Tag: Visakhapatnam

  • ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು

    ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು

    ನವದೆಹಲಿ: ಕೋವಿಡ್ 19 ಲಾಕ್‍ಡೌನ್ ಸಮಯದಲ್ಲಿ ಪಾದೂರು, ಮಂಗಳೂರಿನಿಂದಾಗಿ ದೇಶಕ್ಕೆ ಸಾವಿರಾರು ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ.

    ಹೌದು. ಮಂಗಳೂರು, ಉಡುಪಿಯ ಪಾದೂರು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಒಟ್ಟು 5.33 ದಶಲಕ್ಷ ಟನ್ ತೈಲವನ್ನು ಸಂಗ್ರಹ ಮಾಡುವ ಮೂಲಕ ದೇಶಕ್ಕೆ 5 ಸಾವಿರ ಕೋಟಿ ರೂ. ಉಳಿತಾಯಗೊಂಡಿದೆ.

    ಕೋವಿಡ್ 19ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿದೆ. ಇದರಿಂದಾಗಿ ಒಟ್ಟು 5 ಸಾವಿರ ರೂ. ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

    ಕೋವಿಡ್19 ಬರುವುದಕ್ಕೆ ಮೊದಲು ಮಂಗಳೂರು, ಪಾದೂರು ಅರ್ಧ ತುಂಬಿದ್ದರೆ, ವಿಶಾಖಪಟ್ಟಣದಲ್ಲಿ ಸ್ವಲ್ಪ ಜಾಗ ಉಳಿದಿತ್ತು. ಈಗ ಸರ್ಕಾರ ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್ ನಿಂದ ತೈಲವನ್ನು ಖರೀದಿಸಿ ಭರ್ತಿ ಮಾಡಿದೆ. 5.33 ದಶಲಕ್ಷ ಟನ್ ಕಚ್ಚಾ ತೈಲ ಸಂಗ್ರಹದಿಂದ ದೇಶದಲ್ಲಿನ 9 ದಿನಗಳ ಬೇಡಿಕೆಯನ್ನು ಈಡೇರಿಸಬಹುದಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ – ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ ಯಾಕೆ?

    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.

    ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.

    ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ  ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.

  • ವಿಶಾಖಪಟ್ಟಣಂ ಅನಿಲ ದುರಂತ – ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್

    ವಿಶಾಖಪಟ್ಟಣಂ ಅನಿಲ ದುರಂತ – ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್

    ನವದೆಹಲಿ: ವಿಶಾಖಪಟ್ಟಣಂನ ಖಾಸಗಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಂಧ್ರಪ್ರದೇಶ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ದೂರು ದಾಖಲಿಸಿಕೊಂಡಿರುವ ಎನ್.ಹೆಚ್.ಆರ್.ಸಿ, ಈ ಸಂಬಂಧ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ಎಫ್‍ಐಆರ್ ದಾಖಲಿಸಿ ನಾಲ್ಕು ವಾರಗಳಲ್ಲಿ ತನಿಖೆಯ ಬೆಳವಣಿಗೆ ತಿಳಿಸಲು ಡಿಜಿಪಿಗೆ ಸೂಚನೆ ನೀಡಿದೆ.

    ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು ಐದು ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ವಿಷಾನಿಲ ಮೂರು ಕಿ.ಮೀಗೂ ಹೆಚ್ಚಿನ ವ್ಯಾಪ್ತಿಯಲ್ಲಿ ವ್ಯಾಪಿಸಿದೆ ಎಂದು ವರದಿಯಾಗಿದ್ದು, ಹಲವರು ರಸ್ತೆಗಳ ಮಧ್ಯೆ ಮಲಗಿದ್ದಾರೆ. ಇನ್ನು ಕೆಲವರು ಉಸಿರಾಟ ತೊಂದರೆ ಎದುರಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.

    ಸದ್ಯ ರಕ್ಷಣಾ ಕಾರ್ಯಾಚರಣೆಯ ಸ್ಥಿತಿ, ಅನಾರೋಗ್ಯಕ್ಕೆ ಒಳಗಾದ ಜನರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ರಾಜ್ಯ ಅಧಿಕಾರಿಗಳು ಒದಗಿಸಿದ ಪರಿಹಾರ ಮತ್ತು ಪುನರ್ವಸತಿ ಸೇರಿದಂತೆ ವಿವರವಾದ ವರದಿಯನ್ನು ನೀಡುವಂತೆ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಅಲ್ಲದೇ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ನಾಲ್ಕು ವಾರಗಳಲ್ಲಿ ಎಫ್‍ಐಆರ್ ದಾಖಲಿಸಿ ಮತ್ತು ತನಿಖೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ತಿಳಿಸಲು ಹೇಳಿದೆ.

    ಈ ವಿಚಾರವನ್ನು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರಲಾಗುವುದು ಎಂದು ಆಯೋಗವು ತಿಳಿಸಿದ್ದು, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ನಿರ್ದಿಷ್ಟ ಕೈಗಾರಿಕಾ ಘಟಕದಲ್ಲಿ ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸಿ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಿದೆ.

  • ವಿಶಾಖಪಟ್ಟಣಂ ದುರಂತಕ್ಕೆ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಸಂತಾಪ

    ವಿಶಾಖಪಟ್ಟಣಂ ದುರಂತಕ್ಕೆ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಸಂತಾಪ

    ಹೈದರಾಬಾದ್: ಭಾರತ ಕ್ರೀಡಾತಾರೆಯರಾದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸಾನಿಯಾ ಮಿರ್ಜಾ ಸೇರಿದಂತೆ ಹಲವು ಕ್ರೀಡಾಪಟುಗಳು ವಿಶಾಖಪಟ್ಟಣಂ ಅನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳು ಹಾಗೂ ಜನರಿಗೆ ಸಂತಾಪ ಸೂಚಿಸಿ ಧೈರ್ಯ ತುಂಬಿದ್ದಾರೆ.

    ಗುರುವಾರ ಬೆಳಗಿನ ಜಾವ ವಿಶಾಖಪಟ್ಟಣಂದಲ್ಲಿ ಘಟನೆ ನಡೆದಿದ್ದು, ಸುಮಾರು 30 ವರ್ಷಗಳ ಹಿಂದೆ ಭೋಪಾಲ್‍ನಲ್ಲಿ ನಡೆದಿದ್ದ ಅನಿಲ ಸೋರಿಕೆ ದುರಂತವನ್ನು ನೆನಪಿಸಿದೆ. ಈವರೆಗೂ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 30 ಮಂದಿ ಸ್ಥಿತಿ ಗಂಭೀರವಾಗಿದೆ. ಅಲ್ಲದೇ 3 ಸಾವಿರಕ್ಕೂ ಹೆಚ್ಚು ಮಂದಿ ದುರಂತದಿಂದ ಸಮಸ್ಯೆ ಎದುರುಸಿದ್ದಾರೆ. ಸಮಯ ಕಳೆದಂತೆ ದುರಂತದಲ್ಲಿ ಮೃತರದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ‘ವಿಶಾಖಪಟ್ಟಣಂ ಗ್ಯಾಸ್ ಲೀಕ್‍ನಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಳಿಗೆ ನನ್ನ ಸಂತಾಪ. ಘಟನೆಯಿಂದ ಬಾಧಿತರಾಗಿರುವ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುತ್ತೇನೆ’ ಎಂದು ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಶಾಖಪಟ್ಟಣ ಗ್ಯಾಸ್ ಲೀಕ್ ಘಟನೆ ನಿಜವಾಗಿಯೂ ದುರದೃಷ್ಟಕರ. ಹಲವು ಜೀವಗಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಮೃತರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಚಿಕಿತ್ಸೆ ಪಡೆಯುತ್ತಿರುವವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

    ವೈಜಾಗ್ ಅನಿಲ ಸೋರಿಕೆ ಘಟನೆ ದುರದೃಷ್ಟಕರ. ವಿಶೇಷವಾಗಿ ಘಟನೆಯಲ್ಲಿ ಸಾವಿಗೀಡಾಗಿರುವ ಕುಟುಂಬಗಳು ಹಾಗೂ ಜನರ ಒಳಿಗಾಗಿ ಪ್ರಾರ್ಥನೆ ಮಾಡುವುದಾಗಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

  • ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

    ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

    – ಚರಂಡಿ, ನಡು ರಸ್ತೆಯಲ್ಲೇ ಬಿದ್ದ ನೂರಾರು ಜನರು

    ವಿಶಾಖಪಟ್ಟಣಂ: ‘ಅಮ್ಮಾ ಎದ್ದೇಳು,  ಅಮ್ಮಾ ಎದ್ದೇಳು’… ‘ಪಾಪು ನಿನಗೇನೂ ಆಗಲ್ಲ, ಕಣ್ಣು ಬೀಡೋ, ಎದ್ದೇಳೋ’ ಎಂದು ನೂರಾರು ಮಕ್ಕಳು-ಪೋಷಕರು ಕಣ್ಣೀರಿಟ್ಟರು. ಅಮ್ಮನನ್ನ ಹಿಡಿದು ಮಗಳು ಗೋಳೋ ಅಂತ ಅತ್ತಳು. ಅಂಗೈಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಂದಮ್ಮನ ಸ್ಥಿತಿ ಕಂಡು ಅಪ್ಪ ಅಸಹಾಯಕರಂತೆ ಚಡಪಡಿಸಿದ ಮನಕಲುಕುವ ದೃಶ್ಯಗಳು ವಿಶಾಖಪಟ್ಟಣಂನಲ್ಲಿ ಕಂಡು ಬಂದವು.

    ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕಾರ್ಖಾನೆಯಿಂದ ಗುರುವಾರ ನಸುಕಿನ ಜಾವ ಅನಿಲ ಸೋರಿಕೆಯಾಗಿದೆ. ಎಲ್‍ಜಿ ಪಾಲಿಮರ್ಸ್ ಇಂಡಸ್ಟ್ರಿಯ ಸ್ಥಾವರದಲ್ಲಿ 2:30 ಗಂಟೆಗೆ ಅಪಘಾತ ಸಂಭವಿಸಿದ್ದು, ಬೆಳಗ್ಗೆ 5:30ರ ಸುಮಾರಿಗೆ ನ್ಯೂಟ್ರಾಲೈಜರ್ ಗಳನ್ನು ಬಳಸಿದ ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು. ಅಷ್ಟೊತ್ತಿಗೆ ಅನಿಲವು 4 ಕಿ.ಮೀ ವ್ಯಾಪ್ತಿಯಲ್ಲಿ 5 ಸಣ್ಣ ಹಳ್ಳಿಗಳಿಗೆ ಹರಡಿತ್ತು. ಅಪಘಾತದಲ್ಲಿ ಈವರೆಗೆ 2 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಟನ್ ವಿಷಾನಿಲ ಸೋರಿಕೆ

    ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್, ಎನ್‍ಡಿಎಂಎ ಮತ್ತು ನೌಕಾಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್‍ಡಿಆರ್‌ಎಫ್ ಡಿಜಿ ಎಸ್‍ಎನ್ ಪ್ರಧಾನ್ ಹೇಳಿದ್ದಾರೆ.  ಇದನ್ನೂ ಓದಿ: ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ

    ವಿಶಾಖಪಟ್ಟಣಂನಿಂದ 30 ಕಿ.ಮೀ ದೂರದಲ್ಲಿರುವ ವೆಂಕಟಪುರಂ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಸಾವಿರಕ್ಕೂ ಹೆಚ್ಚು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. 300 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 25 ಜನರು ವೆಂಟಿಲೇಟರ್ ಗಳಲ್ಲಿದ್ದಾರೆ. 15 ಮಕ್ಕಳ ಸ್ಥಿತಿ ಗಂಭೀರವಾಗಿದೆ.

    https://twitter.com/gunjanm_/status/1258256034222620674

    ಪರಿಸ್ಥಿತಿ ಎಷ್ಟರ ಮಟ್ಟಿಗೆ ಕರಾಳವಾಗಿತ್ತು ಎಂದರೆ ಮೃತ 11 ಜನರಲ್ಲಿ ಇಬ್ಬರು ಭಯದಿಂದಲೇ ಪ್ರಾಣಬಿಟ್ಟಿದ್ದಾರೆ. ಓರ್ವ ಕಂಪನಿಯ ಎರಡನೇ ಮಹಡಿಯಿಂದ ಬಿದ್ದರೆ, ಇನ್ನೊಬ್ಬ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜನರು ಮಕ್ಕಳು, ವೃದ್ಧರನ್ನು ಕರೆದುಕೊಂಡು ಗ್ರಾಮವನ್ನು ಬಿಡಲು ಆರಂಭಿಸಿದರು. ಆದರೆ ಅನೇಕರು ಮಾರ್ಗಮಧ್ಯದಲ್ಲೇ ಪ್ರಜ್ಞೆ ತಪ್ಪಿದರು. ಕೆಲವರು ಚರಂಡಿಗೆ ಬಿದ್ದರೆ, ಇನ್ನೂ ಕೆಲವರು ಬೈಕ್ ನಿಯಂತ್ರಣ ಕಳೆದುಕೊಂಡು ನಡುರಸ್ತೆಯಲ್ಲೇ ಬಿದ್ದಿದ್ದರು. ಇದನ್ನೂ ಓದಿ: ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ

    ಕಾರ್ಖಾನೆಯ ಸುತ್ತಲೂ ಗೊಂದಲ ನಿರ್ಮಾಣವಾಗಿತ್ತು. ಜನರು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡುತ್ತಿದ್ದರು. ಪೊಲೀಸರು, ಭದ್ರತಾ ಸಿಬ್ಬಂದಿ ಜನರ ಸಹಾಯಕ್ಕೆ ನಿಂತರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಮ್ಮ ಜೀವ ಉಳಿಸಲು ಪ್ರಯತ್ನಿಸುತ್ತಿದ್ದರು. ಅನೇಕ ಜನರು ತಲೆತಿರುಗಿ ನೆಲಕ್ಕೆ ಬಿದ್ದಿದ್ದರು.

    ರಸ್ತೆ ಪಕ್ಕದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ತಾಯಿ ನೋಡಿ ಮಗಳು ಕಣ್ಣೀರಾದಳು. ಅಮ್ಮಾ ಎದ್ದೇಳು… ಏಳ್ ಅಮ್ಮಾ ಎಂದು ಹಿಡಿದು ತಾಯಿಯನ್ನ ಎಚ್ಚರಗೊಳಿಸಲು ಯತ್ನಿಸಿದಳು. ಬಳಿಕ ವಿಷವನ್ನು ಕಕ್ಕುವಂತೆ ಎದೆಯನ್ನು ಒತ್ತಿ ಕಣ್ಣೀರಿಟ್ಟಳು. ಆಗ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿ ಎಚ್ಚರಗೊಂಡಳು.

    ಮತ್ತೊಂದು ಕಡೆ ತಂದೆಯೊಬ್ಬ ತನ್ನ ಪುಟ್ಟ ಮಗುವನ್ನು ಅಂಗೈಯಲ್ಲಿ ಹಿಡಿದು ಕಣ್ಣೀರಿಡುತ್ತಿದ್ದ. ‘ಏ ಎದ್ದೇಳೋ… ಲೇ ಪುಟ್ಟಾ ನಿಮಗೆ ಏನೂ ಆಗಲ್ಲ’ ಎಂದು ಧೈರ್ಯ ಹೇಳುತ್ತ ಮಗುವನ್ನು ಹಿಡಿದು ಅಂಬುಲೆಂನ್ಸ್ ಹತ್ತಿ ಆಸ್ಪತ್ರೆಗೆ ಸಾಗಿದರು.

    1984ರ ಡಿಸೆಂಬರ್ 3ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನಲ್ಲಿರುವ ಅಮೆರಿಕನ್ ಕಂಪನಿ ಯೂನಿಯನ್ ಕಾರ್ಬೈಡ್‍ನ ಕಾರ್ಖಾನೆಯಲ್ಲಿ 42 ಸಾವಿರ ಕೆಜಿ ವಿಷಕಾರಿ ಅನಿಲ ಸೋರಿಕೆಯಾಗಿತ್ತು. ಈ ಘಟನೆಯಲ್ಲಿ 3,500 ಜನರು ಬಲಿಯಾಗಿದ್ದರು ಎಂದು ಸರ್ಕಾರ ತಿಳಿಸಿತ್ತು. ಆದರೆ ಈ ಅಪಘಾತದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.

  • ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

    ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

    – 13 ಮಂದಿ ಸಾವು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥ
    – ನಾಯಿ, ಪಕ್ಷಿ, ಹಸುಗಳು ಅಸ್ವಸ್ಥ

    ವಿಶಾಖಪಟ್ಟಣಂ: ಆಂಧ್ರಪ್ರದೇಶದ ರಾಸಾಯನಿಕ ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 13 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.

    ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

    ಎರಡು ಟ್ಯಾಂಕ್‍ಗಳಲ್ಲಿ ಇದ್ದ ಸ್ಪೈರಿನ್ ಎಂಬ ಅನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ವೇಗವಾಗಿ ಹರಡಿದೆ. ಪರಿಣಾಮ ಸುತ್ತಮುತ್ತಲಿನ ಹಳ್ಳಿಯ ಜನ, ಬೆಳಗ್ಗಿನ ವೇಳೆ ವಾಕಿಂಗ್ ಬಂದವರು ಮಕ್ಕಳು ರಸ್ತೆಯಲ್ಲಿ ಓಡಾಡುವವರು ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಜೊತೆಗೆ ಈ ವಿಷ ಅನಿಲ ಸೇವನೆಯಿಂದ ನಾಯಿಗಳು ಮತ್ತು ಹಸುಗಳು ಪಕ್ಷಿಗಳು ಕೂಡ ಸಾವನ್ನಪ್ಪುತ್ತಿವೆ.

    ಈ ಕಾರ್ಖಾನೆ ವಿಶಾಖಪಟ್ಟಣಂ ನಗರದಿಂದ 14 ಕಿಲೋಮೀಟರ್ ದೂರದಲ್ಲಿರುವ ಆರ್.ಆರ್.ವೆಂಕಟಪುರಂನಲ್ಲಿ ಇದ್ದು, ಈ ಕಂಪನಿ ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಕ ಎಲ್.ಜಿ ಕೆಮಿಕಲ್ ಲಿಮಿಟೆಡ್ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಕಂಪನಿಯ ಅಡಳಿತ ಮಂಡಳಿ, ಸೋರಿಕೆ ಹೇಗೆ ಆಯ್ತು ಮತ್ತು ಅದಕ್ಕೆ ನಿಖರ ಕಾರಣವೇನು? ಜನರು ಸಾಯುವುದಕ್ಕೆ ಕಾರಣ ಮತ್ತು ಘಟನೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.

    ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿದೆ. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಸ್ಥಳೀಯ ಯುವಕನೋರ್ವ ಘಟನೆಯ ಬಗ್ಗೆ ವಿವರಿಸಿ, ನಾವು ಬೆಳಗ್ಗೆ ಎದ್ದಾಗ ಗಾಳಿಯಲ್ಲಿ ದಟ್ಟವಾಗಿ ಏನೋ ಕಾಣಿಸಿಕೊಂಡಿತು. ಆ ಸಮಯದಲ್ಲಿ ನಮಗೆ ಉಸಿರಾಡಲು ಕಷ್ಟವಾಯಿತು. ತಕ್ಷಣ ನಾವು ಮನೆಯಿಂದ ಮೂರು ಕಿ.ಮೀ ಓಡಿ ಬಂದಿವೆ. ಆದರೆ ಅದು ತುಂಬ ವೇಗವಾಗಿ ಗಾಳಿಯಲ್ಲಿ ಹರಡಿತು. ಈಗ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾನೆ.

    ಈಗ ಕಾರ್ಖಾನೆಯ ಮೂರು ಕಿ.ಮೀ ಅಂತರದಲ್ಲಿ ಇರುವ ಎಲ್ಲಾ ಜನರನ್ನು ಸ್ಥಳಾಂತರ ಮಾಡಿದ್ದೇವೆ ಎಂದು ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಜೊತೆಗೆ ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಹೀಗಾಗಿ ಸುರಕ್ಷತಾ ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ನಾಗರಿಕರು ಮನೆಗಳಿಂದ ಹೊರಬರದಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.

    ಈ ವಿಚಾರವಾಗಿ ಮಾತನಾಡಿರುವ ವಿಶಾಖಪಟ್ಟಣಂನ ಎಸಿಪಿ ರಾಣಿ, ಇಂದು ಬೆಳಗ್ಗೆ ಸುಮಾರು 4 ಗಂಟೆಗೆ ನಮ್ಮ ಅಧಿಕಾರಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ನಾನು ತಕ್ಷಣ ಅಲ್ಲಿಗೆ ಹೋದೆ. ಅಲ್ಲಿ ಹಲವಾರು ಜನರು ಪ್ರಜ್ಞೆ ಇಲ್ಲದೇ ಬಿದ್ದಿದ್ದರು. ನಾನೇ ಸುಮಾರು 15 ಜನರನ್ನು ಅಂಬುಲೆನ್ಸ್ ಗೆ ಹತ್ತಿಸಿ ಕಳುಹಿಸಿದೆ. ಹಳ್ಳಿಗಳಿಂದ ಜನರು ಓಡಿಬಂದು ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

  • ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ

    ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ

    – ಶಾಸಕರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ

    ವಿಶಾಖಪಟ್ಟಣಂ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಪೊಲೀಸರು ಜನದಡ್ಡನೆ, ವಾಹನಗಳ ಸಂಚಾರ ತಡೆಯುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ ಸೇವೆಗೆ ಆಂಧ್ರಪ್ರದೇಶದ ಶಾಸಕರೊಬ್ಬರು ಫುಲ್ ಫಿದಾ ಆಗಿ ಇನ್ಸ್‌ಪೆಕ್ಟರ್ ಒಬ್ಬರ ಕಾಲಿಗೆ ಮುಟ್ಟಿ ನಮಸ್ಕರಿಸಿದ್ದಾರೆ.

    ಆಂಧ್ರ ಪ್ರದೇಶದ ಅರಕು ಕ್ಷೇತ್ರದ ಶಾಸಕ ಚೆಟ್ಟಿ ಫಲ್ಗುನಾ ವಿಶಾಖಪಟ್ಟಣಂನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಶಾಸಕರ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶಾದ್ಯಂತ ಕಾಲ್‍ಡೌನ್ ಘೋಷಿಸಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೊನಾ ಸೋಂಕಿತರ ಸಂಖ್ಯೆ ಇಂದು 1,700 ಗಡಿ ದಾಟಿದೆ.

  • ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಕಾರವಾರ: ಮೋಹಕ ಜಾಲದಲ್ಲಿ ಬಿದ್ದು ಪಾಕಿಸ್ತಾನಕ್ಕೆ ಭಾರತೀಯ ಯುದ್ಧ ನೌಕೆಗಳ ಚಲನ ವಲನ ಮಾಹಿತಿ ನೀಡುತ್ತಿದ್ದ ಪ್ರಕರಣದ ಸಂಬಂಧ ಮೂವರು ನೌಕಾ ಅಧಿಕಾರಿಗಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಧಿಸಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಆಂಧ್ರಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿರುವ ಈಸ್ಟರ್ನ್ ಕಮಾಂಡ್‍ಗೆ ಸೇರಿದ ರಾಜೇಶ್, ಲೋಕಂಡ್ ಮತ್ತು ನಿರಂಜನ ಎಂಬವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಹನಿಟ್ರ್ಯಾಪ್ ಪ್ರಕರಣದಲ್ಲಿ ಈ ಹಿಂದೆ ನೌಕಾ ನೆಲೆಯ ಎಂಟು ಮಂದಿ ಸೇಲರ್‌ಗಳು ಸಿಕ್ಕಿಬಿದ್ದಿದ್ದರು. ಈ ಪೈಕಿ ಇಬ್ಬರು ಕಾರವಾರದಲ್ಲಿರುವ ನೌಕಾನೆಲೆಗೆ ಸೇರಿದ್ದರು. ಈಗ ಮತ್ತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ) ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಮೋಹಕ ಜಾಲದಲ್ಲಿ ಸಿಲುಕಿಸಿತ್ತು. ಬಳಿಕ ಭಾರತದ ನೌಕಾನೆಲೆ ಹಾಗೂ ಯುದ್ಧ ನೌಕೆಗಳ ಮಾಹಿತಿಯನ್ನು ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿರುವ ತನಿಖಾ ಸಂಸ್ಥೆ ಮೂವರನ್ನು ವಶಕ್ಕೆ ಪಡೆದಿದೆ.

    ನೌಕಾದಳದ ಮಾಹಿತಿ ಸೋರಿಕೆ ಹಿನ್ನೆಲೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಆ್ಯಂಡ್ರಾಯ್ಡ್ ಫೋನ್‍ಗಳನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಗುಪ್ತ ಮಾಹಿತಿ ಹಂಚಿಕೆ ಸಂಬಂಧ ತನಿಖೆ ಸಹ ನಡೆಸಲಾಗುತ್ತಿದೆ.

  • ಕುಲದೀಪ್ ಹ್ಯಾಟ್ರಿಕ್ ವಿಕೆಟ್- ಭಾರತಕ್ಕೆ 107 ರನ್‍ಗಳ ಭರ್ಜರಿ ಜಯ

    ಕುಲದೀಪ್ ಹ್ಯಾಟ್ರಿಕ್ ವಿಕೆಟ್- ಭಾರತಕ್ಕೆ 107 ರನ್‍ಗಳ ಭರ್ಜರಿ ಜಯ

    – 2019ರ ವಿಕೆಟ್ ಪಟ್ಟಿಯಲ್ಲಿ ಶಮಿಗೆ ಅಗ್ರಸ್ಥಾನ

    ವಿಶಾಖಪಟ್ಟಣಂ: ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಕುಲದೀಪ್ ಯಾದವ್ ಹ್ಯಾಟ್ರಿಕ್, ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಶತಕದಿಂದ ಭಾರತವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 107 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

    ವಿಶಾಖಪಟ್ಟಣಂನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನೀಡಿದ್ದ ಬೃಹತ್ ಮೊತ್ತ 388 ರನ್ ಬೆನ್ನಟ್ಟಿದ ವಿಂಡೀಸ್ ಪಡೆ ಶಾಯ್ ಹೋಪ್ 78 ರನ್, ನಿಕೋಲಸ್ ಪೂರನ್ 75 ರನ್ ಚಚ್ಚಿದ್ದರೂ ಅಂತಿಮವಾಗಿ 43.3 ಓವರ್‌ಗಳಲ್ಲಿ 280 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲ ಸಾಧಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್ ಇಂಡೀಸ್ ಭಾರತದ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ 159 ರನ್(138 ಎಸೆತ, 17 ಬೌಂಡರಿ, 5 ಸಿಕ್ಸರ್), ರಾಹುಲ್ 102 ರನ್(104 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53 ರನ್(32 ಎಸೆತ, 3 ಬೌಂಡರಿ, 4 ಸಿಕ್ಸರ್), ರಿಷಬ್ ಪಂತ್ 39 ರನ್(16 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿತ್ತು.

    ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್ ಹಾಗೂ ಎವಿನ್ ಲೂಯಿಸ್ ಅವರನ್ನು ಭಾರತದ ಬೌಲರ್ ಗಳು ಕಟ್ಟಿಹಾಕಿದರು. ಈ ಜೋಡಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ 56 ರನ್ ಗಳಿಸಿತ್ತು. ಆದರೆ ನಂತರ ಓವರ್ ನಲ್ಲಿ ಶಾರ್ದೂಲ್ ಠಾಕೂರ್ ಎವಿನ್ ಲೂಯಿಸ್ ವಿಕೆಟ್ ಪಡೆದು ವಿಂಡೀಸ್ ತಂಡಕ್ಕೆ ಆಘಾತ ನೀಡಿದರು. ಬಳಿಕ ಮೈದಾನಕ್ಕಿಳಿದ ಶಿಮ್ರಾನ್ ಹೆಟ್ಮೆಲರ್ 4 ರನ್ ಹಾಗೂ ರಾಸ್ಟನ್ ಚೇಸ್ 4 ರನ್ ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್‍ಗೆ ಜೊತೆಯಾದ ನಿಕೋಲಸ್ ಪೂರನ್ ಉತ್ತಮ ಜೊತೆಯಾಟ ಕಟ್ಟಿದರು. ಈ ಜೋಡಿಯು ನಾಲ್ಕನೇ ವಿಕೆಟ್‍ಗೆ 106 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು. ಆದರೆ ಸ್ಫೋಟಕ ಬ್ಯಾಟಿಂಗ್ ಮುಂದಾದ ನಿಕೋಲಸ್ ಮೊಹಮ್ಮದ್ ಶಮಿ ಎಸೆದ 30ನೇ ಓವರ್ ವಿಕೆಟ್ ಒಪ್ಪಿಸಿದರು. ನಿಕೋಲಸ್ 75 ರನ್ (47 ಎಸೆತ, 6 ಬೌಂಡರಿ, 6 ಸಿಕ್ಸರ್) ಗಳಿಸಿದರು. ಬಳಿಕ ಮೈದಾಕ್ಕಿಳಿದ ವಿಂಡೀಸ್ ನಾಯಕ ಪೋಲಾರ್ಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 5 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದ್ದಾಗ ಕುಲ್‍ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದು ಪಂದ್ಯಕ್ಕೆ ರೋಚಕ ತಿರುವು ತಂದುಕೊಟ್ಟರು.

    ಶಮಿ ದಾಖಲೆ:
    2019ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‍ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರನ್ನು ಮೊಹಮ್ಮದ್ ಶಮಿ ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆಯುವ ಮೂಲಕ ಟ್ರೆಂಟ್ ಬೌಲ್ಟ್ ಅವರನ್ನು ಸರಿಗಟ್ಟಿದ್ದರು. ಈ ಪಂದ್ಯದಲ್ಲಿ 3 ವಿಕಟ್ ಪಡೆಯುವ ಮೂಲಕ 2019ರಲ್ಲಿ  41 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. 38 ವಿಕೆಟ್ ಪಡೆದಿದ್ದ ಟ್ರೆಂಟ್ ಬೌಲ್ಟ್  ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರನೇ ಪಂದ್ಯ ಭಾನುವಾರ ಒಡಿಶಾದ ಕಟಕ್‍ನಲ್ಲಿ ನಡೆಯಲಿದೆ.

  • ರೋಹಿತ್, ರಾಹುಲ್ ಶತಕ- 12 ಎಸೆತದಲ್ಲಿ 55 ರನ್ ಚಚ್ಚಿದ ಶ್ರೇಯಸ್, ಪಂತ್

    ರೋಹಿತ್, ರಾಹುಲ್ ಶತಕ- 12 ಎಸೆತದಲ್ಲಿ 55 ರನ್ ಚಚ್ಚಿದ ಶ್ರೇಯಸ್, ಪಂತ್

    – ವಿಂಡೀಸಿಗೆ 388 ರನ್ ಗುರಿ
    – ಸಿಕ್ಸರ್ ಬೌಂಡರಿಗಳ ಸುರಿಮಳೆಗೈದ ಟೀಂ ಇಂಡಿಯಾ
    – 34 ಬೌಂಡರಿ, 16 ಸಿಕ್ಸರ್

    ವಿಶಾಖಪಟ್ಟಣಂ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅಅವರ ದ್ವಿಶತಕದ ಜೊತೆಯಾಟ ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸಿಗೆ 388 ರನ್‍ಗಳ ಕಠಿಣ ಗುರಿಯನ್ನು ನೀಡಿದೆ.

    ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ವಿಂಡೀಸ್ ಬೌಲರ್‌ಗಳ ದಾಳಿಯನ್ನು ಧ್ವಂಸ ಮಾಡಿದ್ದು 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ.

    ರೋಹಿತ್ ಶರ್ಮಾ 159 ರನ್(138 ಎಸೆತ, 17 ಬೌಂಡರಿ, 5 ಸಿಕ್ಸರ್), ರಾಹುಲ್ 102 ರನ್(104 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53 ರನ್( 32 ಎಸೆತ, 3 ಬೌಂಡರಿ, 4 ಸಿಕ್ಸರ್), ರಿಷಬ್ ಪಂತ್ 39 ರನ್(16 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡಿಸ್ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೊತೆಯಾಟವನ್ನು ಮುರಿಯಲು ವಿಫಲವಾಯಿತು. ತಾಳ್ಮೆಯ ಆಟ ಪ್ರರ್ದಶಿಸಿದ ಈ ಜೋಡಿಯು ಮೊದಲ ವಿಕೆಟ್‍ಗೆ 222 ಎಸೆತಗಳಲ್ಲಿ 227 ರನ್‍ಗಳ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿತು. ರೋಹಿತ್ ಶರ್ಮಾ 107 ಎಸೆತಗಳಲ್ಲಿ 28ನೇ ಶತಕ ಹೊಡೆದರು. ಈ ಬೆನ್ನಲ್ಲೇ ಕೆ.ಎಲ್.ರಾಹುಲ್ ಶತಕ ದಾಖಲಿಸಿ ವಿಕೆಟ್ ಒಪ್ಪಿಸಿದರು. 104 ಎಸೆತಗಳಲ್ಲಿ ಕೆ.ಎಲ್.ರಾಹುಲ್ (8 ಬೌಂಡರಿ, 3 ಸಿಕ್ಸರ್) 102 ರನ್ ಗಳಿಸಿದರು. ಬಳಿಕ ಮೈದಾಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಕೊಹ್ಲಿ ಏಕದಿನ ಪಂದ್ಯದಲ್ಲಿ 13 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

    ರನ್ ಏರಿದ್ದು ಹೇಗೆ?:
    ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿಯು ಇನ್ನಿಂಗ್ಸ್ 10ನೇ ಓವರ್ ಮುಕ್ತಾಯಕ್ಕೆ 55 ರನ್ ಪೇರಿಸಲು ಶಕ್ತವಾಗಿತ್ತು. 20ನೇ ಓವರ್ ಮುಕ್ತಾಯ ವೇಳೆಗೂ ಅಷ್ಟಾಗಿ ರನ್ ಏರಿಕೆ ಕಂಡು ಬರಲಿಲ್ಲ. ಈ ವೇಳೆಗೆ ರೋಹಿತ್ 41 ರನ್ ಹಾಗೂ ರಾಹುಲ್ 54 ರನ್‍ಗಳ ಸಹಾಯದಿಂದ ಭಾರತ 98 ರನ್ ಪೇರಿಸಿತ್ತು. ಬಳಿಕ ನಿಧಾನಗತಿಯಲ್ಲಿ ರನ್ ಏರಿಕೆಯಲ್ಲಿ ಕೊಂಚ ಬಲಾವಣೆ ಕಂಡಿತ್ತು. ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಆರಂಭಿಕ ಬ್ಯಾಟ್ಸ್‌ಮನ್ ಗಳು ಇನ್ನಿಂಗ್ಸ್ ನ 30ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತವನ್ನು 170 ರನ್‍ಗೆ ಏರಿಸಿದರು.

    ಇನ್ನಿಂಗ್ಸ್ ನ 34ನೇ ಓವರ್ ನಲ್ಲಿ ರೋಹಿತ್ ಶರ್ಮಾ ಬೌಂಡರಿ, ಸಿಕ್ಸ್ ಸಿಡಿಸಿದರು. ಈ ಓವರ್ ನಲ್ಲಿ 13 ರನ್ ಬಾರಿಸಿ, ನಂತರದ ಓವರ್ ನ 5ನೇ ಎಸೆತದಲ್ಲಿ ಒಂದು ರನ್ ಗಳಿಸಿ, 200 ರನ್‍ಗಳ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 40ನೇ ಓವರ್ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ ಭಾರತ 260ರನ್ ಪೇರಿಸಿತು. ಈ ವೇಳೆಗೆ 140 ರನ್ ಗಳಿಸಿದ್ದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಪರಿಣಾಮ 41ನೇ ಓವರ್ ನಲ್ಲಿ 9 ರನ್, 42ನೇ ಓವರ್ ನಲ್ಲಿ 13 ರನ್ ಸಹಾಯದಿಂದ ತಂಡದ ಮೊತ್ತ ಭರ್ಜರಿ ಏರಿಕೆ ಕಂಡಿತು.

    ರೋಹಿತ್ ಶರ್ಮಾ ಇನ್ನಿಂಗ್ಸ್ 43ನೇ ಓವರ್ ನ 3 ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 138 ಎಸೆತಗಳಲ್ಲಿ (17 ಬೌಂಡರಿ, 5 ಸಿಕ್ಸರ್) 159 ರನ್ ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿಕ್ಸರ್ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಭಾರತದ ನೆಲದಲ್ಲಿ 186 ಸಿಕ್ಸರ್ ಸಿಡಿಸಿದರೆ, ಹಿಟ್‍ಮ್ಯಾನ್ ರೋಹಿತ್ 187 ಸಿಕ್ಸರ್ ದಾಖಲೆ ಬರೆದಿದ್ದಾರೆ. ಧೋನಿ 186 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ 116 ಇನ್ನಿಂಗ್ಸ್ ಗಳಲ್ಲಿ 187 ಸಿಕ್ಸರ್ ಸಿಡಿಸಿದ್ದಾರೆ.

    ಸಿಕ್ಸರ್ ಸುರಿಮಳೆ ಆರಂಭ:
    3ನೇ ವಿಕೆಟಿಗೆ ರೋಹಿತ್ ಶರ್ಮಾ ಶ್ರೇಯಸ್ ಅಯ್ಯರ್ 36 ಎಸೆತದಲ್ಲಿ 60 ರನ್ ಪೇರಿಸಿದರೆ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಜೊತೆಯಾಟದಲ್ಲಿ ಸಿಕ್ಸರ್ ಬೌಂಡರಿಗಳ ಸುರಿಮಳೆ ಆರಂಭವಾಯಿತು. ಇವರಿಬ್ಬರು ನಾಲ್ಕನೇಯ ವಿಕೆಟಿಗೆ ಕೇವಲ 25 ಎಸೆತಗಳಲ್ಲಿ 73 ರನ್ ಚಚ್ಚಿದರು. 45ನೇ ಓವರಿನಲ್ಲಿ 14 ರನ್ ಬಂದರೆ, ಕಾಟ್ರೆಲ್ ಎಸೆದ 46ನೇ ಓವರಿನಲ್ಲಿ ರಿಷಬ್ ಪಂತ್ 24 ರನ್(6,0,4,6,4,4) ಹೊಡೆದರೆ, ರೊಸ್ಟಬನ್ ಚೇಸ್ ಎಸೆದ 47ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ 4 ಸಿಕ್ಸರ್ 1 ಬೌಂಡರಿ ಹೊಡೆದ ಪರಿಣಾಮ ಈ ಓವರಿನಲ್ಲಿ 31 ರನ್ ಬಂದಿತ್ತು. 400 ರನ್ ಗಳಿಸುವ ತವಕದಲ್ಲಿದ್ದ ತಂಡ ಇದ್ದರೂ ಕೊನೆಯ 3 ಓವರ್ ಗಳಲ್ಲಿ 24 ರನ್ ಬಂದಿದ್ದರಿಂದ ಈ ಆಸೆ ಈಡೇರಲಿಲ್ಲ. ಇತರೇ ರೂಪದಲ್ಲಿ ಭಾರತಕ್ಕೆ 18 ರನ್ ಬಂದಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 58 ಎಸೆತ
    100 ರನ್ – 121 ಎಸೆತ
    150 ರನ್ – 153 ಎಸೆತ
    200 ರನ್ – 203 ಎಸೆತ
    250 ರನ್ – 236 ಎಸೆತ
    300 ರನ್ – 367 ಎಸೆತ
    350 ರನ್ – 281 ಎಸೆತ
    387 ರನ್ – 300 ಎಸೆತ

    ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
    ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದರು. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದರು. ಎಲ್ಲಾ ಮಾದರಿಯಲ್ಲಿ 362 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 237 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 409 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.

  • ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಬುಮ್ರಾ, ಪೃಥ್ವಿ ಶಾ ಎಂಟ್ರಿ

    ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಬುಮ್ರಾ, ಪೃಥ್ವಿ ಶಾ ಎಂಟ್ರಿ

    ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮತ್ತು ಉದಯೋನ್ಮುಖ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ವೆಸ್ಟ್ ಸ್ಥಾನ ಪಡೆಯಲಿದ್ದಾರೆ.

    ವಿಶಾಖಪಟ್ಟಣಂನಲ್ಲಿ ಡಿಸೆಂಬರ್ 18 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ಬುಮ್ರಾ ಹಾಗೂ ಪೃಥ್ವಿ ಶಾ ನೆಟ್‍ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಬಿಸಿಸಿಐ ಪಂದ್ಯಕ್ಕೂ ಮುನ್ನವೇ ಈ ಇಬ್ಬರು ಆಡಗಾರರ ಫಿಟ್‍ನೆಸ್ ಪರೀಕ್ಷೆ ಮಾಡಲಿದೆ.

    ಭಾರತ ತಂಡವು ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ. ಹೀಗಾಗಿ ಪ್ರವಾಸಕ್ಕೂ ಮುನ್ನ ಈ ಇಬ್ಬರು ಆಟಗಾರರ ಫಿಟ್‍ಎಂದು ಘೋಷಿಸಬೇಕೆಂದು ಆಯ್ಕೆ ಸಮಿತಿ ನಿರ್ಧರಿಸಿದೆ.

    ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ವಿಶಾಖಪಟ್ಟಣದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಅನುಭವಿ ಬ್ಯಾಟ್ಸ್‌ಮನ್‌ ಗಳು ಇರಲಿದ್ದಾರೆ. ಬೌಲಿಂಗ್ ಪಡೆ ಬಲ ಹೆಚ್ಚಿಸಲು ಬುಮ್ರಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಅವರ ಬೆನ್ನಿನ ಗಾಯವನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸರಣಿ ಆಡಲಿದೆ. ಈ ಎರಡೂ ಸರಣಿಯಲ್ಲಿ ಬುಮ್ರಾ ಅವರನ್ನು ಟೀಂ ಇಂಡಿಯಾದಲ್ಲಿ ಸೇರಿಸಲಾಗುವುದು ಎನ್ನಲಾಗುತ್ತಿದೆ. ಜನವರಿ 5ರಿಂದ 10 ರವರೆಗೆ ಶ್ರೀಲಂಕಾ ವಿರುದ್ಧ ಭಾರತವು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಬಳಿಕ ಜನವರಿ 14ರಿಂದ 19ರವರೆಗೆ ಮೂರು ಏಕದಿನ ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಬುಮ್ರಾ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಲಾಗಿತ್ತು. ಆದರೆ ಬೆನ್ನು ನೋವಿನಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ವಿಶ್ವಕಪ್ ನಂತರ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಪಂದ್ಯಗಳಿಂದ ಬುಮ್ರಾ ವಿಶ್ರಾಂತಿ ಪಡೆದಿದ್ದರು.

    ಮತ್ತೊಂದೆಡೆ, ಪೃಥ್ವಿ ಶಾ ಕಳೆದ ವರ್ಷ ನವೆಂಬರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ನಂತರ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಗಾಯಗೊಂಡಿದ್ದರು. ಹೀಗಾಗಿ ಅವರು ಆಸ್ಟ್ರೇಲಿಯಾ ಪ್ರವಾಸದಿಂದ ತವರಿಗೆ ಹಿಂತಿರುಗಿದ್ದರು.

    ವೆಸ್ಟ್ ಇಂಡೀಸ್-ಎ ತಂಡದ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯಕ್ಕಾಗಿ ಭಾರತ-ಎ ತಂಡದಲ್ಲಿ ಶಾ ಅವರನ್ನು ಸೇರಿಸಲಾಗಿತ್ತು. ಆದರೆ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿ ಕಳೆದ 8 ತಿಂಗಳಿನಿಂದ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಯುವ ಆಟಗಾರ ಪೃಥ್ವಿ ಶಾ, ಸೈಯದ್ ಮಷ್ತಾಕ್ ಅಲಿ ಟ್ರೋಫಿಯಲ್ಲಿ ಕಮ್‍ಬ್ಯಾಕ್ ಮಾಡಿದ್ದರು. ಬುಧವಾರ ನಡೆದ ರಂಜಿ ಟ್ರೋಫಿಯಲ್ಲಿ ಅವರು ದ್ವಿಶತಕ ಬಾರಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿ ರಿಸರ್ವ್ ಓಪನರ್ ಆಗಿ ಪೃಥ್ವಿ ಶಾ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

    ಅಂದಹಾಗೇ ಶಾ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಗಳಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ ರಾಜ್ ಕೋಟ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 134 ರನ್ ಸಿಡಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿದ್ದರು. ಆ ಬಳಿಕ ಐಪಿಎಲ್‍ನಲ್ಲಿ ಡೆಲ್ಲಿ ತಂಡದ ಪರ ಆಡಿ 16 ಪಂದ್ಯಗಳಲ್ಲಿ 353 ರನ್ ಗಳಿಸಿದ್ದರು.