Tag: villagers

  • 16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

    16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

    ಕೋಲಾರ: ಗ್ರಾಮದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಸರಣಿ ನಿಗೂಢ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.

    ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಮಕಲಹಳ್ಳಿಯಲ್ಲಿ 16 ದಿನದಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಜನರೇ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಸಣ್ಣ-ಪುಟ್ಟ ಕಾಯಿಲೆ ನೆಪ ಹೇಳಿಕೊಂಡು ಆಸ್ಪತ್ರೆಗಳಿಗೆ ಹೋಗುವ ಮುನ್ನವೇ ಜನರು ಸಾವನ್ನಪ್ಪುತ್ತಿದ್ದಾರೆ.

    ಮುಳಬಾಗಿಲು ತಾಲೂಕಿನಲ್ಲಿ ಚಮಕಲಹಳ್ಳಿಯ ನಿವಾಸಿ ನಿಸ್ಸಾರ್ (38), ಖಾದರ್ (46), ಶಹೀದಾ (23), ಅಕ್ಬರ್ ಬೇಗ್ (40), ಮಂಜುನಾಥ್ (28), ಹೈದರ್ (90), ಅಮೀನ್ ತಾಜ್ (95), ಖಾದರ್ ಪಾಷಾ (65), ನಜೀಬ್ (68), ನವಾಜ್ ಬೇಗ್ (52), ಫಯಾಜ್ (37) ಮೃತ ದುರ್ದೈವಿಗಳು. ಈ ಪೈಕಿ ಕೆಲವರು ಹೊಟ್ಟೆನೋವು ಬಂದು ಪ್ರಾಣಬಿಟ್ಟರೆ, ಮತ್ತೆ ಕೆಲವರು ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇಬ್ಬರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

    ಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಸರಣಿ ಸಾವಿನಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಯಾವಾಗ ಯಾರ ಮನೆಯಲ್ಲಿ ಸಾವು ಸಂಭವಿಸುತ್ತದೆಯೋ ಎನ್ನುವ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಗೆ ಹೋಗಲು ಚಮಕಲಹಳ್ಳಿಯ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಚಮಕಲಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರ ಕ್ಷೇತ್ರವಾದ ಚಮಕಲಹಳ್ಳಿ ಗ್ರಾಮದಲ್ಲಿ ಸುಮಾರು 800 ಮನೆಗಳಿವೆ. ಅಲ್ಪಸಂಖ್ಯಾತರೆ ಹೆಚ್ಚಿರುವ ಈ ಗ್ರಾಮದಲ್ಲಿ, ಮೃತಪಟ್ಟವರಲ್ಲಿ ಹೆಚ್ಚಿನ ಜನರು ಕೂಡ ಮುಸ್ಲಿಂ ಸಮುದಾಯದವರೇ ಆಗಿದ್ದಾರೆ.

    ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಅಥವಾ ಬೇರೆ ಯಾವುದೋ ಸಾಂಕ್ರಾಮಿಕ ರೋಗದಿಂದ ಸಾವು ಸಂಭವಿಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿಲ್ಲ. ಈ ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಸೇರಿದಂತೆ ವೈದ್ಯರ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಗ್ರಾಮದಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣ ಇರುವವರ ರಕ್ತ ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಜೊತೆಗೆ ನಾಳೆಯಿಂದ ಗ್ರಾಮದಲ್ಲಿ ವೈದ್ಯರ ತಂಡ ಕಳಿಸಿ ಸಂಪೂರ್ಣ ಪರೀಕ್ಷೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

  • ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    – 8ರಿಂದ 10 ಮಂದಿ ಮೇಲೆ ದಾಳಿ

    ಬೀದರ್: ದರೋಡೆಕೋರರಿಗೆ ಹೆದರಿ ಜನರು ಮನೆಯಿಂದ ಹೊರಗೆ ಬಾರದ ಪ್ರಕರಣ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಬೀದರ್‌ನ ಗ್ರಾಮವೊಂದರಲ್ಲಿ ಮಂಗಗಳಿಗೆ ಹೆದರಿ ಗ್ರಾಮಸ್ಥರು ಮನೆಯಲ್ಲಿ ಕೂರುವಂತ ಸ್ಥಿತಿ ನಿರ್ಮಾಣವಾಗಿದೆ.

    ಹೌದು ಜಿಲ್ಲೆಯ ಭಾಲ್ಕಿ ತಾಲೂಕಿನ ಜವಳಗಾ ಗ್ರಾಮಸ್ಥರು ಮಂಗಗಳ ಹಾವಳಿಗೆ ಹೆದರಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸುಮಾರು 2 ತಿಂಗಳಲ್ಲಿ ಗ್ರಾಮದ 8 ರಿಂದ 10 ಮಂದಿ ಮೇಲೆ ಮಂಗಗಳು ಕಚ್ಚಿ, ದಾಳಿ ನಡೆಸಿವೆ. ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಕಾರಣವಿಲ್ಲದೆ ಮಂಗಗಳು ದಾಳಿ ಮಾಡುತ್ತಿವೆ. ಜನರನ್ನು ಕಂಡರೆ ಸಾಕು ಅವರ ಮೇಲೆ ಎಗರಿ, ಕಚ್ಚಿ ಗಾಯಗೊಳಿಸುತ್ತಿವೆ. ಆದ್ದರಿಂದ ಮಂಗಗಳು ಯಾವಾಗ? ಯಾರ ಮೇಲೆ ದಾಳಿ ಮಾಡುತ್ತವೋ ಎನ್ನುವ ಭಯದಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.

    ಈ ಗ್ರಾಮದ ಜನರು ವಾನರ ಸೈನ್ಯದ ದಾಳಿಗೆ ಹೆದರಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಂಗಗಳು ಹಿಂಡು ಹಿಂಡಾಗಿ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದು, ಗಾಯಗಳಿಗೆ 15-20 ಹೊಲಿಗೆಗಳು ಹಾಕುವ ರೀತಿ ತೀವ್ರವಾಗಿ ಮಂಗಗಳು ಜನರನ್ನು ಗಾಸಿಗೊಳಿಸುತ್ತಿದೆ. ದರೋಡೆಕೋರು ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡುವ ರೀತಿ ಮಂಗಗಳು ಜನರ ಮೇಲೆ ದಾಳಿ ಮಾಡುತ್ತಿವೆ.

    ಸತತ ಎರಡು ತಿಂಗಳಿನಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರ ಮೇಲೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಂಡು ಮಂಗಗಳ ಕಾಟದಿಂದ ಮುಕ್ತಿಗೊಳಿಸಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

  • ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಬೆಂಗಳೂರು: ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಎಸ್‍ಪಿ ರವಿ ಡಿ ಚನ್ನಣ್ಣನವರ್ ಗ್ರಾಮ ಸಭೆ ಮಾಡಿ ಅದೇ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ಇಂತಹ ಜನಸ್ನೇಹಿ ಪ್ರಯತ್ನ ಮಾಡಿದೆ.

    ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು.

    ಪೊಲೀಸ್ ಸೇವೆಗಳು ಜನರಿಗೆ ಹತ್ತಿರವಾಗಲೂ ಹೊಸ ಪ್ರಯೋಗ ಹಾಗೂ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಮೂಡಿಸುವ ಜೊತೆಗೆ ಜನರಿಗೆ ಪೊಲೀಸರ ವ್ಯವಸ್ಥೆ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಪೊಲೀಸರೊಂದಿಗೆ ಗ್ರಾಮಸ್ಥರು, ನೆಲಮಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿದ್ದಾರೆ.

