Tag: villagers

  • ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

    ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

    -ಮಕ್ಕಳಿಗೆ ಗ್ರಾಮಸ್ಥರು, ಶಿಕ್ಷಕರು ಸಾಥ್

    ಬಾಗಲಕೋಟೆ: ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ್ದ ಪ್ರವಾಹ ಸದ್ಯ ತಗ್ಗಿದ್ದು, ತಮ್ಮ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಕೊಂಚ ಮಟ್ಟದಲ್ಲಿ ಪ್ರವಾಹದ ನೀರು ತಗ್ಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೆ ನೀರು ತುಂಬಿ ಕೆಸರುಮಯವಾಗಿತ್ತು. ಹೀಗಾಗಿ ನೀರು ತಗ್ಗಿರುವ ಕಾರಣಕ್ಕೆ ಈ ಶಾಲೆಯ ವಿದ್ಯಾರ್ಥಿಗಳೇ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

    ಕಲಿಕೆಯಲ್ಲಿ ಆಸಕ್ತಿ ಇರುವ ಕಾರಣಕ್ಕೆ ತಮ್ಮ ಶಾಲೆಯನ್ನು ತಾವಾಗೆ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ನಿರ್ಧರಿಸಿ, ಸ್ನೇಹಿತರೊಟ್ಟಿಗೆ ಸೇರಿಕೊಂಡು ಉತ್ಸಾಹದಿಂದ ಶಾಲೆಯನ್ನು ಸ್ವಚ್ಛ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚಿದ ಶಿಕ್ಷಕರ ವರ್ಗ ಹಾಗೂ ಎಸ್‍ಡಿಎಂಸಿ ಸದಸ್ಯರು ಕೂಡ ಮಕ್ಕಳಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೊಡಿಸಿದ್ದಾರೆ.

    ಶಾಲಾ ಕೊಠಡಿಗಳಿಗೆ ಹಾಗೂ ಆವರಣಕ್ಕೆ ಪುಟಾಣಿ ಮಕ್ಕಳು ಪೈಪ್‍ಗಳ ಮೂಲಕ ನೀರು ಹಾಕುತ್ತಿದ್ದರೆ, ಇತರೆ ವಿದ್ಯಾರ್ಥಿಗಳು ಪೊರಕೆಯಿಂದ ಗುಡಿಸಿ ಕಸವನ್ನು, ಕೆಸರನ್ನು ಹೊರಗಡೆ ಎಸೆಯುತ್ತಿದ್ದಾರೆ. ಅಲ್ಲದೆ ಮಳೆಗೆ ಶಾಲೆಯ ಕೆಲ ಕೊಠಡಿಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದನ್ನು ಕೂಡ ಮಕ್ಕಳೇ ಸ್ವಚ್ಛಗೊಳಿಸುತ್ತಿದ್ದಾರೆ.

