Tag: villagers

  • ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

    ಮಕ್ಕಳ ಕಳ್ಳರೆಂದು ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು

    ಭೋಪಾಲ್: ಮೂವರು ಕಾಂಗ್ರೆಸ್ ನಾಯಕರನ್ನು ಮಕ್ಕಳ ಅಪಹರಣಕಾರರು ಎಂದು ತಪ್ಪಾಗಿ ತಿಳಿದು ಗ್ರಾಮಸ್ಥರು ಅವರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ನವಲ್ಸಿಂಹ್ ಗ್ರಾಮದಲ್ಲಿ ಮಕ್ಕಳನ್ನು ಅಪಹರಿಸುವ ಕಳ್ಳರ ಗ್ಯಾಂಗ್ ಓಡಾಡುತ್ತಿದೆ ಎಂಬ ವದಂತಿಗಳ ಮೇರೆಗೆ ಊರಿನ ಗ್ರಾಮಸ್ಥರು ರಸ್ತೆ ಮಧ್ಯ ಮರಗಳನ್ನು ಹಾಕಿ ಮಾರ್ಗ ಬಂದ್ ಮಾಡಿ ಕಾಯುತ್ತಾ ಕುಳಿತಿದ್ದಾರೆ.

    ಈ ಸಮಯದಲ್ಲಿ ಅದೇ ಮಾರ್ಗದಲ್ಲಿ ಮೂವರು ಸ್ಥಳೀಯ ಕಾಂಗ್ರೆಸ್ ನಾಯಕರಾದ ಧರ್ಮೇಂದ್ರ ಶುಕ್ಲಾ, ಧರ್ಮ ಸಿಂಗ್ ಲಂಜಿವಾರ್ ಮತ್ತು ಲಲಿತ್ ಬರಾಸ್ಕರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿಯಲ್ಲಿ ಮರಗಳು ಬಿದ್ದಿರುವುದನ್ನು ನೋಡಿದ್ದಾರೆ. ಈ ಕೆಲಸವನ್ನು ಯಾರೋ ಹೆದ್ದಾರಿ ದರೋಡೆಕೋರರು ಮಾಡಿ ದರೋಡೆ ಮಾಡಲು ಕಾಯುತ್ತಿದ್ದಾರೆಂದು ಭಾವಿಸಿದ ನಾಯಕರು ಕಾರನ್ನು ವೇಗವಾಗಿ ಹಿಂದಿರುಗಿಸಲು ನೋಡಿದ್ದಾರೆ.

    ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಬೆನ್ನಟ್ಟಿ ಹಿಡಿದು ಅವರನ್ನು ಸುತ್ತುವರೆದು ವಾಹನವನ್ನು ಜಖಂ ಮಾಡಿ. ಅವರನ್ನು ಹೊರಗೆ ಎಳೆದುಕೊಂಡು ಮೂವರನ್ನು ಥಳಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮ್ ಸ್ನೇಹಿ ಮಿಶ್ರಾ, ಗ್ರಾಮಸ್ಥರು ಮಕ್ಕಳ ಅಪಹರಣಕಾರರೆಂದು ಶಂಕಿಸಿ, ನಾಯಕರ ವಾಹನವನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಾಹನಕ್ಕೆ ಹಾನಿಯಾಗಿದೆ ಮತ್ತು ಮೂವರು ಕಾಂಗ್ರೆಸ್ ಮುಖಂಡರ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೆತುಲ್ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

    ಕಳೆದ ಕೆಲ ವಾರಗಳಿಂದ ಮಕ್ಕಳ ಕಳ್ಳರೆಂದ ಭಾವಿಸಿ ಶಂಕಿತ ವ್ಯಕ್ತಿಗಳನ್ನು ಗ್ರಾಮಸ್ಥರು ಥಳಿಸಿರುವ ಸುಮಾರು 12 ಪ್ರಕರಣಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಕಾಂಗ್ರೆಸ್ ಮುಖಂಡರನ್ನು ಥಳಿಸಿದ ಇದೇ ಜಿಲ್ಲೆಯ ಬೆತುಲ್‍ನಿಂದ ಮೂರು ಪ್ರಕರಣಗಳು ವರದಿಯಾಗಿವೆ. ಇದನ್ನು ಬಿಟ್ಟರೆ ಇಂದೋರ್, ಭೋಪಾಲ್, ಹೋಶಂಗಾಬಾದ್, ಸೆಹೋರ್, ನೀಮುಚ್, ರೈಸನ್ ಮತ್ತು ದೇವಾಸ್‍ನಿಂದ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

  • 9 ಜನರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು

    9 ಜನರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು

    ಲಕ್ನೋ: 9 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಹೆಣ್ಣು ಹುಲಿಯನ್ನು ಗ್ರಾಮಸ್ಥರು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶ ಫಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

    ಹತ್ಯೆಯಾದ ಹೆಣ್ಣು ಹುಲಿ ಸುಮಾರು 5ರಿಂದ 6 ವರ್ಷದ್ದಾಗಿದೆ. ಈ ಹುಲಿ ಫಿಲಿಭಿತ್ ಜಿಲ್ಲೆಯ ಮಟೈನಾ ಗ್ರಾಮದಲ್ಲಿ ಕಳೆದ ಬುಧವಾರ 9 ಜನರ ಮೇಲೆ ದಾಳಿ ಮಾಡಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ಗುರುವಾರವೂ 19 ವರ್ಷ ಶ್ಯಾಮ ಮೊಹನ್ ಮೇಲೆ ದಾಳಿ ಮಾಡಿತ್ತು.

    ಹುಲಿಯ ನಿರಂತರ ದಾಳಿಯಿಂದ ಬೇಸತ್ತ ಗ್ರಾಮಸ್ಥರು ಅದನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಗುರುವಾರ ಅರಣ್ಯ ಪ್ರದೇಶವನ್ನು ಸುತ್ತುವರಿದ ಗ್ರಾಮಸ್ಥರು ಹುಲಿಗಾಗಿ ಹುಡುಕಾಟ ನಡೆಸಿದ್ದರು. ದುರಾದೃಷ್ಟವಶಾತ್ ಹುಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಹುಲಿ ಪ್ರಾಣ ಬಿಟ್ಟಿತ್ತು.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ರಾಜಮೋಹನ್ ಅವರು, ಗ್ರಾಮಸ್ಥರು ಈಟಿಗಳಿಂದ ತಿವಿದಿದ್ದರಿಂದ ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಜೊತೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಪಕ್ಕೆಲುಬು ಮುರಿದಿದ್ದವು. ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಹುಲಿ ಸಾವನ್ನಪ್ಪಿತ್ತು. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  • ಕೂಡಲೇ ಬಾರ್ ಆರಂಭಿಸಿ – ಪಂಚಾಯತ್ ಮುಂದೆ ಎಣ್ಣೆ ಪ್ರಿಯರ ಪ್ರತಿಭಟನೆ

    ಕೂಡಲೇ ಬಾರ್ ಆರಂಭಿಸಿ – ಪಂಚಾಯತ್ ಮುಂದೆ ಎಣ್ಣೆ ಪ್ರಿಯರ ಪ್ರತಿಭಟನೆ

    ಬಳ್ಳಾರಿ: ಮದ್ಯದಂಗಡಿ ಮುಚ್ಚಬೇಕು ಎಂದು ಗ್ರಾಮಸ್ಥರು ಪ್ರತಿಭಟಿಸಿರುವ ಸುದ್ದಿ ನೀವು ಓದಿರಬಹುದು. ಆದರೆ ಬಾರ್ ಬೇಕೇ ಬೇಕು ಎಂದು ಎಣ್ಣೆ ಪ್ರಿಯರು ಪಂಚಾಯತ್ ಮುಂದೆ ಪ್ರತಿಭಟಿಸಿ ಆಗ್ರಹಿಸಿದ್ದಾರೆ.

    ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಗ್ರಾಮಸ್ಥರು ಬಾರ್ ಓಪನ್ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ.

    ಗ್ರಾಮದಲ್ಲಿ ಹಿಂದೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಗ್ರಾಮಕ್ಕೆ ಒಂದು ಎಂಎಸ್‍ಐಎಲ್ ವೈನ್ ಶಾಪ್ ಮಂಜೂರಾಗಿ, ಪ್ರಾರಂಭಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತಿತ್ತು. ಈ ಸಂದರ್ಭದಲ್ಲಿ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು.

