Tag: Vishu

  • ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?

    ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?

    ಯುಗಾದಿ ಎಂದರೆ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಮೊದಲ ದಿನ. ಯುಗಾದಿ (Ugadi) ಎಂಬ ಪದವು ಸಂಸ್ಕೃತದಿಂದ ಬಂದಿದೆ. ಹಿಂದೂಗಳು ಈ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯುಗಾದಿಯು ಒಂದು ಪ್ರಮುಖ ವಿಶ್ವ ಚಕ್ರದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯನ್ನು ವಿಶೇಷವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಆಚರಿಸುತ್ತಾರೆ.

    ಕರ್ನಾಟಕದಲ್ಲಿ ಯುಗಾದಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಎಂದು ಆಚರಿಸಿದರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ (Gudi Padwa), ತಮಿಳುನಾಡಿನಲ್ಲಿ ಪುತಂಡು, ಪಂಜಾಬ್‌ನಲ್ಲಿ ಬೈಸಾಕಿ, ಕೇರಳದಲ್ಲಿ ವಿಷು ಎಂದು ಆಚರಿಸಲಾಗುತ್ತದೆ. ಇದನ್ನೂ ಓದಿ: ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಆಂಧ್ರಪ್ರದೇಶ ಮತ್ತು ತೆಲಂಗಾಣದ ಯುಗಾದಿ

    ಪೂಜೆ ಮತ್ತು ಅಭ್ಯಂಗ ಸ್ನಾನದೊಂದಿಗೆ ಪ್ರಾರಂಭವ ಹಬ್ಬದ ಆಚರಣೆ. ಮನೆಗಳನ್ನು ಸ್ವಚ್ಛಗೊಳಿಸಿ ಮಾವಿನ ಎಲೆ ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ. ಮುಂದೆ ಪಂಚಾಂಗ ಓದುವಿಕೆಯೊಂದಿಗೆ ವರ್ಷದ ಒಳಿತುಗಳ ಬಗ್ಗೆ ತಿಳಿಯುತ್ತಾರೆ. ಜೀವನದ ವಿವಿಧ ಅನುಭವಗಳನ್ನು ಪ್ರತಿನಿಧಿಸುವ ಆರು ರುಚಿಗಳನ್ನು ಹೊಂದಿರುವ ʻಯುಗಾದಿ ಪಚಡಿʼ ಎಂಬ ಸಾಂಕೇತಿಕ ಖಾದ್ಯವನ್ನು ತಯಾರಿಸಲಾಗುತ್ತದೆ. ಇದನ್ನೂ ಓದಿ: ಯುಗಾದಿ ಸ್ಪೆಷಲ್;‌ ಆರೋಗ್ಯಕರ ಪಚಡಿ ರೆಸಿಪಿ!

    ಕರ್ನಾಟಕದ ಯುಗಾದಿ

    ಯುಗಾದಿಯಂದು ಪ್ರಾರ್ಥನೆ ಮತ್ತು ಎಣ್ಣೆ ಸ್ನಾನದೊಂದಿಗೆ ದಿನವನ್ನು ಆರಂಭಿಸುತ್ತಾರೆ. ನಂತರ ಬೇವು ಮತ್ತು ಬೆಲ್ಲದ ಸೇವಿಸುತ್ತಾರೆ. ಇದು ಜೀವನದ ಸಿಹಿ ಮತ್ತು ಕಹಿ ಕ್ಷಣಗಳನ್ನು ಸಂಕೇತಿಸುತ್ತದೆ. ಅಂದು ದೇವಾಲಯಗಳಿಗೆ ತೆರಳಿ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.

    ಮಹಾರಾಷ್ಟ್ರ ಮತ್ತು ಗೋವಾದ ಗುಡಿ ಪಾಡ್ವ

    ವಸಂತ ಋತುವಿನ ಆಗಮನ ಮತ್ತು ರಬಿ ಬೆಳೆಗಳ ಕೊಯ್ಲಿಗೆ ಸೂಚಿಸುವ ಹಬ್ಬದಂದು ಮನೆಗಳಲ್ಲಿ ಗುಡಿ ಅಂದರೆ ಧ್ವಜ ಹಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬಲಾದ ಗುಡಿಯನ್ನು ಉದ್ದವಾದ ಬಿದಿರಿನ ಕೋಲಿನ ಮೇಲೆ ಹಳದಿ, ಹಸಿರು ಅಥವಾ ಕೆಂಪು ಬಣ್ಣದ ರೇಷ್ಮೆ ಬಟ್ಟೆಯಿಂದ ಕಟ್ಟಲಾಗುತ್ತದೆ. ಗುಡಿಯ ಮೇಲೆ ಬೇವಿನ ಎಲೆ, ಮಾವಿನ ಎಲೆ, ಹೂವು ಮತ್ತು ಸಕ್ಕರೆ ಹರಳುಗಳ ಹಾರವನ್ನು ಹಾಕಿ, ತಲೆಕೆಳಗಾದ ಕಂಚು, ಬೆಳ್ಳಿ ಅಥವಾ ತಾಮ್ರದ ಕಲಶದಿಂದ ಅಲಂಕರಿಸುವ ಮೂಲಕ ಆಚರಿಸುತ್ತಾರೆ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ತಮಿಳುನಾಡಿನ ಪುತಂಡು

