Tag: villagers

  • 20 ವರ್ಷದಿಂದ ಬರಿದಾಗಿದ್ದ ಕೆರೆಗೆ ಬಂತು ನೀರು – ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ

    20 ವರ್ಷದಿಂದ ಬರಿದಾಗಿದ್ದ ಕೆರೆಗೆ ಬಂತು ನೀರು – ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ

    ಹಾವೇರಿ: 20 ವರ್ಷಗಳಿಂದ ಬರಿದಾಗಿದ್ದ ಕೆರೆಗೆ ನೀರು ತುಂಬಿಸಿದ್ದಕ್ಕೆ ಹಾವೇರಿ ಶಾಸಕ ನೆಹರು ಓಲೇಕಾರ ಅವರನ್ನು ಗ್ರಾಮಸ್ಥರು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ.

    ಕಳೆದ 20 ವರ್ಷಗಳಿಂದ ಕನವಳ್ಳಿ ಗ್ರಾಮದ ಕೆರೆಯಲ್ಲಿ ನೀರು ಕಾಣದೆ ಗ್ರಾಮಸ್ಥರು ಕಂಗಾಲಾಗಿದ್ದರು. ಆದರೆ ಈ ಸಮಸ್ಯೆಗೆ ಶಾಸಕ ನೆಹರು ಓಲೇಕಾರ ಪರಿಹಾರ ನೀಡಿದ್ದು, ಕೆರೆಗೆ ನೀರು ತುಂಬಿಸಿ ಜನರಿಗೆ ನೆರವಾಗಿದ್ದಾರೆ. ಹೀಗಾಗಿ ತಮ್ಮ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಶಾಸಕರಿಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಆನೆ ಮೇಲೆ ಶಾಸಕರನ್ನು ಕೂರಿಸಿ ಮೆರವಣಿಗೆ ಮಾಡಿ ಗೌರವಿಸಿದ್ದಾರೆ.

    ಕೆರೆಗೆ ನೀರು ತುಂಬಿಸುವ ಯೋಜನೆಗೆ ಇಂದು ಓಲೇಕಾರ ಅವರು ಚಾಲನೆ ಕೊಟ್ಟಿದ್ದಾರೆ. ಪೈಪ್ ಲೈನ್ ಮೂಲಕ ಕೆರಗೆ ನೀರು ಹರಿಸಲು ಸಹಕಾರ ನೀಡಿದ್ದಾರೆ. ಇದರಿಂದ ಇಷ್ಟು ದಿನ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದ್ದು, ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

    ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

    ಹೈದರಾಬಾದ್: ಕೂಲಿ ಕಾರ್ಮಿಕನೊಬ್ಬನನ್ನು ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಖದೀಮ ಎಂದು ಭಾವಿಸಿ ಗ್ರಾಮಸ್ಥರು ಮನಬಂದಂತೆ ಹೊಡೆದು ಜೀವ ತೆಗೆದ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಧರ್ಮರಾಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕ ಗಂಗಾಧರ್(25) ಮೃತ ದುರ್ದೈವಿ. ಅರ್ಸಪಲ್ಲಿ ಮೂಲದ ಗಂಗಾಧರ್ ಕಟ್ಟಡ ನಿರ್ಮಾಣ ಮಾಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಧರ್ಮರಾಮ್ ಗ್ರಾಮದಲ್ಲಿ ಕಟ್ಟುತ್ತಿದ್ದ ಕಟ್ಟಡವೊಂದರಲ್ಲಿ ಕೂಲಿ ಮಾಡುತ್ತ ಆ ಗ್ರಾಮದಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದನು. ಮಂಗಳವಾರ ಬೆಳಗ್ಗೆ ಗಂಗಾಧರ್ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟ್ಟಿದ್ದನು. ಆದರೆ ಮಾರ್ಗ ಮಧ್ಯೆ ಆತನನ್ನು ಧರ್ಮರಾಮ್ ಗ್ರಾಮಸ್ಥರು ತಡೆದು, ಸ್ಥಳೀಯ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ನೀನೇ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದೀಯ ಎಂದು ಗಂಗಾಧರ್ ನನ್ನು ಮನಬಂದಂತೆ ಬೈದು, ಹೊಡೆಯಲು ಆರಂಭಿಸಿದ್ದಾರೆ.

    ಗ್ರಾಮಸ್ಥರ ಥಳಿತಕ್ಕೆ ಗಂಭೀರ ಗಾಯಗೊಂಡಿದ್ದ ಆತನನ್ನು ಕೆಲವರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಗಂಗಾಧರ್ ಸಾವನ್ನಪ್ಪಿದ್ದನು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಆತನ ಮೃತದೇಹವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಸಂಬಂಧ ಮೃತ ಕೂಲಿ ಕಾರ್ಮಿಕನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನಾಮಧೇಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 202ನೇ ವಿಧಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಕೋಣಕ್ಕಾಗಿ ದಾವಣಗೆರೆ, ಶಿವಮೊಗ್ಗದ 2 ಊರುಗಳ ನಡುವೆ ಕಿತ್ತಾಟ

    ಕೋಣಕ್ಕಾಗಿ ದಾವಣಗೆರೆ, ಶಿವಮೊಗ್ಗದ 2 ಊರುಗಳ ನಡುವೆ ಕಿತ್ತಾಟ

    ದಾವಣಗೆರೆ: ದೇವರ ಕೋಣಕ್ಕಾಗಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಎರಡು ಊರುಗಳ ನಡುವೆ ಕಿತ್ತಾಟ ನಡೆದಿದೆ.

    7 ವರ್ಷದ ಹಿಂದೆ ಮಾರಿಕಾಂಬಾ ದೇವಿಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು ಕೋಣವನ್ನು ಬಿಟ್ಟಿದ್ದರು. ಗ್ರಾಮದಲ್ಲೇ ಓಡಾಡಿಕೊಂಡಿದ್ದ ಕೋಣ ಚೆನ್ನಾಗಿ ಬೆಳೆದಿತ್ತು. ಆದರೆ ಕಳೆದ ಮೂರು ದಿನಗಳ ಹಿಂದೆ ಗ್ರಾಮದಲ್ಲಿದ್ದ ಕೋಣ ಏಕಾಏಕಿ ಕಾಣೆಯಾಗಿತ್ತು. ಕೋಣ ಕಾಣೆಯಾದ ಕಾರಣ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು.

    ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ಕೋಣ ಮೂರು ದಿನಗಳ ಬಳಿಕ ಶಿವಮೊಗ್ಗ ಜಿಲ್ಲೆಯ ಹಾರ್ನಳ್ಳಿಯಲ್ಲಿ ಪತ್ತೆ ಆಗಿದೆ. ಕೋಣವನ್ನು ಕಂಡ ಮಲ್ಲೂರು ಗ್ರಾಮಸ್ಥರು ಈ ಕೋಣ ತಮ್ಮ ದೇವರಿಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಈ ನಡುವೆ ಕೋಣ ನಮ್ಮದು ಎಂದು ಎರಡೂ ಗ್ರಾಮಸ್ಥರ ನಡುವೆ ಗಲಾಟೆಯಾಗಿದೆ. ಸದ್ಯ ಈ ಪ್ರಕರಣ ಹೊನ್ನಾಳಿ ಠಾಣೆ ಮೆಟ್ಟಿಲೇರಿದೆ.

  • ರೌಡಿ ಶೀಟರ್​​ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು

    ರೌಡಿ ಶೀಟರ್​​ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು

    ಬೀದರ್: ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಗ್ರಾಮಸ್ಥರೇ ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಸಿರಗೂರ ಗ್ರಾಮದಲ್ಲಿ ನಡೆದಿದೆ.

    ಬಟಗೇರಾವಾಡಿ ಗ್ರಾಮದ ಬಸವರಾಜ ಹಣಮಂತ ಚಂಡಕಾಳೆ (38) ಕೊಲೆಯಾದ ರೌಡಿ ಶೀಟರ್. ಕೊಲೆಯಾದ ರೌಡಿ ಶೀಟರ್ ಬಸವರಾಜ ಬಿಎಸ್‍ಎಫ್‍ನಲ್ಲಿ ಸುಮಾರು 10 ವರ್ಷಗಳಿಗೂ ಅಧಿಕ ಕಾಲ ಸೇವೆಸಲ್ಲಿಸಿದ್ದ. ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಸಿರಗೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಅದ್ಧೂರಿಯಾಗಿ ದೇವಿ ಮೆರವಣಿಗೆ ನಡೆದಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಜಗಳವಾಗಿತ್ತು. ಆದರೆ ಗ್ರಾಮದ ಹಿರಿಯರು ಸೇರಿ ಅದನ್ನು ಬಗೆ ಹರಿಸಿದ್ದರು. ಆದರೆ ಸೋಮವಾರ ಸಂಜೆ ಮತ್ತೆ ಎರಡೂ ಗುಂಪುಗಳ ಮಧ್ಯೆ ಗಲಾಟೆ ಆರಂಭವಾಗಿತ್ತು. ರೌಡಿ ಶೀಟರ್ ಬಸವರಾಜ್ ಒಂದು ಗುಂಪಿನ ಪರ ವಹಿಸಿಕೊಂಡು ತನ್ನ ಸಹಚರರೊಂದಿಗೆ ಸಿರಗೂರ ಗ್ರಾಮಕ್ಕೆ ಆಗಮಿಸಿದ್ದ.

    ಬಸವರಾಜ್ ಎದುರಾಳಿ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಸಿರಗೂರ ಗ್ರಾಮಸ್ಥರು ಬಸವರಾಜ್‍ಗೆ ಕಲ್ಲುಗಳಿಂದ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರೌಡಿ ಶೀಟರ್ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಂಠಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯವಾಗಿದ್ದು, ಅವರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ

    ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ

    ಹಾಸನ: ಒಂದೆಡೆ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇತ್ತ ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ ನೋಡಿ ಗ್ರಾಮಸ್ಥರು ದಂಗಾಗಿದ್ದಾರೆ.

    ಹೌದು. ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ರಸ್ತೆಗಳಲ್ಲಿ ಗಂಭೀರ ಹೆಜ್ಜೆ ಹಾಕಿ ಜನರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮದ ಒಂದು ತುದಿಯಿಂದ ಪ್ರವೇಶಿಸಿದ ಕಾಡಾನೆ, ಊರ ತುಂಬೆಲ್ಲಾ ಸುತ್ತು ಹಾಕಿ ಕಾಫಿ ತೋಟಕ್ಕೆ ಪ್ರವೇಶಿಸಿದೆ. ಗ್ರಾಮದಲ್ಲಿ ಪ್ರತ್ಯೇಕ್ಷವಾದ ಆನೆ ಕಂಡು ಜನರು ಭಯಗೊಂಡಿದ್ದು, ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಅಲ್ಲದೆ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.

    ಗ್ರಾಮದಲ್ಲಿ ರಾಜಾರೋಷವಾಗಿ ಆನೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆನೆ ಆರಾಮಾಗಿ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು, ಜನರು ಗ್ರಾಮಕ್ಕೆ ಎಂಟ್ರಿ ಕೊಟ್ಟ ಗಜರಾಜನನ್ನು ನೋಡಿ ಗಾಬರಿಗೊಂಡು ಓಡುತ್ತಿರುವ ದೃಶ್ಯಗಳು ಸೆರೆಯಾಗಿದೆ.

  • ಬೆಂಗಳೂರಿನ ಮಗ, ಸೊಸೆ ಹೊರ ಹಾಕಿದ್ದ ಅಜ್ಜಿಯನ್ನು ರಕ್ಷಿಸಿದ ಗ್ರಾಮಸ್ಥರು

    ಬೆಂಗಳೂರಿನ ಮಗ, ಸೊಸೆ ಹೊರ ಹಾಕಿದ್ದ ಅಜ್ಜಿಯನ್ನು ರಕ್ಷಿಸಿದ ಗ್ರಾಮಸ್ಥರು

    ತುಮಕೂರು: ಮಗ ಮತ್ತು ಸೊಸೆಯ ಕಾಟ ತಾಳಲಾರದೆ ಮನೆ ಬಿಟ್ಟು ಬಂದು ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಅಜ್ಜಿಯನ್ನು ಜಿಲ್ಲೆಯ ಐಡಿ ಹಳ್ಳಿ ಗ್ರಾಮಸ್ಥರು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಗ್ರಾಮಸ್ಥರು ವೃದ್ಧೆಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಬಿಟ್ಟಿದ್ದಾರೆ. ಬೆಂಗಳೂರಿನ ಹಾರೋಹಳ್ಳಿಯಿಂದ ಮನೆ ಬಿಟ್ಟು ಬಂದ ವೃದ್ಧೆ ಐಡಿಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಓಡಾಡಿಕೊಂಡಿದ್ದಳು.

    ಅಜ್ಜಿಯನ್ನು ಕಂಡು ಹಲವು ಯುವಕರು ಯಾರೋ ಭಿಕ್ಷುಕರು ಬಂದಿರಬೇಕು ಎಂದು ಸುಮ್ಮನಾಗಿದ್ದಾರೆ. ಅಜ್ಜಿ ಕುಸಿದು ಬಿದ್ದಾಗ ಅವರನ್ನು ರಕ್ಷಿಸಿ ಊಟ ಮಾಡಿಸಿ ನಂತರ ಅವರ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಅಜ್ಜಿ ತಮ್ಮ ಮಗ ಹಾಗೂ ಸೊಸೆಯ ಕುರಿತು ವಿವರಿಸಿದ್ದಾರೆ.

    ಆಗ ಗ್ರಾಮಸ್ಥರಿಗೆ ನಿಜಾಂಶ ಗೊತ್ತಾಗಿದ್ದು, ಮಗ ಸೊಸೆಯ ಕಾಟ ತಾಳಲಾರದೆ ಮನೆ ಬಿಟ್ಟು ಬಂದಿದ್ದಾರೆ ಎಂದು ತಿಳಿದಿದೆ. ಅಜ್ಜಿ ಬೆಂಗಳೂರಿನ ಹಾರೋಹಳ್ಳಿಯ ಶಾಂತಮ್ಮ ಎಂದು ತಿಳಿದು ಬಂದಿದ್ದು, ನಂತರ ಮನೆಗೆ ಸೇರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಆಗ ಮಗ ಸೊಸೆ ನನ್ನನ್ನು ಹೊಡೆಯುತ್ತಾರೆ ನಾನು ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ನಂತರ ಗ್ರಾಮಸ್ಥರೆಲ್ಲ ಸೇರಿ ತುಮಕೂರಿನ ಶಾರದಾಂಬಾ ವೃದ್ಧಾಶ್ರಮದ ಅಧ್ಯಕ್ಷೆ ಯಶೋಧ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನೆರವಿಗೆ ಬಂದ ಸಂಸ್ಥೆಯ ಅಧ್ಯಕ್ಷೆ ಯಶೋಧ ಅಜ್ಜಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ.

  • ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿ: ಮಹಾತ್ಮ ಗಾಂಧಿ ಹೆಸರಿನ ವೃತ್ತಗಳು, ಭವನಗಳು, ರಸ್ತೆಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಗ್ರಾಮದಲ್ಲಿ ಜನ ಮಹಾತ್ಮ ಗಾಂಧಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ್ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ದೇವಸ್ಥಾನವಿದೆ. ಕೇವಲ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮಾತ್ರವಲ್ಲ, ದಿನ ನಿತ್ಯ ಬಾಪೂಜಿಗೆ ಗ್ರಾಮಸ್ಥರು ಪೂಜೆ ಮಾಡಿ ಮಹಾತ್ಮನನ್ನು ಸ್ಮರಿಸುತ್ತಾರೆ.

    ಬಲಶೆಟ್ಟಿಹಾಳ ಗ್ರಾಮಸ್ಥರು ಗಾಂಧೀಜಿ ಮೇಲಿನ ಅಭಿಮಾನದಿಂದ ಸ್ವಾತಂತ್ರ್ಯಾನಂತರ 1948ರಲ್ಲಿ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿನ ಆದರ್ಶ ಶಿಕ್ಷಕ ದಿ.ಹಂಪಣ್ಣ ಸಾಹುಕಾರ್ ಎನ್ನುವವರು, ಸ್ವತಃ ಗಾಂಧೀಜಿ ಅವರ ಪುತ್ಥಳಿ ತಯಾರಿಸಿ, ದೇವಸ್ಥಾನ ನಿರ್ಮಿಸಿದ್ದಾರಂತೆ. ಅಂದಿನಿಂದ ಇಂದಿನವರೆಗೆ ಇಲ್ಲಿನ ಗ್ರಾಮಸ್ಥರು ಗಾಂಧೀಜಿಯವರ ಈ ಪುತ್ಥಳಿಗೆ ದೇವತಾ ಸ್ಥಾನಮಾನ ನೀಡಿ, ಇತರೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಈ ದೇವಸ್ಥಾನದಲ್ಲೂ ಸುಮಾರು 70 ವರ್ಷಗಳಿಂದ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ.

    ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿಯೇ ಗಾಂಧಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶಾಲಾ ಮಕ್ಕಳು ದಿನ ಮಹಾತ್ಮ ಗಾಂಧಿಜೀಯವರ ಮೂರ್ತಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ಪುಷ್ಪಾಲಂಕಾರಗಳಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ. ಅಲ್ಲದೆ ಈ ಗ್ರಾಮದ ಯಾವುದೇ ಸಮಸ್ಯೆಗಳನ್ನು ಮತ್ತು ನ್ಯಾಯ ಪಂಚಾಯತಿಗಳನ್ನು, ಇದೇ ಗಾಂಧಿ ದೇವಸ್ಥಾನದ ಕಟ್ಟೆಯಲ್ಲೇ ಇಲ್ಲಿನ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತಾರೆ. ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ಇಲ್ಲಿ ನಡೆಯುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಅಹಿಂಸೆಯ ಮೂಲಕ ರಕ್ಷಿಸಿದ ಮಹಾತ್ಮ ಗಾಂಧೀಜಿಯವರನ್ನು ದೇವರ ಸ್ಥಾನದಲ್ಲಿಟ್ಟು, ದೇವಾಲಯ ಕಟ್ಟಿ ಎಲ್ಲ ದೇವರಿಗೆ ಪೂಜಿಸುವಂತೆ, ನಿತ್ಯ ಪೂಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಸರಗಳ್ಳತನಕ್ಕೆ ಯತ್ನಿಸಿದವನಿಗೆ ಗೂಸಾ

    ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಸರಗಳ್ಳತನಕ್ಕೆ ಯತ್ನಿಸಿದವನಿಗೆ ಗೂಸಾ

    ಚಿಕ್ಕಬಳ್ಳಾಪುರ: ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಸರಗಳ್ಳತನಕ್ಕೆ ಯತ್ನಿಸಿದ ಸರಗಳ್ಳನನ್ನು ಹಿಡಿದು ಗ್ರಾಮಸ್ಥರು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದಲ್ಲಿ ನಡೆದಿದೆ.

    ಸೈಯದ್ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ. ಗ್ರಾಮದ ಸುನಂದಮ್ಮ ಎಂಬವರು ಕಸ ಹಾಕಲು ತಿಪ್ಪೆ ಬಳಿ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ಬೆಂಗಳೂರು ಮೂಲದ ಸೈಯದ್ ಸರಗಳವಿಗೆ ಯತ್ನಿಸಿದ್ದನು.

    ಈ ವೇಳೆ ಮಹಿಳೆಯ ಅರಚಾಟ ಕಿರುಚಾಟ ಕೇಳಿದ ಗ್ರಾಮಸ್ಥರು ಸರಗಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದ ಸುನಂದಮ್ಮ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಸದ್ಯ ಸರಗಳ್ಳನನ್ನು ವಶಕ್ಕೆ ಪಡೆದ ಚಿಂತಾಮಣಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

    ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

    – 500 ರೂ. ಇದೆ ನಾಲ್ಕು ದಿನ ಜೀವನ ನಡೆಸ್ತೇವೆ

    ರಾಯಚೂರು: ಮಳೆಯಿಂದ ಹಾನಿಯಾದರೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ, ಇಲ್ಲಿಗೆ ಬಂದು ಏನು ಮಾಡುತ್ತೀರಿ, ಯಡಿಯೂರಪ್ಪನವರೇ ನೀವು ಇಲ್ಲಿಗೆ ಬರಬೇಡಿ ಎಂದು ಸಂತ್ರಸ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದ ಗ್ರಾಮಸ್ಥರು ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ. ನಾವಿನ್ನೂ ಸತ್ತಿಲ್ಲ, ಬದುಕಿದ್ದೇವೆ. ಮನೆಯಲ್ಲಿ ಅಕ್ಕಿ, ಜೋಳ ಇವೆ ಖರ್ಚಿಗೆ 500ರೂ. ಇದೆ. ಇನ್ನೂ ನಾಲ್ಕು ದಿನ ಮಳೆ ಬಂದರೂ ನಮಗೆ ಏನೂ ಆಗುವುದಿಲ್ಲ ತಲೆಕೆಡಿಸಿಕೊಳ್ಳಬೇಡಿ. ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೀರಿ ಅಧಿಕಾರ ನಡೆಸಿ, ಇಲ್ಲಿಗೆ ಬರಲು ಹೋಗಬೇಡಿ, ನಾವು ಹೇಗಾದರೂ ಹಾಳಾಗಿ ಹೋಗಲಿ, ನೀವು ಮಾತ್ರ ಇಲ್ಲಿಗೆ ಬರಬೇಡಿ. ಇನ್ನೂ ನಾಲ್ಕು ದಿನ ಮಳೆ ಬಂದರೂ ಏನೂ ಆಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

    ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಜಲಾವೃತಗೊಂಡಿವೆ. ಯಾಪಲದಿನ್ನಿ ಸೋಲಾರ್ ಪ್ಲಾಂಟ್ ಬಳಿ ರಸ್ತೆ ಬಂದ್ ಆಗಿದೆ. ಜಮೀನಿಗೆ ನೀರು ನುಗ್ಗಿದೆ, ರೈತರು ಸಂಕಷ್ಟದಲ್ಲಿದ್ದಾರೆ ಹೀಗಿದ್ದರೂ ಸಹ ಸರ್ಕಾರದಿಂದ ಒಂದು ರೂಪಾಯಿ ಬಿಡಿಗಾಸೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಇತ್ತ ತಿರುಗಿ ಸಹ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಭಾರೀ ಮಳೆಗೆ ಇಷ್ಟೆಲ್ಲಾ ಹಾನಿಯಾದರೂ ಸಂತ್ರಸ್ತರಿಗೆ ಈವರೆಗೆ ಏನೂ ಕೊಟ್ಟಿಲ್ಲ, ಇನ್ನೂ ನಮಗೇನು ಕೊಡುತ್ತೀರಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ನಿಮ್ಮ ಕೈಯ್ಯಲ್ಲಿ ಆಗಿಲ್ಲ. ಹೀಗಾಗಿ ನಮ್ಮ ಬಳಿಗೂ ಬರಬೇಡಿ, ನಾವು ಹೇಗೋ ಬದುಕುತ್ತೇವೆ ಎಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಗ್ರಾಮಸ್ಥರ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

  • ರಾತ್ರಿ ಸುರಿದ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

    ರಾತ್ರಿ ಸುರಿದ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

    ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ನಿರಂತರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.

    ಕೊಪ್ಪಳದ ಕುವೆಂಪು ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ ಧಾನ್ಯಗಳು ನೀರಿಗಾಹುತಿಯಾಗಿದೆ. ರಾತ್ರಿ ಇಡೀ ನೀರಿನಲ್ಲೇ ಇದ್ದ ಜನರು, ಮನೆಗಳಿಂದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಮಳೆ ಬಂದರೆ ಪ್ರದೇಶದಲ್ಲಿ ನೀರು ತುಂಬುತ್ತದೆ ಎಂದು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.

    ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿದು ಬಂದಿದೆ. ಇದೇ ಮೊದಲ ಬಾರಿಗೆ ಸೇತುವೆ ಮೇಲೆ ನೀರು ಬಂದಿದ್ದು, ಲಕ್ಷ್ಮೀ ಕ್ಯಾಂಪ್- ಗುಂಡೂರು ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದರು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಗುಂಡೂರು ಗ್ರಾಮಸ್ಥರು ನಿರಾಳರಾಗಿದ್ದಾರೆ. ಯಾಕೆಂದರೆ ಈ ಮೊದಲು ಗ್ರಾಮದ ಹಳ್ಳ ತುಂಬಿದರೆ ಗ್ರಾಮಕ್ಕೆ ನೀರು ನುಗ್ಗುತ್ತಿತ್ತು. ಆದರೆ ಸೇತುವೆ ನಿರ್ಮಾಣದಿಂದ ಹಳ್ಳ ನೀರು ಗ್ರಾಮಕ್ಕೆ ನುಗ್ಗದೆ ಸರಾಗವಾಗಿ ಹರಿಯುತ್ತಿದೆ. ಆದ್ದರಿಂದ ತುಂಬಿದ ಹಳ್ಳ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.