪತಿ ಶ್ರೀ ಸಂತಾಪ – ಕೃಷ್ಣಧಾಮ, ಪೇಜಾವರ ಧಾಮದಲ್ಲಿ ನೀರವ ಮೌನ

    ಮೈಸೂರು: ಪೇಜಾವರ ಶ್ರೀಗಳ ನಿಧನಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಸಂತಾಪ ಹಂಚಿಕೊಂಡಿದ್ದಾರೆ.

    ವಿಶ್ವೇಶ್ವ ತೀರ್ಥ ಶ್ರೀಪಾದರು ದೈವಾದೀನರಾಗಿರುವುದು ಬಹಳ ದುಃಖವಾಗಿದೆ. ಬಾಲ್ಯದಲ್ಲೇ ವೈಯಕ್ತಿಕ ಜೀವನ ತ್ಯಜಿಸಿ 80 ವರ್ಷ ಕೃಷ್ಣನ ಸೇವೆ ಮಾಡಿದ್ದಾರೆ. ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡುಪಿಟ್ಟಿದ್ದರು. ಶ್ರೀಗಳ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಚಾಮುಂಡೇಶ್ವರಿ ನೀಡಲಿ ಎಂದು ಸಂತಾಪ ಸೂಚಿಸಿ ಪೇಜಾವರ ಸ್ವಾಮೀಜಿ ಮತ್ತು ಜಯಚಾಮರಾಜ ಒಡೆಯರ್ ಅವರ ಜೊತೆಗಿರುವ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಇತ್ತ ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಕೂಡ ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವಿಶ್ವೇಶತೀರ್ಥರು 7ನೇ ವರ್ಷಕ್ಕೆ ದೀಕ್ಷೆ ಪಡೆದರು. ನಮಗೆ 11 ವರ್ಷ ಆಗಿದ್ದಾಗ, ಅವರಿಗೆ 19 ವರ್ಷವಾಗಿತ್ತು. ಮೈಸೂರಿನ ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ್ ದೇವಾಲಯ ಕಟ್ಟಿಸಿದ್ದರು. ಆಗ ನಾವಿಬ್ಬರೂ ಭೇಟಿಯಾಗಿದ್ದೆವು. ಅಂದಿನಿಂದಲೂ ನಿಕಟ ಸಂಪರ್ಕವಿತ್ತು. ಪೇಜಾವರ ಶ್ರೀಪಾದರು ಸಾಮಾಜಿಕ, ಧಾರ್ಮಿಕವಾಗಿ ಅಪಾರ ಸಾಧನೆ ಮಾಡಿದ್ದು, ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಮುಸ್ಲಿಂ, ಕ್ರೈಸ್ತರು, ದಲಿತರನ್ನು ಒಳಗೊಳ್ಳುತ್ತಿದ್ದರು. ಯತಿಗಳಿಗೆ ಜೀವಿತಾವಧಿ ಲೆಕ್ಕವಿಲ್ಲ, ದೇಹಕ್ಕೆ ಮಾತ್ರ ವಯಸ್ಸಾಗಿತ್ತು ಎಂದು ತಿಳಿಸಿದ್ದಾರೆ.

    ಪೇಜಾವರ ಶ್ರೀ ಅಸ್ತಂಗತ ಹಿನ್ನೆಲೆಯಲ್ಲಿ ಮೈಸೂರು ಶ್ರೀಕೃಷ್ಣಧಾಮದಲ್ಲಿ ನೀರವ ಮೌನ ಆವರಿಸಿತ್ತು. ಮಠದ ಒಳಾವರಣದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ಪೇಜಾವರ ಶ್ರೀಗಳು ಮೈಸೂರಿನಲ್ಲೇ ಕೊನೆಯ ಚಾತುರ್ಮಾಸ ವ್ರತ ಆಚರಿಸಿದ್ದರು. ಮೈಸೂರಿನಲ್ಲಿ ಒಟ್ಟು ಮೂರು ಬಾರಿ ಚಾತುರ್ಮಾಸ ಆಚರಣೆ ಮಾಡಿದ್ದರು. 2003, 2012, 2019ರಲ್ಲಿ ಚಾತುರ್ಮಾಸ ಆಚರಣೆ ಮಾಡಿದ್ದರು. ಒಮ್ಮೆ ಅಖಿಲ ಭಾರತ ಮಾಧ್ವ ಮಹಾಮಂಡಲ ಸಭೆ ಕೂಡ ಇಲ್ಲಿ ಆಯೋಜನೆ ಮಾಡಿದ್ದರು.

    ಮೈಸೂರಿನ ಒಡನಾಟದ ಬಗ್ಗೆ ಶ್ರೀ ಕೃಷ್ಣಧಾಮದ ಮೇಲ್ವಿಚಾರಕ ರಘುರಾಮ್ ರಾವ್ ಈ ಬಗ್ಗೆ ಮಾಹಿತಿ ನೀಡಿ, ಮೈಸೂರು ಮತ್ತು ಪೇಜಾವರ ಸ್ವಾಮೀಜಿ ಅವರದ್ದು ತಂದೆ-ಮಕ್ಕಳ ಸಂಬಂಧ. ಕೃಷ್ಣ ಮಠದಷ್ಟೇ ಸಂತೋಷದಿಂದ ಇಲ್ಲಿ ವಾಸ್ತವ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಇನ್ನೂ ಜೆಪಿ ನಗರದಲ್ಲಿನ ಪೇಜಾವರ ಧಾಮ ಎಂಬ ವೃದ್ಧಾಶ್ರಮದಲ್ಲೂ ನೀರವ ಮೌನ ಆವರಿಸಿತ್ತು. 2016 ರಲ್ಲಿ ಸ್ವಾಮೀಜಿಗಳು ಶ್ರೀ ಮಠದಿಂದ ಈ ವೃದ್ಧ ಶ್ರಮ ಸ್ಥಾಪಿಸಿದ್ದರು. ಬಹು ಅಚ್ಚುಕಟ್ಟಾಗಿ ಈ ವೃದ್ಧ ಶ್ರಮ ನಡೆಯುತ್ತಿದೆ. ಈಗ ಸದ್ಯಕ್ಕೆ ವೃದ್ಧಶ್ರಮದಲ್ಲಿ 40 ಜನ ಇದ್ದಾರೆ. ಸ್ವಾಮೀಜಿ ಗಳ ನಿಧನದ ಹಿನ್ನೆಲೆಯಲ್ಲಿ ವೃದ್ಧಾಶ್ರಮದಲ್ಲಿ ನೀರವ ಮೌನ ಆವರಿಸಿತ್ತು.

  • ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಉಡುಪಿ: ನಮ್ಮ ಮನೆಯಲ್ಲಿ ಕೃಷ್ಣ ಪೂಜೆಯನ್ನು ಮಾಡಿದ್ದರು ಎಂದು ಹೇಳಿ ಪೇಜಾವರ ಶ್ರೀಗಳನ್ನು ನೆನಪಿಸಿಕೊಂಡು ಮಾಜಿ ಸಚಿವ ರಾಮ್ ದಾಸ್ ಕಣ್ಣೀರು ಹಾಕಿದರು.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈಸೂರಿಗೆ ಭೇಟಿ ಕೊಟ್ಟಾಗ ಕಾರಾಗೃಹಕ್ಕೆ ಭೇಟಿ ಕೊಟ್ಟು ಅಲ್ಲಿ ಯೋಗ ಕೇಂದ್ರ ಹಾಗೂ ಡಿಜಿಟಲ್ ಲೈಬ್ರರಿಯನ್ನು ತೆರೆದಿದ್ದರು. ಕೈದಿಗಳ ಮನಸು ಪರಿವರ್ತನೆಗೆ ಸಾಕಷ್ಟು ಶ್ರಮ ಪಟ್ಟಿದ್ದರು ಎಂದು ಹೇಳುತ್ತಾ ಶ್ರೀಗಳ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

    ಅವರು ಈ ಒಂದು ಯುಗದಲ್ಲಿ ಪ್ರವರ್ತಕರಾಗಿ ಎಲ್ಲ ರೀತಿಯ ಜ್ಞಾನವನ್ನು ಹೊಂದಿ ಸಮಾಜದ ಮಧ್ಯದಲ್ಲಿ ಯಾವುದೇ ಬೇಧ-ಭಾವವಿಲ್ಲದೆ ಕಟ್ಟಕಡೆಯ ವ್ಯಕ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಶ್ರೀಗಳ ಕೊನೆಯಾಸೆಯಂತೆ ಇಂದು ಬೆಳಗ್ಗೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ವೆಂಟಿಲೇಟರ್ ಸಹಿತ ಅಂಬುಲೆನ್ಸ್ ನಲ್ಲಿ ಪೇಜಾವರ ಮಠಕ್ಕೆ ಶಿಫ್ಟ್ ಮಾಡಲಾಯಿತು. ಸದ್ಯ ಮಠದ ಆಚರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಮಠಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಅವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮಠಕ್ಕೆ ಬರಬೇಡಿ, ಅಜ್ಜರ ಕಾಡು ಮೈದಾನಕ್ಕೆ ಬನ್ನಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಅಜ್ಜರ ಕಾಡು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ಶ್ರೀಗಳು ಕೃಷ್ಣೈಕ್ಯರಾಗಿದ್ದು, ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.