Tag: Vishalakshi Devi

  • ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ

    ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ

    ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿಶಾಲಕ್ಷಿ ದೇವಿ ಅವರಿಂದ ಆಸ್ತಿಯನ್ನು ಬೇನಾಮಿಯಾಗಿ ಪಡೆದುಕೊಂಡಿದ್ದಾರೆ ಎನ್ನಲಾದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

    ಬಂಧನದಲ್ಲಿರುವ ಡಿಕೆಶಿಯನ್ನು ಬುಧವಾರ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಶಿವಕುಮಾರ್ ಅವರು 44 ಕೋಟಿ ಅಕ್ರಮ ವಹಿವಾಟು ನಡೆಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಾಗಿರುವ ಕಾರಣ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ವಾದ ಸಂದರ್ಭದಲ್ಲಿ ಬೇರೆ ವಿಚಾರದ ಜೊತೆ ಈ ಅಂಶ ಬಲವಾಗಿ ಪ್ರತಿಪಾದನೆಯಾದ ಕಾರಣ ಕೋರ್ಟ್ ಡಿಕೆಶಿಯನ್ನು 9 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತು.

    ಡಿಕೆಶಿ ಮತ್ತು ಆಪ್ತರ ನಿವಾಸದ ಮೇಲಿನ ಐಟಿ ದಾಳಿಯ ವೇಳೆ ಈ ಮಹತ್ವದ ದಾಖಲೆಗಳು ಲಭ್ಯವಾಗಿದ್ದು ಅದರಲ್ಲಿ 5 ಕೋಟಿ ಬೇನಾಮಿ ವಹಿವಾಟಿನ ವಿಚಾರ ಪತ್ತೆಯಾಗಿತ್ತು. ದೆಹಲಿ ಫ್ಲ್ಯಾಟ್ ನಲ್ಲಿ ಪತ್ತೆಯಾದ 8.59 ಕೋಟಿ ರೂಪಾಯಿಯ ಮೂಲವನ್ನು ಪತ್ತೆ ಮಾಡುವ ಜೊತೆ ಇಡಿ ಈಗ 44 ಕೋಟಿ ರೂ. ಅಕ್ರಮ ವ್ಯವಹಾರಗಳ ಕುರಿತು ಡಿಕೆ ಶಿವಕುಮಾರ್ ಅವರಲ್ಲಿ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ವಿಶಾಲಾಕ್ಷಿದೇವಿ ಯಾರು?
    ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ರಿ ಯಾಗಿರುವ ವಿಶಾಲಾಕ್ಷಿದೇವಿ ಶ್ರೀಕಂಠದತ್ತ ಒಡೆಯರ್ ಸಹೋದರಿ ಆಗಿದ್ದಾರೆ. ಬೆಂಗಳೂರು ಅರಮನೆ ಆಸ್ತಿಯ ಒಡೆತನ ಹೊಂದಿದ್ದ ವಿಶಾಲಾಕ್ಷಿ ದೇವಿ ಡಿಕೆ ಶಿವಕುಮಾರ್ ಜೊತೆ ಬೇನಾಮಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಐಟಿ ಮಾಡಿತ್ತು. 2018 ಆಕ್ಟೋಬರ್ ನಲ್ಲಿ ವಿಶಾಲಾಕ್ಷಿ ದೇವಿ ನಿಧನ ಹೊಂದಿದ್ದರು.

    ಲಿಂಕ್ ಹೇಗೆ?
    ಬೆಂಗಳೂರು ಅರಮನೆ ಆಸ್ತಿಯಲ್ಲಿ ವಿಶಾಲಾಕ್ಷಿ ದೇವಿ ಪಾಲನ್ನು ಹೊಂದಿದ್ದರು. ಈ ಆಸ್ತಿಯನ್ನು ಶಿವಕುಮಾರ್ ಬೇನಾಮಿ ರೂಪದಲ್ಲಿ ಖರೀದಿಸಿದ್ದಾರೆ ಎಂದು ಈ ಹಿಂದೆಯೇ ಆದಾಯ ತೆರಿಗೆ ಇಲಾಖೆ ಹೈಕೋರ್ಟಿಗೆ ಮಾಹಿತಿ ನೀಡಿತ್ತು. ಡಿಕೆ ಶಿವಕುಮಾರ್ ಅವರು ತಮ್ಮ ಸೋದರ ಸಂಬಂಧಿ ಶಶಿಕುಮಾರ್ ಮೂಲಕ ಈ ವ್ಯವಹಾರ ನಡೆಸಿದ್ದು, ವಿಶಾಲಕ್ಷಿ ದೇವಿ ಅವರಿಗೆ 1 ಕೋಟಿ ರೂ. ಹಣವನ್ನು ಚೆಕ್ ಮೂಲಕ ನೀಡಿದ್ದರೆ 4 ಕೋಟಿ ರೂ. ಹಣವನ್ನು ಚಂದ್ರಶೇಖರ್ ಸುಖಪುರಿ ಎಂಬವರ ಮೂಲಕ ನಗದು ರೂಪದಲ್ಲಿ ನೀಡಲಾಗಿದೆ. ಈ ವ್ಯವಹಾರದಲ್ಲಿ ವಿಶಾಲಾಕ್ಷಿ ದೇವಿ ಸಹ ಭಾಗಿಯಾಗಿದ್ದಾರೆ ಎಂದು ಐಟಿ ಆರೋಪಿಸಿತ್ತು.

    ಪತ್ತೆಯಾಗಿದ್ದು ಹೇಗೆ?
    ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಡಿಕೆಶಿಯ ಸೋದರ ಸಂಬಂಧಿ ಶಶಿಕುಮಾರ್ ನಿವಾಸದ ಮೇಲೂ ದಾಳಿ ನಡೆದಿತ್ತು ಇಲ್ಲಿ ಸಿಕ್ಕಿದ ದಾಖಲೆ ಆಧಾರಿಸಿ ವಿಶಾಲಕ್ಷಿ ದೇವಿ ನಿವಾಸದ ಮೇಲೂ ದಾಳಿ ನಡೆಸಿ ಅವರ ಆಸ್ತಿ ಮುಟ್ಟುಗೋಲು ಹಾಕಿತ್ತು. ದಾಳಿಯ ಬಳಿಕ ವಿಶಾಲಕ್ಷಿ ದೇವಿ ನನಗೂ ಬೇನಾಮಿ ವ್ಯವಹಾರಕ್ಕೂ ಸಂಬಂಧ ಇಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಐಟಿ ಚಂದ್ರಶೇಖರ್ ಮತ್ತು ಶಶಿಕುಮಾರ್ ಈ ಹಣದ ಮೂಲವನ್ನು ಸಾಬೀತು ಪಡಿಸಿಲ್ಲ. ಉದ್ಯಮಿ ಸಚಿನ್ ನಾರಾಯಣ ಅವರು ಈ ಹಣ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮೂಲವನ್ನು ತೋರಿಸುವಲ್ಲಿ ವಿಫಲರಾಗಿದ್ದು, ಡಿಕೆ ಶಿವಕುಮಾರ್ ಅವರೇ ಬೇನಾಮಿಯಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿತ್ತು.

    ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು ಹೇಗೆ?
    ಡಿಕೆ ಶಿವಕುಮಾರ್ ನಿವಾಸ, ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿಲ್ಲ. ಆದರೆ ಡಿಕೆಶಿಯನ್ನು ಇಡಿ ಬಂಧಿಸಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಡಿ ದಾಳಿ ನಡೆಸದೇ ಇದ್ದರೂ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಪ್ರಕರಣ ದಾಖಲಿಸಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು.

    ಡಿಕೆಶಿ ಆಸ್ತಿ ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
    ಚರಾಸ್ತಿ
    2013- 60.34 ಕೋಟಿ
    2019- 101.31 ಕೋಟಿ
    5 ವರ್ಷದ ಮ್ಯಾಜಿಕ್- 94.97 ಕೋಟಿ ರೂ. ಜಾಸ್ತಿ

    ಕೃಷಿ ಜಮೀನು
    2013-1.14 ಕೋಟಿ
    2019- 9.04 ಕೋಟಿ
    5 ವರ್ಷದ ಮ್ಯಾಜಿಕ್- 7.90 ಕೋಟಿ ಜಾಸ್ತಿ

    ವಸತಿ ಕಟ್ಟಡಗಳು
    2013-14.02 ಕೋಟಿ
    2019-103.29 ಕೋಟಿ
    5 ವರ್ಷದ ಮ್ಯಾಜಿಕ್- 89 ಕೋಟಿ ಜಾಸ್ತಿ

    ಡಿಕೆಶಿ ಆಸ್ತಿ
    ಕೃಷಿಯೇತರ ಜಮೀನು
    2013-149.65 ಕೋಟಿ
    2019-511.25 ಕೋಟಿ
    5 ವರ್ಷದ ಮ್ಯಾಜಿಕ್- 361 ಕೋಟಿ

    ವಾಣಿಜ್ಯ ಕಟ್ಟಡಗಳು
    2013-26.24 ಕೋಟಿ
    2019-37.27 ಕೋಟಿ
    5 ವರ್ಷದ ಮ್ಯಾಜಿಕ್- 11 ಕೋಟಿ ಜಾಸ್ತಿ

