Tag: Vishwanath

  • ದಲಿತರ ಹೆಸರಿನಲ್ಲಿ ಹಣ ಲೂಟಿ ಆಗಿದೆ : ಎಚ್. ವಿಶ್ವನಾಥ್

    ದಲಿತರ ಹೆಸರಿನಲ್ಲಿ ಹಣ ಲೂಟಿ ಆಗಿದೆ : ಎಚ್. ವಿಶ್ವನಾಥ್

    ಬೆಂಗಳೂರು: ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ಪರಿಷತ್‍ನಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ. ದಲಿತರ ಅಭಿವೃದ್ದಿಗೆ ಒಂದು ಲಕ್ಷ ಕೋಟಿ ಹಣ ನೀಡಲಾಗಿದೆ. ಆದರೆ ದಲಿತರಿಗೆ ಕೆಲಸಗಳು ಮಾತ್ರ ಇನ್ನೂ ಆಗಿಲ್ಲ. ಈ ಬಗ್ಗೆ ಸರ್ಕಾರ ಜನಪ್ರತಿನಿಧಿಗಳನ್ನ ಕರೆದು ಸಭೆ ಮಾಡಿ. ಯೋಜನೆಗಳನ್ನ ರೂಪಿಸಬೇಕು ಎಂದು ಆಗ್ರಹಿಸಿದರು.

    ಈ ವಿಚಾರವಾಗಿ ಉತ್ತರ ನೀಡಿದ ಸಚಿವ ಕಾರಜೋಳ, 4 ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸೈನಿಕ ಶಾಲೆ ಪ್ರಾರಂಭಕ್ಕೆ ಮಾತುಕತೆ ನಡೆಯುತ್ತಿದೆ. ಹಣ, ಭೂಮಿ ನಮ್ಮದು, ಮ್ಯಾನೇಜ್‍ಮೆಂಟ್ ಅವರದ್ದು 50% ದಲಿತ ಮಕ್ಕಳಿಗೆ ಸೀಟು ಕೊಡಬೇಕು ಎಂದು ನಿಯಮ ಮಾಡಲಾಗುತ್ತಿದೆ. ಶೀಘ್ರವೇ ಈ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

    ಬೀದರ್ ಜಿಲ್ಲೆಯ ಪರಿಶಿಷ್ಟ ಜಾತಿ ಉಪಯೋಜನೆ, ಹಾಗೂ ಗಿರಿಜನ ಯೋಜನೆ ಅಡಿ 2019-20 – 2689 ಲಕ್ಷ ಮತ್ತು 1741 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. 2020-21 ರಲ್ಲಿ 1195.50 ಲಕ್ಷ ಮತ್ತು 876 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ವಾಸಿಸುವ ಕಾಲೋನಿಗಳನ್ನ ಮಾತ್ರ ಕೈಗೊಳ್ಳಲಾಗಿದೆ. ಬೇರೆ ಯಾವುದೇ ಕಾಲೋನಿಗಳ ಕಾಮಗಾರಿ ಕೈಗೆತ್ತುಕೊಂಡಿಲ್ಲ. ಎಸ್‍ಸಿ-ಎಸ್‍ಟಿ ಹಣ ಸರಿಯಾಗಿ ಉಪಯೋಗ ಆಗಬೇಕು ಎಂದು ಸದಸ್ಯ ಅರವಿಂದ್ ಕುಮಾರ್ ಹೇಳಿದರು.

    ಈ ವೇಳೆ ಕೂಡಲೇ ಎದ್ದು ನಿಂತು ಮಾತನಾಡಿದ ಸಿಎಂ ಎಸ್‍ಸಿಪಿ-ಟಿಎಸ್‍ಪಿ ಹಣ 100% ಹಣ ಖರ್ಚಾದರೆ ಪ್ರತಿ ದಲಿತರಿಗೆ ಮನೆ ಕಟ್ಟಿಕೊಡಬಹುದು. ಯಾರು ನಿರುದ್ಯೋಗ ಇರದಂತೆ ನೋಡಿಕೊಳ್ಳಬಹುದು ಈಗ ಕೇವಲ 70% ಮಾತ್ರ ಖರ್ಚಾಗುತ್ತಿದೆ. ಸಂಪೂರ್ಣ ಖರ್ಚು ಮಾಡಿ ಎಂದು ಸಚಿವ ಕಾರಜೋಳರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಸಚಿವ ಕಾರಜೋಳ ಯಾವುದೇ ಹಣ ದುರುಪಯೋಗ ಆಗಿಲ್ಲ. ಅಂತಹ ಯಾವುದೇ ಪ್ರಕರಣ ಕಂಡು ಬಂದರೆ ಕೂಡಲೇ ತನಿಖೆ ಮಾಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

  • ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ ಕೊಡಲಾಗಿದೆ: ಅಪ್ಪಚ್ಚು ರಂಜನ್ ಆಕ್ರೋಶ

    ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ ಕೊಡಲಾಗಿದೆ: ಅಪ್ಪಚ್ಚು ರಂಜನ್ ಆಕ್ರೋಶ

    ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕೊಡಗು ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಂಡಿರುವ ಶಾಸಕ ಅಪ್ಪಚ್ಚು ರಂಜನ್ ಕೊನೆಗೂ ಮೌನ ಮುರಿದಿದ್ದಾರೆ. ಬಕೆಟ್ ಹಿಡಿಯುವವರಿಗೆ ಸಚಿವಸ್ಥಾನ ಕೊಡಲಾಗಿದೆ ಎನ್ನುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಮಡಿಕೇರಿಯಲ್ಲಿ ಕೋವಿಶೀಲ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಜಿಲ್ಲಾಸ್ಪತ್ರೆಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಪ್ರಾಮಾಣಿಕವಾಗಿ ಸಂಘದ ಮಾತು ಕೇಳಿಕೊಂಡು ತಲೆಯಾಡಿಸುತ್ತಾ ಸುಮ್ಮನೆ ಇದ್ದ ನಮ್ಮನ್ನು ಕಡೆಗಣಿಸಲಾಗಿದೆ. ಪಕ್ಷದ ವಿಚಾರ ಬೀದಿಗೆ ಬರಬಾರದು ಎಂದು ಸುಮ್ಮನೆ ಇದ್ದೆವು. ಇನ್ನು ಹತ್ತು ದಿನಗಳು ಕಳೆಯಲಿ ಬಳಿಕ ಕೇಂದ್ರ ನಾಯಕರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಪಕ್ಷದ ವಿರುದ್ಧ ಗುಡುಗಿದ್ದಾರೆ.

    ಹಾಗೆ ಎಂಎಲ್ ಸಿ ವಿಶ್ವನಾಥ್ ಹೇಳಿರುವುದು ಸರಿಯಾಗಿಯೇ ಇದೆ. ಸೈನಿಕನಿಂದಲೇ ವಿಶ್ವನಾಥ್ ಸೋತಿದ್ದಾರೆ. ಚುನಾವಣೆ ಸಂದರ್ಭ ಹುಣಸೂರು ಉಸ್ತುವಾರಿಯನ್ನು ನಾನೇ ಹೊತ್ತಿದ್ದೆ. ಆ ವೇಳೆ ಎಲ್ಲವನ್ನೂ ನಾನು ಚೆನ್ನಾಗಿ ನೋಡಿದ್ದೇನೆ. ಚುನಾವಣೆಗೆ ಎರಡು ದಿನ ಇರುವಾಗ ಏನೆಲ್ಲಾ ನಡೆಯಿತು ಎನ್ನುವುದು ನನಗೆ ಗೊತ್ತಿದೆ. ಸೈನಿಕನಿಂದಾಗಿಯೇ ವಿಶ್ವನಾಥ್ ಸೋತಿರುವುದು ಅವರ ಸೋಲಿಗೆ ಕಾರಣವಾದವರಿಗೆ ಸಚಿವಸ್ಥಾನ ನೀಡಿರುವುದು ದುರಂತ ಎಂದು ಹೇಳುವ ಮೂಲಕ ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಲ್ಲದೆ, ಸಚಿವ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.

    ಬಿಜೆಪಿಯ ಬೆಳವಣಿಗಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಇನ್ನು ಶಾಸಕ ಜಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಬೇರೆ ಬೇರೆ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಆ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಕೊಡುವ ಬದಲು ಬೆಂಗಳೂರು ನಗರದ ಕ್ಷೇತ್ರಕ್ಕೆ ಅಷ್ಟೊಂದು ಅನುದಾನವನ್ನು ಕೊಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

  • ಯೋಗೇಶ್ವರ್ ಜೈಲಿಗೆ ಹೋಗುವ ಸಾಧ್ಯತೆಗಳಿವೆ: ಹೆಚ್. ವಿಶ್ವನಾಥ್

    ಯೋಗೇಶ್ವರ್ ಜೈಲಿಗೆ ಹೋಗುವ ಸಾಧ್ಯತೆಗಳಿವೆ: ಹೆಚ್. ವಿಶ್ವನಾಥ್

    ಹುಬ್ಬಳ್ಳಿ: ಸಚಿವ ಯೋಗೇಶ್ವರ್ ಮೇಲೆ ಮೆಗಾಸಿಟಿ ಪ್ರಕರಣದಲ್ಲಿ 9731 ಕೇಸ್‍ಗಳಿವೆ. ಈ ಕುರಿತಾಗಿ ದೆಹಲಿಯಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜೈಲಿಗೆ ಹೋಗುವ ವ್ಯಕ್ತಿಯನ್ನ ಮಂತ್ರಿ ಮಾಡಬೇಕಾ..? ಯೋಗೇಶ್ವರ್ ಪ್ರಕರಣ ಸದ್ಯ ಸ್ಟೇ ಆಗಿದೆ. ಸ್ಟೇ ಕ್ಲೀಯರ್ ಆದರೆ ಅವರು ಜೈಲಿಗೆ ಹೋಗುವ ಸಾಧ್ಯತೆಯಿದೆ ಎಂದು ಎಂಎಲ್‍ಸಿ ಎಚ್ ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜೀನಾಮೆ ಕೊಟ್ಟು ನಾವು ಕೂಡ ರಾಜ್ಯಪಾಲರ ಬಳಿ ಹೋದವರು, ನಮ್ಮದು ಪಕ್ಷಾಂತರ ಅಲ್ಲ. ನಾನು 40 ವರ್ಷಗಳಿಂದ ರಾಜಕೀಯದಲ್ಲಿ ಇರುವವನು. ಯಡಿಯೂರಪ್ಪರಿಗೆ ಅಧಿಕಾರದ ಮೋಹ ಇದೆ ಎಂದು ವಾಗ್ದಾಳಿ ನಡೆಸಿದರು.

