Tag: Visakhapatnam

  • ನಕಲಿ ಕತ್ತಿಯಿಂದ ಪೇದೆಯನ್ನ ಬೆನ್ನಟ್ಟಿದ್ದ ವ್ಯಕ್ತಿ ಎರಡು ದಿನಗಳ ಬಳಿಕ ಅರೆಸ್ಟ್

    ನಕಲಿ ಕತ್ತಿಯಿಂದ ಪೇದೆಯನ್ನ ಬೆನ್ನಟ್ಟಿದ್ದ ವ್ಯಕ್ತಿ ಎರಡು ದಿನಗಳ ಬಳಿಕ ಅರೆಸ್ಟ್

    ವಿಶಾಖಪಟ್ಟಣಂ: ನಕಲಿ ಕತ್ತಿಯಿಂದ ಪೇದೆಯನ್ನು ಬೆನ್ನಟ್ಟಿದ್ದ ವ್ಯಕ್ತಿಯನ್ನು ಎರಡು ದಿನಗಳ ಬಳಿಕ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

    ವಿಶಾಖಪಟ್ಟಣಂ ನಗರದ ಮಕ್ಕಳ ರಂಗಮಂದಿರದಲ್ಲಿ ನವೆಂಬರ್ 17ರಂದು ಘಟನೆ ನಡೆದಿತ್ತು. ಆದರೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯು ಇಂದು ಸಿಕ್ಕಿಬಿದ್ದಿದ್ದಾನೆ.

    ಮದ್ಯ ಸೇವಿಸಿ ಮಕ್ಕಳ ರಂಗಮಂದಿರಕ್ಕೆ ಬಂದು ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ಆರೋಪಿಯು ಕೈಯಲ್ಲಿ ಹಿಡಿದಿದ್ದ ನಕಲಿ ಕತ್ತಿಯಿಂದ ಪೊಲೀಸರಿಗೆ ಭಯ ಮೂಡಿಸಿದ್ದ. ಅಷ್ಟೇ ಅಲ್ಲದೆ ಓರ್ವ ಪೊಲೀಸ್ ಪೇದೆಯ ಕಡೆಗೆ ಏಕಾಏಕಿ ನುಗ್ಗಿ ದಾಳಿ ಮಾಡುವಂತೆ ನಟಿಸಿದ್ದ. ಇದರಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿಶಾಖಪಟ್ಟಣಂ ಪೊಲೀಸರು ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆದಿದ್ದರು. ಇಂದು ಸಿಕ್ಕಿಬಿದ್ದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಹಿಡಿದಿದ್ದು ನಕಲಿ ಕತ್ತಿ ಎಂದು ಹೇಳಿದ್ದಾರೆ.

  • 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ದುರ್ಗೆಗೆ ಅಲಂಕಾರ

    4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ದುರ್ಗೆಗೆ ಅಲಂಕಾರ

    ವಿಶಾಖಪಟ್ಟಣಂ: ನವರಾತ್ರಿ ಸಂಭ್ರಮದಲ್ಲಿ ನವ ದುರ್ಗೆಯರ ಆರಾಧನೆ ದೇಶದೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತದೆ. ಆದ್ದರಿಂದ ಈ ಬಾರಿ ನವರಾತ್ರಿ ಆಚರಣೆ ವಿಶಾಖಪಟ್ಟಣದಲ್ಲಿ ಜೋರಾಗಿಯೇ ನಡೆಯುತ್ತಿದ್ದು, ಶ್ರೀ ಕನ್ಯಕ ಪರಮೇಶ್ವರಿ ದೇವಿಗೆ ಬರೋಬ್ಬರಿ 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟಿನಿಂದ ಸಿಂಗರಿಸಿ ಆರಾಧಿಸಲಾಯಿತು.

    ಭಾನುವಾರ ದುರ್ಗಾಷ್ಠಮಿ ದಿನದ ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಜೊತೆಗೆ ಕನ್ಯಕ ಪರಮೇಶ್ವರಿ ದೇವಿಗೆ 4 ಕೆಜಿ ಚಿನ್ನ ಹಾಕಿ, ದೇವಿಯ ಸುತ್ತಲು ನೋಟುಗಳಿಂದ ಅಲಂಕರಿಸಲಾಗಿತ್ತು. ಈ ವಿಶೇಷ ಅಲಂಕಾರಕ್ಕೆ ಬರೋಬ್ಬರಿ ಎರಡು ಕೋಟಿ ರೂಪಾಯಿ ನೋಟುಗಳನ್ನು ಬಳಸಲಾಗಿತ್ತು. ಈ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.

