Tag: villagers

  • ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ- ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಆಕ್ರೋಶ

    ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ- ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಆಕ್ರೋಶ

    ಮಡಿಕೇರಿ: ಕಷ್ಟದಲ್ಲಿದ್ದಾಗ ಬಂದಿಲ್ಲ, ಈಗ ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡುತ್ತಾರೆ ಎಂದು ಕೊಡಗಿನಲ್ಲಿ ಶಾಸಕರ ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲೆಯ ಗುಡ್ಡೆಹೊಸರು ಸಮೀಪದ ತೆಪ್ಪದಕಂಡಿಯಲ್ಲಿ ಶನಿವಾರ ಕಾವೇರಿ ನೀರಿನ ರಭಸಕ್ಕೆ 4 ಮನೆಗಳು ಕುಸಿದು ಬಿದ್ದಿದ್ದವು. ಈ ವೇಳೆ ಯಾರೂ ಕೂಡ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ವತಃ ತೆಪ್ಪದಕಂಡಿ ಗ್ರಾಮಸ್ಥರು ಮನೆಗಳ ಸಾಮಾಗ್ರಿಗಳನ್ನು ತೆರವು ಮಾಡಿದ್ದರು. ಆದರೆ ಇಂದು ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಎರಡು ಜೀಪ್‍ನಲ್ಲಿ ಅಪ್ಪಚ್ಚು ರಂಜನ್ ಫೋಟೋ ಅಂಟಿಸಿಕೊಂಡು ಅವರ ಬೆಂಬಲಿಗರು ಸ್ಥಳಕ್ಕೆ ಬಂದಿದ್ದರು. ಆಗ ಗ್ರಾಮಸ್ಥರು, ಮನೆಗಳು ಬಿದ್ದು ಜನರು ಸಂಕಷ್ಟದಲ್ಲಿ ಇದ್ದಾಗ ಬಾರದ ನೀವು ಈವಾಗ ಏಕೆ ಬಂದಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬೆಂಬಲಿಗರು ಅಪ್ಪಚ್ಚು ರಂಜನ್ ಕ್ಷೀಪ್ರ ಕಾರ್ಯಾಚರಣೆ ತಂಡ ಕಟ್ಟಿಕೊಂಡು ಸಹಾಯ ಮಾಡುತ್ತಿದ್ದಾರೆ. ಆದರೆ ಇವರು ಶ್ರೀಮಂತರಿಗೆ ಮಾತ್ರ ಸಹಾಯ ಮಾಡುತ್ತಾರೆ. ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ ಎಂದು ತೆಪ್ಪದಕಂಡಿಯ ಜನರು ಅಪ್ಪಚ್ಚು ರಂಜನ್ ವಿರುದ್ಧ ಘೋಷಣೆ ಕೂಗಿ, ತಾರತಮ್ಯ ಮಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.

    ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಒಂದೆಡೆ ಪ್ರವಾಹದಿಂದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನೊಂದೆಡೆ ಕಡೆ ಪದೇ ಪದೇ ಗುಡ್ಡ ಹಾಗೂ ಭೂ ಕುಸಿತ ಉಂಟಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ ಎನ್‍ಡಿಆರ್‍ಎಫ್ ತಂಡ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

  • ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ಬೆಳಗಾವಿ: ನಾವು ನಿಮ್ಮ ಸಿನಿಮಾ ನೋಡ್ತೀವಿ ನಮ್ಮ ಸಮಸ್ಯೆಗೂ ಸ್ಪಂದಿಸಿ ಎಂದು ಬೆಳಗಾವಿಯ ಪ್ರವಾಹ ಪೀಡಿತ ಜನರು ಕನ್ನಡ ಸಿನಿಮಾ ಕಲಾವಿದರಲ್ಲಿ ಮನವಿ ಮಾಡಿದ್ದಾರೆ.