    ತಮಿಳರು ಹೊಸ ವರ್ಷವನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಹಳೆಯ ವಸ್ತುಗಳನ್ನು ಎಸೆದು, ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ʻಮಾಂಗ ಪಚಡಿʼ ಎಂಬ ವಿಶೇಷ ಪದಾರ್ಥವನ್ನು ತಯಾರಿಸುತ್ತಾರೆ. 

    ಕೇರಳದ ವಿಷು

    ಕೇರಳದಲ್ಲಿ ಈ ಹಬ್ಬದಂದು ದೇವರ ಕೋಣೆಯಲ್ಲಿ ʻವಿಷು ಕಣಿʼ ಇಡುವ ಸಂಪ್ರದಾಯವಿದೆ. ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ವಿಷು ಹಬ್ಬದ ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ ಇತ್ಯಾದಿಯನ್ನು ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಈ ರೀತಿಯಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾದ ಆಚರಣೆಗಳ ಮೂಲಕ ಯುಗಾದಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ನವ ಸಂವತ್ಸರದ ಯುಗಾದಿಯು ಕೆಡುಕನ್ನು ಹೋಗಲಾಡಿಸಿ ಒಳಿತನ್ನು ತರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

  • ಏನಿದು ಚಾಂದ್ರಮಾನ, ಸೌರಮಾನ ಯುಗಾದಿ?

    ಏನಿದು ಚಾಂದ್ರಮಾನ, ಸೌರಮಾನ ಯುಗಾದಿ?

    ಸಂಸ್ಕೃತದ ʼಯುಗʼ ಮತ್ತು ʼಆದಿʼ ಎಂಬ ಎರಡು ಪದಗಳಿಂದ ಯುಗಾದಿ (Ugadi) ಎಂಬ ಪದ ವ್ಯುತ್ಪತ್ತಿಯಾಗಿದೆ. ಇದರ ಅರ್ಥ ಹೊಸ ಯುಗದ ಆರಂಭ. ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ.

    ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

    ಕರ್ನಾಟಕದ ಹಲವೆಡೆ ಚಾಂದ್ರಮಾನ ಯುಗಾದಿ (Chandramana Ugadi) ಆಚರಣೆ ಇದ್ದರೆ ಕರಾವಳಿ, ಕೇರಳ ಭಾಗದಲ್ಲಿ ಸೌರಮಾನ ಯುಗಾದಿಯನ್ನು (Souramana Ugadi) ಆಚರಿಸಲಾಗುತ್ತದೆ. ಈ ಬಾರಿ ಚಾಂದ್ರಮಾನ ಯುಗಾದಿ ಏ.9 ರಂದು ಬಂದರೆ ಸೌರಮಾನ ಯುಗಾದಿ ಏ.14 ರಂದು ಬಂದಿದೆ.

    ಚಾಂದ್ರಮಾನ ಯುಗಾದಿ
    ಚಂದ್ರನ ಚಲನೆಯನ್ನು ಆಧರಿಸಿ ವರ್ಷದಲ್ಲಿನ ದಿನಗಳನ್ನು ಲೆಕ್ಕಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಕಾರ, ಒಂದು ಅಮಾವಾಸ್ಯೆಯ ದಿನದಿಂದ ಮುಂದಿನ ಅಮಾವಾಸ್ಯೆಯ ದಿನದ ತನಕ ಒಂದು ತಿಂಗಳು ಎಂದು ಪರಿಗಣಿಸಲಾಗುತ್ತದೆ.

    ಇಂತಹ 12 ತಿಂಗಳು ಸೇರಿ ಒಂದು ವರ್ಷ. ಈ ವ್ಯವಸ್ಥೆಯ ಪ್ರಕಾರ ವರ್ಷದಲ್ಲಿ 354 ದಿನಗಳಿವೆ. ಇದು ಸೌರಮಾನ ಮತ್ತು ಚಾಂದ್ರಮಾನ ವರ್ಷಗಳ ನಡುವೆ 11 ದಿನಗಳ ಕೊರತೆಗೆ ಕಾರಣವಾಗುತ್ತದೆ. ಆದ್ದರಿಂದ ಮೂರು ವರ್ಷಗಳಿಗೊಮ್ಮೆ, ವ್ಯತ್ಯಾಸವು 1 ತಿಂಗಳಿಗೆ ಸಮನಾಗಿರುವಾಗ ಒಂದು ತಿಂಗಳನ್ನು ಹೆಚ್ಚಾಗಿ ಸೇರಿಸಿ, ಆ ತಿಂಗಳನ್ನು ‘ಚಂದ್ರ ಅಧಿಕ ಮಾಸ’ ಎಂದು ಕರೆದು ಸೌರಮಾನ ವರ್ಷಕ್ಕೆ ಸೇರಿಸಲಾಗುತ್ತದೆ. ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬಂದು ದಿನಗಳು ಹೊಂದಾಣಿಕೆಯಾಗುತ್ತವೆ. ಇದನ್ನೂ ಓದಿ: ಮರೆಯದಂಥ ಸವಿಸವಿ ಗಳಿಗೆ ತಂದಿತು ʻಯುಗಾದಿʼ

    ಚಾಂದ್ರಮಾನವರ್ಷ ಚೈತ್ರ ಶುಕ್ಲ ಪ್ರಥಮೆಯ ದಿವಸ ಪ್ರಾರಂಭವಾಗುತ್ತದೆ. ಅಲ್ಲಿಂದ ಕ್ರಮವಾಗಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ, ಫಾಲ್ಗುಣ ಎಂಬ ಹನ್ನೆರಡು ಚಾಂದ್ರಮಾನ ಮಾಸಗಳು ಕ್ರಮವಾಗಿ ಬಂದು ಮತ್ತೆ ಚೈತ್ರಮಾಸ ಬರುತ್ತದೆ. ಈ ಹನ್ನೆರಡು ತಿಂಗಳುಗಳ ಕಾಲಕ್ಕೆ ಒಂದು ಚಾಂದ್ರಮಾನವರ್ಷವೆಂದು ಹೆಸರು. ಈ ವರ್ಷಗಳನ್ನು ಪ್ರಭವ, ವಿಭವ ಮೊದಲಾದ ಅರುವತ್ತು ಸಂವತ್ಸರಗಳ ಹೆಸರುಗಳಿಂದ ಕರೆಯುತ್ತಾರೆ.

    ಸೌರಮಾನ ಯುಗಾದಿ
    ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನು ಪರಿಗಣಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ. ಭೂಮಿಯು ಸೂರ್ಯನ ಸುತ್ತ ಚಲಿಸುವುದು ಎಲ್ಲರಿಗೂ ತಿಳಿದಿರುವ ವಿಷಯ. ಸೂರ್ಯ ಮತ್ತು ಚಂದ್ರನ ಕಕ್ಷೆಯಲ್ಲಿ 27 ನಕ್ಷತ್ರಗಳಿವೆ. ಸೂರ್ಯ ಮತ್ತು ಚಂದ್ರ ಕಕ್ಷೆಯಲ್ಲಿ ಎರಡೂವರೆ ನಕ್ಷತ್ರಗಳ ಅಂತರವನ್ನು ಸರಿದೂಗಿಸಲು ತೆಗೆದುಕೊಳ್ಳುವ ಸಮಯವನ್ನು ರಾಶಿ ಎಂದು ಪರಿಗಣಿಸಲಾಗುತ್ತದೆ. ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನಾಧರಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ. 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ.

    ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ ಸುಮಾರು ಹದಿಮೂರು ದಿನಗಳನ್ನು ತೆಗೆದುಕೊಂಡರೆ ಒಂದು ರಾಶಿಯನ್ನು ಆವರಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ. ಆ ದಾಟುವ ಸಮಯವನ್ನು ‘ಸಂಕ್ರಮಣ’ ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಈ ಹನ್ನೆರಡು ರಾಶಿಗಳನ್ನು ದಾಟಲು 364 ¼ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯ,ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ದಾಟಿದ ಮರುದಿನವನ್ನು ಹೊಸ ವರ್ಷದ ದಿನವೆಂದು ಕರೆಯಲಾಗುತ್ತದೆ.  ಇದನ್ನೂ ಓದಿ: ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’

    ಏನಿದು ವಿಷು ಕಣಿ?
    ಕರ್ನಾಟಕದ ಕರಾವಳಿ, ಕೇರಳದಲ್ಲಿ (Kerala) ಸೂರ್ಯಮಾನ ಯುಗಾದಿಯಂದು ವಿಷು ಕಣಿ (Vishu Kani) ಇಡಲಾಗುತ್ತದೆ. ವಿಷು ಹಬ್ಬದ ಹಿಂದಿನ ದಿನ ಸಂಜೆ ತರಕಾರಿ ಹೂವು ಹಣ್ಣುಗಳನ್ನು ದೇವರ ಮುಂದಿಟ್ಟು, ಒಂದು ಕನ್ನಡಿಯನ್ನು ಇಡುತ್ತಾರೆ. ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ನೋಡುತ್ತಾರೆ. ಇದನ್ನೇ ವಿಷು ಕಣಿ ಎನ್ನುತ್ತಾರೆ. ವರ್ಷದ ಮೊದಲ ದಿನ ಈ ಕಣಿಯನ್ನು ನೋಡಿದರೆ ವರ್ಷಪೂರ್ತಿ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.