    ಈ ವಿಶೇಷ ಅಲಂಕಾರಕ್ಕೆ ವಿದೇಶಿ ನೋಟುಗಳನ್ನು ಕೂಡ ಬಳಸಲಾಗಿತ್ತು. ಅಲ್ಲದೆ ದೇವಿಗೆ ಸುಮಾರು 200 ಭಕ್ತಾದಿಗಳು ಹಣ ಹಾಗೂ ಚಿನ್ನವನ್ನು ದೇಣಿಗೆ ಕೊಟ್ಟಿದ್ದರು. ಅದರಿಂದಲೇ ದುರ್ಗಾಷ್ಠಮಿಗೆ ದೇವಿಯ ಅಲಂಕಾರ ಮಾಡಿದ್ದೇವೆ. ಹಾಗೆಯೇ ಈ ಅಲಂಕಾರಕ್ಕೆ 1 ರೂ. ಮುಖಬೆಲೆಯ ನೋಟುಗಳಿಂದ ಹಿಡಿದು 2,000 ರೂ. ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ:ದೇಶದ ದುಬಾರಿ ಮೂರ್ತಿ – 50 ಕೆ.ಜಿ ಚಿನ್ನದಲ್ಲಿ ದುರ್ಗೆಗೆ ಅಲಂಕಾರ

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೆಂಡಾಲ್‍ನಲ್ಲಿ ದುರ್ಗೆಗೆ 50 ಕೆಜಿ ಚಿನ್ನದಿಂದ ಅಲಂಕರಿಸಿ, ಪೆಂಡಾಲ್ ನಿರ್ಮಿಸಲು 20 ಕೋಟಿ ರೂ. ಖರ್ಚು ಮಾಡಿದ್ದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದುರ್ಗಾ ಪೂಜೆಯನ್ನು ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಮಾಡಲಾಗುತ್ತಿದ್ದು, ಕೊಲ್ಕತ್ತಾದ ಸಂತೋಷ್ ಮಿತ್ರ ದುರ್ಗಾ ಉತ್ಸವ ಸಮಿತಿ ಸದಸ್ಯರು ಹಾಕಿರುವ ದುರ್ಗಾ ಪೆಂಡಲ್‍ನಲ್ಲಿ ಪ್ರತಿಷ್ಠಾಪಿರುವ ದುರ್ಗೆಗೆ ಬರೋಬ್ಬರಿ 50 ಕೆ.ಜಿ ಚಿನ್ನವನ್ನು ಹಾಕಿದ್ದಾರೆ. ದುರ್ಗಾ ದೇವಿಯ ಮೂರ್ತಿ ಹಾಗೂ ಪೆಂಡಾಲ್‍ಗೆ ಹಾಕಿರುವ ಬಂಗಾರವೆಲ್ಲಾ ಸೇರಿ ಒಟ್ಟು 20 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

    ಈ ಬಾರಿಯ ನವರಾತ್ರಿಯಲ್ಲಿ ಕೋಲ್ಕತ್ತಾದ ದುರ್ಗಾ ದೇವಿಯ ಪ್ರತಿಮೆ ದೇಶದ ಅತ್ಯಂತ ದುಬಾರಿ ಮೂರ್ತಿ ಎಂದು ಸಮಿತಿ ಹೇಳಿಕೊಂಡಿತ್ತು. ಸಂತೋಷ್ ಮಿತ್ರ ಚೌಕದಲ್ಲಿ ನಿರ್ಮಿಸಲಾದ ಪೆಂಡಾಲ್‍ನಲ್ಲಿರುವ ದುರ್ಗಾ ದೇವಿ ಪ್ರತಿಮೆ 13 ಅಡಿ ಎತ್ತರವಿದೆ. ದುರ್ಗಾ ಪ್ರತಿಮೆಗೆ ಚಿನ್ನವನ್ನು ಲೇಪಿಸಲಾಗಿದ್ದು, ದೇವಿಯ ಮೈಮೇಲೆ ಕೂಡ ಚಿನ್ನಾಭರಣವನ್ನು ಹಾಕಲಾಗಿದೆ. ಅಲ್ಲದೆ ದೇವಿಯ ವಾಹನವಾದ ಸಿಂಹದ ಪ್ರತಿಮೆಗೂ ಕೂಡ ಚಿನ್ನವನ್ನು ಲೇಪಿಸಲಾಗಿದೆ.

  • ಶಮಿ ಯಶಸ್ವಿ ಬೌಲಿಂಗ್ ಹಿಂದಿನ ಗುಟ್ಟು ರಿವೀಲ್ ಮಾಡಿದ ರೋಹಿತ್

    ಶಮಿ ಯಶಸ್ವಿ ಬೌಲಿಂಗ್ ಹಿಂದಿನ ಗುಟ್ಟು ರಿವೀಲ್ ಮಾಡಿದ ರೋಹಿತ್

    ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಶಮಿ ಅವರ ಬೌಲಿಂಗ್ ಹಿಂದಿನ ಗುಟ್ಟನ್ನು ರಿವೀಲ್ ಮಾಡಿದ್ದಾರೆ.

    ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ಪಡೆಯದ ಮೊಹಮ್ಮದ್ ಶಮಿ 2ನೇ ಇನ್ನಿಂಗ್ಸ್ ನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದರು. ಅಲ್ಲದೇ ಇವರ ಬೌಲಿಂಗ್ ವೇಗಕ್ಕೆ ಸ್ಟಂಪ್ ಮುರಿದಿದ್ದು ಸಾಕ್ಷಿಯಾಗಿತ್ತು. ಬಿಸಿಸಿಐ ಕೂಡ ಶಮಿರ ಬೌಲಿಂಗ್ ವೇಗದ ಫೋಟೋಗಳನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದೆ.