  • 6 ಅಡಿ ವಿಷ ಸರ್ಪದ ಜೊತೆ ವ್ಯಕ್ತಿಯ ಹುಡುಗಾಟ

    6 ಅಡಿ ವಿಷ ಸರ್ಪದ ಜೊತೆ ವ್ಯಕ್ತಿಯ ಹುಡುಗಾಟ

    ಯಾದಗಿರಿ: ಹಾವು ಕಂಡ ತಕ್ಷಣ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಆರು ಅಡಿ ವಿಷ ಸರ್ಪದ ಜೊತೆ ಹುಡುಗಾಟವಾಡಿದ್ದಾನೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮನೆಯೊಂದರಲ್ಲಿ ಏಕಾಏಕಿ ಕ್ಯಾರೆ ಹಾವೊಂದು ಕಾಣಿಸಿಕೊಂಡು ಮನೆಯವರನ್ನು ಮಾತ್ರವಲ್ಲದೆ ಅಕ್ಕಪಕ್ಕದ ಮನೆಯವರನ್ನು ಸಹ ಕೆಲ ಹೊತ್ತು ಭಯಪಡಿಸಿತ್ತು.

    ಈ ವೇಳೆ ಅದೇ ಗ್ರಾಮದ ರೇಣುಕಪ್ಪ ಎಂಬವರು ಜೀವ ಭಯ ತೊರೆದು ಹಾವುವನ್ನು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಅರ್ಧ ಗಂಟೆ ಹೆಚ್ಚು ಕಾಲ ಹಾವಿನ ಜೊತೆ ರೇಣುಕಪ್ಪ ಹುಡುಗಾಟ ಸಹವಾಡಿದ್ದಾನೆ. ಇದರಿಂದ ಭಯಬೀತರಾದ ಗ್ರಾಮಸ್ಥರು ರೇಣುಕಪ್ಪನಿಗೆ ಬುದ್ಧಿ ಹೇಳಿ ಹಾವನ್ನು ಕಾಡಿನಲ್ಲಿ ಬಿಡಲು ಹೇಳಿದ್ದಾರೆ.

    ರೇಣುಕಪ್ಪ ಹಾವನ್ನು ಹಿಡಿದು ಹುಡುಗಾಟ ಆಡಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.

  • ವಿಚಿತ್ರ ಶಬ್ದಕ್ಕೆ ಬೆಚ್ಚಿ ಬಿದ್ದ ಜನ – ಮತ್ತೆ ಜಲಸ್ಫೋಟದ ಆತಂಕ

    ವಿಚಿತ್ರ ಶಬ್ದಕ್ಕೆ ಬೆಚ್ಚಿ ಬಿದ್ದ ಜನ – ಮತ್ತೆ ಜಲಸ್ಫೋಟದ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯ ಪೇರೂರಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ದ ಕೇಳಿ ಬರುತ್ತಿದೆ. ಭೂಮಿಯೊಳಗಿನಿಂದ ನದಿಯಲ್ಲಿ ನೀರು ಹರಿಯುವಂತಹ ಶಬ್ದ ಕೇಳುತ್ತಿದ್ದು, ಈ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.

    ಮಡಿಕೇರಿ ತಾಲೂಕಿನ ಪೇರೂರಿನಲ್ಲಿರುವ ಕೊಡಗಿನ ಕುಲದೇವರು ಇಗ್ಗುತ್ತಪ್ಪ ಬೆಟ್ಟದಲ್ಲಿ ಈ ಶಬ್ದ ಕೇಳಿ ಬರುತ್ತಿದೆ. ಭಾರೀ ಪ್ರಮಾಣದ ಈ ಬೆಟ್ಟದ ತಪ್ಪಲಿನಲ್ಲಿ 20 ಕುಟುಂಬಗಳಿದ್ದು, ಆಕಸ್ಮಾತ್ ಜಲಸ್ಫೋಟವಾಗಿ ಬೆಟ್ಟ ಕುಸಿದಲ್ಲಿ ಭಾರೀ ಅನಾಹುತವೇ ನಡೆಯಲಿದೆ. ಹೀಗಾಗಿ ಏನಾಗುವುದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

    ಕಳೆದ ಹಲವು ದಿನಗಳಿಂದಲೂ ಈ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಮೂರು ದಿನಗಳಿಂದ ಆ ಶಬ್ದ ಮತ್ತಷ್ಟು ಜೋರಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲೂ ಒಂದು ವಾರದ ಹಿಂದೆಯಷ್ಟೇ ನಿಗೂಢ ಶಬ್ದ ಕೇಳಿ ಬಂದಿತ್ತು.

    ಆಗಸ್ಟ್ ತಿಂಗಳಲ್ಲಿ ಮಳೆ ಸುರಿದಾಗ ಈ ಇಗ್ಗುತ್ತಪ್ಪ ದೇವಾಲಯದ ಸಮೀಪದಲ್ಲಿ ಬೆಟ್ಟ ಕುಸಿದಿತ್ತು. ಇದೀಗ ಭೂಮಿಯೊಳಗೆ ನದಿ ಹರಿಯುತ್ತಿರುವ ಶಬ್ದ ಕೇಳುತ್ತಿರುವುದರಿಂದ ಅನಾಹುತ ಸಂಭವಿಸುವುದಾ ಎನ್ನುವ ತೀವ್ರ ಆತಂಕ ಜನರಲ್ಲಿ ಕಾಡತೊಡಗಿದೆ.

    2018ರಲ್ಲೂ ಮಡಿಕೇರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಆದಂತಹ ಭೂಕುಸಿತಕ್ಕೂ ಮೊದಲು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು. ಬಳಿಕ 7 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 37 ಗ್ರಾಮಗಳಲ್ಲಿ ಜಲಸ್ಫೋಟ ಸಂಭವಿಸಿತ್ತು. ಕಳೆದ ರಾತ್ರಿಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಘಟಪ್ರಭಾ ಪ್ರವಾಹಕ್ಕೆ ನಲುಗಿದ ಬಾಗಲಕೋಟೆ – ಮನೆಗಳಿಲ್ಲದೇ ಡವಳೇಶ್ವರ ಗ್ರಾಮಸ್ಥರ ಪರದಾಟ

    ಘಟಪ್ರಭಾ ಪ್ರವಾಹಕ್ಕೆ ನಲುಗಿದ ಬಾಗಲಕೋಟೆ – ಮನೆಗಳಿಲ್ಲದೇ ಡವಳೇಶ್ವರ ಗ್ರಾಮಸ್ಥರ ಪರದಾಟ

    ಬಾಗಲಕೋಟೆ: ಘಟಪ್ರಭಾ ಪ್ರವಾಹಕ್ಕೆ ಬಾಗಲಕೋಟೆ ನಲುಗಿ ಹೋಗಿದ್ದು, ಮನೆಗಳಿಲ್ಲದೇ ಡವಳೇಶ್ವರ ಗ್ರಾಮಸ್ಥರು ಪರದಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮ ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ನಲುಗಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿ ಅನೇಕ ಗ್ರಾಮಸ್ಥರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಘಟಪ್ರಭಾ ನದಿ ಪ್ರವಾಹ ಮಾಡಿರುವ ಹಾನಿಯಂತೂ ಹೇಳತೀರದು. ಇದರಲ್ಲಿ ಡವಳೇಶ್ವರ ಗ್ರಾಮವೂ ಒಂದು. ಘಟಪ್ರಭಾ ನದಿ ಪ್ರವಾಹಕ್ಕೆ ಮೊದಲು ಜಲಾವೃತವಾಗುವ ಗ್ರಾಮ ಇದಾಗಿದೆ.

    ಈ ವರ್ಷದ ಪ್ರವಾಹದಿಂದ ಧರೆಗುರುಳಿದ ನೂರಾರು ಮನೆಗಳು ಅವಶೇಷಗಳ ರೂಪ ಪಡೆದುಕೊಂಡಿವೆ. ಇವುಗಳಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಜೊತೆಗೆ ನೋಡುವುದಕ್ಕೆ ಚೆನ್ನಾಗಿಯೇ ಕಾಣುವ ಕೆಲ ಮನೆಗಳು ಬಿರುಕು ಬಿಟ್ಟಿದ್ದು ಆ ಮನೆಯಲ್ಲಿ ವಾಸ ಮಾಡುವುದೆಂದರೆ ಜವರಾಯನಿಗೆ ಕೈಬೀಸಿ ಕರೆದಂತೆ. ಮತ್ತೆ ಮತ್ತೆ ಪ್ರವಾಹ, ಮತ್ತೆ ಮತ್ತೆ ಸಂಕಷ್ಟದಲ್ಲಿ ದಿನ ದೂಡುವುದಕ್ಕಿಂತ ಒಮ್ಮೆ ಇಡೀ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎನ್ನುವುದು ಸಂತ್ರಸ್ತರ ಒತ್ತಾಯವಾಗಿದೆ.

    ಈ ಬಾರಿ ಪ್ರವಾಹ ಬಂದಾಗ ಇಲ್ಲಿನ ಜನರು ರಾತ್ರೋರಾತ್ರಿ ಊರನ್ನು ಬಿಟ್ಟು ಸುರಕ್ಷತಾ ಸ್ಥಳಗಳಿಗೆ ತೆರಳಿದ್ದರು. ನೀರು ಸರಿದ ನಂತರ ಮತ್ತೆ ವಾಪಸ್ ಬರುವಷ್ಟರಲ್ಲಿ ಗ್ರಾಮದ ಅನೇಕ ಮನೆಗಳು ನೆಲಸಮವಾಗಿದ್ದವು. ಗಾಯದ ಮೇಲೆ ಬರೆ ಎನ್ನುವಂತೆ ಬೆಳೆಗಳು ಜಲಾವೃತವಾಗಿ ಸಾಕಷ್ಟು ಹಾನಿ ಉಂಟಾಗಿದೆ. 2019ರ ಶತಮಾನದ ಪ್ರವಾಹ ಇವರ ಬದುಕನ್ನೇ ಕಸಿದುಕೊಂಡಿದೆ. ನೂರಾರು ಮನೆಗಳು ನೆಲ ಕಚ್ಚಿವೆ. ಗ್ರಾಮದಲ್ಲಿ ನೆಲೆಸುವ ಆಶಾಭಾವನೆಯನ್ನು ಕಿತ್ತುಕೊಂಡಿದೆ. ಈ ಗ್ರಾಮದಲ್ಲಿ ಇಲ್ಲಿವರೆಗೆ 900 ಮನೆಗಳಲ್ಲಿ ಕೇವಲ 295 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಗ್ರಾಮಸ್ಥರು ನಮ್ಮ ಇಡೀ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎಂದು ಹೇಳುತ್ತಿದ್ದಾರೆ.

    ಇತ್ತೀಚೆಗೆ ಬಂದ ಪ್ರವಾಹದಿಂದಾಗಿ ಬೆಳೆಗಳು ಕೊಚ್ಚಿ ಹೋಗಿವೆ. ಅಳಿದ ಕಡೆಗೆ ಹಸಿ ಮೇವು ತಂದು ಜಾನುವಾರುಗಳಿಗೆ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಉಕ್ಕಿದ ನದಿಯ ಜೊತೆ ಚಿತ್ತಿ ಮತ್ತು ಸ್ವಾತಿ ಮಳೆಗಳು ಕೈ ಜೋಡಿಸಿದ್ದರಿಂದ ಜಾನುವಾರುಗಳಿಗೆ ಮೇವು ಸಿಗದಂತಾಗಿದೆ. ತಮ್ಮ ಬದುಕು ಅತಂತ್ರವಾಗಿರುವಾಗ ಇನ್ನು ಜಾನುವಾರುಗಳಿಗೆ ಮೇವು ತರುವುದು ಎಲ್ಲಿಂದ ಎನ್ನುವ ಪ್ರಶ್ನೆ ಅಲ್ಲಿನ ಜನರನ್ನು ಕಾಡುತ್ತಿದೆ. ಸರ್ಕಾರದಿಂದ ತಾತ್ಕಾಲಿಕ ಹತ್ತು ಸಾವಿರ ರೂ. ಪರಿಹಾರ ಬಿಟ್ಟರೆ ಉಳಿದ ಯಾವುದೇ ನೆರವು ಈವರೆಗೂ ಇವರಿಗೆ ಬಂದಿಲ್ಲ.

  • ಶಾಸಕ ಶ್ರೀನಿವಾಸ್‌ಗೆ ಬೆವರಿಳಿಸಿದ ಗ್ರಾಮಸ್ಥರು

    ಶಾಸಕ ಶ್ರೀನಿವಾಸ್‌ಗೆ ಬೆವರಿಳಿಸಿದ ಗ್ರಾಮಸ್ಥರು

    ತುಮಕೂರು: ಹಾಗಲವಾಡಿ ಕೆರೆಗೆ ನೀರು ಹರಿಸದ್ದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಶಾಸಕ ಎಸ್.ಆರ್ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

    ಇಂದು ಹಾಗಲವಾಡಿ ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದ ಸಮುದಾಯ ಭವನ ಉದ್ಘಾಟನೆಗೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಆಗಮಿಸಿದ್ದರು. ಉದ್ಘಾಟನೆ ನೆರವೇರಿಸಿ ವೇದಿಕೆ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ವೇದಿಕೆ ಮೇಲೆ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಹೇಮಾವತಿ ನೀರು ಹರಿಸುವ ವಿಚಾರವಾಗಿ ಶ್ರೀನಿವಾಸ್ ಮಾತನಾಡಿದ್ದಾರೆ. ಆಗ ಸಿಟ್ಟಿಗೆದ್ದ ಗ್ರಾಮಸ್ಥರು ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಶಾಸಕರ ಭಾಷಣಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿದರು.

    ವೇದಿಕೆಯಿಂದ ಕೆಳಗಿಳಿದರೂ ಸಹ ಗ್ರಾಮಸ್ಥರು ಶಾಸಕರನ್ನು ಬಿಡಲಿಲ್ಲ. ಕೆಳಗಿಳಿದು ಬರುತ್ತಿದ್ದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ತಳ್ಳಾಟ ನಡೆದಿದ್ದು, ಗಲಾಟೆಯಾಗುತ್ತಿದ್ದಂತೆ ಶಾಸಕ ಶ್ರೀನಿವಾಸ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

