Tag: villagers

  • ಕಾಡಾನೆಗಳನ್ನು ಓಡಿಸುವ ವೇಳೆ ಯುವಕನನ್ನು ತುಳಿದು ಘಾಸಿಗೊಳಿಸಿದ ಆನೆ!

    ಕಾಡಾನೆಗಳನ್ನು ಓಡಿಸುವ ವೇಳೆ ಯುವಕನನ್ನು ತುಳಿದು ಘಾಸಿಗೊಳಿಸಿದ ಆನೆ!

    ಬೆಂಗಳೂರು: ಗ್ರಾಮಕ್ಕೆ ಬಂದಿದ್ದ ಆನೆಗಳ ಹಿಂಡನ್ನು ಓಡಿಸಲು ಗ್ರಾಮಸ್ಥರು ಪ್ರಯತ್ನಿಸುವಾಗ ಆನೆಯೊಂದು ಯುವಕನೊಬ್ಬನನ್ನು ತುಳಿದು ಗಾಯಗೊಳಿಸಿದ ಘಟನೆ ಆನೇಕಲ್ ಗಡಿ ಭಾಗದ ತಮಿಳುನಾಡಿನ ಬಿರ್ಜೆಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಇಡೀ ರಾತ್ರಿ ಬಿರ್ಜೆಪಲ್ಲಿ ಗ್ರಾಮದ ಪಕ್ಕದಲ್ಲೇ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಹೊಲಗಳಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದ ಆನೆಗಳನ್ನು ಗ್ರಾಮಸ್ಥರು ಹಾಗು ಅರಣ್ಯ ಸಿಬ್ಬಂದಿ ಓಡಿಸುವ ವೇಳೆ ಗ್ರಾಮಸ್ಥರ ಮೇಲೆಯೇ ಆನೆಗಳು ತಿರುಗಿ ಬಿದ್ದಿವೆ. ಈ ಸಂದರ್ಭದಲ್ಲಿ ಗ್ರಾಮದ ಯುವಕನೊಬ್ಬನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆತ ಗಾಯಗೊಂಡಿದ್ದಾನೆ.

    ಈ ಕಾಡಾನೆಗಳ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ಯುವಕನ ಮೇಲೆ ದಾಳಿ ಮಾಡಿದ ಆನೆ, ತನ್ನ ಕಾಲುಗಳಿಂದ ಯುವಕನನ್ನು ತುಳಿಯಲು ಯತ್ನಿಸಿದೆ. ಹಾಗೆಯೇ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಯುವಕನ ಮೇಲೆ ತನ್ನ ಸೊಂಡಿಲಿನಿಂದ ದಾಳಿ ಮಾಡಿದೆ. ಆದ್ರೆ ಅದೃಷ್ಟವಶಾತ್ ಕುದಲೆಳೆಯ ಅಂತರದಲ್ಲಿ ಯುವಕ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.

    ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಈ ಭಾಗದ ಜನರು ಆನೆಗಳ ಅಟ್ಟಹಾಸಕ್ಕೆ ಬೇಸತ್ತು ಹೋಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.

    ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕೆಲ ಕಾಲ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಇವೆಲ್ಲ ಘಟನೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಆನೆಗಳನ್ನು ಕಾಡಿಗೆ ಅಟ್ಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಮೈಸೂರು: ರೈತರ ಪ್ರತಿಭಟನೆಗೆ ಹೆದರಿ ಜೀಪ್ ಬಿಟ್ಟು ಅರಣ್ಯಾಧಿಕಾರಿ ಓಡಿ ಹೋಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಗುಪ್ಪೆ ವಲಯದಲ್ಲಿ ನಡೆದಿದೆ.

    ಮೇಟಿಗುಪ್ಪೆ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಹುಲಿ ಹತ್ತಾರು ಹಸುಗಳ ತಿಂದು ಕೊಂದು ಹಾಕಿದೆ. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎ.ಸಿ.ಎಫ್ ಕೇಶವಗೌಡ ತಮ್ಮ ಸಿಬ್ಬಂದಿಯ ಜೊತೆ ಬಂದಿದ್ದಾರೆ.

    ಈ ವೇಳೆ ಸ್ಥಳದಲ್ಲೇ ಪರಿಹಾರ ಘೋಷಣೆ ಆಗಬೇಕು. ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅಧಿಕಾರಿ ನೀಡಿದ ಉತ್ತರದಿಂದ ಜನರು ಸಮಾಧಾನಗೊಂಡಿಲ್ಲ. ಬಳಿಕ ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಯ ಜೀಪಿಗೆ ಅಡ್ಡ ಕುಳಿತ್ತಿದ್ದಾರೆ. ಹೀಗಾಗಿ ಅಧಿಕಾರಿ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ಅರಣ್ಯಾಧಿಕಾರಿ ತಮ್ಮ ಜೀಪನ್ನು ಅಲ್ಲೆ ಬಿಟ್ಟು ಅಲ್ಲಿಂದ ಓಡಿಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    – ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಗ್ರಾಮಸ್ಥರ ಹಿಂದೇಟು

    ಪಟ್ನಾ: ಟ್ಯೂಷನ್ ಕಲಿಸುತ್ತಿದ್ದ ಬಿಹಾರದ ಗ್ರಾಮವೊಂದರ ಶಿಕ್ಷಕನೊಬ್ಬ ತನ್ನ ಬಳಿ ಬರುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ಮದುವೆಯಾಗಿದ್ದಾನೆ.