    ಚಿತ್ರರಂಗದವರು ದಕ್ಷಿಣ ಕರ್ನಾಟಕದಲ್ಲಿ ಸಮಸ್ಯೆ ಆದಾಗ ಎಲ್ಲರೂ ನೆರವಾಗುತ್ತಾರೆ. ಕಾವೇರಿ ನೀರು ಸಂಬಂಧ ಎಲರೂ ಹೋರಾಡುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಏನೇ ಸಮಸ್ಯೆ ಆದರೂ ಬರುವುದಿಲ್ಲ. ನಮ್ಮ ನದಿ ನೀರು ಸಂಬಂಧ ಯಾರು ಹೋರಾಟ ಮಾಡುವುದಿಲ್ಲ ಎಂದು ಹುಕ್ಕೇರಿ ತಾಲೂಕಿನ ಚಿಕಲಗುಡ ಗ್ರಾಮಸ್ಥರು ಕೂಡಲೇ ಬಂದು ಸಮಸ್ಯೆಗೆ ಸ್ಪಂದಿಸುವಂತೆ ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದಾರೆ.

    ನಮ್ಮ ಉತ್ತರ ಕರ್ನಾಟಕದಲ್ಲಿ ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾಗೆ ಬಹಳ ಮಂದಿ ಅಭಿಮಾನಿಗಳಿದ್ದಾರೆ. ನಾವು ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತೇವೆ. ನಮಗೆ ಈ ರೀತಿಯ ಪರಿಸ್ಥಿತಿ ಬಂದಾಗ ಅವರು ಈ ಕಡೆ ಬರಬೇಕು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗದ ಕೇವಲ ಕೊಪ್ಪಳ ಮಾತ್ರ ಸೀಮಿತ ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಬನ್ನಿ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ರೆಸಾರ್ಟ್ ರಾಜಕೀಯ ಮಾಡುತ್ತಾ ನಮ್ಮ ಕಡೆ ಗಮನಹರಿಸಿಲ್ಲ. ನಾವು ನಿಮಗೆ ವೋಟ್ ಹಾಕಿದ್ದೇವೆ ನಮ್ಮ ಕಡೆ ಸ್ವಲ್ಪ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಬೆಳಗಾವಿ: ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ಪ್ರವಾಹ ಪೀಡಿತ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‍ನಲ್ಲಿ ತಿಂಗಳುಕಾಲ ತಂಗಿದ್ದ ಅನರ್ಹ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪ್ರವಾಹ ಪೀಡಿತ ಗ್ರಾಮಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ನಾವು ಮತ ಹಾಕಿದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು. ನೀವು ರಾಜೀನಾಮೆ ನೀಡಿ ಮುಂಬೈಗೆ ಹಾರಲು ಅಲ್ಲ. ಶಾಸಕರಾಗಿ ಹದಿನಾಲ್ಕು ತಿಂಗಳಾಯಿತು ಈಗ ನೆನಪಾಯಿತೇ ಎಂದು ಪ್ರಶ್ನಿಸಿ ಮಹೇಶ್ ಕುಮಠಳ್ಳಿ ಹಾಗೂ ದರೂರ ಜಿಲ್ಲಾ ಪಂಚಾಯತ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

    ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

    ಚಿಕ್ಕಮಗಳೂರು: ಮಹಾ ಮಳೆಗೆ ಏಕಾಏಕಿ ಮನೆಯ ಮೇಲ್ಛಾವಣಿಗೆ ಕುಸಿದಿದ್ದು, ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಡೆದಿದೆ.

    ಅರವಿಂದ ನಗರದ ಕುಸುಮ ಎಂಬವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕುಸುಮ ಅವರ ಪತಿ ಬೆಳಗ್ಗೆ 6 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆಯಿಂದ ಚಿಕ್ಕಮಗಳೂರಿನಲ್ಲಿ ಮಳೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಕುಸಿದಿದೆ.

    ಮನೆಯ ಮೇಲ್ಛಾವಣಿ ಕುಸಿದು ಬಿದ್ದ ತಕ್ಷಣ ಮಲಗಿದ್ದ ಕುಸುಮ ಎಚ್ಚರಗೊಂಡು ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಮನೆಯ ಹಂಚುಗಳನ್ನು ತೆಗೆದು ಮಗುವನ್ನು ರಕ್ಷಿಸಿದ್ದಾರೆ.

