– ಯುವಕನ ಡೆತ್‌ನೋಟ್‌ನಲ್ಲಿ ಬಯಲಾಯ್ತು ರಹಸ್ಯ
– ವಾಟ್ಸಪ್ ಗ್ರೂಪ್‌ನಲ್ಲಿ ವಿಡಿಯೋ ಹರಿಬಿಟ್ಟ ಬಳಿಕ ದೂರು
ಮಂಗಳೂರು: ಒಂದೇ ಮನೆಯಲ್ಲಿ ವಾಸವಿದ್ದ ಸಂದರ್ಭದಲ್ಲಿ, ಯುವತಿಯರಿಬ್ಬರ ಖಾಸಗಿ ವಿಡಿಯೊವನ್ನ ಇನ್ನೊಬ್ಬಾಕೆ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಯುವತಿಯೊಬ್ಬಳನ್ನ ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಲಶದ ನಿರೀಕ್ಷಾ ಬಂಧಿತ ಯುವತಿ. ಮಂಗಳೂರಿನ ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ಗೆಳತಿ ಜೊತೆ ವಾಸವಿದ್ದ ನಿರೀಕ್ಷಾ ಉದ್ಯೋಗ ಮಾಡಿಕೊಂಡಿದ್ದಳು. ಈ ವೇಳೆ ಗೆಳತಿಯ ಖಾಸಗಿ ದೃಶ್ಯವನ್ನ ವಿಡಿಯೊ ಮಾಡಿಟ್ಟುಕೊಂಡಿದ್ದಳು. ಆ ವಿಡಿಯೊ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಯುವತಿಯರು ಬಟ್ಟೆ ಬದಲಿಸುವ ವಿಡಿಯೋ ಮಾಡಿಟ್ಟುಕೊಂಡಿದ್ದ ಆರೋಪಿ ನಿರೀಕ್ಷಾ ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಅಭಿಷೇಕ್ ಎಂಬಾತನಿಗೆ ಕಳುಹಿಸಿದ್ದಳಂತೆ. ಅಭಿಷೇಕ್ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ. ಆದ್ರೆ ಕಳೆದ ಅಕ್ಟೋಬರ್ 9ರಂದು ಕಾರ್ಕಳದಲ್ಲಿ ಅಭಿಷೇಕ್ ಸುಧೀರ್ಘ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್‌ನೋಟ್‌ನಲ್ಲಿ ನಿರೀಕ್ಷಾ ಹಾಗೂ ಇತರರ ವಿರುದ್ಧ ಮೃತ ಅಭಿಷೇಕ್ ಹನಿಟ್ರ್ಯಾಪ್ ಆರೋಪ ಮಾಡಿದ್ದ.
ನಿರೀಕ್ಷಾ ತನ್ನ ರೂಮಿನಲ್ಲಿದ್ದ ಇಬ್ಬರು ಯುವತಿಯರ ವಿಡಿಯೋ ಮಾಡಿ ವೈರಲ್ ಮಾಡಿದ್ದ ಬಗ್ಗೆಯೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ. ಸಾಯುವ ಮುನ್ನ truth group ಹೆಸರಿನ ವಾಟ್ಸಪ್ ಗ್ರೂಪ್ ಮಾಡಿ ಅದರಲ್ಲಿ ಕೆಲ ವಿಡಿಯೋಗಳನ್ನೂ ಹರಿಬಿಟ್ಟಿದ್ದ. ಅದರಲ್ಲಿ ಈ ಇಬ್ಬರ ಯುವತಿಯರ ವಿಡಿಯೋ ಕೂಡ ಇದ್ದ ಹಿನ್ನೆಲೆ ಕದ್ರಿ ಠಾಣೆಗೆ ಸಂತ್ರಸ್ತೆಯರು ದೂರು ನೀಡಿದ್ದರು.
ಒಂದು ವರ್ಷದ ಹಿಂದೆಯೇ ವಿಡಿಯೋ ಮಾಡಿರುವ ಸಾಧ್ಯತೆಗಳಿದೆ ಎನ್ನಲಾಗಿದೆ. ಸದ್ಯ ನಿರೀಕ್ಷಾಳನ್ನು ಬಂಧಿಸಿರುವ ಕದ್ರಿ ಪೊಲೀಸರು ಬಿಎನ್ ಎಸ್ 77, 78(2), 294(2)(ಚಿ) ಅಡಿ ದಾಖಲಾಗಿದ್ದ ಪ್ರಕರಣ ದಾಖಲಿಸಿದ್ದಾರೆ. ಅತ್ತ ಉಡುಪಿಯ ಕಾರ್ಕಳ ಪೊಲೀಸರು ಈಗಾಗಲೇ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.