    ವಿರೋಧ ಜೋರಾದ ಕಾರಣ ವೈನ್ ಶಾಪ್ ಆರಂಭವಾಗುವುದು ತಡವಾಗಿತ್ತು. ಹೀಗಾಗಿ ಇಂದು ಗ್ರಾಮದ ಎಣ್ಣೆ ಪ್ರೀಯರು ಬಾರ್ ಕೂಡಲೇ ಓಪನ್ ಮಾಡಲೇಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟಿಸಿದ್ದಾರೆ.

  • ಕರಾವಳಿಯಲ್ಲಿ ಧಾರಾಕಾರ ಮಳೆ – ಇತ್ತ ಬೀದರ್‌ನಲ್ಲಿ ವರುಣನಿಗಾಗಿ ಪ್ರಾರ್ಥನೆ

    ಕರಾವಳಿಯಲ್ಲಿ ಧಾರಾಕಾರ ಮಳೆ – ಇತ್ತ ಬೀದರ್‌ನಲ್ಲಿ ವರುಣನಿಗಾಗಿ ಪ್ರಾರ್ಥನೆ

    ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ದಾಖಲಾಗಿದ್ದು, ನಾಲ್ಕನೇ ದಿನವು ನಿರಂತರ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಮೋಡ ಮುಂದುವರಿದಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ.

    ಮಂಗಳೂರು, ಕಾಸರಗೋಡು ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಮಳೆ ಕಡಿಮೆಯಾಗಿದೆ. ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆ ನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿದೆ. ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದ ಜನ ಹೈರಾಣಾಗಿದ್ದಾರೆ. ಯಾವಾಗಲೂ ಆಷಾಢ ಮಳೆ ಸಾಮಾನ್ಯವಾಗಿ ಸುರಿಯುತಿತ್ತು. ಆದರೆ ಈ ಬಾರಿ ಮಳೆಯೇ ಆಗದೆ ಜನ ಬಸವಳಿದಿದ್ದರು. ಇದೀಗ ಒಂದೇ ಸಮನೆ ಮಳೆಯಾಗಿದೆ.

    ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು, ಜುಲೈ 22ರಿಂದ 25ರ ವರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತೆ ವಹಿಸಿಕೊಂಡಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲಿ ನಿರಂತರ ತುಂತುರು ಮಳೆಯಾಗುತ್ತಿದೆ.

    ಇತ್ತ ಚಿಕ್ಕಮಗಳೂರಿನಲ್ಲಿ ಮಳೆ ಜೋರಾಗಿಯೂ ಸುರಿಯುತ್ತಿಲ್ಲ. ಅತ್ತ ಬಿಡುವು ಕೊಡ್ತಿಲ್ಲ. ಇದರಿಂದ ಮಲೆನಾಡಿಗರು ಮನೆಯಿಂದ ಹೊರಬರಲು ಆಗ್ತಿಲ್ಲ. ಮುಂಜಾನೆಯಿಂದಲೇ ಆರಂಭವಾದ ಮಳೆ ನಿಧಾನವಾಗಿ ಎಡೆಬಿಡದೆ ಸುರಿಯುತ್ತಿದ್ದು, ಜನ ಹೈರಾಣಾಗಿದ್ದಾರೆ.

    ಚಿಕ್ಕಮಗಳೂರು ನಗರವೂ ಸೇರಿದಂತೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಎನ್.ಆರ್ ಪುರದಲ್ಲಿ ಮಳೆರಾಯ ಆಟಕ್ಕೆ ಜನ ಬೆಸ್ತುಬಿದ್ದಿದ್ದಾರೆ. ಕುದುರೆಮುಖ, ಕೆರೆಕಟ್ಟೆ ಹಾಗೂ ಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದಲೂ ಮಳೆ ಸುರಿಯುತ್ತಿದ್ದು ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ಬೀದರ್ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಹಿಂಗಾರು ಮಳೆಯಾದರು ಕೃಪೆ ತೋರಲಿ ಎಂದು ಇಂದು ಬೆಳಗ್ಗೆಯಿಂದ ಗ್ರಾಮ ದೇವತೆಯಾದ ಭವಾನಿ ಮಾತಾ ದೇವಸ್ಥಾನದಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಭಜನೆ, ಹಾಡು, ನೃತ್ಯ ಮಾಡುತ್ತಾ ಮಳೆಗಾಗಿ ಪ್ರಾಥನೆ ಸಲ್ಲಿಸಿದ್ದಾರೆ. ಬರೋಬ್ಬರಿ ಒಂದು ತಿಂಗಳಿನಿಂದ ಅಹೋರಾತ್ರಿ ಭಜನೆ, ಹಾಡು ಹಾಡುತ್ತಾ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದು ಗ್ರಾಮಸ್ಥರು ಒಂದು ಕಡೆ ಸೇರಿ ನೃತ್ಯ ಮಾಡುವ ಮೂಲಕ ಸ್ಥಳೀಯರ ಗಮನ ಸೆಳೆಯಿತು.

