Tag: villagers

  • ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆಹಿಡಿದ ಗ್ರಾಮಸ್ಥರು

    ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆಹಿಡಿದ ಗ್ರಾಮಸ್ಥರು

    ಬೆಳಗಾವಿ(ಚಿಕ್ಕೋಡಿ): ಕೃಷ್ಣಾನದಿಯಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ಆಹಾರ ಅರಸಿ ತೋಟವೊಂದಕ್ಕೆ ನುಗ್ಗಿದ್ದ ಮೊಸಳೆಯನ್ನು ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

    ಚಿಂಚಲಿ ಪಟ್ಟಣದ ಹೊರವಲಯದ ಗ್ರಾಮಸ್ಥರ ತೋಟದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಆತಂಕ್ಕೊಳಗಾದ ತೋಟದ ಮಾಲೀಕ ಸ್ಥಳೀಯರಿಗೆ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲಾ ಜೊತೆಗೂಡಿ 7 ಅಡಿ ಉದ್ದದ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:10 ಅಡಿ ಉದ್ದದ ಮತ್ತೊಂದು ಮೊಸಳೆಯನ್ನು ಸೆರೆಹಿಡಿದ ಗ್ರಾಮಸ್ಥರು!

    ಕೃಷ್ಣಾ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಈ ರೀತಿ ಮೊಸಳೆಗಳು ತೋಟ, ಜಮೀನುಗಳಿಗೆ ಆಹಾರ ಅರಸಿ ನುಗ್ಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋಗಿರುವ ಹಿನ್ನೆಲೆ ಆಹಾರಕ್ಕಾಗಿ ಮೊಸಳೆಗಳು ಜನ ವಾಸಿಸುವ ಪ್ರದೇಶಕ್ಕೆ ಬರುತ್ತಿರುವುದು ನದಿ ಪಾತ್ರದ ಜನರ ನಿದ್ದೆಗೆಡಿಸಿದೆ. ಈ ಹಿಂದೆ ಕೂಡ ಕೃಷ್ಣ ನದಿ ತೀರದ ಗ್ರಾಮಗಳಲ್ಲಿ 2 ಮೊಸಳೆಗಳನ್ನು ಗ್ರಾಮಸ್ಥರು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

    ಸದ್ಯ ಸೆರೆಹಿಡಿದಿರುವ ಮೊಸಳೆಯನ್ನು ರಾಯಬಾಗ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

  • ಚುನಾವಣೆಗೆ ತಟ್ಟಿದ ಭೀಕರ ಬರಗಾಲ – ಬಿಸಿಲನಾಡಿನ ಗ್ರಾಮಗಳೆಲ್ಲಾ ಖಾಲಿ ಖಾಲಿ

    ಚುನಾವಣೆಗೆ ತಟ್ಟಿದ ಭೀಕರ ಬರಗಾಲ – ಬಿಸಿಲನಾಡಿನ ಗ್ರಾಮಗಳೆಲ್ಲಾ ಖಾಲಿ ಖಾಲಿ

    ರಾಯಚೂರು: ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಬರಕ್ಕೆ ಹೆದರಿ ಬಿಸಿಲನಾಡು ರಾಯಚೂರಿನ ಕೆಲವು ಗ್ರಾಮಗಳ ಪಂಚಾಯ್ತಿ ಸದ್ಯಸರು ಸೇರಿ ಗ್ರಾಮಸ್ಥರು ಗುಳೆ ಹೋಗುತ್ತಿದ್ದು, ಚುನಾವಣಾ ಮತದಾನದ ಮೇಲೆ ಈ ಬಾರಿಯ ಭೀಕರ ಬರಗಾಲ ಪರಿಣಾಮ ಬೀರುವ ಸಾಧ್ಯತೆಯಿದೆ.

    ಬರಕ್ಕೆ ಹೆದರಿ ಲಿಂಗಸುಗೂರು ತಾಲೂಕಿನ ಮಟ್ಟೂರು, ನಾಗಲಾಪೂರ, ಉಪ್ಪರನಂದಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲಸವಿಲ್ಲದೆ ಸುಮಾರು 10 ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರೇ ಗುಳೆ ಹೋಗಿದ್ದಾರೆ. ನೀರು, ಮೇವಿನ ಸಮಸ್ಯೆಯೊಂದಿಗೆ ದುಡಿಯಲು ಕೆಲಸವಿಲ್ಲದೆ ಈಗಾಗಲೇ ಈ ಭಾಗದ ಸಾವಿರಾರು ಜನ ಬೆಂಗಳೂರು, ಪೂನಾ, ಹೈದರಾಬಾದ್ ಸೇರಿ ವಿವಿಧೆಡೆ ಹೋಗಿದ್ದಾರೆ. ಆದ್ರೆ ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸಬೇಕಾದ ಗ್ರಾಮ ಪಂಚಾಯತಿ ಸದಸ್ಯರೇ ಗುಳೆ ಹೋಗಿರುವುದು ಬರಗಾಲದ ತೀವ್ರತೆಯನ್ನು ತೋರಿಸುತ್ತಿದೆ.

    ಸದ್ಯ ಹಣ ಕೊಟ್ಟು ಕರೆದುಕೊಂಡು ಬಂದರೆ ಮಾತ್ರ ಗುಳೆ ಹೋದವರು ಮತದಾನ ಮಾಡಲು ಬರುತ್ತಾರೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ರಾಯಚೂರು ತಾಲೂಕಿನ ಗೋನಾಳ, ಮರ್ಚಡ್ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಹಳ್ಳಿಗಳಿಂದ ಸಾವಿರಾರು ಜನ ಗುಳೆ ಹೋಗಿದ್ದಾರೆ. ಇದರ ಜೊತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಜಿಲ್ಲೆಯ ಚಿಕ್ಕವಡ್ಲೂರು, ಹನುಮಾನದೊಡ್ಡಿ, ವಡ್ಲೂರು, ಅಸ್ಕಿಹಾಳ, ಚಿಕ್ಕ ಬೂದೂರು, ಪೋತ್ಗಲ್ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

  • ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದ ಖದೀಮರ ಬೆವರಿಳಿಸಿದ ಗ್ರಾಮಸ್ಥರು

    ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದ ಖದೀಮರ ಬೆವರಿಳಿಸಿದ ಗ್ರಾಮಸ್ಥರು

    ಹಾಸನ: ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿ ಆತನ ಬಳಿ ಇದ್ದ ಚಿನ್ನದ ಚೈನ್ ಹಾಗೂ ಐದು ಸಾವಿರ ಹಣ ಕಸಿದು ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರಿಗೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಬ್ಬೂರು ಮಾಚೇನಹಳ್ಳಿ ಗ್ರಾಮಸ್ಥರು ತಕ್ಕ ಪಾಠ ಕಲಿಸಿದ್ದಾರೆ.

    ಅಬ್ಬೂರು ಮಾಚೇನಹಳ್ಳಿ ಗ್ರಾಮದ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಒಂದೇ ಬೈಕ್‍ನಲ್ಲಿ ಬಂದಿದ್ದ ಮೂವರು ದರೋಡೆಕೋರರು ಮಾಚೇನಹಳ್ಳಿ ಗ್ರಾಮದ ಬಳಿ ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿ ಹೆದರಿಸಿದ್ದಾರೆ. ಬಳಿಕ ಆತನ ಬಳಿ ಇದ್ದ ಚಿನ್ನದ ಚೈನ್ ಹಾಗೂ ಐದು ಸಾವಿರ ಹಣ ಕಸಿದು ಪರಾರಿಯಾಗುತ್ತಿದ್ದರು. ಈ ವೇಳೆ ದರೋಡೆಕೋರರನ್ನು ಗ್ರಾಮಸ್ಥರು ಬೆನ್ನಟ್ಟಿ ಮೂವರನ್ನೂ ಹಿಡಿದಿದ್ದಾರೆ. ನಂತರ ಗ್ರಾಮದಲ್ಲಿ ಅವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ಬೆವರಿಳಿಸಿದ್ದಾರೆ.

    ಬಳಿಕ ಪೊಲೀಸರಿಗೆ ಈ ಬಗ್ಗೆ ಗ್ರಾಮಸ್ಥರು ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಖದೀಮರನ್ನು ವಶಕ್ಕೆ ಪಡೆದಿದ್ದಾರೆ.

  • ಕಾಂಗ್ರೆಸ್ ಅಭ್ಯರ್ಥಿಗೆ 90 ಸಾವಿರ ರೂ. ಹಣ ನೀಡಿದ ಗ್ರಾಮಸ್ಥರು

    ಕಾಂಗ್ರೆಸ್ ಅಭ್ಯರ್ಥಿಗೆ 90 ಸಾವಿರ ರೂ. ಹಣ ನೀಡಿದ ಗ್ರಾಮಸ್ಥರು

    ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ ಮಂಜಪ್ಪ ಅವರಿಗೆ ಗ್ರಾಮಸ್ಥರು 90 ಸಾವಿರ ರೂ. ಹಣ ದೇಣಿಗೆ ನೀಡಿದ್ದಾರೆ.

    ದಾವಣಗೆರೆ ತಾಲೂಕಿನ ಬಾಡ ಗ್ರಾಮದ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಹೆಚ್. ಬಿ ಮಂಜಪ್ಪ ಅವರಿಗೆ ದೇಣಿಗೆ ನೀಡಿದ್ದಾರೆ. ಹೆಚ್. ಬಿ ಮಂಜಪ್ಪ ಗ್ರಾಮದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ರೈತ ಕುಟುಂಬದಿಂದ ಬಂದಿದ್ದಾರೆ. ಅವರಿಗೆ ಪ್ರಚಾರಕ್ಕೆ ಹಣ ಇಲ್ಲ. ಹೀಗಾಗಿ ಪ್ರಚಾರಕ್ಕೆ ಹೋದ ಕಡೆ ಗ್ರಾಮಸ್ಥರು ಮಂಜಪ್ಪ ಅವರಿಗೆ ಹಣ ನೀಡುತ್ತಿದ್ದಾರೆ. ಈಗಾಗಲೇ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಲಕ್ಷಾಂತರ ರೂ. ಹಣ ದೇಣಿಗೆ ನೀಡಿದ್ದಾರೆ.

  • 10 ಅಡಿ ಉದ್ದದ ಮತ್ತೊಂದು ಮೊಸಳೆಯನ್ನು ಸೆರೆಹಿಡಿದ ಗ್ರಾಮಸ್ಥರು!

    10 ಅಡಿ ಉದ್ದದ ಮತ್ತೊಂದು ಮೊಸಳೆಯನ್ನು ಸೆರೆಹಿಡಿದ ಗ್ರಾಮಸ್ಥರು!

    ಬೆಳಗಾವಿ(ಚಿಕ್ಕೋಡಿ): ಮಂಗಳವಾರದಂದು ಆಹಾರ ಅರಸಿ ಕಬ್ಬಿನ ಗದ್ದೆಗೆ ನುಗಿದ್ದ ಬೃಹತ್ ಗಾತ್ರದ ಮೊಸಳೆಯನ್ನು ಸೆರೆಹಿಡಿದ ಬಳಿಕ, ತಡರಾತ್ರಿ ಹುಲಗಬಾಳಿ ಗ್ರಾಮದಲ್ಲಿ ಮತ್ತೊಂದು ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

    ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ 10 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ. ಕೃಷ್ಣಾ ನದಿಯಲ್ಲಿ ನೀರು ಇಲ್ಲದ ಕಾರಣ ಗ್ರಾಮಗಳಿಗೆ ಮೊಸಳೆಗಳು ಆಹಾರ ಅರಸಿ ನುಗ್ಗುತ್ತಿವೆ. ಮಂಗಳವಾರವೂ ಕೂಡ ಸುಮಾರು 15 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಈ ಭಾಗದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು ಆತಂಕಕ್ಕೆ ಒಳಗಾದ ರೈತರು ಹಾಗೂ ಗ್ರಾಮಸ್ಥರು ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಗ್ರಾಮಸ್ಥರಿಂದ ಬೃಹತ್ ಗಾತ್ರದ ಮೊಸಳೆ ಸೆರೆ!

    ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ್, ಸಪ್ತಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿರುವ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೇ ಪರದಾಡುವಂತಾಗಿದೆ. ನದಿಯ ಸುತ್ತಮುತ್ತಲ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಈ ನಡುವೆ ಹೀಗೆ ಆಹಾರ ಅರಸಿಕೊಂಡು ಜನವಸತಿ ಪ್ರದೇಶಗಳಿಗೆ ಮೊಸಳೆಗಳು ಎಂಟ್ರಿ ಕೊಡುತ್ತಿರುವುದು ನದಿ ತೀರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದೆ.

  • ಗ್ರಾಮಸ್ಥರಿಂದ ಬೃಹತ್ ಗಾತ್ರದ ಮೊಸಳೆ ಸೆರೆ!

    ಗ್ರಾಮಸ್ಥರಿಂದ ಬೃಹತ್ ಗಾತ್ರದ ಮೊಸಳೆ ಸೆರೆ!

    ಬೆಳಗಾವಿ(ಚಿಕ್ಕೋಡಿ): ಆಹಾರ ಅರಸಿ ಕಬ್ಬಿನ ಗದ್ದೆಗೆ ನುಗ್ಗಿದ್ದ ಬೃಹತ್ ಗಾತ್ರದ ಮೊಸಳೆಯೊಂದನ್ನು ಅಥಣಿ ತಾಲೂಕಿನ ಹುಲಗಬಾಳ ಗ್ರಾಮಸ್ಥರು ಹಿಡಿದಿದ್ದಾರೆ.

    ಕೃಷ್ಣ ನದಿ ತೀರದ ಹುಲಗಬಾಳ ಗ್ರಾಮದ ಹಿರೇಮಠ ತೋಟಕ್ಕೆ ಆಹಾರ ಅರಸಿ ನುಗ್ಗಿಬಂದ ದೊಡ್ಡ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

    ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ್, ಸಪ್ತಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿರುವ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೇ ಪರದಾಡುವಂತಾಗಿದೆ. ನದಿಯ ಸುತ್ತಮುತ್ತಲ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ.

    ನೀರಿಲ್ಲದೆ ಕೃಷ್ಣ ನದಿ ಬತ್ತಿ ಹೋಗಿದ್ದು ಒಂದು ಕಡೆ ಸಾರ್ವಜನಿಕರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ನೀರಿನಲ್ಲಿ ಇರಬೇಕಾದ ಮೊಸಳೆಗಳು ಜಮೀನುಗಳಲ್ಲಿ ಆಹಾರ ಅರಸಿ ಬರುತ್ತಿದ್ದು, ನದಿ ತೀರದ ತೋಟದ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.

  • ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? – ಸಚಿವ ಡಿಸಿ ತಮ್ಮಣ್ಣಗೆ ಗ್ರಾಮಸ್ಥರಿಂದ ತರಾಟೆ

    ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? – ಸಚಿವ ಡಿಸಿ ತಮ್ಮಣ್ಣಗೆ ಗ್ರಾಮಸ್ಥರಿಂದ ತರಾಟೆ

    ಮಂಡ್ಯ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಹೀಗಾಗಿ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗೆ ಪ್ರಚಾರ ನಡೆಸುತ್ತಿದ್ದ ವೇಳೆ ಸಚಿವ ಡಿಸಿ ತಮ್ಮಣ್ಣ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಂಡ್ಯದ ಮದ್ದೂರಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಸಚಿವರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಮತ ಕೇಳಲು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಗ್ರಾಮಸ್ಥರು ಗ್ರಾಮದ ಸಮಸ್ಯೆ, ಮೈಷುಗರ್‍ಗೆ ಕಬ್ಬು ಪೂರೈಕೆ ಮಾಡಲು ಹಣ ಸಂದಾಯದ ವಿಚಾರವಾಗಿ ಸಚಿವರನ್ನು ಪ್ರಶ್ನಿಸಿದ್ದಾರೆ.

    ಕಬ್ಬಿನ ದುಡ್ಡು ಬಂದಿಲ್ಲ, ಊರು ಸಮಸ್ಯೆ ಬಗೆಹರಿದಿಲ್ಲ, ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವರು ಸಮಜಾಯಿಷಿ ನೀಡಲು ಮುಂದಾದ್ರು. ಆದ್ರೆ ಯುವಕನೊಬ್ಬ ಸಿಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಸಮಾಧಾನಪಡಿಸಿದ ಘಟನೆಯೂ ನಡೆದಿದೆ.

  • ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಭೋಪಾಲ್: ಯುವತಿಯೊಬ್ಬಳು ಬೇರೆ ಜಾತಿ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ಗ್ರಾಮಸ್ಥರು, ಒತ್ತಾಯವಾಗಿ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆಯನ್ನು ಆಕೆಗೆ ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಿಘರ್ ನಲ್ಲಿ ನಡೆದಿದೆ.

    ಜಾಬುವ ಜಿಲ್ಲೆಯ ದೇವಿಘರ್ ನಿವಾಸಿಯಾದ 20 ವರ್ಷದ ಯುವತಿಯೊಬ್ಬಳು ಅಂತರ್ಜಾತಿ ವಿವಾಹವಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ಮದುವೆಯಾದ ಯುವಕ, ಯುವತಿಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಮದುವೆಯಾದ ತಪ್ಪಿಗೆ ಯುವತಿ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿ ಶಿಕ್ಷೆ ವಿಧಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ರೀತಿ ಯುವತಿಗೆ ಗ್ರಾಮಸ್ಥರು ಶಿಕ್ಷೆ ನೀಡಿದ್ದು ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಜಾಬುವ ಪೊಲೀಸರು ಈಗಾಗಲೇ ಘಟನೆಯಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ಬೆಳಗಾವಿ (ಚಿಕ್ಕೋಡಿ): ಈ ಬಾರಿ ಲೋಕಸಭಾ ಚುನಾವಣೆ ನಮಗೆ ಬೇಡ, ನಮ್ಮೂರಿಗೆ ಜನಪ್ರತಿನಿಧಿಗಳು ಮತ ಕೇಳೋಕೆ ಬರೋದು ಬೇಡ ಅಂತ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

    ನೀರು ಕೊಟ್ಟು ನಂತರ ವೋಟು ಕೇಳೋಕೆ ಬನ್ನಿ. ಪ್ರಜಾಪ್ರಭುತ್ವಕ್ಕೆ ಮತಬೇಕು, ಬದುಕಲು ನೀರು ಬೇಕು ಅಂತ ಕೈಯಲ್ಲಿ ಸ್ಲೋಗನ್ ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರ ಈ ಗೋಳು ಕಳೆದ 30 ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳು ಕೇಳಿಲ್ಲ. ರಾಜ್ಯ ಸರ್ಕಾರದ ಮಾಸ್ಟರ್ ಮೈಂಡ್ ಅಂತಾನೇ ಕರೆಸಿಕೊಳ್ಳುವ ಸಚಿವ ಸತೀಶ್ ಜಾರಕಿಹೊಳಿಯವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ಹಂಚಿನಾಳ ಗ್ರಾಮ ಹಾಗೂ ಉಳ್ಳಾಗಡ್ಡಿ ಖಾನಾಪುರ, ಕುರಣಿ, ಚಿಕ್ಕಾಲಗುಡ್ಡ ಸೇರಿದಂತೆ ಐದು ಊರಿಗೆ ಸರಿಯಾಗಿ ಕುಡಿಯೋಕೆ ಮತ್ತು ಕೃಷಿಗೆ ನೀರು ಸಿಗುತ್ತಿಲ್ಲ. ತಮಗೆ ನೀರು ಕೊಡುವವರೆಗೂ ನಾವು ಮತದಾನ ಮಾಡುವುದಿಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ಈ ಗ್ರಾಮಗಳಿಗೆ ನೀರ ಹರಿಸುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಹಿಡಕಲ್ ಜಲಾಶಯದಿಂದ ಕುರಣಿ ಏತನೀರಾವರಿ ಯೋಜನೆ ನಿರ್ಮಾಣ ಮಾಡಲಾಗಿದೆ. ಈ ಗ್ರಾಮಗಳಿಂದ ಕುರಣಿ ಏತನೀರಾವರಿ ಯೋಜನೆಯ ನೀರೆತ್ತುವ ಜಾಗವಿರೋದು ಕೇವಲ 3 ಕಿ.ಮೀ ಅಷ್ಟೇ. ಆದರೆ ಅಲ್ಲಿಂದ ಇಲ್ಲಿಯವರೆಗೂ ಒಂದ ಬಾರಿ ಬಿಟ್ಟರೆ ಮತ್ಯಾವತ್ತೂ ಸಹ ನೀರು ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

    ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸದ್ಯ ಎರಡು ಜಿಲ್ಲೆಗಳ ನೀರಿನ ಬವಣೆ ಹೋಗಲಾಡಿಸ್ತಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಹುಕ್ಕೇರಿ ತಾಲೂಕಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೃಷಿಗೆ ಸಮರ್ಪಕ ನೀರಿನ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ಬರೀ ಆಶ್ವಾಸನೆ ನೀಡಿ ಕೈ ತೊಳೆದುಕೊಂಡು ಹೋಗುವ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ಬಾರಿ ಈ ನಾಲ್ಕು ಗ್ರಾಮದ ಜನರು ಮತದಾನ ಬಹಿಷ್ಕಾರದ ಹಾದಿ ಹಿಡಿದಿದ್ದು, ಆದಷ್ಟು ಬೇಗ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಬೇಕು ಅಂತ ಆಗ್ರಹಿಸಿದ್ದಾರೆ.

  • ಶಾಸಕರನ್ನು ಬಿಸಿಲಿನಲ್ಲಿ ನಡೆಸಿ ಬೆವರಿಳಿಸಿದ ಜನ!

    ಶಾಸಕರನ್ನು ಬಿಸಿಲಿನಲ್ಲಿ ನಡೆಸಿ ಬೆವರಿಳಿಸಿದ ಜನ!

    ಹಾಸನ: ಚನ್ನರಾಯಪಟ್ಟಣ ದಿಡಗಾ ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕರಿಗೆ ಜನರು ಬೆವರಿಳಿಸಿದ್ದಾರೆ. ಸ್ಥಳಕ್ಕೆ ಬಂದ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಬಾಲಕೃಷ್ಣರನ್ನ ಒಂದು ಕಿಲೊಮೀಟರ್ ನಡೆಸಿ ಗ್ರಾಮದಲ್ಲಿ ಯಾವ ಪರಿಸ್ಥಿತಿ ಇದೆ ಅನ್ನೋದನ್ನ ಅರ್ಥ ಮಾಡಿಸಿದ್ದಾರೆ.

    ಬರಗಾಲಪೀಡಿತ ಗ್ರಾಮಗಳಿಗೆ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಇಂದು ಚನ್ನರಾಯಪಟ್ಟಣ ದಿಡಗಾ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಶಾಸಕ ಬಾಲಕೃಷ್ಣ ಜನರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ಬಿರು ಬಿಸಿಲಿನಲ್ಲಿ ಬರಡಾದ ಕೆರೆ ತೋರಿಸಲು ಅವರನ್ನು ಜನರು ಸುಮಾರು 1 ಕಿ.ಮೀ ವರೆಗೆ ನಡೆಸಿಕೊಂಡೇ ಕರೆದೊಯ್ದು, ಕೆರೆಯಲ್ಲೇ ಕೂರಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

    ನಿಮ್ಮ ಕಾಂಕ್ರಿಟ್ ರಸ್ತೆ ನಮಗೆ ಬೇಡ, ಕೆರೆ ತುಂಬಿಸಿ ಸಾಕು. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವು ಚಂದಾ ಎತ್ತಿ ಕೊಡ್ತೀವಿ ಯೋಜನೆ ಜಾರಿಮಾಡಿ ಎಂದು ಬಿಸಿಲಿನಲ್ಲಿ ಶಾಸಕರ ಬೆವರಿಳಿಸಿದ್ದಾರೆ. ಅಲ್ಲದೆ ರೊಚ್ಚಿಗೆದ್ದಿದ್ದ ರೈತರನ್ನು ಸಮಾಧಾನಪಡಿಸಲು ಶಾಸಕರು ಹೈರಾಣಾಗಿ ಹೋದರು. ಕೆರೆ ತುಂಬಿಸದಿದ್ದರೆ ಇನ್ಮುಂದೆ ಯಾವುದೇ ಚುನಾವಣೆಗೂ ಮತ ಚಲಾಯಿಸಲ್ಲ ಎಂದು ಎಚ್ಚರಿಕೆಯನ್ನು ಕೂಡ ನೀಡಿ ಕಳುಹಿಸಿದ್ದಾರೆ. ಆದರಿಂದ ಲೋಕಸಭೆ ಚುನಾವಣೆ ಬಳಿಕ ಕೆರೆಗೆ ನೀರು ತುಂಬಿಸೋದಾಗಿ ಶಾಸಕರು ಜನರಿಗೆ ಭರವಸೆ ನೀಡಿ ತೆರಳಿದರು.