Tag: virajpet

  • ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

    ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

    ಮಡಿಕೇರಿ: ಮನೆಯ ಸುತ್ತಲೂ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ ನೀಡುತ್ತಿರುವ ತೋಟದ ಮಾಲೀಕರ ಕ್ರಮದಿಂದ ಬೇಸತ್ತು ಕಾರ್ಮಿಕನ ಕುಟುಂಬದ ಸದಸ್ಯರು ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಹೌದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ದುಬಾರಿ ಗ್ರೂಪ್‌ಗೆ ಸೇರಿದ ಮಸ್ಕಲ್ ಕಾಫಿ ತೋಟದಲ್ಲಿ ವಾಸವಿರುವ ಕಾರ್ಮಿಕ ಸುಬ್ರಮಣಿ ಎಸ್ ಕಳೆದ 25 ವರ್ಷದಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. 2016ರಲ್ಲಿ ಯಾವುದೇ ನೋಟೀಸ್ ನೀಡದೇ ತೋಟದ ಮಾಲೀಕರು ಸುಬ್ರಮಣಿಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಈ ಬಗ್ಗೆ ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

    ನ್ಯಾಯಾಲಯದ ತೀರ್ಪು ಬರುವವರೆಗೂ ಕಾಫಿ ತೋಟದ ಮನೆಯಲ್ಲೇ ವಾಸವಿದ್ದ ಸುಬ್ರಮಣಿ ಕುಟುಂಬಕ್ಕೆ ಇದೀಗ ಮಾಲೀಕರು ತೊಂದರೆ ನೀಡುತ್ತಿದ್ದಾರೆ. ತೋಟದ ಮನೆಯಿಂದ ಕಾರ್ಮಿಕ ಹಾಗೂ ಅವರ ಕುಟುಂಬ ಹೊರಬರದಂತೆ ಮನೆಯ ಸುತ್ತಲೂ ಕಂದಕ ತೋಡಿದ್ದಾರೆ. ಈ ಬಗ್ಗೆ ಸುಬ್ರಮಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದ ಕಾರ್ಮಿಕ ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಪೈಲಟ್‌ಗಳ ಸ್ಥಿತಿ ಚಿಂತಾಜನಕ

    ಕಾರ್ಮಿಕ ಸುಬ್ರಮಣಿಗೆ ತೋಟದ ವತಿಯಿಂದ ನೀಡಿದ್ದ ಮನೆಯಲ್ಲಿ ಪತ್ನಿ, ಮಗಳೊಂದಿಗೆ ವಾಸವಾಗಿದ್ದಾರೆ. ಮೊದಲ ಮಹಡಿಯಲ್ಲಿ ಮನೆ ಇದ್ದು, ಕೆಳಭಾಗದಲ್ಲಿ ತೋಟದ ಸಾಮಗ್ರಿಗಳ ಕೊಠಡಿ ಇದೆ. ತೋಟದ ಮನೆಯನ್ನು ಬಿಟ್ಟು ತೆರಳಬೇಕೆಂದು ತೋಟದ ಮಾಲೀಕರು ಹಾಗೂ ವ್ಯವಸ್ಥಾಪಕರು ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ಸುಬ್ರಮಣಿ ಆರೋಪಿಸಿದ್ದಾರೆ.

    ಸುಬ್ರಮಣಿ ಹಾಗೂ ಅವರ ಕುಟುಂಬ ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಮಾಲೀಕರು 2 ಹಿಟಾಚಿ ಹಾಗೂ 2 ಜೆಸಿಬಿ ಬಳಸಿ ಮನೆಯ ಸುತ್ತಲೂ ಕಂದಕ ನಿರ್ಮಾಣ ಮಾಡಿದ್ದಾರೆ. ಇದೀಗ ಸುಬ್ರಮಣಿ ಮನೆಗೆ ತೆರಳುವ ರಸ್ತೆಯಲ್ಲಿ ಗುಂಡಿ ತೋಡಲಾಗಿದ್ದು, ಮನೆಯಿಂದ ಹೊರಬರಲು ಹಾಗೂ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಯಿಂದ ತೆಲಂಗಾಣ ಸಿಎಂ ಆಸ್ಪತ್ರೆಗೆ ದಾಖಲು

    ಈ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸುಬ್ರಮಣಿ ಮನವಿ ಸಲ್ಲಿಸಿದ್ದರು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ನೀಡಿದ ದೂರಿನನ್ವಯ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಮನೆಯ ಸುಮಾರು 15 ಅಡಿ ಕೆಳಕ್ಕೆ ಕಂದಕ ನಿರ್ಮಾಣ ಮಾಡಿರುವ ಕಾರಣ ಮನೆಗೆ ತೆರಳಲು ಹಾಗೂ ಮನೆಯಿಂದ ಹೊರಹೋಗಲು ಸುಬ್ರಮಣಿ ಕುಟುಂಬಕ್ಕೆ ಸಾಧ್ಯವಾಗದೇ ಗೃಹಬಂಧನದಲ್ಲಿ ಇದ್ದಾರೆ. ಇದೀಗ ಏಣಿಯ ಸಹಾಯದಿಂದ ಸುಬ್ರಮಣಿ ಹಾಗೂ ಮಗಳು ಅಗತ್ಯ ಸಾಮಗ್ರಿಗಳ ಖರೀದಿಗೆ ತೆರಳುತ್ತಿದ್ದಾರೆ. ಆದರೆ ಗ್ಯಾಸ್ ಸೇರಿದಂತೆ ಭಾರವಾದ ವಸ್ತುಗಳನ್ನು ಮನೆಗೆ ಸಾಗಿಸುವುದು ಅಸಾಧ್ಯವಾಗಿದೆ. ಇದನ್ನೂ ಓದಿ: ಕೋವಿಡ್ ರೋಗಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಮರು ಪಾವತಿಗೆ ಜಿಲ್ಲಾಧಿಕಾರಿ ಆದೇಶ

    ಇನ್ನೂ ತನಗೆ ಸಿಗಬೇಕಾದ ಬೋನಸ್, ವೇತನ ಸೇರಿದಂತೆ ಅಂದಾಜು 19 ಲಕ್ಷ ರೂ. ಹಣ ತೋಟದ ಮಾಲೀಕರಿಂದ ಸಿಗಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಕೂಡ ಹೂಡಲಾಗಿದೆ. ಹೀಗಿರುವಾಗ ಏಕಾಏಕಿ ಮನೆಯ ಸುತ್ತಲೂ ಕಂದಕ ನಿರ್ಮಿಸಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಪತ್ನಿ, ಮಗಳ ಮುಖ ನೋಡಿ ಆತ್ಮಹತ್ಯೆಗೂ ಮನಸ್ಸು ಬರುತ್ತಿಲ್ಲ. ಹೀಗಾಗಿ ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಈ ಕುಟುಂಬ ಮನವಿ ಮಾಡಿದೆ.

  • ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ

    ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ

    ಮಡಿಕೇರಿ: ಗ್ರಾಮವೊಂದರ ಮನೆಯಲ್ಲಿ ನಿಧಿ ಶೋಧಕ್ಕಾಗಿ ಮನೆ ಒಳಗೆ ವಾಮಾಚಾರ, ಬಲಿಪೂಜೆ ನಡೆಸಿ ಮನೆಯ ಬೇಡ್ ರೂಂ ನಲ್ಲೆ ಸುಮಾರು 15 ಅಡಿ ಗುಂಡಿ ತೆಗೆದು ಬಲಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಬಲಿ ಕೊಡಲು ಸಂಚು ರೂಪಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕೊಡಗಿನ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದ ಕೋಟೆ ಪೈಸಾರಿಯ ಎಂ.ಆರ್.ಗಣೇಶ್ ಹಾಗೂ ಉಡುಪಿ ಮೂಲದ ಸಾಧಿಕ್ ಎಂಬವರ ಮನೆಯ ಕೊಠಡಿಯಲ್ಲಿ ವಾಮಾಚಾರ, ಬಲಿಪೂಜೆ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ. ಪರಿಣಾಮ ಇವರ ಮನೆಗೆ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ಪರಿಶೀಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಬಿಜೆಪಿ ವ್ಯಂಗ್ಯ

    ಆರೋಪಿಗಳಿಬ್ಬರು ಮಂಗಳೂರು ಹಾಗೂ ಕೇರಳ ಮೂಲದ ವಾಮಾಚಾರಿಗಳ ಬಲೆಗೆ ಬಿದ್ದಿದ್ದಾರೆ. ಇವರು ಮೌಢ್ಯತೆಯಿಂದ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿ ಇದೆಯೆಂದು 15 ಅಡಿಗಳಷ್ಟು ಮಣ್ಣು ತೆಗೆದು ಗುಂಡಿತೋಡಿ ವಾಮಾಚಾರ ನಡೆಸಿದ್ದಾರೆ.

    ನಿಧಿ ಶೋಧನೆಯ ಸಂಬಂಧ ಕೋಳಿ ಬಲಿ ಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬಲಿ ಪೂಜೆ ನಡೆಸಲು ನಿರ್ಧರಿಸಲಾಗಿತ್ತೆಂದು ಆರೋಪಿ ವ್ಯಕ್ತಿಗಳಿಂದ ತಿಳಿದುಬಂದಿದೆ. ಪ್ರಸ್ತುತ ಈ ಇಬ್ಬರನ್ನು ಬಂಧಿಸಿದ್ದರಿಂದ ಮುಂದೆ ನಡೆಯಬಹುದಾಗಿದ್ದ ಭಾರೀ ಅನಾಹುತವನ್ನು ಪೊಲೀಸರು ತಪ್ಪಿಸಿದಂತಾಗಿದೆ. ಅದು ಅಲ್ಲದೇ ಇವರು ಮೌಢ್ಯತೆಯಿಂದ ಇನ್ನೂ ಕೆಲವು ಅಡಿಗಳಷ್ಟು ಮಣ್ಣು ತೆಗೆದಿದಲ್ಲಿ ಮನೆ ಕುಸಿದು ಮನೆಯಲ್ಲಿದ್ದವರೆಲ್ಲ ಸಾವನ್ನಪ್ಪುವ ಸಾಧ್ಯತೆಯಿತ್ತು. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

    ಬಂಧಿತ ಆರೋಪಿಗಳ ವಿವರ:
    1. ಎಂ.ಆರ್.ಗಣೇಶ್ ತಂದೆ ರಮೇಶ್, ಪ್ರಾಯ 23 ವರ್ಷ ಸೆಂಟ್ರಿಂಗ್ ಕೆಲಸ ಒಳಮಾಳ ಕೋಟೆ ಪೈಸಾರಿ ಚೆನ್ನಯ್ಯನಕೋಟೆ ಸಿದ್ದಾಪುರ ನಿವಾಸಿಯಾಗಿದ್ದಾನೆ. ಇದನ್ನೂ ಓದಿ:  ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    2. ಸಾಧಿಕ್.ಬಿ.ಕೆ ತಂದೆ ಲೇಟ್ ಅಬ್ದುಲ್ ರಹಿಮಾನ್ ಪ್ರಾಯ 42 ವರ್ಷ ಪಡುಬಿದ್ರಿ ಹಂಚಿನಡ್ಕ ಉಡುಪಿ ಜಿಲ್ಲೆ ನಿವಾಸಿಯಾಗಿದ್ದಾನೆ.

    ಆರೋಪಿಗಳ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಮಾಚಾರಕ್ಕೆ ಬಳಸಿದ ಕೆಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಉಪವಿಭಾಗದ ಪೆÇಲೀಸ್ ಉಪಾಧೀಕ್ಷಕರಾದ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತದಳ ಇನ್ಸ್ ಪೆಕ್ಟರ್ ಐ.ಪಿ.ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ಕಟೇಶ್ ಹಾಗೂ ಡಿಸಿಐಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  • ಮನೆಗೆ ನುಗ್ಗಿ ಕಳ್ಳತನ ಮಾಡಿದ ಚೋರ 48 ಗಂಟೆಗಳಲ್ಲಿ ಪೊಲೀಸರ ಅತಿಥಿ

    ಮನೆಗೆ ನುಗ್ಗಿ ಕಳ್ಳತನ ಮಾಡಿದ ಚೋರ 48 ಗಂಟೆಗಳಲ್ಲಿ ಪೊಲೀಸರ ಅತಿಥಿ

    ಮಡಿಕೇರಿ: ವಿರಾಜಪೇಟೆ ಪಟ್ಟಣದ ಮನೆಯೊಂದಕ್ಕೆ ನುಗ್ಗಿ ಟಿವಿ ಹಾಗೂ ನಗದು ದೋಚಿದ್ದ ಚೋರನನ್ನು ಕಳ್ಳತನ ನಡೆದ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಕೊಡಗಿನ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಲ್ಲುಬಾಣೆಯ ನಿವಾಸಿ ಕೂಲಿ ಕಾರ್ಮಿಕ ಕೆ.ಎಸ್.ನಿಖಿಲ್(22) ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿಂದ ಟಿವಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆ ಪಟ್ಟಣದ ನಿವಾಸಿ ಸುಬ್ಬಯ್ಯ ಎಂಬವರು ಅ.7 ರಂದು ಹೊಳೆನರಸೀಪುರಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಗಮನಿಸಿ ಹಿಂಬಾಗಿಲನ್ನು ಮುರಿದು ಒಳ ನುಗ್ಗಿದ ನಿಖಿಲ್ ಟಿವಿ ಹಾಗೂ 1,400 ರೂ. ದೋಚಿ ಪರಾರಿಯಾಗಿದ್ದನು. ಇದನ್ನೂ ಓದಿ: ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ

    ಅ.8 ರಂದು ಮನೆಗೆ ಬಂದ ಸುಬ್ಬಯ್ಯ ಅವರು ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಕಾರದಿಂದ ತನಿಖೆ ಕೈಗೊಂಡ ಪೊಲೀಸರು ಅ.10 ರಂದು ಬೆಳಗ್ಗೆ ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಿಖಿಲ್ ನನ್ನು ಬಂಧಿಸಿದರು. ತಪ್ಪೊಪ್ಪಿಕೊಂಡ ಈತನಿಂದ ಟಿವಿ ಮತ್ತು 1,400 ರೂ. ನಗದನ್ನು ವಶಕ್ಕೆ ಪಡೆಯಲಾಯಿತು. ಇದನ್ನೂ ಓದಿ: ಕಾಲುವೆಗೆ ಬಿದ್ದು 10 ವರ್ಷದ ಮಗು ಸಾವು

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಉಪವಿಭಾಗದ ಡಿ.ವೈ.ಎಸ್‍ಪಿ ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ವಿರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕ ಹೆಚ್.ಎಸ್.ಬೋಜಪ್ಪ, ನಗರ ಠಾಣಾಧಿಕಾರಿಗಳಾದ ಜಗದೀಶ್ ಧೂಳ್ ಶೆಟ್ಟಿ, ಜಿಲ್ಲಾ ಬೆರಳಚ್ಚು ವಿಭಾಗದ ಜಯಕುಮಾರ್, ಸಿಬ್ಬಂದಿಗಳಾದ ಪಿ.ಯು.ಮುನೀರ್, ರಂಜನ್ ಕುಮಾರ್, ಮಧು ಟಿ.ಟಿ. ಗೀತಾ, ಮೋಹನ್ ಟಿ.ಕೆ.ಸಾಗರ್, ಮಂಜುನಾಥ್ ಬಿ.ವಿ ಹಾಗೂ ಮಹಂತೇಶ್ ಎಂ.ಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  • ಕ್ಷಣ ಕ್ಷಣಕ್ಕೂ ನದಿಗೆ ಕುಸಿದು ಬೀಳುತ್ತಿರುವ ರಸ್ತೆ-ಆತಂಕದಲ್ಲಿ ಗುಹ್ಯ ಗ್ರಾಮಸ್ಥರು

    ಕ್ಷಣ ಕ್ಷಣಕ್ಕೂ ನದಿಗೆ ಕುಸಿದು ಬೀಳುತ್ತಿರುವ ರಸ್ತೆ-ಆತಂಕದಲ್ಲಿ ಗುಹ್ಯ ಗ್ರಾಮಸ್ಥರು

    -ಪ್ರವಾಹ ಇಳಿಮುಖ, ಮುಳಗಡೆಯಾದ ಮನೆಗಳ ಸ್ವಚ್ಛತೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಹ ತಗ್ಗಿದರೂ ಅವಘಡಗಳು ಮಾತ್ರ ನಿಲ್ಲುತ್ತಿಲ್ಲ. ಸಿದ್ದಾಪುರದಿಂದ ಗುಹ್ಯ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಕ್ಷಣ ಕ್ಷಣಕ್ಕೂ ಕುಸಿಯುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ರಸ್ತೆಯನ್ನು ಕಾವೇರಿ ನದಿ ಆಪೋಷಣೆ ತೆಗೆದುಕೊಳ್ಳುತ್ತಿದೆ. ಕಳೆದ ನಾಲ್ಕು ದಿನದಿಂದ ಪ್ರವಾಹದ ನೀರಿನಿಂದ ರಸ್ತೆ ಸಡಿಲಗೊಂಡಿದ್ದರಿಂದ ಕುಸಿಯಲಾರಂಭಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆ ಮೂಲಕ ತೆರಳಲು ಗ್ರಾಮಸ್ಥರು ಭಯ ಪಡುವಂತಾಗಿದೆ.

    ಮುಳಗಡೆಯಾದ ಮನೆಗಳ ಸ್ವಚ್ಛತೆ: ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಸುರಿದಿದ್ದ ರಣಭೀಕರ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ಕೊಡಗಿನ ಹಲವು ಗ್ರಾಮಗಳು ಪ್ರವಾಹದಲ್ಲಿ ನಾಲ್ಕು ದಿನಗಳ ಕಾಲ ಮುಳುಗಿ ಹೋಗಿದ್ದವು. ಇದೀಗ ಪ್ರವಾಹದ ನೀರು ತಗ್ಗಿದ್ದು, ಜನರು ಮನೆಗಳ ಸ್ವಚ್ಛತೆಗೆ ಮುಂದಾಗಿದ್ದಾರೆ.

    ಕೊಡಗಿನ ಕುಶಾಲನಗರದ ಹಲವು ಬಡಾವಣೆಗಳು ಮುಳುಗಡೆಯಾಗಿದ್ದವು. ಅಲ್ಲದೆ ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ದಾಪುರ ಕರಡಿಗೋಡು, ಕುಂಬಾರಗುಂಡಿ, ಬೆಟ್ಟದಕಾಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಇದೀಗ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಇದೀಗ ಕೆಲ ಜನರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಕೆಲವರು ತಮ್ಮ ಮನೆಗಳನ್ನು ತೊಳೆದು ಸ್ವಚ್ಛಗೊಳಿಸುತ್ತಿದ್ದಾರೆ. ಮತ್ತೆ ಕೆಲವರು ಸಂಪುಗಳಿಗೆ ಗಲೀಜು ನೀರು ತುಂಬಿಕೊಂಡಿರುವುದರಿಂದ ಸಂಪಿನ ಇಡೀ ನೀರನ್ನು ಮೋಟರ್ ಗಳ ಮೂಲಕ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದಾರೆ.

    ಇನ್ನು ಮಹಿಳೆಯರು ತಮ್ಮ ಮನೆಗಳ ವಸ್ತುಗಳನೆಲ್ಲಾ ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಮತ್ತೊಂದೆಡೆ ಪ್ರವಾಹದ ನೀರು ತಗ್ಗುತ್ತಿದ್ದಂತೆ ಕುಶಾಲನಗರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪ್ರತೀ ಬೀದಿಗಳಿಗೆ ಬ್ಲೀಚಿಂಗ್ ಸಿಂಪಡಿಸಿದ್ದಾರೆ. ಪ್ರವಾಹದಲ್ಲಿ ತೇಲಿಬಂದಿದ್ದ ಅಪಾರ ಪ್ರಮಾಣದ ಕೆಸರು ಕಸಕಡ್ಡಿ ಪ್ರತೀ ಬಡಾವಣೆಯಲ್ಲಿ ಸಾಕಷ್ಟು ತುಂಬಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬ್ಲೀಚಿಂಗ್ ಸಿಂಪಡಣೆ ಮಾಡಿದ್ದಾರೆ.

  • ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ

    ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ

    ಮಡಿಕೇರಿ: ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ತಮ್ಮನೊಬ್ಬ ಗುಂಡಿಕ್ಕಿ ಕೊಲೆಗೈದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ಇಂದು ನಡೆದಿದೆ.

    ಬಿಳಗುಂದದ ಸುರೇಶ್ (48) ಹತ್ಯೆಯಾದ ವ್ಯಕ್ತಿ. ಕುಮಾರ್ ಕೊಲೆಗೈದ ಆರೋಪಿ. ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಕುಮಾರ್ ಮದ್ಯದ ಮತ್ತಿನಲ್ಲಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

    ಸುರೇಶ್ ಇಂದು ಕುಮಾರ್ ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಕುಮಾರ್ ಏಕಾಏಕಿ ಮನೆಯಿಂದ ಗನ್ ತಂದು ಸುರೇಶ್ ಎದೆಗೆ ಶೂಟ್ ಮಾಡಿದ್ದಾನೆ. ಪರಿಣಾಮ ಎದೆಗೆ ಹೊಕ್ಕು ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಇದನ್ನು ತಿಳಿಯದೆ ವಿರಾಜಪೇಟೆ ಆಸ್ಪತ್ರೆಗೆ ಸುರೇಶ್ ಮೃತದೇಹವನ್ನು ಸಾಗಿಸಲಾಗಿತ್ತು.

    ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿ ಹತ್ಯೆಗೈದಿದ್ದ ಪಾಪಿ ಕುಮಾರ್ ಘಟನಾ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿರಾಜಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲೇ ಇರಿಸಿ, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸುರೇಶ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ಆದಿವಾಸಿ ಯುವಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಆರೋಪ

    ಆದಿವಾಸಿ ಯುವಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಆರೋಪ

    ಮಡಿಕೇರಿ: ಕಟ್ಟಿಗೆ ತರಲು ಕಾಡಿಗೆ ಹೋಗಿದ್ದ ಆದಿವಾಸಿ ಯುವಕರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಆರೋಪ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಸಮೀಪದ ಅಣ್ಣಿಗೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ದಿಡ್ಡಳ್ಳಿ ನಿವಾಸಿಗಳಾದ ನಾಗೇಶ್ ಹಾಗೂ ಸೋಮು ವಾಪಸ್ ಬರುವಾಗ ಅರಣ್ಯ ರಕ್ಷಕರಾದ ನಾಗೇಶ್ ಮತ್ತು ತಿಮ್ಮ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದಿಡ್ಡಳ್ಳಿಯಿಂದ ಅಣ್ಣಿಗೇರಿಗೆ ಎಳೆದೊಯ್ದು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಕೈ, ಕಾಲು ಭಾಗ ಊತ ಬರುವಂತೆ ಮನಸೋ ಇಚ್ಛೆ ಥಳಿಸಿದ್ದಾರೆ.

    ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಕತ್ತರಿಸಿ ನಮ್ಮ ವಿರುದ್ಧ ಸುಳ್ಳು ಹೇಳಿದ್ದಾರೆ. ಮೂಲ ನೆಲೆಗಳಲ್ಲಿ ಗೆಡ್ಡೆ, ಗೆಣಸು, ಮೇವು ಹಾಗೂ ಉರುವಲಿಗೆ ಒಣ ಮರಗಳನ್ನು ಬಳಸಿಕೊಳ್ಳುವ ಹಕ್ಕು ಆದಿವಾಸಿಗಳಿಗೆ ಇದೆ. ಹೀಗಿದ್ದರೂ ವಿನಾಃ ಕಾರಣ ಹಲ್ಲೆ ಮಾಡಿದ್ದಾರೆ. ಕೂಡಲೇ ಇಬ್ಬರನ್ನೂ ಅಮಾನತು ಮಾಡಬೇಕು. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವ ಮತ್ತಿಗೋಡಿನ ಆರ್‍ಎಫ್‍ಓ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಎರಡೂವರೆ ತಿಂಗಳಲ್ಲಿ 29 ಜಾನುವಾರು ಬಲಿ- ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ

    ಎರಡೂವರೆ ತಿಂಗಳಲ್ಲಿ 29 ಜಾನುವಾರು ಬಲಿ- ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ

    – ಅರಣ್ಯ ಇಲಾಖೆಯ ಬೋನಿಗೆ ಬೀಳದ ಹುಲಿರಾಯ
    – ನಿದ್ದೆ ಇಲ್ಲದೆ ಟಾರ್ಚ್ ಹಿಡಿದು ಹಸುಗಳನ್ನು ಕಾಯುವ ಕೆಲಸ

    ಮಡಿಕೇರಿ: ವರ್ಷದ ಎಲ್ಲ ದಿನಗಳಲ್ಲೂ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು ಜಿಲ್ಲೆಯ ಜನರು ಇದೀಗ ಹುಲಿಯ ಹಾವಳಿಯಿಂದ ಭಯಗೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಸುತ್ತ ಕಳೆದ ಎರಡೂವರೆ ತಿಂಗಳಲ್ಲಿ ಹುಲಿ ದಾಳಿಗೆ ಸುಮಾರು 29 ಜಾನುವಾರುಗಳು ಬಲಿಯಾಗಿವೆ. ಇದು ಜನರನ್ನು ಆತಂಕಕ್ಕೆ ಉಂಟು ಮಾಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟು ಕಾಯುತ್ತಿದೆ.

    ಕಳೆದ ಒಂದೇ ತಿಂಗಳಲ್ಲಿ 15ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ವಿರಾಜಪೇಟೆ ತಾಲೂಕಿನ ಬಾಳೆಲೆ, ನಿಟ್ಟೂರು, ಹುದಿಕೇರಿ, ಬೆಳ್ಳೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳನ್ನು ಟಾರ್ಗೆಟ್ ಮಾಡಿ ಹುಲಿ ದಾಳಿ ನಡೆಸುತ್ತಿದೆ. ಈ ವ್ಯಾಪ್ತಿಯಲ್ಲಿ ಕೇವಲ ಒಂದೇ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆಗಾಗಿ ಬೋನ್ ಇಟ್ಟಿದೆ. ಆದರೆ ಹುಲಿ ಬೋನ್ ಕಡೆ ಸುಳಿಯುತ್ತಲೇ ಇಲ್ಲ.

    ಜನರು ಹುಲಿಯ ಆತಂಕದಿಂದ ರಾತ್ರಿ ಇಡೀ ಟಾರ್ಚ್ ಹಾಕಿ ಜಾರುವಾರುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಹುಲಿ ದಾಳಿಯಿಂದಾಗಿ ಜಾರುವಾರುಗಳು ಸಾವನ್ನಪ್ಪಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೇವಲ 2-3 ಸಾವಿರ ರೂ. ಪರಿಹಾರ ನೀಡುತ್ತಾರೆ. ಆದರೆ ಒಂದು ಜರ್ಸಿ ತಳಿಯ ಹಸುಗೆ ಕನಿಷ್ಠ 40 ರಿಂದ 50 ಸಾವಿರ ರೂ ಬೆಲೆ ಇದೆ. ಹೀಗಾಗಿ ಜಾನುವಾರುಗಳನ್ನು ಸಾಕಿಕೊಂಡು ಬದುಕು ದೂಡುತ್ತಿರುವ ಬಡ ರೈತರು ಹುಲಿ ದಾಳಿಯಿಂದ ಕಂಗಾಲಾಗಿದ್ದಾರೆ.

    ಶನಿವಾರ ಸಂಜೆ ಬೆಳ್ಳೂರು ಗ್ರಾಮದ ಗೋಪಾಲ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಈ ಹಿನ್ನೆಲೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುದಿಕೇರಿ ಹೋಬಳಿ ಸಂಚಾಲಕ ಸೂರಜ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಸ್ಥಳೀಯ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ದಿನ ನಿತ್ಯ ಹುಲಿ ಹಾವಳಿಯಿಂದ ಗ್ರಾಮದಲ್ಲಿ ಜೀವನ ಮಾಡುವುದೇ ಕಷ್ಟವಾಗಿ ಸೂಕ್ತ ಪರಿಹಾರ ನೀಡಬೇಕು ಮತ್ತು ಅದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

  • ತಾಯಿ-ಮಗಳನ್ನ ಕೊಲೆಗೈದು ಶಾಲೆಯ ಬಾವಿಯಲ್ಲಿ ಮೃತದೇಹ ಎಸೆದ ಪಾಪಿಗಳು

    ತಾಯಿ-ಮಗಳನ್ನ ಕೊಲೆಗೈದು ಶಾಲೆಯ ಬಾವಿಯಲ್ಲಿ ಮೃತದೇಹ ಎಸೆದ ಪಾಪಿಗಳು

    – ಬಾವಿಯ ನೀರು ಕುಡಿಯುತ್ತಿದ್ದ ಶಾಲಾ ಮಕ್ಕಳು

    ಮಡಿಕೇರಿ: ತಾಯಿ ಹಾಗೂ ಮಗಳನ್ನು ಕೊಲೆಗೈದ ಹಂತಕರು ಶಾಲಾ ಮಕ್ಕಳು ಕುಡಿಯುವ ನೀರಿನ ಬಾವಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಅಸ್ಸಾಂ ಮೂಲದ ಕಾರ್ಮಿಕ ಆಲಿ ಎಂಬವರ ಪತ್ನಿ ಹಾಗೂ ಪುತ್ರಿ ಕೊಲೆಯಾದ ತಾಯಿ-ಮಗಳು. ವೀರಾಜಪೇಟೆ ಸಮೀಪದ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮುಕ್ಕಾಟಿರ ದೇವಯ್ಯ ಎಂಬವರ ತೋಟದಲ್ಲಿ ಆಲಿ ಎರಡು ವಾರಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಆಲಿ ತನ್ನೊಂದಿಗೆ ಇದ್ದ ಮಹಿಳೆಯನ್ನು ಪತ್ನಿ ಹಾಗೂ ಬಾಲಕಿಯನ್ನು ಪುತ್ರಿಯೆಂದು ಪರಿಚಯಿಸಿದ್ದ. ಇದೇ ತಿಂಗಳ 20ರಂದು ಪತ್ನಿ ಹಾಗೂ ಮಗಳು ಸಂತೆಗೆ ಹೋದವರು ಮನೆಗೆ ಹಿಂತಿರುಗಿಲ್ಲ ಎಂದು ಆಲಿ ಹೇಳಿಕೊಂಡಿದ್ದ. ಆದರೆ ಆಲಿ ಪತ್ನಿ ಹಾಗೂ ಪುತ್ರಿ ಮೃತದೇಹಗಳು ಇಂದು ಆತ ವಾಸಿಸುತ್ತಿದ್ದ ಮನೆಯ ಸಮೀಪದಲ್ಲಿದ್ದ ಪತ್ತೆಯಾಗಿವೆ.

    ಶಾಲೆಗೆ ನೀರು ಸರಬರಾಜು ಮಾಡುವ ಬಾವಿಯಿಂದ ದುರ್ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಮತ್ತು ಶಿಕ್ಷಕರು ನೋಡಿದಾಗ ಬಾವಿಯಲ್ಲಿ ಎರಡು ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

    ಘಟನಾ ಸ್ಥಳಕ್ಕೆ ಡಿವೈಎಸ್‍ಪಿ ಜಯಕುಮಾರ್, ವೃತ್ತ ನಿರೀಕ್ಷಕ ಕ್ಯಾತೇಗೌಡ, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಮರಿಸ್ವಾಮಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ರಶ್ಮಿಕಾ ಮಂದಣ್ಣಗೆ ಐಟಿ ಡ್ರಿಲ್- 10 ಜನ ಅಧಿಕಾರಿಗಳಿಂದ ವಿಚಾರಣೆ

    ರಶ್ಮಿಕಾ ಮಂದಣ್ಣಗೆ ಐಟಿ ಡ್ರಿಲ್- 10 ಜನ ಅಧಿಕಾರಿಗಳಿಂದ ವಿಚಾರಣೆ

    ಮಡಿಕೇರಿ: ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು  ಕೊಡಗು ಜಿಲ್ಲೆ ವಿರಾಜಪೇಟೆಯ ಕುಕ್ಲೂರು ಗ್ರಾಮದ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

    ರಶ್ಮಿಕಾ ಮಂದಣ್ಣ ಅವರು ರಾತ್ರಿ 9:10 ಗಂಟೆಗೆ ತಮ್ಮ ನಿವಾಸಕ್ಕೆ ಆಗಮಿಸಿ, ಹತ್ತು ನಿಮಿಷ ವಿಶ್ರಾಂತಿ ಪಡೆದು ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ. 10 ಜನ ಅಧಿಕಾರಿಗಳ ತಂಡವು ರಶ್ಮಿಕಾ ಮಂದಣ್ಣ ಅವರನ್ನು ವಿಚಾರಣೆ ನಡೆಸುತ್ತಿದ್ದು, ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

    ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಐಟ ಅಧಿಕಾರಿಗಳು ಪ್ರಮುಖ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರನ್ನು ಬೆಳಗ್ಗೆಯಿಂದ ವಿಚಾರಣೆಗೆ ಒಳಪಡಿಸಿದ್ದರು. ರಾತ್ರಿ ಹೋಟೆಲ್‍ನಿಂದ ಊಟ ತರಿಸಿಕೊಂಡ ಅಧಿಕಾರಿಗಳು ರಶ್ಮಿಕಾ ಅವರ ಮನೆಯಲ್ಲಿ ಊಟ ಮಾಡಿದ್ದಾರೆ. ಬಳಿಕ ರಶ್ಮಿಕಾ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೂರು ಕಾರಣಗಳಿಂದ ರಶ್ಮಿಕಾ ಮನೆ ಮೇಲೆ ಐಟಿ ದಾಳಿ

    ತಡರಾತ್ರಿ ಮೊದಲ ದಿನದ ವಿಚಾರಣೆ ಮುಗಿಸಲಿರುವ ಐಟಿ ಅಧಿಕಾರಿಗಳು ಶುಕ್ರವಾರವೂ ವಿಚಾರಣೆ ಮುಂದುವರಿಸಲಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ವಿರಾಜಪೇಟೆಯ ಖಾಸಗಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ 7 ಗಂಟೆಗೆ ರಶ್ಮಿಕಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ನಿರಾಶ್ರಿತರನ್ನ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಪ್ಲಾನ್!- 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

    ನಿರಾಶ್ರಿತರನ್ನ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಪ್ಲಾನ್!- 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

    ಮಡಿಕೇರಿ: ನಿವೇಶನಕ್ಕೆ ಆಗ್ರಹಿಸಿ ನಿರಾಶ್ರಿತ ಆದಿವಾಸಿ, ದಲಿತ 55 ಕುಟುಂಬಗಳು ನಡೆಸುತ್ತಿರುವ ಆಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿ ವರ್ಗ, ಇದೀಗ ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದು, ಪ್ರತಿಭಟನಾಕಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಆದರೆ ಪ್ರತಿಭಟನಾಕಾರರು ನಿವೇಶನ ಸಿಗೋವರೆಗೆ ನಿರಂತರ ಧರಣಿ ನಡೆಸುವುದಾಗಿ ಪಟ್ಟುಹಿಡಿದು ಕುಳಿತಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನ ಪರಂಬು ಪೈಸಾರಿ ಜಾಗದಲ್ಲಿ ನಿವೇಶನ ರಹಿತ ಆದಿವಾಸಿ, ದಲಿತ ಹಾಗೂ ಇತರೆ ಹಿಂದುಳಿದ ಸಮುದಾಯದ 55 ಕುಟುಂಬಗಳು ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕಡಕೊಲ್ಲಿಯ ಸರ್ವೇ ನಂಬರ್ 337/1 ರ ಸರ್ಕಾರಿ ಪೈಸಾರಿ ಜಾಗದಲ್ಲಿ ಪ್ರತಿಭಟನಾಕಾರರು ಹಾಕಿದ್ದ ಗುಡಿಸಲುಗಳನ್ನು ಜನವರಿ 5 ರಂದು ಕಂದಾಯ ಅಧಿಕಾರಿಗಳು ಕಿತ್ತೆಸೆದಿದ್ದರು. ಇದನ್ನು ಖಂಡಿಸಿ ಹಾಗೂ ನಿವೇಶನಕ್ಕಾಗಿ ಅಂದಿನಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಿ ಪ್ರತಿಭಟನಾಕಾರರು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

    ಇಂದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ್ ಪ್ರತಿಭಟನಾಕಾರರನ್ನು ಅಲ್ಲಿಂದಲೂ ಹೊರದಬ್ಬಲು ಪ್ಲಾನ್ ರೂಪಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯವರಾಗಿದ್ದು, ಅವರು ಆಯಾ ಪಂಚಾಯಿತಿಗಳಲ್ಲೇ ಅರ್ಜಿ ಸಲ್ಲಿಸಲಿ. ಬಳಿಕ ಅವರಿಗೆ ಅಲ್ಲಿಯೇ ಅವರಿಗೆ ನಿವೇಶನ ಕೊಡಲಾಗುವುದು ಎನ್ನುತ್ತಿದ್ದಾರೆ. ಆದರೆ ನಿವೇಶನ ಸಿಗೋವರೆಗೆ ಇಲ್ಲಿಂದ ಕದಲೋದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದು ಕುಳಿತಿದ್ದಾರೆ.

    ಗುಡಿಸಲುಗಳನ್ನು ಕಿತ್ತೆಸೆದಿದ್ದ ಜಾಗದಲ್ಲೇ ಪ್ರತಿಭಟನಾಕಾರರು ಮತ್ತೆ ಗುಡಿಸಲು ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ಕುಟುಂಬಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಸರ್ಕಾರಿ ಜಾಗದಲ್ಲಿ ಶೆಡ್ಡು ಹಾಕಿದ್ರೆ ಕಿತ್ತು ಬಿಸಾಡಿ ಹೋದವರು ಇಂದು ಬಂದಿದ್ದೀರಾ. ಇದೀಗ ಬಂದಿರುವುದಾದ್ರೂ ನಿವೇಶನ ನೀಡುವ ಭರವಸೆ ನೀಡುತ್ತಿಲ್ಲ. ಬದಲಾಗಿ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲಿ. ಬಳಿಕ ಪರಿಶೀಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಾ. ಇಂತಹ ಭರವಸೆಗಳನ್ನು 20 ವರ್ಷಗಳಿಂದ ಕೇಳಿ ಸಾಕಾಗಿ ಹೋಗಿದೆ. ಹೀಗಾಗಿ ನಮಗೇ ಇದೇ ಸ್ಥಳದಲ್ಲಿ ನಿವೇಶ ಸಿಗೋವರೆಗೆ ಸ್ಥಳ ಬಿಟ್ಟು ಕದಲೋದಿಲ್ಲ ಎಂದಿದ್ದಾರೆ.