  • ಏಕಾಏಕಿ ಗ್ರಾಮದಲ್ಲಿದ್ದ ಮನೆಗಳು ನೆಲಸಮ- ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಏಕಾಏಕಿ ಗ್ರಾಮದಲ್ಲಿದ್ದ ಮನೆಗಳು ನೆಲಸಮ- ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

    – ಶಾಸಕರು ಮಾತ್ರ ರೆಸಾರ್ಟ್ ವಾಸ

    ಧಾರವಾಡ: ಧಾರವಾಡದ ಹೊರವಲಯದ ದಡ್ಡಿ ಕಮಲಾಪೂರದಲ್ಲಿದ್ದ ಬಡವರ ಮನೆಗಳನ್ನು ಅಧಿಕಾರಿಗಳು ಜೆಸಿಬಿಯಿಂದ ನೆಲಸಮ ಮಾಡಿಸಿರುವ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದೆ.

    ಈ ದಡ್ಡಿಕಮಲಾಪೂರ ಗ್ರಾಮದಲ್ಲಿ ಗವಳಿ ಜನರು ಕಳೆದ 50 ವರ್ಷಗಳಿಂದ ವಾಸವಾಗಿದ್ದಾರೆ. ಇದೇ ಗ್ರಾಮದ ಪಕ್ಕ ಸರ್ಕಾರಿ ಜಮೀನು ಕೂಡ ಇತ್ತು. ಮಂಡಿಹಾಳ ಗ್ರಾಮ ಪಂಚಾಯತಿಗೆ ಬರುವ ಈ ಗ್ರಾಮಕ್ಕೆ ಆಶ್ರಯ ಯೋಜನೆ ಅಡಿಯಲ್ಲಿ ಸರ್ಕಾರಿ ಜಮೀನು ನೀಡಬೇಕೆಂದು ಠರಾವ್ ಮಾಡಿದ್ದರು. ಅದೇ ರೀತಿ ಜನರು 15 ಕ್ಕೂ ಹೆಚ್ಚು ಮನಗೆಳನ್ನು ಕಟ್ಟಿಕೊಂಡಿದ್ದರು.

    ಧಾರವಾಡ ತಾಲೂಕಿಗೆ ಸಂಬಂಧಿಸಿದ ಅಧಿಕಾರಿಗಳು ಏಕಾಎಕಿ ಬಂದು ಮನೆಗಳನ್ನು ಕೆಡವಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಮಗೆ ಮುಂಚಿತವಾಗಿ ನೋಟಿಸ್ ಕೂಡ ನೀಡದೇ ಮನೆಗಳನ್ನು ಕೆಡವಿರುವುದು ಯಾವ ರೀತಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದೇ ಮನೆಗಳ ಹಿಂದೆ ಮಹಿಷಿ ಟ್ರಸ್ಟ್ ಜಾಗ ಇದ್ದು, ಅವರ ಬೆಂಬಲಕ್ಕೆ ನಿಲ್ಲಲು ಈ ರೀತಿ ಮನೆಗಳನ್ನು ಕೆಡವಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಈ ವಿಚಾರವನ್ನು ಶಾಸಕರಿಗೆ ತಿಳಿಸಿ, ಅನ್ಯಾಯವನ್ನು ಹೇಳಿಕೊಳ್ಳಬೇಕೆಂದರೆ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ ರೆಸಾರ್ಟ್‍ನಲ್ಲಿ ಕುಳಿತಿದ್ದಾರೆ. ನಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳುವುದು, ಮನೆಗಳಿಲ್ಲದೆ ಹೇಗೆ ಬದುಕುವುದು ಎಂದು ಗ್ರಾಮಸ್ಥರು ಅಸಹಾಯಕತೆ ತೋಡಿಕೊಂಡಿದ್ದಾರೆ.