  • ಓಡಿಹೋದ ಯುವತಿಯನ್ನು ಕರೆತಂದು ಥಳಿಸಿದ ಗ್ರಾಮಸ್ಥರು

    ಓಡಿಹೋದ ಯುವತಿಯನ್ನು ಕರೆತಂದು ಥಳಿಸಿದ ಗ್ರಾಮಸ್ಥರು

    ಹೈದರಾಬಾದ್: ಅಪ್ರಾಪ್ತ ಯುವಕನ ಜೊತೆ ಓಡಿಹೋದ ಯುವತಿಯನ್ನು ಗ್ರಾಮಸ್ಥರು ಕರೆತಂದು ಮನಬಂದತೆ ಥಳಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಸಮ್ಮುಖದಲ್ಲೇ ಯುವತಿಯನ್ನು ಆ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ಕೋಲಿನಿಂದ ಭೀಕರವಾಗಿ ಥಳಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ಯುವಕ ತಲೆ ಬಗ್ಗಿಸಿ ಕುಳಿತಿರುತ್ತಾನೆ. ಯುವತಿಯನ್ನು ಗ್ರಾಮದ ಹಿರಿಯ ವ್ಯಕ್ತಿಯೊಬ್ಬ ವಿಚಾರಣೆ ನಡೆಸುತ್ತಿರುತ್ತಾನೆ. ಹಿರಿಯ ವ್ಯಕ್ತಿ ಕೇಳಿದ ಪ್ರಶ್ನೆಗೆ ಯುವತಿ ನೀಡಿದ ಉತ್ತರದಿಂದ ಕೋಪಗೊಂಡ ಆತ ಆಕೆಯನ್ನು ಕಾಲಿನಿಂದ ಒದ್ದು, ಮೊದಲು ಕೈಯಲ್ಲಿ ಥಳಿಸುತ್ತಾನೆ. ನಂತರ ಕೋಲನ್ನು ತೆಗೆದುಕೊಂಡು ಯುವತಿಗೆ ಮನಬಂದಂತೆ ಹಲ್ಲೆ ಮಾಡುತ್ತಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅನಂತ್‍ಪುರದ ಪೊಲೀಸ್ ಮುಖ್ಯಸ್ಥ ಬಿ ಯೆಸುದಾಸ್, ಈ ಪ್ರಕರಣದಲ್ಲಿ ಗ್ರಾಮದ ಹಿರಿಯ ವ್ಯಕ್ತಿಯ ಬಗ್ಗೆ ದೂರು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅವರ ಪೋಷಕರು ದೂರು ನೀಡುತ್ತಿಲ್ಲ. ಹಿರಿಯರು ಈ ವಿಚಾರದಲ್ಲಿ ತಮ್ಮ ಪರವಾಗಿ ಮಧ್ಯಪ್ರವೇಶ ಮಾಡಿದ್ದಾರೆ ಆದ್ದರಿಂದ ನಾವು ದೂರು ನೀಡಲ್ಲ ಎಂದು ಪೋಷಕರು ಹೇಳಿದ್ದಾರೆ. ಈ ಪ್ರಕರಣ ವಿರುದ್ಧ ಅ ಯುವತಿಯೇ ದೂರು ನೀಡುತ್ತಾಳಾ ಎಂದು ಕೇಳಲು ಮಹಿಳಾ ಪೇದೆಯೊಬ್ಬರನ್ನು ಕಳಿಸಿದ್ದೇವೆ, ಆಕೆ ದೂರು ನೀಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈ ಘಟನೆಯ ಕುರಿತು ಮಾತನಾಡಿರುವ ಮಕ್ಕಳ ಹಕ್ಕುಗಳ ಸಂಘದ ಕಾರ್ಯಕರ್ತ ಅಚ್ಯುತ್ ರಾವ್, ಮಕ್ಕಳ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳನ್ನು ಜೆಜೆ(ಭಾಲಾಪರಾಧಿ ನ್ಯಾಯ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ದಾಖಲಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಇದು ಅವರಿಗೆ ಅರಿವಿಲ್ಲದೆ ಮಾಡಿದ್ದಾರೆ. ಈ ರೀತಿ ಆದಾಗ ಹಿರಿಯರು ಅವರಿಗೆ ಬುದ್ಧಿವಾದ ಹೇಳಬೇಕು. ಅದನ್ನು ಬಿಟ್ಟು ಪೊಲೀಸರ ರೀತಿಯಲ್ಲಿ ವರ್ತಿಸಬಾರದು ಎಂದು ಹೇಳಿದ್ದಾರೆ.

  • ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

    ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

    ಬೀದರ್: ಕಾಲಿಗೆ ಪೆಟ್ಟಾಗಿದ್ದ ನವಿಲೊಂದು ರಕ್ಷಣೆಗಾಗಿ ಕಾಡಿನಿಂಡ ನಾಡಿಗೆ ಬಂದು ಆಂಜಿನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿದ್ದ ನವಿಲಿಗೆ ಗ್ರಾಮಸ್ಥರು ನೆರವಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಂಗಲಿಗಿ ಗ್ರಾಮದಲ್ಲಿ ನಡೆದಿದೆ.

    ಕಾಲಿಗೆ ಪೆಟ್ಟಾಗಿದ್ದು ದಿಕ್ಕು ದೋಚದೇ ನವಿಲೊಂದು ಪರದಾಡುತ್ತಿತ್ತು, ಬಳಿಕ ಕಾಡಿನಿಂದ ಹೊರಬಂದು ಮಂಗಲಿಗಿ ಗ್ರಾಮದ ಆಂಜನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿತ್ತು. ಆದರೆ ಕಾಲಿಗಾದ ಪೆಟ್ಟಿನಿಂದ ನವಿಲು ಒದ್ದಾಡುತ್ತಿತ್ತು. ಈ ವೇಳೆ ನವಿಲಿನ ಕಾಲಿಗೆ ಪೆಟ್ಟಾಗಿದ್ದನ್ನ ಗಮನಿಸಿದ ಗ್ರಾಮಸ್ಥರು ಅದಕ್ಕೆ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿದ್ದಾರೆ.

    ಸದ್ಯ ಗ್ರಾಮಸ್ಥರ ನೆರವಿನಿಂದ ನವಿಲು ಕೊಂಚ ಚೇತರಿಸಿಕೊಂಡಿದ್ದು, ಈಗಲೂ ದೇವಸ್ಥಾನದ ಬಳಿಯೇ ತಂಗಿದೆ. ಈಗಿನ ಕಾಲದಲ್ಲಿ ಒಬ್ಬರಿಗೆ ಒಬ್ಬರು ಕಷ್ಟಕಾಲದಲ್ಲಿ ಸಹಾಯ ಮಾಡದ ಜನೆ ಮಧ್ಯೆ ಮಂಗಲಿಗಿ ಗ್ರಾಮಸ್ಥರು ಒಂದು ಪಕ್ಷಿಗೆ ನೆರವಾಗಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಮಹಾಮಳೆಗೆ ಕೊಚ್ಚಿಹೋಯ್ತು 50 ಲಕ್ಷ ವೆಚ್ಚದ ಸೇತುವೆ- 15 ಹಳ್ಳಿಗಳ ಸಂಪರ್ಕ ಕಡಿತ

    ಮಹಾಮಳೆಗೆ ಕೊಚ್ಚಿಹೋಯ್ತು 50 ಲಕ್ಷ ವೆಚ್ಚದ ಸೇತುವೆ- 15 ಹಳ್ಳಿಗಳ ಸಂಪರ್ಕ ಕಡಿತ

    ಹಾಸನ: ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯೊಂದು ಕೊಚ್ಚಿಹೋಗಿದ್ದು, ತಾಲೂಕು ಕೇಂದ್ರ ಬೇಲೂರಿನ ಜೊತೆ 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

    ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಮಳೆ ನಿಂತ ಬಳಿಕ ಮಳೆರಾಯನ ಆರ್ಭಟಕ್ಕೆ ಏನೇನು ಹಾನಿಯಾಗಿದೆ ಎನ್ನುವುದು ತಿಳಿದುಬಂದಿದೆ. ಉಕ್ಕಿ ಹರಿದ ಯಗಚಿ ಹೊಳೆ ಪ್ರವಾಹದಲ್ಲಿ ಅಗಸರಹಳ್ಳಿ ಸೇತುವೆ ಕೊಚ್ಚಿಹೋಗಿದೆ. ಕಳೆದ ಐದು ವರ್ಷದ ಹಿಂದೆ 50 ಲಕ್ಷ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಂಡಿತ್ತು. ಸುಮಾರು 15 ಗ್ರಾಮಗಳ ಓಡಾಟಕ್ಕೆ ಈ ಸೇತುವೆಯೇ ಆಧಾರವಾಗಿತ್ತು.

    ಮಳೆಗೆ ಸೇತುವೆ ಕೊಚ್ಚಿಹೋದ ಪರಿಣಾಮ ತಾಲೂಕು ಕೇಂದ್ರ ಬೇಲೂರಿನ ಜೊತೆ 15 ಹಳ್ಳಿಗಳು ಸಂಪರ್ಕ ಕಡಿತಗೊಂಡಿದೆ. ಕೇವಲ 7 ಕಿಲೋಮೀಟರ್ ದೂರದ ಬೇಲೂರಿಗೆ ತಲುಪಲು ಈಗ ಜನರು 20 ಕಿಮೀ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಕೆಲ ಕಡೆಯಲ್ಲಿ ರಸ್ತೆಯಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಡುತ್ತಿದ್ದಾರೆ. ಅಗಸರಹಳ್ಳಿ, ಯಮಸಂದಿ, ಗಂಜಲಗೂಡು, ಬೀಟೆಮನೆ, ಐರವಳ್ಳಿ ಸೇರಿದಂತೆ 15 ಹಳ್ಳಿಗಳ ಜನರು ಗೋಳಾಡುತ್ತಿದ್ದಾರೆ. ಆದ್ದರಿಂದ ಕೂಡಲೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಜನರ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

    ಮಳೆ ಬರುತ್ತಿದ್ದಾಗ ಒಂದು ರೀತಿ ಕಷ್ಟವಾದರೆ, ಮಳೆ ನಿಂತ ಮೇಲೆ ಇನ್ನೊಂದು ರೀತಿ ಸಂಕಷ್ಟವನ್ನು ಜನರು ಎದುರಿಸುತ್ತಿದ್ದಾರೆ. ಸದ್ಯ ಮಳೆಗೆ ಜಲಾವೃಗೊಂಡಿದ್ದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಆದರೆ ಜನರು ಮಾತ್ರ ಇನ್ನೂ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ.

  • ರಕ್ಷಾಬಂಧನಕ್ಕೆ ಹುತಾತ್ಮ ಯೋಧನ ಪತ್ನಿಗೆ ಗ್ರಾಮಸ್ಥರಿಂದ 11 ಲಕ್ಷದ ಮನೆ ಗಿಫ್ಟ್

    ರಕ್ಷಾಬಂಧನಕ್ಕೆ ಹುತಾತ್ಮ ಯೋಧನ ಪತ್ನಿಗೆ ಗ್ರಾಮಸ್ಥರಿಂದ 11 ಲಕ್ಷದ ಮನೆ ಗಿಫ್ಟ್

    ಭೋಪಾಲ್: ರಕ್ಷಾ ಬಂಧನ ಹಬ್ಬದಲ್ಲಿ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡುವುದು ಪದ್ಧತಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ಹಬ್ಬ ಆಚರಿಸಿದ್ದಾರೆ.

    ಹೌದು. ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹುತಾತ್ಮ ಯೋಧ ಹವಾಲ್ದಾರ್ ಮೋಹನ್ ಸಿಂಗ್ ಕುಟುಂಬಕ್ಕೆ ಗ್ರಾಮಸ್ಥರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಮನೆಯನ್ನು ಯೋಧನ ಪತ್ನಿ ರಾಜು ಬಾಯಿ ಅವರಿಗೆ ಗ್ರಾಮಸ್ಥರು ರಕ್ಷಾಬಂಧನ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು ನೆಲದ ಮೇಲೆ ತಮ್ಮ ಕೈಗಳನ್ನು ಇಟ್ಟು ಅದರ ಮೇಲೆ ರಾಜು ಬಾಯಿ ಅವರನ್ನು ನಡೆಸಿ, ಮನೆಯೊಳಗೆ ಕಳುಹಿಸಿ ಗೌರವ ಸಲ್ಲಿಸಿದ್ದಾರೆ.

    1992ರಲ್ಲಿ ದಕ್ಷಿಣ ತ್ರಿಪುರ ಜಿಲ್ಲೆಯ ದಳಪತಿಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೋಹನ್ ಸಿಂಗ್ ಹುತಾತ್ಮರಾಗಿದ್ದರು. ಅಂದಿನಿಂದ ಮೋಹನ್ ಸಿಂಗ್ ಅವರ ಪತ್ನಿ ರಾಜು ಬಾಯಿ, ಇಬ್ಬರು ಮಕ್ಕಳು ಮುರಿದ ಗುಡಿಸಲಿನಲ್ಲಿಯೇ ಜೀವನ ನಡೆಸುತ್ತಿದ್ದರು. ಸರ್ಕಾರ ಕೂಡ ಅವರ ನೆರವಿಗೆ ಬಂದಿರಲಿಲ್ಲ. ಸರ್ಕಾರದಿಂದ ಬರುತ್ತಿದ್ದ ಕೇವಲ 700 ರೂ. ಮಾಸಿಕ ಪಿಂಚಣಿಯಲ್ಲಿ ಮೋಹನ್ ಸಿಂಗ್ ಕುಟುಂಬ ಜೀವನ ನಡೆಸಬೇಕಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಯೋಧನ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿ, ಬರೋಬ್ಬರಿ 11 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ರಕ್ಷಾಬಂಧನದ ಶುಭದಿನದಂದು ಉಡುಗೊರೆಯಾಗಿ ಯೋಧನ ಪತ್ನಿಗೆ ನೀಡಿದ್ದಾರೆ.

    ಮೋಹನ್ ಸಿಂಗ್ ಹುತಾತ್ಮರಾಗಿ 3 ದಶಕಗಳಾಗುತ್ತಾ ಬಂದರೂ ಸರ್ಕಾರ ಮಾತ್ರ ಅವರ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪಿಪ್ಲಿಯ ಗ್ರಾಮಸ್ಥರು ಸೇರಿಕೊಂಡು ತಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಿ ಮೋಹನ್ ಸಿಂಗ್ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಲು ಮುಂದಾದರು. ಮುರುಕಲು ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕಾಗಿ ದೇಣಿಗೆ ಹಣದಲ್ಲಿ ಕಾಂಕ್ರೀಟ್ ಮನೆ ಕಟ್ಟಿಸಿದರು.

    ಆ ಮನೆಯನ್ನು ಗುರುವಾರ ರಾಜು ಬಾಯಿ ಅವರಿಗೆ ಊರಿನವರು ಗಿಫ್ಟ್ ಆಗಿ ನೀಡಿದ್ದಾರೆ. ರಕ್ಷಾಬಂಧನ ಹಬ್ಬವಿದ್ದ ಕಾರಣಕ್ಕೆ ತನ್ನೂರಿನ ಎಲ್ಲಾ ಯುವಕರಿಗೂ ರಾಜು ಬಾಯಿ ಅವರು ರಾಖಿ ಕಟ್ಟಿ ಹೊಸ ಮನೆಯೊಳಗೆ ಪ್ರವೇಶಿಸಿ ಹಬ್ಬ ಆಚರಿಸಿದ್ದಾರೆ.

    ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೋಹನ್ ಸಿಂಗ್ ಅವರ ಪ್ರತಿಮೆಯನ್ನು ಗ್ರಾಮದಲ್ಲಿ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಯೋಧನ ಬಲಿದಾನಕ್ಕೆ ಸರ್ಕಾರ ಯಾವುದೇ ಗೌರವ ನೀಡದೇ ಇದ್ದರೂ ಗ್ರಾಮಸ್ಥರು ಸೇರಿಕೊಂಡು ಊರಿನ ಮುಖ್ಯರಸ್ತೆಯಲ್ಲಿ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಈ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

  • ಕೆರೆಯ ಏರಿಯಲ್ಲಿ ಸಿಗ್ತು 200ಕ್ಕೂ ಹೆಚ್ಚು ನಾಗರಕಲ್ಲು

    ಕೆರೆಯ ಏರಿಯಲ್ಲಿ ಸಿಗ್ತು 200ಕ್ಕೂ ಹೆಚ್ಚು ನಾಗರಕಲ್ಲು

    ಚಿಕ್ಕಬಳ್ಳಾಪುರ: ಗೌರಿ ಗಣೇಶ ಹಬ್ಬ ಹತ್ತಿರ ಬಂತು ಕೆರೆ ಏರಿ ಬಳಿ ಇರೋ 5 ನಾಗರಕಲ್ಲುಗಳ ಸುತ್ತಮುತ್ತ ಸ್ವಚ್ಛ ಮಾಡೋಣ ಎಂದು ಹೋದ ತಾಲೂಕಿನ ಮಂಚನಬಲೆ ಗ್ರಾಮಸ್ಥರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 200ಕ್ಕೂ ಹೆಚ್ಚು ನಾಗರಕಲ್ಲುಗಳು ಸಿಕ್ಕಿವೆ.

    ಪ್ರತಿ ವರ್ಷ ಗೌರಿ ಗಣೇಶ ಹಬ್ಬದಂದು ಕೆರೆ ಏರಿ ಮೇಲಿರೋ ನಾಗರಕಲ್ಲುಗಳಿಗೆ ಗ್ರಾಮಸ್ಥರು ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದರು. ಇತ್ತೀಚಿಗೆ ನಾಗರಪಂಚಮಿ ಹಬ್ಬಕ್ಕೂ ಗ್ರಾಮದ ಮಹಿಳೆಯರೆಲ್ಲಾ ಸೇರಿ ಗ್ರಾಮದಲ್ಲಿದ್ದ 5 ನಾಗರಕಲ್ಲುಗಳಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಿದ್ದರು. ಆದರೆ ಆ ವೇಳೆ ನಾಗರಕಲ್ಲುಗಳ ಸುತ್ತ ಮುತ್ತ ಸಾಕಷ್ಟು ಗಿಡಗಂಟೆಗಳು ಬೆಳೆದುಕೊಂಡಿದ್ದನ್ನು ಗಮನಿಸಿದ್ದನ್ನು ಗ್ರಾಮಸ್ಥರಿಗೆ ತಿಳಿಸಿದ್ದರು. ಹೀಗಾಗಿ ಗಿಡಗಂಟೆಗಳನ್ನ ತೆಗೆದು ಸ್ವಚ್ಛ ಮಾಡೋಣ ಎಂದು ಹೋದ ಯುವಕರಿಗೆ ಸ್ಥಳದಲ್ಲಿ ಅಗೆಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ 200ಕ್ಕೂ ಹೆಚ್ಚು ನಾಗರಕಲ್ಲುಗಳು, ವೀರಗಲ್ಲುಗಳು ಹಾಗೂ ಪಾದದ ಹೆಜ್ಜೆ ಗುರುತಿನ ಕಲ್ಲುಗಳು ಪತ್ತೆಯಾಗಿದೆ.

    ಒಂದೇ ಕಡೆ ಇಷ್ಟು ನಾಗರಕಲ್ಲುಗಳು ಸಿಕ್ಕಿರುವುದರಿಂದ ಗ್ರಾಮಸ್ಥರೆಲ್ಲರಿಗೂ ಅಚ್ಚರಿಯಾಗಿದೆ. ನಾವು ನಮ್ಮ ತಾತನ ಕಾಲದಿಂದಲೂ ಈ ಕೆರೆ ಏರಿ ಬಳಿ ಬರುತ್ತಿದ್ದೇವೆ. ಆದರೆ ಇಷ್ಟೆಲ್ಲಾ ನಾಗರಕಲ್ಲುಗಳು ಇಲ್ಲಿರೋದು ನಮಗೆ ಗೊತ್ತಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾಗದೋಷ ಇರುವವರು, ಮಕ್ಕಳಾಗದವರು ಮಕ್ಕಳಾಗಲಿ ಎಂದು ನಾಗರಕಲ್ಲುಗಳನ್ನ ಪ್ರತಿಷ್ಠಾಪನೆ ಮಾಡೋದು ಸಾಮಾನ್ಯವಾಗಿದ್ದು, ಅದೇ ರೀತಿ ಹಿಂದಿನ ಕಾಲದಲ್ಲಿ ಪ್ರತಿಷ್ಠಾಪನೆ ಮಾಡಿರಬಹುದು ಎಂದು ಜನರು ಊಹಿಸಿದ್ದಾರೆ.

    ಸದ್ಯ ಪತ್ತೆಯಾಗಿರುವ ಎಲ್ಲಾ ನಾಗರಕಲ್ಲುಗಳನ್ನು ಅದೇ ಸ್ಥಳದಲ್ಲಿಯೇ ಮರುಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ಪ್ರವಾಹ ಪೀಡಿತ ಗ್ರಾಮಗಳ ಭೇಟಿಗೆ ಅನಂತ್‍ಕುಮಾರ್ ಹೆಗಡೆ ನಕಾರ- ಗ್ರಾಮಸ್ಥರಿಂದ ಹಿಡಿಶಾಪ

    ಪ್ರವಾಹ ಪೀಡಿತ ಗ್ರಾಮಗಳ ಭೇಟಿಗೆ ಅನಂತ್‍ಕುಮಾರ್ ಹೆಗಡೆ ನಕಾರ- ಗ್ರಾಮಸ್ಥರಿಂದ ಹಿಡಿಶಾಪ

    ಕಾರವಾರ: ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಒಪ್ಪದ ಸಂಸದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದ ಪ್ರಸಂಗ ಇಂದು ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆಯಿತು.

    ಚಿಗಳ್ಳಿ ಚೆಕ್ ಡ್ಯಾಂ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂಡಗೋಡ ತಾಲೂಕಿನ ಕೆಲ ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು, ಸರ್ ನಮ್ಮ ಗ್ರಾಮಕ್ಕೆ ಬಂದು ಪರಿಸ್ಥಿತಿ ನೋಡಿ. ಚಿಗಳ್ಳಿ ಚೆಕ್ ಡ್ಯಾಂ ಒಡೆದು ಜಮೀನು, ಮನೆ ಎಲ್ಲವೂ ನೀರು ಪಾಲಾಗಿದೆ. ಬದುಕು ತುಂಬಾ ಕಷ್ಟವಾಗಿದೆ ಎಂದು ಮನವಿ ಮಾಡಿಕೊಂಡರು. ಆಗ ಸಂಸದರು, ನಾನು ಬರುವುದು ಮುಖ್ಯವಲ್ಲ ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ ಎಂದು ಜಾರಿಕೊಂಡರು.

    ಅನಂತ್‍ಕುಮಾರ್ ಹೆಗಡೆ ಅವರ ಮಾತಿನಿಂದ ಕೋಪಗೊಂಡ ಗ್ರಾಮಸ್ಥರು ಸಂಸದರನ್ನು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದರು. ಆದರೆ ಅನಂತ್‍ಕುಮಾರ್ ಹೆಗಡೆ ಅವರು ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಬೇರೆ ಕಡೆಗೆ ಪ್ರಯಾಣ ಬೆಳೆಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು, ವೋಟ್ ಕೇಳುವಾಗ ನಾವು ಬೇಡ ಅಂದ್ರೂ ಕಾಲು ಮುಗಿಯುತ್ತಾರೆ. ವೋಟ್‍ಗಾಗಿ ಏನ್ ಬೇಕಾದರೂ ಮಾಡುತ್ತಾರೆ. ಈಗ ಪ್ರವಾಹದಿಂದ ಜನರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಸಂಸದರಿಗೆ ಅರ್ಥವಾಗೊಲ್ವಾ? ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.

    ಸಂಸದ ಅನಂತ್‍ಕುಮಾರ್ ಹೆಗಡೆ ಅವರು ನಿನ್ನೆಯಷ್ಟೇ ಸಂತ್ರಸ್ತರ ಮಾತು ಕೇಳದೆ ಅವರನ್ನು ನಿರ್ಲಕ್ಷಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದರು. ಈ ವೇಳೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು, ದೂರದಿಂದ ನೋಡಲು ಮನೆಗಳು ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಮನೆಗಳ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿದ್ದರು. ಆದರೆ ಜನರ ಮಾತನ್ನು ಕೇಳದೆ, ಸರಿಯಾಗಿ ಸ್ಪಂದಿಸದ ಅನಂತ್‍ಕುಮಾರ್ ಅವರು ನಿರ್ಲಕ್ಷಿಸಿದ್ದ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೂಡ ಅನಂತ್‍ಕುಮಾರ್ ಅವರು ಕಿಡಿಕಾರಿದ್ದರು. ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಸಂಸದರ ನಡವಳಿಕೆಯಿಂದ ಸಿಟ್ಟಲಿದ್ದ ಸಂತ್ರಸ್ತ ಮಹಿಳೆಯರು ನಿನಗೆ ವೋಟ್ ಹಾಕುವುದಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದ್ದರು. ಆದರೆ ಸಂಸದರು ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ ಕುಳಿತ್ತಿದ್ದರು. ಹೀಗೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಬೇರೆ ಪರಿಹಾರ ಕೇಂದ್ರಕ್ಕೆ ಅನಂತ್‍ಕುಮಾರ್ ಹೆಗಡೆ ತೆರಳಿದ್ದರು.

  • ಬರೋದು ಬಿಡೋದು ನನಗೆ ಬಿಟ್ಟ ವಿಚಾರ – ಸಂತ್ರಸ್ತರಿಗೆ ಶಾಸಕ ನಿಂಬಣ್ಣನವರ್ ಅವಾಜ್

    ಬರೋದು ಬಿಡೋದು ನನಗೆ ಬಿಟ್ಟ ವಿಚಾರ – ಸಂತ್ರಸ್ತರಿಗೆ ಶಾಸಕ ನಿಂಬಣ್ಣನವರ್ ಅವಾಜ್

    ಧಾರವಾಡ: ಕಲಘಟಗಿ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರ್ ಅವರನ್ನು ಪ್ರವಾಹಕ್ಕೆ ಸಿಲುಕಿಕೊಂಡಿರುವ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರವಾಹ ಆಗಿ ಒಂದು ವಾರವಾದರೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಇಂದು ಸ್ಥಳಕ್ಕೆ ಭೇಟಿ ನೀಡಿದ ಕಾರಣ, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕ ಬರೋದು ಬಿಡೋದು ನನಗೆ ಬಿಟ್ಟ ವಿಚಾರ ಎಂದು ಸಂತ್ರಸ್ತರಿಗೆ ಅವಾಜ್ ಹಾಕಿದ್ದಾರೆ.