    2013- 251.39
    2019- 762.16
    5 ವರ್ಷದ ಮ್ಯಾಜಿಕ್- 510.77

  • ಭಾವುಕರಾದ ಯದುವೀರ್ ಒಡೆಯರ್

    ಭಾವುಕರಾದ ಯದುವೀರ್ ಒಡೆಯರ್

    ಮೈಸೂರು: ದಸರಾ ಹಬ್ಬದ ದಿನವೇ ಯದುವಂಶದ ಇಬ್ಬರು ನಿಧನರಾಗಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಫೇಸ್‍ಬುಕ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಶುಕ್ರವಾರ ಚಾಮರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿ ದೇವಿ ಮತ್ತು ರಾಜವಂಶಸ್ಥೆ ಪ್ರಮೋದಾ ದೇವಿ ಅವರು ತಾಯಿ ಪುಟ್ಟರತ್ನಮ್ಮಣ್ಣಿ ನಿಧನ ಹೊಂದಿದ್ದರು. ಹೀಗಾಗಿ ಯದುವೀರ್ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ ಸಂದೇಶವನ್ನು ಹಾಕಿದ್ದಾರೆ. ಮೊದಲಿಗೆ ಅಜ್ಜಿ ಬಗ್ಗೆ ಮತ್ತು ನಂತರ ತಮ್ಮ ಅತ್ತೆಯ ಬಗ್ಗೆ ಬರೆದು ಫೋಟೋ ಹಾಕಿ ವಿಷಾದಿಸಿದ್ದಾರೆ.

    ಯದುವೀರ್ ಫೋಸ್ಟ್
    ಸ್ನೇಹಿತರೆ, “ನನ್ನ ಅಜ್ಜಿಯವರಾದ ಪುಟ್ಟರತ್ನಮ್ಮಣ್ಣಿ ಅವರು ನಮ್ಮನ್ನು ಅಗಲಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ಅವರು ಶಾಂತ ಸ್ವಭಾವದವರಾಗಿದ್ದು, ನನ್ನ ಜವಾಬ್ದಾರಿಯನ್ನು ವಹಿಸಿದಾಗ ತುಂಬು ಹೃದಯದಿಂದ ಸ್ವಾಗತಿಸಿದ್ದರು. ಅವರು ನನ್ನ ತಾಯಿ ಮಹಾಸನ್ನಿಧಾನ ಸವಾರಿ ರಾಜಮಾತೆ ಪ್ರಮೋದಾ ದೇವಿ ಒಡೆಯರವರಿಗೆ ಬಹಳ ಹತ್ತಿರವಾಗಿದ್ದರು ಹಾಗೂ ಅವರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದರು. ಅವರು ನಮ್ಮಿಂದ ದೂರವಾಗಿರುವುದು ಬಹಳ ದುಃಖದ ಸಂಗತಿಯಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಮಹಾರಾಜಕುಮಾರಿ ವಿಶಾಲಾಕ್ಷಿ ದೇವಿಯವರು ನಮ್ಮನ್ನು ಅಗಲಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ” ಎಂದು ಅಜ್ಜಿಯ ಬಗ್ಗೆ ಬರದಿದ್ದಾರೆ.

    “ವಿಶಾಲಾಕ್ಷಿ ದೇವಿ ಅವರು ಶ್ರೀಮನ್ ಮಹಾರಾಜ ಜಯಚಾಮರಾಜ ಒಡೆಯರ್ ಮತ್ತು ತ್ರಿಪುರಸುಂದರಮ್ಮಣ್ಣಿ ಅವರಿಗೆ 1962 ರಲ್ಲಿ ಜನಿಸಿದ್ದರು. ಅವರ ತಂದೆಯ ಹಾಗೆಯೇ ಮಹಾರಾಜಕುಮಾರಿ ಅವರು ಕೂಡ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು ಮತ್ತು ಈ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದ್ದು. ಅವರು ಹಲವಾರು ಚಿರತೆಗಳು ಹಾಗು ಆನೆಗಳನ್ನು ತಮ್ಮ ಅರಣ್ಯದ ವಾಸಸ್ಥಾನಕ್ಕೆ ಮರಳಲು ಸಹಾಯ ಮಾಡಿದ್ದರು. ಅವರೊಂದಿಗೆ ಬಂಡೀಪುರದಲ್ಲಿ ಕಳೆದ ಕ್ಷಣಗಳು ಅವರೊಂದಿಗಿನ ನನ್ನ ಅತ್ಯುತ್ತಮ ನೆನಪುಗಳಾಗಿವೆ. ಅವರು ನಮ್ಮಿಂದ ದೂರವಾಗಿರುವುದು ಬಹಳ ದುಃಖದ ಸಂಗತಿಯಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತನ್ನ ಅತ್ತೆಯ ಬಗ್ಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv