Tag: Vinay Guruji

  • ಕೊರೊನ ವೈರಸ್ ಬಗ್ಗೆ ತಾಳೆಗರಿ ಶಾಸ್ತ್ರದಲ್ಲಿ ಉಲ್ಲೇಖ, ಗೋಮೂತ್ರವೇ ಔಷಧಿ: ವಿನಯ್ ಗುರೂಜಿ

    ಕೊರೊನ ವೈರಸ್ ಬಗ್ಗೆ ತಾಳೆಗರಿ ಶಾಸ್ತ್ರದಲ್ಲಿ ಉಲ್ಲೇಖ, ಗೋಮೂತ್ರವೇ ಔಷಧಿ: ವಿನಯ್ ಗುರೂಜಿ

    ಹಾಸನ: ಕೊರೊನ ವೈರಸ್‍ಗೆ ಗೋಮೂತ್ರವೇ ಔಷಧವಾಗಿದ್ದು, ಈ ವೈರಸ್ ಬಗ್ಗೆ ಆರು ಸಾವಿರ ವರ್ಷಗಳ ಹಿಂದೆಯೇ ನಮ್ಮ ತಾಳೆಗರಿ ಶಾಸ್ತ್ರದಲ್ಲಿ ಉಲ್ಲೇಖವಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.

    ಹಾಸನದ ಮಲ್ಲಪ್ಪನಹಳ್ಳಿಯ ಮಲ್ಲಿಕಾರ್ಜುನ ದೇವಾಲಯದ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವಧೂತ ವಿನಯ್ ಗುರೂಜಿ, ಈ ವಿಷದ ಗಾಳಿಯಿಂದಾಗಿ ಈಶಾನ್ಯ ಭಾರತದಲ್ಲಿ ಮೃತ್ಯು ಸಂಭವಿಸುತ್ತದೆ ಎಂದು ಆ ಗ್ರಂಥದಲ್ಲಿ ಬರೆಯಲಾಗಿತ್ತು. ಬ್ರಹ್ಮೇಂದ್ರ ಅವರು ಬರೆದ ಈ ಗ್ರಂಥದಲ್ಲಿ ರಸ್ತೆ ರಸ್ತೆಯಲ್ಲಿ ಜನ ಸಾಯುತ್ತಾರೆ ಎಂದು ಬರೆಯಲಾಗಿದ್ದು, ಈಗ ಅದೇ ಆಗುತ್ತಿದೆ. ದೇವರು ಇದ್ದಾನೆ ಎಂಬ ನಂಬಿಕೆಯಿಂದ ಭಾರತೀಯ ಜನರು ಬದುಕುತ್ತಿದ್ದಾರೆ ಎಂದರು.

    ಋಷಿಮುನಿಗಳು ದೊಡ್ಡ ವಿಜ್ಞಾನಿಗಳು. ನಾವು ನಾಲ್ಕು ಪಿಎಚ್‍ಡಿ ಮಾಡಿ ಅದನ್ನೇ ಡಾಕ್ಟರೇಟ್ ಎಂದು ಭಾವಿಸುತ್ತೇವೆ. ಎಷ್ಟೇ ವರ್ಷ ತಪಸ್ಸು ಮಾಡಿ ತಮ್ಮ ತ್ರಿಕಾಲ ಜ್ಞಾನಕ್ಕೆ, ಅನುಭವಕ್ಕೆ ಸಿಕ್ಕ ಸತ್ಯಗಳನ್ನು ಮುಂದಿನ ಪೀಳಗೆಗೂ ಇರಲಿ ಎಂದು ತಾಳೆಗರಿ ಮೇಲೆ ಬರೆದಿಟ್ಟಿದ್ದರು. ರಾಜ್ಯ ಹಾಗೂ ರಾಷ್ಟ್ರ ಸರ್ಕಾರ ಅದನ್ನು ತಿರಸ್ಕಾರ ಮಾಡದೇ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ.

    ಕೊರೊನಾ ವೈರಸ್‍ಗೆ ಔಷಧಿ ಇಲ್ಲ ಎಂದು ಹೇಳುವುದು ಮೂರ್ಖತನ ಎಂದುಕೊಳ್ಳುತ್ತೇನೆ. ಏಕೆಂದರೆ ಗೋಮೂತ್ರದಲ್ಲಿ ಎಲ್ಲದಕ್ಕೂ ಔಷಧಿ ಇದೆ. ಪರಿಸರದಿಂದ ಸಮಸ್ಯೆಗೆ ಪರಿಸರದಿಂದಲೇ ಉತ್ತರ ಸಿಗುತ್ತದೆ. ಸ್ವಲ್ಪ ಹುಡುಕಬೇಕು ಅಷ್ಟೇ. ಎಲ್ಲದಕ್ಕೂ ಎಂಬಿಬಿಎಸ್ ಕೊನೆಯಲ್ಲ. ನಾನು ಎರಡು ವರ್ಷಗಳ ಹಿಂದೆ ಆ ತಾಳೆಗರಿ ಓದಿದಾಗ ವಿಷದ ಗಾಳಿ ಬೀಸುತ್ತೆ ಎಂದು ಉಲ್ಲೇಖವಿದೆ. ಕೊರೊನಾ ವೈರಸ್ ಕೂಡ ಗಾಳಿಯಿಂದ ಹರಡುತ್ತಿದೆ. ಅದು 6 ಸಾವಿರ ವರ್ಷಗಳ ಹಿಂದಿನ ಗ್ರಂಥ ಎಂದು ವಿನಯ್ ಗುರೂಜಿ ತಿಳಿಸಿದರು.

    ಇದೇ ವೇಳೆ ಮಾತನಾಡಿದ ಅವರು, ಈ ಹಿಂದೆ ಎಚ್1ಎನ್1 ಬಂದಾಗ ಅಮೃತಬಳ್ಳಿ ಕೆಲಸ ಮಾಡಿರಲಿಲ್ವಾ? ಹಿಮಾಲಯದಲ್ಲಿ ಋಷಿಗಳಿಗೆ ಆಧ್ಯಾತ್ಮಕ ಶಕ್ತಿ ರಕ್ಷಿಸುತ್ತಿದೆ. ಹಾಗಾಗಿ ಅವರಿಗೆ ಯಾವ ಭಯವಿರುವುದಿಲ್ಲ. ನಮಗೆ ಕಾಣಿಸುತ್ತಿರುವುದು ಅಷ್ಟೇ ಸತ್ಯ ಎಂಬುದು ಭ್ರಾಂತ. ನಮಗೆ ಕಾಣಿಸದಿರುವುದು ಹಲವು ವಿಷಯಗಳಿವೆ. ಸದ್ಯ ಈ ಜಾಗವು ಮುಂದಿನ ದಿನಗಳಲ್ಲಿ ಕೇದಾರನಾಥವಾಗಲಿದೆ. ಈ ಸ್ಥಳಕ್ಕೆ ಮುಂದಿನ ಎರಡು ವರ್ಷಗಳ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ವಿನಯ್ ಗುರೂಜಿ ಭವಿಷ್ಯ ನುಡಿದರು.

  • ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

    ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

    ಬೆಂಗಳೂರು: ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರು ದೈವ ಮಾನವನ ಮೊರೆ ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ನೋವಿನಲ್ಲಿ ಶಾಸಕ ಅರವಿಂದ ಲಿಂಬಾವಳಿ, ವಿನಯ್ ಗುರೂಜಿ ಮೊರೆ ಹೋಗಿದ್ದಾರೆ. ದೈವ ಮಾನವನ ಮಾತು ಕೇಳಿ ಲಿಂಬಾವಳಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

    ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಜೊತೆಗೆ ಮೂಲ ಬಿಜೆಪಿ ಶಾಸಕರು ಕೆಲವರು ಸಚಿವರಾಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಮೂಲ ಬಿಜೆಪಿ ಶಾಸಕರ ಪ್ರಮಾಣ ವಚನ ಸ್ವೀಕಾರ ರದ್ದಾಗಿತ್ತು. ಹಾಗೆಯೇ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡವರಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಹ ಒಬ್ಬರು. ತಮಗಾದ ಕೊನೆ ಗಳಿಗೆಯ ನಿರಾಸೆಯಿಂದ ಬೇಸರಗೊಂಡ ಲಿಂಬಾವಳಿ ದೈವ ಮಾನವ ವಿನಯ ಗುರೂಜಿ ಮೊರೆ ಹೋಗಿದ್ದಾರೆ.

    ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಶರವಣ ಜೊತೆ ವಿನಯ್ ಗುರೂಜಿಯನ್ನ ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿತಿಸಿರುವ ವಿನಯ್ ಗುರೂಜಿ, ಸಚಿವರಾಗಲು ಇನ್ನೂ ಸ್ವಲ್ಪ ಸಮಯದವರೆಗೆ ಕಾಯುವುದು ಅನಿವಾರ್ಯ ಎಂದಿದ್ದಾರೆ. ಅಲ್ಲಿಗೆ ತಮಗೆ ಸಚಿವ ಸ್ಥಾನದ ಯೋಗ ಸದ್ಯಕ್ಕೆ ಇಲ್ಲಾ ಎಂಬುದು ಶಾಸಕ ಅರವಿಂದ ಲಿಂಬಾವಳಿಗೆ ಖಚಿತವಾಗಿದೆ. ಮೊದಲೇ ಸಚಿವ ಸ್ಥಾನದಿಂದ ಕೊನೆ ಗಳಿಗೆಯಲ್ಲಿ ವಂಚಿತರಾದ ಅರವಿಂದ ಲಿಂಬಾವಳಿ ಸದ್ಯಕ್ಕೆ ಸಚಿವ ಸ್ಥಾನದ ಅವಕಾಶ ಇಲ್ಲ ಎನ್ನುವ ದೈವ ಮಾನವನ ಮಾತು ಕೇಳಿ ಮತ್ತಷ್ಟು ಬೇಸರಗೊಂಡಿದ್ದಾರೆ.

  • ಗುರೂಜಿಯಾಗಲ್ಲ ಕನ್ನಡಿಗನಾಗಿ ಧರಣಿಗೆ ಬಂದಿದ್ದೇನೆ: ವಿನಯ್ ಗುರೂಜಿ

    ಗುರೂಜಿಯಾಗಲ್ಲ ಕನ್ನಡಿಗನಾಗಿ ಧರಣಿಗೆ ಬಂದಿದ್ದೇನೆ: ವಿನಯ್ ಗುರೂಜಿ

    -100ನೇ ದಿನಕ್ಕೆ ಕಾಲಿಟ್ಟ ಸರೋಜಿನಿ ಮಹಿಷಿ ಧರಣಿ

    ಬೆಂಗಳೂರು: ಕನ್ನಡಿಗರಿಗೆ ಕರ್ನಾಟಕದ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಿ ಎಂದು ಕನ್ನಡ ಪರ ಸಂಘಟನೆಗಳು ಮಾಡುತ್ತಿರುವ ಧರಣಿ 100ನೇ ದಿನಕ್ಕೆ ಕಾಲಿಟ್ಟಿದೆ.

    ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ವಿನಯ್ ಗುರೂಜಿ ಮತ್ತು ಮಾಜಿ ಸಚಿವ ಯು.ಟಿ ಖಾದರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೌರ್ಯ ಸರ್ಕಲ್‍ನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿ, 100 ದಿನದ ಹೋರಾಟವನ್ನ ದೀಪ ಬೆಳಗುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.

    ಈ ಬಗ್ಗೆ ಮಾತನಾಡಿದ ವಿನಯ್ ಗುರೂಜಿ, ಕರ್ನಾಟಕದಲ್ಲಿ ಕನ್ನಡಿಗರು ವಿಷ ಕುಡಿಯೋಕೆ ಅವಕಾಶ ಸರ್ಕಾರ ಮಾಡಿಕೊಡಬಾರದು. ಬೇರೆ ರಾಜ್ಯದವರಿಗೆ ಕೆಲಸ ಕೊಡೋದಲ್ಲ ನಮ್ಮ ರಾಜ್ಯದವರಿಗೆ ಕೆಲಸ ಕೊಡಿ. ನಮ್ಮ ಮನೆ ಪೈಂಟ್ ಮೊದಲು ಮಾಡಿ ಆ ಮೇಲೆ ಬೇರೆ ಮನೆ ಪೈಂಟ್ ಮಾಡಿ. ನಾನು ತನು, ಮನ, ಧನ ಎಲ್ಲಾ ಮರೆತು ಇದಕ್ಕೆ ಕೆಲಸ ಮಾಡುತ್ತೇನೆ. ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ ಎಂದರು.

    ಯಾವುದೇ ಗುರೂಜಿಯಾಗಿ ನಾನಿಲ್ಲಿ ಬಂದಿಲ್ಲ. ಸಾಮಾನ್ಯ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಕುಳಿತಿರುವ ಎಲ್ಲರು ಕನ್ನಡಿಗರೇ, ಕನ್ನಡಿಗರ ವೋಟಿನಿಂದ ಸರ್ಕಾರ ಇದೆ. ನಾನೊಬ್ಬ ಗುರೂಜಿಯಾಗಲ್ಲ ಕನ್ನಡಿಗನಾಗಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಇದು ಭರವಸೆ ಅಲ್ಲ ಇದು ನನ್ನ ಕರ್ತವ್ಯ. ಈ ಹೋರಾಟಕ್ಕೋಸ್ಕರ ನಾನು ಇವತ್ತು ಒಂದು ಹೊತ್ತಿನ ಊಟ ಬಿಡುತ್ತಿದ್ದೀನಿ. ಎಲ್ಲರಿಗೂ ಇದು ಮಾದರಿಯಾಗಬೇಕು ಹೋರಾಟ ಮುಂದುವರೆಯಲಿ ಎಂದು ಹೇಳಿದರು.

    ಕಳೆದ ನವಂಬರ್ 1ರಿಂದ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಟ ಅವದಿ ಪ್ರತಿಭಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರಾರಂಭವಾಗಿದ್ದು, ಇಂದಿಗೆ 100ನೇ ದಿನಕ್ಕೆ ಕಾಲಿಟ್ಟಿದೆ.

    100 ದಿನ ಧರಣಿ ಮಾಡಿದರೂ ಸರ್ಕಾರದಿಂದ ಡಾ. ಸರೋಜಿನಿ ಮಹಿಷಿ ವರದಿಯನ್ನ ಅನುಷ್ಠಾನಗೊಳಿಸುವ ಯಾವುದೇ ರೀತಿಯ ಭರವಸೆಗಳು ಸಿಕ್ಕಿಲ್ಲ. ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತಂದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವದ ದಿನದಿಂದ ಹೋರಾಟವನ್ನ ಮಾಡಿಕೊಂಡು ಬಂದಿದೆ.

  • ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬ ವಿನಯ್ ಗುರೂಜಿ ಮೆರವಣಿಗೆ

    ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬ ವಿನಯ್ ಗುರೂಜಿ ಮೆರವಣಿಗೆ

    ಚಿಕ್ಕಮಗಳೂರು: ಅಣ್ಣ-ತಮ್ಮಂದಿರು ಜಗಳವನ್ನು ರಾಜೀ ಮಾಡಿದ್ದಕ್ಕೆ ಅವಧೂತ ವಿನಯ್ ಗುರೂಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬಾ ಮೆರವಣೆಗೆ ಮಾಡಲಾಗಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗ್ರಾಮವೊಂದರಲ್ಲಿ ಅಣ್ಣ-ತಮ್ಮಂದಿರು ಜಗಳ ಮಾಡಿಕೊಂಡಿದ್ದರು. ಮನೆಗೆ ದೇವರ ಅಡ್ಡೆಗಳನ್ನು (ಪಲ್ಲಕ್ಕಿ) ತಂದಾಗ ಎರಡು ದೇವರಲ್ಲಿ ಒಂದು ದೇವರು ಮನೆ ಪ್ರವೇಶಿಸಿದೆ. ಆದರೆ ಮತ್ತೊಂದು ದೇವರು ಮನೆಯೊಳಗೆ ಹೋಗಿಲ್ಲ. ಪೂಜೆ ಮಾಡಿ ಎಷ್ಟೆ ಬೇಡಿಕೊಂಡರು ದೇವರು ಮನೆಯೊಳಗೆ ಹೋಗಿಲ್ಲ. ಆಗ ಸ್ಥಳಕ್ಕೆ ಬಂದ ಅವಧೂತ ವಿನಯ್ ಗುರೂಜಿ ಅಣ್ಣ-ತಮ್ಮಂದಿರನ್ನು ರಾಜಿ ಮಾಡಿಸುತ್ತಿದ್ದಂತೆ ಮನೆಯೊಳಗೆ ಹೋಗದೆ ಹಠ ಹಿಡಿದು ಕುಳಿತ್ತಿದ್ದ ದೇವರು ಮನೆಯೊಳಕ್ಕೆ ಹೋಗಿದೆ.

    ಇದೇ ಖುಷಿಗೆ ಸ್ಥಳೀಯರು ವಿನಯ್ ಗುರೂಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಸ್ಥಳೀಯರು ವಿನಯ್ ಗುರೂಜಿಯನ್ನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವಾಗ ಅಳುತ್ತಿದ್ದ ಮಗುವನ್ನು ಕಂಡು ವಿನಯ್ ಗುರೂಜಿ ತೊಡೆ ಮೇಲೆ ಕೂರಿಸಿಕೊಂಡು ಸಮಾಧಾನ ಮಾಡುತ್ತಾ ಮಗುವನ್ನು ಸಂತೈಸಿದ್ದಾರೆ. ಅವರ ತೊಡೆ ಮೇಲೆ ಕೂರುತ್ತಿದ್ದಂತೆ ಮಗು ಕೂಡ ಅಳುವುದನ್ನ ನಿಲ್ಲಿಸಿದೆ.

    ಹರಿಹರಪುರ ಸಮೀಪದ ನಂದಿಗೋಡು ಗ್ರಾಮದ ಸಚಿನ್ ಹಾಗೂ ಧ್ವನಿ ದಂಪತಿಯ ಹೀರಾ ಮಗು ವಿನಯ್ ಗುರೂಜಿ ಜೊತೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿದ್ದು, ಹೆತ್ತವರಲ್ಲೂ ಖುಷಿ ತಂದಿದ್ದು, ಸ್ಥಳೀಯರು ಪುಣ್ಯವಂತ ಮಗು ಎಂದಿದ್ದಾರೆ.

  • ಅಬ್ಬಾಬ್ಬ ಇದೇನ್ ಅವಧೂತರ ಅವತಾರ- ಇದು ನಿಜ “ಹುಲಿಯಾ”?

    ಅಬ್ಬಾಬ್ಬ ಇದೇನ್ ಅವಧೂತರ ಅವತಾರ- ಇದು ನಿಜ “ಹುಲಿಯಾ”?

    ಬೆಂಗಳೂರು: ಅವಧೂತ ವಿನಯ್ ಗುರೂಜಿ ವ್ಯಾಘ್ರ ಚರ್ಮದ ಮೇಲೆ ಕುಳಿತು ಹೊಸ ವಿವಾದ ಸೃಷ್ಟಿಸಿದ್ದಾರೆ. ಹೌದು ಹುಲಿಯ ಚರ್ಮದಲ್ಲಿ ಕೂತ ಅವಧೂತ ವಿನಯ್ ಗುರೂಜಿ ಫೋಟೋ ವೈರಲ್ ಆಗಿದೆ.

    ತಾನು ಅಹಿಂಸವಾದಿ, ಸರಳ ಮನುಷ್ಯ, ಗಾಂಧಿವಾದಿ ಎನ್ನುವ ವಿಜಯ್ ಗುರೂಜಿ ಪೂರ್ಣ ಪ್ರಮಾಣದ ಅಸಲಿ ಹುಲಿಯ ಚರ್ಮದ ಮೇಲೆ ಕುಳಿತ ಫೋಟೋ ಈಗ ಪ್ರಾಣಿಪ್ರಿಯರ ಕೆಂಗಣ್ಣಿಗೆ ಕಾರಣವಾಗಿದೆ. ಹುಲಿಯ ಚರ್ಮ ಗುರೂಜಿ ಆಶ್ರಮದಲ್ಲಿ ಹೇಗೆ ಅನ್ನುವ ಪ್ರಶ್ನೆ, ಇದು ಕಾನೂನುಬಾಹಿರ ಅನ್ನೋದು ಗೊತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಭಕ್ತರಿಂದ ಸ್ಪಷ್ಟನೆಯೂ ಸಿಕ್ಕಿದೆ.

    ಅಮರೇಂದ್ರ ಎಂಬವರು ವನ್ಯ ಪ್ರಾಣಿ ವಿಭಾಗದಿಂದ ಅನುಮತಿ ಪಡೆದುಕೊಂಡು ಎಂಬತ್ತು ವರ್ಷ ಹಳೆಯ ಹುಲಿ ಚರ್ಮವನ್ನು ಆಶ್ರಮಕ್ಕೆ ಗೌರವ ಪೂರ್ವಕವಾಗಿ ಕೊಡುಗೆಯಾಗಿ ನೀಡಿದ್ದಾರೆ. ಇಲಾಖೆಯಿಂದ ಅನುಮತಿ ಸಿಕ್ಕಿದೆ ಅಂತಾ ಸ್ಪಷ್ಟನೆ ನೀಡಲಾಗಿದೆ. ಸ್ಪಷ್ಟನೆ ನೀಡಿದರೂ ಇದು ಸರಿಯಲ್ಲ, ಸಮಾಜಕ್ಕೆ ಮಾದರಿ ಆಗಬೇಕಾದವರು ಈ ರೀತಿ ಮಾಡೋದು ತಪ್ಪು ಎಂದು ಪ್ರಾಣಿಪ್ರಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  • ವಿನಯ್ ಗುರೂಜಿ ಮೊರೆ ಹೋದ್ರು ಎಚ್‌ಡಿಡಿ

    ವಿನಯ್ ಗುರೂಜಿ ಮೊರೆ ಹೋದ್ರು ಎಚ್‌ಡಿಡಿ

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡರು ಅವಧೂತ ವಿನಯ್ ಗುರೂಜಿ ಮೊರೆ ಹೋಗಿದ್ದಾರೆ.

    ಜೆಡಿಎಸ್ ಸಂಕಷ್ಟಕ್ಕೆ ಯಾವಾಗ ಪರಿಹಾರ, ಎಲ್ಲಾ ಗೊಂದಲಗಳಿಗೆ ಯಾವಾಗ ಮುಕ್ತಿ ಅಂತ ತಮ್ಮ ಪಕ್ಷದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರೂಜಿ ಬಳಿ ತೆರಳಿದಾಗ, ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಕೈಯಲ್ಲಾದ ಪ್ರಯತ್ನ ಮಾಡಿ. ಕೆಲವರು ಹೋಗಬಹುದು ಮತ್ತೆ ಕೆಲವರು ಉಳಿಯಬಹುದು. ಹೀಗಾಗಿ ಉತ್ತರಾಯಣದವರೆಗೆ ಕಾಯಿರಿ ಎಂದು ಗುರೂಜಿ ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಹಜವಾಗಿಯೇ ಕೆಲವು ಸಮಸ್ಯೆಗಳು ಆಗಿಯೇ ಆಗುತ್ತವೆ. ಆದರೆ ಪಕ್ಷದ ಮುಂದಿನ ಬೆಳವಣಿಗೆ ಬಗ್ಗೆ ತಿಳಿಯಲು ಉತ್ತರಾಯಣದವರೆಗೆ ಕಾಯಲೇಬೇಕು ಎಂದಿದ್ದಾರೆ. ಉತ್ತರಾಯಣದ ನಂತರ ಮುಂದಿನ ಹಾದಿಯ ಬಗ್ಗೆ ನಾನು ಹೇಳುತ್ತೇನೆ ಎಂದು ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಕ್ಷದ ನಾಯಕರಿಗೇ ಸವಾಲೆಸೆದು ರೆಸಾರ್ಟಿನತ್ತ 15ಕ್ಕೂ ಹೆಚ್ಚು ಶಾಸಕರು?

    ಶಾಸಕರ ಬಂಡಾಯ ಮುಖಂಡರ ಅಸಮಾಧಾನ ಎಲ್ಲದರಿಂದ ಕಂಗೆಟ್ಟ ಜೆಡಿಎಸ್ ನಾಯಕರಿಗೆ ಜೆಡಿಎಸ್ ಪಕ್ಷದ ಭವಿಷ್ಯದ ಚಿಂತೆಯಾಗಿದೆ. ಆದರೆ ಪಕ್ಷದ ಮುಂದಿನ ಭವಿಷ್ಯದ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಉತ್ತರಾಯಣದವರೆಗೆ ಕಾಯಲೇಬೇಕಿರುವುದು ಅನಿವಾರ್ಯವಾಗಿದೆ.

  • 2 ದಿನದ ಹಿಂದೆ ವಿನಯ್ ಭೇಟಿಯಾಗಿದ್ದ `ಬಂಡೆ’ – ಗುರೂಜಿ ಮಾತು ಕೇಳಿ ಹೌಹಾರಿದ ಡಿಕೆಶಿ

    2 ದಿನದ ಹಿಂದೆ ವಿನಯ್ ಭೇಟಿಯಾಗಿದ್ದ `ಬಂಡೆ’ – ಗುರೂಜಿ ಮಾತು ಕೇಳಿ ಹೌಹಾರಿದ ಡಿಕೆಶಿ

    ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ 2 ದಿನದ ಹಿಂದೆಯಷ್ಟೇ ವಿನಯ್ ಗುರೂಜಿ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಗುರೂಜಿ ಮಾತು ಕೇಳಿ ಡಿಕೆಶಿ ಹೌಹಾರಿದ್ದಾರೆ.

    ಡಿ.ಕೆ ಶಿವಕುಮಾರ್ 2 ದಿನದ ಹಿಂದೆ ಅವದೂತ ವಿನಯ್ ಗುರೂಜಿಯನ್ನು ಬೆಂಗಳೂರಿನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ಭೇಟಿ ಮಾಡಿದ ಸಂದರ್ಭದಲ್ಲಿ ವಿನಯ್ ಗುರೂಜಿ ಡಿಕೆಶಿಗೆ ನಿಮ್ಮ ಸ್ಥಿತಿ ಮುಳ್ಳಿನ ಮೇಲೆ ಬಿದ್ದ ಪಂಚೆಯಂತಾಗಿದೆ. ಎಚ್ಚರಿಕೆಯಿಂದ ಪಂಚೆ ಎತ್ತಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ರಾಜಕಾರಣ ಏನೇ ಇರಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಒಮ್ಮೆ ಭೇಟಿಯಾಗುವುದು ಒಳ್ಳೆಯದು ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಗುರೂಜಿ ಮಾತು ಕೇಳಿದ ಡಿಕೆಶಿ, ಅಮಿತ್ ಶಾ ಭೇಟಿಗೆ ನನ್ನ ಮನಸ್ಸು ಒಪ್ಪಲ್ಲ. ಅಲ್ಲದೆ ನನ್ನ ಪಕ್ಷ ಕೂಡ ಒಪ್ಪಲ್ಲ. ಬೇರೆ ಏನಾದರು ಮಾರ್ಗ ಇದ್ದರೆ ಹೇಳಿ ಎಂದು ಕೇಳಿದ್ದಾರೆ. ಆಗ ವಿನಯ್ ಗುರೂಜಿ ಗುರು ಪಾರಾಯಣ ಹಾಗೂ ಜಪಮಾಲೆಯನ್ನು ಡಿಕೆಶಿಗೆ ನೀಡಿದ್ದಾರೆ ಎನ್ನಲಾಗಿದೆ.

    ಅಲ್ಲದೆ ಎರಡು ಎಳನೀರು ನೀಡಿ ಅದನ್ನು ಸ್ವೀಕರಿಸುವಂತೆ ಸೂಚಿಸಿದ್ದಾರೆ. ಅಂತಿಮವಾಗಿ ಗುರೂಜಿ ನಾನು ಅಮಿತ್ ಶಾ ಅವರನ್ನು ಭೇಟಿಯಾಗಲಾರೆ. ಆದರೆ ದೇವರನ್ನು ದೈವ ಶಕ್ತಿಯನ್ನು ನಂಬುತ್ತೇನೆ. ಅದರಿಂದಲೇ ನನಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ನನ್ನದು ಆಶೀರ್ವದಿಸಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಂದ ಬಂಧಿತರಾಗಿ 48 ದಿನಗಳ ಕಾಲ ತಿಹಾರ್ ಜೈಲು ಅನುಭವಿಸಿ ನಂತರ ಡಿಕೆಶಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಬೆಂಗಳೂರಿಗೆ ಬಂದಿರುವ ಮಾಜಿ ಸಚಿವರು ಟೆಂಪಲ್ ರನ್ ನಡೆಸಿದ್ದರು. ಈ ಮಧ್ಯೆ ಗುರೂಜಿಯನ್ನು ಕೂಡ ಭೇಟಿ ಮಾಡಿದ್ದರು ಎನ್ನಲಾಗಿದೆ.

  • ವಿನಯ್ ಗುರೂಜಿ ಬೆಂಬಲಿಗರ ಮೇಲೆ ಕೊಲೆ ಯತ್ನ ಪ್ರಕರಣ: ಎಸ್‍ಪಿ ನಿಶಾ ಜೇಮ್ಸ್

    ವಿನಯ್ ಗುರೂಜಿ ಬೆಂಬಲಿಗರ ಮೇಲೆ ಕೊಲೆ ಯತ್ನ ಪ್ರಕರಣ: ಎಸ್‍ಪಿ ನಿಶಾ ಜೇಮ್ಸ್

    ಉಡುಪಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಮೇಲೆ ಅವಧೂತ ವಿನಯ್ ಗುರೂಜಿ ಬೆಂಬಲಿಗರು ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಕೇಸ್ ದಾಖಲಾಗಿದೆ.

    ಉಡುಪಿ ಜಿಲ್ಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಿಸಿ ನಾಲ್ವರನ್ನು ದಸ್ತಗಿರಿ ಮಾಡಿದ್ದೇವೆ. ರತ್ನಾಕರ್ ಪೂಜಾರಿ, ತಾನು ನಟ ಸುದೀಪ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ವಿನಯ್ ಗುರೂಜಿ, ಸುದೀಪ್ ಅವರ ಬಗ್ಗೆ ಲೂಸ್ ಟಾಕ್ ಮಾಡಿದ್ದಾರೆ ಎಂಬುದು ರತ್ನಾಕರ ಅವರ ಆರೋಪ. ಇದರಿಂದ ಕೊಪಗೊಂಡ ಅವರು, ಗುರೂಜಿ ವಿರುದ್ಧ ಪೋಸ್ಟ್ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ. ರತ್ನಾಕರ್ ಪೂಜಾರಿಯ ಕೈ, ಕಾಲು ಮುರಿದಿದೆ ಎಂದು ಎಂದು ಎಸ್‍ಪಿ ಮಾಹಿತಿ ನೀಡಿದರು. ಇದನ್ನೂ ಓದಿ: ವಿನಯ್ ಗುರೂಜಿ ಬೆಂಬಲಿಗರ ಗೂಂಡಾಗಿರಿ- ಕಿಚ್ಚನ ಅಭಿಮಾನಿ ಮೇಲೆ ಹಲ್ಲೆ

    ನಾಲ್ವರು ಆರೋಪಿಗಳಾದ ಗುರುರಾಜ್, ಸಂತೋಷ್, ರವಿರಾಜ್, ಪ್ರದೀಪ್ ದಸ್ತಗಿರಿ ಮಾಡಿದ್ದೇವೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ. ಘಟನೆಯಲ್ಲಿ 8 ರಿಂದ 10 ಆರೋಪಿಗಳು ಇದ್ದಾರೆ ಎಂದು ದೂರುದಾರ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರ 2 ತಂಡ ರಚನೆ ಮಾಡಿ ಹುಡುಕಾಟ ಮಾಡುತ್ತಿದ್ದೇವೆ ಎಂದು ಉಡುಪಿ ಎಸ್‍ಪಿ ನಿಶಾ ಜೇಮ್ಸ್ ಹೇಳಿದ್ದಾರೆ. ರತ್ನಾಕರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ 15 ಮಂದಿ ರಾಡ್‌ನಿಂದ ಹಲ್ಲೆ ಮಾಡಿದ್ರು- ಸುದೀಪ್ ಅಭಿಮಾನಿ

    ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಚಾರ ಚರ್ಚೆಯಾದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸ್ಕ್ರಾಲ್ ಮಾಡಿ ಮುಂದಕ್ಕೆ ಹೋಗಬೇಕು. ಈ ಘಟನೆಯಲ್ಲಿ ಯುವಕರೇ ಶಾಮೀಲಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗೆ ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿಶಾ ಅವರು ಕಿವಿಮಾತು ಹೇಳಿದ್ದಾರೆ.

  • ಕಿಚ್ಚನ ಕಾಲೆಳೆದ ವಿನಯ್‍ಗೆ ಅರ್ಜುನ ಗುರೂಜಿ ಸಖತ್ ಟಾಂಗ್

    ಕಿಚ್ಚನ ಕಾಲೆಳೆದ ವಿನಯ್‍ಗೆ ಅರ್ಜುನ ಗುರೂಜಿ ಸಖತ್ ಟಾಂಗ್

    ಬೆಂಗಳೂರು: `ಹೆಬ್ಬುಲಿ’ ವಿಚಾರದಲ್ಲಿ ನಟ ಕಿಚ್ಚ ಸುದೀಪ್ ಕಾಲೆಳೆದ ವಿನಯ್ ಗುರೂಜಿಗೆ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ ಗುರೂಜಿ ಸಖತ್ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಇಬ್ಬರು ಅವಧೂತರ ಮಧ್ಯೆ ಬಿಗ್‍ಫೈಟ್ ಶುರುವಾಗಿದೆ.

    ಇತ್ತೀಚೆಗೆ ಹೆಬ್ಬುಲಿಯಂತೆ, ಮಾಣಿಕ್ಯ ಅಂತೆ, ನಿಜವಾದ ಹೆಬ್ಬುಲಿ ಬಂದ್ರೆ ಸುದೀಪ್ ಅಲ್ಲಿ ನಿಲ್ತಾನಾ ಎಂದು ವಿನಯ್ ಗುರೂಜಿ ಸುದೀಪ್ ಕಾಲೆಳೆದಿದ್ದರು. ಇದಕ್ಕೆ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ್ ಗುರೂಜಿ ಟಾಂಗ್ ಕೊಟ್ಟಿದ್ದು, ಕಲಾವಿದನನ್ನು ಪ್ರತಿಯೊಬ್ಬರು ಗೌರವಿಸೋದನ್ನು ಕಲಿಯಬೇಕು. ಸುದೀಪ್ ಎಂದರೆ ವಾಲ್ಮೀಕಿ ಸಮುದಾಯದ ಹೆಮ್ಮೆ. ಡಾ. ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಎಲ್ಲರೂ ಚಲನಚಿತ್ರದ ಮೂಲಕ ಭಾಷೆಯನ್ನು ಬೆಳೆಸಿದವರು. ಚಲನಚಿತ್ರ ಅನ್ನೋದೇ ಭಾಷೆಯ ಕಲೆಯನ್ನು ತೋರಿಸುವಂತದ್ದು. ಹೀಗಾಗಿ ಕಲಾವಿದನನ್ನು ಗೌರವಿಸಬೇಕು ಎಂದು ವಿನಯ್ ಗುರೂಜಿ ವಿರುದ್ಧ ಕಿಡಿಕಾರಿದ್ದಾರೆ.

    ಗುರೂಜಿ ಹೇಳಿದ್ದೇನು..?
    ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾರೆ ಎಂದು ಗುರೂಜಿ ಅಪಹಾಸ್ಯ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು.

  • ಸರಿಯಾದ ಹುಲಿ ಬಂದ್ರೆ ‘ಹೆಬ್ಬುಲಿ’ ಓಡಿ ಹೋಗ್ತಾರೆ – ವಿನಯ್ ಗುರೂಜಿ ವಿರುದ್ಧ ಸುದೀಪ್ ಅಭಿಮಾನಿಗಳು ಗರಂ

    ಸರಿಯಾದ ಹುಲಿ ಬಂದ್ರೆ ‘ಹೆಬ್ಬುಲಿ’ ಓಡಿ ಹೋಗ್ತಾರೆ – ವಿನಯ್ ಗುರೂಜಿ ವಿರುದ್ಧ ಸುದೀಪ್ ಅಭಿಮಾನಿಗಳು ಗರಂ

    ಬೆಂಗಳೂರು: ಒಂದಿಲ್ಲೊಂದು ವಿಡಿಯೋ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುವ ಅವಧೂತ ವಿನಯ್ ಗುರೂಜಿ ಇದೀಗ ಸ್ಯಾಂಡಲ್‍ವುಡ್ ನಟರೊಬ್ಬರನ್ನು ಅಪಹಾಸ್ಯ ಮಾಡಿದ್ದಾರೆ.

    ಹೌದು. ಚಿಕ್ಕಮಗಳೂರು ಮೂಲದ ವಿಜಯ್ ಗುರೂಜಿ ಈ ಬಾರಿ ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಈ ಮೂಲಕ ಕಿಚ್ಚನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಗುರೂಜಿ ಹೇಳಿದ್ದೇನು..?
    ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾರೆ ಎಂದು ಗುರೂಜಿ ಅಪಹಾಸ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ನಾಗಾರಾಧನೆ ಬಗ್ಗೆ ಅವಹೇಳನ:
    ಈ ಹಿಂದೆ ವಿನಯ್ ಗುರೂಜಿ ಕರಾವಳಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಇನ್ನೊಬ್ಬರಿಗೆ ಅಡ್ಡ ಬೀಳಬೇಕಾದರೆ (ಕಾಲಿಗೆ ಬೀಳಬೇಕಾದರೆ) ಯಾಕೆ ಬೀಳಬೇಕು? ಅವನು ಏನು? ನಾನು ಏನು? ಎಂದು ಯೋಚನೆ ಮಾಡಿ. ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಎಂದು ತಿಳಿದುಕೊಂಡು ಪೂಜೆ ಮಾಡಿ. ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂ. ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಎಂದು ಹೇಳಿದ್ದರು. ಹೀಗೆ ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಅವಹೇಳನಗೈದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

    ಅಲ್ಲದೆ ತುಳುನಾಡಿನ ಭೂತಗಳು ಬ್ರಾಹ್ಮಣರ ಮನೆಯಲ್ಲಿ ಇಡ್ಲಿ ಸಾಂಬಾರ್ ಸ್ವೀಕರಿಸಿದರೆ, ಶೆಟ್ರ ಮನೆಯಲ್ಲಿ ಕೋಳಿ ಸ್ವೀಕಾರ ಮಾಡುತ್ತದೆ. ಇದೇನು ಭೂತಗಳಲ್ಲೂ ವೈರುಧ್ಯ, ತಾರತಮ್ಯ ಇದೆಯೇ? ದೇವರಿರುವುದು ನಮ್ಮಲ್ಲಿ ಶ್ರದ್ಧೆ ತರಿಸಲು ಹೊರತು ಅಂಧ ವಿಶ್ವಾಸಗಳಿಗಲ್ಲ ಎಂದು ವ್ಯಂಗ್ಯವಾಡಿದ್ದರು. ವಿನಯ್ ಗುರೂಜಿಯ ಈ ಮಾತುಗಳ ಬಗ್ಗೆ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು.