Tag: Villain Role

  • ವಿಲನ್ ಪಾತ್ರ ಮಾಡಬೇಡಿ – ಕಿಚ್ಚನಿಗೆ ಮನವಿ ಮಾಡಿದ ಅಭಿಮಾನಿಗಳು

    ವಿಲನ್ ಪಾತ್ರ ಮಾಡಬೇಡಿ – ಕಿಚ್ಚನಿಗೆ ಮನವಿ ಮಾಡಿದ ಅಭಿಮಾನಿಗಳು

    ಬೆಂಗಳೂರು: ವಿಲನ್ ಪಾತ್ರ ಮಾಡಬೇಡಿ. ನಿಮ್ಮನ್ನು ಯಾರೋ ಹೊಡೆಯೋದನ್ನ ನೋಡಕ್ಕಾಗಲ್ಲ ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ಸುದೀಪ್ ಅವರಿಗೆ ಮನವಿ ಮಾಡಿದ್ದಾರೆ.

    ಸುದೀಪ್ ಅವರು ಇತ್ತಿಚೇಗೆ ಪರಭಾಷೆ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆದರೆ ನಮ್ಮ ಭಾಷೆಯಲ್ಲಿ ತೆರೆಮೇಲೆ ಹೀರೋ ಆಗಿ ಅಬ್ಬರಿಸುವ ಕಿಚ್ಚ ಪರಭಾಷೆಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವುದು ಕಿಚ್ಚನ ಕೆಲ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹಾಗಾಗಿ ವಿಲನ್ ಪಾತ್ರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಸುದೀಪ್ ಅವರು ಕಳೆದ ತಿಂಗಳು ಬಿಡುಗಡೆಗೊಂಡ ಸಲ್ಮಾನ್ ಖಾನ್ ಅವರ ದಂಬಾಂಗ್-3 ಸಿನಿಮಾದಲ್ಲಿ ಬಾಲಸಿಂಗ್ ಎಂಬ ಹೆಸರಿನ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸುದೀಪ್ ಅವರಿಗೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿರುವ ಕಿಚ್ಚನ ಕೆಲ ಅಭಿಮಾನಿಗಳು, ಬಾಸ್ ನೀವು ಬೇರೆ ಬಾಷೆಯಲ್ಲಿ ವಿಲನ್ ಆಗಿ ಅಭಿನಯ ಮಾಡಬೇಡಿ. ನಿಮ್ಮನ್ನು ಯಾರೋ ಹೊಡೆಯೋದನ್ನ ನೋಡಕ್ಕಾಗಲ್ಲ. ಪರಭಾಷೆಯಲ್ಲಿ ‘ಈಗ’ ಚಿತ್ರದ ರೀತಿಯ ಪಾತ್ರಗಳಲ್ಲಿ ಅಭಿನಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಎಸ್.ಎಸ್ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈ ಗಾಳಿ ಸುದ್ದಿಗೆ ತೆರೆ ಎಳೆದಿರುವ ಕಿಚ್ಚ ಸುದೀಪ್ ಅವರು, ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಈ ವಿಚಾರವಾಗಿ ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ಈ ಚಿತ್ರದಲ್ಲಿ ನಟನೆ ಮಾಡುವ ಬಗ್ಗೆ ಯಾವುದೇ ಚರ್ಚೆ ಕೂಡ ಆಗಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದರು.

    ಕಿಚ್ಚ ಸುದೀಪ್ ಅವರ ಈ ಟ್ವೀಟ್‍ಗೆ ಕೆಲ ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಬಾಸ್ ಇನ್ನೂ ಮುಂದೆ ಬೇರೆ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಳ್ಳಬೇಡಿ. ಬೇರೆ ಭಾಷೆಯ ಚಿತ್ರಗಳ ಆಫರ್ ಬಂದರೆ ಮಾಡುವುದಿಲ್ಲ ಎಂದು ಹೇಳಿ. ನೀವು ಕನ್ನಡದಲ್ಲೇ ಬಹಳ ಸಿನಿಮಾ ಮಾಡಿ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಬೇಕು. ನೀವು ಈಗಾಗಲೇ ಬೇರೆ ಭಾಷೆಯಲ್ಲಿ ಸಿನಿಮಾ ಮಾಡಿ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಾ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

    ಇನ್ನೂ ಕೆಲ ಅಭಿಮಾನಿಗಳು ನಮ್ಮ ಹೀರೋಗಳು ಬೇರೆ ಭಾಷೆಗೆ ಹೋಗಿ ಸೈಡ್ ಆಕ್ಟಿಂಗ್ ಮಾಡುವುದು ಬೇಡ. ನಮ್ಮ ಭಾಷೆಯಲ್ಲೇ ಫ್ಯಾನ್ ಇಂಡಿಯಾ ಸಿನಿಮಾ ಮಾಡಿ. ಬೇರೆ ಭಾಷೆಯಲ್ಲಿ ವಿಲನ್ ಸೈಡ್ ಆಕ್ಟಿಂಗ್ ಮಾಡಬೇಡಿ ಎಂದು ಕಿಚ್ಚನ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಬಾಸ್ ಬೇರೆ ಭಾಷೆಯಲ್ಲಿ ಸೈಡ್ ಆಕ್ಟಿಂಗ್ ಮಾಡಬೇಡಿ. ಅದರ ಬದಲು ಹಾಲಿವುಡ್‍ನಲ್ಲಿ ಆಕ್ಟಿಂಗ್ ಮಾಡಿ ನಾವು ಕಾಲರ್ ಎತ್ತಿಕೊಂಡು ತಿರುಗುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.

    ಸದ್ಯ ಕಿಚ್ಚ ಸುದೀಪ್ ಅವರು ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು, ಸಂಕ್ರಾಂತಿ ಹಬ್ಬದಂದು ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿರುವ ಮೋಷನ್ ಪೋಸ್ಟರಿನಲ್ಲಿ ಸುದೀಪ್ ಲುಕ್ ಜಬರ್ದಸ್ತ್ ಆಗಿ ಮೂಡಿಬಂದಿದೆ. ಕಣ್ಣಿಗೆ ಕೂಲಿಂಗ್ ಗ್ಲಾಸ್, ಹ್ಯಾಟ್ ಹಾಕಿಕೊಂಡು ಕೈಯಲ್ಲಿ ಸಿಗಾರ್ ಹಿಡಿದುಕೊಂಡು ಮಾಸ್ ಆಗಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಮೋಷನ್ ಪೋಸ್ಟರಿನಲ್ಲಿ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ಸಖತ್ ಆಗಿ ಮೂಡಿ ಬಂದಿದೆ. ಕಿಚ್ಚನ ನ್ಯೂ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದರು.

    https://twitter.com/badshahcultK3/status/1218573746761392129

    ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕೋಟಿಗೊಬ್ಬ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಯಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

  • ಸೈನಿಕನಿಗೆ ಸಾಥ್ ಕೊಟ್ಟ ಯಜಮಾನ – ಇಬ್ಬರು ಯೋಧರಿಗೆ ವಿಲನ್ ರೋಲ್!

    ಸೈನಿಕನಿಗೆ ಸಾಥ್ ಕೊಟ್ಟ ಯಜಮಾನ – ಇಬ್ಬರು ಯೋಧರಿಗೆ ವಿಲನ್ ರೋಲ್!

    ಬೆಂಗಳೂರು: ಏನ್ನನಾದರೂ ಸಾಧಿಸಬೇಕೆಂಬ ನಿಜವಾದ ಹಸಿವು ಹೊಂದಿರುವವರಿಗೆ ಸದಾ ಸ್ಫೂರ್ತಿಯಾಗುತ್ತಲೇ ಸಾಥ್ ನೀಡುವ ವ್ಯಕ್ತಿತ್ವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು. ಹೊಸಬರಿಗೆ, ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರೋ ಅವರು ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ಮೂಲಕವೂ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಇದೀಗ ದರ್ಶನ್ ಅವರು ಯಜಮಾನ ಚಿತ್ರದಲ್ಲಿ ಮಾಜಿ ಸೈನಿಕರಿಬ್ಬರಿಗೆ ಅವಕಾಶ ಕಲ್ಪಿಸೋ ಮೂಲಕ ಸುದ್ದಿಯಲ್ಲಿದ್ದಾರೆ.

    ಯಜಮಾನ ಚಿತ್ರದ ಎರಡು ವಿಲನ್ ಕ್ಯಾರೆಕ್ಟರುಗಳನ್ನು ಮಾಜಿ ಯೋಧರಿಬ್ಬರು ನಿರ್ವಹಿಸಿದ್ದಾರಂತೆ. ಮಾಜಿ ಯೋಧರಾದ ಅರುಣ್ ಮತ್ತು ಕಾಮರಾಜ್ ದರ್ಶನ್ ಅವರ ಕಾಳಜಿಯಿಂದಲೇ ಯಜಮಾನ ಚಿತ್ರದ ಭಾಗವಾಗಿದ್ದಾರೆ. ಇದರಲ್ಲಿ ಕಾಮರಾಜ್ ತಮಿಳುನಾಡಿನವರು. ಶಂಕರ್ ನಿರ್ದೇಶನದ ಐ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಎದುರು ಈತ ವಿಲನ್ ಆಗಿ ಅಬ್ಬರಿಸಿದ್ದರು. ನೆಗೆಟಿವ್ ರೋಲಿಗೆ ಬೇಕಾದ ಕಟ್ಟುಮಸ್ತಾದ ದೇಹಸಿರಿ ಹೊಂದಿರೋ ಕಾಮರಾಜ್ ಈಗ ತಮಿಳುನಾಡಿನಲ್ಲಿ ಒಂದಷ್ಟು ಅವಕಾಶಗಳನ್ನು ಹೊಂದಿದ್ದಾರೆ.

    ಯಜಮಾನ ಚಿತ್ರದ ವಿಲನ್ ಪಾತ್ರವೊಂದಕ್ಕೆ ನಿರ್ದೇಶಕರು ಕಾಮರಾಜ್ ಅವರನ್ನು ಸಜೆಸ್ಟ್ ಮಾಡಿದಾಗ ಆತ ಮಾಜಿ ಸೈನಿಕನೆಂಬ ಕಾರಣದಿಂದಲೇ ದರ್ಶನ್ ಖುಷಿಯಿಂದ ಒಪ್ಪಿಕೊಂಡಿದ್ದರಂತೆ. ಇನ್ನೋರ್ವ ಅರುಣ್ ಕೂಡಾ ಭಾರತ ಸೇನೆಯ ಹೆಮ್ಮೆಯ ಯೋಧರಾಗಿದ್ದವರು. ಸೇನೆಯ ಪ್ರಮುಖ ಕಾರ್ಯಚರಣೆಗಳಲ್ಲಿ ಕೆಚ್ಚೆದೆಯಿಂದ ತೊಡಗಿಸಿಕೊಂಡಿದ್ದ ಅರುಣ್ ನಂತರ ದೇಹದಾರ್ಢ್ಯದತ್ತ ಗಮನಹರಿಸಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟನಾಗಿದ್ದಾರೆ. ಇವರೂ ಕೂಡಾ ಕನ್ನಡ ಚಿತ್ರದಲ್ಲಿ ನಟಿಸುವಂತಾದದ್ದು ದರ್ಶನ್ ಅವರ ಪ್ರೀತಿಯಿಂದಲೇ.

    ಈ ಇಬ್ಬರೂ ಯೋಧರ ಪಾತ್ರಗಳು ಯಜಮಾನ ಚಿತ್ರದ ಪ್ರಮುಖ ಆಕರ್ಷಣೆಯಂತೆ ಮೂಡಿ ಬಂದಿವೆಯಂತೆ. ಯಜಮಾನ ಚಿತ್ರದ ನಂತರ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ನೆಲೆ ನಿಲ್ಲುವ ಭರವಸೆ ಚಿತ್ರ ತಂಡದ್ದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv