Tag: villagers

  • ಕಳ್ಳನೆಂದು ಭಾವಿಸಿ ಅಮಾಯಕ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

    ಕಳ್ಳನೆಂದು ಭಾವಿಸಿ ಅಮಾಯಕ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

    ವಿಜಯಪುರ: ಕಳ್ಳನೆಂದು ಭಾವಿಸಿ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು

    thief

    ಇತ್ತೀಚೆಗೆ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಕಳ್ಳರ ಹಾವಳಿ ಕಂಡು ಬಂದಿದೆ. ಕಳ್ಳತನ ಮಾಡುವುದಕ್ಕೆ ಖದೀಮರ ತಂಡವೇ ಗ್ರಾಮಕ್ಕೆ ಬಂದಿದ್ದು, ಐವರು ಕಳ್ಳರು ಗ್ರಾಮದಲ್ಲಿ ತಿರುಗಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆದರೆ ಕಳ್ಳರ ಕೈಗೆ ಏನು ಸಿಗದೇ ಕೊನೆಗೆ ಗ್ರಾಮದಿಂದ ಕಾಲು ಕಿತ್ತಿದ್ದಾರೆ. ಈ ವೇಳೆ ಕಳ್ಳರ ತಂಡದವನೆಂದು ಭಾವಿಸಿ ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಏಕಾಏಕಿ ಥಳಿಸಿ ನಂತರ ಆತನನ್ನು ಝಳಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    thief

    ಬಳಿಕ ಪೊಲೀಸರ ವಿಚಾರಣೆ ವೇಳೆ ವ್ಯಕ್ತಿ ಕಳ್ಳ ಅಲ್ಲ, ಬದಲಾಗಿ ಪೇಂಟರ್ ಎಂಬ ಸತ್ಯ ಬಹಿರಂಗಗೊಂಡಿದೆ. ಥಳಿತಕೊಳಗಾದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದು ಕೊನೆಗೆ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದೀಗ ಕಳ್ಳರ ಓಡಾಟದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ:ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆ

  • ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

    ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

    ಮಂಡ್ಯ: ಗ್ರಾಮದಲ್ಲಿ ನಿರಂತರವಾಗಿ ಹಸು, ಕರು ಹಾಗೂ ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಜರುಗಿದೆ.

    ದಬ್ಬೇಘಟ್ಟ ಗ್ರಾಮದ ಜಮೀನಿನಲ್ಲಿ ಹಲವು ತಿಂಗಳಿನಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದಲ್ಲದೇ ಹಲವು ಹಸುವಿನ ಕರುಗಳು ಹಾಗೂ ನಾಯಿಗಳ ಮೇಲೆಯೂ ದಾಳಿ ನಡೆಸುತ್ತಿತ್ತು. ಒಮ್ಮೊಮ್ಮೆ ಚಿರತೆ ಗ್ರಾಮ ಸಮೀಪಕ್ಕೂ ಸಹ ಬರುತ್ತಿತ್ತು. ಹೀಗಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

    ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಪತ್ರಗಳನ್ನು ಬರೆದಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಮೊದಲ ಹಂತದಲ್ಲಿ ಬೋನ್‍ನನ್ನು ಇಟ್ಟು ಕಾರ್ಯಾಚರಣೆಗೆ ಮುಂದಾಗಿದ್ದರು. ದಬ್ಬೇಘಟ್ಟದ ಜಮೀನು ಒಂದರಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೋನ್ ಇರಿಸಿದ್ದರು. ಇದೀಗ ಇಂದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಬೋನ್‍ಗೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ:ಮೇಕೆದಾಟು ಯೋಜನೆಯಲ್ಲಿ ರಾಜಿ ಇಲ್ಲ, ನಮ್ಮ ಪಾಲಿನ ನೆಲ, ಜಲ ಕಬಳಿಸಲು ಪ್ರಯತ್ನ ಮಾಡಿದ್ರೆ ಸರ್ಕಾರ ಬಗ್ಗಲ್ಲ: ಗೋವಿಂದ್ ಕಾರಜೋಳ

  • ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಮಂಗಗಳು ಊರಿನ ಜನರ ಮೇಲೆ ದಾಳಿ ಇಡುತ್ತಿದ್ದು, ಮಂಗನ ದಾಳಿಯಿಂದಾಗಿ ಗ್ರಾಮದ ಹತ್ತಕ್ಕೂ ಹೆಚ್ಚು ಜನರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಇಡೀ ಕಿನ್ನರ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಿದರೆ ಮಂಗಗಳು ಮರದಿಂದ ಹಾರಿ ಬಂದು ಜನರ ಮೇಲೆ ಎರಗುತಗತ್ತಿವೆ. ಹಲವರಿಗೆ ಕಾಲು, ಕೈಗಳಿಗೆ ಕಚ್ಚಿ ಗಾಸಿ ಮಾಡಿದರೆ, ಇನ್ನೂ ಕೆಲವರಿಗೆ ಗಂಭೀರ ಸ್ವರೂಪದ ಗಾಯ ಮಾಡಿವೆ. ಈ ಮಂಗಗಳ ವಿಚಿತ್ರ ವರ್ತನೆಗೆ ಬೆದರಿದ ಗ್ರಾಮಸ್ಥರು, ಕಾರವಾರದ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮಂಗಗಳನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗನ ಹಿಡಿಯಲು ಬೋನ್ ಇಟ್ಟಿದ್ದು, ಕಾರ್ಯಾಚರಣೆಗೆ ಇಳಿದಿದ್ದಾರೆ.

    ಏಕಾ ಏಕಿ ಮಂಗಗಳ ದಾಳಿಗೆ ಕಾರಣವೇನು?
    ಕಿನ್ನರ ಗ್ರಾಮದ ಭಾಗದಲ್ಲಿ ಒಂದುಕಡೆ ಕಾಳಿ ನದಿ ಹರಿಯುತ್ತದೆ, ಮತ್ತೊಂದು ಕಡೆ ದಟ್ಟ ಅರಣ್ಯವಿದ್ದು, ಕಾಡುಪ್ರಾಣಿಗಳ ವಾಸ ಸ್ಥಳವಾಗಿದೆ. ಇದು ಕಪ್ಪು ಹಾಗೂ ಕೆಂಪು ಮಂಗಗಳ ಆವಾಸ ಸ್ಥಾನ ಕೂಡ. ಹೀಗಾಗಿ ಈ ಭಾಗದ ಅರಣ್ಯ ಭಾಗದಲ್ಲಿ ಮಂಗಗಳು ಸಾಮಾನ್ಯ. ಇನ್ನು ಮಳೆಗಾಲವಾದ್ದರಿಂದ ಕಾಡಿನಿಂದ ಅಲ್ಲಿಯೇ ಇರುವ ಅಕ್ಕ ಪಕ್ಕದ ಗ್ರಾಮಗಳಿಗೆ ಮಂಗಗಳು ಆಹಾರ ಅರಸಿ ಬರುತ್ತವೆ. ಹೀಗಿರುವಾಗ ಮಂಗಗಳ ದಾಳಿ ತಪ್ಪಿಸಲು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಮಂಗಗಳು ಬಂದಾಗ ನಾಯಿಗಳನ್ನು ಬಿಟ್ಟು ಓಡಿಸುವುದು ಸಾಮಾನ್ಯ.

    ಕಳೆದ ಕೆಲವು ದಿನಗಳ ಹಿಂದೆ ಹೀಗೆ ಆಹಾರ ಅರಸಿ ಗ್ರಾಮದ ಕಡೆ ಬಂದಿದ್ದ ಮಂಗಗಳ ಗುಂಪೊಂದರಲ್ಲಿ ಮಂಗನ ಮರಿಗಳನ್ನು ನಾಯಿಗಳು ಬೇಟೆಯಾಡಿವೆ. ತಮ್ಮ ಕರುಳು ಬಳ್ಳಿಯನ್ನು ಕಣ್ಣೆದುರೇ ಕಳೆದುಕೊಂಡ ಮಂಗಗಳು ಇದೀಗ ಗ್ರಾಮದಲ್ಲಿ ಯಾರೇ ಓಡಾಡಿದರೂ ದಾಳಿ ಇಡುತ್ತಿದ್ದು, ಹಲವರಿಗೆ ಗಾಯ ಮಾಡಿವೆ. ಇದರಿಂದಾಗಿ ಇದೀಗ ಗ್ರಾಮದ ಜನರು ಮಂಗಗಳು ಎಂದರೆ ಭಯ ಪಡುವಂತಾಗಿದೆ. ಸದ್ಯ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ಹಿಡಿದು ಬೇರೆಡೆ ಬಿಡಲು ಹರಸಾಹಸ ಪಡುತಿದ್ದಾರೆ.

  • ಕೆರೆ ನೀರಿಗೆ ಜಿಗಿದು ಟ್ರಾನ್ಸ್‌ಫಾರ್ಮರ್ ಸರಿಪಡಿಸಿದ ಲೈನ್‍ಮನ್

    ಕೆರೆ ನೀರಿಗೆ ಜಿಗಿದು ಟ್ರಾನ್ಸ್‌ಫಾರ್ಮರ್ ಸರಿಪಡಿಸಿದ ಲೈನ್‍ಮನ್

    – ಎರಡು ಗ್ರಾಮಕ್ಕೆ ವಿದ್ಯುತ್ ಸಂಪರ್ಕ

    ಹಾವೇರಿ: ಎರಡು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್‍ಮನ್ ಕೆರೆ ನೀರಿಗೆ ಜಿಗಿದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸರಿ ಪಡಿಸಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ನಡೆದಿದೆ.

    ಮಳೆಯಿಂದಾಗಿ ಸಾತೇನಹಳ್ಳಿ ಮತ್ತು ಮಡ್ಲೂರು ಗ್ರಾಮಕ್ಕೆ ವಿದ್ಯುತ್ ಸಂಪೂರ್ಣ ಕಡಿತಗೊಂಡಿತ್ತು. ಈ ಎರಡು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು ಕೆರೆ ನೀರಿಗೆ ಜಿಗಿದ ಲೈನ್‍ಮನ್ ಮುಖೇಶ್ ಪಾಟೀಲ್, ಟ್ರಾನ್ಸ್‌ಫಾರ್ಮರ್ ಸರಿಪಡಿಸಿದ್ದಾರೆ. ಬಳಿಕ ಎರಡು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಿದ್ದಾರೆ.

    ನಿರಂತರ ಮಳೆ ಸುರಿದಿದ್ದರಿಂದ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮುಳುಗಡೆ ಆಗಿದ್ದರಿಂದ ಕೆರೆಗೆ ಜಿಗಿದು ಈಜಿ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹತ್ತಿ ಸರಿಪಡಿಸಿದ್ದಾರೆ. ಜೀವದ ಹಂಗು ತೊರೆದು ಎರಡು ಗ್ರಾಮಗಳಿಗೆ ವಿದ್ಯುತ್ ಕಲ್ಪಿಸಿದ ಲೈನ್‍ಮನ್ ಮುಖೇಶ್ ಪಾಟೀಲ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಅಂಗನವಾಡಿ ಕೇಂದ್ರಕ್ಕೆ ಹಾವುಗಳ ಕಾಟ – ಅಧಿಕಾರಿಗಳ ವಿರುದ್ಧ ಆಕ್ರೋಶ

    ಅಂಗನವಾಡಿ ಕೇಂದ್ರಕ್ಕೆ ಹಾವುಗಳ ಕಾಟ – ಅಧಿಕಾರಿಗಳ ವಿರುದ್ಧ ಆಕ್ರೋಶ

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಕಡಬೂರಿನ ಅಂಗನವಾಡಿ ಸಂಖ್ಯೆ 1 ಕ್ಕೆ ಹಾವುಗಳ ಕಾಟ ಹೆಚ್ಚಾಗಿದ್ದು, ಸಿಬ್ಬಂದಿ ಅಂಗನವಾಡಿಗೆ ಹೋಗಲು ಹೆದರುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಸುತ್ತ ಗಿಡಗಂಟೆಗಳು ಹೆಚ್ಚಾಗಿ ಬೆಳೆದಿರುವುದರಿಂದ ಪ್ರತೀದಿನ ಹಾವುಗಳು ಪ್ರತ್ಯಕ್ಷವಾಗುತ್ತಿವೆ.

