Tag: villagers

  • ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಮಾಜಿ ಕಾರ್ಪೋರೇಟರ್ ಸೇರಿ ಗ್ರಾಮಸ್ಥರು ವಿಷ ಸೇವನೆಗೆ ಯತ್ನ

    ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಮಾಜಿ ಕಾರ್ಪೋರೇಟರ್ ಸೇರಿ ಗ್ರಾಮಸ್ಥರು ವಿಷ ಸೇವನೆಗೆ ಯತ್ನ

    ಶಿವಮೊಗ್ಗ: ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ರೆಡ್ಡಿ ಜೊತೆ ಸ್ಥಳೀಯ ಗ್ರಾಮಸ್ಥರು ಸೇರಿ ವಿಷಯ ಕುಡಿಯಲು ಮುಂದಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಪಾಲಿಕೆ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿರುವ ಪುರಲೆ ಬಡಾವಣೆಯಲ್ಲಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಗುಜರಾತ್ ಮೂಲದ ಸಂಸ್ಥೆ ಮುಂದಾಗಿದೆ. ಇದೂವರೆಗೂ ಈ ಕಾಮಗಾರಿ ಆರಂಭಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಆದರೆ ಇಂದು ನೂರಾರು ಪೊಲೀಸರ ಬಿಗಿ ಭದ್ರತೆಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಇದನ್ನು ತಪ್ಪಿಸಲು ಬೆಳಗ್ಗೆಯಿಂದಲೇ ಕಾಮಗಾರಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಮೋಹನ್ ರೆಡ್ಡಿ ಮತ್ತು ಸ್ಥಳೀಯ ಗ್ರಾಮಸ್ಥರು ಸೇರಿ ವಿಷ ಕುಡಿಯಲು ನಡೆಸಿದ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

    ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಈ ಘಟಕವನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಸ್ಥಳೀಯರು ಆಗ್ರಹಿಸಿ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ, ಈ ಕಾಮಗಾರಿ ಸರ್ಕಾರ ಮಟ್ಟದಲ್ಲಿ ನಿರ್ಣಯ ಆಗಿದ್ದು, ಇದನ್ನು ತಡೆಯಲು ನನಗೆ ಅಧಿಕಾರ ಇಲ್ಲ ಎಂದು ಹೇಳಿದರು.

    ಈ ಸಂಬಂಧ ಅಧಿಕಾರಿಗಳು ಮತ್ತು ಪ್ರತಿಭಟನ ನಿರತರ ನಡುವೇ ಮಾತುಕತೆ ನಡೆದು ನಂತರ ಪ್ರತಿಭಟನಾಕಾರರು ಕಾನೂನು ಹೋರಾಟ ಕೈಗೊಳ್ಳಲು ನಿರ್ಧರಿಸಿ, ಪ್ರತಿಭಟನೆ ಹಿಂಪಡೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗಾಯಗೊಂಡಿದ್ದ ನವಿಲನ್ನು ರಕ್ಷಿಸಿದ ಗ್ರಾಮಸ್ಥರು

    ಗಾಯಗೊಂಡಿದ್ದ ನವಿಲನ್ನು ರಕ್ಷಿಸಿದ ಗ್ರಾಮಸ್ಥರು

    ಬೆಂಗಳೂರು: ಗಾಯಗೊಂಡಿದ್ದ ನವಿಲಿಗೆ ಆರೈಕೆ ಮಾಡುವ ಮೂಲಕ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.

    ಕಾಡಿನಿಂದ ನಾಡಿಗೆ ಬಂದಿದ್ದ ಗಂಡು ನವಿಲಿನ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಹಾರಲು ಸಾಧ್ಯವಾಗದೇ ಬಿಲ್ಲಿನಕೋಟೆಯ ಅಂಗಡಿಯೊಂದರ ಮುಂದೆ ಬಿದ್ದಿತ್ತು. ಅದನ್ನು ನೋಡಿದ ಸ್ಥಳೀಯರು ಎತ್ತಿಕೊಂಡು ನೀರು ಕುಡಿಸಿ ಆರೈಕೆ ಮಾಡಿದ್ದಾರೆ.