  • ಪ್ರಾಣ ಪಣಕ್ಕಿಟ್ಟು ನದಿ ದಾಟುತ್ತಾರೆ ವೃದ್ಧರು, ಮಹಿಳೆಯರು: ವಿಡಿಯೋ

    ಪ್ರಾಣ ಪಣಕ್ಕಿಟ್ಟು ನದಿ ದಾಟುತ್ತಾರೆ ವೃದ್ಧರು, ಮಹಿಳೆಯರು: ವಿಡಿಯೋ

    ಭೋಪಾಲ್: ಬಿದಿರಿನಿಂದ ನಿರ್ಮಾಣ ಮಾಡಿದ ಸೇತುವೆ ಮೇಲೆ ಸಾಗುವುದಕ್ಕೆ ಕೆಲವರು ಭಯಪಡುತ್ತಾರೆ. ಆದರೆ ಮಧ್ಯಪ್ರದೇಶದಲ್ಲಿ ಪ್ರಾಣ ಪಣಕ್ಕಿಟ್ಟು ಕೇವಲ ಎರಡು ಹಗ್ಗದ ಸಹಾಯದಿಂದ ಮಹಿಳೆಯರು, ವೃದ್ಧರು ನದಿ ದಾಟುತ್ತಾರೆ.

    ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಸೋನ್ಕಾಚ್ ತಹಸಿಲ್ ಅರಣ್ಯ ಪ್ರದೇಶದಲ್ಲಿ ಹರಿಯುವ ನದಿಗೆ ಸೇತುವೆ ಇಲ್ಲ. ಹೀಗಾಗಿ ಅಲ್ಲಿನ ಗ್ರಾಮಸ್ಥರು ನದಿಗೆ ಅಡ್ಡಲಾಗಿ ಕಟ್ಟಿರುವ ಎರಡು ಹಗ್ಗಗಳ ಸಹಾಯದಿಂದ ನದಿ ದಾಟುತ್ತಿದ್ದಾರೆ. ಗೃಹೋಪಯೋಗಿ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ತರಲು ಗ್ರಾಮಸ್ಥರು ನದಿಯನ್ನು ದಾಟಿಯೇ ಬರಬೇಕು.

    ಮಹಿಳೆಯರು ಒಂದು ಕೈಯಲ್ಲಿ ಚೀಲ ಹಿಡಿದುಕೊಂಡು, ಮತ್ತೊಂದು ಕೈಯಿಂದ ಹಗ್ಗ ಹಿಡಿದುಕೊಂಡು ನದಿ ದಾಟಿ ಪಟ್ಟಣಕ್ಕೆ ಹೋಗಿ ಮನೆಗೆ ಅಗತ್ಯವಿರುವ ಪದಾರ್ಥ, ವಸ್ತುಗಳನ್ನು ಖರೀದಿ ಮಾಡುತ್ತಾರೆ. ಕೆಲವರು ತಮ್ಮ ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಿದ್ದರೆ ಅವರನ್ನು ಬೆನ್ನಿಗೆ ಕಟ್ಟಿಕೊಂಡು ನದಿ ದಾಟಬೇಕಾದ ಪರಿಸ್ಥಿತಿ ಇದೆ.

    ಗ್ರಾಮಸ್ಥರು ಎದುರಿಸುವ ಸಮಸ್ಯೆ ಎದುರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ಥಳೀಯ ಆಡಳಿತ ಹಾಗೂ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಂಡ್ಯದಲ್ಲಿ ಕುಡಿಯುವ ನೀರಿಗೆ ಸದ್ದು ಮಾಡ್ತಿದೆ ಸೇಡಿನ ರಾಜಕೀಯ

    ಮಂಡ್ಯದಲ್ಲಿ ಕುಡಿಯುವ ನೀರಿಗೆ ಸದ್ದು ಮಾಡ್ತಿದೆ ಸೇಡಿನ ರಾಜಕೀಯ

    ಮಂಡ್ಯ: ಲೋಕಸಭಾ ಚುನಾವಣೆಯ ಬಳಿಕ ಮಂಡ್ಯದಲ್ಲಿ ಸೇಡಿನ ರಾಜಕೀಯದ ಸದ್ದು ಜೋರಾಗಿದ್ದು, ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಪ್ರಾರಂಭವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಹೌದು, ಮಂಡ್ಯ ತಾಲೂಕಿನ ಬೇವುಕಲ್ಲುಕೊಪ್ಪಲು ಗ್ರಾಮದಲ್ಲಿ ಸುಮಲತಾಗೆ ಹೆಚ್ಚು ಲೀಡ್ ಬಂದಿದೆ ಎಂಬ ಕಾರಣಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಚುನಾವಣೆಗೂ ಮುನ್ನ ಗ್ರಾಮಕ್ಕೆ ಪ್ರತಿ ನಿತ್ಯ ನೀರು ಪೂರೈಸಲಾಗುತ್ತಿತ್ತು. ಚುನಾವಣಾ ಫಲಿತಾಂಶದ ಬಳಿಕ ವಾರಕ್ಕೊಮ್ಮೆ ನೀರು ಕೊಡುತ್ತಿದ್ದಾರೆ. ಮಧ್ಯರಾತ್ರಿ ನೀರು ಬಿಡುತ್ತಾರೆ. ಕಾದು ನೀರು ಹಿಡಿಯಬೇಕು. ಒಂದು ಮನೆಗೆ ಕೇವಲ ಐದು ಬಿಂದಿಗೆ ಮಾತ್ರ ನೀರು ಸಿಗುತ್ತಿದೆ. ಇದು ಕುಡಿಯುವುದಕ್ಕೂ ಸಾಲದು. ಇನ್ನು ಜಾನುವಾರುಗಳಿಗೆ ಖಾಸಗಿ ಬೋರ್ ವೆಲ್ ಗಳಿಂದ ಹಿಡಿದು ತರಬೇಕಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

    ಬೇವುಕಲ್ಲುಕೊಪ್ಪಲು ಗ್ರಾಮ ಬೇವುಕಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿದ್ದು, ಆಯ್ಕೆಯಾಗಿರುವ ಬಹುತೇಕ ಸದಸ್ಯರು ಜೆಡಿಎಸ್ ಬೆಂಬಲಿತರಾಗಿದ್ದಾರೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ವಾರಕ್ಕೊಮ್ಮೆ ನೀರು ಬಿಡುವಂತೆ ಸದಸ್ಯರೆಲ್ಲ ತೀರ್ಮಾನ ಮಾಡಿದ್ದಾರೆ. ಬೇವುಕಲ್ಲು ಗ್ರಾಮದಿಂದ ಬೋರ್ ವೆಲ್‍ಗಳಿಂದ ಪಕ್ಕದ ಬೇವು ಕಲ್ಲು, ಬಂಕನಹಳ್ಳಿ ಎರಡು ಊರುಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ನಮ್ಮೂರಿನಿಂದ ಬೇರೆ ಊರಿಗೆ ನೀರು ಕೊಡುತ್ತಿದ್ರೂ, ನಮಗೆ ಸಮರ್ಪಕವಾಗಿ ನೀರು ಕೊಡದೆ ದ್ವೇಷದ ರಾಜಕೀಯಕ್ಕೆ ಗ್ರಾಮ ಪಂಚಾಯ್ತಿಯವರು ಮುಂದಾಗಿದ್ದಾರೆ. ಸದಸ್ಯರು ಸೇಡಿನ ರಾಜಕೀಯ ಬಿಟ್ಟು ಸಮರ್ಪಕ ನೀರು ಕೊಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

    2006ರಲ್ಲಿ ಇದೇ ಬೇವುಕಲ್ಲುಕೊಪ್ಪಲು ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ ಸಿಎಂ ಪುತ್ರನಿಗೆ ವೋಟು ಹಾಕಿಲ್ಲದ ಕಾರಣಕ್ಕೆ ಈಗ ಗ್ರಾಮಸ್ಥರು ನೀರಿನ ಅಭಾವ ಅನುಭವಿಸಬೇಕಿರುವುದು ವಿಪರ್ಯಾಸ ಎನ್ನಬಹುದು. ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಒ, ಅಧ್ಯಕ್ಷೆಯನ್ನು ಪ್ರಶ್ನೆ ಮಾಡಿದ್ರೆ ಮೊದಲು ನೀರಿನ ಸಮಸ್ಯೆ ಇರಲಿಲ್ಲ. ಈಗ ಸಮಸ್ಯೆಯಾಗಿದೆ. ಹಾಗಾಗಿ 3-4 ದಿನಕ್ಕೆ ನೀರು ಪೂರೈಸಲಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಾರೆ.

  • ಕೆಸರಲ್ಲಿ ಸಿಲುಕಿ ಆನೆ ಪರದಾಟ – ಒಂದೆಜ್ಜೆ ಎತ್ತಿಡಲಾಗದೇ ನರಳಾಟ

    ಕೆಸರಲ್ಲಿ ಸಿಲುಕಿ ಆನೆ ಪರದಾಟ – ಒಂದೆಜ್ಜೆ ಎತ್ತಿಡಲಾಗದೇ ನರಳಾಟ

    ಮಂಡ್ಯ: ಕಾಡಿನಿಂದ ನಾಡಿಗೆ ಬಂದ ಆನೆಗಳು ಕೆರೆಯ ಕೆಸರಲ್ಲಿ ಸಿಲುಕಿ ಮೇಲೆ ಬರಲು ಹರಸಾಹಸಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುಮಾರು ನಾಲ್ಕು ಆನೆಗಳ ಹಿಂಡು ಶುಕ್ರವಾರದಿಂದ ಮಳವಳ್ಳಿ ತಾಲೂಕಿನ ಹಲವೆಡೆ ಓಡಾಡುತ್ತಿದ್ದು ಇಂದು ದೋರನಹಳ್ಳಿ ಗ್ರಾಮದ ಕೆರೆಯಲ್ಲಿ ಬೀಡು ಬಿಟ್ಟಿದ್ದವು. ಕೆರೆ ನೀರಿಲ್ಲದೆ ಒಣಗಿದ್ದು ಅಲ್ಲಲ್ಲಿ ಕೆಸರು ಮಯವಾಗಿತ್ತು. ಈ ವೇಳೆ ಆನೆ ಕೆರೆಯ ಕೆಸರಲ್ಲಿ ಸಿಲುಕಿ ಮೇಲೆ ಬರಲು ಹರಸಾಹಸ ಪಡುತ್ತಿತ್ತು.

    ಆನೆಯನ್ನು ನೋಡಲು ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ ಕೆಸರಿನಿಂದ ಹೊರಬಂದ ಆನೆ ತನ್ನ ಗುಂಪು ಸೇರಿಕೊಂಡಿದ್ದನ್ನು ನೋಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಆನೆಗಳು ತಾವು ಹೋದಲೆಲ್ಲ ಬೆಳೆ ನಾಶ ಮಾಡುತ್ತಿದ್ದು ರೈತರು ಆತಂಕ ಪಡುತ್ತಿದ್ದಾರೆ.

    ಸದ್ಯ ಸ್ಥಳಕ್ಕೆ ಕಿರುಗಾವಲು ಪೊಲೀಸರು ಆಗಮಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

  • ತೋಟಕ್ಕೆ ನುಗ್ಗಿದ್ದ 7 ಅಡಿ ಉದ್ದದ ಮೊಸಳೆ ಸೆರೆಹಿಡಿದು ಮರಕ್ಕೆ ಕಟ್ಟಿದ ಗ್ರಾಮಸ್ಥರು

    ತೋಟಕ್ಕೆ ನುಗ್ಗಿದ್ದ 7 ಅಡಿ ಉದ್ದದ ಮೊಸಳೆ ಸೆರೆಹಿಡಿದು ಮರಕ್ಕೆ ಕಟ್ಟಿದ ಗ್ರಾಮಸ್ಥರು

    ಬೆಳಗಾವಿ(ಚಿಕ್ಕೋಡಿ): ಆಹಾರ ಅರಸಿ ನದಿ ತೀರದ ತೋಟದ ವಸತಿಗೆ ನುಗ್ಗಿದ ಸುಮಾರು 7 ಅಡಿ ಉದ್ದದ ಮೊಸಳೆಯೊಂದನ್ನು ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಗ್ರಾಮಸ್ಥರು ಸೆರೆಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ.

