Tag: viral video

  • ನೀವು ಅತ್ತರೆ ನಮಗೂ ಅಳು ಬರುತ್ತೆ – ಹೆಚ್‍ಡಿಕೆಗೆ ಧೈರ್ಯ ತುಂಬಿದ ಹಾಸನ ಬಾಲಕಿ

    ನೀವು ಅತ್ತರೆ ನಮಗೂ ಅಳು ಬರುತ್ತೆ – ಹೆಚ್‍ಡಿಕೆಗೆ ಧೈರ್ಯ ತುಂಬಿದ ಹಾಸನ ಬಾಲಕಿ

    ಹಾಸನ: ಕೊಡಗು ಜಿಲ್ಲೆಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಬಾಲಕ ಸಿಎಂ ಕುಮಾರಸ್ವಾಮಿ ಅವರ ಗಮನಸೆಳೆದ ಬೆನ್ನಲ್ಲೇ, ಹಾಸನ ಬಾಲಕಿಯೊಬ್ಬಳು ಎಚ್‍ಡಿಕೆ ಕಣ್ಣೀರು ಹಾಕಿದ್ದು ಕಂಡು ಧೈರ್ಯ ತುಂಬಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆ ಹೊಳೇನರಸೀಪುರ ತಾಲೂಕಿನ ಮಳಲಿ ಗ್ರಾಮದ ಬಾಲಕಿ ಅರುಂಧತಿ, ವಿಡಿಯೋದಲ್ಲಿ ತಮ್ಮ ಗ್ರಾಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾಳೆ. ಕರ್ನಾಟಕ ಸಿಎಂ ಆಗಿ ನೀವು ಅಧಿಕಾರ ವಹಿಸಿಕೊಂಡ ಬಳಿಕ ಉತ್ತಮ ಮಳೆಯಾಗಿದ್ದು, ನಮ್ಮ ಗ್ರಾಮದಲ್ಲೂ ಉತ್ತಮ ಬೆಳೆಯಾಗಿದೆ. ನಾನು ಹುಟ್ಟಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ ತುಂಬಿತ್ತು. ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕೆರೆ ತುಂಬಿದೆ. ನಿಮಗೆ ಅಧಿಕಾರ ಕೊಟ್ಟಿರುವುದು ಕನ್ನಡಿಗರು, ನಿಮ್ಮ ಪರ ಹೋರಾಟ ಮಾಡಲು ಕರ್ನಾಟಕ ರೈತ ಮಕ್ಕಳು ಜೊತೆಗಿರುತ್ತಾರೆ ಎಂದು ಅಭಯ ನೀಡಿದ್ದಾಳೆ.

    ಇದೇ ವೇಳೆ ರೈತ ಸಾಲಮನ್ನಾ ಕುರಿತು ಪ್ರಸ್ತಾಪ ಮಾಡಿರುವ ಬಾಲಕಿ, ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿದ್ದು, ಉತ್ತಮ ಬೆಳೆ ಆಗುವ ನಿರೀಕ್ಷೆ ಇದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಮ್ಮ ಸಾಲಮನ್ನಾ ನಮಗೆ ಬೇಡ. ಸಾಲಮನ್ನಾ ಬೇಡ ನಮ್ಮ ಕುಟುಂಬ ತುಂಬ ಚೆನ್ನಾಗಿದೆ. ನೀವು ಆರೋಗ್ಯದಿಂದ ಇರುವುದು ನಮಗೇ ಬೇಕು. ನೀವು ಅತ್ತರೆ ನಮಗೆ ಬೇಜಾರಾಗುತ್ತೆ ನಮಗೂ ಆಳುಬರುತ್ತೆ. ನೀವು ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ಆದ್ದರಿಂದ ಹೆಚ್ಚು ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ. ನಗರದಲ್ಲಿ ಉತ್ತಮ ವಾತಾವರಣ ಲಭ್ಯವಿಲ್ಲ. ಗ್ರಾಮಗಳು ಹಚ್ಚ ಹಸಿರಾಗಿದ್ದು, ಒಳ್ಳೆಯ ವಾತಾವರಣವಿದೆ ಎಂದು ಹೇಳಿದ್ದಾಳೆ.

  • ಮೂಷಿಕ ವರ್ಸಸ್ ನಾಗರಾಜ: ಇಬ್ಬರ ನಡುವಿನ ಫೈಟ್ ನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

    ಮೂಷಿಕ ವರ್ಸಸ್ ನಾಗರಾಜ: ಇಬ್ಬರ ನಡುವಿನ ಫೈಟ್ ನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

    ಬೀಜಿಂಗ್: ಹಾವು ಮತ್ತು ಮಂಗೂಸಿ ಒಂದನ್ನೊಂದು ಕಂಡರೆ ಒಂದಕ್ಕೆ ಆಗುವುದಿಲ್ಲ ಎಂದು ಸಾಕಷ್ಟು ಕಥೆಗಳಲ್ಲಿ ಕೇಳಿದ್ದೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಂಗೂಸಿ ಮತ್ತು ಹಾವುಗಳ ನಡುವೆಯ ರೋಚಕ ಕಾದಾಟವನ್ನು ನೋಡಿರುತ್ತೇವೆ. ಕಳೆದ ಒಂದು ವಾರದಿಂದ ಇಲಿ ಮತ್ತು ನಾಗರ ಹಾವಿನ ಮಧ್ಯೆ ಕಾದಾಟ ನಡೆದಿರುವ ವಿಡಿಯೋ ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹೌದು, ಜುಲೈ 2 ರಂದು ಚೀನಾದ ಪುನಿಂಗ್ ಎಂಬಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಇಲಿ ತನ್ನ ಶಕ್ತಿ ಮೀರಿ ಹಾವಿನೊಂದಿಗೆ ಸೆಣಸಾಟ ನಡೆಸುವುದನ್ನು ಕಾಣಬಹುದಾಗಿದೆ. ಆದ್ರೆ ಹಾವು ತನ್ನ ಶತ್ರು ಇಲಿಯ ವಿರುದ್ಧ ಸೋಲು ಒಪ್ಪಿಕೊಂಡಂತೆ ಚಲನಾ ರಹಿತವಾಗಿ ಬಿದ್ದಿದೆ.

    ಇಲಿ ತನ್ನ ಬಾಯಿಯಿಂದ ಹಾವಿನ ಬಾಯಿಯನ್ನು ಕಚ್ಚುತ್ತಾ ಅತ್ತಿಂದಿತ್ತ ಎಳೆದಾಡುತ್ತಿದೆ. ಕೊನೆಗೆ ಹಾವಿನ ಬಾಯಿಯಿಂದ ಸ್ವಲ್ಪ ರಕ್ತ ಬಂದಿದೆ. ಇದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊನೆಗೆ ಇಲಿ ತನ್ನ ಛಲ ಬಿಡದೇ ಹಾವನ್ನು ಪೊದೆಯೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಭಯಬೀತವಾದ ಹಾವು ಕೂಡಲೇ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ. ಆದ್ರೆ ಇಲಿ ಹಾವನ್ನು ಪೊದೆಯೊಳಗೆ ಎಳೆದುಕೊಂಡು ಹೋಗಿದೆ.

    ಈ ವಿಡಿಯೋವನ್ನು ಚೀನಾದ ಫೇಸ್ ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದ್ದು, 9,800 ಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದಿದೆ. 2017ರಲ್ಲಿ ಎಸಿಯಿಂದ ಹೊರ ಬಂದ ಹಾವು ಮನೆಯಲ್ಲಿರುವ ಇಲಿಯನ್ನು ನುಂಗುವ ವಿಡಿಯೋ ವೈರಲ್ ಆಗಿತ್ತು. ಆದರೆ ಅದಕ್ಕೆ ತದ್ವಿರುದ್ಧವಾದ ವಿಡಿಯೋ ವೈರಲ್ ಆಗಿದೆ.

    https://www.facebook.com/pearvideocn/videos/1066984593460223/

  • ಆಟೋದಲ್ಲಿಯೇ ಕಾರನ್ನ ಹೊತ್ತೊಯ್ದ!- ವಿಡಿಯೋ ವೈರಲ್

    ಆಟೋದಲ್ಲಿಯೇ ಕಾರನ್ನ ಹೊತ್ತೊಯ್ದ!- ವಿಡಿಯೋ ವೈರಲ್

    ಬೀಜಿಂಗ್: ನೋ ಪಾರ್ಕಿಂಗ್ ಕಡೆ ವಾಹನವನ್ನು ನಿಲ್ಲಿಸಿದ್ರೆ ಪೊಲೀಸರು ಬಂದು ಹೊತ್ತುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಆಟೋದಲ್ಲಿ ಕಾರ್ ಹೊತ್ತೊಯ್ದ ವಿಚಿತ್ರ ಘಟನೆಯೊಂದು ನಡೆದಿದೆ.

    ಈ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಕಪ್ಪು ಸೆಡಾನ್ ಕಾರನ್ನು ಆಟೋದ ಮೇಲಿಟ್ಟು ಹೆದ್ದಾರಿಯಲ್ಲಿಯೇ ಸಂಚರಿಸಿದ್ದಾನೆ.

    ಆಟೋಗಿಂತ ಕಾರ್ ಹತ್ತು ಪಟ್ಟು ಭಾರವಾಗಿತ್ತು. ಈ ಘಟನೆ ಅಪಾಯಕಾರಿಯಾಗಿದ್ದು, ರಸ್ತೆಯಲ್ಲಿ ಓಡಾಡುವವರಿಗೂ ಪ್ರಾಣ ಹಾನಿಯನ್ನು ಉಂಟು ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಆಟೋ ಚಾಲಕ ಈ ರೀತಿ ಆಟೋ ಮೇಲೆ ಕಾರನ್ನ ಇಟ್ಟು ಚಲಾಯಿಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಆದ್ದರಿಂದ ಆತನಿಗೆ 1300 ಯುವಾನ್ (13,624 ರೂ.) ದಂಡವನ್ನು ವಿಧಿಸಲಾಗಿದೆ. ಆದರೆ ಚಾಲಕ ಯಾಕೆ ಈ ರೀತಿಯಾಗಿ ಮಾಡಿದ್ದಾನೆ ಎಂದು ವರದಯಾಗಿಲ್ಲ.

  • ಶವದ ಜೊತೆಯಲ್ಲಿ ಕಾರನ್ನು ಇರಿಸಿ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

    ಶವದ ಜೊತೆಯಲ್ಲಿ ಕಾರನ್ನು ಇರಿಸಿ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

    ಬೀಜಿಂಗ್: ಅಂತ್ಯಕ್ರಿಯೆ ವೇಳೆ ಶವದ ಜೊತೆ ಕಾರನ್ನು ಇರಿಸಿ ಸಮಾಧಿ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಚೀನಾದ ಬೋಡಿಂಗ್ ನಗರದಲ್ಲಿ ನಡೆದಿದೆ. ಈ ಘಟನೆ ಮೇ 28ರಂದು ನಡೆದಿದ್ದು, ಅಂತ್ಯಕ್ರಿಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಾವನ್ನಪ್ಪಿದ ವ್ಯಕ್ತಿಗೆ ಕಾರುಗಳೆಂದರೆ ಬಲು ಇಷ್ಟ, ಹಾಗಾಗಿ ಆತ ಸಾಯುವ ಮುನ್ನ ನನ್ನ ಸಮಾಧಿಯಲ್ಲಿ ಪ್ರೀತಿಯ ಕಾರನ್ನು ಇರಿಸಬೇಕೆಂದು ಕೊನೆಯ ಆಸೆಯನ್ನು ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದ. ವ್ಯಕ್ತಿಯ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಶವದ ಜೊತೆಯಲ್ಲಿ ಕಾರನ್ನು ಇರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ಸಿಲ್ವರ್ ಬಣ್ಣದ ಹುಂಡೈ ಸೋನಾಟ ಕಾರನ್ನು ಶವದ ಪಕ್ಕದಲ್ಲಿಯೇ ದೊಡ್ಡ ಹಳ್ಳ ತೆಗೆದು ಮುಚ್ಚಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಸಾವನ್ನಪ್ಪಿದ ವ್ಯಕ್ತಿ ಕಾರುಗಳ ಮೇಲೆ ಅತಿಯಾದ ವ್ಯಾಮೋಹವನ್ನು ಹೊಂದಿದ್ದನು. ಹಾಗಾಗಿ ಆತನ ಕೊನೆಯ ಆಸೆಯಂತೆ ಕಾರನ್ನು ಶವದ ಪಕ್ಕದಲ್ಲಿಯೇ ಇರಿಸಿ ಅಂತ್ಯಕ್ರಿಯೆ ಮಾಡಲಾಯ್ತು ಎಂದು ಹೆಸರು ಹೇಳದ ಸ್ಥಳೀಯ ಹಿರಿಯ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಪುಣ್ಯಕ್ಕೆ ಆತ ವಿಮಾನಗಳನ್ನು ಇಷ್ಟ ಪಟ್ಟಿರಲಿಲ್ಲ. ಒಂದು ವೇಳೆ ಆತನಿಗೆ ವಿಮಾನಗಳು ಇಷ್ಟವಾಗಿದ್ರೆ, ಅದನ್ನೇ ಶವದ ಪಕ್ಕದಲ್ಲಿ ಇರಿಸಬೇಕಾಗುತ್ತಿತ್ತು ಎಂದು ವಿಡಿಯೋ ನೋಡಿದ ಹಲವರು ಕಮೆಂಟ್ ಮಾಡಿದ್ದಾರೆ.

  • ಹೂ ಕಿತ್ತಿದ್ದಕ್ಕೆ ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ನಿರ್ದಯಿ ಸೊಸೆ!- ವಿಡಿಯೋ ವೈರಲ್

    ಹೂ ಕಿತ್ತಿದ್ದಕ್ಕೆ ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ನಿರ್ದಯಿ ಸೊಸೆ!- ವಿಡಿಯೋ ವೈರಲ್

    ಕೋಲ್ಕತ್ತಾ: ಸೊಸೆ ತನ್ನ ಅತ್ತೆಗೆ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆಯೊಂದು ದಕ್ಷಿಣ ಕೋಲ್ಕತ್ತಾದ ಗರಿಯಾ ಎಂಬ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..

    ಅತ್ತೆ ಯಶೋದಾ ಪಾಲ್ ಅವರಿಗೆ ಸೊಸೆ ಸ್ವಪ್ನ ಪಾಲ್ ಹೊಡೆಯುವ ದೃಶ್ಯವನ್ನು ನೆರೆಮನೆಯವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?: ಆರೋಪಿ ಸೊಸೆ ಸ್ವಪ್ನ ಪಾಲ್ ತನ್ನ ಅತ್ತೆ 75 ವರ್ಷದ ಯಶೋದಾ ಅವರ ಕೂದಲನ್ನು ಎಳೆದಾಡಿ ಮುಖಕ್ಕೆ ಹೊಡೆದಿದ್ದಾಳೆ. ಈ ದೃಶ್ಯವನ್ನು ನೆರೆಮನೆಯರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಕೆಲ ಗಂಟೆಗಳಲ್ಲೇ ಈ ವಿಡಿಯೋವನ್ನು 25 ಸಾವಿರ ಮಂದಿ ಶೇರ್ ಮಾಡಿದ್ದಾರೆ.

    ನನ್ನ ಅನುಮತಿಯಿಲ್ಲದೇ ಯಾಕೆ ಹೂ ಕಿತ್ತೆ ಅಂತ ಕಿರುಚಾಡಿಕೊಂಡ ಸೊಸೆ, ವಯಸ್ಸು ನೋಡದೇ ಅತ್ತೆಗೆ ಚೆನ್ನಾಗಿ ಥಳಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಹಲವು ಮಂದಿ ಸೊಸೆಯ ವರ್ತನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಸೊಸೆಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

    ವಯೋವೃದ್ಧೆ ಯಶೋದಾ ಪಾಲ್ ಅವರಿಗೆ ಮರೆವಿನ ಕಾಯಿಲೆ ಇದೆ. ಹೀಗಾಗಿ ಅವರು ಸೊಸೆಯ ಥಳಿತಕ್ಕೊಳಗಾಗಿದ್ದಾರೆ. ತಮ್ಮ ಗಾರ್ಡನ್ ನಿಂದ ಹೂ ಕೀಳುವಾಗ ಸೊಸೆಯ ಅನುಮತಿ ಪಡೆಯಲಿಲ್ಲ. ಇದರಿಂದ ಸಿಟ್ಟಿಗೆದ್ದ ಸೊಸೆ, ಅತ್ತೆಯ ಮೇಲೆ ಕ್ರೂರ ವರ್ತನೆ ತೋರಿದ್ದಾಳೆ. ಅಲ್ಲದೇ ಅತ್ತೆಗೆ ಪ್ರತಿನಿತ್ಯ ಸೊಸೆ ದೈಹಿಕ ಹಿಂಸೆ ಕೊಡುತ್ತಿದ್ದಾಳೆ. ಯಶೋದಾ ಪಾಲ್ ಅವರ ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು ಅಂತ ಕೋಲ್ಕತ್ತಾ ಪೊಲೀಸರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ಸ್ಡ್ರೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ತೆ ಯಶೋದಾ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಸೊಸೆಯನ್ನು ಪೊಲೀಸರು ಬುಧವಾರ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

     

     

  • ಆಟ ಆಡಲೆಂದು 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದ ಬಾಲಕಿ!

    ಆಟ ಆಡಲೆಂದು 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದ ಬಾಲಕಿ!

    ಬೀಜಿಂಗ್: ಬಾಲಕಿಯೊಬ್ಬಳು ಆಟ ಆಡುತ್ತಾ 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ನೈಋತ್ಯ ಚೀನಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಬಾಲಕಿ ಕಿಟಕಿಗೆ ಅಳವಡಿಸಲಾಗಿದ್ದ ಪ್ರೇಮ್ ಹಿಡಿದುಕೊಂಡು ಜೋತು ಬಿದ್ದಿದ್ದನ್ನು ಕಂಡ ಪಕ್ಕದ ಕಟ್ಟಡದ ಜನರು ಮೊಬೈಲ್‍ನಲ್ಲಿ ಎಲ್ಲ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ. ಕಿಟಕಿಯ ಹೊರಭಾಗದಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಒಳಗಿನಿಂದ ಪೋಷಕರು ಎಳೆದುಕೊಂಡು ರಕ್ಷಿಸಿದ್ದಾರೆ. 30ನೇ ಅಂತಸ್ತಿನ ಕಿಟಿಕಿ ಅಂದ್ರೆ ಬರೋಬ್ಬರಿ ನೆಲದಿಂದ ಬರೋಬ್ಬರಿ 295 ಅಡಿಗಳ ಎತ್ತರದಲ್ಲಿ ಬಾಲಕಿ ನೇತಾಡುತ್ತಿದ್ದಳು.

    ಹತ್ತಿರದ ಕಟ್ಟಡದಲ್ಲಿದ್ದ ಜನರು ತಾವು ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ಜನರು ಬಾಲಕಿಯ ಪೋಷಕರ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮನೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಮೇಲೆ ಗಮನವನ್ನು ಇಟ್ಟಿರಬೇಕು ಅಂತಾ ಕೆಲವರು ಸಲಹೆ ನೀಡಿದ್ರೆ, ಒಂದು ವೇಳೆ ಬಾಲಕಿ ಬಿದ್ದು ಸಾವನ್ನಪ್ಪಿದ್ರೆ, ಒಬ್ಬ ತಾಯಿ ತನ್ನ ಮಗಳನ್ನು ಕಳೆದುಕೊಳ್ಳುತ್ತಿದ್ದಳು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=AuPF3PgdBSs

  • ಅಂಗಡಿ ಶಟರ್ ಎತ್ತದೇ ಒಳ ನುಗ್ಗಿ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ!

    ಅಂಗಡಿ ಶಟರ್ ಎತ್ತದೇ ಒಳ ನುಗ್ಗಿ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ!

    ಬೀಜಿಂಗ್: ಅಂಗಡಿಗಳಿಗೆ ಎಷ್ಟೇ ಭದ್ರತೆ ನೀಡಿದ್ರೂ, ಕಳ್ಳರು ತಮ್ಮ ಕರಾಮತ್ತು ತೋರಿಸ್ತಾರೆ. ಕೆಲವೊಮ್ಮೆ ಕಳ್ಳರು ಚಾಲಾಕಿತನದಿಂದ ಎಲ್ಲಿಯೂ ಸುಳಿವು ನೀಡದೇ, ಸದ್ದು ಆಗದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾರೆ.

    ಇದೇ ರೀತಿಯಲ್ಲಿ ದಕ್ಷಿಣ ಚೀನಾದ ದೊಂಗ್ಗೌನ್ ಎಂಬ ನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿದ್ದು, ಕಳ್ಳ ಅಂಗಡಿ ಶಟರ್ ಸಹ ಎತ್ತದೇ ಅಂಗಡಿಯೊಳಗೆ ನುಗ್ಗಿದ್ದಾನೆ. ಕಳ್ಳನ ಎಲ್ಲ ಚಲನವಲನಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ವಿಡಿಯೋದಲ್ಲಿ ಏನಿದೆ?: ಸಾಧಾರಣ ಮೈ ಕಟ್ಟಿನ ವ್ಯಕ್ತಿಯೊಬ್ಬ ಅಂಗಡಿ ಮುಂದೆ ಬಂದು ನಿಲ್ತಾನೆ. ಅಂಗಡಿಯ ಶಟರ್‍ಗೆ ಹಾಕಿದ ಬೀಗ ಮುರಿಯಲು ಯತ್ನಿಸದೇ, ನಿಧಾನವಾಗಿ ಶಟರ್ ಕೆಳಗಿರುವ ಜಾಗದಲ್ಲಿ ನುಸುಳಿಕೊಂಡು ಒಳಹೋಗಿದ್ದಾನೆ. ಅಂಗಡಿ ಪ್ರವೇಶಿಸಿದ ಕೂಡಲೇ ಸೈರನ್ ಬಂದ್ ಮಾಡಿ, ಚಿನ್ನಾಭರಣಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದ ದಾರಿಯಲ್ಲಿ ಹಿಂದಿರುಗಿ ಹೋಗಿದ್ದಾನೆ.

    ಕಳ್ಳ ಕೇವಲ ಬೆಲೆಬಾಳುವ ಚಿನ್ನಾಭರಣ, ವಜ್ರದ ನೆಕ್ಲೇಸ್‍ಗಳನ್ನು ಮಾತ್ರ ಕದ್ದಿದ್ದಾನೆ. ಅಂದಾಜು 53 ಸಾವಿರ ಡಾಲರ್ (36 ಲಕ್ಷ ರೂ.ಗೂ ಅಧಿಕ) ಬೆಲೆಬಾಳುವ ಆಭರಣಗಳು ಕಳ್ಳತನವಾಗಿವೆ ಎಂದು ಚಿನ್ನದಂಗಡಿ ಮಾಲೀಕರು ತಿಳಿಸಿದ್ದಾರೆ.

  • ಕರ್ತವ್ಯನಿರತ ಎಸ್‍ಪಿಗೆ ಅವಾಜ್ ಹಾಕಿದ ಬಿಜೆಪಿ ಎಂಎಲ್‍ಎ

    ಕರ್ತವ್ಯನಿರತ ಎಸ್‍ಪಿಗೆ ಅವಾಜ್ ಹಾಕಿದ ಬಿಜೆಪಿ ಎಂಎಲ್‍ಎ

    ಲಕ್ನೋ: ಉತ್ತರಪ್ರದೇಶ ರಾಜ್ಯದ ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಕರ್ತವ್ಯ ನಿರತ ಎಸ್‍ಪಿಗೆ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪೊಲೀಸ್ ಅಧಿಕಾರಿ ಶಾಸಕರನ್ನು ಗುರುತಿಸಲು ವಿಫಲವಾಗಿದ್ದರಿಂದ ಸಿಎಂ ಯೋಗಿ ಆದಿತ್ಯನಾಥ್‍ರ ನಿವಾಸ ಪ್ರವೇಶಕ್ಕೆ ನಿರ್ಬಂಧ ಹಾಕಿದ್ರು. ಇದರಿಂದ ಕೋಪಗೊಂಡ ಶಾಸಕ ಹರ್ಷವರ್ಧನ್ ‘ತುಮ್ ಲಾತೋ ಕೆ ಭೂತ್ ಹೋ, ಲಾತೋಂ ಸೇ ಹಿ ಮಾನತೇ ಹೈ’ (ಕೇವಲ ಅಹಿಂಸೆಯ ಮಾತುಗಳು ಮಾತ್ರ ನಿಮಗೆ ಅರ್ಥವಾಗುತ್ತದೆ) ಎಂದು ನಿಂದಿಸುವ ಮೂಲಕ ಅವಾಜ್ ಹಾಕಿದ್ದಾರೆ.

    ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ (ಉತ್ತರ) ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಷವರ್ಧನ್ ಬಾಜಪೇಯಿ ಪೊಲೀಸ್ ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಗೇಟ್ ಬಳಿಯೇ ತಮ್ಮನ್ನು ತಡೆದಿದ್ದರಿಂದ ಕೋಪಗೊಂಡ ಶಾಸಕರು ಸಾರ್ವಜನಿಕವಾಗಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

  • ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ಬೀಜಿಂಗ್: ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ ವಧು ಮೇಲೆ ಹೂಗುಚ್ಛ ಎಸೆಯುವುದು ಒಂದು ಸಂಪ್ರದಾಯ. ಆದ್ರೆ ಚೀನಾದಲ್ಲಿ ನಡೆದ ಮದುವೆಯಲ್ಲಿ ವಧು ಮೇಲೆಸೆದ ಹೂ ಗುಚ್ಛ ಮೇಲ್ಚಾವಣಿಗೆ ತಾಗಿದೆ. ಮೇಲ್ಚಾವಣಿಗೆ ಅಲಂಕಾರಿಕವಾಗಿ ಜೋಡಿಸಲಾಗಿದ್ದ ಟೈಲ್ಸ್ ಗಳು ಕುಸಿದು ಬಿದ್ದಿದೆ.

    ವಧು ಹೂಗುಚ್ಛ ಎಸೆದ ಮೇಲ್ಚಾವಣಿ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸಾಂದರ್ಭಿಕ ಚಿತ್ರ

    ಟೈಲ್ಸ್ ಗಳು ಕುಸಿದು ಬೀಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಟೈಲ್ಸ್ ಗಳು ಬಿದ್ದಿದರಿಂದ ಕೆಲವು ಅತಿಥಿಗಳು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.

    ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ, ವಧು ಕೈಯಲ್ಲಿ ಸುಂದರವಾದ ಹೂವಿನ ಗುಚ್ಛವೊಂದು ಇರುತ್ತದೆ. ವಧು ತನ್ನ ಮದುವೆ ಬಳಿಕ ಕೈಯಲ್ಲಿರುವ ಹೂಗುಚ್ಛವನ್ನು ಮೇಲೆಸೆಯುತ್ತಾರೆ. ಮೇಲೆಸೆದ ಹೂಗುಚ್ಛವನ್ನು ಹಿಡಿದವರ ಮದುವೆ ಅದೇ ವರ್ಷದಲ್ಲಿ ಆಗುತ್ತೆ ಎಂಬ ನಂಬಿಕೆ ಇದೆ.

    https://www.facebook.com/shanghaiist/videos/10156905046776030/

  • ಆರೋಪಿಯನ್ನ ಹಿಡಿಯಲು ಸಿಂಪಲ್ ಟೆಕ್ನಿಕ್ ಬಳಸಿದ ವಯೋವೃದ್ಧ-ವಿಡಿಯೋ ನೋಡಿ

    ಆರೋಪಿಯನ್ನ ಹಿಡಿಯಲು ಸಿಂಪಲ್ ಟೆಕ್ನಿಕ್ ಬಳಸಿದ ವಯೋವೃದ್ಧ-ವಿಡಿಯೋ ನೋಡಿ

    ಕೊಲಂಬೊ: ಪೊಲೀಸರು ಶಂಕಿತ ಆರೋಪಿಯನ್ನು ಬೆನ್ನಟ್ಟಿ ಬರುವಾಗ ಮಾರ್ಗ ಮಧ್ಯೆ ನಿಂತಿದ್ದ ವೃದ್ಧ ವ್ಯಕ್ತಿಯೊಬ್ಬ ಆತನನ್ನು ಬಂಧಿಸಲು ಸಿಂಪಲ್ ಟೆಕ್ನಿಕ್ ಬಳಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಬಿಲ್ ಎಂಬವರೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರಿಗೆ ಸಹಕರಿಸಿದ ವಯೋವೃದ್ಧರು. ಏಪ್ರಿಲ್ 3ರಂದು ಬಿಲ್ ತಮ್ಮ ಮೊಮ್ಮಗಳೊಂದಿಗೆ ನಗರದ ಗೃಂಥಾಲಯಕ್ಕೆ ಆಗಮಿಸಿದ್ದರು. ಗೃಂಥಾಲಯದಿಂದ ಹಿಂದಿರುವ ವೇಳೆ ಪೊಲೀಸ್ ವಾಹನದ ಸೈರನ್ ಕೇಳಿಸಿದ್ದರಿಂದ ರಸ್ತೆ ದಾಟದೇ ಅಲ್ಲಿಯೇ ನಿಂತುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಬಿಲ್ ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆ ಗೃಂಥಾಲಯದ ಕಟ್ಟಡದ ಮುಂಭಾಗದಲ್ಲಿಯೇ ನಿಂತಿದ್ದಾರೆ. ಎಡಗಡೆಯಿಂದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದನ್ನು ನೋಡಿದ್ದಾರೆ. ಯುವಕ ತಮ್ಮ ಹತ್ತಿರ ಬರುತ್ತಿದ್ದಂತೆ ಒಂದು ಹೆಜ್ಜೆ ಹಿಂದೆ ಬಂದು ಅವನಿಗೆ ಕಾಲು ಅಡ್ಡ ಹಾಕಿ ಬೀಳಿಸಿದ್ದಾರೆ. ವೇಗದಲ್ಲಿ ಓಡಿ ಬರ್ತಿದ್ದ ಆರೋಪಿ ಆಯತಪ್ಪಿ ಕೆಲ ದೂರ ಹೋಗಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಲ್, ಗೃಂಥಾಲಯದಿಂದ ಹೊರ ಬಂದಾಗ ಪೊಲೀಸ್ ಸೈರನ್ ಕೇಳಿಸಿತು. ಎಡಗಡೆಯಿಂದ ಒಬ್ಬ ಓಡಿ ಬುರತ್ತಿದ್ದನ್ನು ನೋಡಿ ಪೊಲೀಸರಿಗೆ ಸಹಾಯ ಮಾಡುವ ಉದ್ದೇಶಕ್ಕಾಗಿ ಕಾಲನ್ನು ಅಡ್ಡ ಹಾಕಿ ಆತನನ್ನು ಬೀಳಿಸಿದೆ. ಎಲ್ಲರೂ ಕಳ್ಳರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಬಿಲ್ ಆರೋಪಿಯನ್ನು ಹಿಡಿಯಲು ಬಳಸಿರುವ ಟೆಕ್ನಿಕ್ ಗೃಂಥಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಏಪ್ರಿಲ್ 3ರಂದು ಈ ಘಟನೆ ನಡೆದಿದ್ದು, ಗುರುವಾರ (ಮೇ 3)ದಂದು ಕೊಲಂಬೊದ ಓಹಿಯೋ ಪೊಲೀಸರು ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಬಂಧಿತ ಶಂಕಿತ ಆರೋಪಿಯಿಂದ ಗ್ಲಾಕ್ 9 ಎಂ.ಎಂ ಪಿಸ್ತೂಲ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಜನರು ಅಜ್ಜನ ಸಿಂಪಲ್ ಟೆಕ್ನಿಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.