    ಮಲೆನಾಡು ಭಾಗದಲ್ಲಿ ಕಳೆದು ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಆಗುತ್ತಿದೆ. ಈ ಘಟನೆ ನಡೆದ ನಂತರ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

  • ಮಳೆರಾಯ ನಮ್ಮೂರ ಮೇಲೂ ಕೃಪೆ ತೋರಪ್ಪ- ಪುಟಾಣಿಗಳ ಪ್ರಾರ್ಥನೆ

    ಮಳೆರಾಯ ನಮ್ಮೂರ ಮೇಲೂ ಕೃಪೆ ತೋರಪ್ಪ- ಪುಟಾಣಿಗಳ ಪ್ರಾರ್ಥನೆ

    ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಅತೀವೃಷ್ಟಿ ಉಂಟಾಗಿದ್ದರೆ ಇನ್ನೊಂದೆಡೆ ಅನಾವೃಷ್ಟಿ ಎದುರಾಗಿದೆ. ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮಳೆಗೆ ಪ್ರವಾಹ ಉಂಟಾಗಿದೆ. ಆದರೆ ರಾಜ್ಯದ ಕೆಲವೆಡೆ ಯಾಕೋ ಮಳೆರಾಯನ ಸುಳಿವೇ ಇಲ್ಲದಂತಾಗಿದೆ. ಹೀಗಾಗಿ ಮಳೆರಾಯ ಕೃಪೆ ತೋರಲೆಂದು ನೆಲಮಂಗಲದಲ್ಲಿ ಪುಟಾಣಿ ಮಕ್ಕಳು ದೇವರ ಮೊರೆ ಹೋಗಿದ್ದಾರೆ.

    ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಬಯಲು ಸೀಮೆ ಪ್ರದೇಶದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಮಳೆಯಿಂದ ರೈತರ ಬೆಳೆಗಳು ಜಲಾವೃಗೊಂಡಿದ್ದರೆ, ಇನ್ನೊಂದೆಡೆ ಮಳೆಯಿಲ್ಲದೆ ಬೆಳೆಗಳು ನಾಶವಾಗುತ್ತಿದೆ ಎಂದು ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮಳೆಗಾಗಿ ನೆಲಮಂಗಲದ ಕೆರೆಕತ್ತಿಗನೂರು ಗ್ರಾಮದಲ್ಲಿ ಮಕ್ಕಳ ಗುಂಪೊಂದು ಸೇರಿಕೊಂಡು ಮಳೆರಾಯನ ಮೂರ್ತಿಯನ್ನು ತಲೆಮೇಲೆ ಹೊತ್ತು, ಮನೆ ಮನೆಗೆ ತೆರಳಿ ಮಳೆರಾಯನಿಗೆ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ.

    ಹಳೆಯ ಜಾನಪದ ಶೈಲಿಯಲ್ಲಿ ಮಕ್ಕಳು ಮಳೆರಾಯನಿಗೆ ತಮ್ಮ ಊರಿಗೆ ಬಾ ಎಂದು ಪ್ರಾರ್ಥಿಸುತ್ತಿದ್ದಾರೆ. ಪುಟಾಣಿಗಳ ಕಾರ್ಯಕ್ಕೆ ಗ್ರಾಮಸ್ಥರು ಸಾಥ್ ನೀಡಿದ್ದು, ಮನೆ ಮನೆಯಲ್ಲಿ ಮಳೆರಾಯ ಮೂರ್ತಿಗೆ ಕುಂಕುಮ, ಅರಿಶಿಣ ಹಚ್ಚಿ, ಅಗರಬತ್ತಿ ಬೆಳಗಿ, ಮಳೆರಾಯನ ಹೊತ್ತವರಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ.

  • ಪ್ರಿಯಕರನ ಜೊತೆ ಹೋದ ಮಗಳು- ತಂದೆಯಿಂದ ತಿಥಿ

    ಪ್ರಿಯಕರನ ಜೊತೆ ಹೋದ ಮಗಳು- ತಂದೆಯಿಂದ ತಿಥಿ

    ಭೋಪಾಲ್: ಪ್ರೀತಿಸಿ ಓಡಿ ಹೋದ ಮಗಳಿಂದ ಬೇಸರಗೊಂಡು ತಂದೆ ಪುತ್ರಿಯ ತಿಥಿಯನ್ನು ಮಾಡಿರುವ ಘಟನೆ ಮಧ್ಯಪ್ರದೇಶದ ಕುಚ್ರೋಡ್ ಗ್ರಾಮದಲ್ಲಿ ನಡೆದಿದೆ.

    19 ವರ್ಷದ ಮಗಳು ಪ್ರೀತಿಸಿದ ಯುವಕನ ಜೊತೆ ಹೋಗಿದ್ದಳು. ಇದರಿಂದ ಆಕ್ರೋಶಗೊಂಡ ತಂದೆ ಗೋಪಾಲ್ ಮಂಡೋರಾ ಅವರು ಜೀವಂತ ಮಗಳ ಸಾವನ್ನು ಘೋಷಿಸಿ, ಸಮುದಾಯ ಭವನದಲ್ಲಿ ಶಾಸ್ತ್ರೋಕ್ತವಾಗಿ ತಿಥಿ ಮಾಡಿದ್ದಾರೆ.

    ಜು.25 ರಂದು ಮಗಳು ಪ್ರಿಯಕರನ ಜೊತೆ ಹೋಗಿದ್ದಳು, ಇಂದು ಆಕೆಯ ತಂದೆ ಸುಮಾದಾಯ ಭವನದಲ್ಲಿ ತಿಥಿ ಮಾಡಿದ್ದು, ಶಾಸ್ತ್ರೋಕ್ತವಾಗಿ ಎಲ್ಲ ಕಾರ್ಯಗಳನ್ನು ಮಾಡಿ, ಜೀವಂತ ಮಗಳಿಗೆ ಸಂತಾಪ ಸೂಚಿಸಿದ್ದಾರೆ. ತಿಥಿಗೆ ಆಗಮಿಸುವಂತೆ ಸಂಬಂಧಿಕರಿಗೆ ನೀಡಿದ್ದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ, ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

    ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಯಾವ ರೀತಿ ತಿಥಿ ಮಾಡಿ ಸಂತಾಪ ಸೂಚಿಸುತ್ತಾರೆಯೋ ಅದೇ ರೀತಿ ಎಲ್ಲ ಕಾರ್ಯಗಳನ್ನು ಮಾಡಿದ್ದು, ಗ್ರಾಮಸ್ಥರನ್ನೆಲ್ಲ ಕರೆದಿದ್ದಾರೆ. ಮಾತ್ರವಲ್ಲದೆ ದೂರದೂರಿನ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಾರ್ಡ್ ಹಂಚಿ ತಿಳಿಸಿದ್ದಾರೆ. ಎಲ್ಲರನ್ನೂ ಆಹ್ವಾನಿಸಿ ಸಮುದಾಯ ಭವನದಲ್ಲಿ ತನ್ನ ಜೀವಂತ ಮಗಳ ತಿಥಿ ಮಾಡಿ ಶೋಕವನ್ನು ವ್ಯಕ್ತಪಡಿಸಿದ್ದಾರೆ.

  • ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದ ಇಬ್ಬರು ರೈತರ ಸಾವು

    ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದ ಇಬ್ಬರು ರೈತರ ಸಾವು

    ಮೈಸೂರು: ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಕಾರ್ಯ ಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ದೇಬೂರು ಗ್ರಾಮದ ನಿವಾಸಿಗಳಾದ ಕೆಂಪರಾಜು(27) ಹಾಗೂ ಚೇತನ್(22) ಮೃತಪಟ್ಟಿದ್ದಾರೆ. ಎತ್ತಿನಗಾಡಿ ಓಡಿಸುವಾಗ ಇಬ್ಬರು ಪೈಪೋಟಿಗೆ ಇಳಿದಿದ್ದಾರೆ. ಈ ವೇಳೆ ವೇಗವಾಗಿ ಓಡುತ್ತಿದ್ದ ಎತ್ತಿನಗಾಡಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

    ಗ್ರಾಮಸ್ಥರೆಲ್ಲ ಸೇರಿ ಸುಮಾರು 15 ಗಾಡಿಗಳಲ್ಲಿ ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಪೂಜೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಡಿಕೇರಿಯಲ್ಲಿ ಉತ್ತಮ ಮಳೆಗಾಗಿ ಭಗಂಡೇಶ್ವರನ ಮೊರೆ

    ಮಡಿಕೇರಿಯಲ್ಲಿ ಉತ್ತಮ ಮಳೆಗಾಗಿ ಭಗಂಡೇಶ್ವರನ ಮೊರೆ

    ಮಡಿಕೇರಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದ್ರೆ, ಇತ್ತ ಕಳೆದ ಬಾರಿ ಪ್ರವಾಹ ಸೃಷ್ಟಿಯಾಗಿದ್ದ ಮಡಿಕೇರಿಯಲ್ಲಿ ಮಳೆ ಇಲ್ಲದೆ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಮಳೆಗಾಗಿ ಪೊಲಿಂಕಾನ ಉತ್ಸವ ನಡೆಯಿತು. ಉತ್ತಮ ಮಳೆಯಾಗಲಿ, ಆದರೆ ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಸಂಭವಿಸದೆ ಇರಲಿ ಎಂದು ಪ್ರಾರ್ಥಿಸಲಾಯಿತು.

    ಪ್ರತಿ ವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಕರ್ಕಟಕ ಅಮವಾಸ್ಯೆಯಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತೆ. ಆದರೆ ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗಿಲ್ಲ. ಇಷ್ಟೋತ್ತಿಗೆ ಮಳೆಯಾಗಿ ತ್ರಿವೇಣಿ ಸಂಗಮ ಭರ್ತಿಯಾಗುತ್ತಿತ್ತು. ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಕಂಗಾಲಾಗಿದ್ದಾರೆ.

    ವಾಡಿಕೆ ಮಳೆ ಬಂದು ಕಾವೇರಿ ಜಲಾಶಯ ಭಾಗದ ರೈತರ ಬದುಕು ಹಸನಾಗಬೇಕು. ಜೀವನಾಡಿ ಕಾವೇರಿ ಭರ್ತಿಯಾಗಬೇಕು ಎನ್ನುವ ಉದ್ದೇಶದಿಂದ ಕೊಡಗಿನ ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಯಶಸ್ವಿಯಾಗಿ ಪೊಲಿಂಕಾನ ಉತ್ಸವನ್ನು ಅದ್ಧೂರಿಯಾಗಿ ನಡೆಸಿ, ಉತ್ತಮ ಮಳೆಯಾಗಿ ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಸಂಭವಿಸದೆ ಇರಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.

    ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಪೂಜೆ ನಂತರ ಬಾಳೆಕಂಬದಿಂದ ವಿಶೇಷವಾಗಿ ಸಿದ್ಧಗೊಳಿಸಿದ ಉತ್ಸವ ಮಂಟಪದಲ್ಲಿ ಮುತ್ತೈದೆಯರಿಗೆ ನೀಡುವ ಬಳೆ, ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಮುಂತಾದವನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಅರ್ಪಣೆ ಮಾಡಲಾಯಿತು. ಅಲ್ಲದೆ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ.

    ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವು ಮಾಡಿಕೊಡಲು ಕಾವೇರಿಗೆ ವಂದಿಸೋದು, ಜೊತೆಗೆ ಮುಂದೆ ಪ್ರವಾಹ ಬಾರದಂತೆ ಬೇಡಿಕೊಳ್ಳುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.

    ನೂರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವದಲ್ಲಿ ಭಾಗಿಯಾಗಿದರು. ಹಿಂದಿನಿಂದಲೂ ಕೂಡ ಮಳೆ ಹೆಚ್ಚಾದಾಗ ಕಾವೇರಿಯ ಮಡಿಲು ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಪೊಲಿಂಕಾನ ಉತ್ಸವ ಮಹತ್ವವನ್ನು ಕೂಡ ಪಡೆದುಕೊಂಡಿದೆ.

  • ಗ್ರಾಮಸ್ಥರಿಂದ ವೀರ ಯೋಧರಿಗೆ ಆರತಿ ಬೆಳಗಿ ಗೌರವ ನಮನ

    ಗ್ರಾಮಸ್ಥರಿಂದ ವೀರ ಯೋಧರಿಗೆ ಆರತಿ ಬೆಳಗಿ ಗೌರವ ನಮನ

    ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸೈನಿಕರ ಪರ ಮೊಳಗುವ ಜಯ ಘೋಷಗಳು, ದೇಶದ ಪರ ಮೆರೆಯುವ ಅಭಿಮಾನ ಸಹಜವಾಗಿ ನೋಡುತ್ತೇವೆ. ಆದರೆ ಇಲ್ಲಿ ಜನರು ಯೋಧರಿಗೆ ಆರತಿ ಬೆಳಗಿ ಗೌರವ ಸಲ್ಲಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಹೋಬಳಿ ಬಚ್ಚಹಳ್ಳಿ ಗ್ರಾಮಸ್ಥರು ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಪರ ಹೋರಾಡಿದ ವೀರ ಯೋಧರನ್ನು ತಮ್ಮೂರಿಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಲ್ಲದೆ ಸೈನಿಕರಿಗೆ ಹಾರ ಹಾಕಿ, ಮನೆ-ಮನೆಗೂ ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟು, ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಚೂರುಗಾಯಿ ಹಾಕಿ ಗೌರವ ನಮನಗಳನ್ನು ಸಲ್ಲಿಸಿದ್ದರು. ಸೈನಿಕರ ದೇಶ ಸೇವೆ ಅನನ್ಯವಾಗಿದ್ದು, ಈ ರೀತಿಯ ಗೌರವಗಳು ಹಳ್ಳಿಹಳ್ಳಿಯಲ್ಲೂ ನಡೆದು ದೇಶಕಾಯಕದ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಆಗಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಚಿಕ್ಕನಂಚರ್ಲು ಗ್ರಾಮಸ್ಥರು ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದನ್ನೇ ಮಾದರಿಯಾಗಿ ತೆಗೆದುಕೊಂಡ ಬಚ್ಚಹಳ್ಳಿ ಗ್ರಾಮಸ್ಥರು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ, ನಮಗೆ ನೀವಿದ್ದೀರಾ, ನಿಮಗೆ ನಾವೀದ್ದೀವಿ ಎಂದು ಸೈನಿಕರಿಗೆ ಗೌರವ ಸಲ್ಲಿಸಿದರು. ಗ್ರಾಮಸ್ಥರ ಆಪ್ಯಾಯಮಾನಕ್ಕೆ ಸೈನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಕೊಡಗಿನ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ದೇಶ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕೆಂದು ಯೋಧರು ಅಭಿಪ್ರಾಯ ವ್ಯಕ್ತಪಡಿಸಿದರು.

    ಸೇನೆಯಲ್ಲಿ ತಾವು ಸೇವೆ ಸಲ್ಲಿಸದಿದ್ದರೂ ಸೇವೆ ಮಾಡಿದವರಿಗೆ ಪುಟ್ಟ ಸನ್ಮಾನ ಮಾಡುವ ಮೂಲಕ ಬಚ್ಚಹಳ್ಳಿ ಗ್ರಾಮಸ್ಥರು ಧನ್ಯತಾಭಾವ ಮೆರೆದರು.

  • ರಸ್ತೆಯ ಸಂಪರ್ಕವಿಲ್ಲ, 4 ಗ್ರಾಮಕ್ಕೆ ಒಂದೇ ತೂಗುಸೇತುವೆ

    ರಸ್ತೆಯ ಸಂಪರ್ಕವಿಲ್ಲ, 4 ಗ್ರಾಮಕ್ಕೆ ಒಂದೇ ತೂಗುಸೇತುವೆ

    – ಜೀವ ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾರೆ ಜನ

    ಬೆಳಗಾವಿ: ನಾಲ್ಕು ಗ್ರಾಮಗಳಿಗೆ ಒಂದೇ ತೂಗುಸೇತುವೆ ಆಧಾರವಾಗಿದ್ದು, ಮಳೆಗಾಲ ಬಂದರೆ ಸಾಕು ಈ ಊರಿನ ಜನರು ಮೂರು ತಿಂಗಳು ಬೇಕಾಗುವಷ್ಟು ಸಾಮಾಗ್ರಿಗಳನ್ನು ಮೊದಲೇ ಸ್ಟಾಕ್ ಮಾಡಿಕೊಳ್ಳಬೇಕು. ಈಗ ಮತ್ತೆ ಮಳೆ ಅಬ್ಬರ ಕೂಡ ಜೋರಾಗಿದ್ದು ಗ್ರಾಮಸ್ಥರ ಜೀವನ ಅತಂತ್ರ ಬದುಕಾಗಿಬಿಟ್ಟಿದೆ.

    ಬೆಳಗಾವಿಯ ಖಾನಾಪುರ ತಾಲೂಕು ಬಹುತೇಕ ದಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಅನೇಕ ಹಳ್ಳಿಗಳು ಈ ಅರಣ್ಯ ಪ್ರದೇಶದಲ್ಲಿವೆ. ಮುಖ್ಯವಾಗಿ ಸಾತಳಿ, ಮಾಚಳಿ ಗ್ರಾಮದ, ಕಿರವಾಡ, ಹಣಬರವಾಡ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಗ್ರಾಮಗಳು ಈ ಅರಣ್ಯ ಪ್ರದೇಶದಲ್ಲಿದ್ದು, ಮಳೆಗಾಲ ಆರಂಭವಾದರೆ ಸಾಕು ಈ ಗ್ರಾಮಗಳ ಜನರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಸಾತಳಿ, ಮಾಚಳಿ, ಕಿರವಾಡ, ಹಣಬರವಾಡ ಗ್ರಾಮಕ್ಕೆ ಒಂದೇ ತೂಗು ಸೇತುವೆ ಆಧಾರವಾಗಿದೆ. ಇಲ್ಲಿನ ಜನರು ರಸ್ತೆಯನ್ನೇ ಕಂಡಿಲ್ಲ. ಕಟ್ಟಿಗೆಗಳಿಂದ ನಿರ್ಮಾಣ ಮಾಡಿರುವ ಈ ಸೇತುವೆ ಯಾವಾಗ ಬೇಕಾದರೂ ಕಳಚಿ ಬೀಳುವ ಸಾಧ್ಯತೆಯಿದ್ದರೂ ಕೂಡ ಈ ನಾಲ್ಕು ಗ್ರಾಮದ ಜನರು ಮಾತ್ರ ಈ ಸೇತುವೆ ಮೇಲೆಯೇ ಜೀವನ ಸಾಗಿಸುತ್ತಿದ್ದಾರೆ.

    ಹಲವು ದಶಕಗಳಿಂದ ಇವರ ಸಮಸ್ಯೆಗೆ ಯಾವುದೇ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಇಲ್ಲಿನ ಜನರು ತಮ್ಮ ಬದುಕನ್ನ ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ದಟ್ಟ ಅರಣ್ಯ ಒಂದು ಕಡೆಯಾದರೆ ಇನ್ನೊಂದು ಕಡೆ ಕಾಡು ದಾಟಿ ನಾಡಿಗೆ ಬರಬೇಕಾದರೆ ಪಾಂಡರಿ ನದಿಯನ್ನು ಜನರು ದಾಟಬೇಕು. ಆದರೆ ಈ ನದಿಗೆ ಅಡ್ಡಲಾಗಿ ಯಾವುದೇ ಸೇತುವೆಯಾಗಲಿ, ದೋಣಿ ಸಂಪರ್ಕವಾಗಲಿ ಇಲ್ಲ. ಹೀಗಾಗಿ ಗ್ರಾಮಸ್ಥರೇ ಕಟ್ಟಿಗೆಗಳಿಂದ ಏಣಿ ರೀತಿಯಲ್ಲಿ ತೂಗುಸೇತುವೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಇದು ಯಾವಾಗ ಕಳಚಿ ಬೀಳುತ್ತೆ ಎಂಬ ಜೀವಭಯದಲ್ಲೇ ನಿತ್ಯವೂ ನಾಲ್ಕು ಗ್ರಾಮದ ಜನರು ಇಲ್ಲಿ ಓಡಾಡುತ್ತಿದ್ದಾರೆ.

    ಕೆಲವೊಮ್ಮೆ ನಿರಂತರವಾಗಿ ಮಳೆ ಸುರಿಯಲು ಆರಂಭವಾದರೆ ಗ್ರಾಮಸ್ಥರು ಕಟ್ಟಿಕೊಂಡಿರುವ ತೂಗುಸೇತುವೆ ಕೂಡ ಮುಳುಗಡೆಯಾಗುತ್ತೆ. ಪರಿಣಾಮ ಈ ಗ್ರಾಮಗಳು ನಾಡಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಈ ಕಾರಣಕ್ಕೆ ಗ್ರಾಮಸ್ಥರು ಮಳೆಗಾಲ ಆರಂಭಕ್ಕೂ ಮೂರು ತಿಂಗಳು ಮುನ್ನವೇ ಮಳೆಗಾಲ ಮುಗಿಯುವವರೆಗೂ ಜೀವನಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನ ಖರೀದಿ ಮಾಡಿ ಶೇಖರಿಸಿಟ್ಟುಕೊಂಡಿರುತ್ತಾರೆ. ಆದರೆ ಆರೋಗ್ಯ ಸಮಸ್ಯೆ ಏನಾದರು ಹೇಗೆ ನಿಭಾಯಿಸಬೇಕು ಎಂಬುದೇ ಈ ಗ್ರಾಮಸ್ಥರಿಗೆ ತೋಚುತ್ತಿಲ್ಲ. ಅನೇಕ ಬಾರಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಇಲ್ಲಿನ ಜನರು ಜೀವ ಬಿಟ್ಟಿರುವ ಪ್ರಕರಣ ಕೂಡ ಇದೆ. ಅಷ್ಟೇ ಅಲ್ಲದೆ ಗರ್ಭಿಣಿಯರನ್ನ ನಾಲ್ಕು ಜನರು ಕೂಡಿ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಉದಾಹರಣೆ ಕೂಡ ಇಲ್ಲಿವೆ.

    ಜಿಲ್ಲೆಯ ಲೋಂಡಾ ಗ್ರಾಮದಲ್ಲಿ ಆಸ್ಪತ್ರೆ ಸೇರಿದಂತೆ ಮಾರುಕಟ್ಟೆ ಇರುವುದರಿಂದ ಈ ನಾಲ್ಕು ಗ್ರಾಮದ ಜನರು ಇಲ್ಲಿಗೆ ಬರುತ್ತಾರೆ. ಆದರೆ ವಾಹನದಲ್ಲಿ ಓಡಾಡಲು ರಸ್ತೆ ಇಲ್ಲದ್ದರಿಂದ ಜನರು ಅನಿವಾರ್ಯವಾಗಿ 8 ಕಿ.ಮೀ. ನಷ್ಟು ನಡೆದುಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಗ್ರಾಮಸ್ಥರಿಗಾಗಿ ಒಂದು ಸೇತುವೆ ಹಾಗೂ ಗ್ರಾಮಕ್ಕೆ ಸಂಪರ್ಕಿಸುವಂತೆ ರಸ್ತೆಯನ್ನ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

    ಮಕ್ಕಳು ಸೇರಿದಂತೆ ಮಹಿಳೆಯರು, ವಯಸ್ಸಾದವರು ಜೀವ ಕೈಯಲ್ಲಿ ಹಿಡಿದುಕೊಂಡು ತೂಗು ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದ್ದರಿಂದ ನಡೆದುಕೊಂಡು ಓಡಾಡುವ ಈ ಮಂದಿ ಅನೇಕ ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಗ್ರಾಮಸ್ಥರಿಗೆ ಯಾರು ಕೂಡ ಸ್ಪಂದನೆ ಮಾಡುತ್ತಿಲ್ಲ. ಈಗಲಾದರೂ ಈ ನಾಲ್ಕು ಗ್ರಾಮಗಳಿಗೆ ಸರಿಯಾದ ರಸ್ತೆ, ಒಂದು ಸೇತುವೆಯನ್ನ ಸರ್ಕಾರ ಕಟ್ಟಿಸಿಕೊಡುವ ಚಿಂತನೆ ಮಾಡುತ್ತದೋ, ಇಲ್ಲವೋ ಎನ್ನುವುದನ್ನ ಕಾದುನೋಡಬೇಕಿದೆ.