Tag: virendra kumar khatik

  • ಪಂಚರ್ ಹಾಕುತ್ತಿದ್ದ ವ್ಯಕ್ತಿ ಈಗ ಮೋದಿ ಸಂಪುಟದಲ್ಲಿ ಸಚಿವ!

    ಪಂಚರ್ ಹಾಕುತ್ತಿದ್ದ ವ್ಯಕ್ತಿ ಈಗ ಮೋದಿ ಸಂಪುಟದಲ್ಲಿ ಸಚಿವ!

    ಭೋಪಾಲ್: ನೂತನ ಕೇಂದ್ರ ಸಚಿವರಾಗಿ ಆಯ್ಕೆಯಾಗಿರೋ 63 ವರ್ಷದ ವಿರೇಂದ್ರ ಕುಮಾರ್ ಖಟಿಕ್ ಅವರು ಬೆಳೆದು ಬಂದ ದಾರಿಯ ಬಗ್ಗೆ ಕೇಳಿದ್ರೆ ನೀವೂ ಅಚ್ಚರಿ ಪಡುತ್ತೀರಾ.

    ಹೌದು. ತೀವ್ರ ಕುತೂಹಲದ ಬಳಿಕ ಕೇಂದ್ರ ಸಚಿವ ಸಂಪುಟ ಭಾನುವಾರ ಪುನರಾಚನೆಯಾಗಿದ್ದು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವರಾಗಿ ವಿರೇಂದ್ರ ಕುಮಾರ್ ಖಟಿಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಆದರೆ ಬಡಕುಟುಂಬದಿಂದ ಬಂದಿರೋ ಇವರು ಬಾಲ್ಯದಿಂದಲೇ ತನ್ನ ತಂದೆಯ ಶಾಪ್ ನಲ್ಲಿ ಸೈಕಲ್ ರಿಪೇರಿ ಮಾಡುತ್ತಿದ್ದರು. ಇದೀಗ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ವಿರೇಂದ್ರ ಕುಮಾರ್ ಖಟಿಕ್ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಮಧ್ಯಪ್ರದೇಶದ ಟಿಕಮಗಡನ್ ಸಂಸದರಾಗಿ ಆಯ್ಕೆಯಾಗಿದ್ದರು. ಆ ಬಳಿಕ 1996ರ ವರೆಗೆ ಸಂಸದರಾಗಿ ತನ್ನ ಜವಾಬ್ದಾರಿ ನಿರ್ವಹಿಸಿದ್ದರು.

    ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ತಾನು ಬೆಳದು ಬಂದ ಕಷ್ಟದ ಹಾದಿಯನ್ನು ಹೇಳಿಕೊಳ್ಳುವ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ರು. ಬಡ ಕುಟುಂಬವಾಗಿದ್ದರಿಂದ ಜೀವನ ನಡೆಸಲು ತಂದೆ ಸೈಕಲ್ ರಿಪೇರಿ ಮಾಡೋ ಶಾಪ್ ಒಂದನ್ನು ಆರಂಭಿಸಿದ್ದರು. 5ನೇ ತರಗತಿ ಓದುತ್ತಿರೋ ಸಂದರ್ಭದಲ್ಲೇ ತಾನೂ ಅಂಗಡಿಯಲ್ಲಿ ಕುಳಿತು ಅಪ್ಪನಿಗೆ ಸಹಾಯ ಮಾಡುತ್ತಿದ್ದೆ. ಬಳಿಕ ಸೈಕಲ್ ರಿಪೇರಿ ಮಾಡುವುದನ್ನು ಬೇಗನೆ ಕಲಿತು ಇಡೀ ಅಂಗಡಿಯ ಜವಾಬ್ದಾರಿಯನ್ನು ತೆಗೆದುಕೊಂಡೆ. ಅದರಲ್ಲೇ ಕೆಲಸ ಮಾಡಿಕೊಂಡು ಸಾಗರದ ಡಾ. ಹರಿ ಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ಕೂಡ ಪೂರ್ಣಗೊಳಿಸಿರುವುದಾಗಿ ಹೇಳಿದ್ರು.

    ಇದನ್ನೂಓದಿ: ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಬಳಿಕ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು `ಬಾಲಕಾರ್ಮಿಕ’ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್ ಡಿ ಪದವಿ ಪಡೆದ್ರು. ಆರ್‍ಎಸ್‍ಎಸ್ ಕಾರ್ಯಕರ್ತರ ಮಗನಾಗಿರೋ ವಿರೇಂದ್ರ ಕುಮಾರ್ ಬಾಲ್ಯದಿಂದಲೇ ಆರ್‍ಎಸ್‍ಎಸ್, ಎಬಿವಿಪಿ, ಬಿಜೆವೈಎಂ ಮುಂತಾದವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಚುನಾವಣಾ ಅಭಿಯಾನದ ಸಂದರ್ಭದಲ್ಲೂ ಕೂಡ ಇವರು ಮೊದಲು ಮಾರ್ಗದ ಬದಿಯಲ್ಲಿರೋ ಸೈಕಲ್ ರಿಪೇರಿ ಮಾಡೋ ಅಂಗಡಿಗಳಿಗೆ ತೆರಳಿ ವ್ಯವಹಾರದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಈ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು.

    ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹೆಗಲಿಗೆ ದೇಶದ ರಕ್ಷಣೆಯ ಹೊಣೆ

    ಒಟ್ಟಿನಲ್ಲಿ ಸ್ಕೂಟರ್ ನಲ್ಲೇ ಪ್ರಯಾಣಿಸುತ್ತಿರುವ ಇವರ ಸರಳ ವ್ಯಕ್ತಿತ್ವ, ಸಾಮಾನ್ಯರಲ್ಲಿ ಸಾಮಾನ್ಯನಾಗೋ ಇವರ ಗುಣ ಜನಸಾಮಾನ್ಯರನ್ನು ಆಕರ್ಷಿಸಿದ್ದು, ಇದೀಗ ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲೂ ಸ್ಥಾನ ಪಡೆದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಮೆಚ್ಚುಗೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?