Tag: Vishnuvardhan

  • ಕೃಷ್ಣನೂರಿನ ಕಾವಲಿಗೆ ಎಸ್ ಪಿ ವಿಷ್ಣುವರ್ಧನ್ ನೇಮಕ

    ಕೃಷ್ಣನೂರಿನ ಕಾವಲಿಗೆ ಎಸ್ ಪಿ ವಿಷ್ಣುವರ್ಧನ್ ನೇಮಕ

    ಉಡುಪಿ: ಕೃಷ್ಣನೂರು ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಐಪಿಎಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್‍ಪಿ ನಿಶಾ ಜೇಮ್ಸ್ ಅವರನ್ನು ಭಡ್ತಿಕೊಟ್ಟು ಬೆಂಗಳೂರಿಗೆ ವರ್ಗ ಮಾಡಲಾಗಿದೆ.

    ಎಸ್‍ಪಿ ವಿಷ್ಣುವರ್ಧನ್ ಅವರು ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಆ ಮೊದಲು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉಡುಪಿಯಿಂದ ವರ್ಗಾವಣೆಗೊಂಡ ಬಳಿಕ ಮೈಸೂರು ಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು.

    ಎಸ್‍ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ಭಡ್ತಿ ನೀಡಿ ವರ್ಗಾವಣೆಗೊಳಿಸಿ ಸರ್ಕಾರ ಡಿ.31ರಂದು ಆದೇಶ ಹೊರಡಿಸಿತ್ತು. ನಂತರ ಅಕ್ಷಯ್ ಹಾಕೆ ಮಚ್ಚಿಂದ್ರ ಅವರಿಗೆ ಭಡ್ತಿ ನೀಡಿ ಉಡುಪಿ ಜಿಲ್ಲೆಯ ನೂತನ ಎಸ್‍ಪಿಯಾಗಿ ಸರ್ಕಾರ ಆದೇಶಿಸಿತ್ತು.

    ಒಂದೇ ದಿನದಲ್ಲಿ ಹೊಸ ಎಸ್‍ಪಿಯನ್ನು ಬದಲಾಯಿಸಲಾಗಿದೆ. ರಾಜಕೀಯ ಪ್ರಭಾವ ಬಳಸಿ ಗೃಹ ಸಚಿವರ ಉಸ್ತುವಾರಿ ಜಿಲ್ಲೆಗೆ ಎಸ್‍ಪಿ ವಿಷ್ಣುವರ್ಧನ್ ಅವರನ್ನು ನೇಮಕ ಮಾಡಲಾಗಿದೆ.

  • ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ನಿಮ್ಮನ್ನ ಮರೆತಿಲ್ಲ: ಸುದೀಪ್

    ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ನಿಮ್ಮನ್ನ ಮರೆತಿಲ್ಲ: ಸುದೀಪ್

    ಬೆಂಗಳೂರು: ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯಸ್ಮರಣೆ. ಹೀಗಾಗಿ ನಟ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸ್ಮರಿಸಿದ್ದಾರೆ.

    ಸುದೀಪ್ ಟ್ವೀಟ್ ಮಾಡುವ ಮೂಲಕ ಅಪ್ಪಾಜಿ ವಿಷ್ಣುವರ್ಧನ್ ಅವರನ್ನು ಸ್ಮರಣೆ ಮಾಡಿದ್ದಾರೆ. “ಅಪ್ಪಾಜಿ..ಇಂದು ನಿಮ್ಮ 10ನೇ ಪುಣ್ಯಸ್ಮರಣೆ. ಆದರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

    ಜೊತೆಗೆ ವಿಷ್ಣುವರ್ಧನ್ ಅವರು ಫೋಟೋವನ್ನು ಶೇರ್ ಮಾಡಿದ್ದಾರೆ. ಸುದೀಪ್ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ವಿಷ್ಣುವರ್ಧನ್ ಅವರನ್ನು ಸ್ಮರಿಸುತ್ತಿದ್ದಾರೆ.

    ಡಾ.ವಿಷ್ಣುವರ್ಧನ್ ಅವರು ಡಿಸೆಂಬರ್ 30, 2009ರಂದು ಇಹಲೋಕ ತ್ಯಜಿಸಿದ್ದರು. ಸುದೀಪ್ ಸದಾ ವಿಷ್ಣುವರ್ಧನ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಕೂಡ ಇತ್ತು. ಸುದೀಪ್ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದಲ್ಲಿ ಅಪ್ಪಾಜಿ ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ್ದರು.

