Tag: villages

  • ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಚಂಡೀಗಢ: ಹರಿಯಾಣದಲ್ಲಿ ಕೋಮು ಸಂಘರ್ಷ (Haryana Communal Violence) ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಈ ನಡುವೆ ಇಲ್ಲಿನ ಮೂರು ಜಿಲ್ಲೆಗಳ 14 ಹಳ್ಳಿಗಳಿಗೆ ಮುಸ್ಲಿಮರನ್ನ ಬಹಿಷ್ಕರಿಸಲು (Boycott Muslims) ನಿರ್ಧರಿಸಿರುವುದಾಗಿ 14 ಗ್ರಾಮ ಪಂಚಾಯಿತಿಗಳು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ ಬರೆದಿವೆ.

    ಕಳೆದ ಜುಲೈ 31 ರಂದು ಆರಂಭವಾದ ಕೋಮು ಘರ್ಷಣೆಯಿಂದ ಮಹೇಂದ್ರಗಢ, ಜಜ್ಜರ್‌ ಮತ್ತು ರೇವಾರಿ ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ 14 ಗ್ರಾಮ ಪಂಚಾಯಿತಿಗಳು ಮುಸ್ಲಿಮರನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿವೆ. ಕೋಮು ಘರ್ಷಣೆ ನಂತರ ಮುಸ್ಲಿಮರಿಗೆ ಮನೆ ಮತ್ತು ಅಂಗಡಿಗಳನ್ನ ಬಾಡಿಗೆಗೆ ನೀಡದಂತೆ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ (Police Department) ಹಾಗೂ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ನುಹ್‌ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಸಂಘರ್ಷ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಗುರುಗ್ರಾಮ್‌, ಸೋನಿಪತ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿತ್ತು. ಗಲಭೆಕೋರರ ಗುಂಪು ವಿವಿಧ ಪ್ರದೇಶಗಳಿಗೆ ನುಗ್ಗಿ ಹಾನಿಯುಂಟುಮಾಡಿತ್ತು. ಈವರೆಗೆ 50ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದು 200ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಇದರೊಂದಿಗೆ ಹಿಂಸಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    14 ಹಳ್ಳಿಗಳ ಹಿಂದೂ ಮುಖಂಡರು ಬರೆದಿರುವ ಪತ್ರದಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಬಾಡಿಗೆ ಮನೆ, ಅಂಗಡಿಗಳನ್ನು ಬಾಡಿಗೆ ನೀಡುವುದಿಲ್ಲ. ಇಲ್ಲಿನ ಸಂಸ್ಥೆಗಳಲ್ಲೂ ಕೆಲಸ ನೀಡುವುದನ್ನ ನಿರಾಕರಿಸುವಂತೆ ಮನವಿ ಮಾಡಿದ್ದೇವೆ. ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತದೆ. ಹಿಂದೆಯೂ ಈ ರೀತಿ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಿಂಹ ರಾಹುಲ್‌ ಗಾಂಧಿ ಗೆದ್ದಿದ್ದಾರೆ – ಸಂಸತ್‌ ಸದಸ್ಯತ್ವ ಅನರ್ಹತೆ ವಾಪಸ್‌ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ

    ಈ ನಡುವೆ ಗುರುಗ್ರಾಮ್‌ ನಗರ ಪಾಲಿಕೆ ಕೌನ್ಸಿಲರ್‌ ಬ್ರಹ್ಮ್ ಯಾದವ್, ಜನರು ತಮ್ಮ ಆಸ್ತಿಯನ್ನು ಇತರರಿಗೆ ಬಾಡಿಗೆ ಅಥವಾ ಮಾರಾಟ ಮಾಡುವ ಮುನ್ನ ಗುರುತಿನ ಸಾಕ್ಷಿಗಳನ್ನ ಪರಿಶೀಲಿಸಬೇಕು. ಜಿಲ್ಲೆಯ ವಾಲ್ಮೀಕಿ ಜನಾಂಗದವರೇ ಮಾಂಸದ ಅಂಗಡಿಗಳನ್ನ ನಡೆಸಬೇಕು. ಮುಸ್ಲಿಮರು ನಡೆಸುತ್ತಿರುವ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂಲಭೂತ ಸೌಲಭ್ಯಗಳಿಲ್ಲ, ಕಾಡಂಚಿನ ಗ್ರಾಮಗಳ ಜನರ ಪರದಾಟ- ಶಾಲೆಗೆ ಹೋಗಲಾಗದೆ ಬಾಲಕನ ಕಣ್ಣೀರು

    ಮೂಲಭೂತ ಸೌಲಭ್ಯಗಳಿಲ್ಲ, ಕಾಡಂಚಿನ ಗ್ರಾಮಗಳ ಜನರ ಪರದಾಟ- ಶಾಲೆಗೆ ಹೋಗಲಾಗದೆ ಬಾಲಕನ ಕಣ್ಣೀರು

    ಕೋಲಾರ: ವಾಹನ ಸೌಲಭ್ಯವಿಲ್ಲದೆ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳ ದಾಳಿಯ ಭಯದಲ್ಲೇ ಕಾಡಿನಲ್ಲಿ ಈ ಬಾಲಕ ಶಾಲೆಯ ಬಗ್ಗೆ ಚಿಂತಿಸುತ್ತಿರುವ ಚಿತ್ರಣ ಎಂತಹವರಿಗೂ ನಡುಕ ಹುಟ್ಟಿಸುತ್ತದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕು ಮಲ್ಲೇಶನಪಾಳ್ಯ ಹಾಗೂ ತಳೂರು ಗ್ರಾಮದಳಲ್ಲಿ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಈ ಬಾಲಕ ಆನೆಗಳ ಭಯದ ಮಧ್ಯೆ ವಾಹನ ಸೌಲಭ್ಯಗಳಿಲ್ಲದ ಕಾಡಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದು ಶಾಲೆ ನೆನೆದು ಕಣ್ಣೀರು ಇಡುತ್ತಿದ್ದಾನೆ. ಈ ಬಾಲಕನಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಅತ್ತ ಕಾಡಂಚಿನಲ್ಲಿ ಕಾಡಾನೆಗಳ ಕಾಟ ಇರುವುದರಿಂದ ಭಯಗೊಂಡಿರುವ ಈ ಬಾಲಕ ದಿಕ್ಕು ಕಾಣದೆ ಕಣ್ಣೀರಾಕುತ್ತಿದ್ದಾನೆ.

    ಈ ಗಡಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಯಾವುದೇ ಸಾರಿಗೆ ಸಂಪರ್ಕವಿಲ್ಲ, ಮಕ್ಕಳು ಶಾಲೆಗೆ ಹೋಗಬೇಕೆಂದರೆ 2 ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಏನಾದರೂ ಬೇಕೆಂದರೂ ಗ್ರಾಮಸ್ಥರು ನಡೆದೇ ಹೋಗಬೇಕು. ಇಂತಹ ಸ್ಥಿತಿಯಲ್ಲಿರುವ ಈ ಗ್ರಾಮಕ್ಕೆ ಈಗ ಕಾಡಾನೆಗಳ ಹಾವಳಿ ಬೇರೆ ಹೆಚ್ಚಾಗಿದ್ದು, ಗಡಿ ಗ್ರಾಮಗಳ ಜನರು ಜೀವ ಭಯದಲ್ಲಿ ಹಗಲು ರಾತ್ರಿ ಬದುಕುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಯಾರನ್ನು ಕೇಳಿದರೂ ನಮ್ಮ ಕೂಗು ಅವರಿಗೆ ಕೇಳಿಸಿಲ್ಲ ಅನ್ನೋದು ಈ ಬಾಲಕನ ಕಣ್ಣೀರು.

    ಬಂಗಾರಪೇಟೆ ತಾಲೂಕು ಮಲ್ಲೇಶನಪಾಳ್ಯ, ತಳೂರು, ಭತ್ಲಹಳ್ಳಿ, ಕದಿರಿನತ್ತ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈಗಲೂ ಸರಿಯಾದ ರಸ್ತೆ ಇಲ್ಲ. ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮದ ಜನರು ಕಾಡಿನಲ್ಲಿ ಒಂದು ರೀತಿಯ ಕಾಡು ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಆರೋಗ್ಯ ಸಮಸ್ಯೆಯಾದರೆ ಇಪ್ಪತ್ತು ಕಿ.ಮೀ ಹೋಗಬೇಕು, ಮನೆಗೆ ದಿನಸಿ ಬೇಕಂದ್ರೆ ನಾಲ್ಕೈದು ಕಿ.ಮೀ ಹೋಗಬೇಕು.

    ಮಕ್ಕಳು ಶಾಲೆಗೆ ಹೋಗಬೇಕೆಂದರೆ ಎರಡು ಕಿ.ಮೀ ನಡೆದು ಹೋಗಬೇಕು ಇಂತಹ ಪರಿಸ್ಥಿತಿಯಲ್ಲಿರುವ ಗ್ರಾಮದ ಜನರು ಹತ್ತಾರು ವರ್ಷಗಳಿಂದ ಕಂಡ ಕಂಡವರ ಮುಂದೆ ಕೈಮುಗಿದು ನಿಂತರೂ ಇವರ ಸಮಸ್ಯೆಗಳು ಬಗೆಹರಿದಿಲ್ಲ. ಅಷ್ಟೇ ಅಲ್ಲದೆ ಇವರು ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನುಗಳಿಗೂ ಅರಣ್ಯ ಇಲಾಖೆಯವರು ಇದು ಅರಣ್ಯ ಭೂಮಿ ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ಹೀಗಾಗಿ ಸೌಲಭ್ಯಗಳ ವಂಚಿತ ಈ ಜನರು ತಮ್ಮ ಬದುಕನ್ನು ನೆನೆದು ನಿತ್ಯವೂ ಕಣ್ಣೀರು ಹಾಕುವ ಸ್ಥಿತಿ ಬಂದಿದೆ.

    ಓದುವ ಆಸೆಯಿದ್ದರೂ, ಬದುಕುವ ಛಲವಿದ್ದರೂ, ಸೌಲಭ್ಯಗಳಿಲ್ಲದ ಈ ಜಾಗದಲ್ಲಿ ತಮ್ಮ ನೂರಾರು ಆಸೆ ಆಕಾಂಕ್ಷೆಗಳನ್ನು ಸಮಾಧಿ ಮಾಡಿ ಜೀವನ ನಡೆಸುತ್ತಿರುವ ಈ ಜನರಿಗೆ ಯಾವುದೇ ಸರ್ಕಾರಗಳು, ಯಾರೇ ಅಧಿಕಾರಿಗಳು ಬಂದರೂ ಸೌಲಭ್ಯ ನೀಡಲಾಗುತ್ತಿಲ್ಲ.

  • ಕೊರೊನಾಗೆ ಪ್ರವೇಶ ನೀಡದ ಮೈಸೂರು ತಾಲೂಕಿನ 14 ಹಳ್ಳಿಗಳು

    ಕೊರೊನಾಗೆ ಪ್ರವೇಶ ನೀಡದ ಮೈಸೂರು ತಾಲೂಕಿನ 14 ಹಳ್ಳಿಗಳು

    ಮೈಸೂರು: ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ನಡುವೆ ತಾಲೂಕಿನ 14 ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ಶೂನ್ಯವಾಗಿದ್ದು, ಕೋವಿಡ್-19ಗೆ ಪ್ರವೇಶ ನೀಡದ ಹಳ್ಳಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

    ಮೈಸೂರು ತಾಲೂಕು ವ್ಯಾಪ್ತಿಗೆ ಒಳಪಡುವ 37 ಗ್ರಾಮ ಪಂಚಾಯತಿಗಳಲ್ಲಿ 11 ಗ್ರಾಮ ಪಂಚಾಯತಿಗೆ ಸೇರುವ 14 ಗ್ರಾಮಗಳಲ್ಲಿ ಇದುವರೆಗೆ ಒಂದೂ ಕೋವಿಡ್ ಪ್ರಕರಣ ದಾಖಲಾಗದೆ ಕೊರೊನಾ ಮುಕ್ತವಾಗಿದ್ದು, ಇದು ಇತರೆ ಹಳ್ಳಿಗಳಿಗೆ ಮಾದರಿಯಾಗಿದೆ. ತಾಲೂಕಿನ ಮಾದಗಳ್ಳಿ, ರಾಯನಕೆರೆ, ಕಟ್ಟೆಹುಂಡಿ, ಕುಂಬ್ರಳ್ಳಿ, ಚಿಕ್ಕೇಗೌಡನಹುಂಡಿ, ಕೃಷ್ಣಪುರ, ರಾಮನಹಳ್ಳಿ, ಗುಡುಮಾದನಹಳ್ಳಿ, ಇನಮ್ ಉತ್ತನಹಳ್ಳಿ, ಲಕ್ಷ್ಮೀಪುರ, ಮಾಕನಹುಂಡಿ, ಹಂಚ್ಯಾಹುಂಡಿ, ಹೊಸಹುಂಡಿ, ಗುರುಕಾರಪುರ ಗ್ರಾಮಗಳು ಕೊರೊನಾ ಸೋಂಕಿಗೆ ಪ್ರವೇಶ ನೀಡದ ಗ್ರಾಮಗಳಾಗಿವೆ.

    ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಜೊತೆಗೆ ಗ್ರಾಮಸ್ಥರೂ ಕೂಡ ಸ್ವಂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಫಲವಾಗಿ ಈ ಗ್ರಾಮಗಳು ಕೋವಿಡ್ ಸೋಂಕಿನಿಂದ ದೂರ ಉಳಿದವು. ಇಲ್ಲಿನ ಜನರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗದೆ ಇರುವುದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುವುದು, ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಅನೇಕ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಿದ ಪರಿಣಾಮದಿಂದಾಗಿ ಕೋವಿಡ್ ಈ ಗ್ರಾಮಗಳಿಗೆ ಕಾಲಿಟ್ಟಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.12.30ಕ್ಕೆ ಇಳಿಕೆ – 14,304 ಹೊಸ ಕೊರೊನಾ ಪ್ರಕರಣ

    ಗ್ರಾಮ ಪಂಚಾಯತಿ ವತಿಯಿಂದ ಕೋವಿಡ್ ಹರಡದಂತೆ ಮುಂಜಾಗ್ರತ ಕ್ರಮವಹಿಸಲು ಡಂಗೂರ ಸಾರುವ ಮೂಲಕ ಗ್ರಾಮಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ಹೋಗಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಿ ದೈಹಿಕ ಅಂತರ ಕಾಪಾಡುವುದು ಮತ್ತು ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ. ಒಂದೆರಡು ಹಳ್ಳಿಗಳಲ್ಲಿ ಮಾತ್ರ ಲಕ್ಷಣ ಕಾಣಿಸಿಕೊಂಡ ಎರಡು ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.

    ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಚುರುಕಾಗಿ ಕೆಲಸ ಮಾಡುತಿದ್ದಾರೆ. ಪ್ರತಿನಿತ್ಯ ಗ್ರಾಮದ ಮನೆ ಮನೆಗೆ ತೆರಳಿ ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ರಿನಿಂಗ್‍ನಿಂದ ಆರೋಗ್ಯ ಸ್ಥಿರತೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

  • ಮತ್ತೆ ಗಡಿಯಲ್ಲಿ ಚೀನಾ ಕ್ಯಾತೆ – ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 3 ಗ್ರಾಮ ನಿರ್ಮಾಣ

    ಮತ್ತೆ ಗಡಿಯಲ್ಲಿ ಚೀನಾ ಕ್ಯಾತೆ – ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 3 ಗ್ರಾಮ ನಿರ್ಮಾಣ

    ನವದೆಹಲಿ: ಮತ್ತೆ ಗಡಿಯಲ್ಲಿ ಚೀನಾ ತನ್ನ ಪುಂಡಾಟವನ್ನು ಮುಂದುವರಿಸಿದ್ದು, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಮೂರು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.

    ಪಶ್ಚಿಮ ಅರುಣಾಚಲ ಪ್ರದೇಶದ ಭಾರತ, ಚೀನಾ ಮತ್ತು ಭೂತಾನ್ ನಡುವಿನ ತ್ರಿ-ಜಂಕ್ಷನ್‍ಗೆ ಸಮೀಪದಲ್ಲಿರುವ ಬಮ್ ಲಾ ಪಾಸ್‍ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಚೀನಾ 3 ಗ್ರಾಮಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾಗೆ ಗಡಿ ವಿವಾದವಿದೆ. ಹೀಗಾಗಿ ಇಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡಿ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸುವ ಯೋಜನೆ ರೂಪಿಸಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಿಯೋಸ್ಟ್ರಾಟೆಜಿಸ್ಟ್ ಡಾ. ಬ್ರಹ್ಮ ಚೆಲ್ಲಾನಿ ಚೀನಾ ತನ್ನ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸಲು ಮತ್ತು ಗಡಿಯಲ್ಲಿ ಒಳನುಸುಳುವಿಕೆಯನ್ನು ಹೆಚ್ಚಿಸಲು ಹಾನ್ ಚೈನೀಸ್ ಮತ್ತು ಟಿಬೆಟಿಯನ್ ಸದಸ್ಯರನ್ನು ಭಾರತದ ಗಡಿಯಲ್ಲಿ ನೆಲೆಸುವ ತಂತ್ರವನ್ನು ಬಳಸುತ್ತಿದೆ. ಈ ಹಿಂದೆಯೂ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ಮೀನುಗಾರರನ್ನು ಈ ತಂತ್ರಗಾರಿಕೆಗೆ ಬಳಸಿಕೊಂಡಿತ್ತು ಎಂದು ಹೇಳಿದ್ದಾರೆ.

    ಸದ್ಯ ಲಭ್ಯವಾಗಿರುವ ಹೊಸ ಉಪಗ್ರಹ ಚಿತ್ರಗಳಲ್ಲಿ ಭೂತಾನ್ ಸಾರ್ವಭೌಮ ಭೂಪ್ರದೇಶದಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈಗ ನಿರ್ಮಾಣವಾಗುತ್ತಿರುವ ಗ್ರಾಮಗಳು 2017ರಲ್ಲಿ ಭಾರತೀಯ ಮತ್ತು ಚೀನಾದ ನಡುವೆ ಗಲಾಟೆಯಾದ ಡೋಕ್ಲಾಮ್ ಸ್ಥಳದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿದೆ. ಇದರ ಜೊತೆಗೆ ಪೂರ್ವ ಲಡಾಕ್‍ನಲ್ಲಿ ಇತ್ತೀಚೆಗೆ ಗಲಾಟೆಯಾದ ಸ್ಥಳದಲ್ಲೇ ಈ ಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

  • ಧುಮ್ಮಿಕ್ಕಿ ಹರಿಯುತ್ತಿರೋ ಗೋಕಾಕ್ ಜಲಪಾತ

    ಧುಮ್ಮಿಕ್ಕಿ ಹರಿಯುತ್ತಿರೋ ಗೋಕಾಕ್ ಜಲಪಾತ

    – ಲೋಳಸೂರ ಸೇತುವೆ ಜಲಾವೃತ

    ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತ ಜಿಲ್ಲೆಯ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಗೋಕಾಕ್‍ನಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಜೊತೆ ಗೋಕಾಲ್ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದ್ದು, ಅನೇಕರು ಜಲಪಾತವನ್ನು ನೋಡಲು ಹೋಗಿದ್ದಾರೆ.

    ಈಗಾಗಲೇ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಗೋಕಾಕ್-ಘಟಪ್ರಭಾ ಸಂಪರ್ಕಿಸುವ ಲೋಳಸೂರ ಸೇತುವೆ ಜಲಾವೃತವಾಗಿದೆ. ಜೊತೆಗೆ ಗೋಕಾಕ್ ನಗರದ ಹೊರವಲಯದಲ್ಲಿನ ದನದಪೇಟೆಗೆ ನೀರು ನುಗ್ಗಿದೆ. ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು.

    ಇತ್ತ ಮಲಪ್ರಭಾ ನದಿ ಪ್ರವಾಹಕ್ಕೆ ರಾಮದುರ್ಗ ಸುನ್ನಾಳ, ಕಿಲಬನೂರು ಹಾಗೂ ಮುಲಂಗಿ ಗ್ರಾಮಗಳು ಅಕ್ಷರಶಃ ನಡುಗಡ್ಡೆಗಳಾಗಿವೆ. ಖಾನಾಪುರ ತಾಲೂಕಿನಲ್ಲಿ 12, ಬೆಳಗಾವಿ ತಾಲೂಕಿನಲ್ಲಿ 5 ಹಾಗೂ ರಾಮದುರ್ಗ ಸವದತ್ತಿ ತಾಲೂಕಿನಲ್ಲಿ ತಲಾ 6 ಸೇತುವೆಗಳು ಮುಳುಗಿವೆ. ಬೆಳಗಾವಿ-ಗೋವಾ ಹಾಗೂ ಬೆಳಗಾವಿ-ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಸಹ್ಯಾದ್ರಿ ಪರ್ವತಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಾಖಲೆ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಜಿಲ್ಲೆಯ ಏಳು ನದಿಗಳು, ಬೆಳಗಾವಿ ನಗರದಲ್ಲಿನ ಬಳ್ಳಾರಿ ನಾಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಪರಿಸ್ಥಿತಿ ಎದುರಿಸಲು ಬೋಟಗಳು, ಟಾಸ್ಕ್ ಪೋರ್ಸ್ ಜೊತೆ ಜಿಲ್ಲಾಡಳಿತ ಸನ್ನದ್ಧವಾಗಿದೆ.

  • ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಚಾಮರಾಜನಗರ: ಜಿಲ್ಲೆಯಲ್ಲಿ ಪ್ರವಾಹ ಭೀತಿಯಲ್ಲಿರುವ ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ.

    ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೇಹಂಪಾಪುರ, ಹರಳೆ, ಹಳೇ ಅಣಗಳ್ಳಿ, ಹೊಸ ಅಣಗಳ್ಳಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ಈಗಾಗಲೇ ಜಮೀನುಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ತುರ್ತು ಸಹಾಯವಾಣಿ ತೆರೆಯಲಾಗಿದೆ.

    ತೊಂದರೆ ಎದುರಾದಲ್ಲಿ ಸಾರ್ವಜನಿಕರು ಉಚಿತ ಕರೆ 100ಕ್ಕೆ ಫೋನ್ ಮಾಡಬಹುದು. ದೂರವಾಣಿ 08226-222398, ವಾಟ್ಸಪ್ ನಂಬರ್ 9480804600 ಈ ನಂಬರ್‌ಗಳಿಗೆ ಫೋನ್ ಮಾಡಿ. ಇಲ್ಲವಾದರೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮಾಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರ ಥಾಮಸ್ ತಿಳಿಸಿದ್ದಾರೆ.

  • ಕೃಷ್ಣೆಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ನಡುಗಡ್ಡೆ ಗ್ರಾಮಸ್ಥರು

    ಕೃಷ್ಣೆಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ನಡುಗಡ್ಡೆ ಗ್ರಾಮಸ್ಥರು

    – ಶಾಶ್ವತ ಪರಿಹಾರಕ್ಕೆ ಒತ್ತಾಯ

    ರಾಯಚೂರು: ಕೃಷ್ಣೆ ಪ್ರವಾಹದಿಂದ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಮತ್ತೆ ಆತಂಕದಲ್ಲಿ ಮುಳುಗಿವೆ. ಶಾಶ್ವತ ಪರಿಹಾರ ಸಿಗದೇ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಮಹಾರಾಷ್ಟ್ರದಲ್ಲಿ ಸುರಿದ ಜೋರು ಮಳೆಯಿಂದ ನಾರಾಯಣಪುರ ಜಲಾಶಯ ಭರ್ತಿಯಾಗಿ ರಾಯಚೂರಿನಲ್ಲಿ ಪ್ರವಾಹ ಭೀತಿ ತಂದಿದೆ. ಈಗಾಗಲೇ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸುಮಾರು 8 ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತ ತಲುಪಿದೆ. ಹೀಗಾಗಿ ದೇವದುರ್ಗ ಕಲಬುರ್ಗಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಹೆದ್ದಾರಿಯ ಸೇತುವೆ ಮೇಲೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.

    ರಾಯಚೂರಿನ ಒಟ್ಟು ಆರು ಪ್ರದೇಶಗಳು ಈಗಾಗಲೇ ನಡುಗಡ್ಡೆಗಳಾಗಿದ್ದು, ಅಲ್ಲಿನ ಸಾವಿರಾರು ಜನ ಹೊರಗಿನ ಸಂಪರ್ಕವನ್ನ ಕಳೆದುಕೊಂಡಿದ್ದಾರೆ. ಲಿಂಗಸುಗೂರಿನ ಓಂಕಾರಗಡ್ಡಿ, ಹಾಲಗಡ್ಡಿ, ಕರಕಲಗಡ್ಡಿಗಳಲ್ಲಿ ಒಟ್ಟು 14 ಕುಟುಂಬಗಳಿದ್ದು, 104 ಜನ ವಾಸವಾಗಿದ್ದಾರೆ. ರಾಯಚೂರಿನ ಕುರ್ವಕುಲ, ಅಗ್ರಹಾರ, ಕುರ್ವಾಕುರ್ದ ನಡುಗಡ್ಡೆಗಳಲ್ಲಿ 298 ಕುಟುಂಬಗಳಿದ್ದು, 945 ಜನ ವಾಸವಾಗಿದ್ದಾರೆ. ಇವರೆಲ್ಲಾ ನಡುಗಡ್ಡೆಯಲ್ಲೆ ಜಮೀನು ಹೊಂದಿದ್ದು, ತಮ್ಮ ಜೀವನ ನಡೆಸುತ್ತಿದ್ದರು.

    ಇವರು ಪ್ರವಾಹ ಬಂದಾಗಲೆಲ್ಲಾ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಕುರ್ವಕುಲಾ ಹಾಗೂ ಕುರ್ವಕುರ್ದಾಗಳಿಗೆ ಪ್ರತ್ಯೇಕ ಎರಡು ಸೇತುವೆಗಳ ಕಾಮಗಾರಿ ನಿಂತು ದಶಕವಾದರೂ ಪುನರಾರಂಭವಾಗಿಲ್ಲ. ಸರ್ಕಾರ ಶಾಶ್ವತ ಪರಿಹಾರ ನೀಡಬೇಕು ಅಂತ ನಡುಗಡ್ಡೆಗಳ ನಿವಾಸಿಗಳು ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸರ್ಕಾರ ಕೇವಲ ಪ್ರವಾಹ ಸಂದರ್ಭದಲ್ಲಿ ಮಾತ್ರ ಇಲ್ಲಿನ ಜನರನ್ನ ಸಂಪರ್ಕಿಸುತ್ತಿವೆ ಅಂತ ಆರೋಪಿಸಿದ್ದಾರೆ.

    ಅಗತ್ಯ ವಸ್ತು, ಅನಾರೋಗ್ಯ ಕಾರಣಕ್ಕೆ ಈಗಲೂ ನಡುಗಡ್ಡೆಗಳ ಜನ ಅರಗೋಲು ಅವಲಂಭಿಸಿದ್ದಾರೆ. ನದಿಯಲ್ಲಿನ ನೀರಿನ ಸೆಳೆತಕ್ಕೂ ಹೆದರದೆ ಪ್ರಾಣವನ್ನೇ ಪಣವಿಟ್ಟು ಕೃಷ್ಣೆಯನ್ನ ದಾಟಿ ಬಂದು ವಾಪಸ್ ನಡುಗಡ್ಡೆಗಳಿಗೆ ಮರಳುತ್ತಿದ್ದಾರೆ. ಮಕ್ಕಳು, ಗರ್ಭಿಣಿಯರನ್ನೂ ಸಹ ಅರಗೋಲಿನಲ್ಲೇ ಕರೆದುಕೊಂಡು ಬರುತ್ತಿದ್ದಾರೆ.

    ಕಳೆದ ವರ್ಷ ಆರು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನ ಕೃಷ್ಣ ನದಿಗೆ ಹರಿಸಲಾಗಿತ್ತು. ಆಗ ಹೆಲಿಕ್ಯಾಪ್ಟರ್ ಮೂಲಕ ಅಲ್ಲಿನ ಜನರನ್ನ ಸ್ಥಳಾಂತರಿಸಬೇಕಾಯಿತು. ಈಗಲೂ ಕೃಷ್ಣ ನದಿ ಪ್ರವಾಹ ಹೆಚ್ಚಾಗುವ ಸಾಧ್ಯತೆಗಳಿವೆ. ಆದರೆ ನಡುಗಡ್ಡೆಯ ಜನ ಹೊರಬರಲು ಮಾತ್ರ ಸಿದ್ಧರಿಲ್ಲ. ಅಧಿಕಾರಿಗಳು ಕೇವಲ ಅಕ್ಕಿ ಕೊಡಲು ಬರುತ್ತಾರೆ. ನಮಗೆ ಶಾಸ್ವತ ಪರಿಹಾರ ನೀಡಲ್ಲ ಅನ್ನೋದು ಅವರ ಆರೋಪ. ಮಳೆಯ ಪ್ರಮಾಣ ತಗ್ಗದಿದ್ದರೆ ಈ ಬಾರಿಯೂ ನಡುಗಡ್ಡೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

  • ಚಾಮರಾಜನಗರದಲ್ಲಿ ಕೊರೊನಾಗೆ 4ನೇ ಬಲಿ- ಗುಂಡ್ಲುಪೇಟೆಯಲ್ಲಿ 100ಕ್ಕೇರಿದ ಸೋಂಕು

    ಚಾಮರಾಜನಗರದಲ್ಲಿ ಕೊರೊನಾಗೆ 4ನೇ ಬಲಿ- ಗುಂಡ್ಲುಪೇಟೆಯಲ್ಲಿ 100ಕ್ಕೇರಿದ ಸೋಂಕು

    ಚಾಮರಾಜನಗರ: ಕೊರೊನಾ ಮಹಾಮಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್-19 ನಿಂದ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

    ಗುಂಡ್ಲುಪೇಟೆಯ ಎಪಿಎಂಸಿ ಮಾಜಿ ನಿರ್ದೇಶಕರೂ ಆಗಿದ್ದ ಮರದ ವ್ಯಾಪಾರಿಯೊಬ್ಬರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಈ ವ್ಯಕ್ತಿಯನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಪತ್ನಿ, ಮಗ, ಮಗಳು, ಅಳಿಯನಿಗೂ ಕೊರೊನಾ ದೃಢಪಟ್ಟಿದ್ದು ಅವರನ್ನು ಸಹ ಚಾಮರಾಜನಗರ ಜಿಲ್ಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜುಲೈ 11ರಂದು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ತಾಲೂಕಿನ ಕಾಮಗೆರೆಯ 58 ವರ್ಷದ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಜುಲೈ 12ರಂದು ಕೊಳ್ಳೇಗಾಲದವರೇ ಆದ 65 ವರ್ಷದ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಜುಲೈ 13ರಂದು ಪಾಳ್ಯ ಗ್ರಾಮದ 60 ವರ್ಷದ ವ್ಯಕ್ತಿ ಕೋವಿಡ್-19ಗೆ ಬಲಿಯಾಗಿದ್ದರು. ಇದೀಗ ಗುಂಡ್ಲುಪೇಟೆಯ 65 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು ದಿನಕ್ಕೊಬ್ಬರಂತೆ ಸತತ ನಾಲ್ಕು ದಿನಗಳಿಂದ ಸರಣಿ ಸಾವು ಸಂಭವಿಸಿರುವುದು ಆತಂಕ ಮೂಡಿಸಿದೆ.

    ಈವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ 187 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಗುಂಡ್ಲುಪೇಟೆ ತಾಲೂಕೊಂದರಲ್ಲೇ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 103ಕ್ಕೆ ಏರಿದೆ. ಜೂನ್ 19ರಂದು ಗುಂಡ್ಲುಪೇಟೆ ಮಹದೇವಪ್ರಸಾದ್ ನಗರದ ಟೆಂಪೋ ಚಾಲಕನೊಬ್ಬನಿಗೆ ಕೊರೊನಾ ದೃಢಪಟ್ಟಿತ್ತು. ತಮಿಳುನಾಡಿಗೆ ಸರಕು ಸಾಗಾಣೆ ಮಾಡುತ್ತಿದ್ದ ಈ ಟೆಂಪೋ ಚಾಲಕನ ಸಂಪರ್ಕದಿಂದ ಮಹದೇವಪ್ರಸಾದ್ ನಗರದ ಹಲವಾರು ಮಂದಿಗೆ ಸೋಂಕು ತಗುಲಿತ್ತು.

    ಇಷ್ಟೇ ಅಲ್ಲದೆ ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಪ್ರಯಾಣದಿಂದ ಗುಂಡ್ಲುಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೂ ಕೊರೊನಾ ಕಾಲಿಟ್ಟಿದೆ. ತಾಲೂಕಿನ ಚಿಕ್ಕತುಪ್ಪೂರು, ದೊಡ್ಡತುಪ್ಪೂರು, ದೇಪಾಪುರ, ಕಬ್ಬಹಳ್ಳಿ ಮಡಹಳ್ಳಿ, ಬೊಮ್ಮಲಾಪುರ, ಕುನಗಹಳ್ಳಿ, ಬೆಳವಾಡಿ, ಬಂಡಿಪುರ ಹೀಗೆ ಹಳ್ಳಿ ಹಳ್ಳಿಗೂ ಕೊರೊನಾ ಕಾಲಿರಿಸುವ ಮೂಲಕ ಸಮುದಾಯಕ್ಕೂ ಹಬ್ಬಿರುವ ಆತಂಕ ಮೂಡಿಸಿದೆ.

  • ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

    ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

    – ಗ್ರಾಮಸ್ಥರಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ
    – ಬೆಂಗಳೂರಿಂದ ಬಂದವರು ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ

    ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕೆ ಗ್ರಾಮಗಳೇ ಕ್ರಮ ಕೈಗೊಳ್ಳುತ್ತಿದ್ದು, ಹೊರ ರಾಜ್ಯ, ಜಿಲ್ಲೆಗಳಿಂದ ಯಾರಾದರೂ ಗ್ರಾಮಕ್ಕೆ ಬಂದರೆ ಭಾರೀ ಪ್ರಮಾಣದ ದಂಡ ವಿಧಿಸುವುದಾಗಿ ಎಚ್ಚರಿಗೆ ನೀಡಿವೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗ್ರಾಮ ಹಾಗೂ ಪುಣಜನೂರಿನ ಮೂಕನಪಾಳ್ಯದ ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ. ಕೇರಳ, ಕೊರೊನಾ ಹಾಟ್ ಸ್ಪಾಟ್ ತಮಿಳುನಾಡು, ರಾಜ್ಯದ ಬೆಂಗಳೂರು, ಮೈಸೂರಿನಿಂದ ಗ್ರಾಮಕ್ಕೆ ಯಾರಾದರೂ ಬಂದರೆ 10 ಸಾವಿರ ರೂ ದಂಡ, ಬಂದವರನ್ನು ಹಿಡಿದು ಕೊಟ್ಟರೆ 2 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ವ್ಯಕ್ತಿ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಜಾಗೃತಿ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಭೆ ಕರೆಯುವ ಮೂಲಕ ಜನರೇ ಕೊರೊನಾ ಹೊಡೆದೊಡಿಸಲು ಸಾಕಷ್ಟು ಜಾಗೃತಿ ವಹಿಸಿತ್ತಿದ್ದಾರೆ.

    ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ
    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಈಗ ಬೆಂಗಳೂರಿನಿಂದ ಸಾಕಷ್ಟು ಜನ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹವರಿಗೆ ಶಾಸಕ ನರೇಂದ್ರ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಶಾಸಕರು, ಬೆಂಗಳೂರಿನಿಂದ ಜಿಲ್ಲೆಗೆ 3800ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಇವರೆಲ್ಲ ಕಡ್ಡಾಯವಾಗಿ ಖುದ್ದಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ತಪಾಸಣೆಗೆ ಒಳಗಾಗದೆ ಅಣ್ಣ, ತಮ್ಮ, ಸಂಬಂಧಿ ಬಚ್ಚಿಡುವ ಪ್ರಯತ್ನ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಜರುಗಿಸಲಾಗುವುದು. ಯುವಕರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಡಿ. ಇದರಿಂದ ಕೊರೊನಾ ಆತಂಕ ಹೆಚ್ಚಾಗಬಹುದು. ಈಗಾಗಲೇ ಕ್ರಿಕೆಟ್ ಆಡಿದ ಒಬ್ಬ ಯುವಕನಿಗೆ ಕೊರೊನಾ ಬಂದಿದ್ದು, ಇದರಿಂದ 30 ರಿಂದ 40 ಮಂದಿಗೆ ಕೊರೊನಾ ಆತಂಕ ಎದುರಾಗಿದೆ ಎಂದು ಸಲಹೆ ನೀಡಿದ್ದಾರೆ.

    ಚಾಮರಾಜನಗರದ ಹಲವೆಡೆ ಮಾರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾರೂ ಮಾರಿಹಬ್ಬ, ಜಾತ್ರೆ ಮಾಡ್ಬೇಡಿ ಇದರಿಂದ ರೋಗ ಉಲ್ಬಣ ಆಗುತ್ತೆದೆ. ಬೆಂಗಳೂರಿನಿಂದ ಬಂದ ಯುವಕರು ಕೆಲಸಕ್ಕೆ ಹೋಗ್ತಿಲ್ಲ, ಜನರನ್ನು ಗುಂಪುಗೂಡಿಸಿ ಜೂಜಾಟವಾಡುತ್ತಿದ್ದಾರೆ. ಇದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ನಾನು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.

    ಮಾದಪ್ಪನ ಸನ್ನಿದಿಯಲ್ಲಷ್ಟೇ ತಪಾಸಣೆ ನಡೀತಿದೆ, ಬರುವ ಭಕ್ತಾದಿಗಳು ಬೆಟ್ಟದಲ್ಲಿ ಓಡಾಡಿ ನಂತರ ದರ್ಶನಕ್ಕೆ ಹೋಗ್ತಾರೆ, ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಇದೆ. ಇಂದಿನಿಂದಲೇ ಮಾದಪ್ಪನ ತಾಳಬೆಟ್ಟದಲ್ಲಿ ತಪಾಸಣೆ ಆರಂಭಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟಿದ್ದೇನೆ. ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಬ್ಬರ ತಪಾಸಣೆ ನಡೆಸಿ ರೋಗ ಲಕ್ಷಣವಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

  • ಕೊಡಗು ಗ್ರಾಮೀಣ ಭಾಗದಲ್ಲಿ ಬಸ್‍ಗಳಿಲ್ಲದೆ ಜನ ಪರದಾಟ

    ಕೊಡಗು ಗ್ರಾಮೀಣ ಭಾಗದಲ್ಲಿ ಬಸ್‍ಗಳಿಲ್ಲದೆ ಜನ ಪರದಾಟ

    ಮಡಿಕೇರಿ: ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಖಾಸಗಿ ಬಸ್‍ಗಳ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಪಟ್ಟಣ, ನಗರ ಪ್ರದೇಶಗಳಿಗೆ ಬೆರಳೆಣಿಕೆಯಷ್ಟು ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಬಸ್‍ಗಳ ಸಂಚಾರವೇ ಇಲ್ಲದಂತಾಗಿದ್ದು, ಜನ ಪರದಾಡುವಂತಾಗಿದೆ.

    ಸರ್ಕಾರ ಬಸ್‍ಗಳ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಪಟ್ಟಣ, ನಗರ ಸೇರಿದಂತೆ ಪ್ರಮುಖ ಊರುಗಳಿಗೆ ಮಾತ್ರ ಬಸ್‍ಗಳು ಸಂಚರಿಸುತ್ತಿವೆ. ಹಳ್ಳಿಗಳಿಗೆ ಸರ್ಕಾರಿ ಬಸ್‍ಗಳು ಸಂಚರಿಸದಿರುವುದರಿಂದ ಗ್ರಾಮೀಣ ಭಾಗದ ಜನ ಖಾಸಗಿ ಬಸ್‍ಗಳನ್ನೇ ನಂಬಿಕೊಂಡಿದ್ದರು. ಇದೀಗ ಖಾಸಗಿ ಬಸ್‍ಗಳೂ ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿಲ್ಲ. ಹೀಗಾಗಿ ಪಡಬಾರದ ಕಷ್ಟಪಡುತ್ತಿದ್ದಾರೆ.

    ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಖಾಸಗಿ ಬಸ್‍ಗಳ ಸಂಚಾರವೇ ಪ್ರಮುಖ ಸಾರಿಗೆ. ಮತ್ತೊಂದೆಡೆ ಸರ್ಕಾರಿ ಸಾರಿಗೆ ಬಸ್‍ಗಳು ಓಡಾಡುತ್ತಿದ್ದ ಗ್ರಾಮಗಳಿಗೂ ಬಸ್‍ಗಳು ಓಡಾಡುತ್ತಿಲ್ಲ. ಇದರಿಂದ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು, ಅನಾರೋಗ್ಯದ ಸಮಸ್ಯೆ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾರಿಗೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮಡಿಕೇರಿಯಿಂದ ಕೇವಲ 10, 12 ಕಿ.ಮೀ. ದೂರದಲ್ಲಿರುವ ಗ್ರಾಮಗಳಿಗೂ ಬಸ್‍ಗಳ ಸಂಚಾರವಿಲ್ಲದಂತಾಗಿದೆ. ಹೀಗಾಗಿ ನಾಪೋಕ್ಲು, ಮಾದಾಪುರ, ಗಾಳೀಬೀಡು, ಒಣಚಲು ಸೇರಿದಂತೆ ಹಲವು ಗ್ರಾಮಗಳ ಜನರು ನಡೆದುಕೊಂಡೇ ನಗರಗಳಿಗೆ ಆಗಮಿಸುತ್ತಿದ್ದಾರೆ.

    ಸಾರಿಗೆ ಸಂಚಾರವಿಲ್ಲದಿರುವುದರಿಂದ ಜನರು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಮಡಿಕೇರಿ ಸೇರಿದಂತೆ ನಗರ ಪಟ್ಟಣಗಳಿಗೆ ಹೋಗಬೇಕಾಗಿರುವುದರಿಂದ ಜನರು ಆಟೋಗಳನ್ನೇ ಆಶ್ರಯಿಸಬೇಕಾಗಿದೆ. ಬಸ್‍ಗಳ ಸಂಚಾರವಿಲ್ಲದ್ದನ್ನು ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು 10 ಕಿ.ಮೀ. ಗೆ ವ್ಯಕ್ತಿಯೊಬ್ಬರಿಂದ 300 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ವಾಪಸ್ ಅದೇ ಆಟೋದಲ್ಲಿ ಮತ್ತೆ ಗ್ರಾಮಕ್ಕೆ ತಲುಪಬೇಕಾದರೂ ಪುನಃ 300 ರೂಪಾಯಿ ಕೊಡಬೇಕಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಎಲ್ಲ ಗ್ರಾಮೀಣ ಭಾಗಗಳಲ್ಲಿ ಬಸ್‍ಗಳನ್ನು ಓಡಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.