    ವಿಷಪೂರಿತ ಜಂತುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಸಹ ಆತಂಕಗೊಂಡಿದ್ದಾರೆ. ಇಂದು ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಸಾಮಗ್ರಿ ಇರಿಸಿದ್ದ ಸ್ಥಳದಲ್ಲೇ ಹಾವು ಪ್ರತ್ಯಕ್ಷವಾಗಿದೆ. ಆಹಾರ ಸಾಮಗ್ರಿಗಳನ್ನ ತೆಗದು ಗ್ರಾಮಸ್ಥರು ಹಾವನ್ನು ಕೊಂದಿದ್ದಾರೆ.

    ಅಂಗನವಾಡಿ ಕೇಂದ್ರದ ಸುತ್ತಲಿನ ವಾತಾವರಣ ಸರಿಯಿಲ್ಲದ ಕಾರಣ ಹಾವು, ಚೇಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ವಿಷ ಜಂತುಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಗಸ್ಟ್‌ನಲ್ಲಿ ಪರೀಕ್ಷೆಗೆ ಅವಕಾಶ – ಕೊರಟಗೆರೆ ವಿದ್ಯಾರ್ಥಿನಿಗೆ ಸುರೇಶ್ ಕುಮಾರ್ ಭರವಸೆ

  • ಲಕ್ಕಿಡಿಪ್ ಸ್ಕೀಮ್ ಹೆಸರಿನಲ್ಲಿ ಅಮಾಯಕ ಹಳ್ಳಿಗರಿಗೆ ಪಂಗನಾಮ

    ಲಕ್ಕಿಡಿಪ್ ಸ್ಕೀಮ್ ಹೆಸರಿನಲ್ಲಿ ಅಮಾಯಕ ಹಳ್ಳಿಗರಿಗೆ ಪಂಗನಾಮ

    ಯಾದಗಿರಿ: ನಿಮಗೆ ಲಕ್ಕಿಡಿಪ್ ನಲ್ಲಿ ಕಾರ್, ಬೈಕ್ ಸಿಗುತ್ತದೆ ಎಂದು ಹಳ್ಳಿಗರನ್ನು ನಂಬಿಸಿದ ಖದೀಮರ ತಂಡವೊಂದು ಅವರಿಂದ ಹಣ ಪಡೆದು ಬಳಿಕ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಲಕ್ಷ್ಮಿ ನಗರದಲ್ಲಿ ವರದಿಯಾಗಿದೆ.

    ಕಳೆದ ಜನವರಿ ತಿಂಗಳಲ್ಲಿ ಕೆ.ಎಸ್.ಎಸ್ ಎಂಟರ್ಪ್ರೈಸಸ್ ಹೆಸರಿನಲ್ಲಿ ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಖದೀಮರು ಕಂಪನಿ ಆರಂಭಿಸಿದರು. ಬಳಿಕ ಲಕ್ಕಿಡಿಪ್ ಸ್ಕೀಮ್ ಮಾಡಿ ಕಾರ್,ಬೈಕ್, ಚಿನ್ನಾಭರಣ ಮೊದಲಾದ ಗೃಹ ಬಳಕೆ ವಸ್ತುಗಳನ್ನು ಬಂಪರ್ ಲಕ್ಕಿ ಸ್ಕೀಮ್ ನಲ್ಲಿ ಲಾಟರಿ ಮೂಲಕ ನೀಡುತ್ತೇವೆ ಎಂದು ಸ್ಥಳೀಯರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡಿದ್ದರು. ಇದನ್ನೂ ಓದಿ: ಮನೆ ಕನ್‍ಸ್ಟ್ರಕ್ಷನ್ ಉಸ್ತುವಾರಿಗೆ ಬಂದವ ಸ್ನೇಹಿತನ ಪತ್ನಿಯ ಜೊತೆ ಪರಾರಿ

    ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದವರನ್ನು ಟಾರ್ಗೆಟ್ ಮಾಡಿದ ಈ ವಂಚಕರು ಯಾದಗಿರಿ ನಗರ ಸೇರಿದಂತೆ ಯರಗೋಳ, ಬಂದಳ್ಳಿ, ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹಳ್ಳಿಯ 2000ಕ್ಕೂ ಅಧಿಕ ಜನರಿಂದ 8 ಕಂತುಗಳಲ್ಲಿ ಪ್ರತಿ ಕಂತು 399 ರೂ. ವಸೂಲಿ ಮಾಡಿ, ಪ್ರತಿಯೊಬ್ಬರಿಂದಲ್ಲೂ 3000 ರೂಗಳಂತೆ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಹಾಕಿಕೊಂಡು ಜಾಗಖಾಲಿ ಮಾಡಿದ್ದಾರೆ. ಸ್ಕೀಮ್ ಮೋಸದಿಂದ ತಡವಾಗಿ ಎಚ್ಚರಗೊಂಡ ಜನ ನ್ಯಾಯಕ್ಕಾಗಿ ಎಸ್‍ಪಿ ಕಚೇರಿ ಕದ ತಟ್ಟಿದ್ದಾರೆ.

  • ನೀವಿರುವ ತನಕ ಮೂರಲ್ಲ, ಐದಾರು ಕೊರೊನಾ ಅಲೆ ಬಂದ್ರು ಎನೂ ಆಗಲ್ಲ- ರೇಣುಕಾಚಾರ್ಯಗೆ ಗ್ರಾಮಸ್ಥರ ಅಭಿನಂದನೆ

    ನೀವಿರುವ ತನಕ ಮೂರಲ್ಲ, ಐದಾರು ಕೊರೊನಾ ಅಲೆ ಬಂದ್ರು ಎನೂ ಆಗಲ್ಲ- ರೇಣುಕಾಚಾರ್ಯಗೆ ಗ್ರಾಮಸ್ಥರ ಅಭಿನಂದನೆ

    ದಾವಣಗೆರೆ: ಕೋವಿಡ್ ಶುರುವಾದಾಗಿನಿಂದ ಜನರಿಗೆ ಸಹಾಯ ಮಾಡುವುದರಲ್ಲೇ ಕಾಲ ಕಳೆಯುತ್ತಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯರನ್ನು ತಿಮ್ಲಾಪುರ ಗ್ರಾಮದ ಜನತೆ ಕೊಂಡಾಡಿದ್ದಾರೆ.

    ಗ್ರಾಮ ಗ್ರಾಮಗಲ್ಲಿ ಲಸಿಕಾ ಆಭಿಯಾನ ಶುರು ಮಾಡಿದ ಶಾಸಕ ರೇಣುಕಾಚಾರ್ಯ, ತಮ್ಮ ಕ್ಷೇತ್ರದಲ್ಲಿ ಲಸಿಕೆ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲು ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲೇ ವಾಸ್ತವ್ಯ ಹೂಡಿದ್ದು, ಶಾಸಕರ ಕಾರ್ಯಕ್ಕೆ ತಿಮ್ಲಾಪುರ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿ, ಸನ್ಮಾನ ಮಾಡಿ ಅಭಿನಂದನೆ ತಿಳಿಸಿದರು.

    ನೀವು ಇರುವ ತನಕ ಮೂರನೇ ಅಲೆ ಅಲ್ಲ, ಐದಾರು ಅಲೆಗಳು ಬಂದರೂ ನಮಗೆ ಎನೂ ಆಗಲ್ಲ. ನಿಮ್ಮಂಥ ಆತ್ಮಸ್ಥೈರ್ಯ ತುಂಬುವ ಶಾಸಕರಿದ್ದರೆ ಸಾಕು, ಯಾವ ಅಲೆ ಬಂದರೂ ನಮಗೆ ಎನೂ ಆಗಲ್ಲ ಎಂದು ಗ್ರಾಮಸ್ಥರು ಶಾಸಕರ ಕಾರ್ಯವನ್ನು ಕೊಂಡಾಡಿದರು.

    ಇದಕ್ಕೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ನಾನು ರಾತ್ರಿ ಒಂದು ಗಂಟೆಗೆ ಮಲಗಿ, ಬೆಳಗ್ಗೆ ಐದು ಗಂಟೆಗೆ ಎದ್ದು, ಸೋಂಕಿತರಿಗೆ ಯೋಗ ಮಾಡಿಸುವೆ. ಮೂರನೇ ಅಲೆ ಎದುರಿಸಲು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

  • ಮನೆಯವರಿಂದ ಹಸುವಿಗೆ ಸೀಮಂತ ಕಾರ್ಯ

    ಮನೆಯವರಿಂದ ಹಸುವಿಗೆ ಸೀಮಂತ ಕಾರ್ಯ

    ಗದಗ: ಚೊಚ್ಚಲು ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಗೋವಿಗೆ ಸೀಮಂತ ಮಾಡಲಾಗಿದೆ.

    ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಹಸುವಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ಮನೆಯ ಮಗಳಿಗೆ ತವರು ಮನೆಯವರು ಉಡುಗೊರೆ(ಬಳುವಳಿ)ಯಾಗಿ ಕರು ನೀಡಿದ್ದರು. ಸದ್ಯ 7 ವರ್ಷದ ನಂತರ ಗೌರಿ ಗರ್ಭ ಧರಿಸಿರುವುದರಿಂದ ಮನೆ ಮಂದಿಗೆಲ್ಲಾ ಸಂತಸ ತಂದಿದೆ.

    8 ತಿಂಗಳು ಗರ್ಭಿಣಿಯಾದ ಗೌರಿಗೆ ದೂರದ ಬಾದಾಮಿಯಿಂದ ಬೀಗರನ್ನು ಕರೆಯಿಸಿ ಸೀಮಂತದ ವಿಧಿ ವಿಧಾನಗಳನ್ನ ನೆರವೇರಿಸಲಾಗಿದೆ. ಬಂದ ಸಂಬಂಧಿಕರೆಲ್ಲರೂ ಹೊಸ ಉಡುಪು ತೊಟ್ಟು, ಗರ್ಭಿಣಿಯರಿಗೆ ನಡೆಸುವ ಸೀಮಂತ ಕಾರ್ಯದಂತೆ ಗೋವಿಗೆ ರೇಷ್ಮೆ ಸೀರೆ ಉಡಿಸಿ, ಕೊಡಿಗೆ ಹಸಿರು ಬಳೆ ತೊಡಸಿ, ಕೊರಳಿಗೆ ಮಾಲೆಹಾಕಿ, ಕಾಲಿಗೆ ಕಾಲ್ಗೆಜ್ಜೆ ಹಾಕಿಸಿ, ಶೃಂಗಾರಗೊಳಿಸಿ ಕಾಮಧೇನುವನ್ನು ತಮ್ಮ ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಮಾಡಿದ್ದಾರೆ. ತರತರನಾದ ಅಡುಗೆ ಮಾಡಿ ಎಲ್ಲರೂ ಊಟ ಮಾಡಿ, ಆಕಳಿಗೂ ಊಣಬಡಿಸಿದ್ದಾರೆ.

    ಗೂರಮ್ಮಣ್ಣವರ್ ಕುಟುಂಬ ಮೂಲತ: ಕೃಷಿಕರು. ಇವರು ಮನೆಯ ಮಗಳಿಗೆ ಕೊಟ್ಟಿರುವ ಗೋ ಮಾತೆಗೆ ಗೌರಿ ಅಂತ ಹೆಸರಿಟ್ಟು ಪ್ರೀತಿ, ಅಕ್ಕರೆಯಿಂದ ಸಾಕಿದ್ದರು. ಗೌರಿ 7 ವರ್ಷದ ನಂತರ ಈಗ ಗೌರಿ ಗರ್ಭವತಿಯಾಗಿದ್ದು, ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ, ಗೋ ಸಂತತಿ ಉಳಿಯಲಿ, ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಅನೇಕ ಮುತ್ತೈದೆಯರು ಆರತಿ ಬೆಳಗುವುದರ ಮೂಲಕ ಉಡಿ ತುಂಬುವ ಸಂಪ್ರದಾಯ ನೇರವೇರಿಸಿ, ಊರು ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ.

    ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಗೋ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ ಗೋವಿಗೆ ಸೀಮಂತ ಮಾಡೋದು ಅಪರೂಪ. ಇತ್ತೀಚಿನ ದಿನಗಳಲ್ಲಿ ಭಾರತೀಯ ಗೋ ಸಂತತಿ ಅಳಿವಿನಂಚಿನಲ್ಲಿವೆ. ಗೋ ಸಂತತಿ ಉಳಿಸಲು, ಕಾಮಧೇನುವಾದ ಗೋವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಜನರಲ್ಲಿ ಗೋವುಗಳ ಬಗ್ಗೆ ಭಕ್ತಿ, ಪೂಜನೀಯ ಭಾವನೆ ಬೆಳೆಯುತ್ತದೆ. ಜೊತೆಗೆ ರೈತರ ಬದುಕು ಹಸನಾಗುತ್ತದೆ ಎಂಬುದು ಗ್ರಾಮಸ್ಥರ ಮನದಾಳದ ಮಾತಾಗಿದೆ. ಇದನ್ನೂ ಓದಿ : ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

  • ಕಣ್ಣು ಬಿಟ್ಟಿದ್ದ ದೇವರ ಕಣ್ಣನ್ನು ಪೂಜಾರಿ ಕೈಯಿಂದಲೇ ತೆಗೆಸಿದ ತಹಶೀಲ್ದಾರ್

    ಕಣ್ಣು ಬಿಟ್ಟಿದ್ದ ದೇವರ ಕಣ್ಣನ್ನು ಪೂಜಾರಿ ಕೈಯಿಂದಲೇ ತೆಗೆಸಿದ ತಹಶೀಲ್ದಾರ್

    ಚಿಕ್ಕೋಡಿ: ಕಣ್ಣು ಬಿಟ್ಟಿದ್ದ ದೇವಿ ವಿಗ್ರಹದ ಕಣ್ಣನ್ನು ಪೂಜಾರಿ ಕೈಯಿಂದಲೇ ತಹಶೀಲ್ದಾರ್ ತೆಗೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.

    ದೇವಸ್ಥಾನದಲ್ಲಿನ ದೇವಿಯ ವಿಗ್ರಹ ಕಣ್ಣು ಬಿಟ್ಟಿದೆ. ಇದು ಕೊರೊನಾ ಪ್ರಪಂಚದಿಂದ ತೊಲಗುವ ಸಂದೇಶ ಎಂದು ಆ ಊರಿನ ಜನ ಗುಲ್ಲೆಬ್ಬಿಸಿದ್ದರು. ಊರಿನ ಜನ ಅಷ್ಟೇ ಅಲ್ಲದೇ ಪರ ಊರಿನ ಜನರೂ ಸಹ ದೇವಿ ಕಣ್ಬಿಟ್ಟಿದ್ದಾಳೆ ಎಂದು ದೇವಾಲಯಕ್ಕೆ ಬಂದು ಕಾಯಿ ಕರ್ಪೂರ ನೀಡಿ ದೇವಿಗೆ ಸೇವೆ ಸೇವೆ ಸಲ್ಲಿಸಿದ್ದರು. ಆದರೆ ದೇವಿ ಕಣ್ಣು ಬಿಟ್ಟಿದ್ದ ಹಿಂದಿನ ರಹಸ್ಯವನ್ನು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರು ಬೇಧಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಕೆಲ ದಿನಗಳ ಹಿಂದೆ ಕಣ್ಣು ಬಿಟ್ಟಿದ್ದಳು. ಅದನ್ನ ನೋಡುವುದಕ್ಕೆಂದು ಅಲ್ಲಿ ಭಕ್ತ ಸಾಗರವೇ ಹರಿದು ಬರತೊಡಗಿತ್ತು. ಕೆಲವರಂತೂ ಇದು ಕೊರೊನಾ ಪ್ರಪಂಚವನ್ನು ಬಿಟ್ಟು ಹೊರಡುವ ಶುಭ ಸುದ್ದಿ ಎಂದೇ ಬಣ್ಣಿಸಿದ್ದರು.

    ದೇವಿ ಕಣ್ಣು ಬಿಟ್ಟಿರುವ ಹಾಗೂ ಅಲ್ಲಿಗೆ ದಿನಂ ಪ್ರತಿ ಭಕ್ತರು ಭೇಟಿ ನೀಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಕಡೆಗೆ ಈ ಸುದ್ದಿ ಕಾಗವಾಡ ತಹಶೀಲ್ದಾರ್ ಪ್ರಮಿಳಾ ದೇಶಪಾಂಡೆಯವರ ಗಮನಕ್ಕೆ ಬಂದಿದೆ. ದೇವಿ ಹೇಗೆ ಕಣ್ಣು ಬಿಟ್ಟಿದ್ದಾಳೆ? ದೇವಿಯೇ ಕಣ್ಣು ಬಿಟ್ಟಳೋ ಅಥವಾ ಯಾರಾದರು ಕಣ್ಣು ಬಿಡಿಸಿದರೋ ಎಂಬುದನ್ನ ಪರಿಶೀಲಿಸಲು ಅಲ್ಲಿಗೆ ಕಾಗವಾಡ ತಹಶೀಲ್ದಾರ್ ತಮ್ಮ ಸಿಬ್ಬಂದಿಯ ಜತೆ ತೆರಳಿ ಪರಿಶೀಲಿಸಿದಾಗ ದೇವಿ ಕಣ್ಣು ಬಿಟ್ಟಿರುವ ಹಿಂದಿನ ರಹಸ್ಯ ಗೊತ್ತಾಗಿದೆ.

    ದೇವಿಯ ಮೂರ್ತಿಗೆ ಕೃತಕ ಕಣ್ಣು ಜೋಡಿಸಿ ಜನರಿಗೆ ಮಂಕು ಬೂದಿ ಎರಚಲು ಯತ್ನಿಸಿದವರಿಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದು, ದೇವಿಗೆ ಅಂಟಿಸಿದ್ದ ಕೃತಕ ಕಣ್ಣು ತೆಗೆಸಿದ್ದಾರೆ. ದೇವಿಗೆ ಕಣ್ಣು ಬಿಡಿಸಿ ಜನರ ಬುದ್ದಿಗೆ ಮಂಕೆರಚಲು ಯತ್ನಿಸಿದ್ದವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ತಹಶೀಲ್ದಾರ್ ಇನ್ನೊಂದು ಬಾರಿ ಇಂತಹ ಕಿತಾಪತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ದೇವಿ ಕಣ್ಣು ಬಿಟ್ಟ ಪ್ರಹಸನ ಸುಖಾಂತ್ಯಗೊಂಡಿದೆ. ಇದನ್ನೂ ಓದಿ:ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

  • ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಕಾರವಾರ: ಆಹಾರ ಅರಸಿ ನದಿ ಭಾಗದಿಂದ ಮೊಸಳೆಯೊಂದು ಗ್ರಾಮಕ್ಕೆ ನುಗ್ಗಿದ ಘಟನೆ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ಇಂದು ನಡೆದಿದೆ.

    ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ನುಗ್ಗಿ ರಸ್ತೆಯಲ್ಲಿ ಸಂಚರಿಸಿದೆ.

    ಬೆಳಂಬೆಳಗ್ಗೆ ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು ನೋಡಿದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ.

    ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಆದರೆ ನದಿಯನ್ನು ಬಿಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿ ಮೊಸಳೆ ಆಗಮಿಸಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

    ಈ ಹಿಂದೆ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳಾದ ಘಟನೆ ಸಹ ಈ ಭಾಗದಲ್ಲಿ ನಡೆದಿದೆ. ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು ಲಾಕ್‍ಡೌನ್‍ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತಿದ್ದು, ಇಂದು ಗ್ರಾಮಕ್ಕೆ ಮೊಸಳೆ ನುಗ್ಗಿದ್ದರಿಂದ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ಅಡಿಪಾಯ ಕಾಮಗಾರಿ ವೀಕ್ಷಿಸಿದ ಪೇಜಾವರಶ್ರೀ