    ನಾರಾಯಣ್‍ಪುರ ಗ್ರಾಮದಲ್ಲಿ ಶಿಕ್ಷಕ ಚಂದ್ರಪ್ರಕಾಶ್ ಮೆಹ್ತಾ(50) ವಿದ್ಯಾರ್ಥಿಗಳಿಗೆ ಖಾಸಗಿ ಟ್ಯೂಷನ್ ಕೇಂದ್ರವನ್ನು ನಡೆಸುತ್ತಿದ್ದನು. ಆತನ ಬಳಿ ಗ್ರಾಮದ ಹಲವು ಹೆಣ್ಣು ಮಕ್ಕಳು ಟ್ಯೂಷನ್‍ಗೆ ಹೋಗುತ್ತಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಚಂದ್ರಪ್ರಕಾಶ್ ಟ್ಯೂಷನ್‍ಗೆ ಬರುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಯಾರಿಗೂ ತಿಳಿಯದಂತೆ ವಿವಾಹವಾಗಿದ್ದನು. ಅಷ್ಟೇ ಅಲ್ಲದೆ ಅವಳ ಜೊತೆ ದೈಹಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದನು.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೂ ಯಾರಾದರೂ ಮೋಡಿ ಮಾಡಿ ಮದುವೆಯಾಗಿಬಿಟ್ಟರೆ ಏನು ಗತಿ ಎಂದು ಹೆದರಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

    ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಅಂತ ಶಿಕ್ಷಣದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳು ಈಗ ಕಣ್ಣೀರಿಡುತ್ತಿದ್ದಾರೆ. ಘಟನೆ ಕುರಿತು ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಪರ ಸಂಘಟನೆಯ ಸದಸ್ಯರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೇ ಗ್ರಾಮಸ್ಥರು ಮಾತ್ರ ಯಾರ ಮೇಲೂ ನಮಗೆ ನಂಬಿಕೆ ಇಲ್ಲ. ನಮ್ಮ ಮಕ್ಕಳ ಭದ್ರತೆ ನಮಗೆ ಮುಖ್ಯ. ನಾವು ಅವರನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು

    ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು

    ಮಂಡ್ಯ: ಸ್ಥಳೀಯ ಶಾಸಕ, ಎಂಎಲ್‍ಸಿಯ ಬೆಂಬಲಿಗನಾಗಿರುವ ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಇಡೀ ಹಳ್ಳಿಯನ್ನೇ ತಮ್ಮ ತಾಯಿಯ ಹೆಸರಿಗೆ ರಿಜಿಸ್ಟಾರ್ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಗ್ರಾಮದ ಜನ ಹಲವು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದಾರೆ. ಆದರೆ ಇದೀಗ ಗ್ರಾಮದಲ್ಲಿರುವ ಮನೆ, ದೇವಾಲಯ, ಸರ್ಕಾರಿ ಶಾಲೆ ಸೇರಿದಂತೆ ಸಂಪೂರ್ಣ ಹಳ್ಳಿಯನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಕಳೆದುಕೊಳ್ಳುವ ಭೀತಿಯಲ್ಲಿ ತಮ್ಮ ಹಳ್ಳಿಯ ಉಳಿವಿಗಾಗಿ ಬೀದಿಗಿಳಿದು ಪ್ರತಿಭಟನೆಯನ್ನು ಕೂಡ ಮಾಡಿ ಹೋರಾಡುತ್ತಿದ್ದಾರೆ.

