Tag: virajapete

  • ಹೀಗೊಂದು ವಿಚಿತ್ರ ಕೋಳಿ ಮೊಟ್ಟೆ – ಮನೆಯವರಿಗೆ ಅಚ್ಚರಿ

    ಹೀಗೊಂದು ವಿಚಿತ್ರ ಕೋಳಿ ಮೊಟ್ಟೆ – ಮನೆಯವರಿಗೆ ಅಚ್ಚರಿ

    ಮಡಿಕೇರಿ: ಈ ಚಿತ್ರವನ್ನು ನೋಡಿ ಇದಾವುದೋ ಆಮೆ ಮರಿ ಅಥವಾ ಮೊಲದ ಮರಿ ಇರಬಹುದೆಂದು ನೀವು ಊಹಿಸಿದ್ದರೆ ಅದು ತಪ್ಪು. ಮೊಟ್ಟೆ ಮೊದಲೋ ಅಥವಾ ಕೋಳಿ ಮೊದಲೋ ಎಂಬ ಪ್ರಶ್ನೆಗೆ ಇನ್ನೂ ಉತ್ತರಕ್ಕೆ ತಡಕಾಟ ನಡೆಯುತ್ತಲೇ ಇದೆ. ಆದರೆ ಇಲ್ಲೊಂದು ಮನೆಯಲ್ಲಿ ಸಾಕಿದ ಕೋಳಿಯು ವಿಚಿತ್ರ ಆಕಾರದ ಮೊಟ್ಟೆಯನ್ನಿಟ್ಟು ಮನೆಯವರಿಗೆ ಅಚ್ಚರಿ ಉಂಟು ಮಾಡಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ಕೋಲೆಯಂಡ ರೇಖಾ ಪ್ರಸನ್ನ ಅವರ ಕೋಳಿಯೊಂದು ವಿಚಿತ್ರ ಮೊಟ್ಟಿಯನ್ನು ಇಟ್ಟಿದೆ. ಪ್ರತಿನಿತ್ಯ ಕೋಳಿ ಎಂದಿನಂತೆ ಮೊಟ್ಟೆ ಇಡುತ್ತಿತ್ತು. ಆದರೆ ಇಂದು ಕೋಳಿ ಇಟ್ಟ ಮೊಟ್ಟೆಯನ್ನು ನೋಡಿದ ಮನೆಯವರು ಆಶ್ಚರ್ಯಚಕಿತಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಕೇರಳ ಸಂಪರ್ಕ – ಕೊಡಗಿನ ಗ್ರಾಮದಲ್ಲಿ 72 ಮಂದಿಗೆ ಸೋಂಕು

    ಮೊಟ್ಟೆಯು ಎಂದಿನಂತೆ ಇರದೇ ಅದು ವಿಚಿತ್ರ ಆಕೃತಿಯಲ್ಲಿ ಕಂಡುಬಂದಿದೆ. ಇದೀಗ ಈ ವಿಚಿತ್ರ ಕೋಳಿ ಮೊಟ್ಟೆ ಅಚ್ಚರಿಗೆ ಕಾರಣವಾಗಿದೆ. ಕೆಲವೊಮ್ಮೆ ಕೋಳಿಗೆ ಕ್ಯಾಲ್ಸಿಯಂ ಕೊರತೆಯಾದಾಗ ಈ ರೀತಿಯ ಮೊಟ್ಟೆ ಸೃಷ್ಟಿಯಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಪ್ಪಚ್ಚು ರಂಜನ್‍ಗೆ ಸಚಿವ ಸ್ಥಾನ ನೀಡಿ – ಬಿಜೆಪಿ ಕಾರ್ಯಕರ್ತರಿಂದ ಬೆಂಗಳೂರು ಚಲೋ

  • ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

    ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

    -ಅಪಾಯದಂಚಿನಲ್ಲಿ 10 ಮನೆಗಳು

    ಮಡಿಕೇರಿ : ಕಳೆದ ಎರಡು ವರ್ಷಗಳಿಂದ ಕೊಡಗಿಗೆ ಪ್ರಕೃತಿ ಹೊಡೆತದ ಮೇಲೆ ಹೊಡೆತ ನೀಡುತ್ತಲೇ ಇದೆ. ಕಳೆದ ಬಾರಿಯ ಭಾರೀ ಮಳೆಯಿಂದ ತಡೆಗೋಡೆಯೊಂದು ಕುಸಿದು ಮನೆಯೊಂದು ಸಂಪೂರ್ಣ ನೆಲಸಮವಾಗಿತ್ತು. ಆದರೀಗ ಮತ್ತದೇ ಸ್ಥಳದಲ್ಲಿ ಭಾರೀ ಭೂಕುಸಿತವಾಗುವ ಆತಂಕದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ.

    ವಿರಾಜಪೇಟೆಯ ನೆಹರು ನಗರ ಬಡಾವಣೆಯಲ್ಲಿ ಕಳೆದ ಬಾರಿಯ ಮಳೆ ಸಂದರ್ಭ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿತ್ತು. ಪರಿಣಾಮವಾಗಿ ಮಹಿಳೆಯೊಬ್ಬರ ಮನೆಯ ಮೇಲೆ ತಡೆಗೋಡೆ ಬಿದ್ದು, ಇಡೀ ಮನೆ ನೆಲಸಮವಾಗಿತ್ತು. ಮಳೆಗಾಲದ ಬಳಿಕ ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಮತ್ತೊಂದು ಮಳೆಗಾಲ ಆರಂಭವಾದರೂ ತಡೆಗೋಡೆ ನಿರ್ಮಿಸಿಲ್ಲ.

    ತಡೆಗೋಡೆ ನಿರ್ಮಿಸುವದಕ್ಕಾಗಿ ಬೇಸಿಗೆಯಲ್ಲೇ ದೊಡ್ಡ ಪ್ರಮಾಣದ ಅಡಿಪಾಯವನ್ನು ತೆಗೆದಿದ್ದಾರೆ. ಆದರೆ ಲಾಕ್‍ಡೌನ್ ಆಗಿದ್ದರಿಂದ ಅಷ್ಟಕ್ಕೆ ಕೆಲಸ ಸಂಪೂರ್ಣ ಸ್ಥಗಿತವಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು ಸುಮಾರು ಇಪ್ಪತ್ತು ಅಡಿಗೂ ಹೆಚ್ಚು ಎತ್ತರದ ಭೂಮಿ ಕುಸಿಯುವ ಭೀತಿ ಇದೆ.

    ಕಳೆದ ವರ್ಷವೇ ಭೂಮಿ ಕುಸಿದಿರುವ ಮೇಲ್ಭಾಗದಲ್ಲಿ 25 ಕ್ಕೂ ಹೆಚ್ಚು ಮನೆಗಳಿದ್ದು, ಹತ್ತು ಮನೆಗಳು ಸಂಪೂರ್ಣ ಅಪಾಯದಲ್ಲಿವೆ. ಮಳೆ ಸುರಿಯಲಾರಂಭಿಸಿದ್ದು, ಜಾಸ್ತಿಯಾದಲ್ಲಿ ಯಾವ ಸಂದರ್ಭದಲ್ಲಿಯಾದರೂ ಮನೆಗಳು ಕುಸಿದು ಬೀಳಲಿವೆ. ಸದ್ಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕುಸಿದಿರುವ ಸ್ಥಳಕ್ಕೆ ಪ್ಲಾಸ್ಟಿಕ್ ಹೊದಿಸಿದ್ದಾರೆ. ಆದರೂ ಮಣ್ಣು ಮಾತ್ರ ಅದರೊಳಗೆ ಕುಸಿಯುತ್ತಲೇ ಇದೆ. ಹೀಗಾಗಿ ಜನರು ಜೀವ ಕೈಯಲ್ಲಿ ಬಿಗಿ ಹಿಡಿದು ಕಾಲ ದೂಡುತ್ತಿದ್ದಾರೆ.

    ಕಷ್ಟಪಟ್ಟು ಮಾಡಿದ ಮನೆ ಹೀಗಾಯಿತಲ್ಲಾ ಎನ್ನೋ ಆತಂಕದಲ್ಲಿ ಯೋಚಿಸಿ ಹಂಸ ಎಂಬವರ 65 ವರ್ಷದ ವೃದ್ಧ ಪತ್ನಿ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದಾರೆ. ಇತ್ತ ಮನೆಯೂ ಬೀಳುವ ಆತಂಕದಲ್ಲಿದ್ದು, ಅತ್ತ ಪತ್ನಿಯೂ ಆಸ್ಪತ್ರೆ ಸೇರಿರುವ ನೋವಿನಲ್ಲೇ ಕಾಲ ದೂಡುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದ್ದು ಭಾರೀ ಪ್ರಮಾಣದಲ್ಲಿ ಮಳೆ ಸುರಿದಲ್ಲಿ 10 ಮನೆಗಳು ನೆಲಸಮವಾಗುವ ಭಯದಲ್ಲೇ ಜನರು ಬದುಕುತ್ತಿದ್ದಾರೆ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಿ ಮುಂದೆ ಆಗುವ ಅಪಾಯ ತಪ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

  • ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಮಡಿಕೇರಿ: ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮಕ್ಕೆ ಆಗಮಿಸಿದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಡೋಂಗಿ ಬಾಬಾ ಇಕ್ಬಾಲ್ ಬಾಬಾ ಎಂದು ತನ್ನನ್ನು ಪರಿಚಯ ಮಾಡಿಕೊಂಡು ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದ. ಕತ್ತಲು ಕವಿದ ಅಮಾಯಕರ ಬಾಳಿನಲ್ಲಿ ಬೆಳಕು ಚೆಲ್ಲುತ್ತೇನೆಂದು ಬೊಗಳೆ ಬಿಡುತ್ತಾ ಕತ್ತಲ ಕೋಣೆಯೊಂದರಲ್ಲಿ ಕುಳಿತು ಮಂತ್ರ ಮತ್ತು ಮೈ ಸವರುವ ತಂತ್ರ ಶುರುವಚ್ಚಿಕೊಂಡಿದ್ದ. ಮಹಿಳಾ ಗಿರಾಕಿಗಳೇ ಹೆಚ್ಚಾಗಿರುವ ಬಾಬಾ ತನ್ನ ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದಾನೆ ಎಂಬುವುದನ್ನರಿತ ಕೊಂಡಂಗೇರಿ ನಿವಾಸಿಗಳು, ಆತನ ಅರಮನೆ ಒಳಹೊಕ್ಕಾಗ ಬಾಬಾನ ಬೆತ್ತಲೆ ರಹಸ್ಯ ಬಯಲಾಗಿದೆ. ಬಳಿಕ ಬಾಬಾನನ್ನು ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿದ ಗ್ರಾಮಸ್ಥರು ಆತನನ್ನು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಮ್ಮ ದೇಶದಲ್ಲಿ ಮೂಢ ನಂಬಿಕೆಗಳ ಬೇರು ಗಟ್ಟಿ ಇರುವವರೆಗೂ ಬಾಬಾ ರಾಮ-ರಹೀಮರಂತಹ ಕಾಮುಕ ಮರಗಳು ಬೃಹದಾಕಾರವಾಗಿ ಬೆಳೆಯುತ್ತಿರುತ್ತವೆ. ಆದ್ದರಿಂದ ಇಂತಹ ಬಾಬಾರನ್ನು ಮೊಳಕೆಯಲ್ಲಿಯೇ ಚಿವುಟಬೇಕಾದ ಅನಿವಾರ್ಯತೆ ಇದೆ. ಅದನ್ನು ಮಾಡಿಸಬೇಕು ಅಂತ ಕೊಂಡಂಗೇರಿ ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.