Tag: villagers

  • ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಮಡಿಕೇರಿ: ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಒಂದು. ಆದರೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಅಪೂರ್ಣವಾಗಿ, ಶವಾಗಾರದಂತೆ ಬಾಗಿಲು ಮುಚ್ಚಿದೆ.

    ಶುದ್ಧ ಕುಡಿಯುವ ನೀರಿನ ಅಶುದ್ಧ ಘಟಕವೊಂದನ್ನು ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಳ್ಳುಕೊಚ್ಚಿ ಮರಾಠಿ ಮೂಲೆ ಪ್ರದೇಶದಲ್ಲಿ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರಿಕೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಜಾಗ ಗುರುತಿಸಿ ಒಂದೂವರೆ ವರ್ಷಗಳ ಹಿಂದೆ ಘಟಕ ಸ್ಥಾಪನೆ ಮಾಡಿತ್ತು. ಆದರೆ ಈ ನೀರಿನ ಘಟಕದ ಬಾಗಿಲು ಮುಚ್ಚಲಾಗಿದೆ.

    ಭಾಗಮಂಡಲ-ಕರಿಕೆ ಅಂತರರಾಜ್ಯ ಹೆದ್ದಾರಿ ಬದಿಯಲ್ಲೇ ಈ ಶುದ್ಧ ಕುಡಿಯುವ ನೀರಿನ ಘಟಕವಿದ್ದು ರಸ್ತೆ ಅಗಲೀಕರಣ ಸಂದರ್ಭ ಅಡಚಣೆಯಾಗಿ ತೆರವುಗೊಳಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಅರಿವಿದ್ದರೂ ಕೂಡ ನಿರ್ಮಾಣವಾಗಿರುವ ನೀರಿನ ಘಟಕ ಪ್ರಸ್ತುತ ನಿಷ್ಪ್ರಯೋಜಕವಾಗಿದೆ. ಇದರಿಂದದಾಗಿ ಈ ಘಟಕದ ನೀರು ಬಳಸಲು ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

  • ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

    ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

    ಕೊಪ್ಪಳ: ಬೇಸಿಗೆ ಕಾಲದ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲೆಯ ಗ್ರಾಮವೊಂದರಲ್ಲಿ ಕಳೆದ 15 ದಿನಗಳಿಂದ ನೀರು ಬಾರದ ಕಾರಣ ಗ್ರಾಮಸ್ಥರು ಹೊಲದಲ್ಲಿರುವ ಕೃಷಿಹೊಂಡಗಳ ನೀರನ್ನು ಕುಡಿದು ಬದುಕು ಸಾಗಿಸುತ್ತಿದ್ದಾರೆ.

    ಜಿಲ್ಲೆಯ ಕುಕನೂರು ತಾಲೂಕಿನ ಭಟಪ್ಪನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಬೋರ್ ವೇಲ್ ನೀರು ಸ್ಥಗಿತಗೊಂಡ ಕಾರಣ, ಗ್ರಾಮಸ್ಥರು ದೂರದಲ್ಲಿರುವ ಕೃಷಿ ಹೊಂಡಗಳಿಗೆ ಹೋಗಿ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಂಡಲಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಜನತೆಗೆ ನೀರು ಪೂರೈಕೆ ಮಾಡಬೇಕಾದ ಗ್ರಾ.ಪಂಯವರು 15 ದಿನಗಳಾದರೂ ಮಷಿನ್ ದುರಸ್ತಿಗೊಳಿಸಿಲ್ಲ. ಪರಿಣಾಮ ಈ ಗ್ರಾಮಸ್ಥರು ಬೆಳಗ್ಗೆಯಿಂದ ಸಂಜೆ ತನಕ ಹೊಲದಲ್ಲಿ ನಿರ್ಮಿಸಿರುವ ರೈತರ ಕೃಷಿಹೊಂಡಗಳನ್ನು ಹುಡುಕಿಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಮೈಲುಗಟ್ಟಲೇ ನಡೆದು ಹೋದರೆ ಮಾತ್ರ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ಪಂಪ್‍ಸೆಟ್ ಕಳೆದ 15 ದಿನಗಳ ಹಿಂದೆ ಕೈಕೊಟ್ಟಿದೆ. ಇಂದು ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಗ್ರಾಮಸ್ಥರು ದೊಡ್ಡ ಮನಸ್ಸು ಮಾಡಿ, ಮೈಲುಗಟ್ಟಲೇ ನಡೆದುಕೊಂಡು ಹೋಗಿ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನೇ ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾ.ಪಂ.ಯವರು ಮಾತ್ರ ಇದುವರೆಗೂ ಮಷಿನ್ ರಿಪೇರಿ ಮಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮದ ಮತ್ತೊಬ್ಬರು ಹೇಳುವ ಪ್ರಕಾರ, ಮಷಿನ್ ರಿಪೇರಿ ಮಾಡಿಸಿದ್ದಾರೆ. ಆದರೆ ಪೈಪ್‍ಲೈನ್ ಒಡೆದು ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ನಮ್ಮ ಊರಿಗೆ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

    ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ ನೀರು ತರಬೇಕು. ದೂರದಲ್ಲಿರುವ ಕೃಷಿಹೊಂಡಗಳಿಗೆ ಸುಡು ಬಿಸಿಲಿನಲ್ಲಿ ನಡೆದುಕೊಂಡು ಹೋಗಿ ತಲೆ ಮೇಲೆ ಕೊಡ ಹೊತ್ತುಕೊಂಡು ವಿದ್ಯಾರ್ಥಿಗಳು ನೀರು ತರುತ್ತಿರುವ ದೃಶ್ಯವಂತೂ ಪ್ರಜ್ಞಾವಂತರ ಕರಳು ಕಿತ್ತು ಬರುವುಂತಿದೆ. ತುಂಬಿದ ಕೊಡಗಳನ್ನು ಹೊತ್ತುಕೊಂಡು ಪುಟ್ಟಪುಟ್ಟ ಮಕ್ಕಳು ನಡುರಸ್ತೆಯಲ್ಲಿ ಭಾರವನ್ನು ತಾಳದೇ ಮುಖ ಕಿವಿಚಿಕೊಂಡು ಮನೆ ಕಡೆ ದಾವಿಸುತ್ತಿರುವಾಗ, ಜನಪ್ರತಿನಿಧಿಗಳ ಹಾಗೂ ಗ್ರಾ.ಪಂ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ನೀರಿನ ರಾಜಕೀಯಕ್ಕೆ ಹೆಸರಾದ ತಾಲೂಕು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ನೀರು ಮತ್ತು ನೀರಾವರಿ ರಾಜಕೀಯಕ್ಕೆ ಹೆಸರಾಗಿದೆ. ಇಲ್ಲಿನ ರಾಜಕಾರಣಿಗಳು ಪ್ರತಿ ಚುನಾವಣೆಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಸ್ತಂಗಳನ್ನು ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಈ ಕ್ಷೇತ್ರದ ಜನರಿಗೆ ಮಾತ್ರ ಶಾಶ್ವತವಾಗಿ ನೀರಾವರಿ ಸೌಲಭ್ಯವೂ ಕಲ್ಪಿಸಿಲ್ಲ. ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಭರವಸೆಯಲ್ಲಿಯೇ ಬೆಂದು ಹೋಗುತ್ತಿರುವ ಜನ ಗ್ರಾ.ಪಂಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರವರೆಗೂ ಜಿಲ್ಲೆಯ ಜನತೆಗೆ ಪ್ರತಿ ವರ್ಷ ಭರವಸೆಗಳನ್ನು ಕೊಟ್ಟು, ನಿಮ್ಮೂರಿನ ರೈತರಿಗೆ ನೀರಿವಾರಿ ಸೌಲಭ್ಯ ಕಲ್ಪಿಸ್ತಿವಿ. ನಿಮ್ಮೂರಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತೇವೆ. ಹಾಗೇ ಹೀಗೇ ಎಂದು ಕೇವಲ ಭರವಸೆಗಳನ್ನೇ ಕೊಟ್ಟು ಈ ಭಾಗದ ಜನರನ್ನು ಭರವಸೆಯಲ್ಲಿಯೇ ಬೆಂದು ಹೋಗುವುಂತೆ ಮಾಡಿದ್ದಾರೆ. ತುಂಗಭದ್ರಾ ಹಿನ್ನೀರಿನಿಂದ ಬನ್ನಿಕೊಪ್ಪ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ನಾರಾಯಣಪುರ ಜಲಾಶಯದಿಂದ ಈ ಗ್ರಾಮಗಳಿಗೆ ತಲುಪಬೇಕಾಗಿದ್ದ 762 ಕೋಟಿ ರೂ. ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಲ್ಲದೇ ಈ ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗಿ ವರ್ಷ ಕಳೆದರೂ ಇದುವರೆಗೂ ಈ ಘಟಕವನ್ನು ರಿಪೇರಿ ಮಾಡಿಲ್ಲ ಎಂದು ಗ್ರಾಮಸ್ಥರಾದ ಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನಾದರೂ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಕಾರಣ ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಯಿಂದ ಕೃಷಿ ಹೊಂಡಗಳಲ್ಲಿ ಸಂಗ್ರಹಗೊಂಡ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. 15 ದಿನಗಳಿಂದ ಇದೇ ನೀರನ್ನು ಕುಡಿಯುತ್ತಿರುವ ಈ ಗ್ರಾಮಸ್ಥರು, ಆರೋಗ್ಯದಲ್ಲಿ ಏರುಪೇರಾದರೆ ಜವಾಬ್ದಾರರು ಯಾರು ಎನ್ನುವ ಪ್ರಶ್ನೆಗೆ ಕೇವಲ ಗ್ರಾ.ಪಂ. ಮಾತ್ರವಲ್ಲ ಇಡೀ ಜಿಲ್ಲಾಡಳಿತವೇ ಉತ್ತರಿಸಬೇಕಾಗುತ್ತದೆ.

  • ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

    ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

    ದಾವಣಗೆರೆ: ಕೇತುಗ್ರಸ್ತ ಸೂರ್ಯಗ್ರಹಣದ ಭಯ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಸೂರ್ಯನ ಕಿರಣ ನಮ್ಮ ಮೈಮೇಲೆ ಬಿದ್ದರೆ ದೋಷವಾಗುತ್ತಾ ಎನ್ನುವಷ್ಟರ ಮಟ್ಟಿಗೆ ಮೂಡ ನಂಬಿಕೆ ಬೇರೂರಿದೆ.

    ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿ ತಾಂಡದ ಗ್ರಾಮಸ್ಥರು ಮನೆಯಿಂದಲೇ ಹೊರ ಬಾರದ ಸ್ಥಿತಿ ಉಂಟಾಗಿದೆ. ಮನೆಯಿಂದ ಹೊರ ಬಂದರೆ ಏನಾದರೂ ದೋಷ ಬರುತ್ತಾ ಎನ್ನುವ ಭಯದಲ್ಲಿ ಬೆಳಗ್ಗೆಯಿಂದಲೂ ಬಾಗಿಲು ಮುಚ್ವಿಕೊಂಡು ಒಳಗೆ ಕೂತಿದ್ದಾರೆ. ಮನೆಯಿಂದ ಹೊರ ಬಂದರೆ ಏನಾದ್ರು ದೋಷವಾಗುತ್ತೆ ಎನ್ನುವ ಭಯದಲ್ಲಿ ಗ್ರಾಮದ ಜನರು ಕಾಡುತ್ತಿದ್ದು ಹೊರ ಬಾರದೆ ಕೂತಿದ್ದಾರೆ.

    ಹರಪ್ಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ ಸೂರ್ಯ ಗ್ರಹಣ ಹಿನ್ನೆಲೆ ಒಬ್ಬರೇ ಮಕ್ಕಳಿರುವ ಪೋಷಕರು ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿ ಗ್ರಹಣ ದೋಷ ನಿವಾರಣೆ ಆಗುವಂತೆ ಪ್ರಾರ್ಥಿಸಿದರು.

    ಕೇತುಗ್ರಸ್ತ ಸೂರ್ಯಗ್ರಹಣದಲ್ಲಿ ಒಬ್ಬನೇ ಮಗನಿದ್ದವರಿಗೆ ದೋಷ ಬರುತ್ತೆ ಎನ್ನುವ ನಂಬಿಕೆ ಇದ್ದು, ದೋಷ ಪರಿಹಾರಕ್ಕೆ ಎಕ್ಕೆ ಗಿಡದ ಪೂಜೆ ಸಲ್ಲಿಸಿದರೆ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ. ಆದ್ದರಿಂದ ಪಣಿಯಾಪುರದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆ ತಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

  • ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ ಗ್ರಾಮಸ್ಥರು

    ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ ಗ್ರಾಮಸ್ಥರು

    ಹಾವೇರಿ: ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆ ಹಾವೇರಿ ಜನರು ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ್ದು ವಿಶೇಷವಾಗಿತ್ತು.

    ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಮತ್ತು ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ನಿವಾಸಿಗಳು ಗ್ರಹಣ ಹಿಡಿದಾಗ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿಟ್ಟಿದ್ದಾರೆ. ಒನಕೆ ನಿಲ್ಲಿಸಿದ ನಂತರ ಗ್ರಹಣ ವೀಕ್ಷಣೆ ಮಾಡಿದ್ದಾರೆ.

    ಕೇತುಗ್ರಸ್ಥ ಸೂರ್ಯಗಹ್ರಣ ಈಗಾಗಲೇ ಆರಂಭವಾಗಿದ್ದು, ಸೂರ್ಯನಲ್ಲಿ ಆಗುವ ಬದಲಾವಣೆಗಳನ್ನು ವೀಕ್ಷಿಸುವ ಕಾತುರದಲ್ಲಿ ಜನರು ಇದ್ದಾರೆ. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸೂರ್ಯಗ್ರಹಣದ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

    ಉಡುಪಿ, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು, ಧಾರವಾಡ, ಮಂಡ್ಯ, ಕಾರವಾರ, ಶಿವಮೊಗ್ಗ, ಬೆಳಗಾವಿ, ಮೈಸೂರು ಇನ್ನೂ ಅನೇಕ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಸೂರ್ಯಗ್ರಹಣ ಗೋಚರವಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು ಸೂರ್ಯ ಗ್ರಹಣ ಸರಿಯಾಗಿ ಗೋಚರವಾಗುತ್ತಿಲ್ಲ. ಕೆಲವು ಭಾಗದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಕೇತುಗ್ರಸ್ಥ ಸೂರ್ಯಗ್ರಹಣ ಕಾಲ:
    ಸೂರ್ಯಗ್ರಹಣ ಸ್ಪರ್ಶಕಾಲ – ಬೆಳಗ್ಗೆ 8:04 ಗಂಟೆ
    ಸೂರ್ಯಗ್ರಹಣ ಮಧ್ಯಕಾಲ – ಬೆಳಗ್ಗೆ 9:26 ಗಂಟೆ
    ಸೂರ್ಯಗ್ರಹಣ ಮೋಕ್ಷಕಾಲ – ಬೆಳಗ್ಗೆ 11:04 ಗಂಟೆ
    ಗ್ರಹಣ ನಕ್ಷತ್ರ – ಮೂಲ
    ಗ್ರಹಣ ಸಮಯ – 2 ಗಂಟೆ 59 ನಿಮಿಷ

  • ಆಸ್ಪತ್ರೆಗೆ ಕಟ್ಟಬೇಕಿದ್ದ ಹಣ ಕಳೆದುಕೊಂಡ ಮಹಿಳೆ – 50,000 ರೂ. ನೀಡಿ ಮಾನವೀಯತೆ ಮೆರೆದ ಗ್ರಾಮಸ್ಥರು, ಪೊಲೀಸರು

    ಆಸ್ಪತ್ರೆಗೆ ಕಟ್ಟಬೇಕಿದ್ದ ಹಣ ಕಳೆದುಕೊಂಡ ಮಹಿಳೆ – 50,000 ರೂ. ನೀಡಿ ಮಾನವೀಯತೆ ಮೆರೆದ ಗ್ರಾಮಸ್ಥರು, ಪೊಲೀಸರು

    ಹಾವೇರಿ: ಆಸ್ಪತ್ರೆಗೆ ಕಟ್ಟಬೇಕಿದ್ದ 50 ಸಾವಿರ ರೂ. ಕಳೆದುಕೊಂಡ ಮಹಿಳೆಗೆ ಪೊಲೀಸರು ಹಾಗೂ ಗ್ರಾಮಸ್ಥರು ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹಾವೇರಿ ಜಿಲ್ಲೆ ಗುತ್ತಲ ಪಟ್ಟಣದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಆಸ್ಪತ್ರೆಗೆ ಕಟ್ಟಬೇಕಿದ್ದ 50 ಸಾವಿರ ರೂ. ಹಣವನ್ನು ಯಾರೋ ಬಸ್ ನಲ್ಲಿ ಕಳ್ಳತನ ಮಾಡಿದ್ದಾರೆ. ಆದರೆ ಮಹಿಳೆಗೆ ಗುತ್ತಲ ಠಾಣೆಯ ಪೊಲೀಸರು ಹಾಗೂ ಗ್ರಾಮಸ್ಥರು ಹಣ ಸಂಗ್ರಹಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.

    ಮಹಿಳೆ ಹಾವೇರಿ ತಾಲೂಕು ಹಾವನೂರು ಗ್ರಾಮದ ತನ್ನ ತವರು ಮನೆಯಿಂದ 50 ಸಾವಿರ ರೂ. ತೆಗೆದುಕೊಂಡು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಗೆ ಕಟ್ಟಲು ಹೋಗುತ್ತಿದ್ದರು. ಗುತ್ತಲ ಪಟ್ಟಣದಿಂದ ಹಾವೇರಿ ಬಸ್ ಹತ್ತಿದ ಅವರು ಕೇವಲ ನಿಮಿಷಗಳಲ್ಲಿ ಹಣ ಕಳೆದುಕೊಂಡಿದ್ದಾರೆ. ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರ ಚೆಕ್ ಮಾಡಿದ್ರೂ ಹಣ ಸಿಗಲಿಲ್ಲ.

    ಬಳಿಕ ಮಹಿಳೆಗೆ ಠಾಣೆಯ ಪಿಎಸ್‍ಐ ಶಂಕರಗೌಡ 5,000 ರೂ. ನೀಡಿದ್ದರು. ಅದಲ್ಲದೆ ಗುತ್ತಲ ಗ್ರಾಮದ ಜನತೆ ಹಾಗೂ ಲಾರಿ ಮಾಲೀಕ ಸಂಘದವರು ಒಟ್ಟಾರೆ 13,000 ಹೀಗೆ ಗ್ರಾಮದ ಜನರು ಸೇರಿ ಆರ್ಥಿಕ ಸಹಾಯ ಮಾಡಿದ್ದಾರೆ.

    ವಿಜಯಲಕ್ಷ್ಮಿ ಗುತ್ತಲ ಠಾಣೆಯ ಪೊಲೀಸರು, ವರ್ತಕರು, ಗುತ್ತಿಗೆದಾರರು, ಸೇರಿದಂತೆ ಅಂಗಡಿ ಹಾಗೂ ಗ್ರಾಮದ ಜನರು ವಂತಿಕೆ ಹಾಕಿ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • ಹಣಕ್ಕಾಗಿ 12ರ ಮಗಳನ್ನು ಕೆಲಸಕ್ಕೆ ಬಿಟ್ಟೋದ ತಾಯಿ – ತುಂಗಾನದಿ ತೀರದಲ್ಲಿ ಬಾಲಕಿ ಪತ್ತೆ

    ಹಣಕ್ಕಾಗಿ 12ರ ಮಗಳನ್ನು ಕೆಲಸಕ್ಕೆ ಬಿಟ್ಟೋದ ತಾಯಿ – ತುಂಗಾನದಿ ತೀರದಲ್ಲಿ ಬಾಲಕಿ ಪತ್ತೆ

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕೆಳಕೆರೆ ಗ್ರಾಮದ ತುಂಗಾನದಿ ತೀರದಲ್ಲಿ ಸುಮಾರು 12 ವರ್ಷದ ಬಾಲಕಿ ಪತ್ತೆಯಾಗಿದ್ದು, ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲಕಿಯನ್ನು ಒಪ್ಪಿಸಿದ್ದಾರೆ.

    ಶಿಕಾರಿಪುರ ತಾಲೂಕಿನ ಬಾಲಕಿ ಹಲವು ದಿನದ ಹಿಂದೆ ಬುಕ್ಲಾಪುರದ ಶ್ರೀಮಂತರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಬಾಲಕಿ ತಾಯಿ ಶ್ರೀಮಂತರಿಂದ ಹಣ ಪಡೆದು ಆಕೆಯನ್ನು ಕೆಲಸಕ್ಕೆ ಸೇರಿಸಿದ್ದಳು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಖಿನ್ನತೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಶಿಶು ಅಭಿವೃದ್ಧಿ ಅಧಿಕಾರಿಗಳು ಶಿವಮೊಗ್ಗದ ಮಕ್ಕಳ ಘಟಕಕ್ಕೆ ಒಪ್ಪಿಸಿದ್ದಾರೆ.