  • 4 ದಶಕಗಳ ಹಿಂದೆ ಸತ್ತಿದ್ದ ವ್ಯಕ್ತಿ ಮರಳಿ ಬಂದ- ಚಿತ್ರದುರ್ಗದಲ್ಲಿ ಅಚ್ಚರಿಯ ಘಟನೆ

    4 ದಶಕಗಳ ಹಿಂದೆ ಸತ್ತಿದ್ದ ವ್ಯಕ್ತಿ ಮರಳಿ ಬಂದ- ಚಿತ್ರದುರ್ಗದಲ್ಲಿ ಅಚ್ಚರಿಯ ಘಟನೆ

    ಚಿತ್ರದುರ್ಗ: ನಾಲ್ಕು ದಶಕಗಳ ಬಳಿಕ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿ ಮರಳಿ ಊರಿಗೆ ಬಂದಿರುವ ಅಚ್ಚರಿಯ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ನಿವಾಸಿಯಾಗಿದ್ದ ಈರಜ್ಜ ತನ್ನ 32 ವಯಸ್ಸಿನಲ್ಲೇ 4 ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಕುಟುಂಬಸ್ಥರು ಈರಜ್ಜರ ಅಂತ್ಯ ಸಂಸ್ಕಾರವನ್ನು ನಡೆಸಿದ್ದರು. ಆದರೆ ಸದ್ಯ ಈಗ ಮತ್ತೆ ಈರಜ್ಜ ಮರಳಿ ಮನೆಗೆ ಬಂದಿರುವುದು ಕುಟುಂಬಸ್ಥರಿಗೆ ಆಚ್ಚರಿಯನ್ನು ತಂದಿದೆ.

    ಈರಜ್ಜ ಆಂಧ್ರಪ್ರದೇಶದ ಯಾಪಲಪರ್ತಿ ಗ್ರಾಮದಲ್ಲಿ ಮತ್ತೊಂದು ಮದುವೆಯಾಗಿದ್ದಾರೆ. ಚಿತ್ರನಾಯಕನಹಳ್ಳಿ ಗ್ರಾಮಸ್ಥರು ಯಾಪಲಪರ್ತಿ ಗ್ರಾಮಕ್ಕೆ ಗೊಬ್ಬರ ಕೊಂಡುಕೊಳ್ಳಲೆಂದು ತೆರಳಿದ್ದರು. ಈ ವೇಳೆ ಈರಪ್ಪ ಅವರನ್ನು ಕಂಡ ಚಿತ್ರನಾಯಕನಹಳ್ಳಿ ಗ್ರಾಮಸ್ಥರು ಗುರುತಿಸಿ ಮಾತನಾಡಿದ್ದರು. ಸದ್ಯ ಈರಜ್ಜ ಅವರು ಗ್ರಾಮಕ್ಕೆ ವಾಪಸ್ ಆಗಿದ್ದು, ಪತಿಯನ್ನು ಗುರುತಿಸಿದ ಪತ್ನಿ ಮನೆಗೆ ಸಂಭ್ರಮದಿಂದ ಆಹ್ವಾನಿಸಿದ್ದಾರೆ.

    ಈರಜ್ಜ ಗ್ರಾಮಕ್ಕೆ ಮರಳಿ ವಾಪಸ್ ಬಂದಿರುವುದರಿಂದ ಗ್ರಾಮಸ್ಥರು ಹಾಗೂ ಪತ್ನಿ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರು ಮಾತ್ರ ಸತ್ತ ವ್ಯಕ್ತಿ ಮರಳಿ ಬರುವುದು ಅಸಾಧ್ಯ. ಹೀಗಾಗಿ ಅವರ ಡಿಎನ್‍ಎ ಪರೀಕ್ಷೆಯಿಂದ ಸತ್ಯಾಂಶ ತಿಳಿದು ಬರಲಿದೆ ಎಂದಿದ್ದಾರೆ. ಗ್ರಾಮಸ್ಥರು ಮಾತ್ರ ಈರಣ್ಣ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಈರಜ್ಜ ಕೂಡ ನಾನೇ 56 ವರ್ಷಗಳ ಹಿಂದೆ ಸಾವನ್ನಪ್ಪಿದೆ. ಆದರೆ ಮರಳಿ ಜೀವ ಪಡೆದು ಬೇರೆಡೆ ತೆರಳಿದ್ದೆ ಎಂದು ಹೇಳುತ್ತಿದ್ದಾರೆ.

  • ಹುಲಿ, ಆನೆ ನಂತ್ರ ಸೆರೆಯಾದ ಚಿರತೆ

    ಹುಲಿ, ಆನೆ ನಂತ್ರ ಸೆರೆಯಾದ ಚಿರತೆ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ನರಹಂತಕ ಹುಲಿ, ಆನೆ ನಂತರ ಇದೀಗ ಚಿರತೆ ಸೆರೆಯಾಗಿದೆ.

    ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದೊಂದು ತಿಂಗಳಿಂದ ಬನ್ನಿತಾಳಪುರದ ಜಮೀನಿನಲ್ಲಿ ಚಿರತೆ ಹೆಜ್ಜೆಗಳು ಕಂಡು ಬಂದಿತ್ತು. ಆಗ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

    ಅರಣ್ಯ ಇಲಾಖೆ ಬೋನ್ ಕೂಡ ಇಟ್ಟಿತ್ತು. ಇದೀಗ ಚಿರತೆ ಸೆರೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಚಿರತೆ ಇರುವ ಭಯದಿಂದ ಜಮೀನಿಗೆ ಹೋಗಲು ಕೂಡ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಚಿರತೆ ಸೆರೆ ಬೆನ್ನಲ್ಲೇ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಗುರುವಾರ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕೊನೆಗೂ ಬನ್ನಿತಾಳಪುರ ಸಮೀಪ ಸೆರೆ ಹಿಡಿಯಲಾಗಿತ್ತು. ಪುಂಡಾನೆಯನ್ನು ಸೆರೆ ಹಿಡಿದು ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಶಿಬಿರಕ್ಕೆ ರವಾನಿಸಲಾಗಿತ್ತು.

  • ಒಂದು ಜಿಲ್ಲೆ ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು

    ಒಂದು ಜಿಲ್ಲೆ ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಡಂಚಿನ ಗ್ರಾಮ ಬಿದಿರುತಳದಲ್ಲಿ ಕಣ್ಣು ಹಾಯಿಸದಲೆಲ್ಲಾ ಕಾಡು ಪ್ರಾಣಿಗಳ ಹಿಂಡು ಗೋಚರವಾಗುತ್ತಿದೆ.

    ಗ್ರಾಮದ ಸತೀಶ್ ಎಂಬವರು ತಮ್ಮ ತೋಟಕ್ಕೆ ಹೋಗುವಾಗ ದಾರಿಯುದ್ದಕ್ಕೂ ಪ್ರಾಣಿಗಳು ಕಾಣಿಸಿಕೊಂಡಿದೆ. ಈ ಪ್ರಾಣಿಗಳನ್ನು ನೋಡಿದ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಕಾಫಿನಾಡು ಒಂದು ಜಿಲ್ಲೆ ಹಲವು ಜಗತ್ತು ಎನ್ನುವ ಮಾತಿಗೆ ಪೂರಕವಾಗಿದೆ.

    ಒಂದೆಡೆ ನರಿ, ಮತ್ತೊಂದೆಡೆ ಆನೆ, ಮಗದೊಂದು ಕಡೆ ಜಿಂಕೆ, ಇನ್ನೊಂದೆಡೆ ಕಡವೆಗಳ ಗುಂಪು ಕಾಣಿಸಿಕೊಂಡಿದೆ. ಕಾಡು ಪ್ರಾಣಿಗಳನ್ನು ನೋಡಿ ಸ್ಥಳೀಯರಿಗೆ ಒಂದೆಡೆ ಖುಷಿ ಆದರೆ ಹಾಗೂ ಮತ್ತೊಂದೆಡೆ ಆತಂಕ ಶುರುವಾಗಿದೆ. ಗ್ರಾಮದಂಚಿನಲ್ಲಿ ಹೀಗೆ ಪ್ರಾಣಿಗಳ ಗುಂಪನ್ನು ಕಂಡ ಸ್ಥಳೀಯರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

    ಸದ್ಯ ಸ್ಥಳೀಯರು ಸ್ಥಳಾಂತರ ಮಾಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬಿದಿರುತಳ ಗ್ರಾಮದ ಸ್ಥಳಾಂತರದ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇದೆ. ಸ್ಥಳೀಯರು ಕೂಡಲೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.