ವಾಷಿಂಗ್ಟನ್: ನಾಸಾದ ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಮಹಿಳೆ ಭಾರತೀಯ ಮೂಲದವರಾಗಿದ್ದಾರೆ. ಇದೀಗ ಇವರು ಹಣೆಗೆ ಬಿಂದಿ ಇಟ್ಟಿರುವ ದೇಸಿ ಲುಕ್‍ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕಂಟ್ರೋಲ್ ರೂಂನಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಸ್ವಾತಿ ಕಪ್ಪು ಬಣ್ಣದ ಬಿಂದಿ ಧರಿಸಿದ್ದರು. ಇದು ಅನೇಕ ಭಾರತೀಯರ ಖುಷಿಗೆ ಕಾರಣವಾಗಿದೆ. ಅಮೆರಿಕದಲ್ಲೇ ಇರಲಿ, ಎಷ್ಟೇ ದೊಡ್ಡ ವಿಜ್ಞಾನಿಯೇ ಆಗಿರಲಿ ಸ್ವಾತಿ ತಾನು ಭಾರತಿಯೇ, ಭಾರತದ ಸಂಸ್ಕøತಿ ಹೊಂದಿದವಳು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಗಣ್ಯರು ಕೂಡ ಮುಖದ ಮೇಲಿನ ತೇಜಸ್ಸಿನ ಬಿಂದಿಗೆ ಶಹಬ್ಬಾಸ್ ಎಂದಿದ್ದಾರೆ. ನಾಸಾ ಶೇರ್ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಸಾ ಕಳುಹಿಸಿದ ಪರ್ಸೀವರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. ಈ ರೋವರ್ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವಾ ಎಂಬ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಲಿದೆ. ಈ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಸ್ವಾತಿ ಮೋಹನ್ ಬೆಂಗಳೂರು ಮೂಲದವರಾಗಿದ್ದಾರೆ. ಡಾ. ಸ್ವಾತಿ ಮೋಹನ್ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ನಾಸಾದಲ್ಲಿ ‘ಜಿಎನ್ ಅಂಡ್ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು.
ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕ, ಭಾರತದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರೋವರ್ ಯಶಸ್ಸಿನಿಂದ ಫುಲ್ ಖುಷ್ ಆಗಿರುವ ನಾಸಾ, ಕಂಟ್ರೋಲ್ ರೂಂನಲ್ಲಿದ್ದ ಸಿಬ್ಬಂದಿ ಪ್ರತಿಕ್ರಿಯೆಯ ವೀಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಇವುಗಳಲ್ಲಿ ಸ್ವಾತಿ ಮೋಹನ್ ಹಣೆ ಮೇಲೆ ಇಟ್ಟಿದ್ದ ಬಿಂದಿ ಹೈಲೈಟ್ ಆಗಿದೆ.