  • 45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    ಚಿಕ್ಕಮಗಳೂರು: ಸಾಹಸಸಿಂಹ, ನಟ ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬಕ್ಕೆ ಅವರ ಕುಟುಂಬಸ್ಥರು ಹಾಗೂ ಪತ್ನಿ ಭಾರತಿ ವಿಷ್ಣುವರ್ಧನ್‍ಗೆ ಚಿಕ್ಕಮಗಳೂರಿನ ಜನ ಎಂದೂ ಮರೆಯದ ವಿಶೇಷವಾದ ಕಲ್ಲನ್ನು ಉಡುಗೊರೆಯಾಗಿ ನೀಡಲಿದ್ದಾರೆ.

    ಸ್ವತಃ ವಿಷ್ಣುವರ್ಧನ್ ಅವರೇ ಹಿಡಿದು ಚಿತ್ರಕ್ಕಾಗಿ ಬಳಸಿದ್ದ ಕಲ್ಲು. 45 ವರ್ಷಗಳಿಂದ ಆ ಸಾಧಾರಣ ಕಲ್ಲನ್ನು ರಕ್ಷಣೆ ಮಾಡಿಕೊಂಡು ಬಂದಿರುವ ಮಲೆನಾಡಿಗರು, ಈಗ ಆ ಕಲ್ಲನ್ನು ಅವರ ಕುಟುಂಬಸ್ಥರಿಗೆ ನೀಡಲು ಮುಂದಾಗಿದ್ದಾರೆ. ನೋಡೋಕೆ ಇದೊಂದು ಕಲ್ಲಷ್ಟೆ. ಆದರೆ ಈ ಕಲ್ಲನ್ನು ಹಿಡಿದು ವಿಷ್ಣುವರ್ಧನ್ ನಟಿಸಿದ್ದ ನಟನೆ, ತೋರಿದ ಭಾವ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರೋದಂತು ಸತ್ಯ. ಅಂತಹ ಕಲ್ಲನ್ನು ಭಾರತಿ ವಿಷ್ಣುವರ್ಧನ್ ಉಡುಗೊರೆಯಾಗಿ ಪಡೆಯಲಿದ್ದಾರೆ. ಇದನ್ನು ಓದಿ: ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಆ ಕಲ್ಲು ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ, ‘ಭೂತಯ್ಯನಮಗ ಅಯ್ಯು’ ಚಿತ್ರದಲ್ಲಿ ವಿಷ್ಣುವರ್ಧನ್ ಕತ್ತಿಯನ್ನ ಮಸೆದ ಕಲ್ಲು. ಈ ಚಿತ್ರದ ಶೇಕಡ 60ರಷ್ಟು ಭಾಗ ಚಿತ್ರೀಕರಣಗೊಂಡಿದ್ದು ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ. ಆ ಕಲ್ಲನ್ನು ಅದೇ ಊರಿನ ಜನ 45 ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಳೇ ಮನೆಯಲ್ಲಿದ್ದ ಕಲ್ಲನ್ನು ಹೊಸ ಮನೆಗೂ ಕೊಂಡೊಯ್ದಿದ್ದಾರೆ. ಬೇರೆ-ಬೇರೆ ಸಿನಿಮಾದವರು ಶೂಟಿಂಗ್‍ಗೆ ಬಂದಾಗ ಕೇಳಿದಾಗಲು ಕೊಟ್ಟಿಲ್ಲ. ದುಡ್ ಕೊಡುತ್ತೇವೆ ಎಂದರು ಇಲ್ಲ ಅಂದಿದ್ದಾರೆ. ಈಗ ಆ ಕಲ್ಲನ್ನು ಊರಿನ ಯುವಕರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅವರ ಮನೆಯವರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ಭಾರತಿ ಅವರ ಕೈಗೆ ಅದನ್ನು ನೀಡಲು ಗ್ರಾಮದ ಯುವಕರು ನಿರ್ಧರಿಸಿದ್ದಾರೆ.

    ಊರಿನ ಜನ ಅದರಲ್ಲಿ ವಿಷ್ಣುವರ್ಧರನ್ನು ಕಾಣುತ್ತಿದ್ದು, ಅವರ ಮಾತು-ಕಥೆ, ಜನರೊಂದಿಗೆ ಬೆರೆಯುತ್ತಿದ್ದ ಅವರ ಮುಕ್ತ ಮನಸ್ಸನು ಆ ಕಲ್ಲಿನಲ್ಲಿ ಕಾಣುತ್ತಿದ್ದಾರೆ. 45 ವರ್ಷದಿಂದ ಯಾರಿಗೂ ಕೊಟ್ಟಿಲ್ಲ. 45 ವರ್ಷಗಳಿಂದ ವಿಷ್ಣು ಅವರ ವ್ಯಕ್ತಿತ್ವವನ್ನು ಕಲ್ಲಿನಲ್ಲಿ ಕಾಣುತ್ತಿದ್ದಾರೆ. ಇದು ಬದುಕಿನ ಸಾರ್ಥಕತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತಿ ವಿಷ್ಣುವರ್ಧನ್ ಅವರ ಜೀವಮಾನದಲ್ಲಿ ಸಾವಿರಾರು, ಲಕ್ಷಾಂತರ ಉಡುಗೊರೆಗಳನ್ನ ಪಡೆದಿರಬಹುದು. ಆದರೆ ಈ ಉಡುಗೊರೆಯಂತಹಾ ಸ್ಪೆಷಲ್ ಗಿಫ್ಟ್ ಅವರಿಗೆ ಎಂದೂ ಸಿಕ್ಕಿರೋದಿಲ್ಲ ಎಂಬ ಭಾವನೆ ಯುವಕರದ್ದು.

    https://www.facebook.com/publictv/videos/2503585009931141/

  • ವಿಷ್ಣುದಾದ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನಿಗಳು

    ವಿಷ್ಣುದಾದ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನಿಗಳು

    ಮೈಸೂರು: ಇಂದು ದಿವಂಗತ ಡಾ. ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು 69 ಸಸಿಗಳನ್ನು ನೆಟ್ಟು ನಮಿಸಿದ್ದಾರೆ.

    ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆ ಮೈಸೂರಿನ ಉದ್ಬೂರು ಬಳಿಯ ವಿಷ್ಣು ಸ್ಮಾರಕ ನಿಯೋಜಿತ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್, ಮಗಳು ಕೀರ್ತಿ ಅವರು ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಕ್ಕೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ:ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್

    ಈ ಸಂಭ್ರಮದಲ್ಲಿ ನೂರಾರು ಅಭಿಮಾನಿಗಳು ಕೂಡ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು. ಜೊತೆಗೆ ವಿಷ್ಣುದಾದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹಾಗೆಯೇ ಸಾಹಸ ಸಿಂಹನ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನ ಮೆರೆದರು.

  • ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್

    ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್

    – ಸ್ಯಾಂಡಲ್‍ವುಡ್ ನಟರಿಂದ ವಿಷ್ಣುದಾದನಿಗೆ ವಿಶ್

    ಬೆಂಗಳೂರು: ಇಂದು ಚಂದನವನದ ವಿಷ್ಣುವರ್ಧನ್, ಉಪೇಂದ್ರ ಹಾಗೂ ನಟಿ ಶೃತಿ ಅವರ ಹುಟ್ಟುಹಬ್ಬವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    ಇತ್ತ ಕಿಚ್ಚ ಸುದೀಪ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಫೋಟೋವನ್ನು ಹಾಕಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ “ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗ ಹೋಗಿಬಿಟ್ರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ಕಿಚ್ಚ” ಎಂದು ಬರೆದುಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅಲ್ಲದೆ ನವರಸನಾಯಕ ಜಗ್ಗೇಶ್ ಅವರು, “ನೆನಪಿದೆ ಆ ದಿನ. ನನ್ನ ಹರಸಿದ ನಿಮ್ಮ ಮನ. ದೇಹ ತ್ಯಾಗ ನಶ್ವರ ಜಗದ ಸಹಜ ಕ್ರಿಯೆ. ಆದರೆ ಸವಿ ನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯ ಮಾತ್ರ. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವೂ ಒಬ್ಬರು. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ. ಹುಟ್ಟುಹಬ್ಬದ ಶುಭಾಶಯಗಳು ವಿಷ್ಣು ಸಾರ್” ಎಂದು ಟ್ವೀಟ್ ಮಾಡಿದ್ದಾರೆ.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಜೊತೆಯಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನದ ಸವಿ ನೆನಪು, ದಾದಾ ನಿಮ್ಮ ನೆನಪು ಸದಾ ಹಸಿರು” ಎಂದು ಟ್ವೀಟ್ ಮಾಡಿದ್ದಾರೆ. ನಟ ರಮೇಶ್ ಅರವಿಂದ್ ಅವರು ಕೂಡ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, ನೂರೊಂದು ನೆನಪು ಎದೆಯಾಳದಿಂದ ಎಂದು ಬರೆದು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಇಂದು ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ಹೀಗಾಗಿ ಅಭಿಮಾನಿಗಳು ವಿಷ್ಣುವರ್ಧನ್ ನಿವಾಸದಲ್ಲಿ ಮತ್ತು ಅಭಿಮಾನ್ ಸ್ಟುಡಿಯೋ 2 ಕಡೆ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದಾರೆ.