    ಗ್ರಾಮದ ಸರ್ವೆ ನಂಬರ್ 190/1 ರಲ್ಲಿ ಬರುವ 4 ಎಕರೆ 16 ಗುಂಟೆ ಜಮೀನು ಮುಜರಾಯಿ ಇಲಾಖೆಗೆ ಸೇರಿದ್ದು, ಶ್ರೀ ಲಕ್ಷ್ಮಿ ದೇವರ ದೇವಸ್ಥಾನಕ್ಕೆ ಜಮೀನನ್ನು ಅರ್ಚಕರ ಹೆಸರಿಗೆ ವಿಲ್ ಮಾಡಲಾಗಿತ್ತು. ಈ ನಾಲ್ಕು ಎಕರೆ 16 ಗುಂಟೆ ಜಮೀನಿನಲ್ಲಿ 1 ಎಕರೆ 16 ಗುಂಟೆ ಜಮೀನನ್ನು ನಿಯಮಾನುಸಾರ ಶಾಲೆ, ದೇವಸ್ಥಾನ ಮತ್ತು ಮನೆ ನಿರ್ಮಿಸಲು ಮದಲಹಳ್ಳಿ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದಲಹಳ್ಳಿಯ ಸುಮಾರು 30 ಕುಟುಂಬಗಳು ಈ ಜಾಗದಲ್ಲಿ ಕಳೆದ 50 ವರ್ಷಗಳ ಹಿಂದೆಯೇ ಮನೆಕಟ್ಟಿಕೊಂಡು ವಾಸವಾಗಿದ್ದಾರೆ.

    ಆದರೆ ಇದೀಗ 4 ಎಕರೆ 16 ಗುಂಟೆ ಸಂಪೂರ್ಣ ಜಮೀನನ್ನು ಶಾಸಕ ಸುರೇಶ್‍ಗೌಡ ಬೆಂಬಲಿಗ ತಾಲೂಕು ಪಂಚಾಯಿತಿ ಸದಸ್ಯ ಹೇಮರಾಜ್ ತನ್ನ ತಾಯಿ ಲಕ್ಷ್ಮಿದೇವಿ ಹೆಸರಿಗೆ ಅಕ್ರಮವಾಗಿ ರಿಜಿಸ್ಟಾರ್ ಮಾಡಿದ್ದಾರೆ. ಅಕ್ರಮ ಎಸಗಲು ಲಕ್ಷ್ಮಿದೇವಿಯ ಸಹೋದರ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಶಿಕ್ಷಕ ಸಿ.ಜೆ.ಕುಮಾರ್ ತಮ್ಮ ಪ್ರಭಾವ ಬಳಸಿ ಹೇಮರಾಜ್ ಅವರಿಗೆ ಈ ಅಕ್ರಮ ಮಾಡಲು ಸಹಾಯ ಮಾಡಿದ್ದಾರೆ ಎಂದು ಮದಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

    ಗ್ರಾಮದ 40 ಕ್ಕೂ ಹೆಚ್ಚು ಮನೆಗಳು, ಸರ್ಕಾರಿ ಶಾಲೆ, ದೇವಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು ನಾಗಮಂಗಲ ತಹಶಿಲ್ದಾರ್ ನಂಜುಂಡಯ್ಯ ಅವರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ನ್ಯಾಯ ದೊರಕಿಸಿಕೊಡುವುದಾಗಿ ತಹಶಿಲ್ದಾರ್ ನಂಜುಂಡಯ್ಯ ಭರವಸೆ ನೀಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಆರೋಪ ನಿರಾಕರಿಸುತ್ತಿರುವ ಲಕ್ಷ್ಮಿದೇವಿಯ ತಮ್ಮ, ಶಿಕ್ಷಕ ಸಿ.ಜೆ.ಕುಮಾರ್ ಜಮೀನಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಲಕ್ಷ್ಮಿದೇವಿ ನನ್ನ ಅಕ್ಕನೇ ಆಗಿದ್ದರೂ ಜಮೀನು ಪರಬಾರೆಯಲ್ಲಿ ನಾನು ಯಾವ ಪ್ರಭಾವವನ್ನು ಬಳಸಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಕೇಸ್ ಹಾಕಲಾಗುವುದು ಎಂದು ತಿಳಿಸಿದ್ದಾರೆ.

    ಇತ್ತ ಲಕ್ಷ್ಮಿದೇವಿಯ ಮಗ, ತಾಲೂಕು ಪಂಚಾಯ್ತಿ ಸದಸ್ಯ ಹೇಮರಾಜ್ ನಾನು ಕಾನೂನು ಬದ್ಧವಾಗಿ ನನ್ನ ತಾಯಿಯ ಹೆಸರಿಗೆ ಜಮೀನು ಕೊಂಡುಕೊಂಡಿದ್ದೇನೆ. ನನ್ನ ಬಳಿ ಎಲ್ಲ ಸೂಕ್ತ ದಾಖಲೆ ಇದೆ. ಅಲ್ಲಿ ಮನೆ ಕಟ್ಟಿರುವವರೇ ಅಕ್ರಮವಾಗಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ನ್ಯಾಯಾಲಯದ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಅಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನರ ಗುಂಪಿನ ಮೇಲೆ ಚಿರತೆ ದಾಳಿ-ಇತ್ತ ನಗರದತ್ತ ಬಂದ ಗಜಪಡೆ

    ಜನರ ಗುಂಪಿನ ಮೇಲೆ ಚಿರತೆ ದಾಳಿ-ಇತ್ತ ನಗರದತ್ತ ಬಂದ ಗಜಪಡೆ

    ಆನೇಕಲ್: ಗುಂಪು ಗುಂಪಾಗಿ ಚಿರತೆ ಸೆರೆ ಹಿಡಿಯುವುದನ್ನು ನೋಡಲು ತೆರಳಿದ್ದ ಸಾರ್ವಜನಿಕರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದ ವಾನಂಬಾಡಿಯಲ್ಲಿ ನಡೆದಿದೆ.

    ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಬೋನು ಸಿದ್ಧಪಡಿಸಿ ಮಾಂಸದ ತುಂಡಿನ ಸಮೇತ ಚಿರತೆ ಪ್ರತ್ಯಕ್ಷವಾದ ಸ್ಥಳಕ್ಕೆ ತಂದಿತ್ತು. ಈ ವೇಳೆ ಸುತ್ತಮುತ್ತಲಿನ ಗ್ರಾಮಾಸ್ಥರು ಸೇರಿದಂತೆ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದರು. ಆದರೆ ಜನರ ಗಲಾಟೆಗೆ ಭಯಗೊಂಡ ಚಿರತೆ ಗುಂಪಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳು ಜನರು ಯತ್ನಿಸಿ ದಿಕ್ಕಾಪಲಾಗಿ ಓಡಿದ್ದಾರೆ.

    ಚಿರತೆ ಜನರ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಜನರನ್ನು ಬೆನ್ನಟ್ಟಿ ಚಿರತೆ ದಾಳಿ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ. ಈ ವೇಳೆ ಸ್ಥಳದಲ್ಲೇ ಅರಣ್ಯ ಸಿಬ್ಬಂದಿ ಕೂಡ ಇದ್ದು, ಜನರ ಮೇಲೆ ದಾಳಿ ನಡೆಸಿದ ಚಿರತೆ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡು ಕಾಡಿನತ್ತ ಓಡಿ ಹೋಗಿದೆ.

    ಒಂದೆಡೆ ಚಿರತೆ ದಾಳಿ ನಡೆದಿದ್ದರೆ, ಇತ್ತ ಕರ್ನಾಟಕ, ತಮಿಳುನಾಡಿನ ಗಡಿ ಭಾಗದಲ್ಲಿ ಮತ್ತೆ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಹೊಸೂರು ಬಳಿಯ ಉದ್ದನಾಪಲ್ಲಿ, ತೊಪಗಾನಪಲ್ಲಿ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದೆರೆಡು ತಿಂಗಳಿನಿಂದ ಗಡಿ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚುತ್ತಿದ್ದು ಆನೆಗಳನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    https://www.youtube.com/watch?v=EkvtvjmHVis

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

    ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

    ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮಸ್ಥರ ನಿದ್ದೆಗೆಡೆಸಿದ್ದ ಎರಡನೇ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

    ಕಳೆದ ಎರಡು ವಾರದಿಂದ ಸುತ್ತಮುತ್ತಲಿನ ಗ್ರಾಮದಿಂದ ಎರಡು ಮಕ್ಕಳನ್ನು ಚಿರತೆಗಳು ಹೊತ್ತೊಯ್ದಿದ್ದವು. ಈ ಚಿರತೆಗಳ ಕಾಟ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಕಳೆದ ಎರಡು ವಾರದಿಂದ ಚಿರತೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

    ಹೀಗಾಗಿ ಸೋಮಲಾಪುರ ಗುಡ್ಡದ ಬಳಿ ನಾಯಿ ಹಾಕಿ 11 ಬೋನುಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಈ ಹಿಂದೆ ಒಂದು ಚಿರತೆ ಸೆರೆಸಿಕ್ಕಿತ್ತು. ಅಲ್ಲದೇ ಇಂದು ಮುಂಜಾನೆ ಆಹಾರ ಅರಸಿ ಬಂದ ಮತ್ತೊಂದು ಚಿರತೆಯೂ ಬೋನಿಗೆ ಬಿದ್ದಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸ್ಥಳಾಂತರ ಕಾರ್ಯ ಕೈಗೊಂಡಿದ್ದಾರೆ. ಬೋನಿನಲ್ಲಿ ಬಿದ್ದ ಚಿರತೆ ನೋಡಲು ಸೋಮಲಾಪುರ ಸುತ್ತಮುತ್ತಲಿನ ಗ್ರಾಮದ ಜನರು ತಂಡೋಪ ತಂಡವಾಗಿ ಗ್ರಾಮದತ್ತ ಆಗಮಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೆಡೆ ಬೋಟ್ ತೂತು ಮತ್ತೊಂದೆಡೆ ಮೊಸಳೆ ಕಾಟ- ಭೀಮಾನದಿಯಲ್ಲಿ ಸಾವಿನ ಸಂಚಾರ