    ಆಹಾರ ಅರಸಿ ಕೆಲ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ಗ್ರಾಮಸ್ಥರಿಗೆ ಇತ್ತು. ಆದರೆ ಯಾರ ಕಣ್ಣಿಗೂ ಮೊಸಳೆ ಕಾಣಿಸಿಕೊಂಡಿರಲಿಲ್ಲ. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಸ್ಥಳೀಯರಿಗೆ ಮೊಸಳೆ ಗೋಚರಿಸಿದೆ. ಈ ವೇಳೆ ಮೊಸಳೆಯನ್ನು ಸೆರೆ ಹಿಡಿಯಲು ನಿರ್ಧರಿಸಿದರು. ನಂತರ ಹರಸಾಹಸ ಪಟ್ಟು ಮೊಸಳೆಯನ್ನು ಸೆರೆಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

    ಅರಣ್ಯ ಇಲಾಖೆಯ ಸಹಾಯವಿಲ್ಲದೆ ಗ್ರಾಮಸ್ಥರೇ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಮೊಸಳೆ ಬೇರೆಲ್ಲೂ ಹೋಗದಂತೆ ಅದಕ್ಕೆ ಹಗ್ಗ ಹಾಕಿ ಮರಕ್ಕೆ ಕಟ್ಟಿಹಾಕಿದ್ದಾರೆ. ಈ ಮೊಸಳೆಯನ್ನು ನೋಡಿದ ಮಕ್ಕಳು ಹಾಗೂ ಜನರು ಅದರ ಫೋಟೋ ಕ್ಲಿಕ್ಕಿಸಿದ್ದಾರೆ.

  • ಇದ್ದಕ್ಕಿದ್ದಂತೆ ದಿಢೀರ್ ಬಿರುಕು, ಕುಸಿಯುವ ಭೀತಿಯಲ್ಲಿ ಮನೆಗಳು – ಆತಂಕದಲ್ಲಿ ಗ್ರಾಮಸ್ಥರು

    ಇದ್ದಕ್ಕಿದ್ದಂತೆ ದಿಢೀರ್ ಬಿರುಕು, ಕುಸಿಯುವ ಭೀತಿಯಲ್ಲಿ ಮನೆಗಳು – ಆತಂಕದಲ್ಲಿ ಗ್ರಾಮಸ್ಥರು

    ಬಾಗಲಕೋಟೆ: ಇದ್ದಕ್ಕಿದ್ದಂತೆ ಮನೆಗಳಲ್ಲಿ ದಿಢೀರ್ ಬಿರುಕು ಕಾಣಿಸಿಕೊಳ್ಳುತ್ತಿರುವ ಘಟನೆ ಬಾಗಲಕೋಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಮನೆಗಳಲ್ಲಿ ದಿಢೀರ್ ಬಿರುಕು ಬಿಟ್ಟಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಕೇವಲ ಮೂರೇ ದಿನಗಳಲ್ಲಿ ಮನೆ ಗೋಡೆಗಳಲ್ಲಿ ವಿಪರೀತ ಬಿರುಕು ಕಾಣಿಸಿಕೊಂಡು ಮನೆಗಳು ಕುಸಿಯುವ ಭೀತಿಯಲ್ಲಿ ಇವೆ.

    ಗ್ರಾಮದ ಬಸವ್ವ ಮಸಳಿ, ಬುಡ್ಡೇಸಾಬ ಮಕಾಶಿ, ಸೋಮಪ್ಪ ಮಸಳಿ ಎಂಬವರ ಮನೆ ಗೋಡೆಗಳು ದಿಢೀರ್ ಆಗಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ನಮ್ಮ ಮನೆಗಳು ಹೀಗಾದರೆ ಹೇಗೆ ಎಂದು ಇಡೀ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    ಬಿರುಕು ಬಿಡಲು ಸ್ಪಷ್ಟ ಕಾರಣ ಮಾತ್ರ ತಿಳಿದು ಬಂದಿಲ್ಲ. ಇತ್ತ ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳಿಗೂ ಸಹ ವರದಿ ನೀಡಿದ್ದಾರೆ.