    ರಮೇಶ್ ಜಾರಕಿಹೊಳಿ, ಸಿಪಿ ಯೋಗೇಶ್ವರ್ ಸಾಲ ಮಾಡಿ ಸರ್ಕಾರ ತಂದ್ರು ಅನ್ನೋದನ್ನ ಒಪ್ಪಕ್ಕೆ ಆಗುತ್ತಾ. ಮೂರು ದಿನದ ಬೆಳವಣಿಗೆ ನನಗೆ ಹೇಸಿಗೆ ತರಿಸಿದೆ. ನಾನು ಮಾತನಾಡುವುದನ್ನ ಬಿಟ್ಟು ಬರವಣಿಗೆ ಮಾಡಬೇಕು ಅನ್ನಿಸುತ್ತಿದೆ. ರಾಜ್ಯ ಸರ್ಕಾರ ಬದಲಾವಣೆ ಬಗ್ಗೆ ಪುಸ್ತಕ ಬರೆಯುವೆ. ಈಗಾಗಲೇ 8 ಅಧ್ಯಾಯಗಳು ಮುಗಿದಿವೆ. ನಾನು ಬಿಎಸ್‍ವೈಗೆ ಮಂತ್ರಿ ಮಾಡಿ ಎಂದು ಯಾವತ್ತೂ ಕೇಳಿಲ್ಲ. ನಮ್ಮಿಬ್ಬರ ಮಧ್ಯೆ ನಡೆದ ಮಾತುಕತೆ ಏನಾಯ್ತು ಅಂತ ಪ್ರಶ್ನೆ ಮಾಡುತ್ತಿರುವೆ ಎಂದರು.

    ಸಿಪಿ ಯೋಗೇಶ್ವರ್ ಯಾರು..? ಅವರನ್ನ ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಏನಿತ್ತು. ಮುನಿರತ್ನಗೆ ಸಚಿವ ಸ್ಥಾನ ನೀಡುವುದು ಬಿಟ್ಟು ಯೋಗೇಶ್ವರ್ ಗೆ ಯಾಕೆ ಕೊಡಬೇಕಿತ್ತು..? ನಾನು ಅಧಿಕಾರಕ್ಕೆ ಹಂಬಲಿಸದವನಲ್ಲ. ಸಾರಾ ಮಹೇಶ್ ಕೊಚ್ಚೆಗುಂಡಿ. ಕೊಚ್ಚೆಗುಂಡಿಗೆ ಕಲ್ಲು ಎಸೆದು ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದರು.

    ಕುರುಬ ಸಮಾಜ ಎಸ್‍ಟಿ ಮಿಸಲಾತಿಗಾಗಿ ಹೋರಾಟ ಮಾಡುತ್ತಿದೆ. ಈ ಹೋರಾಟ ನಾಲ್ವರು ಶ್ರೀಗಳು ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿದೆ. ವೀರಶೈವ ಲಿಂಗಾಯತದವರೇ ಸಿಎಂ ಇರುವಾಗ ಲಿಂಗಾಯತ ಸಮುದಾಯ ಮೀಸಲಾತಿಗೆ ಹೋರಾಟಕ್ಕೆ ಇಳಿದಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈಶ್ವರಪ್ಪ ಮೀಸಲಾತಿ ಕೊಡಿಸಲಿ ಅನ್ನೋ ಸಿದ್ದರಾಮಯ್ಯರ ಮಾತು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಬೆಳಗಾವಿಗೆ ಅಮಿತ್ ಶಾ ಆಗಮನದ ವೇಳೆ ಭೇಟಿಗೆ ಅವಕಾಶ ಕೇಳಿದ್ದೇನೆ. ಆಗ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತುನಾಡುತ್ತೇನೆ. ರಾಜ್ಯದ ನಾಯಕತ್ವದ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಬಿಎಸ್‍ವೈ ನಾಯಕತ್ವ ಪ್ರಶ್ನೆ ಮಾಡಲ್ಲ. ಆದರೆ ಅವರ ನಡವಳಿಕೆ ಪ್ರಶ್ನೆ ಮಾಡಬೇಕಾಗಿದೆ. ಬಿಜೆಪಿಯ ನಡವಳಿಕೆಗೆ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.

  • ಕೋರ್ಟ್ ಮ್ಯಾಟರ್‌ಗಳು ಮುಗಿದ ಕೂಡಲೇ ವಿಶ್ವನಾಥ್, ಮುನಿರತ್ನ ಮಂತ್ರಿಯಾಗ್ತಾರೆ: ಉಮೇಶ್ ಕತ್ತಿ

    ಕೋರ್ಟ್ ಮ್ಯಾಟರ್‌ಗಳು ಮುಗಿದ ಕೂಡಲೇ ವಿಶ್ವನಾಥ್, ಮುನಿರತ್ನ ಮಂತ್ರಿಯಾಗ್ತಾರೆ: ಉಮೇಶ್ ಕತ್ತಿ

    ಬೆಂಗಳೂರು: ಕೆಲವೇ ದಿನಗಳಲ್ಲಿ ಮುನಿರತ್ನ ಕೂಡ ಮಂತ್ರಿಯಾಗುತ್ತಾರೆ. ಕೆಲವು ಕೋರ್ಟ್ ವ್ಯಾಜ್ಯಗಳಿವೆ ಅಂತ ಅವರನ್ನು ಮಂತ್ರಿ ಮಾಡಿಲ್ಲದಿರಬಹುದು. ವಿಶ್ವನಾಥ್ ಮತ್ತು ಮುನಿರತ್ನರ ಕೋರ್ಟ್ ಮ್ಯಾಟರ್ ಗಳು ಮುಗಿದ ಕೂಡಲೇ ಮಂತ್ರಿ ಆಗ್ತಾರೆ ಎಂದು ನೂತನ ಸಚಿವ ಉಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿಧಾನಸೌಧದ 329, 329 ಎ ಕೊಠಡಿಗಳಲ್ಲಿ ಕುಟುಂಬ ಸಮೇತ ಇಂದು ಪೂಜೆ ನೆರವೇರಿಸಿ ಉಮೇಶ್ ಕತ್ತಿ ಕೊಠಡಿ ಪ್ರವೇಶ ಮಾಡಿದ್ದಾರೆ. ಖಾತೆ ಹಂಚಿಕೆಗೂ ಮುನ್ನವೇ ನಡೆದ ಈ ಪೂಜೆಯಲ್ಲಿ ಸಹೋದರ ರಮೇಶ್ ಕತ್ತಿಯೂ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕರ ಸಂಕ್ರಾಂತಿ, ಶುಭ ದಿನ ಅಂತ ಇಂದು ಪೂಜೆ ಇಟ್ಟುಕೊಂಡಿದ್ದೇನೆ. ಯಾವುದೇ ಖಾತೆ ಕೊಟ್ಟರೂ ಉತ್ತಮವಾಗಿ ನಿಭಾಯಿಸ್ತೇನೆ ಎಂದು ಭರವಸೆ ನೀಡಿದರು.

    ಖಾತೆಗಳ ಅದಲು ಬದಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಯಾವ ಖಾತೆ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಖಾತೆಗಳ ಅದಲು ಬದಲು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು, ಸಿಎಂ ಕೊಡೋ ಖಾತೆಯನ್ನೇ ಚೆನ್ನಾಗಿ ನಿಭಾಯಿಸ್ತೇನೆ ಎಂದರು.

    ಸಚಿವ ಸಂಪುಟ ವಿಸ್ತರಣೆಗೆ ಹಲವರ ಅಸಮಾಧಾನ ವಿಚಾರದ ಕುರಿತು ಮಾತನಾಡಿ, ರಾಜ್ಯದಲ್ಲಿ 34 ಜನರನ್ನ ಮಂತ್ರಿ ಮಾಡಬೇಕು. ಹಾಗಾಗಿಯೇ 34 ಜನ ಮಂತ್ರಿಗಳಾಗಿದ್ದಾರೆ. ಉಳಿದವರೂ ಮಂತ್ರಿಗಳಾಗ್ತಾರೆ. ನಿಷ್ಟಾವಂತರು, ಅಭಿಮಾನಿಗಳು, ಮಂತ್ರಿಗಳಾಗುವ ಇಚ್ಛೆ ಇರುವವರು ಮಂತ್ರಿ ಆಗುತ್ತಾರೆ. 224 ಶಾಸಕರಿಗೂ ಮಂತ್ರಿ ಸ್ಥಾನ ಸಿಗುತ್ತೆ. ಕಾಯಬೇಕು, ಕಾದರೆ ಮಂತ್ರಿ ಸ್ಥಾನ ಸಿಗುತ್ತೆ. ನಾನು ಒಂದೂವರೆ ವರ್ಷ ಕಾದೆ, ನಂತರವೇ ಸಿಕ್ಕಿದ್ದು. ಈಗ ಮಂತ್ರಿಯಾಗಿಲ್ವಾ ಒಂದಲ್ಲ ಒಂದು ದಿನ ಅಧಿಕಾರ ಬಂದೇ ಬರುತ್ತೆ ಎಂದು ತಿಳಿಸಿದರು.

    ಯತ್ನಾಳ್, ವಿಶ್ವನಾಥ್ ರ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂದು ಒಳ್ಳೆಯ ದಿನ, ಮಕರ ಸಂಕ್ರಾಂತಿ ದಿನ. ಇಂದು ಒಳ್ಳೆಯ ಚಿಂತನೆ ಮಾಡಿ, ಒಳ್ಳೆಯ ವಿಚಾರಗಳ ಚರ್ಚೆ ಮಾಡಿ. ಉಳಿದ ವಿಚಾರಗಳು ಇವತ್ತು ಚರ್ಚೆ ಬೇಡ. ನಾಳೆ ಮಂತ್ರಿಯಾಗ್ತೇನೆ, ಇವತ್ತು ನಾನು ಸಂಕ್ರಾಂತಿ ಆಚರಣೆಯಲ್ಲಿ ಇದ್ದೇನೆ ಎಂದರು.

  • ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    – ವಿಜಯೇಂದ್ರನಿಂದ ಬಿಜೆಪಿಗೆ ಸನ್ ಸ್ಟ್ರೋಕ್
    – ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್ ಆಗುತ್ತೆ

    ರಾಯಚೂರು: ಈ ಹಿಂದೆ ಕಾಂಗ್ರೆಸ್, ಜನತಾದಳದ ರೀತಿಯಲ್ಲಿಯೇ ಬಿಜೆಪಿ ಸಹ ಸನ್ ಸ್ಟ್ರೋಕ್ ಮತ್ತು ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಹಾಳಾಗುತ್ತಿದೆ ಎಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

    ಇಂದು ರಾಯಚೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್, ಈ ಸನ್ ಸ್ಟ್ರೋಕ್‍ಗೆ ಹಿಂದೆ ಜನತಾ ಪರಿವಾರ ಮುಳುಗಿತು. ಕಾಂಗ್ರೆಸ್ ಸಹ ಸನ್ ಸ್ಟ್ರೋಕ್ ನಲ್ಲಿ ಹಾಳಾಗಿ ಹೋಗಿದೆ. ಇದೀಗ ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಸಿಎಂ ಪುತ್ರ ವಿಜಯೆಂದ್ರನಿಂದ ಈಗ ಬಿಜೆಪಿಗೆ ಸನ್ ಸ್ಟ್ರೋಕ್ ಆವರಿಸಿದೆ. ಯಾರ ಮುಲಾಜು, ಯಾರ ಭಿಕ್ಷೆಯಿಂದ ಸಿಎಂ ಸ್ಥಾನದಲ್ಲಿ ಕುಳಿತಿದ್ದಿರಾ ಯೋಚಿಸಿ ಎಂದು ಪ್ರಶ್ನಿಸಿದರು.

    ಭಷ್ಟನಿಗೆ ಮಂತ್ರಿ ಸ್ಥಾನ: ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಹಲವು ಒತ್ತಾಯಗಳು ಬರುವುದು ಸಹಜ. ಆದರೆ ಆದ್ರೆ ಭ್ರಷ್ಟರನ್ನು ಮಂತ್ರಿ ಮಾಡುವ ಒತ್ತಾಯ ಸಾಮಾನ್ಯವಾಗಿ ಬರುವುದಿಲ್ಲ. ಭ್ರಷ್ಟನನ್ನು, ದಲ್ಲಾಳಿಯನ್ನು ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಯೋಗೇಶ್ವರ್ ಭ್ರಷ್ಟಾಚಾರವನ್ನು ಹೊತ್ತು ಮಲಗಿದ್ದಾನೆ. 9,731 ಜನರ ಬಳಿ ಮೆಗಾ ಸಿಟಿಗೆ ನೂರಾರು ಕೋಟಿ ದುಡ್ಡು ತೆಗೆದುಕೊಂಡಿದ್ದಾನೆ. ಭ್ರಷ್ಟನ ವಿರುದ್ಧ ಮೋಸ ಹೋದವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಸಿರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಗೆ ರೆಫರ್ ಮಾಡಿದೆ. ಸಾವಿರಾರು ಜನರಿಗೆ ಟೋಪಿ ಹಾಕಿದವನಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿರುವ ಆತನಿಗೆ ನಿನ್ನೆ ಬಾಯಿ ತಪ್ಪಿ ಸೈನಿಕ ಎಂದೆ ಹಾಗೆ ಕರೆದರೆ ಅದು ನಿಜವಾದ ಸೈನಿಕನಿಗೂ ಅವಮಾನ ಎಂದು ಯೋಗೇಶ್ವರ್ ವಿರುದ್ಧ ಗುಡುಗಿದರು.

    ಯಡಿಯೂರಪ್ಪನವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. ಬಿಎಸ್‍ವೈರವರಿಗೆ ಒಳ್ಳೆಯದಾಗಲಿ ಎಂದು 17 ಜನ ಕ್ಷಿಪ್ರ ಕ್ರಾಂತಿಗೆ ಬಂದಿದ್ದೇವು. ಆದರೆ ಸಂಪುಟದಿಂದ ದಲಿತ ನಾಗೇಶ್ ರನ್ನು ಕಿತ್ತು ಹಾಕಿದ್ದಿರಾ, ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ಹೊರಹಾಕಿದರು.

    ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್: ಈ ಬಾರಿ ಸಂಕ್ರಮಣಕ್ಕೆ ಹೋರಿ ಹಿಡಿದಾಗೆ ಹಿಡಿಯಲಾಗುತ್ತದೆ. ಸಿಡಿ ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ್ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಈಗಲೂ ಯಡಿಯೂರಪ್ಪರವರ ಬಗ್ಗೆ ಅಭಿಮಾನವಿದೆ. ಆದರೆ ಅವರು ಕುಟುಂಬ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. ಹಾಗಾಗಿ ಇಂದು ನಾಲಿಗೆ ಇಲ್ಲದ ನಾಯಕರೂ ಆಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ, ನಾವು ಸದ್ಯ ಪರಿಸ್ಥಿತಿಯಲ್ಲಿ ಶಿಶುಗಳಂತಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಾರಾ ಮಹೇಶ್ ಕೊಚ್ಚೆಗುಂಡಿ: ಅಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇಂದು ಇದೆಲ್ಲಾ ಆಗುತ್ತಿರಲಿಲ್ಲ ಎಂದರು. ಇನ್ನೂ ಸಾರಾ ಮಹೇಶ್ ಕೊಚ್ಚೆಗುಂಡಿ. ಅವನ ಬಗ್ಗೆ ಯಾವುದೇ ಮಾತನಾಡುವುದಿಲ್ಲ. ನನ್ನನ್ನು ನಮ್ಮವರು ನಡುನೀರಲ್ಲಿ ಬಿಟ್ಟಿಲ್ಲ, ಇಲ್ಲಿ ಯಾವ ನೀರೇ ಇಲ್ಲಾ. ನಾನೇನಾದರೂ ಅಸಂಬದ್ಧವಾಗಿ ಮಾತನಾಡಿದರೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ವಾಗ್ದಾಳಿ ತಿಳಿಸಿದರು.

     

     

  • ಏಕವಚನದ ಮಾತು ಕಡಿಮೆ ಮಾಡಿಯೆಂದ ವಿಶ್ವನಾಥ್‍ಗೆ ಸಿದ್ದು ಕ್ಲಾಸ್

    ಏಕವಚನದ ಮಾತು ಕಡಿಮೆ ಮಾಡಿಯೆಂದ ವಿಶ್ವನಾಥ್‍ಗೆ ಸಿದ್ದು ಕ್ಲಾಸ್

    ಮೈಸೂರು: ಏಕವಚನದ ಮಾತು ಕಡಿಮೆ ಮಾಡಿ ಎಂದು ಹೇಳಿಕೆ ನೀಡಿದ್ದ ಎಂಎಲ್‍ಸಿ ಹೆಚ್ ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಇಂದು ಮೈಸೂರಿನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಎಷ್ಟು ಏಕವಚನದಲ್ಲಿ ಮಾತನಾಡಿದ್ದಾನೆ ಎಂದು ನಾನು ತೋರಿಸ್ಲಾ? ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸಬೇಕಾ ಎಂದು ಮತ್ತೆ ಏಕವಚನದಲ್ಲಿ ವಿಶ್ವನಾಥ್‍ಗೆ ತಿರುಗೇಟು ನೀಡಿದರು.

    ನನ್ನದು ಹಳ್ಳಿ ಭಾಷೆ, ಹಾಗಾಗಿ ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶವಾಗಿ ಏಕವಚನ ಬಳಸೋಲ್ಲ ಅದು ತಾನಾಗಿಯೇ ಬರೋದು. ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಮಹದೇಶ್ವರರು ಅಂತ ಕರೆಯುತ್ತಾರಾ? ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ವಿಶ್ವನಾಥ್‍ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.

    ಇದೇ ವೇಳೆ ನನ್ನ ನಾಯಕತ್ವ ಹೋದರೂ ಪರವಾಗಿಲ್ಲ ಸಿದ್ದರಾಮಯ್ಯ ಬೆಳೆಯಬೇಕೆಂದು ಕಾಂಗ್ರೆಸ್‍ಗೆ ಸೇರಿಸಿಕೊಂಡೆವು ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ನನಗೆ ಯಾರು ನಾಯಕತ್ವವನ್ನು ಬಿಟ್ಟು ಕೊಟ್ಟಿಲ್ಲ. ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಕಾರಣರಲ್ಲ. ಬೆಂಗಳೂರಿನ ನನ್ನ ಸ್ನೇಹಿತ ಪೀರನ್, ಅಹ್ಮದ್ ಪಟೇಲ್ ಜೊತೆ ಮಾತುಕತೆ ನಡೆಸಿ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಸೇರಿಸಿಕೊಂಡರು. ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ನಾಯಕರು ಕಾರಣರಲ್ಲ ಎಂದರು.

  • ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್‌

    ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್‌

    – ಸತ್ಯ ಯಾವುದು ಎಂದು ತೀರ್ಮಾನವಾಗಿದೆ
    – ನಮ್ಮಂತ ರಾಜಕಾರಣಿಗಳಿಗೆ ಇದು ಪಾಠ

    ಮೈಸೂರು: ಮಾಜಿ ಸಚಿವ, ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಅವರಿಗೆ ನ್ಯಾಯ ದೇವತೆ ಶಿಕ್ಷೆ ನೀಡಿದ್ದಾಳೆ ಎಂದು ಜೆಡಿಎಸ್‌ ಶಾಸಕ ಸಾರಾ ಮಹೇಶ್‌ ಹೇಳಿದ್ದಾರೆ.

    ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಾರಾ ಮಹೇಶ್‌ ಆಗಮಿಸಿ ದೇವಿಯ ದರ್ಶನ ಪಡೆದರು. ಬಳಿಕ ಕ್ಷೇತ್ರವನ್ನು ಸಾಕ್ಷಿಯಾಗಿಸಿದ್ದಕ್ಕೆ 1,001 ರೂ. ತಪ್ಪು ಕಾಣಿಕೆ ಹಾಕಿದರು. ಬಳಿಕ ಮಾತನಾಡಿದ ಅವರು, ಪ್ರಸಂಗ ನಡೆದ ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ ಎಂದು ತಿಳಿಸಿದರು.

    ಆಣೆ ಪ್ರಮಾಣ ನಡೆದು ಸರಿಯಾಗಿ ಒಂದೆ ವರ್ಷಕ್ಕೆ ಸತ್ಯ ಯಾವುದು ಎಂಬುದು ತೀರ್ಮಾನವಾಗಿದೆ. ಈ ಮೂಲಕ ಚಾಮುಂಡಿ ತಾಯಿ ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾಳೆ ಎಂದರು.  ಇದನ್ನೂ ಓದಿ: ವಿಶ್ವನಾಥ್‌ಗೆ ಹೈಕೋರ್ಟ್‌ ಶಾಕ್‌ – ಎಂಟಿಬಿ, ಶಂಕರ್‌ಗೆ ಬಿಗ್‌ ರಿಲೀಫ್‌

    ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು ಸರಿಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು‌ ಕೇಳಿದ್ದೆ. ಪ್ರಸಂಗ ನಡೆದ ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ. ತಪ್ಪು ಮಾಡಿದ್ದರೂ ಭಂಡತನದಿಂದ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದ್ದು ನಮ್ಮಂತ ರಾಜಕಾರಣಿಗಳಿಗೆ ಪಾಠ ಎಂದು ಪ್ರತಿಕ್ರಿಯಿಸಿದರು.

    ಅಂದು ಏನಾಗಿತ್ತು?
    ಕಳೆದ ವರ್ಷ ವಿಶ್ವಾಸ ಮತ ನಿರ್ಣಯ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ್ದ ಸಾರಾ ಮಹೇಶ್‌, ವಿಶ್ವನಾಥ್‌ ಎಷ್ಟು ಕೋಟಿಗೆ ಸೇಲಾಗಿದ್ದಾರೆ ಎಂಬುದನ್ನು ತಿಳಿಸಬೇಕು. ಪತ್ರಕರ್ತರ ಮಧ್ಯಸ್ಥಿಕೆ ಮೂಲಕ 28 ಕೋಟಿ ರೂ. ವ್ಯವಹಾರ ಕುದುರಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಾಂಬ್‌ ಸಿಡಿಸಿದ್ದರು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರ ನಡುವೆ ಆರೋಪ ಪ್ರತ್ಯಾರೋಪ ನಡೆದು ಕೊನೆಗೆ ಆಣೆ ಪ್ರಮಾಣದ ಹಂತವರೆಗೆ ಬಂತು. ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ಬರಬೇಕೆಂದು ವಿಶ್ವನಾಥ್ ಸಾ.ರಾ. ಮಹೇಶ್‌ಗೆ ಸವಾಲು ಹಾಕಿದ್ದರು. ಈ ಕಾರಣಕ್ಕಾಗಿ ಅಕ್ಟೋಬರ್‌ 17 ರಂದು ಇಬ್ಬರು ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು.

    ಆರಂಭದಲ್ಲಿ ಬೆಳಗ್ಗೆ ವಿಶ್ವನಾಥ್‌ ದೇವಾಲಯಕ್ಕೆ ಬಂದಿದ್ದರು. ವಿಶ್ವನಾಥ್‌ ಹೊರ ಬಂದ ಬಳಿಕ ಸಾರಾ ಮಹೇಶ್‌ ಒಳ ಪ್ರವೇಶಿಸಿದ್ದರು. ಈ ವೇಳೆ ಸಾರಾ ಮಹೇಶ್‌ ತೆರಳಿದ ವಿಚಾರ ಕೇಳಿ ವಿಶ್ವನಾಥ್‌ ಒಂದು ಗಂಟೆಗಳ ಕಾಲ ಕಾದು ಕುಳಿತರು. ಮಹೇಶ್ ಅವರು ಬಾರದ ಕಾರಣ ವಿಶ್ವನಾಥ್ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ ತೆರಳಿದ್ದರು. ವಿಶ್ವನಾಥ್ ಹೋದ ನಂತರ ಸಾರಾ ಮಹೇಶ್ ದೇವಾಲಯದಿಂದ ಹೊರ ಬಂದರು.

    ಈ ವೇಳೆ ಪ್ರತಿಕ್ರಿಯಿಸಿದ್ದ ವಿಶ್ವನಾಥ್‌ ನನ್ನ ಮಾತನ್ನು ತಿರುಚಬೇಡಿ. ನಾನು ಆಣೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬಂದಿಲ್ಲ. ನನಗೆ ಹಣ ಕೊಟ್ಟವರನ್ನು ನೋಡಲು ಹಾಗೂ ಆರೋಪ ಮಾಡಿದವರಿಗಾಗಿ ಕಾಯುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.

    ಕಣ್ಣೀರು ಹಾಕಿ ಆಣೆ ಮಾಡಿದ್ದ ಸಾರಾ ಮಹೇಶ್‌, ನನ್ನ ಮೇಲೆ ವಿಶ್ವನಾಥ್‌ ವೈಯಕ್ತಿಕ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಿದ್ರೆ ನಾನು ಕ್ಷಮೆಯಾಚಿಸುವೆ ಎಂದಿದ್ದರು.

  • ಮಂತ್ರಿಗಿರಿಗಾಗಿ ಲಾಬಿ ಜೋರು – ದೆಹಲಿಗೆ ಬಂದಿಳಿದ ವಿಶ್ವನಾಥ್

    ಮಂತ್ರಿಗಿರಿಗಾಗಿ ಲಾಬಿ ಜೋರು – ದೆಹಲಿಗೆ ಬಂದಿಳಿದ ವಿಶ್ವನಾಥ್

    ನವದೆಹಲಿ:  ಉಪ ಚುನಾವಣೆ ಬಳಿಕ ಸಂಪುಟ ಸರ್ಜರಿ ಮಾಡುತ್ತೇನೆ. ದೆಹಲಿಗೆ ಹೋಗಿ ಹೈಕಮಾಂಡ್ ಒಪ್ಪಿಗೆ ಪಡೆಯುತ್ತೇನೆ ಎಂದು ಸಿಎಂ ಯಡಯೂರಪ್ಪ ಘೋಷಿಸಿದ್ದೇ ತಡ ಸಚಿವ ಸ್ಥಾನದ ಆಕಾಂಕ್ಷಿಗಳ ಚಟುವಟಿಕೆ ತೀವ್ರಗೊಂಡಿದೆ.

    ಮಂತ್ರಿಗಿರಿಗಾಗಿ ಆಕಾಂಕ್ಷಿಗಳು ತಮ್ಮದೇ ಮೂಲಗಳ ಮೂಲಕ ಲಾಬಿ ಆರಂಭಿಸಿದ್ದಾರೆ. ವಿಶ್ವನಾಥ್‍ಗೆ ಮಂತ್ರಿಸ್ಥಾನ ಕೈತಪ್ಪಬಹುದು ಎಂಬ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ಅವರು, ಇನ್ನೋರ್ವ ಆಕಾಂಕ್ಷಿ ಶಂಕರ್ ಜೊತೆ ಸಿಎಂಗೆ ಮುನ್ನವೇ ದೆಹಲಿಗೆ ದೌಡಾಯಿಸಿದ್ದಾರೆ.

    ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಭೇಟಿಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಸೋಮವಾರ ಬೆಳ್ಳಂಬೆಳಗ್ಗೆ ಕೊಲ್ಕೊತಾಗೆ ತೆರಳಲಿರುವ ಹೂಗ್ಲಿ ನದಿ ದಂಡೆಯಲ್ಲಿರುವ ಕಾಳಿಮಾತಾ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ ಹೊತ್ತಿಗೆ ದೆಹಲಿ ತಲುಪಲಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಮುಂದುವರೆಸಲಿದ್ದಾರೆ.

    ಈ ಮಧ್ಯೆ, ಕಾಗಿನೆಲೆಯಲ್ಲಿ ಮಾತನಾಡಿದ ಸಚಿವ ಸ್ಥಾನದ ಆಕಾಂಕ್ಷಿ ಎಂಟಿಬಿ ನಾಗರಾಜ್ ಉಪಚುನಾವಣೆ ಫಲಿತಾಂಶದ ಬಳಿಕ ಬಳಿಕ ಸಂಪುಟ ವಿಸ್ತರಣೆ ಅಥವಾ  ಪುನಾರಚನೆ ನಡೆಯುವುದು ಪಕ್ಕಾ ಎಂದಿದ್ದಾರೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಹೀಗಾಗಿ ನಾನು ಮತ್ತೆ ಸಚಿವನಾಗ್ತೇನೆ. ಯಾವ ಖಾತೆಯನ್ನಾದ್ದರೂ ಕೊಡಲಿ, ಅದನ್ನು ನಾನು ನಿಭಾಯಿಸುತ್ತೇನೆ ಎಂದಿದ್ದಾರೆ

  • ಕಣ್ಣಿಲ್ಲದಿದ್ರೂ ಅಪೂರ್ವವಾದ ಪ್ರತಿಭೆಯ ಪಿಯಾನೋ ಟ್ಯೂನ್‍ಗೆ ನಿಖಿಲ್ ಫಿದಾ

    ಕಣ್ಣಿಲ್ಲದಿದ್ರೂ ಅಪೂರ್ವವಾದ ಪ್ರತಿಭೆಯ ಪಿಯಾನೋ ಟ್ಯೂನ್‍ಗೆ ನಿಖಿಲ್ ಫಿದಾ

    ಹಾಸನ: ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಆಗಾಗ ಪತ್ನಿ ರೇವತಿ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಮಡದಿ ಮಾತಿಗೆ ತಲೆಯಾಡಿಸಿ ನಸು ನಕ್ಕ ಅಭಿಮನ್ಯು

    ನಟ ನಿಖಿಲ್ ಪಿಯಾನೋ ವಿಶ್ವನಾಥ್ ಅವರ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶ್ವನಾಥ್ ಅವರು ನಿಖಿಲ್‍ಗಾಗಿ ಪಿಯಾನೋ ಟ್ಯೂನ್ ನುಡಿಸಿದ್ದು, ಅವರ ನುಡಿಸಿದ ಟ್ಯೂನ್‍ಗೆ ನಿಖಿಲ್ ಫಿದಾ ಆಗಿದ್ದಾರೆ.

    “ಕಣ್ಣಿಲ್ಲದಿದ್ದರೂ ಅಪೂರ್ವವಾದ ಪ್ರತಿಭೆಯಾಗಿರುವ ವಿಶ್ವನಾಥ್ ಅವರು ಹಾಸನದ ಈಜಿಪುರದವರಂತೆ. ಇಂದು ಆಕಸ್ಮಿಕವಾಗಿ ಇವರ ಭೇಟಿಯಾಯಿತು. ಇವರು ಇಂಪಾಗಿ ಪಿಯಾನೋ ನುಡಿಸುವುದನ್ನು ಕೇಳಿ ಸಂತೋಷವಾಯಿತು. ದೈಹಿಕ ನ್ಯೂನತೆಗಳಿದ್ದರೂ ಸಾಧಿಸುವ ಛಲವಿರುವವರಿಗೆ ಯಾವುದು ಅಡ್ಡಿಯಾಗುವುದಿಲ್ಲ. ಇವರ ಸಾಧನೆ ವಿಕಲಚೇತನರಿಗೆ ಮಾತ್ರ ಅಲ್ಲ ಎಲ್ಲರಿಗೂ ಸ್ಫೂರ್ತಿಯಾಗುವಂತದ್ದು” ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ನಿಖಿಲ್ ತಮ್ಮ ಪತ್ನಿ ಅಡುಗೆ ಮಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ನಂತರ ತಮ್ಮ ಪತ್ನಿ ರೇವತಿಯ ಮಾತಿಗೆ ನಿಖಿಲ್ ತಲೆಯಾಡಿಸಿ ನಕ್ಕಿರುವ ಒಂದು ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಕೂಡ ಅವರಿಬ್ಬರ ವಿಡಿಯೋವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಸದ್ಯಕ್ಕೆ ನಿಖಿಲ್ ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದು, ಹಾಸನದ ಖಾಸಗಿ ರೆಸಾರ್ಟಿನಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದಾರೆ. ಕಳೆದ ಎರಡು ದಿನಗಳಿಂದ ಹಾಸನದ ಬೇಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟಿನಲ್ಲಿ ನಿಖಿಲ್ ತಮ್ಮ ಪತ್ನಿ ರೇವತಿ, ತಾಯಿ ಅನಿತಾ ಮತ್ತು ತಂದೆ ಕುಮಾರಸ್ವಾಮಿ ಜೊತೆ ವಾಸ್ತವ್ಯ ಮಾಡಿದ್ದಾರೆ.

    https://www.instagram.com/p/CFZYXuwJMlO/?utm_source=ig_embed

    ಬಹುದಿನಗಳ ಬಳಿಕ ನಿಖಿಲ್ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದು, ‘ರೈಡರ್’ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದ್ದು, ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳುತ್ತಿದ್ದಾರೆ.