    ಒಂದೆಡೆ ಬೋಟ್ ತೂತು ಮತ್ತೊಂದೆಡೆ ಮೊಸಳೆ ಕಾಟ- ಭೀಮಾನದಿಯಲ್ಲಿ ಸಾವಿನ ಸಂಚಾರ

    – ಇಬ್ಬರು ಪ್ರಭಾವಿ ಶಾಸಕರಿದ್ರೂ ನೋ ಯೂಸ್

    ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಿತ್ತಾಪುರ ತಾಲೂಕಿನ ಚಾಮನೂರ ಗ್ರಾಮದ ಮಧ್ಯದಲ್ಲಿರುವ ಭೀಮಾ ನದಿಯ ಆಸುಪಾಸಿನ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನದಿಯಲ್ಲಿ ಈಗ ಪ್ರಾಣವನ್ನೇ ಪಣಕ್ಕಿಟ್ಟು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ನದಿ ದಾಟಲು ಇಲ್ಲಿ ಒಂದೇ ಒಂದು ಬೋಟ್ ಇದೆ. ದುರಾದೃಷ್ಟ ಅಂದ್ರೆ ಈ ಬೋಟ್‍ನಲ್ಲಿ ಕಳೆದ 6 ತಿಂಗಳಿನಿಂದ ದೊಡ್ಡ ದೊಡ್ಡ ರಂಧ್ರಗಳು ಕಾಣಿಸಿಕೊಂಡಿದ್ದು, ನದಿಯಲ್ಲಿ ಸಾಗುತ್ತಿದ್ದಂತೆಯೇ ರಭಸವಾಗಿ ನೀರು ತುಂಬಲು ಆರಂಭವಾಗುವ ಮೂಲಕ ಜನರ ಸಾವಿಗೆ ಆಹ್ವಾನ ನೀಡುತ್ತಿದೆ. ಈ ವೇಳೆ ಬೋಟ್ ಚಾಲಕ ಹಾಗೂ ಆತನ ಮೂರು ಜನ ಸಿಬ್ಬಂದಿ ಹೀಗೆ ಬಕೆಟ್‍ಗಳಿಂದ ಬೋಟ್‍ನಲ್ಲಿದ್ದ ನೀರನ್ನು ನಿರಂತರವಾಗಿ ತೆಗೆಯಬೇಕಾಗುತ್ತದೆ. ಇನ್ನೊಂದೆಡೆ ಈ ಬೋಟ್‍ನ ತಳಭಾಗ ಬಹುತೇಕ ಶಿಥಿಲಗೊಂಡಿದ್ದು ಯಾವಾಗ ಬೇಕಾದ್ರೂ ನದಿಯಲ್ಲಿ ಮುಳುಗಬಹುದು. ಆದ್ರೂ ಇಲ್ಲಿನ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಇದರಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ ಅಂತ ಗ್ರಾಮದ ನಿವಾಸಿ ಮಾಳಪ್ಪ ಹೇಳುತ್ತಾರೆ.

    ಬೋಟ್ ಅವ್ಯವಸ್ಥೆ ಒಂದೆಡೆಯಾದರೆ ಮತ್ತೊಂದೆಡೆ ಮೊಸಳೆ ಕಾಟ. ದಡದಲ್ಲಿ ಯಾವಾಗಲೂ ಮೊಸಳೆ ಕಾಣಸಿಗತ್ತದೆ. ಹೊಸ ಬೋಟ್ ನೀಡುವಂತೆ ಎರಡು ಗ್ರಾಮದ ಜನ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಈ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಈಗಾಗಲೇ ಸೇತುವೆ ಕಾಮಗಾರಿ ಆರಂಭವಾದ್ರೂ ಅದು ಮುಗಿಯಲು ಕನಿಷ್ಠ 4 ವರ್ಷ ಬೇಕಾಗುತ್ತದೆ. ಹೀಗಾಗಿ ಅಲ್ಲಿಯವರಗೆ ಈ ಎರಡು ಗ್ರಾಮದ ಜನ ಜೀವವನ್ನು ಪಣಕ್ಕಿಟ್ಟು ಈ ಬೋಟ್‍ನಲ್ಲಿಯೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

    ದುರಂತ ಅಂದ್ರೆ ಎಚ್‍ಕೆಆರ್‍ಡಿಬಿಗೆ ಬರುವ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನರಿಬೋಳ ಗ್ರಾಮ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ವ್ಯಾಪ್ತಿಗೆ ಬಂದ್ರೆ, ಇತ್ತು ಚಾಮನೂರ ಗ್ರಾಮ ಶಾಸಕ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರಕ್ಕೆ ಸೇರುತ್ತದೆ. ರಾಜ್ಯ ರಾಜಕೀಯದಲ್ಲಿ ಮಿಂಚುತ್ತಿರುವ ಈ ಇಬ್ಬರು ನಾಯಕರ ಕ್ಷೇತ್ರದಲ್ಲಿನ ಜನ ಇಂತಹ ಸಂಕಷ್ಟದಲ್ಲಿರುವದು ದುರಂತವೇ ಸರಿ.

    ಕೂಡಿ ಗ್ರಾಮದಿಂದ ನರಿಬೋಳ ಗ್ರಾಮಕ್ಕೆ ಬೋಟ್ ಶಿಫ್ಟ್ ಮಾಡಲು ಜಿಲ್ಲಾಡಳಿತ ಯೋಚಿಸುತ್ತಿದೆ. ಒಂದು ವೇಳೆ ಅಲ್ಲಿಂದ ಬೋಟ್ ತಂದ್ರೆ ಅಲ್ಲಿನ ಜನ ನದಿ ದಾಟಲು ಆಗುವುದಿಲ್ಲ. ಸದ್ಯ ಈ ವಿಷಯ ಕಲಬುರಗಿ ಜಿಲ್ಲಾಡಳಿತ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ಬಂದ್ರು ಯಾವುದೇ ಪ್ರಯೋಜನವಾಗದಿರೋದು ವಿಪರ್ಯಾಸವಾಗಿದೆ. ಒಟ್ಟಿನಲ್ಲಿ ಅವಘಡ ನಡೆಯುವ ಮುನ್ನ ಕ್ಷೇತ್ರದ ಇಬ್ಬರು ಶಾಸಕರು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಈ ಸಾವಿನ ಸಂಚಾರಕ್ಕೆ ಮುಕ್ತಿ ನೀಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದುವರಿದ ಗಜ, ಮನುಜನ ಸಂಘರ್ಷ – ಕಾಡಾನೆ ಗುಂಪಿನತ್ತ ಕಲ್ಲು ತೂರಿದ ಗ್ರಾಮಸ್ಥರು

    ಮುಂದುವರಿದ ಗಜ, ಮನುಜನ ಸಂಘರ್ಷ – ಕಾಡಾನೆ ಗುಂಪಿನತ್ತ ಕಲ್ಲು ತೂರಿದ ಗ್ರಾಮಸ್ಥರು

    ಆನೇಕಲ್: ಕರ್ನಾಟಕ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕನಿಕೋಟೆ, ಸೂಳಗಿರಿ ಅರಣ್ಯ ಪ್ರದೇಶದಲ್ಲಿ 3 ತಂಡಗಳಲ್ಲಿ ಸುಮಾರು 69ಕ್ಕೂ ಹೆಚ್ಚು ಆನೆಗಳು ಹಲವು ದಿನಗಳಿಂದ ಬೀಡು ಬಿಟ್ಟ ಪರಿಣಾಮ ಗ್ರಾಮಸ್ಥರು ಆತಂಕದಲ್ಲಿ ದಿನದೂಡುತ್ತಿದ್ದಾರೆ.

    ಪ್ರತಿ ವರ್ಷದಂತೆ ಅರಣ್ಯದಂಚಿನ ತೋಟದ ಹೊಲಗಳಿಗೆ ಆಹಾರವನ್ನು ಅರಸಿ ಬರುವ ಆನೆಗಳ ಹಿಂಡು ಈ ವರ್ಷವು ಕೂಡ ಆಗಮಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆನೆಗಳನ್ನು ನೋಡಲು ಬರುವ ಗ್ರಾಮದ ಜನರು ಆನೆಗಳ ಗುಂಪನ್ನು ಗಾಬರಿ ಪಡಿಸುತ್ತಾ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದರಿಂದ ಹೆದರಿ ಆನೆಗಳು ನಾಡಿನತ್ತ ಲಗ್ಗೆಯಿಟ್ಟು ಮತ್ತಷ್ಟು ಬೆಳೆ ನಾಶ ಮಾಡುತ್ತಿವೆ.

    ಆನೆಗಳನ್ನು ನೋಡಲು ಹಾಗೂ ಓಡಿಸಲು ಸಾಕಷ್ಟು ಜನ ಸೇರುತ್ತಿದ್ದು, ಜನರನ್ನು ಕಂಡ ಆನೆಗಳು ದಾಳಿ ಮಾಡಲು ಮುಂದಾಗುತ್ತಿವೆ. ಅರಣ್ಯ ಅಧಿಕಾರಿಗಳು ಆನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಜನರೇ ಆನೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ನಿಯಂತ್ರಿಸಲು ಕೂಡ ಅರಣ್ಯ ಸಿಬ್ಬಂದಿ ಪರದಾಟ ನಡೆಸುತ್ತಿದ್ದಾರೆ.