    ಶಮಿ ಬೌಲಿಂಗ್ ದಾಳಿಯ ಕುರಿತು ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಶಮಿ ಬಿರಿಯಾನಿ ತಿಂದಿದ್ದೆ ಅವರ ಅದ್ಭುತ ಬೌಲಿಂಗ್‍ಗೆ ಕಾರಣ ಎಂದಿದ್ದಾರೆ. ಅಲ್ಲದೇ ಬಿರಿಯಾನಿ ತಿಂದ ಬಳಿಕ ಶಮಿ ಹೆಚ್ಚು ಉತ್ಸಾಹದಿಂದ ಬೌಲಿಂಗ್ ಮಾಡಿದ್ದರು ಎಂದು ಹೇಳಿದ್ದಾರೆ.

    ಅಂತಿಮ ದಿನದಾಟದ ಮಧ್ಯಾಹ್ನದ ವಿರಾಮದ ವೇಳೆಗೆ ಶಮಿ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿ, ಕ್ವಿಂಟನ್ ಡಿಕಾಕ್, ತೆಂಬಾ ಬಾವುಮಾ ವಿಕೆಟ್ ಪಡೆದಿದ್ದರು. ಅದರಲ್ಲೂ ತಮ್ಮ ವಿಕೆಟ್ ಪಡೆದ ಶಮಿರ ಬೌಲಿಂಗ್ ಕಂಡು ಡಿಕಾಕ್ ಕ್ಷಣ ಕಾಲ ಅಚ್ಚರಿಗೊಂಡು ಕ್ರಿಸ್‍ನಲ್ಲಿಯೇ ನಿಂತಿದ್ದರು. ಅಲ್ಲದೇ ಅಂತಿಮವಾಗಿ ತಂಡದ ಗೆಲುವಿಗೆ ಕಂಟಕವಾಗಿದ್ದ ರಬಾಡರ ವಿಕೆಟ್ ಉರುಳಿಸಿ ತಂಡಕ್ಕೆ ಶಮಿ ಗೆಲುವಿನ ಸಿಹಿ ನೀಡಿದ್ದರು. ಪಂದ್ಯದಲ್ಲಿ ಶಮಿ 5 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು.

    https://www.instagram.com/p/B3Rbg47AQvR/

  • ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಫ್ರಿಕಾ – ತವರಿನಲ್ಲಿ ಸತತ 10ನೇ ಟೆಸ್ಟ್ ಗೆಲುವು

    ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಫ್ರಿಕಾ – ತವರಿನಲ್ಲಿ ಸತತ 10ನೇ ಟೆಸ್ಟ್ ಗೆಲುವು

    ವಿಶಾಖಪಟ್ಟಣಂ: ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ತತ್ತರಿಸಿದ್ದು, ಟೀ ಇಂಡಿಯಾ 203 ರನ್ ಅಂತರದ ಗೆಲುವು ಪಡೆದುಕೊಂಡಿದೆ. ಆ ಮೂಲಕ ತವರಿನಲ್ಲಿ ಸತತ 10ನೇ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿದೆ.

    395 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪಡೆಯನ್ನು ಟೀಂ ಇಂಡಿಯಾ ಬೌಲರ್ ಗಳು 191 ರನ್ ಗಳಿಗೆ ಅಲೌಟ್ ಮಾಡಿದರು. ಭಾನುವಾರ ಅಂತಿಮ ದಿನದ ಆಟದಲ್ಲಿ ಬೌಲರ್ ಗಳ ಒಗ್ಗಟ್ಟಿನ ಪ್ರದರ್ಶನದಿಂದ ಟೀಂ ಇಂಡಿಯಾ ಗೆಲುವು ಪಡೆಯಿತು. 2017ರ ಬಳಿಕ ತವರಿನಲ್ಲಿ ಟೀಂ ಇಂಡಿಯಾ ಪಡೆದ 10ನೇ ಗೆಲುವು ಇದಾಗಿದೆ. ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ಟೀಂ ಇಂಡಿಯಾ 160 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ.

    ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ, ಸ್ಪಿನ್ನರ್ ರವೀಂದ್ರ ಜಡೇಜಾ ನಡೆಸಿದ ಮ್ಯಾಜಿಕಲ್ ಬೌಲಿಂಗ್ ದಾಳಿಯನ್ನು ಎದುರಿಸಲು ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್‍ಗಳು ವಿಫಲರಾದರು. ಅಂತಿಮ ದಿನದಾಟವನ್ನು 1 ವಿಕೆಟ್ ಕಳೆದುಕೊಂಡು 11 ರನ್ ಗಳಿಂದ ಆರಂಭಿಸಿದ ದಕ್ಷಿಣ ಅಫ್ರಿಕಾ ತಂಡ ಟೀಂ ಇಂಡಿಯಾ ಬೌಲರ್ ಜಡೇಜಾರ ದಾಳಿಗೆ ಸಿಲುಕಿ ತತ್ತರಿಸಿತು. ಆದರೆ ಮಧ್ಯಾಹ್ನದ ಭೋಜನ ವಿರಾಮ ವೇಳೆಗೆ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದರು. ಆದರೆ ದಕ್ಷಿಣ ಆಫ್ರಿಕಾ ಪರ ಪೈಡಿಟ್- ಮುತ್ತುಸಾಮಿ ಅಂತಿಮ ಹಂತದಲ್ಲಿ ನಡೆಸಿದ ಹೋರಾಟ ವಿಫಲವಾಯಿತು. ಪೈಡಿಟ್ 56 ರನ್ ಗಳಿಸಿ ಔಟಾದರೆ, ಮುತ್ತುಸಾಮಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಇಬ್ಬರು 9ನೇ ವಿಕೆಟ್‍ಗೆ 91 ರನ್ ಜೊತೆಯಾಟ ನೀಡಿದರು. ಅಂತಿಮವಾಗಿ ರಬಡಾ (18 ರನ್) ವಿಕೆಟ್ ಕಬಳಿಸಿದ ಶಮಿ ತಂಡಕ್ಕೆ ಗೆಲುವಿನ ಸಿಹಿ ನೀಡಿದರು. ಟೀಂ ಇಂಡಿಯಾ ಪರ ಜಡೇಜಾ 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರೆ ಶಮಿ 5 ವಿಕೆಟ್ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್:
    ಟೀಂ ಇಂಡಿಯಾ: ಮೊದಲ ಇನ್ನಿಂಗ್ಸ್ – 502/7 ಡಿಕ್ಲೇರ್
    2ನೇ ಇನ್ನಿಂಗ್ಸ್ – 323/4 ಡಿಕ್ಲೇರ್

    ದಕ್ಷಿಣ ಆಫ್ರಿಕಾ: ಮೊದಲ ಇನ್ನಿಂಗ್ಸ್ – 431 ಅಲೌಟ್
    2ನೇ ಇನ್ನಿಂಗ್ಸ್ – 191 ಅಲೌಟ್

  • ಪೂಜಾರಾ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ರೋಹಿತ್ ಶರ್ಮಾ: ವಿಡಿಯೋ ವೈರಲ್

    ಪೂಜಾರಾ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ರೋಹಿತ್ ಶರ್ಮಾ: ವಿಡಿಯೋ ವೈರಲ್

    ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಸಹ ಆಟಗಾರ ಚೇತೇಶ್ವರ ಪೂಜಾರ ವಿರುದ್ಧ ಅವಾಚ್ಯ ಪದ ಪ್ರಯೋಗ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದಲ್ಲಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನ 4ನೇ ದಿನದಾಟದ 26ನೇ ಓವರಿನಲ್ಲಿ ಈ ಘಟನೆ ನಡೆದಿದೆ. ಬೌಲರ್ ಪೀಡ್ ಎಸೆದ ಬಾಲನ್ನು ರೋಹಿತ್ ಶರ್ಮಾ ಕವರ್ ಪಾಯಿಂಟ್ ನತ್ತ ತಳ್ಳಿ ಒಂದು ರನ್ ಓಡಲು ಮುಂದಾದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಪೂಜಾರ ರನ್ ಓಡಲು ಮುಂದಾಗಿ ನಂತರ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದರು. ಅಸಮಾಧಾನಗೊಂಡ ರೋಹಿತ್ ಶರ್ಮಾ ಮರಳಿ ಕ್ರೀಸ್ ನತ್ತ ಓಡಿದರು. ಒಂದು ರನ್ ಪಡೆಯಲು ಸಾಧ್ಯವಿದ್ದರೂ ಓಡದ್ದಕ್ಕೆ ರೋಹಿತ್ ಶರ್ಮಾ ಪೂಜಾರ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು.

    ಅವಾಚ್ಯ ಪದ ಬಳಕೆ ಮಾಡಿರುವುದು ಸ್ಟಂಪ್ ಮೈಕ್‍ನಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟಗರು ರೋಹಿತ್‍ರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಗೆಲುವಿಗೆ 9 ವಿಕೆಟ್ ಬಾಕಿ: ಇತ್ತ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ 147 ಎಸೆತಗಳಲ್ಲಿ 6 ಸಿಕ್ಸರ್, 10 ಬೌಂಡರಿಗಳ ನೆರವಿನಿಂದ 127 ರನ್ ಗಳಿಸಿ ನಿರ್ಗಮಿಸಿದರು. ಪೂಜಾರ 81 ರನ್, ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ 40 ರನ್, ಕೊಹ್ಲಿ 31 ರನ್, ರಹಾನೆ 27 ರನ್ ಗಳ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿದ್ದ ಸಂದರ್ಭದಲ್ಲಿ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

    ಗೆಲ್ಲಲು 395 ರನ್ ಗುರಿ ಪಡೆದ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಅಫ್ರಿಕಾ 4ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿತು. ತಂಡದ ಪರ ಜಡೇಜಾ 2ನೇ ಇನ್ನಿಂಗ್ಸ್ ನಲ್ಲಿ ಎದುರಾಳಿಯ ಮೊದಲ ವಿಕೆಟ್ ಪಡೆದು ಅಘಾತ ನೀಡಿದರು.

    ಸಂಕ್ಷೀಪ್ತ ಸ್ಕೋರ್:
    ಟೀಂ ಇಂಡಿಯಾ: ಮೊದಲ ಇನ್ನಿಂಗ್ಸ್ 502/7 ಡಿಕ್ಲೇರ್
    2ನೇ ಇನ್ನಿಂಗ್ಸ್ 323/4 ಡಿಕ್ಲೇರ್

    ದಕ್ಷಿಣ ಆಫ್ರಿಕಾ: 431 ಅಲೌಟ್
    2ನೇ ಇನ್ನಿಂಗ್ಸ್ 11/1

  • ಸಿಕ್ಸರ್ ಸಿಡಿಸಿ ದಾಖಲೆ – ಶತಕ ಹೊಡೆದು ವಿಶ್ವದಾಖಲೆಗೈದ ಹಿಟ್‍ಮ್ಯಾನ್

    ಸಿಕ್ಸರ್ ಸಿಡಿಸಿ ದಾಖಲೆ – ಶತಕ ಹೊಡೆದು ವಿಶ್ವದಾಖಲೆಗೈದ ಹಿಟ್‍ಮ್ಯಾನ್

    – ನವಜೋತ್ ಸಿಂಗ್ ಸಿಧು ಸಿಕ್ಸರ್ ದಾಖಲೆ ಉಡೀಸ್
    – 41 ವರ್ಷದ ನಂತರ ದಾಖಲಾಯ್ತು ಶತಕ

    ವಿಶಾಖಪಟ್ಟಣಂ: ಟೆಸ್ಟ್ ಕ್ರಿಕೆಟ್‍ನಲ್ಲಿ ಮೊದಲ ಬಾರಿಗೆ ತಂಡದ ಆರಂಭಿಕಾಗಿ ಕಣಕ್ಕೆ ಇಳಿದಿದ್ದ ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್‍ನ ಶತಕ ಸಿಡಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಸದ್ಯ 2ನೇ ಇನ್ನಿಂಗ್ಸ್‍ನಲ್ಲೂ ಅಮೋಘ ಬ್ಯಾಟಿಂಗ್ ಮುಂದುವರಿಸಿರುವ ರೋಹಿತ್ ಮತ್ತೊಂದು ಶತಕ ಸಿಡಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

    ಟೀಂ ಇಂಡಿಯಾ ಪರ 41 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕ ಆಟಗಾರ ಪಂದ್ಯವೊಂದರ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದಾರೆ. 1978-79 ರಲ್ಲಿ ಟೀಂ ಇಂಡಿಯಾ ಪರ ಸುನೀಲ್ ಗವಾಸ್ಕರ್ ಈ ಸಾಧನೆಯನ್ನು ಮಾಡಿದ್ದರು. ಅಲ್ಲದೇ ರೋಹಿತ್ ಆರಂಭಿಕರಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 32 ವರ್ಷದ ರೋಹಿತ್ 224 ಎಸೆತಗಳಲ್ಲಿ 176 ರನ್ ಗಳಿಸಿ ಔಟಾಗಿದ್ದರು. ಸದ್ಯ 2ನೇ ಇನ್ನಿಂಗ್ಸ್ ನಲ್ಲಿ 133 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಪಂದ್ಯವೊಂದರ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ 6ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು.

    ಸಿಕ್ಸರ್ ದಾಖಲೆ: ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ರೋಹಿತ್, 2ನೇ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಸಿಡಿಸಿದರು. ಆ ಮೂಲಕ 149 ಎಸೆತಗಳಲ್ಲಿ 85.23 ಸರಾಸರಿಯಲ್ಲಿ 127 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ನವಜೋತ್ ಸಿಂಗ್ ಸಿಧು ಅವರ ದಾಖಲೆಯನ್ನು ರೋಹಿತ್ ಮುರಿದರು. 1994ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಲಕ್ನೋ ಟೆಸ್ಟ್ ಪಂದ್ಯದಲ್ಲಿ ಸಿಧು 8 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಈ ಪಂದ್ಯದಲ್ಲಿ 13 ಸಿಕ್ಸರ್ ಸಿಡಿಸಿದ್ದಾರೆ.

    ಟೀಂ ಇಂಡಿಯಾ ಎಲ್ಲಾ ಮಾದರಿಗಳ ಕ್ರಿಕೆಟ್ ಪಂದ್ಯಗಳಲ್ಲಿ ರೋಹಿತ್ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, 2013ರಲ್ಲಿ ಆಸೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 16 ಸಿಕ್ಸರ್ ಸಿಡಿಸಿದ್ದರು. ಅಲ್ಲದೇ 2017 ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರ್‍ನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ 10 ಸಿಕ್ಸರ್ ಸಿಡಿಸಿದ್ದರು.

  • ದಿಗ್ಗಜ ಆಟಗಾರರ ದಾಖಲೆ ಬ್ರೇಕ್ ಮಾಡಿದ ಜಡೇಜಾ

    ದಿಗ್ಗಜ ಆಟಗಾರರ ದಾಖಲೆ ಬ್ರೇಕ್ ಮಾಡಿದ ಜಡೇಜಾ

    ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 200ನೇ ವಿಕೆಟ್ ಪಡೆದಿದ್ದು, ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಎಡಗೈ ಬೌಲರ್ ಎಂಬ ದಾಖಲೆಯನ್ನು ಬರೆದರು.