  • ಚಂದನವನದ ಮೂವರು ದಿಗ್ಗಜರ ಹುಟ್ಟುಹಬ್ಬ

    ಚಂದನವನದ ಮೂವರು ದಿಗ್ಗಜರ ಹುಟ್ಟುಹಬ್ಬ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇಂದು ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

    ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ಕಳೆದ ವರ್ಷದಂತೆ ಈ ವರ್ಷ ಕೂಡ ವಿಷ್ಣುದಾದ ಅವರ ಹುಟ್ಟುಹಬ್ಬವನ್ನ 2 ಕಡೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಿಸಿದರೆ, ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ದಾದಗೆ ನಮಿಸಲಿದ್ದಾರೆ.

    https://www.instagram.com/p/B2hNtEmn6mL/

    ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಉಪ್ಪಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಲ್ಲದೆ ಎಲ್ಲೆಡೆ ಉಪ್ಪಿ ಅಭಿಮಾನಿಗಳು ಸಡಗರ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

    ಇತ್ತ ಚಂದದ ಗೊಂಬೆ ಶೃತಿ ಅವರು 44ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಅಭಿಮಾನಿಗಳು ಹಾಗೂ ಸಿನಿತಾರೆಯರು ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಶುಭಹಾರೈಸಿದ್ದಾರೆ. ವಿಷ್ಣುದಾದ ದೈಹಿಕವಾಗಿ ನಮ್ಮ ಜೊತೆ ಇಲ್ಲವಾದರೂ ಅಭಿಮಾನಿಗಳ ಮನದಲ್ಲಿ ಅವರು ಎಂದಿಗೂ ಅಮರ. ಬರ್ತ್ ಡೇ ಸಂಭ್ರಮದಲ್ಲಿರೋ ರಿಯಲ್ ಸ್ಟಾರ್ ಉಪ್ಪಿ, ನಟಿ ಶೃತಿ ಅವರು ಇನ್ನಷ್ಟು ಒಳ್ಳೆ ಕೆಲಸ ಮಾಡಿ ಉತ್ತಮ ಹೆಸರುಗಳಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

  • ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ಅರ್ಪಣೆ – ಭಾರತಿ ವಿಷ್ಣುವರ್ಧನ್

    ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ಅರ್ಪಣೆ – ಭಾರತಿ ವಿಷ್ಣುವರ್ಧನ್

    ಮೈಸೂರು: ಜಿಲ್ಲೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕವನ್ನು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಅರ್ಪಣೆ ಮಾಡುತ್ತಿದ್ದೇವೆ. ವಿಷ್ಣುವರ್ಧನ್ ಕನಸು ಕೂಡ ಇದೆ ಆಗಿತ್ತು ಎಂದು ಹಿರಿಯ ನಟಿ, ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

    ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕ ಪ್ರದೇಶವನ್ನು ಭಾರತಿ ವಿಷ್ಣುವರ್ಧನ್ ವೀಕ್ಷಿಸಿದರು. ಸುಮಾರು 5 ಎಕರೆ ವ್ಯಾಪ್ತಿಯ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗುತ್ತಿದೆ. ಕಳೆದ 10 ವರ್ಷದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಪುನಃ ಆರಂಭವಾಗಿರುವ ಕಾಮಗಾರಿಯನ್ನು ನೋಡಲು ಬಂದ ಭಾರತಿ ಅವರು ಸ್ಥಳೀಯರು ಹಾಗೂ ಅಧಿಕಾರಿಗಳ ಜೊತೆ ಸ್ಮಾರಕ ನಿರ್ಮಾಣದ ಕುರಿತು ಮಾಹಿತಿ ಪಡೆದರು.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 11 ಕೋಟಿ ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಸರ್ಕಾರದಿಂದ ಈ ಹಣ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಮೊದಲು ನಾವು ಈ ಜಾಗದಲ್ಲಿದ್ದವರಿಗೆ ಮಾನವೀಯತೆಯಿಂದ ಹಣ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಸ್ಥಳೀಯರು ಇಂದು ಆಗೋದಿಲ್ಲ ಹೋರಾಟ ಮಾಡುತ್ತೀವಿ ಎಂದರು. ಆದರೆ ಈಗ ಇದು ಸರ್ಕಾರದ ಜಾಗವಾಗಿದೆ. ಹಾಗಾಗಿ ಈಗ ಅವರಿಗೆ ಮಾನವೀಯತೆಯಿಂದ ಹಣ ಕೊಡುವ ಅವಶ್ಯಕತೆ ಇಲ್ಲ. ನಾವು ಕೊಡೋದಿಲ್ಲ, ಸರ್ಕಾರವೂ ಕೊಡಲ್ಲ. ಈ ಸ್ಮಾರಕ ಅಭಿಮಾನಿಗಳು ಹಾಗೂ ವಿಷ್ಣು ಅವರಿಗೆ ಅರ್ಪಿಸುತ್ತೇವೆ. ವಿಷ್ಣುವರ್ಧನ್ ಅವರ ಕನಸು ಕೂಡ ಇದೆ ಆಗಿತ್ತು ಎಂದು ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಮಾತನಾಡಿ, ಮೈಸೂರಿನಲ್ಲಿ ಸ್ಮಾರಕ ಆಗ್ತಿರೋದು ತುಂಬಾನೇ ಖುಷಿಯಾಗಿದೆ. ಅಪ್ಪಾಜಿಯವರ ಕನಸು ಕೂಡ ಇದೇ ಆಗಿತ್ತು. ಇದು ಕೇವಲ ಸ್ಮಾರಕವಲ್ಲ, ಇದೊಂದು ರಾಜ್ಯದ ಮಾಡೆಲ್. ರಂಗ ತರಬೇತಿಯಿಂದ ಹಿಡಿದು ಸಿನಿಮಾಗೆ ಸಂಬಂಧಿಸಿದ ಎಲ್ಲ ರೀತಿಯ ಟ್ರೈನಿಂಗ್ ಇಲ್ಲಿ ಇರುತ್ತದೆ. ದಕ್ಷಿಣ ಭಾರತದಲ್ಲಿ ಇದೊಂದು ಉತ್ತಮವಾದ ಮ್ಯೂಸಿಯಂ ಆಗಬೇಕಿದೆ. 10 ವರ್ಷಗಳ ಕಾಲ ನಡೆದ ಹೋರಾಟದ ಫಲ ಇಂದು ದೊರಕಿದೆ. ಎರಡು ವರ್ಷದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

  • ಬಯಲಾಯ್ತು ಡಿ ಬಾಸ್ ಕೈಯಲ್ಲಿರುವ ಕಡಗದ ರಹಸ್ಯ!

    ಬಯಲಾಯ್ತು ಡಿ ಬಾಸ್ ಕೈಯಲ್ಲಿರುವ ಕಡಗದ ರಹಸ್ಯ!

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿಮಾನಿಗಳಿಗೆ ಕಡಗದ ಬಗ್ಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಯಾಕೆಂದರೆ ಸ್ಟಾರ್ ನಟರ ಕೈಯಲ್ಲಿ ಕಡಗ ನೋಡಿ, ಅವರನ್ನು ಅನುಸರಿಸುವ ಅಭಿಮಾನಿಗಳು ಸಹ ಕಡಗವನ್ನು ಧರಿಸುತ್ತಾರೆ. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಅವರು ಕೈಗೆ ಕಡಗ ಹಾಕುತ್ತಿದ್ದರಿಂದ ಅವರ ಅಭಿಮಾನಿಗಳು ಕೂಡ ಅದೇ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಆದರೆ ವಿಷ್ಣುದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಯಲ್ಲಿ ಇಂತಹ ಕಡಗ ಕಂಡುಬಂದಿತ್ತು. ಆದರಿಂದ ಡಿ ಬಾಸ್ ಧರಿಸುವ ಕಡಗದ ಬಗ್ಗೆ ಅನೇಕರಿಗೆ ಕೂತೂಹಲವಿತ್ತು.

    ಬಾಸ್ ಧರಿಸುವ ಕಡಗದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾತುರ ಅಭಿಮಾನಿಗಳಲ್ಲಿತ್ತು. ಅದು ಯಾರದ್ದು? ಯಾರು ಕೊಟ್ಟಿದ್ದು? ಎಂದು ತಿಳಿಯಬೇಕು ಅಂತ ಅಭಿಮಾನಿಗಳಲ್ಲಿ ಕೂತೂಹಲವಿತ್ತು. ಅದರಲ್ಲೂ ದರ್ಶನ್ ಧರಿಸುವ ಕಡಗ ವಿಷ್ಣುದಾದ ಅವರದ್ದೇ, ಅವರ ನಿಧನದ ಬಳಿಕ ದರ್ಶನ್ ಕೈಗೆ ಬಂದಿದೆ ಅಂತ ಅನೇಕರು ನಂಬಿದ್ದಾರೆ. ದರ್ಶನ್ ಪಾಲಿನ ರಿಯಲ್ ‘ಯಜಮಾನ’ ಇವರೊಬ್ಬರೇ ಅಂತ ಹೇಳುತ್ತಾರೆ. ಅಲ್ಲದೆ ಕಡಗವನ್ನು ದರ್ಶನ್ ಅವರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪ್ರೀತಿಯಿಂದ ಕೊಟ್ಟಿರಬಹುದು ಎಂದು ನಂಬಿದವರೂ ಇದ್ದಾರೆ. ಆದ್ರೆ, ದರ್ಶನ್ ಅವರ ಕಡಗದ ಬಗ್ಗೆ ಯಾವುದೇ ನಿಖರ ಮಾಹಿತಿ ಇರಲಿಲ್ಲ.

    ಯಜಮಾನ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಕೈಯಲ್ಲಿರುವ ಕಡಗದ ಹಿಂದಿನ ಕಥೆಯನ್ನ ದರ್ಶನ್ ಬಿಚ್ಚಿಟ್ಟಿದ್ದಾರೆ. ಹೌದು, ಕಡಗದ ಕುರಿತು ಹಲವು ಉಹಾಪೋಹಗಳು ಸಿನಿರಂಗದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ದರ್ಶನ್ ಕಡಗದ ರಹಸ್ಯ ಬಿಚ್ಚಿಟ್ಟಿದ್ದಾರೆ. ನಿನ್ನೆ ಮೊನ್ನೆಯಿಂದ ದರ್ಶನ್ ಕಡಗ ಹಾಕುತ್ತಿಲ್ಲ. ಸುಮಾರು 36 ವರ್ಷದಿಂದ ದರ್ಶನ್‍ಗೆ ಕೈಗೆ ಕಡಗ ಹಾಕುವ ಅಭ್ಯಾಸವಿದೆ. ತಾವು ಮೈಸೂರಿನಲ್ಲಿ ನೆಲೆಸಿದ್ದಾಗ, ಪುಟ್ಟ ಬಾಲಕನಿರುವಾಗಿನಿಂದಲೂ ಕೈಗೆ ಕಡಗ ಹಾಕುವುದು ದಾಸ ಅವರಿಗೆ ಅಚ್ಚುಮೆಚ್ಚು.

    ಮೈಸೂರಿನಲ್ಲಿ ನಮ್ಮ ಕುಟುಂಬ ನೆಲೆಸಿದ್ದ ಮನೆಯ ಮೇಲಿಯೇ ಪಂಜಾಬಿ ಕುಟುಂಬದವರು ಇದ್ದರು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಆದರಿಂದ ಒಮ್ಮೆ ಗೋಲ್ಡನ್ ಟೆಂಪಲ್‍ಗೆ ಹೋಗಿದ್ದ ವೇಳೆ ಸಣ್ಣದೊಂದು ಕಡಗ ತಂದು ನನಗೆ ಕೊಟ್ಟಿದ್ದರು. ಆಗಿನಿಂದಲೂ ನಾನು ಕಡಗ ಹಾಕುತ್ತಿದ್ದೇನೆ ಅಂತ ಡಿ ಬಾಸ್ ಕಡಗದ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.

    ವಿಷ್ಣುವರ್ಧನ್ ಅವರ ಥರ ದರ್ಶನ್‍ಗೂ ಕಡಗ ಅಂದರೇ ನಂಬಿಕೆ, ಪ್ರೀತಿ. ಆದರಿಂದ ಹಿಂದೊಮ್ಮೆ ಕಾರು ಅಪಘಾತವಾಗಿ ತಮ್ಮ ಕೈಗೆ ಬಲವಾದ ಪೆಟ್ಟುಬಿದ್ದಿದ್ದರೂ ಅವರು ಕೈಯಲ್ಲಿದ್ದ ಕಡಗವನ್ನು ತೆಗೆದಿರಲಿಲ್ಲ. ದರ್ಶನ್ ಅವರ ಕೈಯಲ್ಲಿರುವ ಕಡಗದ ಬಗ್ಗೆ ಹರಿದಾಡುತ್ತಿದ್ದ ಅನೇಕ ಊಹಾಪೊಹಗಳಿಗೆ ಸದ್ಯ ಅವರು ಉತ್ತರ ನೀಡಿ ಬ್ರೇಕ್ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆಹುಲಿ: ಬಿಡುಗಡೆಯಾಯ್ತು ಮತ್ತೊಂದು ಜಬರ್ದಸ್ತ್ ಹಾಡು!