    ಈ ವರ್ಷ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ದಿನ ಆನೆಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮೊದಲೇ ಬರಗಾಲದಿಂದ ರೈತರ ಬೆಳೆಗಳು ಅಲ್ಪ ಪ್ರಮಾಣದಲ್ಲಿ ಫಸಲು ನೀಡಿದ್ದು, ಅಳಿದುಳಿದ ಬೆಳೆಯು ಕೂಡ ಕಣ್ಣ ಮುಂದೆಯೇ ನಾಶವಾಗುತ್ತಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಾದಕ್ಕೆ ವಿಷ ಹಾಕಿದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿ- ಸ್ಥಳೀಯರ ಒತ್ತಾಯ

    ಪ್ರಸಾದಕ್ಕೆ ವಿಷ ಹಾಕಿದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿ- ಸ್ಥಳೀಯರ ಒತ್ತಾಯ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಹಾಕಿದ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗ್ರಾಮಸ್ಥರು, ರಾಮಾಪುರದಲ್ಲಿ ಗಾಂಜಾ ಪ್ರಕರಣದಲ್ಲಿ ದೊಡ್ಡಯ್ಯ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದ. ಆ ದೊಡ್ಡಯ್ಯನನ್ನು ಮಾರಮ್ಮ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿರೋ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ ಬಿಡುಗಡೆಗೊಳಿಸಿ ಟ್ರಸ್ಟಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

    ಕಳೆದ 3 ತಿಂಗಳ ಹಿಂದೆ ಸ್ವಾಮೀಜಿ ಸಂಗಮೇಶ ಎನ್ನುವವರಿಗೆ ಕಪಾಳ ಮೋಕ್ಷವನ್ನು ಮಾಡಿದ್ದರು. ಪುಣ್ಯದ ಕೆಲಸ ಮಾಡಬೇಕು ಅಂತ ಹೇಳಿ ದೇವಸ್ಥಾನದ ಗೋಪುರ ಮಾಡುವಾಗ ಎಲ್ಲಿ ನನ್ನ ಹೆಸರು ತಪ್ಪಿ ಹೋಗುತ್ತೋ? ನನ್ನನ್ನು ಬಿಟ್ಟು ಗೋಪುರ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಕಡೆಯಿಂದಲೇ ಆಗಬೇಕು ಎಂದು ಅದರಲ್ಲಿ ಬರುತ್ತಿರುವ ಆದಾಯವೆಲ್ಲಾ ನಮ್ಮ ನಮಗೆ ಸೇರಬೇಕು ಎನ್ನುವ ಉದ್ದೇಶಕ್ಕಾಗಿ ಈ ರೀತಿಯ ಪಿತೂರಿ ನಡೆಸಿದ್ದಾರೆ ಅಂತ ಆರೋಪಿಸಿದ್ದಾರೆ.

    ಸ್ವಾಮೀಜಿ, ದೇವಸ್ಥಾನದ ಅಂದ್ರೆ ಜನರಿಗೆ ಅಪಾರವಾದ ಗೌರವವಿದೆ. ಅದ್ರಲ್ಲೂ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ಅಂದ್ರೆ ಬಹಳ ಪ್ರಸಿದ್ಧಿ ಇದೆ. ಆದ್ರೆ ಇಂತಹ ಸ್ವಾಮೀಜಿಗಳಿಂದ ಇಡೀ ಸ್ವಾಮೀಜಿ ಕುಲಕ್ಕೆ ಎಲ್ಲಾ ದೇವಸ್ಥಾನಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣ ಸಂಬಂಧ ಸಿಕ್ಕಿಬಿದ್ದವರನ್ನು ಹೆಚ್ಚು ದಿನ ಬಿಡದೆ ಪೊಲೀಸರು ತನಿಖೆ ಮಾಡಿದ ಕೂಡಲೇ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ವಿಶೇಷವಾದ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

    ಮುಗ್ಧ ಜನರು ಸ್ವಾಮೀಜಿಗಳನ್ನು ನಂಬುತ್ತಾರೆ. ಇಂತಹವರು ಇರೋದಕ್ಕಿಂತ ಸಾಯೋದೇ ಮುಲು, ಇವರಿಗೆಲ್ಲ ಕಠಿಣ ಶಿಕ್ಷೆ ವಿಧಿಸಬೇಕು. ಗಲ್ಲು ಶಿಕ್ಷೆಯೇ ನೀಡಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಈಗಾಗಲೇ ಮೃತಪಟ್ಟವರ ಕುಟುಂಬದವರು ಎಷ್ಟು ಸಂಕಟವನ್ನು ಅನುಭವಿಸುತ್ತಿದ್ದಾರೆಯೋ, ಅದು ಅವರಿಗೆ ಅರಿವಾಗಬೇಕು ಅಂತಾದ್ರೆ ಈ ಕ್ಷಣಿಕವೇ ಒಂದು ತಿಂಗಳೊಳಗಡೆ ಗಲ್ಲು ಶಿಕ್ಷೆ ಆಗಬೇಕು. ಇನ್ನೊಬ್ಬರು ಮತ್ತೆ ಇಂತಹ ನೀಚ ಕೃತ್ಯ ಎಸಗಬಾರದು ಅಂತ ಆರೋಪಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.

    ಸ್ವಾಮೀಜಿಯಿಂದ ಸುಪಾರಿ:
    ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಸ್ವಾಮೀಜಿಯದ್ದಾಗಿತ್ತು. ಆಗ ಪ್ರಸಾದಕ್ಕೆ ವಿಷ ಬೆರೆಸುವ ಕುತಂತ್ರ ಹೊಳೆದಿದೆ. ವಿಷಮಿಶ್ರಿತ ಪ್ರಸಾದ ಸೇವಿಸಿದವರು ವಾಂತಿ ಮಾಡಿ ಅಸ್ವಸ್ಥಗೊಳ್ಳುತ್ತಾರೆ. ಆಗ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ತಮ್ಮ ಆಡಳಿತಕ್ಕೆ ಒಳಪಡುತ್ತೆ ಎಂಬುದು ಸ್ವಾಮೀಜಿ ಪ್ಲಾನ್ ಮಾಡಿಕೊಂಡಿದ್ದರು.

    ಸ್ವಾಮೀಜಿ ಮತ್ತು ವ್ಯವಸ್ಥಾಪಕ ಮಾದೇಶ್, ಮಾದೇಶನ ಹೆಂಡತಿ ಅಂಬಿಕಾ (ಅಂಬಿಕಾ ಸ್ವಾಮೀಜಿಯ ಸಂಬಂಧಿಯೂ ಹೌದು) ಈ ಮೂವರು ಸೇರಿ ಪ್ರಸಾದಕ್ಕೆ ವಿಷ ಬೆರೆಸಲು ಸಂಚು ರೂಪಿಸಿದರು. ಕ್ರಿಮಿನಾಶಕ ತಂದು ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ನೀಡಿ ಹೇಗಾದರೂ ಮಾಡಿ ಪ್ರಸಾದಕ್ಕೆ ಬೆರೆಸುವಂತೆ ಸುಪಾರಿ ನೀಡಿದರು.

    ಈ ಮೂವರ ಅಣತಿಯಂತೆ ದೊಡ್ಡಯ್ಯ ಶಂಕುಸ್ಥಾಪನೆ ಸಮಾರಂಭದ ದಿನ ಎಲ್ಲರ ಕಣ್ತಪ್ಪಿಸಿ ರೈಸ್ ಪ್ರಸಾದಕ್ಕೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದ. ಈ ವಿಷಯ ಅರಿಯದ ಚಿನ್ನಪ್ಪಿ ಹಾಗೂ ಇತರರು ಶಂಕುಸ್ಥಾಪನೆ ಸಮಾರಂಭಕ್ಕೆ ಬಂದಿದ್ದ ಭಕ್ತರಿಗೆ ವಿಷಮಿಶ್ರಿತ ಪ್ರಸಾದ ವಿತರಿಸಿದ್ದಾರೆ. ನೋಡುನೋಡುತ್ತಿದ್ದಂತೆ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತು. ಒಬ್ಬೊಬ್ಬರಾಗಿ ಸಾವನ್ನಪ್ಪತೊಡಗಿದರು. ಒಟ್ಟಿನಲ್ಲಿ 5 ಮಂದಿಯ ಕುತಂತ್ರಕ್ಕೆ 15 ಮಂದಿ ಅಮಾಯಕರು ಬಲಿಯಾಗಿದ್ದಾರೆ.

    https://www.youtube.com/watch?v=GJDDFeVaJcg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ

    ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ

    ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತೂರು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

    ಕಳೆದ ಕೆಲವು ದಿನಗಳಿಂದ ಮತ್ತೂರು ಗ್ರಾಮದಲ್ಲಿ ಚಿರತೆಯೊಂದು ಪದೇ ಪದೇ ಪ್ರತ್ಯಕ್ಷವಾಗಿ ಗ್ರಾಮಸ್ಥರ ನಿದ್ದೆಗಡೆಸಿತ್ತು. ಇದರಿಂದ ಭಯಭೀತಿಗೊಂಡಿದ್ದ ಜನ ಅರಣ್ಯ ಇಲಾಖೆ ಬಳಿ ಚಿರತೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.

    ಗ್ರಾಮಸ್ಥರ ದೂರು ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಇಟ್ಟಗಿ ಹನುಮಂತಪ್ಪ ಎಂಬವರ ಕಬ್ಬಿನ ಗದ್ದೆಯಲ್ಲಿ ಅರಣ್ಯ ಇಲಾಖೆ ಬೋನನ್ನು ಇಟ್ಟಿತ್ತು. ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಇಂದು ಬೋನಿಗೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದಿದ್ದರಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಚಿರತೆಯನ್ನು ತೆಗೆದುಕೊಂಡು ಹೋಗಿದ್ದಾರೆ. 10 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಈಗ ಮತ್ತೊಂದು ಚಿರತೆಯೂ ಬೋನಿಗೆ ಬಿದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv