Tag: Vishwa Prasanna Theertha Swamiji

  • ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ

    ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ

    ಉಡುಪಿ: ಸ್ವಾಮೀಜಿ ಅಂದರೆ ಪೂಜೆ ಪುನಸ್ಕಾರ ಮಾಡುತ್ತಾರೆ. ಪಾಠ ಪ್ರವಚನ ಮಾಡಿ ಮಠದಲ್ಲಿ ಇರುತ್ತಾರೆ. ಲೋಕ ಸಂಚಾರ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಾರೆ. ಆದರೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇದೆಲ್ಲ ಮಾಡುವ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ.

    ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಸ್ವಾಮೀಜಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ನೀಲಾವರ ಗೋಶಾಲೆಯ ಆವರಣದಲ್ಲಿ ಹೆಬ್ಬಾವಿನ ಮರಿಯೊಂದು ಕಾಣಿಸಿಕೊಂಡಿದೆ. ಈ ಹಾವನ್ನು ಸರಳವಾಗಿ ಯಾವುದೇ ಅಪಾಯವಿಲ್ಲದೇ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿ ಪೇಜಾವರಶ್ರೀ ಎಲ್ಲರ ಹುಬ್ಬೇರಿಸಿದ್ದಾರೆ. ಪೇಜಾವರ ಶ್ರೀಗಳ ಸಾಹಸವನ್ನು ಅವರ ಶಿಷ್ಯರು ಸಹಜ ಕುತೂಹಲದಿಂದ ಕಂಡು ಅಚ್ಚರಿಪಟ್ಟಿದ್ದಾರೆ.

    ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆ ಎಲ್ಲರ ಸಹಜ ಕುತೂಹಲಕ್ಕೆ ಕಾರಣವಾಗಿದೆ. ಪೇಜಾವರಶ್ರೀ ಸುಲಲಿತವಾಗಿ ಹಾವು ಹಿಡಿದು ಗೋಣಿಚೀಲಕ್ಕೆ ತುಂಬಿಸುವ ಸಂದರ್ಭ ಗೋಣಿ ಹಿಡಿದ ಶಿಷ್ಯ ಭಯದಲ್ಲಿ ಗಲಿಬಿಲಿಗೊಂಡ ಪರಿಯೂ ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಂತ ವಿಷಕಾರಿ ಹಾವುಗಳನ್ನು ಹಿಡಿಯದಿರಿ. ತಜ್ಞರನ್ನು ಸಂಪರ್ಕ ಮಾಡಿ ಎಂದು ಪೇಜಾವರಶ್ರೀ ಹೇಳಿದ್ದಾರೆ.

  • ಸ್ವಾಮೀಜಿ ಮೇಲೆ ಬೆಟ್ಟದಷ್ಟು ಪ್ರೀತಿ ಹರಿಸಿದ ಕರುಗಳು

    ಸ್ವಾಮೀಜಿ ಮೇಲೆ ಬೆಟ್ಟದಷ್ಟು ಪ್ರೀತಿ ಹರಿಸಿದ ಕರುಗಳು

    – ಗೋವಿನ ಪ್ರೀತಿಗೆ ಮೈಯ್ಯೊಡ್ಡಿ ಕುಳಿತ ಶ್ರೀಗಳು

    ಉಡುಪಿ: ಶ್ರೀಕೃಷ್ಣನ ಪೂಜೆಯ ಜೊತೆ ಗೋವುಗಳಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು. ಕರುಗಳು ಸ್ವಾಮೀಜಿ ಮೇಲೆ ಮುಗಿಬಿದ್ದು ಪ್ರೀತಿ ತೋರಿದ ವಿಡಿಯೋ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ಪೇಜಾವರ ಮಠದ ಗೋಶಾಲೆ ಇದೆ. ಇಲ್ಲಿ ಸಾವಿರದ ಐನೂರಕ್ಕಿಂತಲೂ ಹೆಚ್ಚು ಗೋವುಗಳಿವೆ. ಪೇಜಾವರ ಶ್ರೀಗಳಿಗೆ ಗೋವುಗಳ ಮೇಲೆ ಪ್ರೀತಿ ಇರೋದರಿಂದ ಗೋಶಾಲೆ ಮಾಡಿದ್ದಾರೆ. ಹೆಬ್ರಿಯಲ್ಲಿ ಮತ್ತೊಂದು ಗೋಶಾಲೆ ತೆರೆದಿದ್ದಾರೆ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಗೋವಿನ ಮೇಲೆ ಇರುವಷ್ಟೇ ಪ್ರೀತಿ ಗೋವುಗಳಿಗೂ ಸ್ವಾಮೀಜಿಯ ಮೇಲೆ ಪ್ರೀತಿ ಇದೆ. ಇದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೋ ಹಾಗೂ ಫೋಟೋಗಳು ಪಬ್ಲಿಕ್ ಟಿವಿಗೆ ಸಿಕ್ಕಿವೆ. ಇದನ್ನೂ ಓದಿ: ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೋವುಗಳ ಜೊತೆ ಬೆರೆಯುವ ಫೋಟೋಗಳು, ವಿಡಿಯೋಗಳು ಎಲ್ಲರ ಮೊಬೈಲ್‍ನಲ್ಲಿ ಹರಿದಾಡುತ್ತಿವೆ. ಪೇಜಾವರ ಸ್ವಾಮೀಜಿಗಳನ್ನು ಮುತ್ತಿಕೊಂಡಿರುವ ಕರುಗಳು, ಸ್ವಾಮಿಗಳನ್ನು ಮುದ್ದು ಮಾಡುತ್ತದೆ. ಕರುಗಳು ಮೈಯ್ಯನ್ನೆಲ್ಲ ನೆಕ್ಕಿದರೂ ಶ್ರೀಗಳು ಮಾತ್ರ ಕರುಗಳಿಗೆ ಮೈಯ್ಯೊಡ್ಡಿ ಕುಳಿತುಕೊಂಡು ಗೋವು ಪ್ರೀತಿಯನ್ನು ಅನುಭವಿಸಿದ್ದಾರೆ.

    ಕೃಷ್ಣನ ಕೊಳಲಿನ ನಾದಕ್ಕೆ ಗೋವುಗಳ ದ್ವಾಪರದಲ್ಲಿ ತಲೆದೂಗಿದ್ದವು. ಕೃಷ್ಣ ಸೇವೆಯನ್ನು ಮಾಡುವ ಪೇಜಾವರ ಸ್ವಾಮೀಜಿಗಳ ಗೋವು ಪ್ರೀತಿ ಲಕ್ಷಾಂತರ ಭಕ್ತರ ಪ್ರೀತಿಗೆ ಕಾರಣವಾಗಿದೆ. ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಅವರ ಸೇವೆ ಈ ಹಿಂದೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು.

  • ಉತ್ಸವ-ಉರೂಸ್‍ನಲ್ಲಿ ಹಿಂದೂ ಮುಸ್ಲಿಮರು ಪಾಲ್ಗೊಳ್ಳುವಂತಾಗಲಿ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಉತ್ಸವ-ಉರೂಸ್‍ನಲ್ಲಿ ಹಿಂದೂ ಮುಸ್ಲಿಮರು ಪಾಲ್ಗೊಳ್ಳುವಂತಾಗಲಿ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಉಡುಪಿ: ಭಾರತದಲ್ಲಿ ಹಿಂದೂ ಮುಸಲ್ಮಾನರ ನಡುವೆ ಸಾಮರಸ್ಯ ಬೆಳೆಯಬೇಕು. ಎರಡೂ ಧರ್ಮಕ್ಕೆ ಶಾಂತಿ ಸಹೋದರತೆಯ ಆಕಾಂಕ್ಷೆ ಇದೆ. ಕೆಲ ವಿಚಾರಗಳು ಘಟನೆಗಳು ಎರಡು ಧರ್ಮವನ್ನು ದೂರ ಮಾಡುತ್ತಿವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಎರಡೂ ಧರ್ಮಕ್ಕೆ ನೆಮ್ಮದಿ, ಶಾಂತಿ ಬೇಕಾಗಿದೆ. ದೇಶದಲ್ಲಿ ನಡೆಯುವ ಕೆಲ ಘಟನೆಗಳು ಎರಡು ಸಮುದಾಯವನ್ನು ದೇಶದಲ್ಲಿ ದೂರ ಮಾಡಲು ಕಾರಣವಾಗುತ್ತಿದೆ. ನಮ್ಮ ನಡುವೆ ಅಪನಂಬಿಕೆ ದೂರವಾಗಬೇಕು. ಪರಸ್ಪರ ಎರಡು ಧರ್ಮಗಳ ನಡುವೆ ಸೌಹಾರ್ದತೆ ಬೆಳೆಯಬೇಕು ಎಂದು ಹೇಳಿದರು.

    ನಮ್ಮ ಉತ್ಸವದಲ್ಲಿ ನೀವು, ನಿಮ್ಮ ಧಾರ್ಮಿಕ ಕಾರ್ಯಕ್ರಮ ಉರೂಸ್ ನಲ್ಲಿ ನಾವು ಪಾಲ್ಗೊಳ್ಳುವಂತಾಗಬೇಕು. ಒಬ್ಬರಿಬ್ಬರಿಂದ ಇಂತಹ ಬದಲಾವಣೆ ಅಸಾಧ್ಯ. ಇಡೀ ಸಮಾಜಕ್ಕೆ ಸಮಾಜ, ಊರಿಗೆ ಊರು ಶಾಂತಿ ಸಾಮರಸ್ಯ ಬಯಸುವ ಕಾಲ ಬರಬೇಕು ಎಂದರು. ಭಟ್ಕಳದ ಮುಸಲ್ಮಾನರು ಪೇಜಾವರ ಮಠಕ್ಕೆ ಬಂದು ಗುರುಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದನ್ನು ಕಿರಿಯಶ್ರೀಗಳು ಸ್ಮರಿಸಿ, ಬಂದವರಿಗೆ ಅಭಿನಂದನೆ ಸಲ್ಲಿಸಿದರು.