Tag: vishakhapattana

  • ಡಾಕ್ಟರ್ ಭೇಟಿಯಾಗಲು 20 ಕಿ.ಮೀ ನಡೆದ ಆದಿವಾಸಿ ಗರ್ಭಿಣಿ ಸಾವು

    ಡಾಕ್ಟರ್ ಭೇಟಿಯಾಗಲು 20 ಕಿ.ಮೀ ನಡೆದ ಆದಿವಾಸಿ ಗರ್ಭಿಣಿ ಸಾವು

    ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಡಕಟ್ಟು ಜನಾಂಗದ ತುಂಬು ಗರ್ಭಿಣಿಯೊಬ್ಬರು ಮಗು ಸಮೇತ ಮೃತಪಟ್ಟ ಹೀನಾಯ ಘಟನೆಯೊಂದು ನಡೆದಿದೆ.

    ಈ ಘಟನೆ ಕಳೆದ ವಾರ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮಹಿಳೆಯ ಮನೆಯ ಹತ್ತಿರಲ್ಲಿ ಯಾವುದೇ ಹೆಲ್ತ್ ಕೇರ್ ಸೆಂಟರ್ ಇಲ್ಲದೇ ಇರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಗರ್ಭಿಣಿ ಮಗುವಿಗೆ ಜನ್ಮ ನೀಡಲು ಕೆಲ ದಿನಗಳಷ್ಟೇ ಬೇಕಾಗಿತ್ತು. ಆದರೆ ಅದಕ್ಕಿಂತಲೇ ಮೊದಲೇ ವಿಪರೀತ ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ 28 ವರ್ಷದ ತುಂಬು ಗರ್ಭಿಣಿ ವೈದ್ಯರನ್ನು ಭೇಟಿಯಾಗಲು ನಗರ ಪ್ರದೇಶಕ್ಕೆ ಬರಲು ಸುಮಾರು 20 ಕಿ.ಮೀ ದೂರ ನಡೆದಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ಆಸ್ಪತ್ರೆಗೆ ಬಂದು ವೈದ್ಯರನ್ನು ಬೇಟಿ ಮಾಡಿ ವಾಪಸ್ ಹೋಗುವವರಿದ್ದರು. ಆದರೆ ಅದಾಗಲೇ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಯೊಳಗೆ ಕರೆದೊಯ್ಯಲಾಯಿತು. ಆದರೆ ಕೆಲ ನಿಮಿಷಗಳಲ್ಲೇ ಮಹಿಳೆಗೆ  ವಿಪರೀತ ರಕ್ತಸ್ರಾವವಾಗಿದ್ದು, ಹೊಟ್ಟೆಯೊಳಗಿದ್ದ ಮಗು ಸಮೇತ ಸಾವನ್ನಪ್ಪಿದ್ದಾರೆ.

    ಘಟನೆ ಸಂಬಂಧ ಪೆಡಬಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಅಂಬುಲೆನ್ಸ್ ವಿಳಂಬದಿಂದಾಗಿ ಹೆದ್ದಾರಿಯಲ್ಲೇ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.

  • ಮದ್ವೆಯಾದ 4 ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದ ಸಾವು

    ಮದ್ವೆಯಾದ 4 ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದ ಸಾವು

    ವಿಶಾಖಪಟ್ಟಣ: 19 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

    ಗಂಡನೊಂದಿಗೆ ಜಗಳವಾಡಿದ ಕಾರಣ ಶನಿವಾರ ರಾತ್ರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ. ಆದ್ರೆ ಗಂಡನೇ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಪೊಲೀಸರ ಪ್ರಕಾರ, ವಿಶಾಖಪಟ್ಟಣ ಬಳಿಯ ಎಲ್‍ಬಿ ಪುರಂನವರಾದ ಸಂಧ್ಯಾ ನಾಲ್ಕು ತಿಂಗಳ ಹಿಂದಷ್ಟೇ ವೈಜಾಗ್ ಸ್ಟೀಲ್ ಪ್ಲಾಂಟ್ ನೌಕರನಾದ ರಾಜು ಎಂಬವರೊಂದಿಗೆ ಮದುವೆಯಾಗಿದ್ದರು. ಗಜುವಾಕಾದ ಬಾಡಿಗೆ ಫ್ಲಾಟ್‍ನಲ್ಲಿ ದಂಪತಿ ವಾಸವಿದ್ದರು. ಶನಿವಾರದಂದು ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿತ್ತು. ವಾಗ್ವಾದದ ಬಳಿಕ ರಾಜು ಮನೆಯಿಂದ ಹೊರಹೋಗಿದ್ದು ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ ಸಂಧ್ಯಾ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.

    ಪತ್ನಿಯನ್ನ ಕೂಡಲೇ ರಾಜು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿಂದ ಕೆಜಿಹೆಚ್ ಆಸ್ಪತ್ರೆಗೆ ರವಾನಿಸಲು ವೈದ್ಯರು ಹೇಳಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿ ಸಂಧ್ಯಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತದೇಹವನ್ನ ತವರೂರಿಗೆ ತೆಗೆದುಕೊಂಡು ಹೋಗಲಾಗಿದೆ. ಆದ್ರೆ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಕೈ ಮುರಿದಿರುವುದನ್ನು ನೋಡಿ, ರಾಜು ಆಕೆಯ ಮೇಲೆ ದಾಳಿ ಮಾಡಿ ಕೊಂದಿದ್ದಾನೆ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.