    ಪಡ್ಡೆಹುಲಿ: ಬಿಡುಗಡೆಯಾಯ್ತು ಮತ್ತೊಂದು ಜಬರ್ದಸ್ತ್ ಹಾಡು!

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಮೇಲಿನ ಅತೀವ ಪ್ರೀತಿಯಿಂದ ತಯಾರಾಗಿರೋ ಪಡ್ಡೆ ಹುಲಿಯ ಸಾಂಗು ಹೊರ ಬಂದಿದೆ. ಪಿಆರ್‍ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಪ್ರೇಕ್ಷಕರು, ವಿಷ್ಣು ಅಭಿಮಾನಿಗಳು ಈ ಹಾಡನ್ನು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.

    ನಾ ತುಂಬಾ ಹೊಸಬ ಬಾಸು ಎಂಬ ಈ ಹಾಡನ್ನು ನಿರ್ಮಾಪಕ ಕೆ.ಮಂಜು ವಿಷ್ಣುವರ್ಧನ್ ಅವರಿಗೆ ಅರ್ಪಿಸಿದ್ದಾರೆ. ಮೊನ್ನೆ ತಾನೇ ವಿಷ್ಣು ಅಭಿಮಾನಿಗಳಿಗೆಂದೇ ಈ ಹಾಡಿನ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಇದನ್ನು ಕಂಡು ಅಭಿಮಾನಿಗಳೆಲ್ಲ ಕುಣಿದು ಕುಪ್ಪಳಿಸಿದ್ದರು. ಈ ಹಾಡೀಗ ಪ್ರೇಕ್ಷಕರನ್ನೂ ತಲುಪಿಕೊಂಡಿದೆ.

    ಕೆ.ಮಂಜು ಒಂದು ಕಾಲದಲ್ಲಿ ವಿಷ್ಣು ವರ್ಧನ್ ಅವರ ಆಪ್ತ ವಲಯದಲ್ಲಿದ್ದವರು. ಅಷ್ಟಕ್ಕೂ ಪಡ್ಡೆಹುಲಿಯ ಕಥೆ ಕೂಡಾ ಸ್ವತಃ ವಿಷ್ಣು ಅವರೇ ಹೇಳಿದ್ದ ಒಂದೆಳೆಯನ್ನ ಆಧರಿಸಿದೆ. ನಿರ್ದೇಶಕ ಗುರು ದೇಶಪಾಂಡೆ ಅದನ್ನು ಬಲು ಆಸ್ಥೆಯಿಂದಲೇ ಚಿತ್ರೀಕರಿಸಿದ್ದಾರೆ. ಪಡ್ಡೆಹುಲಿಯ ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಮಂಜು ವಿಷ್ಣು ಮೇಲಿನ ತಮ್ಮ ಪ್ರೀತಿ ಮತ್ತು ಅಭಿಮಾನವನ್ನ ತೋರ್ಪಡಿಸಿಕೊಳ್ಳುತ್ತಿದ್ದಾರೆ.

    ಇಂಥಾ ಗಾಢವಾದ ಪ್ರೀತಿಯಿಂದಲೇ ಈಗ ಹೊರ ಬಂದಿರೋ ಹಾಡು ಕೂಡಾ ರೂಪಿಸಲ್ಪಟ್ಟಿದೆ. ಇದು ಪಡ್ಡೆಹುಲಿ ಚಿತ್ರದಲ್ಲಿ ನಾಯಕನನ್ನು ಪರಿಚಯಿಸೋ ಹಾಡು. ನಿಜಕ್ಕೂ ಇದು ಜಬರ್ದಸ್ತಾಗಿ ಮೂಡಿ ಬಂದಿದೆ. ಬಿಡುಗಡೆಯಾದಾಕ್ಷಣವೇ ಅದ್ಧೂರಿ ಸ್ವಾಗತವೂ ಸಿಕ್ಕಿದೆ.

  • ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ ದ್ವಾರಕೀಶ್

    ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ ದ್ವಾರಕೀಶ್

    ಬೆಂಗಳೂರು: ನಟ ಹಾಗೂ ನಿರ್ದೇಶಕ ದ್ವಾರಕೀಶ್ ತಮ್ಮ ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.

    ಶನಿವಾರ ‘ಪಡ್ಡೆಹುಲಿ’ ಸಿನಿಮಾದ ಸಾಂಗ್ ಬಿಡುಗಡೆಯ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ನಟ ದ್ವಾರಕೀಶ್ ಆಗಮಿಸಿದ್ದು, ಈ ವೇಳೆ ಮಾತನಾಡವಾಗ ದಿವಂಗತ ಡಾ. ವಿಷ್ಣುವರ್ಧನ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ಈ ವೇಳೆ ಮಾತನಾಡಿದ ದ್ವಾರಕೀಶ್ ಅವರು, ವಿಷ್ಣುವರ್ಧನ್ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು, ವಿಷ್ಣುವರ್ಧನ್ ಬಗ್ಗೆ ಕೊಂಡಾಡಿ, ಅವನ ಬಗ್ಗೆ ಹೇಳಿ, ಸೊಗಸಾಗಿ ಹಾಡನ್ನು ಪಡ್ಡೆಹುಲಿ ಚಿತ್ರತಂಡ ಮಾಡಿದೆ. ವಿಷ್ಣುವರ್ಧನ್ ಜೊತೆ ನಾನು ಸುಮಾರು 19 ಸಿನಿಮಾಗಳನ್ನು ಜೊತೆ ಮಾಡಿದ್ದೇನೆ. ಅವನನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

    ವಿಷ್ಣುವರ್ಧನ್ ಬಗ್ಗೆ ಮಾತನಾಡುವುದು ಎಂದರೆ ನನಗೆ ಬಹಳ ದುಃಖವಾಗುತ್ತದೆ. ಎಂದಿಗೂ ನಾನು ವಿಷ್ಣುವರ್ಧನ್ ಇಲ್ಲ ಅಂತ ತಿಳಿದುಕೊಂಡಿಲ್ಲ. ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ. ಈ ವೇದಿಕೆಯಲ್ಲಿ ಒಂದು ಸತ್ಯ ಹೇಳುತ್ತೇನೆ ಅಂತ ವಿಷ್ಣುವರ್ಧನ್ ನನ್ನು ನೆನಪಿಸಿಕೊಳ್ಳದ ಒಂದು ದಿನ ನನ್ನ ಜೀವನದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪ್ರತಿನಿತ್ಯವೂ ನೆನಪಿಸಿಕೊಳ್ಳುತ್ತೇನೆ. ವಾರಕ್ಕೆ ಒಮ್ಮೆ ನನ್ನ ಕನಸಲ್ಲಿ ಬರುತ್ತಾನೆ. ಅವನನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಸುಂದರ ನಟ ನನ್ನ ವಿಷ್ಣುವರ್ಧನ್ ಎಂದು ಭಾವುಕರಾಗಿ ಆನಂದದಿಂದ ದ್ವಾರಕೀಶ್ ಹೇಳಿದ್ದಾರೆ.

    ವಿಷ್ಣುವರ್ಧನ್ ನನ್ನ ಮನದಲ್ಲಿ ಸದಾ ಇರುತ್ತಾರೆ. ಕನ್ನಡ ಸಿನಿಮಾರಂಗದಲ್ಲಿ ಅದು ದ್ವಾರಕೀಶ್ 53 ಸಿನಿಮಾ ಮಾಡಿದ್ದೇನೆ ಎಂದರೆ ಅದಕ್ಕೆ ಕಾರಣ ವಿಷ್ಣುವರ್ಧನ್, ಅವನು ಯಾವತ್ತು ನನ್ನ ಬಳಿ ಬಂದು ಕಥೆ ಏನು ಅಂತ ಕೇಳುತ್ತಿರಲಿಲ್ಲ. ನಾನು ಹೇಳಿದರೆ ಸಾಕು ಅದೇ ವೇದವಾಕ್ಯ. ನಾನು ಕರೆದಾಗೆಲ್ಲ ಏನೇ ಕೆಲಸ ಇದ್ದರು ಬರುತ್ತಿದ್ದನು ಎಂದು ನೋವಿನಿಂದ ಹೇಳಿದ್ದಾರೆ.

    ಪಡ್ಡೆಹುಲಿ ಚಿತ್ರತಂಡ ಅವನಿಗಾಗಿ ಅರ್ಪಣೆ ಮಾಡಿ ಈ ಹಾಡನ್ನು ಮಾಡಿದ್ದಾರೆ. ಹಾಡು ಸೊಗಸಾಗಿ ಚೆನ್ನಾಗಿದೆ ಎಂದು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv