ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಭಟ್ಕಳದ ಮುಸಲ್ಮಾನರು ಉಡುಪಿ ಪೇಜಾವರ ಮಠಕ್ಕೆ ಆಗಮಿಸಿ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸಿದರು.
ಸ್ವಾಮಿಗಳ ಅಗಲಿಕೆಯಿಂದ ಬಹಳಷ್ಟು ನೊಂದಿದ್ದ ಮುಸ್ಲಿಮರು ಭಟ್ಕಳದಿಂದ ಪೇಜಾವರ ಮಠದಲ್ಲಿ ಶೃದ್ಧಾಂಜಲಿ ಸಲ್ಲಿಸಲೆಂದೇ ಬಂದಿದ್ದರು. ರಥಬೀದಿಯಲ್ಲಿ ಮಠದೊಳಗೆ ಪ್ರವೇಶಕ್ಕೆ ಕಾಯುತ್ತಿದ್ದರು. ವಿಷಯ ತಿಳಿದ ಮಠದ ಅಧಿಕಾರಿಗಳು ಮಠದೊಳಗೆ ಆಹ್ವಾನಿಸಿ, ಪರಿಚಯ ಪಡೆದುಕೊಂಡರು.
ಪೇಜಾವರ ಸ್ವಾಮಿಗಳ ಸ್ಮರಣೆ ಮಾಡುತ್ತ ಬಂದವರು, ಭಟ್ಕಳಕ್ಕೆ ವಿಶ್ವೇಶತೀರ್ಥರು ಭೇಟಿ ನೀಡಿದ್ದ ನೆನಪುಗಳನ್ನು ಮೆಲುಕು ಹಾಕಿದರು. ಎರಡು ಧರ್ಮದ ನಡುವೆ ಪೇಜಾವರ ಶ್ರೀಗಳು ಸೇತುವೆಯಾಗಿದ್ದರು ಎಂದು ಮುಸಲ್ಮಾನ ಮುಖಂಡರು ಹೇಳಿದರು. ಸ್ವಾಮೀಜಿಗಳ ಭಾವಚಿತ್ರಕ್ಕೆ ಭಕ್ತಿಯಿಂದ ಕೈ ಮುಗಿದು ಶ್ರದ್ಧಾಂಜಲಿ ಅರ್ಪಿಸಿದರು.
ನವದೆಹಲಿ: ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ಅಂತ್ಯಕ್ರಿಯೆ ಆಗಬೇಕು ಎನ್ನುವುದು ಪೇಜಾವರ ಶ್ರೀಗಳ ಕೊನೆಯ ಆಶಯವಾಗಿತ್ತು. ಅದರಂತೆ ಉತ್ತರ ಭಾರತದಲ್ಲೂ ಒಂದು ವಿದ್ಯಾಪೀಠ ಆರಂಭಿಸಬೇಕು ಎನ್ನುವುದು ಅವರ ಮತ್ತೊಂದು ಕನಸಾಗಿತ್ತು.
ಕಳೆದ ಮೂರು ತಿಂಗಳಿಂದ ಇಲ್ಲಿರುವ ಮಠದಲ್ಲಿ ವಿದ್ಯಾಪೀಠ ಆರಂಭಿಸುವ ಪ್ರಕ್ರಿಯೆಗಳು ಆರಂಭವಾಗಿದೆ. ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ಇಲ್ಲಿ ವೇದ ಉಪನಿಷತ್ತು, ಪುರಾಣಗಳನ್ನು ಭೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತಕ್ಕಾಗಿ ಬೆಂಗಳೂರಿನಲ್ಲಿ ವಿದ್ಯಾಪೀಠ ನಿರ್ಮಿಸಿದ್ದು ವೇದ ಉಪನಿಷತ್ತು ಕಲಿಯುವ ಮಕ್ಕಳಿಗೆ ಅನುಕೂಲವಾಗಿದೆ. ಅದರಂತೆ ಉತ್ತರ ಭಾರತದ ಮಕ್ಕಳಿಗೂ ಅನುಕೂಲವಾಗುವಂತೆ ದೆಹಲಿಯಲ್ಲಿ ವಿದ್ಯಾಪೀಠ ಆರಂಭಿಸಬೇಕೆಂದು ಮಠದ ಸಿಬ್ಬಂದಿ ಬಳಿ ಶ್ರೀಗಳು ಹೇಳಿಕೊಂಡಿದ್ದರಂತೆ.
ಶ್ರೀಗಳ ಕನಸಿನಂತೆ ದೆಹಲಿಯ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದ್ದು, ಆರಂಭಿಕವಾಗಿ ಅಯೋಧ್ಯೆಯಿಂದ ಆರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಡಿಸೆಂಬರ್ 5 ಕ್ಕೆ ಮಠಕ್ಕೆ ಬಂದಿದ್ದ ಶ್ರೀಗಳು ಸಭೆ ನಡೆಸಿ ಎಲ್ಲ ಕೆಲಸಗಳನ್ನು ನೋಡಿಕೊಂಡು ಹೋಗಿದ್ದರು. ಆದರೆ ವಿದ್ಯಾಪೀಠ ಪೂರ್ಣ ಆಗುವ ಮೊದಲು ಶ್ರೀಗಳು ನಿಧನವಾಗಿದ್ದು ಮಠದ ಭಕ್ತರಲ್ಲಿ ಬೇಸರ ತಂದಿದೆ.
– ಶ್ರೀಗಳದ್ದು ಇಚ್ಛಾ ಮರಣಿ ಎಂದ ಪುತ್ತಿಗೆ ಶ್ರೀ
– ಕೊನೆಯಾಸೆಯಂತೆ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ
ಬೆಂಗಳೂರು: ಮಹಾಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕೃಷ್ಣನಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರಶ್ರೀಗಳ ಅಂತಿಮ ವಿಧಿವಿಧಾನಗಳು ಮಾಧ್ವ ಪರಂಪರೆಗೆ ಅನುಗುಣವಾಗಿ ಮಾಡಲಾಯಿತು.
ನ್ಯಾಷನಲ್ ಕಾಲೇಜು ಮೈದಾನದಿಂದ ಸಂಜೆ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕ ತರಲಾಯಿತು. ಶ್ರೀಗಳಿಗೆ ಶ್ರೀಕೃಷ್ಣನ ದರ್ಶನ ಮಾಡಿಸಲಾಯಿತು. ಪಾರ್ಥಿವ ಶರೀರಕ್ಕೆ ಗೋಪಿಚಂದನ ಮತ್ತು ಮುದ್ರಾಧಾರಣೆಗಳು ನಡೆಯಿತು. ಹೊಸಬಟ್ಟೆ ಉಡಿಸಿ ಅಲಂಕಾರ ಮಾಡಿದ ನಂತರ ಶಿಷ್ಯರು ಕೃಷ್ಣ ಮತ್ತು ರಾಘವೇಂದ್ರ ಸ್ವಾಮೀಜಿಗಳ ಸನ್ನಿಧಾನದಲ್ಲಿ ಪೂಜೆ ಮಾಡಿಸಿದರು.
ಪೂಜೆಯ ಬಳಿಕ ಛತ್ರ ಚಾಮರದೊಂದಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಬೃಂದಾವನಕ್ಕೆ ತರಲಾಯಿತು. ಈ ವೇಳೆ ಎರಡೂ ಬದಿಗೆ ನಿಂತಿದ್ದ ಭಕ್ತರು ಶ್ರೀಗಳಿಗೆ ಹೂ ಮಳೆ ಸುರಿಸಿದರು. ಬೃಂದಾವನದಲ್ಲಿ ಪೇಜಾವರ ಶ್ರೀಗಳನ್ನು ಜಪಮಾಡುವ ಭಂಗಿಯಲ್ಲಿ ಕೂರಿಸಲಾಯಿತು. ಶ್ರೀಗಳ ದೇಹದ ಎತ್ತರದ ಎರಡುಪಟ್ಟು ಆಳದ ಗುಂಡಿ(11 ಅಡಿ ಆಳ, 8 ಅಡಿ ಉದ್ದ) ತೋಡಿ, ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.
ತೀರ್ಥ ಪ್ರೋಕ್ಷಣೆ ಮಾಡಿದ ಬಳಿಕ ಪಾರ್ಥಿವ ಶರೀರದ ಸುತ್ತಲೂ ವಿವಿಧ ಕ್ಷೇತ್ರಗಳಿಂದ ತಂದ ಮಣ್ಣು, ಕರ್ಪೂರ, ಹತ್ತಿ, ಉಪ್ಪು ಇತ್ಯಾದಿ ತುಂಬಲಾಗಿತ್ತು. ನೆತ್ತಿಯ ಮೇಲಿನ ಭಾಗದಲ್ಲಿ ಒಂದು ತೂತಿರುವ ಪಾತ್ರೆಯಲ್ಲಿ ಸಾಲಿಗ್ರಾಮ ಇತ್ಯಾದಿ ಪೂಜಾ ಪರಿಕರಗಳನ್ನು ಇರಿಸಲಾಗಿತ್ತು. ಬಳಿಕ ಪೂರ್ತಿ ಬೃಂದಾವನವನ್ನು ಮಣ್ಣಿನಿಂದ ಮುಚ್ಚಲಾಯಿತು.
ಅಂತಿಮ ವಿಧಿವಿಧಾನಕ್ಕೆ ಮುನ್ನ ಕುಶಾಲು ತೋಪು ಸಿಡಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ವಂಚಿತರಾದವರಿಗೆ ಪಾಸ್ ಕೊಟ್ಟು ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
ಹರ್ನಿಯಾ ಆಪರೇಷನ್ ನಡೆದಾಗಲೇ ಪೇಜಾವರ ಶ್ರೀಗಳು ತಮ್ಮ ಕೊನೆಯಾಸೆ ಬಿಚ್ಚಿಟ್ಟಿದ್ದರು. ಲಿಖಿತ ರೂಪದಲ್ಲಿ ಕೊನೆಯಾಸೆಯನ್ನು ಶ್ರೀಗಳು ಬರೆದುಕೊಟ್ಟಿದ್ದರು. ಅದೇನಂದರೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಅಂತ ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು.
ಬೆಳಗ್ಗೆ ಕೃಷ್ಣೈಕ್ಯ: ಪೇಜಾವರ ಶ್ರೀಗಳನ್ನು ಬೆಳಗ್ಗೆ 6:55ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮಠಕ್ಕೆ ಕೊಂಡೊಯ್ಯಲಾಯಿತು. ಬಳಿಕ 9:20 ಗಂಟೆ ಹೊತ್ತಿಗೆ ಶ್ರೀಗಳ ಉಸಿರು ಕೃಷ್ಣ ಆತ್ಮ ಸೇರಿತು. ಈ ವೇಳೆ, ಮಠದಲ್ಲಿ “ಗೋವಿಂದ ಗೋವಿಂದ” ಎನ್ನುವ ಘೋಷಣೆ ಮೊಳಗಿಸುವ ಮೂಲಕ ಕೃಷ್ಣೈಕ್ಯರಾದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. 10:20ಕ್ಕೆ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಮಠದಿಂದ ಹೊರಕ್ಕೆ ತರಲಾಯಿತು. ಬಳಿಕ ಮದ್ವಸರೋವರಕ್ಕೆ ಕೊಂಡೊಯ್ದು ಪುಣ್ಯಸ್ನಾನ ಮಾಡಿಸಿ, ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡಿಸಿ ಮಠದೊಳಗೆ ಆರತಿ ಎತ್ತಿಸಲಾಯಿತು.
ಉಡುಪಿ ನಗರದ ಶ್ರೀಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿಸಲಾಯಿತು. ಮಧ್ಯಾಹ್ನ 12:15 ಗಂಟೆಗೆ ಮೃತದೇಹವನ್ನು ಅಜ್ಜರಕಾಡಿನ ಮೈದಾನಕ್ಕೆ ತರಲಾಯಿತು. ಈ ವೇಳೆ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮಧ್ಯಾಹ್ನ 1:30 ಗಂಟೆಯ ವರೆಗೂ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ 1.40ಕ್ಕೆ ಬೆಂಗಳೂರಿನತ್ತ ಏರ್‍ಲಿಫ್ಟ್ ಮಾಡಲಾಯಿತು.
ವಿಶೇಷ ಹೆಲಿಕಾಕ್ಟರ್ ಮೂಲಕ 1:38 ಆದಿ ಉಡುಪಿ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ರವಾನಿಸಲಾಯ್ತು. ಕೊನೆಗೂ ತನ್ನ ಎರಡನೇ ಆಸೆಯ್ನೂ ಪೇಜಾವರ ಶ್ರೀಗಳು ಪೂರೈಸಿದರು. ವೃಂದಾವನವೂ ಶ್ರೀಗಳ ಇಚ್ಛೆಯಂತೆಯೇ ನಡೆದಿದೆ. ಇದಕ್ಕೆ ಹೇಳಿದ್ದು ಪೇಜಾವರಶ್ರೀ ಹಠವಾದಿ ಅಂತ. ಒಟ್ಟಿನಲ್ಲಿ ನಾಡು ಕಂಡ ಹಿರಿಯ ಸಂತ ಕಣ್ಮರೆಯಾಗುವುದು ಎಲ್ಲರಿಗೂ ಬೇಸರ ತಂದಿದೆ.
ಇಚ್ಛಾ ಮರಣಿ: ಶ್ರೀಗಳಿಗೆ ಸಾವು ಸನ್ನಿಹಿತವಾಗುತ್ತಿದೆ ಎನ್ನುವುದು ಗೊತ್ತಿತ್ತು ಎನ್ನುವಂತೆ ಕೊನೆ ದಿನಗಳಲ್ಲಿ ತಮ್ಮಿಷ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಡಿಸೆಂಬರ್ 17ಕ್ಕೆ ತಿರುಪತಿಗೆ ತೆರಳಿ ದರ್ಶನ ಪಡೆದಿದ್ದರು. 18ರಂದು ಬೆಂಗಳೂರಿನ ವಿದ್ಯಾಪೀಠಕ್ಕೆ ಬಂದಿದ್ದರು. 19ರಂದು ಹಾಸನದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಹುಟ್ಟೂರು ರಾಮಕುಂಜ ತೆರಳಿ ಅಲ್ಲಿಂದ ಪಾಜಕಕ್ಕೆ ಹೋಗಿದ್ದರು. ಅಲ್ಲಿ ಸಂಜೆ 15 ನಿಮಿಷಗಳ ಕಾಲ ಗುರುಕುಲದಲ್ಲಿ ಪ್ರವಚನ ನೀಡಿದ್ದರು. ಅಷ್ಟೊತ್ತಿಗೆ ಶ್ರೀಗಳ ಆರೋಗ್ಯ ಏರುಪೇರಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೇಜಾವರ ಶ್ರೀಗಳು ಇಚ್ಛಾ ಮರಣಿ ಎನ್ನುವ ಮಾತು ಕೇಳಿಬಂದಿದೆ. ಯಾಕಂದರೆ ಅಷ್ಠ ಮಠಗಳಲ್ಲಿ ಒಂದಾದ ಪುತ್ರಿಗೆ ಮಠದ ಸುಗುಣೇಂದ್ರ ಶ್ರೀಗಳು ಮಾತನಾಡಿ, ಪೇಜಾವರ ಶ್ರೀಗಳು ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. 23ರ ನಂತರ ಸದ್ಯಕ್ಕೆ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದಕ್ಕೆ ಶ್ರೀಗಳು ನಸು ನಕ್ಕಿದ್ದರು. ಶ್ರೀಗಳಿಗೆ ಮೊದಲೇ ಮುನ್ಸೂಚನೆ ಇತ್ತು ಅನ್ನಿಸುತ್ತಿದೆ. ಹಾಗಾಗಿ ನಾನು ವಿದೇಶಕ್ಕೆ ಹೋಗಿಲ್ಲ ಎಂದು ತಿಳಿಸಿದ್ದಾರೆ.
ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ಕೃಷ್ಣೈಕ್ಯರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.
ಜನನ ಮತ್ತು ಬಾಲ್ಯ:
ಅಷ್ಟಮಠಗಳಲ್ಲೇ ಹಿರಿಯ ಯತಿಯಾಗಿದ್ದ ಪೇಜಾವರ ಶ್ರೀ 1931 ಏಪ್ರಿಲ್ 27 ರಂದು ಉಡುಪಿಯಿಂದ 120 ಕಿ.ಮೀ ದೂರದಲ್ಲಿರುವ ಪುತ್ತೂರು ತಾಲೂಕಿನ ರಾಮಕುಂಜ ಹಳ್ಳಿಯಲ್ಲಿ ಜನಿಸಿದ್ದರು. ಪೇಜಾವರ ಶ್ರೀ ವಿಶ್ವೇಶತೀರ್ಥರು ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವರ ಮೂಲ ಹೆಸರು ವೆಂಕಟರಮಣ ಆಗಿತ್ತು.
ವೆಂಕಟರಮಣ ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು 7ನೇ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿದ್ದರು. ನಂತರ 8ನೇ ವಯಸ್ಸಲ್ಲೇ ಮುಖ್ಯಪ್ರಾಣ ಸನ್ನಿಧಿಯಲ್ಲಿ ದೀಕ್ಷೆ ಪಡೆದಿದ್ದರು. ಬಳಿಕ ಪೇಜಾವರ ಮಠದ ಪರಂಪರೆಯ 32ನೇಯ ಯತಿಯಾಗಿ ನೇಮಕಗೊಂಡಿದ್ದರು.
ಪೇಜಾವರ ಶ್ರೀ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುತ್ತಿದ್ದರು. ಜೊತೆಗೆ ಇವರು ಗಾಂಧೀಜಿ ವಿಚಾರಧಾರೆಯನ್ನು ಪಾಲಿಸುತ್ತಿದ್ದರು. ದಿನ ಕಳೆದಂತೆ ಪೇಜಾವರ ಶ್ರೀ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ, ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು. ನಂತರ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು.
1951 ಜನವರಿ 18ರಂದು 21ರ ಹರೆಯದಲ್ಲೇ ಮೊದಲ ಪರ್ಯಾಯ ಪೀಠವೇರಿದ್ದ ಪೇಜಾವರ ಶ್ರೀ ಒಟ್ಟು 5 ಬಾರಿ ಪರ್ಯಾಯ ಪೀಠವೇರಿ ಕೃಷ್ಣ ಪೂಜೆ ನಡೆಸಿದ ಎರಡನೇ ಹಿರಿಯ ಯತಿ ಎಂದು ಖ್ಯಾತಿ ಪಡೆದಿದ್ದಾರೆ. ಕೃಷ್ಣನನ್ನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಬಿಟ್ಟರೆ ಪೇಜಾವರ ಶ್ರೀ ವಿಶ್ವೇಶತೀರ್ಥರೇ ಐದು ಬಾರಿ ಪರ್ಯಾಯ ಪೀಠ ಏರಿದ ವಿಶೇಷ ಸಾಧನೆ ಮಾಡಿದ್ದರು.
ದಲಿತರ ಪರ ಹೋರಾಟ
ದಲಿತರ ಪರ ಧ್ವನಿ ಎತ್ತಿ ದಲಿತರ ಅಭಿವೃದ್ಧಿ ಪರ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಇದಲ್ಲದೇ ದಲಿತ ಖೇರಿಗೆ ಭೇಟಿ ನೀಡಿ ವಾಸ್ತವ್ಯ ಮಾಡುತ್ತಿದ್ದರು. ಕೃಷ್ಣ ಮಠದಲ್ಲಿ ಎಡೆ ಹಾಗೂ ಮಡೆ ಸ್ನಾನವನ್ನು ಪೇಜಾವರ ಶ್ರೀ ಅವರೇ ನಿಲ್ಲಿಸಿದ್ದಾರೆ. ಜೊತೆಗೆ ನಕ್ಸಲ್ ಪ್ರದೇಶದಲ್ಲಿ ಹೆಲ್ತ್ ಕ್ಯಾಂಪ್ ಕೂಡ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು.
ಲಿಂಗಾಯುತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಪೇಜಾವರ ಶ್ರೀ ಆಹ್ವಾನಿಸಿದ್ದರು. ಧರ್ಮ ಸಂಸತ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕರೆಕೊಟ್ಟಿದ್ದರು. ಹೀಗಾಗಿ ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀ ಮುಂಚೂಣಿಯಲ್ಲಿದ್ದರು. ಇವರು ಪ್ರಧಾನಿ ಮೋದಿಯವರೊಂದಿಗೆ ಆತ್ಮೀಯತೆ ಹೊಂದಿದ್ದರು. ಪ್ರಧಾನಿ ಮೋದಿ ಮಾತ್ರವಲ್ಲದೇ ಅಡ್ವಾಣಿ, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಅವರಿಗೂ ಆಪ್ತರಾಗಿದ್ದರು. ವಿಶ್ವಹಿಂದೂ ಪರಿಷತ್ ಪ್ರಮುಖರಾಗಿದ್ದ ಪೇಜಾವರ ಶ್ರೀ ರಾಷ್ಟ್ರದ ಸಂತರಲ್ಲಿ ಪ್ರಭಾವಿ ಹಿರಿಯ ಯತಿಯಾಗಿದ್ದರು.
ಉಡುಪಿಯ ಅಷ್ಟಮಠದಲ್ಲೇ ಹಿರಿಯ ಯತಿಯಾಗಿದ್ದರಿಂದ ಶೀರೂರು ಲಕ್ಷ್ಮೀವರ ತೀರ್ಥ ಸ್ಚಾಮೀಜಿ ಸಾವಿನ ಸಮಯದಲ್ಲಿ ಅಷ್ಟಮಠಕ್ಕೆ ಮಾರ್ಗದರ್ಶಕರಾಗಿದ್ದರು. ದಲಿತರಿಗೆ ಧೀಕ್ಷೆ ನೀಡುತ್ತಿದ್ದರು. ಸದಾ ಯೋಗ ಪೂಜೆಯಲ್ಲಿ ತಲ್ಲಿನರಾಗಿರುತ್ತಿದ್ದರು. ಅಲ್ಲದೇ ವಿರೋಧದ ನಡುವೆಯೂ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ್ದರು. ಇತ್ತೀಚೆಗೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರ ಖುಷಿಪಟ್ಟಿದ್ದರು.
ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ವಿಧಿವಶರಾಗಿದ್ದಾರೆ.
ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾದರು.
ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತಿತ್ತು.
ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಾಗಿರಲಿಲ್ಲ. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳನ್ನು ಭೇಟಿ ಮಾಡಲು ಬರುವುದು ಬೇಡ ಎಂದು ಗಣ್ಯರಲ್ಲಿ ವೈದ್ಯರು ಮನವಿ ಮಾಡಿದ್ದರು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಬ್ಬರು ಮಣಿಪಾಲಕ್ಕೆ ಆಗಮಿಸಿ ಸಲಹೆ ನೀಡುತ್ತಿದ್ದರು. ಮಣಿಪಾಲದ ತಜ್ಞ ವೈದ್ಯರ ತಂಡವು ದಿಲ್ಲಿಯ ಏಮ್ಸ್ ತಜ್ಞರ ಸಂಪರ್ಕದಲ್ಲಿದ್ದರೂ ಶುಕ್ರವಾರದಿಂದ ದೇಹ ಚೇತರಿಕೆ ಹಾಗೂ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿರಲಿಲ್ಲ.
ಪೇಜಾವರ ಶ್ರೀಗಳು ಜ್ವರವಿದ್ದರೂ ಡಿ.19ರ ಗುರುವಾರ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪುತ್ತೂರಿನ ರಾಮಕುಂಜ, ಉಡುಪಿ ಸಮೀಪದ ಪಾಜಕದಲ್ಲಿರುವ ಆನಂದತೀರ್ಥ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಡಿ.22ರ ತನಕ ಪ್ರತಿದಿನ ಸಂಜೆ 5.30ಕ್ಕೆ ಪೇಜಾವರ ಶ್ರೀಗಳಿಂದ ಮಹಾಭಾರತದ ಉಪಾಖ್ಯಾನಗಳು ವಿಷಯವಾಗಿ ಉಪನ್ಯಾಸ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ಗುರುವಾರ ಉಪನ್ಯಾಸ ನೀಡಿದ್ದರು.
ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಶುಕ್ರವಾರ ಬೆಳಗ್ಗೆ ಮಣಿಪಾಲ ಕೆಎಂಸಿಯ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಾಗಿದ್ದರು. 15, 16ನೇ ಶತಮಾನದಲ್ಲಿಸೋದೆ ಶ್ರೀವಾದಿರಾಜತೀರ್ಥ ಶ್ರೀಪಾದರು ನಾಲ್ಕು ಪರ್ಯಾಯ ಪೂರೈಸಿ, ಐದನೇ ಪರ್ಯಾಯವನ್ನು ಶಿರಸಿಯ ಸೋಂದಾದಲ್ಲಿ ನಡೆಸಿದ್ದರೆ, 89ರ ಹರೆಯದ ಪೇಜಾವರ ಶ್ರೀಪಾದರು ಶ್ರೀಕೃಷ್ಣನ ಪೂಜೆಯ ದ್ವೈವಾರ್ಷಿಕ ಪರ್ಯಾಯವನ್ನು ಐದು ಬಾರಿ ಪೂರೈಸಿದ ಏಕೈಕ ಯತಿಯಾಗಿದ್ದಾರೆ.
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯವನ್ನು ಪ್ರಧಾನಿ ಮೋದಿ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು. ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿ ಟಿ.ಪಿ. ಅನಂತ್ ಅವರಿಗೆ ದೂರವಾಣಿ ಕರೆ ಮಾಡಿ ಪೇಜಾವರ ಶ್ರೀಗಳ ಆರೋಗ್ಯದ ಸ್ಥಿತಿಗತಿಯ ವಿವರ ಕೇಳಿದ್ದರು.
ಉಡುಪಿ: ಜೀವನ ಪರ್ಯಂತ ಪೇಜಾವರ ಶ್ರೀಗಳು ಶ್ರೀಕೃಷ್ಣನ ಸೇವೆ ಮಾಡಿದ್ದಾರೆ. ಅವರನ್ನು ಕೃಷ್ಣಪರಮಾತ್ಮನೇ ಉಳಿಸಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಕೆ.ಎಸ್ ಈಶ್ಚರಪ್ಪ ಪ್ರಾರ್ಥಿಸಿದ್ದಾರೆ.
ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಜೀವನವೇ ನಮಗೆ ಆದರ್ಶ. ವೈದ್ಯರು 48 ಗಂಟೆ ಗಡುವು ಕೊಟ್ಟಿದ್ದಾರೆ. ಶ್ರೀಗಳು ನಿರಂತರ ಶ್ರೀಕೃಷ್ಣನ ಸೇವೆ ಮಾಡಿದವರು, ಕೃಷ್ಣ ಪೇಜಾವರ ಶ್ರೀಗಳನ್ನು ಉಳಿಸಿಕೊಳ್ಳಬೇಕು. ಅವರು ಜಾತಿ ಮೀರಿ ಕೆಲಸ ಮಾಡಿದ್ದಾರೆ. ಶ್ರೀಳು ದೇವರಿಗೆ ಸಮಾನ. ಅವರನ್ನು ಕಾಪಾಡಪ್ಪ ಅಂತ ಭಗವಂತನಲ್ಲಿ ಮಾತ್ರ ಕೇಳಿಕೊಳ್ಳುತ್ತೇನೆ ಎಂದರು.
ಪೇಜಾವರ ಶ್ರೀಗಳು ಹತ್ತಾರು ವರ್ಷ ಬದುಕಿ ಬಾಳಬೇಕು. ಭಗವಂತನ ಬಳಿ ಪ್ರಾರ್ಥಿಸಲೆಂದೇ ಉಡುಪಿಗೆ ಬಂದಿದ್ದೇನೆ. ನಮಗೆ ಅವರ ಮಾರ್ಗದರ್ಶನ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು ಮುಂಜಾನೆ 5 ಗಂಟೆಗೆ ಶ್ರೀಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಡಾ. ಸುಧಾ ವಿದ್ಯಾಸಾಗರ್ ನೇತೃತ್ವದ ಐವರು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದಿಸುತ್ತಿದ್ದು, 24 ಗಂಟೆಗಳ ಕಾಲ ನಿಗಾ ವಹಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೇರಿ ಹಲವರು ಶ್ರೀಗಳ ಆಪ್ತರಿಗೆ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಶನಿವಾರ ಉಡುಪಿಗೆ ತೆರಳಿ ಪೇಜಾವರರ ಆರೋಗ್ಯ ವಿಚಾರಿಸಲಿದ್ದಾರೆ. ಗೃಹಸಚಿವ ಅಮಿತ್ ಶಾ ಕೂಡ ನಾಳೆ ಮಣಿಪಾಲಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಪುತ್ತಿಗೆ ಮತ್ತು ತರಳಬಾಳು ಶ್ರೀಗಳು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ ಹಲವು ಗಣ್ಯರು ಆಸ್ಪತ್ರೆ ಭೇಟಿ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಕೆಎಂಸಿ ಆಸ್ಪತ್ರೆ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. 88 ವರ್ಷ ವಯಸ್ಸಿನ ಶ್ರೀಗಳು ನಿನ್ನೆಯಷ್ಟೇ 4 ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಇತ್ತೀಚಿಗಷ್ಟೇ ತಿರುಪತಿ ಮತ್ತು ಉತ್ತರ ಭಾರತ ಪ್ರವಾಸಕ್ಕೂ ಹೋಗಿ ಬಂದಿದ್ದರು.
ಉಡುಪಿ: ಮಕ್ಕಳಲ್ಲಿ ತುಳು ಸಂಸ್ಕತಿ ಬೆಳೆಸಬೇಕು. ತುಳು ಶಿವಳ್ಳಿ ಬ್ರಾಹ್ಮಣ ಭಾಷೆಯನ್ನು ಮಕ್ಕಳು ಮಾತನಾಡಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀ ಕರೆ ಕೊಟ್ಟಿದ್ದಾರೆ.
ಉಡುಪಿಯಲ್ಲಿ ನಡೆಯುತ್ತುರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದಲ್ಲಿ ಮಾತನಾಡಿದ ಶ್ರೀಗಳು, ಮಧ್ವಾಚಾರ್ಯರು ತೌಳವರಾಗಿರುವುದು ನಮ್ಮ ಹೆಮ್ಮೆ. ಆಚಾರ ವಿಚಾರ, ದಾನ, ಸಂಪ್ರದಾಯ, ಧರ್ಮಪಾಲನೆ ಮೋಕ್ಷಕ್ಕೆ ಸಾಧನ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ರೂವಾರಿ ಪರ್ಯಾಯ ಪಲಿಮಾರು ಸ್ವಾಮೀಜಿ ಮಾತನಾಡಿ, ತುಳು ಶಿವಳ್ಳಿ ಬ್ರಾಹ್ಮಣ ಸಮಾಜದಲ್ಲಿ ಒಗ್ಗಟ್ಟಿನ ಸಮಸ್ಯೆಯಿದೆ. ಸಮಾಜದಲ್ಲಿ ಮಾಧ್ವ ಸಂಪ್ರದಾಯದ ಅರಿವಿನ ಕೊರತೆಯಿದೆ. ಈ ಕೆಲಸ ಆಗಬೇಕಿದೆ. ರಾಜಕೀಯ ಶಕ್ತಿಯನ್ನು ಕೂಡ ನಮ್ಮ ಸಮಾಜ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯುವ ವಿಶ್ವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ಸಮ್ಮೇಳನ ಶನಿವಾರ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡಿತು. ತುಳು ಶಿವಳ್ಳಿ ಬ್ರಾಹ್ಮಣರ ಸಮ್ಮೇಳನವನ್ನು ಪಲಿಮಾರು ಪರ್ಯಾಯ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಶ್ರೀ, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ ಪುರಾಣಿಕ್ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುರಿ ಶಂಕರಾಚಾರ್ಯ ಪೀಠ ನಿಶ್ಚಲಾನಂದ ಸ್ವಾಮೀಜಿ ಮೊತ್ತ ಮೊದಲಬಾರಿಗೆ ಭೇಟಿಯಾಗಿ ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ. ಉಡುಪಿ ಪೇಜಾವರ ಮಠದಲ್ಲಿ ಇಬ್ಬರ ಯತಿಗಳ ಮುಖಾಮುಖಿ ಆಗಿದೆ.
ಪುರಿ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಒಂದಿಂಚೂ ಭೂಮಿ ನೀಡಬಾರದು. ಅಯೋಧ್ಯೆಯನ್ನು ಮುಸಲ್ಮಾನರು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ ನೋಡುತ್ತಿರಿ ಎಂದು ಪೇಜಾವರಶ್ರೀ ಮುಂದೆ ಕೋಪ ಹೊರಹಾಕಿದರು. ಸುಪ್ರೀಂಕೋರ್ಟ್ ಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟ್‍ನಲ್ಲಿ ಬಿಜೆಪಿಗೆ ಬಹುಮತ ಇದೆ. ಸುಪ್ರೀಂಕೋರ್ಟ್ ತೀರ್ಪನ್ನು ರದ್ದು ಮಾಡಲಿ ಎಂದರು. ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳಲಿ ಎಂದು ಪುರಿ ಶ್ರೀಗಳು ತಾಕೀತು ಮಾಡಿದರು. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ. ದೇಶದ ಸರ್ವೋಚ್ಚ ನ್ಯಾಯಾಲಯ ಯಾಕೆ ನಿರ್ಧಾರ ತೆಗೆದುಕೊಳ್ಳಬೇಕು? ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪುವುದಿಲ್ಲ ಎಂದು ಗರಂ ಆಗಿ ನುಡಿದರು. ಇದನ್ನೂ ಓದಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧಾರ
ಭಾರತದಲ್ಲಿ ರಾಮನಿಗೆ ಅಧಿಕಾರ ಇಲ್ವಾ?
ವಿಭಜಿತ ಭಾರತದಲ್ಲಿ ರಾಮ ಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿ. ರಾಮ ಹುಟ್ಟಿದ ಭಾರತದಲ್ಲೇ ರಾಮಮಂದಿರಕ್ಕಾಗಿ ಇಷ್ಟು ವರ್ಷ ಕಾಯಬೇಕಾ? ನಮ್ಮ ಮಂದಿರಕ್ಕಾಗಿ ದೇಶದಲ್ಲಿ ಇಷ್ಟೊಂದು ಕ್ಲಿಷ್ಟಕರ ವಾತಾವರಣವೇ ಎಂದು ಅಸಮಾಧಾನ ವ್ಯಕ್ತ ಮಾಡಿದರು. ಇದು ಭಾರತವನ್ನು ಇನ್ನೊಂದು ಮೆಕ್ಕಾ ಮಾಡುವ ಷಡ್ಯಂತ್ರ. ನಮ್ಮ ಉದಾರತೆ ದೌರ್ಬಲ್ಯ ಆಗಬಾರದು ಎಂದು ಸಲಹೆ ನೀಡಿದರು.
ಬಿಜೆಪಿಗೆ ಚಾಟಿ ಬೀಸಿದ ನಿಶ್ಚಲಾನಂದ ಶ್ರೀ:
ಆಡಳಿತ ದುರಾಸೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಈ ದೇಶದಲ್ಲಿ ಇಲ್ಲ ಎಂದು ಬಿಜೆಪಿಗೆ ಸರಿಯಾಗಿಯೇ ಚಾಟಿ ಬೀಸಿ, ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದ ಲ್ಲಿ ಬಿಜೆಪಿಯ ಅಧಿಕಾರದ ಲಾಲಸೆಯ ಉದಾಹರಣೆ ನೀಡಿದರು. ಸಂತರು ಕೂಡ ರಾಜಕಾರಣಿಗಳನ್ನು ಅನುಸರಿಸುತ್ತರುವುದು ಶೋಚನೀಯ ಎಂದು ಮಠಾಧೀಶರ ರಾಜಕೀಯ ಆಸಕ್ತಿ ಬಗ್ಗೆ ಪ್ರಸ್ತಾಪಿಸಿ ವಿರೋಧಿಸಿದರು. ಅಯೋಧ್ಯೆಯಲ್ಲಿ ಒಂದಿಂಚು ಭೂಮಿ ಮುಸ್ಲಿಮರಿಗೆ ನೀಡುವುದಕ್ಕೆ ನನ್ನ ಸಹಮತ ಇಲ್ಲ ಎಂದರು.
ಮುಸ್ಲಿಂ ನಾಯಕರಿಗೆ ರಾಷ್ಟ್ರದ ಉನ್ನತ ಹುದ್ದೆಗಳನ್ನು ನೀಡಿದ್ದೇವೆ. ರಾಷ್ಟ್ರಪತಿ, ಗೃಹ ಸಚಿವ, ಸುಪ್ರೀಂಕೋರ್ಟ್ ನ ನ್ಯಾಯಾಧೀಶ ಪಟ್ಟ ಸಿಕ್ಕಿದೆ. ಅಯೋಧ್ಯೆಯ ಭೂಮಿಯನ್ನೂ ಕೊಟ್ಟಿರುವುದು ಎಷ್ಟು ಸರಿ ಎಂದು ಪೇಜಾವರಶ್ರೀ ಗಳನ್ನು ಪ್ರಶ್ನೆ ಮಾಡಿದರು. ಮಸೀದಿ ಅಲ್ಲಿ ಆಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತವೆ. ನಿಮ್ಮಂತಹ ವೀರ ಸಂತರು ಹಿಂದೂ ಧರ್ಮ ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ಪುರಿ ನಿಶ್ಚಲಾನಂದ ಶ್ರೀ ಕೋರಿಕೆ ವ್ಯಕ್ತಪಡಿಸಿದರು. ಸಮಾಲೋಚನೆ ಉದ್ದಕ್ಕೂ ಪೇಜಾವರಶ್ರೀ ಸಮಾನತೆ, ಸಂವಿಧಾನ ಸಹಬಾಳ್ವೆ ಮತ್ತು ಏಕತೆಯ ಮಂತ್ರ ಜಪಿಸಿದರೂ ಪುರಿಶ್ರೀ ಅದಕ್ಕೆ ಧನಿಗೂಡಿಸದೆ ತಮ್ಮದೇ ವಾದ ಮಂಡಿಸಿ ತೆರಳಿದರು.
ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರಾಗಿದ್ದ ದಿನೇಶ್ ಅಮೀನ್ ಮಟ್ಟು ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಕೃಷ್ಣಮಠ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಟೀಕಿಸಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ್ದ ಅಮಿನ್ ಮಟ್ಟು ಅವರು, ಕೃಷ್ಣಮಠ ಕೋಮುವಾದದ ಕೇಂದ್ರ. ಪೇಜಾವರ ಸ್ವಾಮೀಜಿ ಅದರ ಮುಖಂಡ ಎಂದು ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಮಟ್ಟು ಹೇಳಿಕೆ ಅತ್ಯಂತ ನೋವಿನ ಸಂಗತಿ. ಪೇಜಾವರ ಸ್ವಾಮೀಜಿ ವಯೋವೃದ್ಧರು, ಜ್ಞಾನ ವಂತರು. ಪೇಜಾವರ ಶ್ರೀಗಳು ಇಫ್ತಾರ್ ಕೂಟ ಮಾಡಿದ್ದರು. ಆಗ ನಿಮ್ಮಂತೆ ಯೋಚಿಸುವವರು ಸ್ವಾಗತಿಸಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಅಂದರೆ ಪೇಜಾವರ ಶ್ರೀ ಕೋಮುವಾದಿ ಹೇಗಾಗ್ತಾರೆ? ಮಠ ಕೋಮುವಾದಿಗಳ ಕೇಂದ್ರ ಎಂದು ಹೇಗೆ ಹೇಳುತ್ತೀರಿ? ಕೃಷ್ಣಮಠ ಹಿಂದೂ ಧರ್ಮದ ಸರ್ವಶ್ರೇಷ್ಟ ದೇವಾಲಯ. ಪೇಜಾವರ ಶ್ರೀ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.