    ಆರೈಕೆಗೂ ಮುನ್ನ ಜನರನ್ನು ಕಂಡ ನವಿಲು ಭಯಗೊಂಡಿತ್ತು. ಇದನ್ನು ಗಮನಿಸಿದ ಕೆಲವರು ನವಿಲನ್ನು ಎತ್ತಿಕೊಂಡು ನಿಲ್ಲಿಸುವ ಪ್ರಯತ್ನಿಸಿದರು. ಎಲ್ಲ ರೀತಿಯ ಉಪಚಾರ ಮಾಡಿದ ಸಾರ್ವಜನಿಕರು ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ನವಿಲನ್ನು ಒಪ್ಪಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಿರುಗಾಳಿ ಸಹಿತ ಮಳೆ- ನೆಲಕ್ಕುರುಳಿದ ಸರ್ಕಾರಿ ಶಾಲೆ ಗೋಡೆಗಳು

    ಬಿರುಗಾಳಿ ಸಹಿತ ಮಳೆ- ನೆಲಕ್ಕುರುಳಿದ ಸರ್ಕಾರಿ ಶಾಲೆ ಗೋಡೆಗಳು

    ಬೆಳಗಾವಿ: ಕಳೆದ ಒಂದು ವಾರದಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯ ಎರಡು ಕಟ್ಟಡದ ಗೋಡೆಗಳು ನೆಲಕ್ಕುರಳಿವೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಗೋಡೆಗಳು ಕುಸಿದು ಬಿದ್ದಿವೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಸಂದರ್ಭದಲ್ಲಿ ಈ ಗೋಡೆಗಳು ಕುಸಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

    ಶಿಥಿಲಾವಸ್ಥೆಯಲ್ಲಿ ಈ ಶಾಲೆ ಇದ್ದರೂ ದುರಸ್ಥಿ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡದೆ ಇರುವುದು ಗೋಡೆ ಕುಸಿತಕ್ಕೆ ಕಾರಣವಾಗಿದೆ. ಇನ್ನೂ ಶಾಲೆಯ ಎರಡು ಕೊಠಡಿಗಳ ಗೋಡೆ ಕುಸಿತಗೊಂಡಿರುವ ಕಾರಣ ಮಕ್ಕಳು ಈ ಶಾಲೆಯಲ್ಲಿ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಕೊಠಡಿಗಳು ಇಲ್ಲದ ಕಾರಣ ಇರುವ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಕಲಿಸಲಾಗುತ್ತಿದೆ.

    ಶಿಥಿಲಾವಸ್ಥೆಯಲ್ಲಿರುವ ಶಾಲೆಯನ್ನು ಅದಷ್ಟು ಬೇಗ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.

  • ಮಳೆಗಾಗಿ ದೇವರಿಗೇ ಜಲ ದಿಗ್ಬಂಧನ ಹಾಕಿದ ಗ್ರಾಮಸ್ಥರು

    ಮಳೆಗಾಗಿ ದೇವರಿಗೇ ಜಲ ದಿಗ್ಬಂಧನ ಹಾಕಿದ ಗ್ರಾಮಸ್ಥರು

    ಬೆಳಗಾವಿ: ಮಳೆಗಾಗಿ ಜನರು ದೇವರ ಮೊರೆ ಹೋಗೋದು ಸಾಮಾನ್ಯ. ಆದರೆ ಗ್ರಾಮದಲ್ಲಿ ಮಳೆ ಬಾರದ ಹಿನ್ನೆಲೆ ದೇವರಿಗೆ ಗ್ರಾಮಸ್ಥರು ಜಲ ದಿಗ್ಬಂಧನ ಹಾಕಿರುವ ಅಪರೂಪದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.

    ಗ್ರಾಮದಲ್ಲಿ ಮಳೆಯಾಗಲಿ ಎಂದು ದೇವರ ಗರ್ಭ ಗುಡಿಯಲ್ಲಿ ನೀರು ತುಂಬಿಸಿ ದ್ವಾರ ಮುಚ್ಚಿ ಗ್ರಾಮಸ್ಥರು ದೇವರಿಗೆ ದಿಗ್ಬಂಧನ ಹಾಕಿದ್ದಾರೆ. ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿರುವ ಸೂರ್ಯನಾರಾಯಣ ದೇವರಿಗೆ ಗ್ರಾಮಸ್ಥರು ದಿಗ್ಭಂಧನ ಹಾಕಿದ್ದಾರೆ. ತೀವ್ರ ಬರಗಾಲದಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಲ್ಲದೆ ಬೆಳೆ ಬೆಳೆಯಲು, ಕುಡಿಯಲು ನೀರಿಲ್ಲದೆ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆಯಿಂದ ಗ್ರಾಮಸ್ಥರು ದೇವರ ಗರ್ಭ ಗುಡಿಯಲ್ಲಿ ನೀರು ತುಂಬಿಸಿದ್ದಾರೆ.

    ದೇವಸ್ಥಾನದ ಗರ್ಭಗುಡಿಗೆ ನೀರು ತುಂಬಿ ಮಳೆಗಾಗಿ ದೇವರಿಗೆ ಗ್ರಾಮಸ್ಥರು ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ದೇಗುಲದಲ್ಲಿ ನೀರು ತುಂಬಿಸಿದ ಬಳಿಕ ಭಕ್ತರು ಹೊರಗಿನಿಂದಲೇ ದೇವರಿಗೆ ಪೂಜೆ, ಪುನಸ್ಕಾರ ಸಲ್ಲಿಸುತ್ತಿದ್ದಾರೆ. ಈ ರೀತಿ ಜಲ ದಿಗ್ಬಂಧನ ಹಾಕಿ ವಿಶೇಷವಾಗಿ ದೇವರಿಗೆ ಮಳೆಗಾಗಿ ಪ್ರರ್ಥನೆ ಸಲ್ಲಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

  • ಬಿಎಸ್‍ಎನ್‍ಎಲ್ ಸೇವೆಗೋಸ್ಕರ ಭಿಕ್ಷೆ ಬೇಡಿದ ಗ್ರಾಮಸ್ಥರು

    ಬಿಎಸ್‍ಎನ್‍ಎಲ್ ಸೇವೆಗೋಸ್ಕರ ಭಿಕ್ಷೆ ಬೇಡಿದ ಗ್ರಾಮಸ್ಥರು

    ಮಡಿಕೇರಿ: ಭಾರೀ ಭೂ ಕುಸಿತ ಮತ್ತು ಪ್ರವಾಹದಿಂದ ತತ್ತರಿಸಿದ್ದ ಕೊಡಗಿನ ಮಂದಿ ಇದೀಗ ಮತ್ತೊಂದು ಸಮಸ್ಯೆಯಿಂದ ಹೈರಾಣಾಗಿ ಹೋಗಿದ್ದಾರೆ. ಬಹುತೇಕ ಮಡಿಕೇರಿ ಜಿಲ್ಲೆಯ ಜನತೆ ಮೊಬೈಲ್ ನೆಟ್‍ವರ್ಕ್‍ಗಾಗಿ ಬಿಎಸ್‍ಎನ್‍ಎಲ್ ಸೇವೆಯನ್ನೇ ನಂಬಿಕೊಂಡಿದ್ದಾರೆ.

    ಕಳೆದ ಕೆಲ ದಿನಗಳಿಂದ ಇಲ್ಲಿ ಬಿಎಸ್‍ಎನ್‍ಎಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಏನಾದರೂ ತೊಂದರೆ ಆದರೆ ತಕ್ಷಣ ಸಹಾಯಕ್ಕಾಗಿ ಯಾರನ್ನು ಸಂಪರ್ಕ ಮಾಡಲು ಆಗುತ್ತಿಲ್ಲ ಎಂದು ಕೊಡಗಿನ ಜನತೆ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಬಿಎಸ್‍ಎನ್‍ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕರೆಂಟ್ ಹೋದಾಗ ಬಿಎಸ್‍ಎನ್‍ಎಲ್ ಸೇವೆ ಸ್ಥಗಿತಗೊಳ್ಳುತ್ತಿದೆ. ಜನರೇಟರ್‍ ಗೆ ಡೀಸೆಲ್ ಹಾಕಲು ಬಿಎಸ್‍ಎನ್‍ಎಲ್ ಅಧಿಕಾರಿಗಳು ಹಣ ನೀಡುತ್ತಿಲ್ಲ. ಹಾಗಾಗಿ ಕಳೆದ ಕೆಲವು ದಿನಗಳಿಂದ ಹಲವು ಗ್ರಾಮಗಳಲ್ಲಿ ಬಿಎಸ್‍ಎನ್‍ಎಲ್ ಮತ್ತು ಏರ್‍ ಟೆಲ್ ಸೇರಿದಂತೆ ಯಾವುದೇ ಮೊಬೈಲ್ ಸೇವೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಎಲ್ಲರೂ ಸೇರಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಅದರಿಂದ 35 ಲೀಟರ್ ಡೀಸೆಲ್ ಖರೀದಿಸಿ ಮೊಬೈಲ್ ಕಂಪನಿಗೆ ನೀಡಿದ್ದಾರೆ.

    ಜೋರಾಗಿ ಮಳೆ ಬಂದು ಏನಾದರೂ ಹೆಚ್ಚು ಕಡಿಮೆ ಆದರೆ ಕರೆ ಮಾಡಿ ವಿಷಯ ತಿಳಿಸೋಣ ಎಂದರೆ ಬಿಎಸ್‍ಎನ್‍ಎಲ್ ಕೆಲಸವೇ ಮಾಡುತ್ತಿಲ್ಲ. ಹಾಗಾಗಿ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಜನರು ಬಿಎಸ್‍ಎನ್‍ಎಲ್‍ಗಾಗಿ ಗ್ರಾಮಸ್ಥರು ಮನೆ ಮನೆ ತೆರಳಿ ಭಿಕ್ಷೆ ಬೇಡಿದ್ದಾರೆ. ನಂತರ ಬಂದ ಹಣದಲ್ಲಿ ಡೀಸೆಲ್ ಖರೀದಿಸಿ ಮೊಬೈಲ್ ಕಂಪನಿಗೆ ನೀಡಿದ್ದಾರೆ.

    ಭಿಕ್ಷೆ ಬೇಡಿದ ಹಣದಿಂದ ಡೀಸೆಲ್ ಖರೀದಿಸಿ ಕಂಪನಿಗೆ ನೀಡಿ ಈ ಮೂಲಕ ಅಲ್ಲಿನ ಅಧಿಕಾರಿಗಳಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

  • ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲ

    ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲ

    -ಲಾಟೀನು ಬೆಳಕೇ ಕತ್ತಲೆ ಕಳೆಯುವ ಸೂರ್ಯ
    -ಲಾಟೀನುಗೆ ಸಿಗದ ಸೀಮೆಎಣ್ಣೆ

    ಬಲರಾಂಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದಿದೆ. ಜಾಗತಿಕ ಮಟ್ಟದಲ್ಲಿ ತನ್ನದೇಯಾದ ವಿಶೇಷ ಸ್ಥಾನಗಳಿಸಿದೆ, ಆದರೆ ಛತ್ತೀಸ್‍ಗಡ ರಾಜ್ಯದ ಬಲರಾಂಪುರ ಜಿಲ್ಲೆಯ ತ್ರಿಶೂಲಿ ಗ್ರಾಮದ ಜನತೆ ಮಾತ್ರ ಕತ್ತಲೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ.

    ಸುಮಾರು 100 ಮನೆಗಳಿರುವ ಬಲರಾಂಪುರ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಇಲ್ಲಿನ ಜನ ಬೆಳಕು ಕಂಡಿಲ್ಲ. ಇಲ್ಲಿ ವಿದ್ಯುತ್ ಕಂಬಗಳು ಇದ್ದರೂ ಸಹ ಏಳು ದಶಕಗಳಿಂದ ಇಲ್ಲಿನ ಜನರಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಈಗಾಗಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜನರು ಕತ್ತಲೆಯಲ್ಲಿಯೇ ಜೀವನ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ನಾನು ಹುಟ್ಟಿದಾಗಿನಿಂದಲೂ ಈ ಗ್ರಾಮದಲ್ಲಿ ವಿದ್ಯುತ್ ಕಂಡಿಲ್ಲ. ಎಲೆಕ್ಷನ್ ಸಂದರ್ಭದಲ್ಲಿ ಮಾತ್ರ ನಾಯಕರು ಬರುತ್ತಾರೆ. ಆದರೆ, ಸಜ್ಜನರಂತೆ ಅಭಿವೃದ್ಧಿ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ. ಬಳಿಕ ಗ್ರಾಮದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು 70 ವರ್ಷದ ವೃದ್ಧರೊಬ್ಬರು ತಿಳಿಸಿದ್ದಾರೆ. ಹಾಗೆಯೇ ರಾತ್ರಿ ಹೊತ್ತು ಕರೆಂಟ್ ಇಲ್ಲದ ಕಾರಣ ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಯಾವಾಗ ಏನು ಬಂದು ಕಚ್ಚುತ್ತದೋ ಎಂಬ ಭಯ ಕಾಡುತ್ತದೆ ಎಂದು ಸ್ಥಳೀಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಅಲ್ಲದೆ ಈ ಗ್ರಾಮದ ಮಕ್ಕಳ ಭವಿಷ್ಯ ಕೂಡ ಕತ್ತಲಲ್ಲೇ ಮಳುಗುವ ಸ್ಥಿತಿಗೆ ಬಂದಿದೆ. ವಿದ್ಯುತ್ ಇಲ್ಲದೆ ಲಾಟೀನು ಬೆಳಕಿನಲ್ಲಿ ಮಕ್ಕಳು ದಶಕಗಳಿಂದಲೂ ಓದುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಲಾಟೀನು ಬೆಳಕೇ ಇಲ್ಲಿ ಕತ್ತಲೆ ಕಳೆಯುವ ಸೂರ್ಯನಾಗಿದ್ದರೂ, ಅದಕ್ಕೂ ಸಹ ಸೂಕ್ತ ಸೀಮೆಎಣ್ಣೆ ಸರಬರಾಜು ಆಗುತ್ತಿಲ್ಲ. ಬೆಳಕಿಗೊಸ್ಕರ ಸೌದೆಗಳನ್ನು ಉರಿಸಿ ಆ ಬೆಂಕಿಯ ಬೆಳಕಿನಲ್ಲಿ ಕೆಲಸ ಮಾಡುತ್ತೇವೆ ಎಂದು ಗ್ರಾಮಸ್ಥ ರಾಮೇಶ್ವರ್ ಪಾಲ್ ಹೇಳಿದ್ದಾರೆ.

    ಹಾಗೆಯೇ ಈ ಗ್ರಾಮದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲಿನ ಸರ್ಕಾರ ಮಾಡಿಲ್ಲ. ಕಲುಷಿತವಾಗಿರೋ ಕೆರೆಯ ನೀರನ್ನೇ ಇಲ್ಲಿನ ಜಾನುವಾರುಗಳು, ಜನರು ಬಳಸುತ್ತಿದ್ದಾರೆ. ದೇಶ ಇಷ್ಟೊಂದು ಮುಂದುವರೆದಿದ್ದರು ಇಂದಿಗೂ ಇಂತಹ ಮೂಲ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಗಳು ಇವೆ ಎಂದರೆ ಬೇಸರವಾಗುತ್ತೆ. ಆದರೆ ಇತ್ತ ಗಮನ ಕೊಡಬೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಂಡರು ಕಾಣದಂತೆ ಕಣ್ಮುಚ್ಚಿಕೊಂಡು ಹಾಯಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

  • ರಾಷ್ಟ್ರಗೀತೆ ಹಾಡಿ ಗ್ರಾಮಸ್ಥರಿಂದ ನವಿಲಿನ ಅಂತ್ಯಸಂಸ್ಕಾರ

    ರಾಷ್ಟ್ರಗೀತೆ ಹಾಡಿ ಗ್ರಾಮಸ್ಥರಿಂದ ನವಿಲಿನ ಅಂತ್ಯಸಂಸ್ಕಾರ

    ಧಾರವಾಡ: ಅನಾರೋಗ್ಯ ಪೀಡಿತ ರಾಷ್ಟ್ರ ಪಕ್ಷಿ ನವಿಲು ಮೃತಪಟ್ಟ ಹಿನ್ನೆಲೆ ಧಾರವಾಡದ ಗ್ರಾಮವೊಂದರಲ್ಲಿ ಅದಕ್ಕೆ ಸಕಲ ಗೌರವ ನೀಡಿ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

    ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ನೀರಿನ ಟ್ಯಾಂಕ್‍ನ ಮೇಲೆ ಅಸ್ವಸ್ಥಗೊಂಡಿದ್ದ ನವಿಲೊಂದು ಪತ್ತೆಯಾಗಿತ್ತು. ಇದನ್ನು ನೋಡಿದ ಗ್ರಾಮಸ್ಥರು ಅದಕ್ಕೆ ಆರೈಕೆ ಮಾಡಿ ನೀರು ಕುಡಿಸಿ, ಆಹಾರ ಕೊಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಪಂದಿಸದ ನವಿಲು ಕೆಲ ಸಮಯದ ನಂತರ ಅಸುನೀಗಿದೆ.

    ನವಿಲು ರಾಷ್ಟ್ರ ಪಕ್ಷಿಯಾದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಅದಕ್ಕೆ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ, ಅದರಂತೆ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರೆಲ್ಲರು ಸೇರಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಈ ವೇಳೆ ರಾಷ್ಟ್ರಗೀತೆಯನ್ನು ಹೇಳಿ ನವಿಲಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.

  • ವಿಧವೆಯನ್ನು ಮದುವೆಯಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಾಕಿ ಥಳಿತ

    ವಿಧವೆಯನ್ನು ಮದುವೆಯಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಾಕಿ ಥಳಿತ

    ಶಿವಮೊಗ್ಗ: ವಿಧವೆಯನ್ನು ಮದುವೆ ಆಗಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಥಳಿಸಿದ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಸಾಗರ ತಾಲೂಕಿನ ಸುಭಾಷ್ ನಗರ ನಿವಾಸಿ ರಮೇಶ್‍ಗೆ ಮುತ್ತಲಬೈಲು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿದ್ದಾರೆ. ರಮೇಶ್ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸಾಗರದ ಗಾರ್ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತಲಬೈಲು ಗ್ರಾಮದ ನಿವಾಸಿ ಶೀಲಾಳನ್ನು ಇತ್ತೀಚಿಗೆ ರಮೇಶ್ ಪ್ರೀತಿಸಿ ಮದುವೆಯಾಗಿದ್ದರು.

    ರಮೇಶ್ ಮೊದಲ ಬಾರಿಗೆ ಪತ್ನಿ ಊರಿಗೆ ಹೋಗಾದ ಗ್ರಾಮಸ್ಥರು ಅವರನ್ನ ಕಂಬಕ್ಕೆ ಕಟ್ಟಾಕಿ, ಗೂಸ ಕೊಟ್ಟಿದ್ದಾರೆ. ಶೀಲಾ ಅವರಿಗೆ ಈ ಮೊದಲೇ ಮದುವೆ ಆಗಿ ಇಬ್ಬರು ಮಕ್ಕಳಿದ್ದು, ಅವರ ಮೊದಲ ಗಂಡ ಮೃತಪಟ್ಟಿದ್ದರು. ಮದುವೆಯಾದ ನಂತರ ಮಕ್ಕಳನ್ನು ನೋಡಲು ಶೀಲಾ ಹಳೆಯ ಪತಿ ಊರಿಗೆ ಬಂದಿದ್ದಾರೆ. ದಂಪತಿ ನೋಡಿದ ಗ್ರಾಮಸ್ಥರು ಇಬ್ಬರನ್ನು ಥಳಿಸಿದ್ದಾರೆ.

    ಮಕ್ಕಳಿದ್ದ ವಿಷಯವನ್ನು ತಿಳಿಸದೇ ರಮೇಶ್ ಅವರನ್ನು ಶೀಲಾ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿ ಹಲ್ಲೆ ನಡೆಸಿದ್ದಾರೆ.

    ರಮೇಶನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿ, ಅದನ್ನ ವಿಡಿಯೋ ಮಾಡಿ, ಅವರಿಂದ ಒತ್ತಾಯವಾಗಿ ಗ್ರಾಮಸ್ಥರು ಹೇಳಿಕೆ ಪಡೆದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಹಾಗೆಯೇ ಗ್ರಾಮಸ್ಥರಿಂದ ಹಲ್ಲೆ ನಡೆದ ಬಳಿಕ ನವ ದಂಪತಿ ನಾಪತ್ತೆ ಆಗಿದ್ದಾರೆ ಎಂದು ರಮೇಶ್ ಸ್ನೇಹಿತರು ತಿಳಿಸಿದ್ದಾರೆ.

  • ಕೆಲಸ ಮಾಡಲು ಆಗದಿದ್ರೆ ಡಿ.ಸಿ ತಮ್ಮಣ್ಣ ರಾಜೀನಾಮೆ ಕೊಡ್ಲಿ: ಸುಮಲತಾ

    ಕೆಲಸ ಮಾಡಲು ಆಗದಿದ್ರೆ ಡಿ.ಸಿ ತಮ್ಮಣ್ಣ ರಾಜೀನಾಮೆ ಕೊಡ್ಲಿ: ಸುಮಲತಾ

    ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ ವಿಚಾರವಾಗಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯಿಸಿ, ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಜಾರಾಗಿದ್ರೆ ರಾಜೀನಾಮೆ ಕೊಡಿ ಎಂದರು. ಬಳಿಕ ಜೆಡಿಎಸ್ ಸೋಲಿಗೆ ಡಿ.ಸಿ ತಮ್ಮಣ್ಣ ಅವರ ಹೇಳಿಯೇ ಕಾರಣ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

    ಅಷ್ಟೇ ಅಲ್ಲದೆ ತಮ್ಮಣ್ಣ ಅವರು ಹೇಳಿಕೆ ನಿಖಿಲ್ ಹೇಳಿಕೆಗೆ ವಿರುದ್ಧವಾಗಿದೆ. ಅವರ ಪಾರ್ಟಿಯಲ್ಲಿ ಇರೋರು ಅವರಿಗೆ ತಿಳಿಸಿ ಹೇಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

    ಡಿ.ಸಿ ತಮ್ಮಣ್ಣ ಹೇಳಿದ್ದೇನು?
    ಮದ್ದೂರು ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಡಿ.ಸಿ ತಮ್ಮಣ್ಣ ಅವರ ಬಳಿ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಮದ್ದೂರು ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದರು.

    ಈ ಹಿಂದೆ ಡಿ.ಸಿ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಮೆಡಿಸಿನ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಬ್ಲಾಸ್ಟ್- ವಿಷಾನಿಲ ಸೋರಿಕೆಯಿಂದ ಗ್ರಾಮಸ್ಥರು ಪರದಾಟ

    ಮೆಡಿಸಿನ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಬ್ಲಾಸ್ಟ್- ವಿಷಾನಿಲ ಸೋರಿಕೆಯಿಂದ ಗ್ರಾಮಸ್ಥರು ಪರದಾಟ

    ತುಮಕೂರು: ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್‍ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಗ್ರಾಮದ ನಾಲ್ವರು ಗಾಯಗೊಂಡಿದ್ದಾರೆ.

    ಬಾಯ್ಲರ್ ನಿಂದ ವಿಷಾನಿಲ ಸೋರಿಕೆಯಾಗಿ ಸುತ್ತಮುತ್ತಲ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಹಾಗೆಯೇ ಘಟನೆಯಿಂದ ಸುಮಾರು ಮೂರು ಕಿಮೀ ದೂರದಷ್ಟು ಸ್ಫೋಟದ ತೀವ್ರತೆಗೆ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಆಗಮಿಸಿದ್ದಾರೆ.

    ಅವಘಡ ಸಂಭವಿಸುವ ವೇಳೆ ಫ್ಯಾಕ್ಟರಿಯಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಬೆಳಗ್ಗಿನ ಸಮಯವಾಗಿದ್ದರಿಂದ ತಿಂಡಿಗೆ ಸಿಬ್ಬಂದಿ ತೆರಳಿದ್ದರು. ಹೀಗಾಗಿ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅಲ್ಲದೆ ಈ ಹಿಂದೆ ಕೂಡ ಈ ರೀತಿ ಬಾಯ್ಲರ್ ಸ್ಫೋಟಗೊಂಡಿತ್ತು. ಆಗ ಕೂಡ ವಿಷಾನಿಲ ಸೋರಿಕೆಯಾಗಿ ಗ್ರಾಮಸ್ಥರು ಉಸಿರಾಡಲು ಕಷ್ಟಪಟ್ಟಿದ್ದರು. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ಈ ಭಾಗದ ಸುತ್ತಮುತ್ತ ವಾಸಿಸುತ್ತಿರುವ ಜನರು ತೊಂದರೆ ಅನುಭವಿಸುವಂತಗಿದೆ. ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸದ್ಯ ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೇಗೆ ಸ್ಫೋಟ ಸಂಭವಿಸಿತು ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.