Tag: villagers

  • ಮಳೆ ಬಂದ್ರೆ ರಸ್ತೆಯೆಲ್ಲಾ ಕೆಸರು ಮುದ್ದೆ-ಹಸಿದ ಶಾಲಾ ಮಕ್ಕಳಿಗೆ ಸಿಗಲ್ಲ ಬಿಸಿಯೂಟ

    ಮಳೆ ಬಂದ್ರೆ ರಸ್ತೆಯೆಲ್ಲಾ ಕೆಸರು ಮುದ್ದೆ-ಹಸಿದ ಶಾಲಾ ಮಕ್ಕಳಿಗೆ ಸಿಗಲ್ಲ ಬಿಸಿಯೂಟ

    ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಧೋಪೇನಟ್ಟಿ ಗ್ರಾಮದಲ್ಲಿ ಮಳೆ ಬಂದರೆ ರಸ್ತೆಯೆಲ್ಲಾ ಕೆಸರು ಮುದ್ದೆಯಾಗುತ್ತದೆ. ಹೀಗಾಗಿ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಬೈಕ್‍ನಲ್ಲಿ ಹೊತ್ತು ತರಬೇಕು. ಒಂದು ವೇಳೆ ಬೈಕ್ ಸಾಗದಷ್ಟು ರಸ್ತೆ ಕೆಸರುಮಯವಾದರೆ ಆ ದಿನ ಮಕ್ಕಳಿಗೆ ಬಿಸಿಯೂಟವಿಲ್ಲ.

    ಗ್ರಾಮಕ್ಕೆ ಬಿಸಿಯೂಟ ಮುಟ್ಟಬೇಕಾದರೆ ಸಾಹಸ ಪಡಬೇಕು, ಬಿಸಿಯೂಟದ ಪಾತ್ರೆಗಳನ್ನ ಬೈಕ್ ಮೇಲೆನೇ ಇಟ್ಟುಕೊಂಡು ಹೋಗಬೇಕು. ಹೀಗಾಗಿ ಗ್ರಾಮಸ್ಥರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಈ ಊಟ ಮುಟ್ಟಿಸಲು ಓರ್ವ ಬೈಕ್ ಸವಾರನನ್ನೇ ನೇಮಕ ಮಾಡಿದ್ದಾರೆ. ಆ ಸವಾರ ಬೈಕ್‍ಗೆ ದಬ್ಬೆ ಕಟ್ಟಿಕೊಂಡು, ಬಿಸಿಯೂಟದ ಡಬ್ಬಿಗಳನ್ನು ಕಟ್ಟಿಕೊಂಡು ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಹೇಗೋ ಮಕ್ಕಳಿಗೆ ಬಿಸಿಯೂಟ ತಲುಪಿಸುತ್ತಾರೆ

    ಧೋಪೇನಟ್ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಬಿಸಿಯೂಟ ತಲುಪಿಸಲು ನಿತ್ಯವೂ ಸರ್ಕಸ್ ಮಾಡಬೇಕು. ಮಳೆ ಬಂತು ಅಂದರೆ ಈ ಶಾಲೆಯಲ್ಲಿ ಓದುವ ಒಟ್ಟು 22 ಮಕ್ಕಳಿಗೆ ಈ ಬಿಸಿಯೂಟನೂ ಸಿಗಲ್ಲ. ಯಾಕೆಂದರೆ ಮಳೆಗೆ ರಸ್ತೆ ಹದಗೆಟ್ಟಿರುತ್ತದೆ. ಡೋರಿ ಗ್ರಾಮದವರೆಗೆ ಮಾತ್ರ ರಸ್ತೆ ಚೆನ್ನಾಗಿದ್ದು, ಮುಂದಕ್ಕೆ ಧೋಪೇನಟ್ಟಿ ಗ್ರಾಮದ ದಾರಿ ಹದಗೆಟ್ಟಿದೆ. ಇದರಿಂದ ಬೈಕ್ ಸಹ ಸಂಚರಿಸಲು ಕೂಡ ಆಗಲ್ಲ. ಆದರೂ ಗ್ರಾಮದ ಯುವಕನೋರ್ವ ಡೋರಿಯಿಂದ ಧೋಪೇನಟ್ಟಿಗೆ ಬಿಸಿಯೂಟ ತಲುಪಿಸುತ್ತಾರೆ.

    ಕಳೆದ ನಾಲ್ಕು ವರ್ಷಗಳಿಂದ ಧೋಪೇನಟ್ಟಿ ಶಾಲಾ ಮಕ್ಕಳಿಗೆ ಬೈಕ್ ಮೇಲೆ ಬಿಸಿಯೂಟ, ಹಾಲು ತಲುಪುತ್ತಿದೆ. ಈ ಸಮಸ್ಯೆ ಬಗ್ಗೆ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರ್ ಗೆ ತಿಳಿಸಿದರೂ ಯಾವುದೇ ಉಪಯೋಗ ಆಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಗ್ರಾಮಕ್ಕೆ ಬಸ್ ಸಂಪರ್ಕ ಇಲ್ಲದಿದ್ದರೂ ಪರವಾಗಿಲ್ಲ, ಶಾಲಾ ಮಕ್ಕಳು ಹಸಿದುಕೊಂಡು ಇರಬಾರದು ಎಂದು ಗ್ರಾಮದ ನಿವಾಸಿ ಸಂತೋಷ್ ಬೈಕ್ ಮೇಲೆ ಬಿಸಿಯೂಟ ತಂದು ಮೆಚ್ಚುಗೆಯ ಕೆಲಸ ಮಾಡುತ್ತಿದ್ದಾರೆ. ಸಂತೋಷ್‍ರನ್ನು ನೋಡಿಯಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.

  • ಅಘನಾಶಿನಿ ಆಕ್ರೋಶಕ್ಕೆ ಕೊಚ್ಚಿ ಹೋದ ಬ್ರಿಡ್ಜ್- 1 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರಿಂದ್ಲೇ ತಾತ್ಕಾಲಿಕ ಸೇತುವೆ

    ಅಘನಾಶಿನಿ ಆಕ್ರೋಶಕ್ಕೆ ಕೊಚ್ಚಿ ಹೋದ ಬ್ರಿಡ್ಜ್- 1 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರಿಂದ್ಲೇ ತಾತ್ಕಾಲಿಕ ಸೇತುವೆ

    – ಮರ, ಹಲಗೆಯಿಂದ ಕಟ್ಟೇ ಬಿಟ್ಟರು ಜೀವನ ಸೇತುವೆ

    ಕಾರವಾರ: ಕರಾವಳಿ ಭಾಗದಲ್ಲಿ ಪ್ರವಾಹ ಬಂದು ಹಲವು ಊರುಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಅದರಲ್ಲೂ ಉತ್ತರ ಕನ್ನಡದಲ್ಲಿ ಅಘನಾಶಿನಿ ಆಕ್ರೋಶಕ್ಕೆ ಹಲವು ಗ್ರಾಮಗಳು ಜಲಾವೃತಗೊಂಡು, ಸೇತುವೆಗಳು ಕೊಚ್ಚಿಕೊಂಡು ಹೋಗಿದೆ.

    ಜಿಲ್ಲೆಯ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸಂತೆಗುಳಿ ಬಳಿಯ ಗ್ರಾಮದಲ್ಲಿ ಅಘನಾಶಿನಿ ನದಿ ಹರಿದು ಹೋಗುತ್ತದೆ. ಆದ್ದರಿಂದ ನದಿಯ ಪ್ರವಾಹದಿಂದಾಗಿ ಗ್ರಾಮದಲ್ಲಿದ್ದ ತೂಗು ಸೇತುವೆ ಕೊಚ್ಚಿಹೋಗಿತ್ತು. ಈ ಹಿನ್ನೆಲೆಯಲ್ಲಿ ಬಂಗಣೆ, ಕಲವೆ, ಮೊರಸೆ ಗ್ರಾಮಕ್ಕೆ ಹೊರಗಿನ ಸಂಪರ್ಕ ಸಂಪೂರ್ಣ ಕಡಿದು ಹೋಗಿತ್ತು.

    ಈ ಹಿಂದೆಯೇ ಗ್ರಾಮಸ್ಥರು ಸರ್ಕಾರಕ್ಕೆ ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಕೊಟ್ಟಿದ್ದರು. ಆದರೆ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಎಷ್ಟೇ ಬಾರಿ ಮನವಿ ಮಾಡಿದರೂ ಸ್ಪಂದಿಸದ ಸರ್ಕಾರದಿಂದ ಬೇಸತ್ತಿದ್ದ ಗ್ರಾಮಸ್ಥರು ತಮ್ಮ ಕೈಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ, ಯಾರ ಸಹಾಯವನ್ನೂ ಬೇಡದೇ ಮರದ ಸೇತುವೆ ನಿರ್ಮಾಣ ಮಾಡಿದ್ದಾರೆ.

    ಊರಿನ ಜನರಿಂದ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸೇತುವೆ ಕಟ್ಟಿ, ಗ್ರಾಮಸ್ಥರು ಓಡಾಟ ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಹಾಗೂ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ನಮ್ಮ ನೆರವಿಗೆ ಬಂದಿಲ್ಲ. ಈಗಾಗಲೇ ಹೊಲ, ಗದ್ದೆ, ತೋಟಗಳು ಪ್ರವಾಹಕ್ಕೆ ಹಾನಿಗೊಳಗಾಗಿ ಸಂಪೂರ್ಣ ನಾಶವಾಗಿದೆ. ಯಾರೂ ನಮ್ಮ ಸಹಾಯಕ್ಕೆ ಬಾರದ ಕಾರಣಕ್ಕೆ ನಾವೇ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸೇತುವೆ ಕಟ್ಟಿದ್ದೇವೆ. ಈ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಗಮನಹರಿಸಿ ಗ್ರಾಮದಲ್ಲಿ ಸೇತುವೆ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

  • ಹುಲಿ ದಾಳಿಗೆ ರೈತ ಬಲಿ

    ಹುಲಿ ದಾಳಿಗೆ ರೈತ ಬಲಿ

    ಚಾಮರಾಜನಗರ: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.

    ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ (55) ಹುಲಿದಾಳಿಗೆ ಬಲಿಯಾಗಿದ್ದಾರೆ. ಎತ್ತುಗಳೊಂದಿಗೆ ಕಾಡಂಚಿನಲ್ಲಿ ಬರುತ್ತಿದ್ದಾಗ ಹುಲಿ ದಾಳಿ ಮಾಡಿದೆ.

    ಎತ್ತುಗಳನ್ನು ಹೊಡೆದುಕೊಂಡು ಕಾಡಿನಲ್ಲಿ ಬರುತ್ತಿದ್ದ ಶಿವಮಾದಯ್ಯ ಮೇಲೆ ಹುಲಿ ದಾಳಿ ಮಾಡಿದೆ. ಇದರಿಂದ ಭಯಗೊಂಡ ಎತ್ತುಗಳು ಓಡಿಹೋಗಿ ಮನೆ ಸೇರಿವೆ. ಶಿವಮಾದಯ್ಯ ಇಲ್ಲದೇ ಕೇವಲ ಎತ್ತುಗಳೇ ಬಂದಿರುವುದರಿಂದ ಗಾಬರಿಗೊಂಡ ಗ್ರಾಮಸ್ಥರು ರೈತನನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಕಾಡಿನಲ್ಲಿ ಮೈಮೇಲೆ ಹುಲಿ ದಾಳಿಯ ಗಾಯಗಳಿಂದ ಕೂಡಿದ ಶಿವಮಾದಯ್ಯನ ಶವ ಪತ್ತೆಯಾಗಿದೆ.

  • ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

    ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

    – 6 ತಿಂಗ್ಳು ಅವನು, ಇನ್ನಾರು ತಿಂಗ್ಳು ಅವಳಾಗುವ ಸ್ವಾಮೀಜಿ

    ಬಾಗಲಕೋಟೆ: ಆರು ತಿಂಗಳು ಅವನು, ಇನ್ನಾರು ತಿಂಗಳು ಅವಳಾಗುವ ವಿಚಿತ್ರ ಸ್ವಾಮೀಜಿಯನ್ನು ಚಿಕ್ಕಸಂಗಮದ ಗ್ರಾಮದಿಂದ ಸ್ಥಳೀಯರು ಹೊರಹಾಕಿದ್ದಾರೆ.

    ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಸಂಗಮದ ಗ್ರಾಮಸ್ಥರು ವಿದ್ಯಾಹಂಸ ಭಾರತಿ ಸ್ವಾಮೀಜಿಯನ್ನು ಗ್ರಾಮದಿಂದ ಹೊರ ಹಾಕಿದ್ದಾರೆ. ವಿದ್ಯಾಹಂಸ ಭಾರತಿ ಸ್ವಾಮೀಜಿ ಮೈಸೂರು ಜಿಲ್ಲೆ ಪಾಂಡವಪುರ ತಾಲೂಕಿನ ಚಂದ್ರ ಗ್ರಾಮದ ಬಳಿ ಇರುವ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠಾಧ್ಯಕ್ಷರಾಗಿದ್ದಾರೆ. ಸ್ವಾಮಿಜಿ ವಿಚಿತ್ರ ವೇಷ ಭೂಷಣಗಳನ್ನು ನೋಡಿದ ಗ್ರಾಮಸ್ಥರೆಲ್ಲರೂ ಗ್ರಾಮದಿಂದ ಕಳುಹಿಸಿದ್ದಾರೆ.

    ವಿದ್ಯಾಹಂಸ ಭಾರತಿ ಸ್ವಾಮೀಜಿ ಚಾತುರ್ಮಾಸ ಆಚರಿಸಲು ಚಿಕ್ಕಸಂಗಮಕ್ಕೆ ಬಂದಿದ್ದರು ಎನ್ನಲಾಗಿದೆ. ಚಿಕ್ಕಸಂಗಮದಲ್ಲಿ ಪ್ರತ್ಯಂಗಿರಾ ಹೋಮ, ಹವನ ಹೆಸರಿನಲ್ಲಿ ಗ್ರಾಮಸ್ಥರಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದು ಎಂದು ತಿಳಿದು ಬಂದಿದೆ. ದೊಡ್ಡ ದೊಡ್ಡ ಸ್ವಾಮೀಜಿಗಳು, ಗಣ್ಯವ್ಯಕ್ತಿಗಳ ಜೊತೆಗಿನ ಭಾವಚಿತ್ರ ತೋರಿಸಿ ನಂಬಿಕೆ ಹುಟ್ಟಿಸಿಕೊಂಡಿದ್ದ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಈ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧ 2018ರಲ್ಲಿ ಮೈಸೂರಿನ ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಚಾತುರ್ಮಾಸದ ಪೂಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದರು.

  • ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಗ್ರಾಮಸ್ಥರು

    ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಗ್ರಾಮಸ್ಥರು

    ಧಾರವಾಡ: ಮನೆಯಲ್ಲಿ ಯಾರು ಇಲ್ಲದ ವೇಳೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಘಟನೆ ಜಿಲ್ಲೆಯ ಮನಸೂರ ಗ್ರಾಮದಲ್ಲಿ ನಡೆದಿದೆ.

    ಮನಸೂರ ಗ್ರಾಮದ ನಿವಾಸಿ ನರಸಿಂಗ ಏಟು ತಿಂದ ಯುವಕ. ಗ್ರಾಮದ ಮಹಿಳೆಯೊಬ್ಬರ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಾಡಿದಾಗ ಅಕ್ಕ ಪಕ್ಕದ ಮನೆಯವರು ಬಂದು ಆಕೆಯನ್ನು ಆರೋಪಿಯಿಂದ ರಕ್ಷಿಸಿದ್ದಾರೆ.

