Tag: virupapura

  • ವಿರುಪಾಪುರ ಗಡ್ಡಿಯಲ್ಲಿ ಬೋನಿಗೆ ಬಿದ್ದ ಚಿರತೆ

    ವಿರುಪಾಪುರ ಗಡ್ಡಿಯಲ್ಲಿ ಬೋನಿಗೆ ಬಿದ್ದ ಚಿರತೆ

    ಕೊಪ್ಪಳ: ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿಯಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಮರಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

    ಕಳೆದ ಮೂರ್ನಾಲ್ಕು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಈಗಾಗಲೇ ಚಿರತೆ ದಾಳಿಗೆ ಇಬ್ಬರು ಯುವಕರು ಬಲಿಯಾಗಿದ್ದು,ಜನ-ಜಾನುವಾರುಗಳ ಮೇಲೂ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು.

    ಚಿರತೆ ಸೆರೆಹಿಡಿಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ ಅರಣ್ಯ ಇಲಾಖೆ ಕಳೆದ ಎರಡು ತಿಂಗಳಲ್ಲಿ ಆನೆಗೊಂದಿ ಭಾಗದಲ್ಲಿ ಮೂರು ಚಿರತೆಗಳನ್ನು ಸೆರೆಹಿಡಿದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆಗೆ ಅರವಳಿಕೆ ನೀಡಿ, ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಗೆ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಜ್ ಮೇಟಿ ತಿಳಿಸಿದ್ದಾರೆ.

  • ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆ- ಮೋಜು ಮಸ್ತಿಗೆ ಪೊಲೀಸ್ ಬ್ರೇಕ್

    ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆ- ಮೋಜು ಮಸ್ತಿಗೆ ಪೊಲೀಸ್ ಬ್ರೇಕ್

    ಕೊಪ್ಪಳ: ಹೊಸ ವರ್ಷಕ್ಕೆ ಮದ್ಯ ಅಮಲಿನಲ್ಲಿ ತೇಲಲು ತುದ್ದಿಗಾಲ ಮೇಲೆ ನಿಂತಿದ್ದ ವಿದೇಶಿ ಪ್ರವಾಸಿಗರಿಗೆ ಪೋಲಿಸ್ ಇಲಾಖೆ ಬ್ರೇಕ್ ಹಾಕಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಸ್ಟೋರೆಂಟ್ ಮಾಲೀಕರು ತಯಾರಿ ನಡೆಸಿದ್ದರು. ರೆಸ್ಟೋರೆಂಟ್‍ಗೆ ಬರುವ ಪ್ರವಾಸಿಗರಿಗೆ 2ರಿಂದ 3ಸಾವಿರ ರೂ.ವರೆಗೂ ದರ ನಿಗದಿ ಮಾಡಿದ್ದರು. ಆದರೆ ಸಂಭ್ರಮಾಚರಣೆ ಹೆಸರಿನಲ್ಲಿ ಮೋಜು ಮಸ್ತಿಗೆ ಯಾವುದೇ ಅವಕಾಶ ಇಲ್ಲ ಎಂದು ಡಿವೈಎಸ್‍ಪಿ ಡಾ.ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿರುಪಾಪುರ ಗಡ್ಡೆ ಸುತ್ತಮುತ್ತ 40 ಕ್ಕೂ ಹೆಚ್ಚು ರೆಸ್ಟೋರೆಂಟ್‍ಗಳಿದ್ದು. ಗಡ್ಡಿಯಲ್ಲಿ ಇರುವ ರೆಸಾರ್ಟ್ ಮಾಲೀಕರಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿ ಮಾತನಾಡಿದ ಡಿವೈಎಸ್‍ಪಿ ಡಾ.ಚಂದ್ರಶೇಖರ್ ಅವರು, ಪ್ರತಿವರ್ಷ ಹೊಸವರ್ಷದ ಆಚರಣೆಯನ್ನು ವಿದೇಶಿ ಮಾದರಿಯಲ್ಲಿ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದರೆ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಕಳೆದ ವರ್ಷ ಕೆಲವು ರೆಸಾರ್ಟ್‍ಗಳ ಮಾಲೀಕರು ಕಾನೂನು ಪ್ರಕಾರ ತಪ್ಪು ಮಾಡಿ ಶಿಕ್ಷೆಯನ್ನು ಅನುಭವಿಸಿದ್ದರು. ಈ ವರ್ಷವೂ ತಪ್ಪು ಮಾಡಿದರೆ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಒಳ್ಳೆಯ ಸಂಪ್ರದಾಯವಿದೆ. ಬೇರೆ ದೇಶದ ಸಂಸ್ಕೃತಿಯನ್ನು ಇಲ್ಲಿ ಆಚರಣೆ ಮಾಡಿದರೆ ತಪ್ಪು. ಏಕೆಂದರೆ ನಿಮಗೆ ಅದು ವ್ಯವಹಾರ ಮಾತ್ರವಷ್ಟೇ. ಆದರೆ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ವಿದೇಶಿಯರಿಗೆ ಬೈಕ್ ನೀಡುವ ಮುನ್ನ ಅವರ ಬಳಿ ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಗಿ ಇರಬೇಕು. ರೆಸಾರ್ಟ್ ಮಾಲೀಕರು ಪರವಾನಗಿ ಇರುವವರಿಗೆ ಮಾತ್ರ ವಾಹನ ನೀಡಿ. ಜೊತೆಗೆ ಹೆಲ್ಮೆಟ್ ನೀಡುವುದು ಕಡ್ಡಾಯ. ಈ ಬಗ್ಗೆ ರೆಸಾರ್ಟ್ ಎದುರು ನಾಮ ಫಲಕ ಹಾಕಬೇಕು. ದೇಶ ಮತ್ತು ವಿದೇಶಿ ಪ್ರವಾಸಿಗರ ಮಾಹಿತಿ ಮತ್ತು ದಾಖಲೆಗಳು ಪಡೆಯಬೇಕು ಎಂದು ನಿಯಮಗಳ ಅರಿವು ಮೂಡಿಸಿದರು.

    ದೇಶ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರು ಅರೆನಗ್ನವಾಗಿ ಬಟ್ಟೆ ಧರಿಸಿ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಋಷಿಮುಖ ಪರ್ವತ ಸೇರಿದಂತೆ ಪ್ರಸಿದ್ಧ ದೇವಸ್ಥಾನದಲ್ಲಿ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಮುಜುಗರವಾಗುತ್ತದೆ. ಅನೈತಿಕ ಚಟುವಟಿಕೆಗಳು ಕಂಡು ಬಂದರೆ ಕಾನೂನು ರೀತಿ ಕ್ರಮಕೈಕೊಳ್ಳುತ್ತೇವೆ. ಈಗಾಗಲೇ ವಿರುಪಾಪುರ ಗಡ್ಡಿಯಲ್ಲಿ ಕೆಲವರು ಗಂಜ ಮತ್ತು ಮದ್ಯ ಮಾರಾಟ ಮಾಡಿ ಪೊಲೀಸರ ಕೈಗೆ ಸಿಕ್ಕಿ ಪ್ರಕರಣ ದಾಖಲಾಗಿದೆ. ಮೋಜು ಮಸ್ತಿಗೆ ಯಾವುದೇ ಅವಕಾಶ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಸುರೇಶ್ ತಳವಾರ, ಪಿಎಸ್‍ಐ ದೊಡ್ಡಪ್ಪ.ಜೆ ಸೇರಿದಂತೆ ಇತ್ತರರು ಉಪಸ್ಥಿತರಿದ್ದರು.

  • ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ತಂಡದ ಐವರೂ ಸೇಫ್

    ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ತಂಡದ ಐವರೂ ಸೇಫ್

    ಕೊಪ್ಪಳ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಐವರು ರಕ್ಷಣಾ ಸಿಬ್ಬಂದಿಯನ್ನೂ ರಕ್ಷಣೆ ಮಾಡಲಾಗಿದೆ.

    ಘಟನೆ ನಡೆದ ಕೂಡಲೇ ನಾಲ್ವರನ್ನು ರಕ್ಷಿಸಲಾಗಿದ್ದು, ಆ ಬಳಿಕ ಗಿಡ ಹಿಡಿದುಕೊಂಡಿದ್ದ ಸಿಬ್ಬಂದಿಯನ್ನು ಕೂಡ ರಕ್ಷಿಸುವ ಮೂಲಕ ಐವರು ರಕ್ಷಣಾ ಸಿಬ್ಬಂದಿ ಕೂಡ ಸೇಫಾಗಿದ್ದಾರೆ.

    ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಐವರಲ್ಲಿ ಓರ್ವ ಸಿಬ್ಬಂದಿಗೆ ಗಿಡ ಆಸರೆ ಆಗಿದೆ. ಸುಮಾರು 2 ಗಂಟೆ ಕಾಲ ಗಿಡ ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಎನ್‍ಡಿಆರ್‍ಎಫ್ ತಂಡ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ.

    ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ತುಂಗಭದ್ರಾ ನದಿ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಎನ್‍ಡಿಆರ್‍ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ಸಿಬ್ಬಂದಿ ಲೈಫ್ ಜಾಕೆಟ್ ಹಾಕಿದ್ದರಿಂದ ಸೇಫ್ ಆಗಿದ್ದರು. ದುರ್ಘಟನೆ ನಡೆದ ಕೂಡಲೇ ಸ್ಥಳೀಯರು, ಇತರ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್ ಕೂಡಲೇ ಜೀವ ಉಳಿಸಿದವರಿಗಾಗಿ ಹುಡುಕಾಟ ನಡೆಸಿತ್ತು. ಮೊದಲು ಮೂವರನ್ನು ರಕ್ಷಿಸಿದ ಎನ್‍ಡಿಆರ್‍ಎಫ್ ತಂಡ ಈಗ ಉಳಿದ ಇಬ್ಬರನ್ನು ಕೂಡ ರಕ್ಷಿಸಿದೆ.

  • ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು?

    ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು?

    – ಜೀವ ಉಳಿಸಿದವರಿಗಾಗಿ ಹುಡುಕಾಟ

    ಕೊಪ್ಪಳ: ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ರಕ್ಷಣಾ ಸಿಬ್ಬಂದಿಯೇ ನೀರುಪಾಲಾದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ನಡೆದಿದೆ.

    ತುಂಗಭದ್ರಾ ನದಿ ಪ್ರವಾಹದಲ್ಲಿ ಬೋಟ್ ಮುಳುಗಿ ಐವರು ರಕ್ಷಣಾ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಎನ್‍ಡಿಆರ್‍ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರುಪಾಲಾಗಿದ್ದಾರೆ.

    ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಿಬ್ಬಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಕಳೆದ 10 ದಿನಗಳಿಂದ ಎನ್‍ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.