    ಸ್ಥಳಕ್ಕೆ ಬಂದ ಶಾಸಕರನ್ನು ಸಾರ್ವಜನಿಕರು, “ಭೀಕರ ಮಳೆ ನೆರೆ ಹಾವಳಿ ಬಂದು ಒಂದು ವಾರ ಆಯ್ತು. ನೀವು ಈಗ ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಚುನಾವಣೆ ಆದ ಮೇಲೆ ಒಮ್ಮೆಯೂ ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ. ಆದರೆ ಈಗ ಎಲ್ಲಾ ಮುಗಿದ ಮೇಲೆ ಬಂದಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ವೇಳೆ ನೆರೆ ಸಂತ್ರಸ್ಥರು ಗರಂ ಆಗುತ್ತಿದ್ದಂತೆ ಶಾಸಕ ತಮ್ಮ ಬೆಂಬಲಿಗರ ಜೊತೆ ವಾಪಸ್ ಆಗಿದ್ದಾರೆ.

  • ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ಬೀಳ್ಕೊಡುಗೆ

    ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ಬೀಳ್ಕೊಡುಗೆ

    ಚಿಕ್ಕಮಗಳೂರು: ಜೀವ ಉಳಿಸಿದ ವೀರ ಯೋಧರಿಗೆ ಗ್ರಾಮಸ್ಥರು ರಾಖಿ ಕಟ್ಟುವ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು, ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದಾರೆ. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದಾರೆ.

    ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಮಿಲಿಟರಿ ಪಡೆ ಕಾರ್ಯಾಚರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ಸೋಮವಾರ ರಕ್ಷಣೆ ಮಾಡಿದೆ. ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆಯೇ ಹೊತ್ತು ಸಾಗಿಸುವ ಮೂಲಕ ತಂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ.

  • ಪ್ರವಾಹಕ್ಕೆ ತುತ್ತಾದರೂ ಕುಡಿಯುವ ನೀರಿಗೆ ಜನರ ಪರದಾಟ

    ಪ್ರವಾಹಕ್ಕೆ ತುತ್ತಾದರೂ ಕುಡಿಯುವ ನೀರಿಗೆ ಜನರ ಪರದಾಟ

    ಯಾದಗಿರಿ: ಜಿಲ್ಲೆಯ ಒಂದು ಕಡೆ ಕೃಷ್ಣಾ ನದಿಯಿಂದ 6 ಲಕ್ಷ ಕ್ಯೂಸೆಕ್, ಮತ್ತೊಂದು ಕಡೆ ಭೀಮಾ ನದಿಯಿಂದ 2 ಲಕ್ಷ ಕ್ಯೂಸೆಕ್ ನೀರಿನಿಂದ ತುಂಬಿ ತುಳುಕಿ, ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದರು. ಆದರೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಇಂತಹ ಪ್ರವಾಹದ ವೇಳೆಯಲ್ಲೂ ಹನಿ- ಹನಿ ನೀರಿಗಾಗಿ ಜಿಲ್ಲೆಯ ಜನರು ಪರದಾಡುವಂತಾಗಿದೆ.

    ಜಿಲ್ಲೆಯ ವಡಗೇರಾ ತಾಲೂಕಿನ ಗೌಡೂರು, ಕೊಳ್ಳೊರು ಮತ್ತು ಯಕ್ಷಚಿಂತಿ ಗ್ರಾಮಗಳಲ್ಲಿ ಪ್ರವಾಹ ಆವರಿಸಿದೆ. ನೀರಿನಲ್ಲಿ ಮನೆ ಮುಳುಗಡೆಯಾದ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಗ್ರಾಮದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಅದೇ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳದಲ್ಲಿರುವ ಜನರಿಗೆ ಈಗ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ.

    ಈ ಗ್ರಾಮಗಳಿಗೆ ಜಿಲ್ಲಾಡಳಿತ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ, ಕೇವಲ ಒಂದೆರೆಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ನೀರಿನ ಟ್ಯಾಂಕರ್ ಗಳ ಮುಂದೆ ಮಕ್ಕಳು, ಮಹಿಳೆಯರು, ವೃದ್ಧರು ಸಾಲು -ಸಾಲು ಕೊಡಗಳು ಹಿಡಿದು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ.

    ಇಷ್ಟು ದಿನ ತೀವ್ರ ಬರಗಾಲದಿಂದ ತತ್ತರಿಸಿದ್ದ ಈ ಗ್ರಾಮಗಳ ಜನ, ತಮ್ಮ ಸುತ್ತಲೂ ಸಮುದ್ರದಂತೆ ನೀರು ಹರಿಯುತ್ತಿದ್ದರೂ ಅದನ್ನು ಬಳಸದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.