    ಇಲಾಖೆಯಿಂದ ಬಾಲಕಿ ಮೇಲ್ವಿಚಾರಣೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೆಲಸಕ್ಕೆ ಇರಿಸಿಕೊಂಡಿದ್ದ ಶ್ರೀಮಂತ ವ್ಯಕ್ತಿ ಬಾಲಕಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಪ್ರತಿದಿನ ಹೊಡೆಯುತ್ತಿದ್ದ. ಈ ಕಾರಣಕ್ಕೆ ಹೆದರಿ ತಪ್ಪಿಸಿಕೊಂಡು ಬಂದೆ ಎಂದು ಬಾಲಕಿ ಗ್ರಾಮಸ್ಥರ ಬಳಿ ಹೇಳಿದ್ದಾಳೆ. ಈ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

  • ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿ

    ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿ

    ಅನೇಕಲ್: ಇತಿಹಾಸ ಪ್ರಸಿದ್ಧ ಇರುವ ಹಾಗೂ ಐತಿಹಾಸಿಕ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿಯಾಗಿದೆ.

    ಬೆಂಗಳೂರಿನಿಂದ ಸೇಲಂ ರೈಲ್ವೆ ಮಾರ್ಗದ ದಾರಿಯಲ್ಲಿ ಹೈಟೆನ್ಷನ್ ವೈರ್ ಹಾದುಹೋಗಿರುವ ಪರಿಣಾಮ ಈ ಬಾರಿ ಜಾತ್ರೆ ನಡೆಯುತ್ತಾ ಇಲ್ವೋ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಯಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಊರಿನ ಗ್ರಾಮಸ್ಥರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

    ಬೆಂಗಳೂರು ಕೂಗಳತೆ ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬೆಂಗಳೂರಿನಿಂದ ಸೇಲಂ ಮಾರ್ಗಕ್ಕೆ ಹೈಟೆನ್ಷನ್ ವೈರ್ ರೈಲ್ವೆ ಹಳಿ ಮೇಲೆ ಹಾದು ಹೋದ ಪರಿಣಾಮ ಜಾತ್ರೆ ನಡೆಸಲು ವಿಘ್ನ ಎದುರಾಗಿದೆ. ಹೀಗಾಗಿ ಜಾತ್ರೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನ ಗ್ರಾಮಸ್ಥರು ಹಾಗೂ ಹಲವು ಮುಖಂಡರು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಗೆ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಸ್ಥಳೀಯ ಶಾಸಕ ಬಿ. ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆಂದು ತಿಳಿಸಿದರು. ಜಾತ್ರೆ ಪ್ರಮುಖ ಆಕರ್ಷಣೆ ಕುರ್ಜು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ಹುಸ್ಕೂರ್ ಮದ್ದುರಮ್ಮ ಜಾತ್ರೆಗೆ 14 ಗ್ರಾಮಗಳಿಂದ ನೂರು ಅಡಿಗೂ ಎತ್ತರದ ಕುರ್ಜುಗಳು ಬರುತ್ತವೆ. ಈ ಕುರ್ಜುಗಳನ್ನ ಎತ್ತುಗಳು ತುಳಿದುಕೊಂಡು ಬರುವುದು ವಿಶೇಷ. ಈ ಬಾರಿ ಹೈಟೆನ್ಶನ್ ವೈರ್ ಅಳವಡಿಕೆ ಪರಿಣಾಮ ಕೊಡತಿ, ಸೂಲುಕುಂಟೆ, ಚೊಕ್ಕಸಂದ್ರ ಹಾರೋಹಳ್ಳಿ, ಕಗ್ಗಲಿಪುರ ನಾರಾಯಣಘಟ್ಟ, ಸಿಂಗೇನ ಅಗ್ರಹಾರ, ಗ್ರಾಮಗಳ ಕುರ್ಜು ಗಳು ಹುಸ್ಕೂರು ಜಾತ್ರೆಗೆ ಬರಬೇಕಾದರೆ ರೈಲ್ವೆ ಹಳಿಯನ್ನು ದಾಟಿ ಬರಬೇಕು. ಹಾಗಾಗಿ ಈ ಮಾರ್ಗದಲ್ಲಿ ರೈಲ್ವೆಯ ಹೈಟೆನ್ಷನ್ ವೈರ್ ಹಾದುಹೋದ ಪರಿಣಾಮ ಕುರ್ಜುಗಳು ರೈಲ್ವೇ ಹಳಿ ದಾಟಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

  • ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ

    ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ

    ಚಿಕ್ಕಮಗಳೂರು: 10 ವರ್ಷದ ಬಳಿಕ ಕೆರೆ ತುಂಬಿದೆ ಎಂದು ಗ್ರಾಮಸ್ಥರು ಖುಷಿಪಡುವಷ್ಟರಲ್ಲಿ ಕೆರೆಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಗ್ರಾಮಸ್ಥರನ್ನು ತಲೆ ಮೇಲೆ ಕೈಹೊದ್ದು ಕೂರುವಂತೆ ಮಾಡಿದೆ.

    ತಾಲೂಕಿನ ಆರದವಳ್ಳಿ ಕೆರೆ ಕಳೆದ 10 ವರ್ಷಗಳಿಂದ ತುಂಬಿರಲಿಲ್ಲ. ಈ ವರ್ಷ ತುಂಬಿದರಿಂದ ಜಾನುವಾರುಗಳು ಹಾಗೂ ಕೃಷಿಗೆ ಸಮೃದ್ಧ ನೀರು ದೊರೆಯಿತು ಎಂದು ಖುಷಿ ಪಟ್ಟಿದ್ದರು. ಆದರೆ ಕೆರೆಗೆ ರಾಸಾಯನಿ ಮಿಶ್ರಣವಾಗಿರುವುದರಿಂದ ಕೆರೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಸ್ಥಳಿಯರನ್ನು ಆತಂಕಕ್ಕೆ ದೂಡಿದೆ. ಅಲ್ಲದೆ ಕೆರೆ ತನ್ನ ರೂಪವನ್ನು ಬದಲಿಸಿಕೊಳ್ಳುತ್ತಿದ್ದಂತೆ ಊರಿನ ತುಂಬಾ ದುರ್ನಾತ ಬೀರಲಾರಂಭಿಸಿದೆ. ದಾರಿಹೊಕ್ಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿ, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

    ಕೆರೆಯ ಬಣ್ಣ ಬದಲಾಗುತ್ತಿದ್ದಂತೆ ಕೆರೆಯಲ್ಲಿದ್ದ ಮೀನು-ಏಡಿ ಸೇರಿದಂತೆ ಜಲಚರಗಳು ಸಾವಿಗೀಡಾಗಿವೆ. ಸದ್ಯ ಈ ನೀರನ್ನು ಯಾವುದಕ್ಕೂ ಬಳಸಲಾರದಂತಾಗಿದೆ. ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದವರು ಮೀನಿನ ಬೆಳವಣಿಗೆಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ರಾಸಾಯನಿಕ ಬಳಸಿರಬಹುದು. ಆದ್ದರಿಂದ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಶಂಕಿಸಲಾಗಿದೆ.

    ಕೆರೆಯ ಪಕ್ಕದಲ್ಲೇ ಶಾಲೆ-ಅಂಗನವಾಡಿ ಇದ್ದು ಮಕ್ಕಳು ಮೂಗು ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಕೆರೆಯ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ಕೆರೆಯ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಈ ನೀರನ್ನು ಈಗ ಜಾನುವಾರು ಕೂಡ ಕುಡಿಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಘಟನೆಗೆ ಸೂಕ್ತ ಕಾರಣ ತಿಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಮತಾಂತರ ಮಾಡ್ತಿದ್ದಾರೆಂದು ಕ್ರಿಶ್ಚಿಯನ್ ಯುವಕರಿಗೆ ಥಳಿತ

    ಮತಾಂತರ ಮಾಡ್ತಿದ್ದಾರೆಂದು ಕ್ರಿಶ್ಚಿಯನ್ ಯುವಕರಿಗೆ ಥಳಿತ

    ಮಂಡ್ಯ: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕ್ರಿಶ್ಚಿಯನ್ ಯುವಕರಿಗೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರ್ಕಾರ್‍ದೊಡ್ಡಿ ಗ್ರಾಮದಲ್ಲಿ ಜರುಗಿದೆ.

    ಜನರಿಗೆ ಬೇರೆ ಬೇರೆಯ ರೀತಿಯ ಆಮಿಷಗಳನ್ನು ಒಡ್ಡಿ ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಥಳಿಸಿದ್ದಾರೆ. 6 ಮಂದಿ ಕ್ರಿಶ್ಚಿಯನ್ ಯುವಕರಾದ ಜಾನ್ ರಿದ್ಯಾ, ಪ್ರೇಮ್, ಕುಮಾರ್, ಸಂಪತ್, ಕಾರ್ತಿಕ್, ಪ್ರಶಾಂತ್ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.

    ಈ 6 ಮಂದಿ ಯುವಕರು ಹಲವು ದಿನಗಳಿಂದ ಈ ಭಾಗದ ಸುತ್ತಮುತ್ತಲಿನ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಮುಂದಾಗುತ್ತಿದ್ದರು. ಬಡ ಕುಟುಂಬಗಳ ಬಳಿ ಹೋಗಿ, ಅವರುಗಳಿಗೆ ಸವಲತ್ತುಗಳ ಆಮೀಷವನ್ನು ಹೊಡ್ಡಿ ಮತಾಂತರ ಮಾಡಲು ಮುಂದಾಗುತ್ತಿದ್ದರು ಎಂದು ಆರೋಪಿಸಿ ಈ 6 ಮಂದಿ ಯುವಕರಿಗೆ ಥಳಿಸಿದ್ದಾರೆ. ನಂತರ ಈ ಯುವಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

    ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆ, ಕಟ್ಟಡ ಕಟ್ಟುವ ಮುನ್ನ ಎಚ್ಚರ – ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ಫಿಲ್ಟರ್ ದಂಧೆ

    ಮನೆ, ಕಟ್ಟಡ ಕಟ್ಟುವ ಮುನ್ನ ಎಚ್ಚರ – ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ಫಿಲ್ಟರ್ ದಂಧೆ

    ಬೆಂಗಳೂರು: ಮನೆ, ಕಟ್ಟಡ ಕಟ್ಟುವ ಮುನ್ನ ಎಚ್ಚವಾಗಿರಿ. ಏಕೆಂದರೆ ಎಗ್ಗಿಲ್ಲದೆ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಅಕ್ರಮವಾಗಿ ಫಿಲ್ಟರ್ ಮರಳು ದಂಧೆಯ ಮುಖವಾಡವನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.

    ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರದಲ್ಲಿ ಈ ಕರಾಳ ದಂಧೆ ತಲೆ ಎತ್ತಿದೆ. ಇಲ್ಲಿ ಪ್ರತಿ ನಿತ್ಯ ಈ ಅಡ್ಡೆಯಿಂದ ನೂರಾರು ಲಾರಿ ಲೋಡ್ ನಗರ ಸೇರುತ್ತಿದೆ. ಶ್ರೀನಿವಾಸಪುರ ಗ್ರಾಮದ ಕೆರೆಯಲ್ಲಿ ರಾತ್ರಿಯಾದರೆ ಸಾಕು 150ರಿಂದ 200 ಮಂದಿ ಫಿಲ್ಟರ್ ಮರಳು ಮಾಡುವ ಕರಾಳ ದಂಧೆಯಾಗಿದ್ದು, ಕೆರೆಯ ಒಡಲನ್ನು ಈ ಧಂದೆಕೋರರು ಸಂಪೂರ್ಣವಾಗಿ ಬಗೆಯುತ್ತಿದ್ದಾರೆ.

    ಇಂತಹ ಕಳಪೆ ಈ ಫಿಲ್ಟರ್ ಮರಳಿಂದ ನಿಮ್ಮ ಮನೆ ಕಟ್ಟಡಗಳು ನೆಲಕಚ್ಚುವುದು ಖಚಿತ. ಇದನ್ನು ಕಂಡು ಕಾಣದಂತಿರುವ ನೆಲಮಂಗಲ ಪೊಲೀಸರ ನಡೆಗೆ ಅನುಮಾನ ಮೂಡಿಸುವಂತಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಈ ದಂಧೆ ನಡೆಯುತ್ತಿದ್ದು, ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಪೊಲೀಸರ ಭಯ ಬೇರೆ ಇದೆ ಎನ್ನಲಾಗಿದೆ.

    ಖಡಕ್ ಪೊಲೀಸ್ ಆಫೀಸರ್ ಎಂಬ ಹೆಗ್ಗಳಿಕೆಗೆ ಪ್ರಶಂಸೆಯಾಗಿರುವ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ ಚನ್ನಣ್ಣನವರ್ ವ್ಯಾಪ್ತಿಯಲ್ಲಿ, ಈ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕುವ ಪೊಲೀಸರ ನಡೆಗೆ ಸಾರ್ವಜನಿಕರ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.