    ರವೀಂದ್ರ ಜಡೇಜಾ 44ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಈ ಮುನ್ನ ಶ್ರೀಲಂಕಾ ಆಟಗಾರ ರಂಗನಾ ಹೆರಾತ್ 47 ಪಂದ್ಯಗಳಿಂದ 200 ವಿಕೆಟ್ ಪಡೆದಿದ್ದರು. ಈ ಪಟ್ಟಿಯಲ್ಲಿ ನಂತರದ ಸ್ಥಾನವನ್ನು ಆಸೀಸ್‍ನ ಮಿಚೇಲ್ ಜಾನ್ಸನ್ ಪಡೆದಿದ್ದು, 49 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆ ಬಳಿಕ 49 ಪಂದ್ಯಗಳಲ್ಲಿ ಮಿಚೇಲ್ ಸ್ಟಾರ್ಕ್, 51 ಪಂದ್ಯಗಳಿಂದ ಭಾರತ ಬಿಷನ್ ಬೇಡಿ ಹಾಗೂ ಪಾಕ್‍ನ ವಾಸೀಂ ಅಕ್ರಂ 200 ವಿಕೆಟ್ ಪಡೆದ ಸಾಧನೆ ಮಾಡಿದ್ದರು.

    ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 385 ರನ್ ಗಳಿಸಿದ್ದು, ಭಾರತ ಪರ ಆರ್.ಅಶ್ವಿನ್ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್ ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದ್ದಾರೆ.

    ರೋಹಿತ್ ಬೌಲಿಂಗ್: ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕೆ ಇಳಿದು ಶತಕ ಸಿಡಿಸಿದ್ದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವೇಳೆ ಬೌಲಿಂಗ್ ಮಾಡುವ ಅವಕಾಶವನ್ನು ಪಡೆದರು. 2 ಓವರ್ ಬೌಲಿಂಗ್ ಮಾಡಿದ ರೋಹಿತ್, 1 ಓವರ್ ಮೇಡನ್ ಮಾಡಿ 3.50 ಎಕಾನಮಿಯಲ್ಲಿ 7 ರನ್ ಬಿಟ್ಟುಕೊಟ್ಟರು. 12 ವರ್ಷಗಳ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು ವಿಶೇಷವಾಗಿತ್ತು.

    https://twitter.com/InswingingY/status/1180081028825616385

    ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಟೂರ್ನಿಗೆ ರೋಹಿತ್ ಆಯ್ಕೆಯಾಗಿದ್ದರೂ ಕೂಡ ಆಡುವ ಅವಕಾಶ ಪಡೆದಿರಲಿಲ್ಲ. ಈ ವೇಳೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಆಟಗಾರ ಹನುಮ ವಿಹಾರಿಗೆ ಅವಕಾಶ ನೀಡಿದ್ದ ಕೊಹ್ಲಿ, ರೋಹಿತ್‍ರನ್ನು ಆಡುವ 11ರ ಬಳಗದಿಂದ ದೂರವಿಟ್ಟಿದ್ದರು. ಸದ್ಯ ರೋಹಿತ್ ಶರ್ಮಾಗೂ ಬೌಲ್ ಮಾಡುವ ಅವಕಾಶ ನೀಡುವ ಮೂಲಕ ಕೊಹ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

  • ರೋಹಿತ್ ಜೊತೆಗಿನ ಮನಸ್ತಾಪಕ್ಕೆ ಪೂರ್ಣವಿರಾಮ ಹಾಕಿದ ಕೊಹ್ಲಿ

    ರೋಹಿತ್ ಜೊತೆಗಿನ ಮನಸ್ತಾಪಕ್ಕೆ ಪೂರ್ಣವಿರಾಮ ಹಾಕಿದ ಕೊಹ್ಲಿ

    ವಿಶಾಖಪಟ್ಟಣಂ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವರದಿಗಳಿಗೆ ವಿರಾಟ್ ಕೊಹ್ಲಿ ಪೂರ್ಣವಿರಾಮ ಹಾಕಿದ್ದಾರೆ.

    ಹೌದು, ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಮುನ್ನವೇ ಟೀಂ ಇಂಡಿಯಾ ಆಟಗಾರರಲ್ಲಿ ಮನಸ್ತಾಪವಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಹೊರನಡೆದ ಬಳಿಕ ಈ ವರದಿಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಹ ಬೆಳವಣಿಗೆಗಳು ನಡೆದಿದ್ದವು. ಈ ವರದಿಗಳನ್ನು ಕೊಹ್ಲಿ, ವೆಸ್ಟ್ ಇಂಡೀಸ್ ಸರಣಿಯಗೂ ಮುನ್ನವೇ ಅಲ್ಲಗೆಳೆದಿದ್ದರು. ಆದರೂ ಕೆಲ ಅವರು ಈ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಅಭಿಮಾನಿಗಳು ಕ್ಯಾಪ್ಟನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಟೆಸ್ಟ್ ಸರಣಿಯಲ್ಲಿ ರೋಹಿತ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿದ್ದು, ಆರಂಭಿಕ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ರೋಹಿತ್‍ರ ಈ ಪ್ರದರ್ಶನಕ್ಕೆ ತಂಡದ ನಾಯಕರಾಗಿ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ಔಟಾಗಿ ತಂಡದ ಕೊಠಡಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕೊಠಡಿಯ ಬಾಗಿಲನ್ನು ತೆರೆದಿಟ್ಟು ಚಪ್ಪಾಳೆಯೊಂದಿಗೆ ಸ್ವಾಗತ ಕೋರಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೊಹ್ಲಿಯ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಇಬ್ಬರ ನಡುವಿನ ಮನಸ್ತಾಪಕ್ಕೆ ಕೊಹ್ಲಿ ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://twitter.com/ivarunkrishnan4/status/1179768843910209537

    ರೋಹಿತ್ ಶರ್ಮಾರನ್ನು ಟೆಸ್ಟ್ ತಂಡದ ಆರಂಭಿಕರಾಗಿ ಕಣಕ್ಕೆ ಇಳಿಸುವ ಬಗ್ಗೆ ಇದೇ ಸಂದರ್ಭದಲ್ಲಿ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸುವ ಚಿಂತನೆಯನ್ನು ಏಕಾಏಕಿ ಕೈಗೊಂಡಿಲ್ಲ. ಹಲವು ಸಮಯದಿಂದ ಈ ಆಯ್ಕೆ ಬಗ್ಗೆ ಸಮಿತಿ ಚಿಂತನೆ ನಡೆಸಿತ್ತು. ಏಕೆಂದರೆ ರೋಹಿತ್ 2018 ರಿಂದ ಟೀಂ ಇಂಡಿಯಾ ಅಡಿದ್ದ 17 ಟೆಸ್ಟ್ ಪಂದ್ಯಗಳ ಪೈಕಿ ರೋಹಿತ್ ಕೇವಲ 4 ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸ್ಥಾನ ಪಡೆಯಲು ರಹಾನೆ, ಹಾರ್ದಿಕ್ ಪಾಂಡ್ಯ, ಹನುಮ ವಿಹಾರಿ ನಡುವೆಯೇ ಭಾರೀ ಪೈಪೋಟಿ ಉಂಟಾಗಿತ್ತು. ಈ ಸಂದರ್ಭದಲ್ಲಿ ರೋಹಿತ್‍ಗೆ ಆರಂಭಿಕ ಸ್ಥಾನ ನೀಡಿರುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ಏಕಾಏಕಿ ಆರಂಭಿಕರಾಗಿ ಕಣಕ್ಕೆ ಇಳಿಸುವುದರಿಂದ ರೋಹಿತ್ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅವರಿಗೆ ಆರಂಭಿಕರಾಗಿ ಅವಕಾಶ ನೀಡಿ ಆಟಕ್ಕೆ ಹೊಂದಿಕೊಳ್ಳಲು ಸಮಯ ನೀಡಲು ಆಯ್ಕೆ ಸಮಿತಿ ಮುಂದಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

    ರೋಹಿತ್ ಶರ್ಮಾರ ಈ ಕಮ್ ಬ್ಯಾಕ್ ಇನ್ನಿಂಗ್ಸ್‍ಗೆ ಕೊಹ್ಲಿ ಮಾತ್ರವಲ್ಲದೇ ತಂಡದ ಕೋಚ್ ರವಿಶಾಸ್ತ್ರಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿರೊಂದಿಗೆ ಆಟಗಾರರ ಕೊಠಡಿಯಿಂದ ಹೊರ ನಿಂತಿದ್ದ ತಂಡದ ಕೋಚ್ ಬಳಗ ಕೂಡ ಚಪ್ಪಾಳೆಯೊಂದಿಗೆ ರೋಹಿತ್‍ಗೆ ಸ್ವಾಗತ ಕೋರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದಲ್ಲಿ 244 ಎಸೆತಗಳಲ್ಲಿ 72.13 ಸರಾಸರಿಯೊಂದಿಗೆ ರೋಹಿತ್ 176 ರನ್ ಗಳಿಸಿ ಔಟಾಗಿದ್ದರು. ಅಲ್ಲದೇ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರ್ವಾಲ್ ರೊಂದಿಗೆ 217 ರನ್ ಗಳ ಜೊತೆಯಾಟ ನೀಡುವ ಮೂಲಕ ದಾಖಲೆ ಬರೆದಿದ್ದರು.

    https://www.instagram.com/p/B3JQ5Bpgu__/

  • ಮಗು, ಪತ್ನಿಯನ್ನ ಕೊಲೆಗೈದ ಪಾಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ

    ಮಗು, ಪತ್ನಿಯನ್ನ ಕೊಲೆಗೈದ ಪಾಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ

    ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಒಂದು ವರ್ಷದ ಮಗು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಒಡಿಶಾ ಮೂಲದ ಸಕ್ರಜಿತ್ ಭಂಜೆ ತನ್ನ ಪತ್ನಿ ಸುಕ್ಲಾ ಹಾಗೂ ಒಂದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ. ವಿಶಾಖಪಟ್ಟಣ ಜಿಲ್ಲೆಯ ಮಧುರ್ವಾಡಾ ಎಂಬಲ್ಲಿ ಶನಿವಾರ ಈ ದುರಂತ ಸಂಭವಿಸಿದೆ.

    ಒಡಿಶಾ ಮೂಲದ ಸಕ್ರಜಿತ್ ಭಂಜೆ ಸುಕ್ಲಾರನ್ನು 2017ರಲ್ಲಿ ವಿವಾಹವಾಗಿದ್ದ. ಮಗು ಹಾಗೂ ಪತ್ನಿಯನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ ಸಕ್ರಜಿತ್ ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಭಂಜೆ ಆಹಾರ ಇಲಾಖೆಯ ಉದ್ಯೋಗಿಯಾಗಿದ್ದನಂತೆ. ಭಂಜೆ, ಸುಕ್ಲಾ ಹಾಗೂ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಭಂಜೆ ಯಾವ ಕಾರಣಕ್ಕಾಗಿ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿದ್ದಾನೆ. ಆತ್ಮಹತ್ಯೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಹೈದರಾಬಾದ್: ಅಂಕಲ್ ಒಬ್ಬರು ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಬೆನ್ನಲ್ಲೇ ಆಂಧ್ರಪ್ರದೇಶದ ವೈದ್ಯರೊಬ್ಬರು ತೆಲಗು ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಂತೆ ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯ (ಕೆಜಿಎಚ್) ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕೆ ಸೂರ್ಯನಾರಾಯಣ ಅವರು ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ಕೆಜಿಎಚ್‍ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವೈದ್ಯರ ಸೂರ್ಯನಾರಾಯಣ ಅವರು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್

    ದಿವಂಗತ ನಟ ಎ.ನಾಗೇಶ್ವರ ರಾವ್ ಅವರ ಪ್ರಸಿದ್ಧ ತೆಲುಗು ಗೀತೆಗಳಿಗೆ ಡಾ.ಸೂರ್ಯನಾರಾಯಣ್ ನೃತ್ಯ ಮಾಡಿದ್ದಾರೆ. ನಾಗೇಶ್ವರ್ ಅವರನ್ನು ಅನುಕರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಸಹೋದ್ಯೋಗಿಗಳನ್ನು ಮಂತ್ರಮುಗ್ಧಗೊಳಿಸಿದರು.

    ಈ ಕುರಿತು ಮಾತನಾಡಿದ ಅವರು, ನಾನು ಎ.ನಾಗೇಶ್ವರ ರಾವ್ ಅವರ ಅಭಿಮಾನಿ. ನಾನು ಹಲವು ವರ್ಷಗಳಿಂದ ನೃತ್ಯ ಮಾಡುತ್ತಿದ್ದೇನೆ. 11ನೇ ವಯಸ್ಸಿನಿಂದಲೂ ನಾಗೇಶ್ವರ್ ಅವರನ್ನು ಅನುಕರಣೆ ಮಾಡುತ್ತಾ ಬೆಳೆದೆ. 200ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. 1996ರಲ್ಲಿ ಚೆನ್ನೈನಲ್ಲಿ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದೆ. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಗೇಶ್ವರ್ ಅವರು ವಿಮಾನ ಪ್ರಯಾಣ ಕೈಗೊಂಡಿದ್ದರಿಂದ ನಿಲ್ದಾಣಕ್ಕೆ ಬೇಗ ಹೋದರು. ಹೀಗಾಗಿ ನನ್ನ ಡ್ಯಾನ್ಸ್ ಅನ್ನು ಅವರು ನೋಡಲಿಲ್ಲ ಎಂದು ನೆನೆದಿದ್ದಾರೆ.

    ನಾಗೇಶ್ವರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ನನ್ನ ನೃತ್ಯವನ್ನು ನೋಡಿ ಸಂತೋಷಗೊಂಡರು. ನೃತ್ಯವನ್ನು ಅಷ್ಟು ಸುಲಭವಾಗಿ ಕಲೆಯಲು ಸಾಧ್ಯವಿಲ್ಲ ಎಂದು ವೈದ್ಯ ಸೂರ್ಯನಾರಾಯಣ ಹೇಳಿದ್ದಾರೆ.

    ಈ ದಿನಗಳಲ್ಲಿ ನೀವು ಯಾವುದೇ ಹಾಡನ್ನು ಯೂಟ್ಯೂಬ್‍ನಲ್ಲಿ ಮತ್ತೆ ಮತ್ತೆ ನೋಡಬಹುದು. ಆದರೆ ನಾನು ಚಿತ್ರಮಂದಿರಗಳಲ್ಲಿ ಮತ್ತೆ ಮತ್ತೆ ಸಿನಿಮಾಗಳನ್ನು ನೋಡಿ ನೃತ್ಯದ ಎಲ್ಲಾ ಹಂತಗಳನ್ನು ಕಲಿತಿದ್ದೇನೆ. ನನ್ನ ಸ್ಟೆಪ್ ಗಳನ್ನು ಸರಿಪಡಿಸಲು ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದು ತಿಳಿಸಿದರು.