Tag: Vishwanath

  • ಮಿತ್ರಮಂಡಳಿಯೂ ಕೈಬಿಟ್ಟ ಮೇಲೆ ಸೋತವರಿಗೆ ಇನ್ಯಾರು ದಿಕ್ಕು?

    ಮಿತ್ರಮಂಡಳಿಯೂ ಕೈಬಿಟ್ಟ ಮೇಲೆ ಸೋತವರಿಗೆ ಇನ್ಯಾರು ದಿಕ್ಕು?

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಡೋಲಾಯಮಾನ ಸ್ಥಿತಿಯಲ್ಲಿದೆ. ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತದೆ? ಎಷ್ಟು ಜನ ಶಾಸಕರು ಸಚಿವರಾಗುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ಪೈಕಿ ಗೆದ್ದ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗುತ್ತಾ ಅನ್ನೋದೂ ಪಕ್ಕಾ ಆಗಿಲ್ಲ. ಈ ಮಧ್ಯೆ ಸೋತವರ ಸ್ಥಿತಿ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಈಗ ಮಿತ್ರಮಂಡಳಿ ಶಾಸಕರು ಸಹ ಸೋತವರ ಪರ ಬ್ಯಾಟಿಂಗ್ ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ.

    ಹೌದು, ಮಿತ್ರಮಂಡಳಿ ಶಾಸಕರು ಸೋತವರಿಗೂ ಸಚಿವ ಸ್ಥಾನ ಕೊಡಿ ಅನ್ನುವ ತಮ್ಮ ಆಗ್ರಹವನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಬೆಂಗಳೂರಿನಲ್ಲಿ ಇಂದು ಮಾತಾಡಿದ ಮಿತ್ರಮಂಡಳಿ ನಾಯಕ ರಮೇಶ್ ಜಾರಕಿಹೊಳಿ, ಬಿಜೆಪಿ ಹೈಕಮಾಂಡ್ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಬಲವಾಗಿ ಆಗ್ರಹಿಸಿದರು. ಆದರೆ ಸೋತವರ ವಿಚಾರದಲ್ಲಿ ಮಾತ್ರ ರಮೇಶ್ ಜಾರಕಿಹೊಳಿ ಧ್ವನಿ ಸಾಫ್ಟಾಗಿ ಹೋಯಿತು. ಸೋತವರಿಗೆ ಸಚಿವ ಸ್ಥಾನ ಕೊಡುವ ಸಂಬಂಧ ಹೈಕಮಾಂಡ್ ನಿರ್ಧರಿಸಲಿದೆ. ಸೋತವರಿಗೂ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

    ಸಾಹುಕಾರ್ ಹೇಳಿಕೆ ಈಗ ಮಿತ್ರಮಂಡಳಿ ನಡುವೆ ಚರ್ಚೆ ಹುಟ್ಟು ಹಾಕಿದೆ. ಗೆದ್ದವರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದಷ್ಟೇ ಗಟ್ಟಿಯಾಗಿ ಸೋತವರಿಗೆ ಕೊಡಿ ಅಂತ ರಮೇಶ್ ಜಾರಕಿಹೊಳಿ ಕೇಳದಿರುವುದು ಸೋತವರ ಮನಸು ಕೆಡಿಸಿದೆ ಎನ್ನಲಾಗಿದೆ. ಹಾಗಿದ್ರೆ, ಸೋತವರ ಪರ ನಿಲ್ಲದೇ ಕೈಕೊಡ್ತಾ ಮಿತ್ರಮಂಡಳಿ ಶಾಸಕರ ಟೀಂ ಎಂಬ ಚರ್ಚೆ ನಡೆಯುತ್ತಿದೆ. ಸೋತವರು ಅಸ್ತಿತ್ವಕ್ಕಾಗಿ ತಮ್ಮ ಪರ ತಾವು ಮಾತ್ರವೇ ಹೋರಾಡಬೇಕಾದ ಅನುವಾರ್ಯತೆ ಈಗ ಸೃಷ್ಟಿಯಾಗಿದೆ.

    ಬಿಜೆಪಿ ಪ್ಲಾನ್ ಸಕ್ಸಸ್:
    ಇಂಥ ಸನ್ನಿವೇಶ ಸೃಷ್ಟಿಯಾಗಲು ಬಿಜೆಪಿ ರೂಪಿಸಿದ ಪ್ಲಾನ್ ಕಾರಣ ಎನ್ನಲಾಗಿದೆ. ಸೋತವರ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ನೆಪವನ್ನು ಅಡ್ಡ ತರಲಾಯ್ತು. ಸೋತವರಿಗೆ ಸಚಿವ ಸ್ಥಾನ ಕೊಡಲು ಕಾನೂನು ತೊಡಗಿದೆ ಎಂದು ನಂಬಿಸುವ ಪ್ರಯತ್ನಗಳಲ್ಲೂ ಯಶಸ್ವಿಯಾಯಿತು ಬಿಜೆಪಿ ಪಾಳಯ. ಸುಪ್ರೀಂಕೋರ್ಟ್ ಆದೇಶ ಕುರಿತು ಅರ್ಹ ಶಾಸಕರ ತಂಡಕ್ಕೂ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾದರು. ಸುಪ್ರೀಂಕೋರ್ಟ್ ಆದೇಶ ವಿಚಾರವನ್ನು ಹರಿಯಬಿಟ್ಟಿದ್ದಲ್ಲದೇ ಕೊನೆಕೊನೆಗೆ ಅರ್ಹರ ಬಾಯಲ್ಲೇ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಂದೇಶವೂ ರವಾನೆಯಾಗುವಂತೆ ಮಾಡುವಲ್ಲಿ ಬಿಜೆಪಿ ಬಿಜೆಪಿ ನಾಯಕರು ಯಶಸ್ವಿಯಾದರು. ಇದರ ಪರಿಣಾಮವಾಗಿಯೇ, ಈಗ ಮಿತ್ರಮಂಡಳಿ ನಾಯಕ ರಮೇಶ್ ಜಾರಕಿಹೊಳಿಯವರೇ ಸೋತವರ ಬಗ್ಗೆ ಥಂಡಾ ಹೊಡೆದಿದ್ದು, ಸೋತವರಿಗೆ ಸಚಿವ ಸ್ಥಾನ ಮರೀಚಿಕೆ ಆಗಿದೆ. ಹಾಗಿದ್ರೆ ಸೋತವರ ಮುಂದಿನ ನಡೆ ಏನು ? ಮುಂದೆ ಅವರಿಗ್ಯಾರು ದಿಕ್ಕು? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

  • ನಾನೇನು ಎಳೆ ಮಗುನಾ? ಹೇಳಿದವರ ಮಾತು ಕೇಳೋಕೆ- ವಿಶ್ವನಾಥ್‍ಗೆ ಸುಧಾಕರ್ ತಿರುಗೇಟು

    ನಾನೇನು ಎಳೆ ಮಗುನಾ? ಹೇಳಿದವರ ಮಾತು ಕೇಳೋಕೆ- ವಿಶ್ವನಾಥ್‍ಗೆ ಸುಧಾಕರ್ ತಿರುಗೇಟು

    ಚಿಕ್ಕಬಳ್ಳಾಪುರ: ನಾನೇನು ಎಳೆ ಮಗುನಾ? ಹೇಳಿದವರ ಮಾತು ಕೇಳೋಕೆ? ನಾನು ಮೂರು ಬಾರಿ ಗೆದ್ದು ಶಾಸಕನಾದವನು, ವೈದ್ಯನಾಗೀದ್ದೀನಿ, ನಾನು ಪ್ರಪಂಚವನ್ನ ನೋಡಿದ್ದೀನಿ. ಯಾರು ಹೇಳಿಕೋಡೋದು ಏನೂ ಇಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ಎಚ್. ವಿಶ್ವನಾಥ್‍ಗೆ ಶಾಸಕ ಸುಧಾಕರ್ ತಿರುಗೇಟು ನೀಡಿದ್ದಾರೆ.

    ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್ ಅವರು, ವಿಶ್ವನಾಥ್‍ರವರ ಹಿತದೃಷ್ಟಿಯಿಂದಲೇ ನಾನು ಹೇಳಿದ್ದೇನೆ. ವಿಶ್ವನಾಥ್ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಲ್ಲಿ ನಾನು ಒಬ್ಬ. ಬಹಿರಂಗವಾಗಿ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಉಪಯೋಗ ಆಗಲ್ಲ. ಸೂಕ್ತವಾದ ವೇದಿಕೆಯಲ್ಲಿ ಯಾರಿಗೆ ಹೇಗೆ ಹೇಳಬೇಕೋ ಹಾಗೆ ಅರ್ಥೈಸಿ ಮಂಡಿಸೋಣ ಅಂತ ಹೇಳಿದ್ದೆ. ಆದರೆ ವಿಶ್ವನಾಥ್ ಅವರು ನನ್ನನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್

    ವಿಶ್ವನಾಥ್ ಅವರ ಬಗ್ಗೆ ಗೌರವವಿದೆ. ಅವರ ನೋವು ನನಗೆ ಅರ್ಥ ಆಗುತ್ತದೆ. ವಿಶ್ವನಾಥ್ ಅವರ ನೋವಿನ ಜೊತೆ ನಾನು ಸಹ ಇರುತ್ತೇನೆ. ನಾನು ವಿಶ್ವನಾಥ್‍ರವರ ಜೊತೆಯಾಗಿ ನನ್ನ ಆತ್ಮೀಯ ಸ್ನೇಹಿತರಾದ ಎಂಟಿಬಿ ಜೊತೆ ಶಾಶ್ವತವಾಗಿ ಇರುತ್ತೇನೆ. ಸುಧಾಕರ್ ಅಧಿಕಾರಕ್ಕೆ ಅಂಟಿ ಕೂರುವ ಮನುಷ್ಯನಲ್ಲ. ಸ್ನೇಹ ಹಾಗೂ ವಿಶ್ವಾಸಕ್ಕೆ ಅವರಿಬ್ಬರ ಜೊತೆ ಜೀವನಪರ್ಯಂತ ಇರುತ್ತೇನೆ ಎಂದರು.

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ನನಗೆ ಯಾವ ಖಾತೆಯಾದರೂ ಕೊಡಲಿ ಒಳ್ಳೆಯ ಕೆಲಸ ಮಾಡುವೆ. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಯಡಿಯೂರಪ್ಪ ಕೈ ಬಲಪಡಿಸುವೆ. ಆದರೆ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಿ, ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದಾಗುತ್ತೆ ಎಂದು ಹೇಳಿದರು.

  • ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ – ಸೋಮಶೇಖರ್ ಹೇಳಿಕೆಗೆ ವಿಶ್ವನಾಥ್ ತಿರುಗೇಟು

    ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ – ಸೋಮಶೇಖರ್ ಹೇಳಿಕೆಗೆ ವಿಶ್ವನಾಥ್ ತಿರುಗೇಟು

    ಮೈಸೂರು: ಬಿಜೆಪಿಗಾಗಿ ನಾನು ಕಳಂಕ ಹೊತ್ತಿದ್ದೇನೆ, ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಯಶವಂತಪುರ ಶಾಸಕರಾದ ಎಸ್.ಟಿ ಸೋಮಶೇಖರ್ ಅವರು, ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಸ್ಥಾನ ನೀಡಲು ಆಗುವುದಿಲ್ಲ. ಆ ರೀತಿ ಅವರು ಒತ್ತಡ ಹಾಕಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಸೋತಿರುವ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ನೀಡಿಲ್ವಾ? ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ? ಕೇಳ್ತಿರೋದು ಮಂತ್ರಿ ಸ್ಥಾನ ಮಾತ್ರ ಎಂದು ತಿರುಗೇಟು ನೀಡಿದರು.

    ಸೋತ ಮೇಲೂ ಅರುಣ್ ಜೆಟ್ಲಿ ಅನುಭವ ಬಳಕೆ ಆಗಲಿಲ್ವಾ?. ಹಾಗಾಗಿ ನಾನು ಹಿರಿಯ ಈ ಹಿಂದೆ ಸಾಕಷ್ಟು ಬಾರಿ ಮಂತ್ರಿಯಾಗಿ ಕೆಲಸದ ಮಾಡಿದ ನನ್ನ ಅನುಭವವನ್ನು ಬಳಕೆ ಮಾಡಿಕೊಳ್ಳಿ ಅತಿದ್ದೇನೆ ಅಷ್ಟೇ. ಸೋತವರು ಸ್ಥಾನ ಕೇಳುವ ನೈತಿಕತೆ ಅಲ್ಲ ಎನ್ನುವುದು ಗೊತ್ತಿದೆ. ಆದರೆ ಇವರಿಗಾಗಿ ಕಳಂಕ ಹೊತ್ತಿದ್ದೇನೆ. ಅಲ್ಲದೆ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ ಅದಕ್ಕಾಗಿ ಸ್ಥಾನ ಕೇಳುತ್ತಿದ್ದೇನೆ ಎಂದು ವಿಶ್ವನಾಥ್ ಹೇಳಿದರು.

    ಸಿಎಂ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಡ ಎಂದು ಹೇಳಿದ್ದು ಸತ್ಯ. ಆದರೆ ಸೋತರೆ ಸಚಿವ ಸ್ಥಾನ ಕೊಡೋದು ಕಷ್ಟ ಎಂದು ಹೇಳಿರಲಿಲ್ಲ. ಅವತ್ತು ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿರಲಿಲ್ಲ. ಈ ಕ್ಷಣಕ್ಕೂ ನಾವೆಲ್ಲಾ ಶಾಸಕರು ಜೊತೆಯಾಗಿದ್ದೇವೆ. ನಾನು ಈ ತಂಡದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ ಎಂದು ವಿಶ್ವನಾಥ್ ಸ್ಟಪ್ಟಪಡಿಸಿದರು.

  • ನಾನು, ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್ ವೆಜ್: ಎಚ್. ವಿಶ್ವನಾಥ್

    ನಾನು, ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್ ವೆಜ್: ಎಚ್. ವಿಶ್ವನಾಥ್

    ಮೈಸೂರು: ನಾನು ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್‍ವೆಜ್ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದರು.

    ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಚ್.ವಿಶ್ವನಾಥ್ ಈ ರೀತಿ ಹೇಳಿದರು. ನಾನು ಹಾಗೂ ಈಶ್ವರಪ್ಪ ಭಾಷಣ ಮುಗಿಸಿ ವೆಜ್ ಊಟಕ್ಕೆ ಹೋಗುತ್ತೇವೆ. ಸಿದ್ದರಾಮಯ್ಯ ಈಗಲೂ ನಾನ್ ವೆಜಿಟೇರಿಯನ್ ಇದ್ದಾರೆ ಎಂದು ತಿಳಿಸಿದ್ದಾರೆ.

    ನಾನು ಈಶ್ವರಪ್ಪ ಅವರ ಸಹವಾಸ ಮಾಡಿ ಬಾಡೂಟ, ಬಳ್ಳೆ ಬಿಟ್ಟಿದ್ದೇನೆ. ಸಿದ್ದರಾಮಯ್ಯ ಈಗಲೂ ಬಾಡೂಟ, ಬಳ್ಳೆ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅವರಿಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕಿ ಐಶ್ವರ್ಯ ಹಾವು ಬತ್ತಿ ಮೀನು ಊಟ ಮಾಡಿಸಿದ್ದಾರೆ. ಹೀಗಾಗಿ ನಾವು ಕೆಆರ್ ನಗರದ ನಮ್ಮ ಮನೆಯಲ್ಲಿ ಊಟ ಮಾಡುತ್ತೇವೆ. ನೀವೆಲ್ಲ ವಿಶ್ವನಾಥ್ ಹಾಗೂ ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಬಿಟ್ಟು ಹೋದರು ಎಂದು ತಿಳಿದುಕೊಳ್ಳಬಾರದು ಎಂದು ಕಾರ್ಯಕ್ರಮದ ಮಧ್ಯೆ ತೆರಳುತ್ತಿರುವುದಕ್ಕೆ ಎಚ್. ವಿಶ್ವನಾಥ್ ಸಮಜಾಯಿಷಿ ನೀಡಿದರು.

    ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ ವಿಶ್ವನಾಥ್, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ನೆರವು ನೀಡಿದರು. ಸುಮಾರು 262 ಕೋಟಿ ರೂ.ಗಳ ಪ್ಯಾಕೇಜ್ ಕೊಟ್ಟಿದ್ದಾರೆ. ರಾಜಕಾರಣದಲ್ಲಿ ತಿರುವುಗಳು ಬರುತ್ತವೆ, ಹೋಗುತ್ತವೆ. ಕಾವೇರಿ ನದಿಯ ಹರಿವಿನಲ್ಲಿ ತಿರುವುಗಳು ಸಹಜ. ಅದೇ ರೀತಿ ನಾವು ವೇದಿಕೆಯಲ್ಲಿ ಸೇರಿದ್ದೇವೆ ಎಂದರು.

    ಇದೇ ವೇಳೆ ಸಂಗೊಳ್ಳಿ ರಾಯಣ್ಣ ಸ್ವತಂತ್ರ ಸೇನಾನಿ. ಗಣರಾಜ್ಯದ ದಿನ ರಾಯಣ್ಣ ಅವರನ್ನು ನಂದಗಢದಲ್ಲಿ ಗಲ್ಲಿಗೆ ಏರಿಸಲಾಯಿತು. ನಂದಗಢವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

  • ನಾನು, ವಿಶ್ವನಾಥ್ ವಿದ್ಯಾರ್ಥಿಗಳಾಗಿದ್ದಾಗ ಬಾಡೂಟ ಹಾಕಿಸ್ತಿದ್ವಿ: ಸಿದ್ದರಾಮಯ್ಯ

    ನಾನು, ವಿಶ್ವನಾಥ್ ವಿದ್ಯಾರ್ಥಿಗಳಾಗಿದ್ದಾಗ ಬಾಡೂಟ ಹಾಕಿಸ್ತಿದ್ವಿ: ಸಿದ್ದರಾಮಯ್ಯ

    ಮೈಸೂರು: ವಿಶ್ವನಾಥ್ ಮತ್ತು ನಾನು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲೇ ಮರಿ ಕಡಿದು ಬಾಡೂಟ ಹಾಕಿಸಿದ್ದೆವು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ಕೆ.ಆರ್ ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈಶ್ವರಪ್ಪ, ವಿಶ್ವನಾಥ್ ಜೊತೆ ವೇದಿಕೆ ಹಂಚಿಕೊಂಡಿದ್ದ ಸಿದ್ದರಾಮಯ್ಯ ಅವರು ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು. ನಾನು ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ. ನಾನು ಅಂತಿಮ ವರ್ಷದಲ್ಲಿದಾಗ ವಿಶ್ವನಾಥ್ ಪ್ರಥಮ ವರ್ಷದಲ್ಲಿದ್ದನು. ಇಬ್ಬರೂ ಸೇರಿ ಕಾಳಿದಾಸ ವಿದ್ಯಾರ್ಥಿ ಸಂಘ ಕಟ್ಟಿದ್ದೆವು. ಅದಕ್ಕೆ ನಾನು ಅಧ್ಯಕ್ಷ, ವಿಶ್ವನಾಥ್ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದ. ಆಗ ಮೈಸೂರಿನಲ್ಲಿ ಓದುತ್ತಿದ್ದ ಕುರುಬ ಸಮುದಾಯದ ವಿದ್ಯಾರ್ಥಿಗಳ ಸರ್ವೆ ಮಾಡಿಸಲು ಉದ್ದೇಶಿಸಿದ್ದೆವು. ಒಂದು ದಿನ ಮರಿ ಕಡಿದು ಬಾಡೂಟ ಮಾಡಿಸಿದ್ದೆವು. ವಿದ್ಯಾರ್ಥಿ ದೆಸೆಯಿಂದಲೇ ನಾವಿಬ್ಬರೂ ಒಟ್ಟಿಗೆ ಬೆಳೆದಿದ್ದೇವೆ ಎಂದು ಹಳೆ ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಸಿದ್ದು, ವಿಶ್ವನಾಥ್, ಈಶ್ವರಪ್ಪ

    ನಮ್ಮ ನಡುವೆ ವೈರತ್ವ ಇಲ್ಲ, ವಿರೋಧ ಮಾತ್ರವಿದೆ. ಎಲ್ಲಕ್ಕಿಂತಾ ಮಾನವೀಯ ಸಂಬಂಧ ಮುಖ್ಯ. ನಮ್ಮ ನಡುವೆ ವೈಯುಕ್ತಿಕ ವೈರುತ್ವ ಏನೂ ಇಲ್ಲ. ನಾನು, ವಿಶ್ವನಾಥ್ ಆಸ್ತಿ ಹಂಚಿಕೊಳ್ಳಬೇಕಿಲ್ಲ. ಈಶ್ವರಪ್ಪ ಆಗಾಗ ನನ್ನ ವಿರುದ್ಧ ಟೀಕೆ ಮಾಡ್ತನೆ. ನಾನೂ ಅವನ ವಿರುದ್ಧ ಮಾತನಾಡಿದ್ದೇನೆ. ನಾನೊಂದು ಪಕ್ಷದಲ್ಲಿ ಇದ್ದೇನೆ, ಅವನೊಂದು ಪಕ್ಷದಲ್ಲಿ ಇದ್ದಾನೆ. ನಾನು ಕಾಂಗ್ರೆಸ್, ಅವನು ಬಿಜೆಪಿ. ನಾನು ಚುನಾವಣೆಗೆ ನಿಂತಾಗ ಅವನು ನನ್ನ ಸೋಲಿಸೋಕೆ ಬರ್ತಾನೆ. ಅವನು ನಿಂತಾಗ ನಾನು ಸೋಲಿಸೋಕೆ ಹೋಗ್ತೀನಿ. ಆದರೆ ವೈಯುಕ್ತಿಕವಾಗಿ ಚೆನ್ನಾಗಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

  • ಒಂದೇ ವೇದಿಕೆಯಲ್ಲಿ ಸಿದ್ದು, ವಿಶ್ವನಾಥ್, ಈಶ್ವರಪ್ಪ

    ಒಂದೇ ವೇದಿಕೆಯಲ್ಲಿ ಸಿದ್ದು, ವಿಶ್ವನಾಥ್, ಈಶ್ವರಪ್ಪ

    ಮೈಸೂರು: ಸಿದ್ದರಾಮಯ್ಯ ವರ್ಸಸ್ ಈಶ್ವರಪ್ಪ, ಸಿದ್ದರಾಮಯ್ಯ ವರ್ಸಸ್ ವಿಶ್ವನಾಥ್ ಎಂಬರ್ಥದಲ್ಲಿ ಪರಸ್ಪರ ಟೀಕೆ – ಪ್ರತಿ ಟೀಕೆಯಲ್ಲಿರುವ ಈ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಕೂತು ನಗು ನಗುತ್ತಾ ಕೆಲ ಸಮಯ ಕಳೆದರು.

    ಅಷ್ಟೆ ಅಲ್ಲ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಒಂದೇ ಕಾರಿನಲ್ಲಿ ಕೂಡ ಸಾಗಿದರು. ಇದೆಲ್ಲ ನಡೆದಿದ್ದು ಮೈಸೂರಿನ ಕೆ.ಆರ್ ನಗರ ತಾಲೂಕಿನ ದೊಡ್ಡ ಕೊಪ್ಪಲು ಗ್ರಾಮದಲ್ಲಿ. ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈ ಮೂವರು ನಾಯಕರು ಭಾಗಿಯಾಗಿದ್ದರು. ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಶಾಸಕ ಎಚ್ ವಿಶ್ವನಾಥ್ ಕುಳಿತಿದ್ದರು.

    ಒಂದು ಕಡೆ ಈಶ್ವರಪ್ಪ, ಮತ್ತೊಂದು ಕಡೆ ವಿಶ್ವನಾಥ್, ಮಧ್ಯದಲ್ಲಿ ಸಿದ್ದರಾಮಯ್ಯ ಕುಳಿತಿದ್ದರು. ಅತ್ಯಂತ ಆತ್ಮೀಯವಾಗಿ ಸಿದ್ದರಾಮಯ್ಯ – ಈಶ್ವರಪ್ಪ ಪರಸ್ಪರ ಮಾತಾಡುತ್ತಾ ಕಾಲ ಕಳೆದರು. ಸಿದ್ದರಾಮಯ್ಯ ಅವರಿಗೆ ಅನಾರೋಗ್ಯದ ವೇಳೆ ಆಸ್ಪತ್ರೆಗೂ ತೆರಳಿದ್ದ ಈಶ್ವರಪ್ಪ, ವಿಶ್ವನಾಥ್ ಈಗ ಕೂಡ ರಾಜಕೀಯ ದ್ವೇಷ ಮರೆತು ವೇದಿಕೆ ಹಂಚಿಕೊಂಡರು.

    ವೇದಿಕೆ ಕಾರ್ಯಕ್ರಮಕ್ಕೆ ಒಂದೇ ಕಾರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಬಂದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದರು. ಜೊತೆ ಜೊತೆಯಲ್ಲಿ ನಗುತ್ತಾ ಮಾತಾಡಿಕೊಂಡು ಸಮಾರಂಭದಲ್ಲಿ ನಾಯಕರು ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಕಾರಣವಾಯಿತು.

  • ರಾಜಕಾರಣ ಬೇರೆ ವೈಯುಕ್ತಿಕ ಸಂಬಂಧ ಬೇರೆ ಮತ್ತೊಮ್ಮೆ ಸಾಬೀತು

    ರಾಜಕಾರಣ ಬೇರೆ ವೈಯುಕ್ತಿಕ ಸಂಬಂಧ ಬೇರೆ ಮತ್ತೊಮ್ಮೆ ಸಾಬೀತು

    ಬೆಂಗಳೂರು: ರಾಜಕೀಯ ಜಿದ್ದಿಗೆ ಬಿದ್ದು ಬೈದಾಡಿಕೊಂಡವರು. ಪರಸ್ಪರ ಚುನಾವಣೆಯಲ್ಲಿ ವಿರುದ್ಧ ಸ್ಪರ್ಧಿಸಿದವರು. ಒಬ್ಬರನೊಬ್ಬರು ಟೀಕಿಸಿಕೊಂಡು ದೂರಾದವರು. ಎಲ್ಲರೂ ಸಿದ್ದರಾಮಯ್ಯ ಆರೋಗ್ಯ ವಿಚಾರಣೆಗೆ ಬಂದು ರಾಜಕಾರಣ ಬೇರೆ ವೈಯುಕ್ತಿಕ ಸಂಬಂಧ ಬೇರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

    ಹೃದಯ ಸಂಬಂಧಿ ಕಾಯಿಲೆಯಿಂದ ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯರನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ವಿಶ್ವನಾಥ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    ಸಿದ್ದರಾಮಯ್ಯರನ್ನ ಚುನಾವಣೆಯಲ್ಲಿ ಸೋಲಿಸಿದ್ದ ಜಿ.ಟಿ.ದೇವೇಗೌಡ ಮುನಿಸು ಮರೆತು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರೆ ಸಿದ್ದರಾಮಯ್ಯರ ಮೇಲೆ ಮುನಿಸಿಕೊಂಡು ಪಕ್ಷ ತೊರೆದಿದ್ದ ಹೆಚ್ ವಿಶ್ವನಾಥ್ ಸಹಾ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

    ಸಮ್ಮಿಶ್ರ ಅರ್ಕಾರ ಪತನಕ್ಕೆ ಕಾರಣರಾದ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ಸಹಾ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದರು. ಇದನ್ನೂ ಓದಿ: ಸಿಎಂ ಬಂದ್ರು ಚೇರ್ ಕೊಡ್ರಪ್ಪ: ಸಿದ್ದರಾಮಯ್ಯ

    ರಾಜಕೀಯ ಅಖಾಡದಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಎಲ್ಲರು ಬೇಸರ ಮರೆತು ಒಗ್ಗೂಡಿದ್ದು ರಾಜಕಾರಣದಲ್ಲಿ ಯಾರು ಶಾಶ್ವತ ಶತ್ರುಗಳಲ್ಲ ಎನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ. ಗುರುವಾರ ಸಿಎಂ ಯಡಿಯೂರಪ್ಪ ಮತ್ತು ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ್ದರು.

  • ನಾಲ್ಕೈದು ದಿನಗಳಲ್ಲಿ ಎಂಟಿಬಿ, ವಿಶ್ವನಾಥ್‍ಗೆ ಸಿಗಲಿದೆ ಗುಡ್ ನ್ಯೂಸ್

    ನಾಲ್ಕೈದು ದಿನಗಳಲ್ಲಿ ಎಂಟಿಬಿ, ವಿಶ್ವನಾಥ್‍ಗೆ ಸಿಗಲಿದೆ ಗುಡ್ ನ್ಯೂಸ್

    ಬೆಂಗಳೂರು: ಉಪಚುನಾವಣೆಯಲ್ಲಿ ಸೋಲು ಕಂಡ ಹೆಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ನಾಲ್ಕೈದು ದಿನಗಳಲ್ಲಿ ಗುಡ್ ನ್ಯೂಸ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಉಪಚುನಾವಣೆಯಲ್ಲಿ ಸೋತ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ‘ಡೋಂಟ್ ವರಿ’ ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ ನನ್ನ ಜೊತೆ ಸರ್ಕಾರ ರಚನೆಗೆ ಸಹಕರಿಸಿದ ಎಲ್ಲ ಅನರ್ಹ ಶಾಸಕರಿಗೂ ಈ ಹಿಂದೆ ಮಾತು ಕೊಟ್ಟಂತೆ ಸ್ಥಾನ ಮಾನ ಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಇನ್ನು ನಾಲ್ಕೈದು ದಿನದಲ್ಲಿ ದೆಹಲಿಗೆ ಹಾರಲಿರುವ ಬಿಎಸ್‍ವೈ ಅಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅದರಲ್ಲೂ ಸಚಿವರಾಗಿದ್ದು ರಾಜೀನಾಮೆ ಕೊಟ್ಟ ಎಂಟಿಬಿ ಕೈಯನ್ನು ಬಿಜೆಪಿ ಬಿಡಲಾರದು ಎನ್ನಲಾಗಿದೆ. ಬಹುತೇಕ ಇಡೀ ಅಪರೇಷನ್‍ನ ಉಸ್ತುವಾರಿಯನ್ನು ವಹಿಸಿದ್ದ ವಿಶ್ವನಾಥ್‍ರನ್ನು ಹಿಂದೆ ಸರಿಸುವ ಪ್ರಮೇಯ ಬಹುಶಃ ಬಿಜೆಪಿ ಮಾಡಲಾರದು ಎನ್ನಲಾಗಿದೆ. ಹಾಗಾಗಿ ನಾಲ್ಲೈದು ದಿನದಲ್ಲಿ ಸೋತಿರುವ ಎಂಟಿಬಿ ಹಾಗೂ ವಿಶ್ವನಾಥ್‍ಗೂ ಗುಡ್ ನ್ಯೂಸ್ ಸಿಗಬಹುದು ಎನ್ನುವ ನಿರೀಕ್ಷೆಯಿದೆ.

    ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ 7,597 ಮತಗಳ ಅಂತರದಿಂದ ಎಂಟಿಬಿ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.

    ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಸೋತಿದ್ದಾರೆ. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದಾರೆ.

  • ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ : ವಿಶ್ವನಾಥ್

    ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ : ವಿಶ್ವನಾಥ್

    ಮೈಸೂರು: ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ ಎಂದು ಹುಣಸೂರಿನಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಮತದಾರನ ತೀರ್ಪು. ಗೆಲುವು-ಸೋಲು ಎಲ್ಲ ಅವರ ಕೈಯಲ್ಲಿ ಇದೆ. ಅವರು ನನಗೆ ಸೋಲಿನ ತೀರ್ಪು ನೀಡಿದರು. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಸೋಲನ್ನು ನಿರೀಕ್ಷಿಸಿರಲಿಲ್ಲ. ಅಂತಹ ವಾತಾವರಣಗಳು ಇರಲಿಲ್ಲ. ಜೆಡಿಎಸ್ ಮತ ಕಾಂಗ್ರೆಸ್‍ಗೆ ಶಿಫ್ಟ್ ಆದವು. ಹಾಗಾಗಿ ಈ ಸೋಲನ್ನು ನಾನು ಅನುಭವಿಸಬೇಕಾಯಿತು ಎಂದರು.

    ಒಂದು ಕೆಟ್ಟ, ಅಯೋಗ್ಯ ಸರ್ಕಾರ. ಅಯೋಗ್ಯ ಸರ್ಕಾರವನ್ನು ಕೆಡವುದಕ್ಕೆ ನಾನು ಮುಂದೆ ನಿಂತೆ. ಅದು ಅವರಿಗೆ ಕಾರಣವಾಯಿತು. ಇದರಿಂದ ನನ್ನ ಮನಸ್ಸಿಗೆ ನೋವಾಗಿಲ್ಲ. ಒಂದು ಅಯೋಗ್ಯ ಸರ್ಕಾರ ಕೆಡವಿ, ಇನ್ನೊಂದು ಸರ್ಕಾರ ಸ್ಥಾಪನೆಯಾಗಿ, ಸ್ಥಾಪನೆಯಾದ ಸರ್ಕಾರ ಸ್ಥಿರ ಸರ್ಕಾರವಾಗಿ ಇಂದು 12 ಜನ ಬಿಜೆಪಿಯವರೇ ಗೆದ್ದಿದೆ. ಬಿಎಸ್‍ವೈಗೆ ಸ್ಥಿರ ಸರ್ಕಾರ ಕೊಡುವುದರ ಜೊತೆಗೆ ಅನರ್ಹರು ಎಂದು ಹೇಳುತ್ತಿದ್ದವರಿಗೆ ಅರ್ಹರು ಎಂಬ ಪಟ್ಟವನ್ನು ರಾಜ್ಯದ ಮತದಾರರು ಕೊಟ್ಟಿದ್ದಾರೆ ಎಂಬ ಖುಷಿಯಿದೆ ಎಂದರು.

    ನನ್ನ ಸೋಲಿಗೆ ನೋವಿಲ್ಲ ಬದಲಾಗಿ ಅನರ್ಹರು ಎಂಬ ಪಟ್ಟವನ್ನು ಮತದಾರರು ತೆಗೆದಿದ್ದಾರೆ ಎಂಬುದು ಖುಷಿಯಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹರು, ಅವರಿಗೆ ಮತ ಹಾಕಬೇಡಿ ಎಂದು ಹೇಳುತ್ತಿದ್ದರು. ಆದರೆ ಈಗ ಬಿಜೆಪಿಯಲ್ಲಿ 12 ಮಂದಿ ಗೆದ್ದಿದ್ದಾರೆ. ನಾನು ಇಂದು ಸೋತಿರಬಹುದು. ಆದರೆ 12 ಮಂದಿ ಗೆದ್ದಿದ್ದಾರೆ. ನನಗೆ ಸೋಲಿನಿಂದ ನೋವಾಗಿಲ್ಲ. ವೈಯಕ್ತಿಕ ಕಾರಣದಿಂದ ಸೋತಿದ್ದೇನೆ. ಬಿಎಸ್‍ವೈ ಅವರ ಮೂರುವರೆ ವರ್ಷದ ಅಭಿವೃದ್ಧಿಗೆ ಮತದಾರರು ಸಾಥ್ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ನಾನು ರಾಜೀನಾಮೆ ನೀಡಿದ್ದು ಸರಿಯಾಗಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಕೇವಲ ಮೂರು, ನಾಲ್ಕು ಜನರಿಗಿದ್ದ ಅಯೋಗ್ಯ ಸರ್ಕಾರ ಕೆಡವಿದ್ದು ಸರಿ. ಮತ್ತು ಹೊಸ ಸರ್ಕಾರದ ಸ್ಥಾಪನೆ ಮಾಡುವುದರಲ್ಲಿ ನನ್ನ ತ್ಯಾಗವಿದೆ ಎಂದರು. ಇದೇ ವೇಳೆ ಹುಣಸೂರು ಜನರ ಬಳಿ ಕ್ಷಮೆ ಕೇಳಬೇಕೆಂಬ ಎಚ್.ಪಿ ಮಂಜುನಾಥ್ ಅವರ ಹೇಳಿಕೆಗೆ ಈ ಮಾತು ಅಯೋಗ್ಯವಾದ ಮಾತು. ಮಂಜುನಾಥ್ ಅವರು ಈ ಮಾತನ್ನು ವಾಪಸ್ ಪಡೆಯಬೇಕು ಎಂದರು.

  • ಸಿಎಂ ಸ್ಥಾನದಲ್ಲಿ ಬಿಎಸ್‍ವೈ ಇದ್ದರೆ, ತಾನೇ ವಿಶ್ವನಾಥ್ ಮಂತ್ರಿಯಾಗೋದು-ಹೆಚ್‍ಡಿಕೆ

    ಸಿಎಂ ಸ್ಥಾನದಲ್ಲಿ ಬಿಎಸ್‍ವೈ ಇದ್ದರೆ, ತಾನೇ ವಿಶ್ವನಾಥ್ ಮಂತ್ರಿಯಾಗೋದು-ಹೆಚ್‍ಡಿಕೆ

    – ರಾಜಕೀಯ ಶುದ್ಧೀಕರಣಕ್ಕೆ 9ನೇ ತಾರೀಖು ಸಾಕ್ಷಿಯಾಗುತ್ತೆ

    ಮೈಸೂರು: 9ನೇ ತಾರೀಖಿನ ನಂತರ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿದ್ದರೆ ತಾನೇ ವಿಶ್ವನಾಥ್ ಮಂತ್ರಿಯಾಗುವುದು ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

    ಇಂದು ಹುಣಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆ.ಎಸ್.ಆರ್.ಟಿ.ಸಿ ಯ ಸ್ಕ್ರಾಪ್ ಮೇಟಿರಿಯಲ್ ಮಾರಿಸೋಕೆ ಯಾರನ್ನೋ ವಿಶ್ವನಾಥ್ ಕರೆದುಕೊಂಡು ಬಂದಿದ್ದರು. ಅವರು ಹುಣಸೂರಿನ ಮುಸ್ಲಿಂ ಅವರನ್ನು ಕರೆದುಕೊಂಡು ಬಂದಿರಲಿಲ್ಲ. ಬದಲಾಗಿ ಚೆನ್ನೈನ ಯಾರೋನ್ನು ಕರೆದುಕೊಂಡು ಬಂದಿದ್ದರು ಎಂದು ವಿಶ್ವನಾಥ್ ವಿರುದ್ಧ ಕಿಡಿಕಾರಿದರು.

    ವಿಶ್ರಾಂತಿಗಾಗಿ ತಾಜ್ ಹೋಟೆಲ್‍ಗೆ ಹೋದರೆ ಅದೇ ದೊಡ್ಡ ಅಪರಾಧ ಆಗಿದೆ. ಉಪ ಚುನಾವಣೆ ನಡೆಸೋದಿಕ್ಕೆ ಒಂದೊಂದು ಕ್ಷೇತ್ರಕ್ಕೆ 40 ಕೋಟಿ ಸಿಎಂ ಕೊಟ್ಟಿದ್ದಾರೆ. ಇವರಿಗೆ ಎಷ್ಟು ದುರಹಂಕಾರ ಇದೆ ನೋಡಿ. ಯಾವ ಪಕ್ಷಕ್ಕೂ ಕೊಡೆ ಹಿಡಿಯೋಕೆ ನಾವು ಯಾವ ಮನೆ ಬಾಗಿಲಿಗೂ ಹೋಗಿಲ್ಲ. ಆದರೆ ಅವರೆ ನಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಒಮ್ಮೆ ಕಾಂಗ್ರೆಸ್ ನವರು ಬರುತ್ತಾರೆ ತಮಗೆ ಕೊಡೆ ಹಿಡಿರಿ ಅಂತಾರೆ. ಒಮ್ಮೆ ಬಿಜೆಪಿ ಅವರು ಬರುತ್ತಾರೆ ಕೊಡೆ ಹಿಡಿರಿ ಅಂತಾರೇ ಎಂದು ಕುಮಾರಸ್ವಾಮಿ ಹೇಳಿದರು.

    ಮತ್ತೆ ನಾನೇ ಸಿಎಂ ಆಗ್ತಿನಿ ಅನ್ನೋಲ್ಲ. 9ನೇ ತಾರೀಖಿನ ನಂತರ ಏನೇನೋ ಆಗುತ್ತೆ ಅಂತಾನು ಹೇಳೋಲ್ಲ. ರಾಜಕೀಯ ಶುದ್ಧೀಕರಣಕ್ಕೆ 9ನೇ ತಾರೀಖು ಸಾಕ್ಷಿಯಾಗುತ್ತೆ. ಮಲ್ಲಿಕಾರ್ಜುನ ಖರ್ಗೆಯವರು 9ಕ್ಕೆ ಸಿಹಿ ಸುದ್ದಿ ಕೊಡ್ತಿವಿ ಅಂದಿದ್ದಾರೆ. ಅವರ ಮಾತುಗಳನ್ನು ದಲಿತ ಬಂದುಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಯಡಿಯೂರಪ್ಪ ಅವರನ್ನು ಅನರ್ಹ ಶಾಸಕರೊಬ್ಬರು ಕಾಮಧೇನು ಎನ್ನುತ್ತಾರೆ. ಯಡಿಯೂರಪ್ಪ ರಾಜ್ಯದ ಜನರ ಪಾಲಿಗೆ ಕಾಮಧೇನು ಅಲ್ಲ. ಅನರ್ಹ ಶಾಸಕರ ಪಾಲಿಗೆ ಮಾತ್ರ ಕಾಮಧೇನು ಎಂದು ಸಿಎಂ ಮೇಲೆ ಮಾಜಿ ಸಿಎಂ ವಾಗ್ದಾಳಿ ಮಾಡಿದ್ದಾರೆ.