Tag: villagers

  • ಹೆಸರಿಗೆ ಮಾತ್ರ ಬಯಲುಮುಕ್ತ ಗ್ರಾಮ- ಇಲ್ಲಿ ಶೌಚಾಲಯವೂ ಇಲ್ಲ, ಜನರ ಪರದಾಟವೂ ತಪ್ಪಿಲ್ಲ

    ಹೆಸರಿಗೆ ಮಾತ್ರ ಬಯಲುಮುಕ್ತ ಗ್ರಾಮ- ಇಲ್ಲಿ ಶೌಚಾಲಯವೂ ಇಲ್ಲ, ಜನರ ಪರದಾಟವೂ ತಪ್ಪಿಲ್ಲ

    ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯನ್ನು ಕಳೆದ ವರ್ಷ ಬಯಲುಮುಕ್ತ ಶೌಚಾಲಯ ಜಿಲ್ಲೆ ಎಂದು ಘೋಷಿಸಲಾಗಿದೆ. ಆದರೆ ಅದು ಅಧಿಕಾರಿಗಳ ಘೋಷಣೆಯಲ್ಲಷ್ಟೇ ಬಯಲು ಮುಕ್ತ ಶೌಚಾಲಯ ಜಿಲ್ಲೆಯಾಗಿದೆ.

    ಹೌದು. ರಾಮನಗರ ತಾಲೂಕಿನ ಕೂಟಗಲ್ ಸಮೀಪದ ತಿಗಳರದೊಡ್ಡಿ ಗ್ರಾಮಸ್ಥರು ಇಲ್ಲಿಯ ತನಕ ಗ್ರಾಮದಲ್ಲಿ ಒಂದು ಶೌಚಾಲಯವನ್ನೂ ಕಂಡಿಲ್ಲ. ಅಲ್ಲದೆ ಗುಡಿಸಲು ಮುಕ್ತ ರಾಜ್ಯದ ಕಲ್ಪನೆಯಲ್ಲೂ ಸಹ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗದೆ ಗುಡಿಸಲುಗಳಲ್ಲೇ ಜನ ವಾಸವಾಗಿದ್ದಾರೆ. ಶೌಚಾಲಯಕ್ಕೆ ಬಯಲನ್ನೇ ಆಧಾರವಾಗಿಸಿಕೊಂಡಿದ್ದು ಪುರುಷರು ಹೇಗೋ ಕಾಲ ಕಳೆದರೆ. ಕತ್ತಲಾಗುವುದನ್ನು ಕಾಯ್ದುಕೊಂಡೇ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕು. ಹೀಗಾಗಿ ರಾಮನಗರ ಹೆಸರಿಗೆ ಮಾತ್ರ ಬಯಲುಮುಕ್ತ ಜಿಲ್ಲೆಯಾಗಿದೆ.

    ಅಲ್ಲದೆ ಶೌಚಕ್ಕೆ ಜಮೀನುಗಳಿಗೆ ಹೋದರೆ ಅದರ ಮಾಲೀಕರು ಬೈಯುತ್ತಾರೆ. ಕತ್ತಲಾದ ಮೇಲೆ ಹೋಗಬೇಕಾದರೆ ಕಾಡು ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೋ ಎನ್ನುವ ಆತಂಕದಲ್ಲಿಯೇ ಬಯಲಿಗೆ ಹೋಗಬೇಕು. ಯಾರೇ ಬಂದರೂ ಅಷ್ಟೇ, ಕೇವಲ ಭರವಸೆಗಳನ್ನ ನೀಡಿ ಹೋಗುತ್ತಾರೆ. ಆದರೆ ಯಾರೂ ಕೂಡ ನಮಗೆ ನೆರವಾಗುತ್ತಿಲ್ಲ, ಗ್ರಾಮದ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ತಿಗಳರದೊಡ್ಡಿ ಗ್ರಾಮವನ್ನು ಯಾವ ಆಧಾರದ ಮೇಲೆ ಬಯಲು ಮುಕ್ತ ಗ್ರಾಮವನ್ನಾಗಿ ಅಧಿಕಾರಿಗಳು ಘೋಷಿಸಿದ್ದಾರೋ ಗೊತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ, ಏವೂರ ದೊಡ್ಡ ತಾಂಡದ ಜನರಿಗೆ ಕುಡಿಯುವ ನೀರು ವಿಷವಾಗಿ ಪರಿಣಮಿಸಿದೆ. ಈ ಗ್ರಾಮದ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ.

    ಏವೂರ ಗ್ರಾಮದ ಕುಡಿಯುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಆರ್ಸೆನಿಕ್ ಪತ್ತೆಯಾಗಿದ್ದು, ಈ ಊರಿನ ಜನ ನಿತ್ಯ ಕುಡಿಯುವ ನೀರಿನ ಬದಲು ವಿಷ ಕುಡಿಯುತ್ತಿದ್ದಾರೆ. ಏವೂರ ತಾಂಡದ ನೀರು ಕುಡಿಯಲು ಯೋಗ್ಯವಲ್ಲ ಅಂತ ಸ್ವತಃ ಜಿಲ್ಲಾಡಳಿತ ಒಪ್ಪಿಕೊಂಡಿದೆ. ಆದರೆ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಜನರ ಜೀವನದ ಜೊತೆ ಆಟವಾಡುತ್ತಿದೆ.

    ಗ್ರಾಮದ ನೀರಿನಲ್ಲಿ ಕೇವಲ ಆರ್ಸೆನಿಕ್ ಮಾತ್ರವಲ್ಲದೆ, ಅತಿ ಹೆಚ್ಚು ಫ್ಲೋರೈಡ್, ಮತ್ತು ವಿವಿಧ ವಿಷಕಾರಿ ಅಂಶಗಳ ಮಿಶ್ರಣವಾಗಿದ್ದು, ನಿತ್ಯ ನೀರನ್ನು ಕುಡಿಯುವ ಊರಿನ ಜನರಲ್ಲಿ ಕ್ಯಾನ್ಸರ್ ಮಾತ್ರವಲ್ಲದೆ ಬುದ್ಧಿಮಾಂದ್ಯತೆ, ವಿಕಲಾಂಗ, ಮೂಳೆ ರೋಗ, ಚರ್ಮ ರೋಗಗಳು ತಾಂಡವಾಡುತ್ತಿದೆ. ಅಷ್ಟೇ ಅಲ್ಲದೆ ನೀರನ್ನು ಶುದ್ಧೀಕರಣ ಮಾಡಿದರೂ ಕೂಡ ವಿಷಕಾರಿ ಅಂಶ ಕಡಿಮೆ ಆಗುವುದಿಲ್ಲವಂತೆ. ಹೀಗಾಗಿ ಬೇರೆ ದಾರಿ ಇಲ್ಲದೆ ಏವೂರ ತಾಂಡದ ಜನ ಇದೇ ನೀರನ್ನು ಕುಡಿಯುತ್ತಿದ್ದಾರೆ.

    ಇದರಿಂದ ಅಕ್ಕ-ಪಕ್ಕದ ಊರಿನವರು ಈ ತಾಂಡವನ್ನು ರೋಗಸ್ತ ತಾಂಡ ಎಂದು ಕರೆಯುವಂತಾಗಿದೆ. ಇಷ್ಟೇ ಅಲ್ಲದೇ ಈ ಊರಿನ ಹೆಣ್ಣು ಮಕ್ಕಳನ್ನು ಮದುವೆ ಆಗಲು ಸಹ ಯಾರು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಊರಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    ಈ ಬಗ್ಗೆ 2018ರಲ್ಲಿ ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ ಮತ್ತು ತಾಂಡ ಅಭಿವೃದ್ಧಿ ನಿಗಮ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಏವೂರು ತಾಂಡದ ಜನ ನಿತ್ಯ ಕಣ್ಣಿನೀರಿನಲ್ಲಿ ಕೈತೊಳೆಯುವಂತಾಗಿದೆ.

  • ಮಳೆರಾಯನ ಆರ್ಭಟಕ್ಕೆ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ- ಜೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಗರಂ

    ಮಳೆರಾಯನ ಆರ್ಭಟಕ್ಕೆ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ- ಜೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಗರಂ

    ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

    ತಾಲೂಕಿನ ತಿರುಮಲನಗರ ಕ್ಯಾಂಪ್, ಧನಲಕ್ಷ್ಮಿ ಕ್ಯಾಂಪ್, ವಿಘ್ನೇಶ್ವರ ಕ್ಯಾಂಪ್, ಕಮ್ಮರಚೇಡು, ಶಂಕರಬಂಡೆ, ರೂಪನಗುಡಿ ಸೇರಿದಂತೆ ಹಲವೆಡೆ ಸರಿಸುಮಾರು 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ತಾಲೂಕಿನ ಈ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

    ವಿದ್ಯುತ್ ಸಂಪರ್ಕವಿಲ್ಲದೆ, ಜನರು ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಈವೆರೆಗೂ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯವನ್ನ ಪ್ರಾರಂಭಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವರುಣಾರ್ಭಟಕ್ಕೆ ಮರ ಮುರಿದು ಬಿದ್ದು ಮನೆಯಲ್ಲಿ ಮಲಗಿದ್ದ ಗೃಹಿಣಿ ಸಾವು

    ವರುಣಾರ್ಭಟಕ್ಕೆ ಮರ ಮುರಿದು ಬಿದ್ದು ಮನೆಯಲ್ಲಿ ಮಲಗಿದ್ದ ಗೃಹಿಣಿ ಸಾವು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತಡರಾತ್ರಿ ಅಬ್ಬರಿಸಿದ ವರುಣಾರ್ಭಟಕ್ಕೆ ಮರವೊಂದು ಮುರಿದು ಬಿದ್ದ ಪರಿಣಾಮ ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದಾರೆ.

    ರಿಯಾನತ್ (23) ಮೃತ ದುರ್ದೈವಿ. ವಿರಾಜ್‍ಪೇಟೆ ತಾಲೂಕಿನ ಪಾಲಿಬೆಟ್ಟದ ತಾರಿಕಟ್ಟೆ ಎಂಬಲ್ಲಿ ಮಧ್ಯರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಮನೆ ಬಳಿ ಇದ್ದ ಭಾರೀ ಗಾತ್ರದ ಮರವೊಂದು ಮನೆ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿ ಮಲಗಿದ್ದ ರಿಯಾನತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ರಿಯಾನತ್ ಪಕ್ಕದಲ್ಲೇ ಮಲಗಿದ್ದ ಎರಡು ವರ್ಷದ ಮಗು ನಸತ್ ಹಾಗೂ ತಾಯಿ ನೌಷದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಳಿಯಿದ್ದ ಮರವನ್ನು ತೆರವುಗೊಳಿಸುವಂತೆ ಹಲವು ತಿಂಗಳಿನಿಂದ ದೇವರಪುರ ಗ್ರಾಮ ಪಂಚಾಯ್ತಿಗೆ ಸಾಕಷ್ಟು ಬಾರಿ ದೂರು ನೀಡಲಾಗಿತ್ತು. ಆದರೆ ಮರ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

    ಕೊಡಗು ಜಿಲ್ಲೆಯ ಕೆಲವೆಡೆ ವರುಣನ ಅಬ್ಬರ ಜೋರಾಗಿತ್ತು. ಗುಡುಗು ಸಿಡಿಲಿನೊಂದಿಗೆ ವರುಣ ಅಬ್ಬರಿಸಿದ್ದಾನೆ. ದಿಢೀರ್ ಆಗಿ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರ ಪರದಾಡುವಂತಾಯಿತು. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ವರುಣನ ಅಬ್ಬರ ಜೋರಾಗಿತ್ತು.

  • ಮುದುಕರಂತೆ ಕಾಣುತ್ತಿದ್ದಾರೆ ವಯಸ್ಕರು, ಕಂದು ಬಣ್ಣಕ್ಕೆ ತಿರುಗುತ್ತಿದೆ ಮಕ್ಕಳ ಹಲ್ಲುಗಳು

    ಮುದುಕರಂತೆ ಕಾಣುತ್ತಿದ್ದಾರೆ ವಯಸ್ಕರು, ಕಂದು ಬಣ್ಣಕ್ಕೆ ತಿರುಗುತ್ತಿದೆ ಮಕ್ಕಳ ಹಲ್ಲುಗಳು

    – ನೀರಿದ್ದರೂ ಕುಡಿಯಲು ಕಾಡುತ್ತಿದೆ ಭಯ
    – ದುಡಿದ ದುಡ್ಡೆಲ್ಲಾ ಆಸ್ಪತ್ರೆ ಪಾಲಾದರೂ ಸಿಗದ ಆರೋಗ್ಯ
    – ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಜನರ ಪಾಲಿನ ವಿಲನ್‍ಗಳು

    ರಾಯಚೂರು: ಕೃಷ್ಣಾ ತುಂಗಭದ್ರಾ ಎರಡು ನದಿಗಳಿದ್ದರೂ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಿಸುತ್ತಿರುವ ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ, ಕೆಲವೆಡೆ ನೀರೇ ದೊಡ್ಡ ಸಮಸ್ಯೆಯಾಗಿದೆ. ಈ ನಡುವೆ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಜನ ನೀರು ಕುಡಿಯಲು ಹೆದರುತ್ತಿದ್ದಾರೆ.

    ಗ್ರಾಮದಲ್ಲಿ ಮಧ್ಯವಯಸ್ಕರು ಮುದುಕರಂತೆ ಕಾಣುತ್ತಾರೆ, ನಡು ವಯಸ್ಸಿನಲ್ಲಿಯೇ ಇವರಿಗೆ ಕೀಲು, ಮೊಣಕಾಲು ನೋವು ಕಾಣಿಸಿಕೊಳ್ಳುತ್ತದೆ. ಈ ಗ್ರಾಮದಲ್ಲಿನ ಮಕ್ಕಳ ಹಲ್ಲುಗಳಂತೂ ಆರು ವರ್ಷಕ್ಕೆ ಕಂದು ಬಣ್ಣಕ್ಕೆ ತಿರುಗುತ್ತವೆ. ಅಷ್ಟೇ ಅಲ್ಲದೇ ಇಡೀ ಗ್ರಾಮಸ್ಥರು ಒಂದಿಲ್ಲ ಒಂದು ನೋವಿನಿಂದ ನರಳುತ್ತಿದ್ದಾರೆ.

    ಸರಿಸುಮಾರು 400 ಜನ ಇರುವ ಗ್ರಾಮದಲ್ಲಿ ನೀರಿನಿಂದಾಗಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಕುಳಿತರೆ ನಿಲ್ಲಲು ಆಗುತ್ತಿಲ್ಲ. ನಿಂತರೆ ಕುಳಿತುಕೊಳ್ಳಲು ಆಗದ ಸ್ಥಿತಿ ಅನುಭವಿಸುತ್ತಿದ್ದಾರೆ. ಬಹುತೇಕರ ಮೊಣಕಾಲುಗಳು ಸೊಟ್ಟಗಾಗಿದೆ. ಕೆಲವರಿಗೆ ನಡೆದಾಡಲು ಸಹ ಬರುತ್ತಿಲ್ಲ. ಚಿಕ್ಕ ಮಕ್ಕಳ ಹಲ್ಲುಗಳ ಕಂದು ಬಣ್ಣಕ್ಕೆ ತಿರುಗಿವೆ. ಬೋರ್‍ವೆಲ್ ನೀರನ್ನೇ ನಂಬಿರುವ ಗ್ರಾಮಸ್ಥರಿಗೆ ಫ್ಲೋರೈಡ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಹೀಗಾಗಿ ಈ ನೀರನ್ನು ಕುಡಿದು ನಿತ್ಯ ನರಳುತ್ತಿದ್ದೇವೆ ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕಳೆದ ನಾಲ್ಕೈದು ವರ್ಷದಿಂದ ವಿಪರೀತವಾಗಿ ಕೀಲು ಬೇನೆಯಿಂದ ಗ್ರಾಮದ ಜನರು ನರಳಾಡುತ್ತಿದ್ದಾರೆ. ಸದಾ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ಖರ್ಚುಮಾಡುತ್ತಿದ್ದಾರೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಹೀಗಾಗಿ ಶುದ್ಧ ನೀರಿಗಾಗಿ ಪಕ್ಕದ ಮೂರು ಕಿ.ಮೀ ದೂರದ ಮಲ್ಲೇದೇವರಗುಡ್ಡ ಅಥವಾ ಜಾಗೀರ ಜಾಡಲದಿನ್ನಿಗೆ ಜನರು ಹೋಗಿ ನೀರು ತರುತ್ತಿದ್ದಾರೆ.

    ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಕೇಳಿದಾಗ, ಮಳೆಯಿಲ್ಲದೆ ಅಂತರ್ಜಲ ಕುಸಿದು ಸಮಸ್ಯೆ ಹೆಚ್ಚಾಗಿದೆ. ಆದ್ಯತೆ ಮೇರೆಗೆ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪಿಸುವುದಾಗಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹ್ಮದ್ ಯೂಸೂಫ್ ಭರವಸೆ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಒಂದೆಡೆ ನೀರಿಲ್ಲ ಇನ್ನೊಂದೆಡೆ ನೀರಿದ್ದರೂ ಕುಡಿಯಲು ಯೋಗ್ಯವಿಲ್ಲ. ಈ ಮಧ್ಯೆ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಹಳಷ್ಟು ಸ್ಥಗಿತಗೊಂಡಿವೆ. ಅಧಿಕ ಫ್ಲೋರೈಡ್ ಅಂಶವಿರುವ ನೀರು ಕುಡಿದು ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಜನರು ಮನವಿ ಮಾಡಿಕೊಂಡಿದ್ದಾರೆ.

  • ಕಲ್ಲಿನ ಕ್ವಾರಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮಹಿಳೆ ಸಾವು

    ಕಲ್ಲಿನ ಕ್ವಾರಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮಹಿಳೆ ಸಾವು

    ಬೆಂಗಳೂರು: ಗ್ರಾಮದಲ್ಲಿ ನೀರಿನ ಅಭಾವ ಉಂಟಾದ ಕಾರಣಕ್ಕೆ ಬಟ್ಟೆ ತೊಳೆಯಲು ಕಲ್ಲಿನ ಕ್ವಾರಿಗೆ ಹೋಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನೆಲಮಂಗಲ ಸಮೀಪದ ಕಂಬದಕಲ್ ಗ್ರಾಮದಲ್ಲಿ ನಡೆದಿದೆ.

    ಕಂಬದಕಲ್ ಗ್ರಾಮದ ನಿವಾಸಿ ಮಂಜುಳ (42) ಮೃತ ದುರ್ದೈವಿ. ಗ್ರಾಮದಲ್ಲಿ ನೀರಿನ ಬವಣೆ ಇದ್ದ ಕಾರಣಕ್ಕೆ ಕಲ್ಲಿನ ಕ್ವಾರಿಯೊಂದರಲ್ಲಿ ಬಟ್ಟೆ ತೊಳೆಯಲು ಮಹಿಳೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಕ್ವಾರಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆ ಸಾವಿಗೆ ಗ್ರಾಮ ಪಂಚಾಯ್ತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಬಿಟ್ಟಸಂದ್ರ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪೀಠೋಪಕರಣ ಧ್ವಂಸ ಮಾಡಿ, ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೂಕ್ತ ನೀರಿನ ಸರಬರಾಜು ಮಾಡದೆ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ತೋರಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ ಪಂಚಾಯ್ತಿಯ ವಾಟರ್ ಮ್ಯಾನ್ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

  • ಮಳೆರಾಯನ ಆರ್ಭಟಕ್ಕೆ ಮನೆ ಮೇಲೆ ಉರುಳಿದ ಬೃಹತ್ ಮರ!

    ಮಳೆರಾಯನ ಆರ್ಭಟಕ್ಕೆ ಮನೆ ಮೇಲೆ ಉರುಳಿದ ಬೃಹತ್ ಮರ!

    ಕೋಲಾರ: ಭಾನುವಾರ ರಾತ್ರಿ ವೇಳೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿಯ ಕೂಗಿಟಿಗಾನಹಳ್ಳಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆ ಸಂಪೂರ್ಣ ಕುಸಿದು ಬಿದ್ದಿದೆ.

    ಕೂಗಿಟಿಗಾನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶಪ್ಪ ಅವರ ಮನೆ ಹಾಗೂ ಅದರ ಪಕ್ಕವಿದ್ದ ಅಂಗಡಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಭಾನುವಾರ ರಾತ್ರಿ ಮಳೆರಾಯನ ಆರ್ಭಟಕ್ಕೆ ಮನೆ ಹಾಗೂ ಅಂಗಡಿ ಕಳೆದುಕೊಂಡು ವೆಂಕಟೇಶಪ್ಪ ಅವರ ಕುಟುಂಬ ಬೀದಿಯಲ್ಲಿ ನಿಲ್ಲುವಂತಾಗಿದೆ. ದುಡಿಮೆಗೆ ಆಧಾರವಾಗಿದ್ದ ಅಂಗಡಿ ಹಾಗೂ ತಲೆ ಮೇಲೆ ಸೂರಿಲ್ಲದೆ ಕುಟುಂಬ ಕಂಗಾಲಾಗಿದೆ.

    ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ ಕೂಡ ಸ್ಥಳಕ್ಕೆ ಇನ್ನೂ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

  • ನೀರು ಕುಡಿಯಲು ಹೋಗಿ ಟ್ಯಾಂಕಿನಲ್ಲಿ ಬಿದ್ದು 4 ಕೋತಿಗಳು ಸಾವು!

    ನೀರು ಕುಡಿಯಲು ಹೋಗಿ ಟ್ಯಾಂಕಿನಲ್ಲಿ ಬಿದ್ದು 4 ಕೋತಿಗಳು ಸಾವು!

    ರಾಯಚೂರು: ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಜೆ. ಮಲ್ಲಾಪುರದಲ್ಲಿ ನಡೆದಿದೆ.

    ಬೀಸಿಲಿನ ಝಳಕ್ಕೆ ಬಾಯಾರಿಕೆಯಾಗಿ ಜೆ ಮಲ್ಲಾಪುರ ಗ್ರಾಮದಲ್ಲಿ ಇದ್ದ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಇಳಿದಿವೆ. ನೀರು ಕುಡಿಯಲು ಒಟ್ಟು 10 ಕೋತಿಗಳು ಟ್ಯಾಂಕಿನಲ್ಲಿ ಇಳಿದಿದ್ದವು, ಆದರೆ ಅದರಲ್ಲಿ ನಾಲ್ಕು ಕೋತಿಗಳು ಸಾವನ್ನಪ್ಪಿವೆ. ಈ ವಿಷಯ ಊರಿನ ಜನಕ್ಕೆ ತಿಳಿದಿರಲಿಲ್ಲ. ಇದನ್ನೂ ಓದಿ: ನೀರು ಅರಸಿ ಖಾಲಿ ಟ್ಯಾಂಕ್‍ಗೆ ಇಳಿದ ವಾನರ ಸೇನೆ, ಮೇಲೆ ಬರಲಾರದೆ 15 ದಿನ ಆಹಾರವಿಲ್ಲದೇ ನರಳಾಡಿ ಪ್ರಾಣಬಿಟ್ಟ ಮಂಗಗಳು-ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ

    ಗ್ರಾಮಸ್ಥರು ಕುಡಿಯಲು ಈ ಟ್ಯಾಂಕಿನ ನೀರನ್ನೇ ಉಪಯೋಗಿಸುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಈ ನೀರು ಬಳಸಿದ ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಆದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ನೀರಿನ ಟ್ಯಾಂಕಿನಲ್ಲಿ ಇಣುಕಿದಾಗ ಸತ್ಯಾಂಶ ತಿಳಿದಿದೆ.

    ಟ್ಯಾಂಕಿನಲ್ಲಿ ಕೆಲವು ಕೋತಿಗಳು ಸಾವನ್ನಪ್ಪಿದ್ದವು, ಇನ್ನೂ ಕೆಲವು ಟ್ಯಾಂಕಿನಿಂದ ಮೇಲೆ ಬರಲಾಗದೆ ಒದ್ದಾಡುತ್ತಿದ್ದವು. ಇದನ್ನು ಕಂಡ ಗ್ರಾಮಸ್ಥರು ತಾವೇ ಖುದ್ದಾಗಿ ಟ್ಯಾಂಕಿನಲ್ಲಿ ಇಳಿದು ಬದುಕುಳಿದಿದ್ದ ಕೋತಿಗಳನ್ನು ರಕ್ಷಿಸಿದ್ದಾರೆ. ಹಾಗೆಯೇ ಸಾವನ್ನಪ್ಪಿದ್ದ ಕೋತಿಗಳ ಮೃತದೇಹಗಳನ್ನು ಹೊರ ತೆಗೆದು ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾರೆ.

  • ಮಾತುಬಾರದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸ್ದ- ಗರ್ಭಿಣಿಯೆಂದು ತಿಳಿದ ತಕ್ಷಣ ಪರಾರಿ

    ಮಾತುಬಾರದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸ್ದ- ಗರ್ಭಿಣಿಯೆಂದು ತಿಳಿದ ತಕ್ಷಣ ಪರಾರಿ

    – ಯುವತಿಯ ಕುಟುಂಬಕ್ಕೆ ಬಹಿಷ್ಕಾರ

    ದಾವಣಗೆರೆ: ಮಾತುಬಾರದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಯುವಕನಿಗೆ ಶಿಕ್ಷೆ ನೀಡಿ ಮದುವೆ ಮಾಡಿಸುವ ಬದಲು ಯುವತಿಯ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ಅದೇ ಗ್ರಾಮದ ಯುವಕ ಜಮ್ಮಣ್ಣ ಎಂಬವನು ಮೂಗ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿ ಗರ್ಭಿಣಿ ಮಾಡಿದ್ದಾನೆ. ಯಾವಾಗ ಯುವತಿ ಗರ್ಭಿಣಿ ಎಂದು ತಿಳಿಯಿತೋ ಜಮ್ಮಣ್ಣ ತಲೆಮರೆಸಿಕೊಂಡಿದ್ದಾನೆ.

    ನ್ಯಾಯಕ್ಕಾಗಿ ಯುವತಿಯ ಕುಟುಂಬ ಗ್ರಾಮದ ಮುಖಂಡರ ಮೊರೆ ಹೋದರೆ, ನ್ಯಾಯ ಕೊಡಿಸದೇ ಅವರ ಇಡೀ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ದನದ ಕೊಟ್ಟಿಗೆಯಲ್ಲಿ ಯುವತಿ ಜೀವನ ಮಾಡುತ್ತಿದ್ದು, ತನಗೆ ಮೋಸ ಮಾಡಿದ ಜಮ್ಮಣ್ಣನಿಗಾಗಿ ಕಾಯುತ್ತಾ ಕುಳಿತಿದ್ದಾಳೆ.

    ನಾಲ್ಕು ತಿಂಗಳ ಗರ್ಭಿಣಿಯಾದ ಯುವತಿ ಮಳೆ ಗಾಳಿಯಲ್ಲೇ ಮಲಗಬೇಕಾದ ಹೀನಾಯ ಪರಿಸ್ಥಿತಿ ಇದೆ. ವಿಷಯ ತಿಳಿದ ಸ್ವಾಮಿ ವಿವೇಕಾನಂದ ಅಂಗವಿಕಲರ ಸಂಘದವರು ಗ್ರಾಮಕ್ಕೆ ಆಗಮಿಸಿದ ಯುವತಿಯ ಪರಿಸ್ಥಿತಿ ನೋಡಿ ಪೊಲೀಸ್ ಠಾಣೆಗೆ ದೂರು ನೀಡಿದರು.

    ದೂರು ನೀಡಿದ್ರೂ ಯಾವುದೇ ತನಿಖೆ ನಡೆಸದೆ ರಾಜಕೀಯ ಒತ್ತಡಕ್ಕೆ ಮಣಿದು ಯುವತಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಜಗಳೂರು ಠಾಣಾ ಪೊಲೀಸರು ದೂರು ನೀಡಿದಾಗ ಬಂದು ಮಹಜರು ಮಾಡಿಕೊಂಡು ಹೋಗಿದ್ದೇ ವಿನಃ ಯುವಕನನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಕೂಡಲೇ ಅನ್ಯಾಯವಾದ ಯುವತಿಗೆ ನ್ಯಾಯ ಒದಗಿಸಬೇಕು ಇಲ್ಲವಾದರೆ ಪೊಲೀಸ್ ಠಾಣೆ ಹಾಗೂ ಯುವಕನ ಮನೆ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘದವರು ತಿಳಿಸಿದ್ದಾರೆ.

    ಗರ್ಭಿಣಿಯ ಪಾಡು ಹೀನಾಯವಾಗಿದ್ದು, ತಮಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿ ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

  • ಏಕಾಏಕಿ ನೆಲಕ್ಕೆ ಬಿದ್ದು ಒದ್ದಾಡಿ ಜಾನುವಾರುಗಳು ಸಾವು!

    ಏಕಾಏಕಿ ನೆಲಕ್ಕೆ ಬಿದ್ದು ಒದ್ದಾಡಿ ಜಾನುವಾರುಗಳು ಸಾವು!

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ.

    ಕಳೆದ ಎರಡು ದಿನಗಳಲ್ಲಿ ಮಲ್ಲನಗೌಡ ಎಂಬವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಗ್ರಾಮದ ಕೋಣ ಸಾವನ್ನಪ್ಪಿವೆ. ಈ ತಿಂಗಳಲ್ಲಿ ಒಟ್ಟು ಏಳು ಜಾನುವಾರುಗಳು ಮೃತಪಟ್ಟಿದೆ. ಏಕಾಏಕಿ ಬಿದ್ದು ಒದ್ದಾಡಿ ಜಾನುವಾರುಗಳು ಸಾವನ್ನಪ್ಪುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಮೊದಲೇ ಬರದಿಂದ ಕಂಗಾಲಾಗಿರುವ ರೈತರು ಎತ್ತುಗಳು ಸಾವನ್ನಪ್ಪುತ್ತಿರುವುದರಿಂದ ಚಿಂತೆಗೀಡಾಗಿದ್ದಾರೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದರೂ ವೈದ್ಯರಾಗಲಿ, ಅಧಿಕಾರಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡದ ಹಿನ್ನಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.