ದಾವಣಗೆರೆ: ಅಪಘಾತವಾಗಿ ಗಾಯಾಳು ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿಯೇ ನರಳಾಡಿದ್ರೂ ಅಲ್ಲಿಯ ಜನರು ಆಸ್ಪತ್ರೆಗೆ ಸೇರಿಸದೇ ಒಂದು ಗಂಟೆಗಳ ಕಾಲ ನೋಡುತ್ತಾ ನಿಂತ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಂಚಿಪುರ ಗ್ರಾಮದ ಬಳಿ ನಡೆದಿದೆ.
ಕಳೆದ ಮೂರು ದಿನಗಳಿಂದ ನಡೆದ ಘಟನೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಕಂಚಿಪುರ ರಸ್ತೆಯಲ್ಲಿ ಬೈಕ್ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದ.

ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಸಿದ್ದೇಶ್(26) ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನಾಗಿದ್ದು, ಪತ್ನಿಯ ಮನೆಗೆ ಬೈಕಿನಲ್ಲಿ ಹೋದಾಗ ಘಟನೆ ನಡೆದಿದೆ. ಅಪಘಾತವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿದ್ದೇಶ್ ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ನರಳುತ್ತಿದ್ದರು ಅಲ್ಲಿನ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸುವ ಬದಲು ಅಪಘಾತವನ್ನು ನೋಡಿಕೊಂಡು ನಿಂತಿದ್ದಾರೆ.
ನಂತರ ಸಿದ್ದೇಶ್‍ನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿ ತದನಂತರ ಉಡುಪಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv





