    ನಂತರ ಆರೋಪಿ ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಗ್ರಾಮಸ್ಥರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಹೀನ ಕೃತ್ಯಕ್ಕೆ ಕೈಹಾಕಿದ್ದಕ್ಕೆ ಚಪ್ಪಲಿಯಿಂದ ಹೊಡೆದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ ಆರೋಪಿಯನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಬೋನಿಗೆ ಬಿದ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ

    ಬೋನಿಗೆ ಬಿದ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ

    ಕೊಪ್ಪಳ: ಜಿಲ್ಲೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಇಂದು ಅರಣ್ಯ ಇಲಾಖೆ ಹಾಕಿದ್ದ ಬೋನಿಗೆ ಬಿದ್ದಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ 17 ವರ್ಷದ ಕರಡಿ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಹನುಮನಹಳ್ಳಿ, ಚಿಕ್ಕರಾಂಪೂರ, ಪಂಪಾ ಸರೋವರ, ಜಂಗ್ಲಿ ಮತ್ತು ವಿರೂಪಾಪೂರಗಡ್ಡಿ ಗ್ರಾಮಗಳ ಸುತ್ತ ತಿರುಗಾಡಿ ಕರಡಿ ಜನರಲ್ಲಿ ಭಯ ಹುಟ್ಟಿಸಿತ್ತು.

    ಆನೆಗೊಂದಿ ಸುತ್ತಲು ಬಾಳೆ ಬೆಳೆ ಬೆಳೆಯುವುದರಿಂದ ಇಲ್ಲಿ ಕರಡಿಗಳು ಹೆಚ್ಚಿವೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಹಾಕಿದ್ದ ಬೋನಿಗೆ ಇಂದು ಬೆಳಗ್ಗೆ ಕರಡಿ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಮಾಟ-ಮಂತ್ರವೆಂದು ಜನರನ್ನು ವಂಚಿಸಿ ಹಣ ಪೀಕುತ್ತಿದ್ದವರಿಗೆ ಗೂಸ

    ಮಾಟ-ಮಂತ್ರವೆಂದು ಜನರನ್ನು ವಂಚಿಸಿ ಹಣ ಪೀಕುತ್ತಿದ್ದವರಿಗೆ ಗೂಸ

    ಕೊಪ್ಪಳ: ಮಾರುವೇಷದಲ್ಲಿ ಬಂದು ದೇವರ ಹೆಸರಲ್ಲಿ ಹಣ ದೋಚುತ್ತಿದ್ದ ಖದೀಮರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ನಡೆದಿದೆ.

    ಹಣೆಗೆ ಕುಂಕುಮ ಹಚ್ಚಿ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದರು. ಮೈಲಾರಲಿಂಗೇಶ್ವರ ದೇವರ ಭಕ್ತರ ವೇಷದಲ್ಲಿ ಬರುತ್ತಿದ್ದ ಖದೀಮರು, ಮನೆ ಮನೆಗೆ ಬಂದು ದೇವರ ಹೆಸರು ಹೇಳಿ ಭಂಡಾರ ಹಚ್ಚಿ ವಶೀಕರಣ ಮಾಡುತ್ತಿದ್ದರು. ಬಳಿಕ ಮಾಟ-ಮಂತ್ರದ ಮೂಲಕ ಜನರನ್ನು ವಶೀಕರಣ ಮಾಡಿ ಹಣವನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು.

    ವೇಷಧಾರಿಗಳಿಗೆ ಮೋಸ ಹೋಗಿ 500 ರಿಂದ 3000 ಸಾವಿರದವರೆಗೆ ಗ್ರಾಮಸ್ಥರು ಹಣ ಕೊಟ್ಟಿದ್ದರು. ಹೀಗೆ ಜನರನ್ನು ಯಾಮಾರಿಸಿ ಯಡ್ಡೋಣಿ ಗ್ರಾಮದಲ್ಲಿ ಒಟ್ಟು 12000 ಸಾವಿರ ಹಣವನ್ನು ಮೂವರು ಕಳ್ಳರು ಲಪಟಾಯಿಸಿದ್ದರು. ವೇಷಧಾರಿಗಳ ಅಸಲಿ ಬಣ್ಣ ತಿಳಿದ ಕೆಲವರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

    ಆಗ ಎಚ್ಚೆತ್ತುಕೊಂಡ ಜನರು ವೇಷಧಾರಿಗಳನ್ನು ಹಿಡಿದು, ತಮ್ಮ ಹಣ ವಾಪಸ್ ಪಡೆದುಕೊಂಡು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಇನ್ನೊಮ್ಮೆ ಇಂತಹ ಕೆಲಸ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

  • ಅಪ್ರಾಪ್ತನ ಜೊತೆ ಇಬ್ಬರು ಮಕ್ಕಳ ತಾಯಿ ಸೆಕ್ಸ್- ಚಪ್ಪಲಿ ಹಾರ ಹಾಕಿ ಮೆರವಣಿಗೆ

    ಅಪ್ರಾಪ್ತನ ಜೊತೆ ಇಬ್ಬರು ಮಕ್ಕಳ ತಾಯಿ ಸೆಕ್ಸ್- ಚಪ್ಪಲಿ ಹಾರ ಹಾಕಿ ಮೆರವಣಿಗೆ

    ಚಂಡೀಗಢ: ಅಪ್ರಾಪ್ತ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಕ್ಕೆ ಗ್ರಾಮಸ್ಥರು ಇಬ್ಬರು ಮಕ್ಕಳ ತಾಯಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿದ ಘಟನೆ ಹರಿಯಾಣದ ಕರ್ನಾಲ್‍ನಲ್ಲಿ ನಡೆದಿದೆ.

    ಅಪ್ರಾಪ್ತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂಬ ಆರೋಪ ಕೇಳಿ ಗ್ರಾಮಸ್ಥರು ಮೊದಲು ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂಚಾಯ್ತಿ ಇಬ್ಬರನ್ನು ಗ್ರಾಮದಿಂದ ಹೊರ ಹೋಗಲು ಆದೇಶಿಸಿದ್ದಾರೆ. ಈ ಬಗ್ಗೆ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಘಟನೆ ಬಗ್ಗೆ ಮೊದಲು ನಾವು ತನಿಖೆ ನಡೆಸುತ್ತೇವೆ. ಬಳಿಕ ತಪ್ಪಿತಸ್ಥರು ಯಾರು ಎಂಬುದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಅಗತ್ಯವಿದ್ದರೆ, ನಾವು ಅಪ್ರಾಪ್ತ ಬಾಲಕನಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತೇವೆ. ಅವನಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಡಿಎಸ್‍ಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮದ ಮುಖ್ಯಸ್ಥ, ಮಹಿಳೆ ಬಿಹಾರ್ ನಿವಾಸಿಯಾಗಿದ್ದು, ಬಾಲಕ 12ನೇ ತರಗತಿ ಓದುತ್ತಿದ್ದಾನೆ. ಈ ಘಟನೆ ಬಗ್ಗೆ ಪಂಚಾಯ್ತಿಯಲ್ಲಿ ಸಭೆ ನಡೆದಿದೆ ಎಂಬ ವಿಷಯ ತಿಳಿಯಿತು. ಆದರೆ ಅಲ್ಲಿ ಏನೂ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇದುವರೆಗೂ ವೈರಲ್ ವಿಡಿಯೋ ಕೂಡ ನೋಡಿಲ್ಲ. ಮಹಿಳೆಗೆ ಮದುವೆ ಆಗಿ ಮಕ್ಕಳಿದ್ದು, ಇಬ್ಬರು ಬೇರೆ ಜಾತಿಯವರು ಎಂದು ತಿಳಿಸಿದ್ದಾರೆ.

    ಅಲ್ಲದೆ ಇದನ್ನು ಬಂಜಾರಾ ಸಮುದಾಯದವರು ಮಾಡಿದ್ದಾರೆ. ಪಂಚಾಯ್ತಿ ಸದಸ್ಯರು ನನ್ನ ಮಗನಿಗೆ ಹಾಗೂ ಮಹಿಳೆಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ ಎಂದು ಬಾಲಕನ ತಂದೆ ಹೇಳುತ್ತಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ತಿಳಿಸಿದ್ದಾರೆ.

  • ರಾಜಕೀಯ ದಿಗ್ಗಜರಿರೋ ಜಿಲ್ಲೆಯ ಗ್ರಾಮವೊಂದ್ರಲ್ಲಿ ಮಕ್ಕಳಿಗೆ ಕಟ್ಟಡದ ಜಗಲಿಯಲ್ಲೇ ಪಾಠ!

    ರಾಜಕೀಯ ದಿಗ್ಗಜರಿರೋ ಜಿಲ್ಲೆಯ ಗ್ರಾಮವೊಂದ್ರಲ್ಲಿ ಮಕ್ಕಳಿಗೆ ಕಟ್ಟಡದ ಜಗಲಿಯಲ್ಲೇ ಪಾಠ!

    ಹಾಸನ: ದೇಶಕ್ಕೆ ಮಾಜಿ ಪ್ರಧಾನಿ ಕೊಟ್ಟ ಹಿರಿಮೆಯನ್ನು ಹಾಸನ ಜಿಲ್ಲೆ ಹೊಂದಿದೆ. ಅಲ್ಲದೆ ಓರ್ವ ಪುತ್ರ ಮಾಜಿ ಮುಖ್ಯಮಂತ್ರಿ, ಮತ್ತೊಬ್ಬರು ಪ್ರಭಾವಿ ರಾಜಕಾರಿಣಿಯಾಗಿದ್ದಾರೆ. ಮೊಮ್ಮಗರೊಬ್ಬರು ಸಂಸದರಾದ್ರೆ, ಸೊಸೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಇಷ್ಟೆಲ್ಲ ಜನ ಪ್ರತಿನಿಧಿಸುವ ಕ್ಷೇತ್ರದ ಗ್ರಾಮವೊಂದರಲ್ಲಿ ಪುಟ್ಟ ಮಕ್ಕಳು ಜಗಲಿಯಲ್ಲೇ ಪಾಠ ಕೇಳುವಂತಾಗಿದೆ.

    ಹೌದು. ಹೊಳೇನರಸೀಪುರ ತಾಲೂಕಿನ ಉಣ್ಣೆನ ಹಳ್ಳಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಲಾ ಕಟ್ಟಡವಿಲ್ಲ. ಅದು ಹೇಗೋ ಗ್ರಾಮಸ್ಥರು ತಮ್ಮ ಸಂಘದ ಕಟ್ಟಡವನ್ನು ಶಾಲೆಗೆ ಕೊಟ್ಟು ಇಷ್ಟು ವರ್ಷ ತರಗತಿ ನಡೆಸಲು ಸಹಾಯ ಮಾಡಿದರು. ಆದರೆ ಇದೀಗ ಅವರು ಕೂಡ ತಮ್ಮ ಕಟ್ಟಡಕ್ಕೆ ಬೀಗ ಜಡಿದಿದ್ದು ಪುಟ್ಟ ಪುಟ್ಟ ಮಕ್ಕಳೀಗ ಶಾಲಾ ಕಟ್ಟಡದ ಜಗಲಿಯಲ್ಲಿ ಕುಳಿತು ಪಾಠ ಕಲಿಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

    ಇಪ್ಪತ್ತೊಂದನೆಯ ಶತಮಾನದಲ್ಲಿ ಇಷ್ಟೆಲ್ಲ ರಾಜಕೀಯ ದಿಗ್ಗಜರು ಇರುವ ಗ್ರಾಮದಲ್ಲಿ ಈ ಪರಿಸ್ಥಿತಿ ಇದೆ ಎಂದರೆ ನಿಜಕ್ಕೂ ವಿರ್ಯಾಸವೇ ಸರಿ. ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲವಾಗಿದೆ. ಹೀಗಾಗಿ ಪುಟ್ಟ ಮಕ್ಕಳ ಶಿಕ್ಷಣಕ್ಕೆ ಸ್ಪಂದಿಸಿದ ಗ್ರಾಮಸ್ಥರು ಯುವಕರ ಸಂಘದ ಕಚೇರಿಯ ಕಟ್ಟಡವನ್ನೇ ಬಿಟ್ಟುಕೊಟ್ಟಿದ್ದರು. ಆದರೆ ಇದೀಗ ಅದಕ್ಕೆ ಬೀಗ ಜಡಿದ ಪರಿಣಾಮ ಈ ವಿದ್ಯಾರ್ಥಿಗಳು ಕಟ್ಟಡದ ಹೊರಗಡೆಯೇ ಪಾಠ ಕೇಳುವಂತಾಗಿದೆ.

    ಒಟ್ಟು 1ರಿಂದ 5ನೇ ತರಗತಿಯವರೆಗೆ 20 ಮಕ್ಕಳು ವಿದ್ಯಾರ್ಥಿಗಳಿದ್ದಾರೆ. ಎಲ್ಲ ತರಗತಿಗಳಿಗೂ ಒಂದೇ ಕೊಠಡಿ. ಅದರಲ್ಲೇ ಎಲ್ಲ ತರಗತಿಗಳಿಗೆ ಪಾಠದ ಜೊತೆಗೆ ಬಿಸಿಯೂಟದ ಅಡುಗೆ ಕೂಡ ಅಲ್ಲಿಯೇ ಮಾಡಲಾಗುತ್ತಿದೆ. ಇದರಿಂದ ಅತ್ತ ಸರಿಯಾಗಿ ಪಾಠ ಹೇಳಿಕೊಡಲೂ ಆಗದೆ ಹಿರಿಯ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗದೇ ಶಿಕ್ಷಕರು ಕೂಡ ಹೈರಾಣಾಗಿದ್ದಾರೆ.

    ಇಪ್ಪತ್ತು ವಿದ್ಯಾರ್ಥಿಗಳು ಜಗಲಿ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಈ ವಿದ್ಯಾರ್ಥಿಗಳಿಗೆ ಇದೇ ಗತಿಯಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಗ್ರಾಮಸ್ಥರು ತಮ್ಮ ಊರಿನ ಶಾಲೆಗೆ ನೂತನ ಕಟ್ಟಡ ಕಟ್ಟಿಕೊಡಬೇಕೆಂದು ಆಗ್ರಹಿಸಿದ್ದಾರೆ.

  • ಅನಿತಾ ಕುಮಾರಸ್ವಾಮಿಯವರ ಕ್ಷೇತ್ರದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ- ಗ್ರಾಮಸ್ಥರ ಪರದಾಟ

    ಅನಿತಾ ಕುಮಾರಸ್ವಾಮಿಯವರ ಕ್ಷೇತ್ರದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ- ಗ್ರಾಮಸ್ಥರ ಪರದಾಟ

    – ಕಟ್ಟಡ ನಿರ್ಮಾಣವಾಗಿ 2 ವರ್ಷವಾದರೂ ವೈದ್ಯರಿಲ್ಲ

    ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲೇ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಚಿಕಿತ್ಸೆ ಸಿಗದಂತಾಗಿದ್ದು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿನ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಹಾಳು ಕೊಂಪೆಯಾಗಿದೆ ಎಂದು ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಈವರೆಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಈ ಆಸ್ಪತ್ರೆಗೆ ವೈದ್ಯರು ಯಾರೂ ಬರುತ್ತಿಲ್ಲ, ಸಿಬ್ಬಂದಿ ಕೂಡ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಸುತ್ತಮುತ್ತಲಿನ 4-5 ಗ್ರಾಮಗಳ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಆರೋಗ್ಯ ಕೇಂದ್ರವನ್ನು ತೆರೆಯಲಾಗಿತ್ತು. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಆರೋಗ್ಯ ಕೇಂದ್ರ ಇದ್ದರೂ ಇಲ್ಲದಂತಾಗಿದೆ. ರೋಗಿಗಳಿಗೆ ನೀಡುವ ಮಾತ್ರೆಗಳು ಕೂಡ ಅವಧಿ ಮುಗಿದು ಹೋಗಿದ್ದು, ಅಂತಹ ಮಾತ್ರೆಗಳನ್ನೆ ಇಟ್ಟುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ವೈದ್ಯಾಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ತಾಲೂಕು ಅಧಿಕಾರಿಗಳ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಲಕ್ಷಾಂತರ ರೂ. ವೆಚ್ಚ ಮಾಡಿ ಆಸ್ಪತ್ರೆ ಕಟ್ಟಡ ಕಟ್ಟಿದರೂ ಸಹ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಹಾಳು ಬಿದ್ದಿದೆ. ಈ ಕುರಿತು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರವಾಗಿದೆ.